Wednesday, January 5, 2011

ಮತ್ತೆ ಬಂದ ಕುದುರೆ


ನಮಗೆ ಲೇಖಕರಿಗೆ ಒಂದು ಕೃತಿಯ ಜೀವಂತಿಕೆಯ ಪರೀಕ್ಷೆ ನಡೆಯುವುದು ಅದಕ್ಕೆ ಎಷ್ಟು ಪ್ರಶಸ್ತಿ ಬಂತು, ಯಾರು ಹೇಗೆ ಹೊಗಳಿದರು ಎಂಬುದರ ಮೇಲಿಂದ ಅಲ್ಲ. ಒಂದು ಕೃತಿ ಎಷ್ಟು ಕಾಲ ಉಳಿಯಿತು ಎಂಬುದು ಅದರ ಸತ್ತ್ವಪರೀಕ್ಷೆಯ ಮಾನದಂಡವಾಗಿರುತ್ತದೆ. ಯಾಕೆಂದರೆ ಪ್ರಕಟವಾದ ಸುರುವಿಗೆ ಎಂಥಾ ಕೃತಿಯನ್ನೂ ಹೊಗಳುವವರು ಸಿಕ್ಕುತ್ತಾರೆ; ಸ್ನೇಹಿತರು ದಾಕ್ಷಿಣ್ಯಕ್ಕಾಗಿ, ಹಿರಿಯರು ಪ್ರೋತ್ಸಾಹಿಸಲೆಂದು, ಕೆಲವರು ನಮ್ಮ ಗುಂಪು ಬೆಳೆಯಲಿ ಎಂದು--ಹೀಗೆ ವಿವಿಧ ಕಾರಣಕ್ಕಾಗಿ ಕೃತಿ ಪ್ರಕಟವಾದ ಸುರುವಿಗೆ ಹೊಗಳುವವರು ಸಾಕಷ್ಟು ಜನ ಸಿಗುತ್ತಾರೆ. ತರುಣ ಲೇಖಕರಾಗಿದ್ದರಂತೂ ಜಾಸ್ತಿಯೇ ಸಿಗುತ್ತಾರೆ. ಸಾಮಾನ್ಯ ಸತ್ತ್ವದ ಲೇಖಕರು ಅದನ್ನು ನಂಬಿ ಒಂದೆರಡು ಕೃತಿ ಬರೆಯುವುದರ ಒಳಗೆ ಮಹಾನ್ ಲೇಖಕರ ವರಸೆಗಳನ್ನೆಲ್ಲಾ ರೂಢಿಸಿಕೊಂಡು ಸೃಜನಶೀಲರಾಗಿ ಗೊಟಕ್ ಅಂದಿರುತ್ತಾರೆ. ನಿಜವಾದ ಸತ್ತ್ವವುಳ್ಳವ ಮಾತ್ರ ಇಂಥದ್ದರ ಮಧ್ಯೆ ಬೆಳೆಯುತ್ತಾನೆ. ಆದ್ದರಿಂದಲೇ ಒಬ್ಬ ಲೇಖಕನಿಗೆ ಪ್ರಯೋಜನಕ್ಕೆ ಬರುವುದು ಸ್ವವಿಮರ್ಶೆ ಮಾತ್ರ. ಇನ್ನೊಬ್ಬರ ವಿಮರ್ಶೆ ಈ ಸ್ವವಿಮರ್ಶೆಯನ್ನು ಪ್ರಚೋದಿಸುವುದಿದ್ದರೆ ಮಾತ್ರ ಉಪಕಾರಿ. ಹೀಗಾಗಿಯೇ ಒಬ್ಬ ಲೇಖಕನಿಗೆ ತನ್ನ ವಿರುದ್ಧವೇ ಯೋಚಿಸಲು ಸಾಧ್ಯವಾಗಬೇಕು ಎಂಬ ಕುವೆಂಪುರವರ ಮಾತು ಮಹತ್ತ್ವದ್ದು. ಲೇಖಕರು ಮಾತ್ರವಲ್ಲ--ಅತ್ಯುತ್ತಮ ಮಾನವರೂ ತಮ್ಮ ವಿರುದ್ಧವೇ ತಾವು ಯೋಚಿಸುವ ಶಕ್ತಿ ಹೊಂದಿರುತ್ತಾರೆ.

