Thursday, December 30, 2010

ಇಂದ್ರಪ್ರಸ್ಥ 2

1

ದಿಂಬಲ್ಲಿ ಮುಖ ತುರುಕಿ ಮಲಗುವರು ಹುಡುಗ ಹುಡುಗಿಯರು
ಕನಸು ಬೀಳುವ ಸಮಯ. ಭಿಕ್ಷುಕ
ಕೈಯ್ಯೊಡ್ಡ ಹೊರಟಿರುವ. ಜಮಾದಾರ
ಕಸ ಗುಡಿಸುತ್ತ ಬರುತ್ತಿದ್ದಾನೆ. ತರಗೆಲೆ ಉರಿಸಿ
ಚಾ ಮಾಡುತ್ತಿರುವವನ ಸುತ್ತ
ಕುಕ್ಕುರುಗಾಲಲ್ಲಿ ನಾಲ್ಕೈದು ಮಂದಿ--ಬೀಡಿ ಬಾಯಿ
ಮೈ ಮೇಲೆ ರಜಾಯಿ.
ಪೇಪರ್ ಬೇಕೇ ಪೇಪರ್ ಹುಡುಗ
ಬಸ್ಸಿನ ಸುತ್ತ ಬರುವಾಗ ಒಬ್ಬಾತ
ಟಿಫಿನ್ ಕ್ಯಾರಿಯರ್ ಹಿಡಿದು
ಓಡೋಡಿ ಬರುತ್ತಿರುವ. ಬೀದಿ ದೀಪಗಳು
ಅಕೋ ಒಟ್ಟಾಗಿ ನಂದಿದವು.
ಹೊಗೆ ಅಡರುತ್ತಿದೆ ಚಿಮಿಣಿಗಳಿಂದ. ಕಾರಖಾನೆಗಳ
ಸೈರನ್ ಕೂಗು. ಸೂಳೆಯರು ಲಂಗ ಕೊಡವಿ
ಹೊರ ಬರುತ್ತಾರೆ ರಾತ್ರಿ ಡ್ಯೂಟಿಯ ನರ್ಸು ಡಾಕ್ಟರರು
ಕಾರ್ಮಿಕರು ಅಲ್ಲಲ್ಲಿಂದ.
ಒಬ್ಬಾಕೆ ನಿದ್ರೆಯಿಲ್ಲದ ಮುಗುಳ್ನಗುವ ಚೆಲ್ಲಿದಳು.
ಕೋಳಿ ಕೂಗುತ್ತಿದೆ ಎಲ್ಲಿಂದಲೋ--ಎಲ್ಲರೂ
ಏಳುವುದಕ್ಕೆ ತವಕುತ್ತಾರೆ--
ವಿಟರೂ ಕೂಡ, ಅವರ ಪ್ರಜಾಪತಿ ಕೂಡ.

ರಂಗನೊಲವು ಇಲ್ಲದ ಬೋಳು ಯಮುನೆ ಮೇಲಿನ ಬೆಳಗು
ಕತ್ತಲೆಯ ತೊಡರುತ್ತಿದೆ.
ಮತ್ತೊಂದು ದಿನದ ಪಾಳಿಗೆ
ಹತ್ಯಾರು ಹಿಡಕೊಂಡು ಕುಂಟಿ ಹೊರಟಿದೆ ಡೆಲ್ಲಿ
ಹುಡುಕುತ್ತ ಕೋಲೆಲ್ಲಿ.

4

ಅಮ್ಮ ಸತ್ತಳು ನಾನು ಸಣ್ಣಾವ ಇದ್ದಾಗ
ಅಣ್ಣ ತಮ್ಮರು ಇಲ್ಲ ನಾನೊಬ್ಬನೇ.

ಎರಡನೇ ಮದುವೇಗೆ ದುಡ್ಡು ಬೇಕು ಹೇಳಿ
ಅಪ್ಪ ಮಾರಿದ ನನ್ನ ಸ್ವಾಮಿ ಶಿವನೇ.

ನನ್ನನ್ನು ತೆಕ್ಕೊಂಡ ತಾಯಮ್ಮ ಉಳ್ಳಾಲ್ತಿ
ಸಾಕುವಳು ಹತ್ಹೆಂಟು ಬೇಡೋರನ್ನು.

ಬೆಳಗಾತ ಎದ್ದವನೆ ಗೆಜ್ಜೆ ಕಟ್ಟಿಸಿಕೊಂಡು
ಕುಣಿಯುತ್ತ ಮನೆ ಮನೆಗ ತಿರುಪೆ ಹೊರಟೇ.