ಈ ಎಲ್ಲಾ ಯೋಚನೆಗಳು ಮನಸ್ಸಿಗೆ ಬಂದದ್ದು ಇತ್ತೀಚೆಗೆ ಖ್ಯಾತ ರಂಗ ನಿರ್ದೇಶಕಿ ಎನ್. ಮಂಗಳಾ ನನ್ನ ನಾಟಕ ಕುದುರೆ ಬಂತು ಕುದುರೆಯನ್ನು ಆಡುತ್ತೇನೆ ಎಂದಾಗ. ಆ ನಾಟಕ ಬರೆದದ್ದು ಇಪ್ಪತ್ತೇಳು ವರ್ಷಗಳ ಹಿಂದೆ. 1983ರಲ್ಲಿ ಅದು ಪುಸ್ತಕವಾಗಿ ಪ್ರಕಟವೂ ಆಗಿತ್ತು. ಇಪ್ಪತ್ತೇಳು ವರ್ಷ ಎಂದರೆ ಇಡೀ ಒಂದು ಹೊಸ ಜನಾಂಗವೇ ರೂಪು ತಳೆದು ನಿಂತಿದೆ. ಇಷ್ಟು ವರ್ಷ ಕಳೆದ ಮೇಲೆ ಈ ನಾಟಕ ಒಳ್ಳೆಯ ಅಭಿರುಚಿ ಉಳ್ಳ, ಬಿ. ವಿ. ಕಾರಂತರ ಜೊತೆ ರಂಗಾಯಣ ಜೊತೆ ಇದ್ದ ಮಂಗಳಾರಂಥಾ ನಿರ್ದೇಶಕಿಯನ್ನು ಆಕರ್ಷಿಸುತ್ತದೆ ಎಂದರೆ--ಆ ನಾಟಕದಲ್ಲಿ ಸತ್ತ್ವ ಇರಬಹುದು ಎನ್ನಿಸಿತು. ಜೊತೆಗೆ ಈ ನಾಟಕ ಆಡುತ್ತಿದ್ದವರು ಬೆಮೆಲ್ ಕಾರ್ಮಿಕ ಸಂಘ ರೂಪಿಸಿಕೊಂಡ ಸ್ನೇಹರಂಗ ಎಂಬ ರಂಗಸಂಸ್ಥೆ. ಈ  ಕಾರ್ಮಿಕ ಸಂಘಗಳು ರಂಗತಂಡಗಳನ್ನು ರೂಪಿಸಿಕೊಂಡಾಗ ಎಂಥಾ ಪ್ರಾಮಾಣಿಕತೆಯಿಂದ ಮತ್ತು ನಿಷ್ಠೆಯಿಂದ ಕೆಲಸ ಮಾಡುತ್ತಾರೆಂಬುದನ್ನು ನಾನು ಹತ್ತಿರದಿಂದ ನೋಡಿದವ. ನಾನು ಪ್ರಜಾವಾಣಿಯ ಸಹಾಯಕ ಸಂಪಾದಕನಾಗಿದ್ದಾಗ ಅಲ್ಲಿನ ಲಲಿತ ಕಲಾ ಸಂಘದ ಅಧ್ಯಕ್ಷನಾಗಿದ್ದೆ. ಆ ಲಲಿತ ಕಲಾ ಸಂಘದ ಹೆಚ್ಚಿನ ಕಾಯಕರ್ತರು ಪ್ರೆಸ್ಸಿನ ಕೆಲಸಗಾರರು. ಲೆಟರ್  ಪ್ರೆಸ್ಸಿನ ದಿನಗಳವು ಅವು; ನೈಟ್ ಶಿಫ್ಟ್ ಇರುತ್ತಿತ್ತು; ಇಂಥಲ್ಲಿ  ನಾಟಕ ಆಡುವುದು ಎಂದರೆ ದಿನನಿತ್ಯದ ಯಾಂತ್ರಿಕತೆಯ ಹೊರಗೆ ಸೃಜನಶೀಲತೆಯನ್ನು ಹುಡುಕಿಕೊಳ್ಳುವ ಕ್ರಮವಾಗಿತ್ತು. ಬೆಮೆಲ್ ಕಾರ್ಮಿಕರಿಗೂ ಅದು ಅಂಥಾ ಸೃಜನಶೀಲತೆಯ ಖುಷಿ ಕೊಟ್ಟ ಕೆಲಸವೇ ಆಗಿರಬೇಕು. ಮೊದಲ ಪ್ರದರ್ಶನ ನಡೆದ ಜನವರಿ 2ರಂದು ಕಲಾಕ್ಷೇತ್ರದ ಪ್ರೇಕ್ಷಾಂಗಣ  ಬೆಮೆಲ್ ಕಾರ್ಮಿಕರಿಂದ ತುಂಬಿ ತುಳುಕುತ್ತಿತ್ತಂತೆ. 1970ರ ದಶಕದಲ್ಲಿ ಬೆಂಗಳೂರಿನಲ್ಲಿ ರಂಗ ಚಳವಳಿ ಪ್ರಾರಂಭವಾದಾಗ ಇದ್ದ ಪ್ರೇಕ್ಷಕರು ಹೆಚ್ಚಿನವರು ಮಧ್ಯಮ ವರ್ಗದವರು. ನಟ ನಟಿಯರೂ ಮಧ್ಯಮ ವರ್ಗದವರೇ. ಈಗ ಕಾರ್ಮಿಕ ವರ್ಗದಿಂದ ಪ್ರೇಕ್ಷಕರು ಮತ್ತು ನಟರು ಬರುತ್ತಿದ್ದಾರೆ ಎಂದರೆ ರಂಗ ಚಳವಳಿ ವ್ಯಾಪಿಸಿದೆ ಎನ್ನುವುದು ಸ್ಪಷ್ಟ. ಅಷ್ಟೇ ಮಟ್ಟಿಗೆ ಅಭಿರುಚಿಯೂ ವ್ಯಾಪಿಸಿದೆಯೇ? ವ್ಯಾಪಿಸುವಂತೆ ನೋಡಿಕೊಳ್ಳಬೇಕಾದ್ದು ಎಲ್ಲರ ಕರ್ತವ್ಯ. ಆದರೆ  ಎಲ್ಲರಿಗೆ ಅವಕಾಶವಿರುವ, ಎಲ್ಲವೂ ಎಲ್ಲರೂ ಪ್ರಚಾರ ಪಡೆಯುವ ಪ್ರಜಾಪ್ರಭುತ್ವದಲ್ಲಿ ಅತ್ಯುತ್ತಮವಾದದ್ದನ್ನು ಮಾತ್ರ ಪ್ರೋಮೋಟ್ ಮಾಡುವುದು ಸುಲಭವಲ್ಲ. ಒಳ್ಳೆಯ ನಾಟಕಗಳನ್ನು ಚೆನ್ನಾಗಿ ಆಡುತ್ತೇವೆ ಎಂದು ಸ್ನೇಹರಂಗದವರು ವ್ರತ ತೊಟ್ಟರೆ, ಈ ಪ್ರಚಾರಗಳ ಕಾಲದಲ್ಲಿ ಅದೇ ಮುಖ್ಯ ಸಾಧನೆ.