ಬೈಸಾರಿ ಹೊತ್ತೀಗೆ ಭಿಕ್ಸ ಒಟ್ಟಿಗೆ ಮಾಡಿ
ತಾಯಮ್ಮ ಕೈಯ್ಯಲ್ಲಿ ಇಟ್ಟು ನಮಿಸೀ--

ಅಲ್ಲದೇ ಇದ್ದಲ್ಲಿ ಹೊಡೆದಾಳು ಬಡಿದಾಳು
ಕೋಣೇಲಿ ಜಡಿದಾಳು ಕೊಂದೆ ಬಿಟ್ಟಾಳು.

ಬೀದಿ ಹೊಡೆ ನಿದ್ರಿಸಿ ಎದ್ದರೆ ಹೊತ್ತಾರೆ
ನೀಡುವಳು ಹೊಟ್ಟೆಗೆ, ಇತ್ತ ಬರುವೆ.

ಪೊಲೀಸು ಹಿಡಿದಲ್ಲಿ ಹಿಡಕೊಂಡು ಹೋದಲ್ಲಿ
ಬಿಡಿಸಿ ಕರೆತಂದಾಳು ಮರಳಿ ಪಡಿಗೆ.

ದೊಡ್ಡ ಆಗುವೆ ಮದುವೆ ಆಗುವೆ ಮುಂದಕ್ಕೆ;
ಹೆಣ್ತಿ ಜೊತೆ ಇದ್ದಲ್ಲಿ ಭಿಕ್ಸ ಜಾಸ್ತಿ.

ಮಕ್ಕಳು ಆದಲ್ಲಿ ಅವರನ್ನು ಸೇರಿಸಿ
ಕುಣಿದಲ್ಲಿ ಮಂದೀಗೆ ಪ್ರೀತಿ ಜಾಸ್ತಿ.

ನೀವು ದೊಡ್ಡವರಪ್ಪ ನಮ್ಮ ಕಾಯುವ ಜನರು
ಪರಮಾತ್ಮ ಮೇಲಿರುವ ಧರ್ಮ ಉಳಿಸಿ.

5

ನೀರು ಬಂದಿದೆ ಎಲ್ಲಿ ನೀರು ಬಂದಿದೆ ಅಲ್ಲಿ
ಆಚೆ ಕಡೆ ಬೀದೀಲಿ ದೇವರ ಗುಡಿಯ ಬಳಿ
ತನ್ನಿರಿ ಬಿಂದಿಗೆ ನೀರಿಗ್ಹೋಗುವ.

ಇಲ್ಲಿ ಬಂದಿತ್ತಾಗ ಈಗ ನಿಂತಿದೆ ಇಲ್ಲಿ
ಮುಂದಿನ ಬೀದೀಲಿ ನೀರು ಬಂದೀತೀಗ
ಬನ್ನಿರಿ ಮುಂದಕ್ಕೆ ನೀರಿಗ್ಹೋಗುವ.

ನೀವ್ಯಾರು ಆಚೆಯ ಬೀದಿ ಜನ ಇಲ್ಲ್ಯಾಕೆ
ತೊಲಗಿ ಈಗಲೆ ಬೇಗ ಎಳೆದು ಇಡಿರೋ ಕೊಡವ
ಪಸೆ ಇಲ್ಲ ನಮಗೇ ನೀರಿಲ್ಲವೋ.

ನಿನ್ನ ಮಾತನು ನಂಬಿ ನಾ ಬಂದೆ ಇಲ್ಲೀ ವರೆಗೆ,
ಕಾಲು ನೋವಿಗೆ ನೀನು ಎಣ್ಣೆ ತಿಕ್ಕುವಿಯೇನು,
ಹಡಬೆ ದರವೇಸಿ ಇಕ್ಕುವೆ ನಾಕು.

ಏನು ಜಗಳಾಡುವಿರಿ, ಏಕಿಷ್ಟು ಹಠ ನಿಮಗೆ,
ಇಲ್ಲಿಲ್ಲ ತೊಟ್ಟು ಸಹ--ತಿಳೀಲಿಲ್ಲ ಹೇಳಿದ್ದು?
ಹಿಡಕೊಂಡು ಒದಿರೋ ಬಿಡಿರಿ ಇನ್ನೆರಡು.

ಚೆಲ್ಲಿದೆ ನೆತ್ತರು ಎಲ್ಲಿದೆ ಗ್ರಂಧಿಗೆ,
ಎರಡಾದ್ರು ಹನಿ ನೀರು ಹೊಯ್ಯಿರಿ ಬಾಯಿಗೆ
ಒಡೆಯುವ ಮೊದಲೇ ಪ್ರಾಣದ ಗಡಿಗೆ.

ತನ್ನಿರಿ ಬಿಂದಿಗೆ ನೀರಿಗ್ಹೋಗುವ.