ಕುದುರೆ ಬಂತು ಕುದುರೆ   ಬರೆದದ್ದು ಅವಸರದಲ್ಲಿ. ಹೀಗೆ ಅವಸರದಲ್ಲಿ ನಾನು ಬರೆಯುವುದು ಅಪರೂಪ. ವರ್ಷಾನುಗಟ್ಟಲೆ ತೆಗೆದುಕೊಂಡು ನಿಧಾನಕ್ಕೆ ತಿದ್ದಿ ಬರೆಯುವುದು ನನ್ನ ಬರೆವಣಿಗೆಯ ಕ್ರಮ. ಅದಕ್ಕೆ ಇರುವ ಕೆಲವೇ ಅಪವಾದಗಳಲ್ಲಿ ಈ ನಾಟಕ ಒಂದು. 1981ರಲ್ಲಿ ನನ್ನ ನಾಟಕ ರಥಮುಸಲ ಕಲಾಕ್ಷೇತ್ರದಲ್ಲಿ ಮೊದಲ ಪ್ರಯೋಗ ಕಂಡಿತ್ತು ಹಾಗೂ ಪುಸ್ತಕವಾಗಿ ಪ್ರಕಟವೂ ಆಗಿತ್ತು. ಇದರ ರಂಗಪ್ರಯೋಗ ಚೆನ್ನಾಗಿ ಆಗದಿದ್ದರೂ ಕೆ. ವಿ. ಸುಬ್ಬಣ್ಣ, ಅನಂತಮೂರ್ತಿ, ಶಾಂತಿನಾಥ ದೇಸಾಯಿ, ಅಡಿಗರು ಮೊದಲಾದ ನಾನು ಗೌರವಿಸುತ್ತಿದ್ದ ಅನೇಕರು ಪ್ರಕಟಿತ ನಾಟಕವನ್ನು ಮೆಚ್ಚಿದ್ದರು. ಹೀಗಾಗಿ ನಾನು ನಾಟಕ ಬರೆಯಬಲ್ಲೆನೆಂಬ ವಿಶ್ವಾಸವನ್ನು ಅನೇಕರಲ್ಲಿ ಹುಟ್ಟಿಸಿದ್ದೆ. ಅಂಥವರಲ್ಲಿ ಒಬ್ಬ ಟಿ. ಎನ್. ನರಸಿಂಹನ್. ವಿದ್ಯಾರ್ಥಿ ದಿನಗಳಿಂದ ಗುರುತಿದ್ದ ಅವ ಬಂದು ನನ್ನ ಹತ್ತಿರ ಒಂದು ಕತೆ ಹೇಳಿ ಇದನ್ನು ನಾಟಕವಾಗಿ ಬರೆದು ಕೊಡು ಅಂದ. ನನ್ನಲ್ಲಿ ಆ ಕತೆ ಅನೇಕ ಭಾವನೆಗಳನ್ನು ಹುಟ್ಟಿಸಿತು. ಹೀಗಾಗಿ ಬರೆಯಲು ಕೂತೆ. ಬರೆಯುತ್ತಿದ್ದಂತೆ ಕತೆ ಬೇರೆಯೇ ರೂಪ ತಾಳಿ ನಾಟಕವಾಯಿತು. ಅವನ ಕತೆಯಲ್ಲಿಲ್ಲದ ಪಾತ್ರಗಳೂ ಹುಟ್ಟಿಕೊಂಡವು. ಅಂತಿಮವಾಗಿ ತಿದ್ದಿ ಪ್ರಕಟಿಸುವ  ಹೊತ್ತಿಗೆ ನಾಟಕ ಈಗಿರುವ ರೂಪ ತಾಳಿತು.

ಅವಸರದಲ್ಲಿ ಬರೆದಿದ್ದರೂ ನನಗೆ ಇದರ ಬರೆವಣಿಗೆ ಖುಷಿ ಕೊಟ್ಟಿತ್ತು. ಒಂದು ಕಾರಣ, ಬರೆಯುತ್ತಾ ಕುದುರೆಯ ವಿವಿಧ ಸಾಂಕೇತಿಕ ಆಯಾಮಗಳು ಹೊಳೆಯತೊಡಗಿದ್ದು. ಅವುಗಳಲ್ಲಿ ಒಂದು ಕೀಲು ಕುದುರೆಯ ಕಥೆ. ಇದು ಅರೇಬಿಯನ್ ನೈಟ್ಸಿನಲ್ಲಿ ಬರುವ ಕಥೆ. ಕುದುರೆ ನಂಬಿ ಹತ್ತಿದವ ಎಲ್ಲಿಯೋ ಕಳೆದು ಹೋಗುತ್ತಾನೆ ಎಂಬ ಈ ಕಥೆ ಅನೇಕ ಸಾಧ್ಯತೆಗಳನ್ನು ಹೊಳೆಯಿಸಿತು. ಹೀಗಾಗಿಯೇ ಮರುಮುದ್ರಣವಾದಾಗ ನಾಟಕಕ್ಕೆ ಕೀಲುಕುದುರೆ ಎಂಬ ಉಪಶೀರ್ಷಿಕೆಯನ್ನೂ ಕೊಟ್ಟೆ--ಅಲ್ಲಿನ ಎಲ್ಲ ಪಾತ್ರಗಳೂ ಒಂದಲ್ಲ ಒಂದು ಕುದುರೆ ಹತ್ತಿರುತ್ತಾರೆ ಮತ್ತು ಇಳಿಯುವುದು ಹೇಗೆಂದು ಗೊತ್ತಿಲ್ಲದೆ ಕುದುರೆಯ ಬೆನ್ನಿಗೆ ನೇತಾಡುತ್ತಿರುತ್ತಾರೆ ಎಂಬ ಅರ್ಥದಲ್ಲಿ.

ಈ ನಾಟಕ ತನ್ನ ಅವತಾರಗಳಲ್ಲಿ ಅದೃಷ್ಟಶಾಲಿ. ಯಾರು ಯಾರೋ ಓದಿ ಇದನ್ನು ಇಷ್ಟಪಟ್ಟಿದ್ದಾರೆ, ಆಡಿದ್ದಾರೆ. ಪುಸ್ತಕವಾಗಿ ಪ್ರಕಟವಾದ ಸುರುವಿಗೆ ನಮ್ಮ ನಾಡಿನ ಪ್ರಮುಖ ನಾಟಕಕಾರರಲ್ಲೊಬ್ಬರಾದ ಶ್ರೀರಂಗರು "ವಾಸ್ತವಿಕತೆಯನ್ನು ನಮ್ಮವರು ಎದುರಿಸುವ ವಿವಿಧ ಬಣ್ಣಗಳನ್ನು ಚಿತ್ರಿಸುವ ಸಹಜ ಪಾತ್ರಗಳ ದಿನನಿತ್ಯದ ಆಡುಮಾತಿನ ಶೈಲಿಯ ಒಳ್ಳೆಯ ನಾಟಕ ಕುದುರೆ ಬಂತು ಕುದುರೆ...ಭೂತ ಮತ್ತು ಭವಿಷ್ಯತ್ಕಾಲಗಳನ್ನು ನಂಬಿ ಕಷ್ಟನಷ್ಟಗಳ ವರ್ತಮಾನ ಕಾಲವನ್ನು ಸಹಿಸಿಕೊಳ್ಳುವ ನಮ್ಮ ಸಾಮಾನ್ಯ ಸಾಮಾಜಿಕರ ಚಿತ್ರ ನಾಟಕದಲ್ಲಿ ಪರಿಣಾಮಕಾರಕವಾಗಿ ಎದ್ದು ನಿಂತಿದೆ" ಎಂದು ಪ್ರಜಾವಾಣಿಯಲ್ಲಿ ರೆವ್ಯೂ ಬರೆದರು. ಸಿನೆಮಾ ನಟ ಪ್ರಕಾಶ್ ರೈ ಅಂತಿಮ ಬಿಕಾಂನಲ್ಲಿದ್ದಾಗ ಇದನ್ನು ಗೆಳೆಯರ ಜೊತೆ ಸೇರಿ ಆಡಿದ್ದರು. ಭದ್ರಾವತಿಯಲ್ಲಿ ಯಾರೋ ಒಬ್ಬರು ಓದಿ ಗಣೇಶೋತ್ಸವದಂದು ಆಡಿದ್ದರು.  ಜೋಗದಲ್ಲಿ ಈಗ ಎರಡು ವರ್ಷಗಳ ಕೆಳಗೆ ಇದನ್ನೋದಿ ಖುಷಿಯಾಗಿ ಬೇರೆಲ್ಲಾ ರಿಹರ್ಸಲ್ ನಿಲ್ಲಿಸಿ ಈ ನಾಟಕವನ್ನು ಆಡಿಸಿದೆ ಎಂದು ಒಬ್ಬರು ರಂಗಕರ್ಮಿ ಫೋನ್ ಮಾಡಿದ್ದರು. ಈ ನಾಟಕದ ಹೆಂಗಸಿಗೆ ಆದ ಥರದ್ದೇ ಅನುಭವ ಆದ ಮತ್ತೊಬ್ಬರು ಮಹಿಳೆ ಇದನ್ನು ಹಿಂದಿಗೆ ಅನುವಾದಿಸಿದ್ದರು. ಸಾಹಿತ್ಯ ಅಕಾಡೆಮಿ ಹಿಂದಿ  ದ್ವ್ಯಮಾಸಿಕ ಸಮಕಾಲೀನ್ ಭಾರತೀಯ್ ಸಾಹಿತ್ಯ್  ಸಂಪಾದಕ ಲೇಖಕ ಗಿರಿಧರ್ ರಾಠಿ ಇದನ್ನು ಇಷ್ಟಪಟ್ಟು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಈ ನಾಟಕದ ಜೊತೆ ಬೇರೆ ಭಾರತೀಯ ಭಾಷೆಗಳ ಐದಾರು ನಾಟಕಗಳನ್ನು ಸೇರಿಸಿ ಅದನ್ನು ಅವರು ಸಮಕಾಲೀನ ಭಾರತೀಯ ನಾಟಕಗಳ ವಿಶೇಷ ಸಂಚಿಕೆಯನ್ನಾಗಿ ರೂಪಿಸಿದ್ದರು. ಈಗ  ಬೆಮೆಲ್ ಕಾರ್ಮಿಕರು ಇದನ್ನು ಆಡಿದ ಮೇಲೆ ಮತ್ತೆ ಇಂಥದೊಂದು ನಾಟಕ ಬರೆಯಬೇಕು ಅನ್ನಿಸುತ್ತದೆ. ಕಾರ್ಮಿಕರ ಜೊತೆಗಿನ ನನ್ನ ಅನುಭವ ಆಧರಿಸಿಯೇ ಬರೆಯಬೇಕು.

ಇಂಥಾ ನಾಟಕದ ಮುಖ್ಯ ಅನುಕೂಲವೆಂದರೆ ರಂಗಸಜ್ಜಿಕೆ, ವೇಷ ಭೂಷಣಗಳಿಗಾಗಿ ಇವಕ್ಕೆ ಹೆಚ್ಚು ಖರ್ಚಾಗುವುದಿಲ್ಲ. ದಿನನಿತ್ಯದ ಕಾಸ್ಟ್ಯೂಮ್, ಸರಳ ರಂಗಸಜ್ಜಿಕೆ  ಸಾಕು. ಕಾರ್ಮಿಕರೇ ಸೇರಿ ಆಡುತ್ತಾರೆ ಎಂದ ಮೇಲೆ ಹೆಚ್ಚು ಹಣ ತೊಡಗಿಸದೆ ಆಡಬಹುದಾದ ಇಂಥಾ ನಾಟಕಗಳ ಅಗತ್ಯವಿದೆ. ಆದರೆ, ನನಗೆ ನಾಟಕ ಎಂದರೆ ಬರಿಯ ದೃಶ್ಯಗಳ ಜೋಡಣೆ ಅಲ್ಲ. ಆಂಗಿಕದಷ್ಟೇ ವಾಚಿಕವೂ ಮುಖ್ಯ. ಅದು ಕಾಲ ದೇಶಕ್ಕೆ ಬದ್ಧವಾದ ಮನುಷ್ಯನ ಪಾಡಿನ ಬಗ್ಗೆ  ಹೇಳುತ್ತಿರಬೇಕು. ಅಂದರೆ, ಒಟ್ಟಾಗಿ ಅದೊಂದು ಮೆಟಫರ್ ಆಗಿರಬೇಕು. ಅಂಥದೊಂದನ್ನು ಬರೆಯಬೇಕು ಎಂಬ ಆಸೆಯನ್ನು ಮತ್ತೆ ಈ ಪ್ರಯೋಗ ಮೂಡಿಸಿದೆ.

No comments:

Post a Comment