8

ಐ ಲವ್ ಯೂ ಎಂದ. ನಿನ್ನ ಕಣ್ಣು ಅದಷ್ಟು ಚೆಂದ ಎಂದ.
ನನಗ ಇದು ವರೆಗೆ ಹಾಗೆ ಯಾರೂ ಅಂದಿರಲಿಲ್ಲ. ಎದೆಯಲ್ಲಿ
ಸಿಹಿ ಸಿಹಿ ಆಯ್ತು. ಕಾಲೇಜು ಬಿಟ್ಟು ಬಾ ಸೀದ
ಬಸ್ಟೇಂಡಿಗೆ ಅಂದ. ರಾತ್ರಿಯ ಜರ್ನಿ. ಸಿಕ್ಕು ಸಿಕ್ಕಲ್ಲಿ
ಕೈ ಬಿಟ್ಟ. ಡೆಲ್ಲಿಯಲ್ಲಿ ಆಂಟಿ ಮನೆಯಲ್ಲಿ
ಮದುವೆ ಎಂದ. ಬಸ್ಸಿಳಿದು ಹೋಟೆಲ್ಲಿಗೆ ಯಾಕೆ
ಎಂದು ಕೇಳಿದ್ದಕ್ಕ ಆಂಟಿ ಮನೆ ಎಲ್ಲಿ
ಹುಡುಕಬೇಕು ಎಂದ. ಹೋಟೆಲ್ಲು ರೂಮಲ್ಲಿ ಅವನ
ಡ್ರೇಸೇ ಬದಲಾಯ್ತು. ಯಾರೋ ವಿಸಿಟರಿಗೆ ನನ್ನ
--ಇವನ ಎದುರೇ ಅವ ನನ್ನ ಮುಟ್ಟಿ ಪರೀಕ್ಷಿಸಿ ನೋಡಿ,
ಬಾರ್ಗೇನು ಮಾಡಿ--ಎಷ್ಟೋ ಮೊತ್ತಕ್ಕೆ ಮಾರಿದನು. ಆ ಮೇಲೆ
ನನ್ನ ಎಷ್ಟೋ ಜನರು ಎಷ್ಟೋ ಕಾಲ ಹತ್ತಿದರು.
ಮುಟ್ಟು ನಿಂತಾಗ ಬಸಿರು ತೆಗೆಯಿಸಿದ. ಬಳಿಕ
ಮತ್ತೊಬ್ಬನಿಗೆ ಕೊಟ್ಟ. ಕೂಡುವುದಿಲ್ಲ ಎಂದಲ್ಲಿ ಬಿಗಿದರು
ಉಪವಾಸ ಕೋದಂಡ. ಕೇಳಿದರೆ ಹೇಳಿದ ಹಾಗೆ
ಬ್ರಾಂದಿ ಹೋಟೆಲ್ಲು ತಿಂಡಿ ಸಿನೆಮಾ ದೇವಸ್ಥಾನ.

ಪುಣ್ಯ ಹೆಚ್ಚಿದರೆ ಮುಂದಿನ ಜನ್ಮ ಗರತಿ ಆಗುವೆನೆಂತೆ.
ಹಬ್ಬಲಿ ಏಡ್ಸ್. ಕುಟ್ಟೆ ಸುರಿಯಲಿ; ರಿವೆಂಜು ರುಚಿ;
ಮನೆಗೆ ಮರಳುವುದು ಆಗದ ಮಾತು. ತಿಳಿಯಲಿ: ಸತ್ತೆ;
ಅಥವಾ ಪ್ರಿಯನೊಡನೆ ಸಹಭಾಗಿ ಸುಖಿ ಸೀಮಂತೆ.

9

ಹಡಬೆ ನನ್ಮಗನ್ನ ತಂದು. ಏನಂತಿಳ್ಕೊಂಡಾನ್ಲೇ ಅವ ನನ್ನ?
ನಾ ಮರ್ಡರ್ ಮಾಡೀನಿ ಅಂತ ಹೇಳ್ಸಿ ಗಲ್ಲಿಗೆ ಹಾಕ್ಸಾನಂತೇನು?
ಅವನ ಅಮ್ಮನ್ನ ಹಡ. ಹೇಳ್ಲಾ ಅವಂಗೆ--
ಇಡೀ ಲೀಗಲ್ ಸಿಸ್ಟಂ ನನ್ನ ಫಿಂಗರ್ ಟಿಪ್ಸ್ನಾಗೆ ಐತೆ.
ನಾ ಮನ್ಸು ಮಾಡಿದ್ದರೆ
ಈ ಹ್ಯೂಮನ್ ರೈಟ್ಸ್ ಎಜಿಟೇಟರ್ಸ್ ಮ್ಯಾಗೇ ಕೇಸು ಹಾಕ್ಸಿ ಗಲ್ಲಿಗೆ ಹಾಕ್ಸೇನು--
ಮಾಡಿಲ್ಲೇನು ನೈಜೀರಿಯಾದಾಗೆ  ಕೆನ್ ಸರ್ ವಿವಾ ಎಂಬ ನನ್ಮಗಂಗ.
ನನ್ನೇ ಗಲ್ಲಿಗೆ ಹಾಕ್ಸಾನಂತೆ--ನನ್ನ--
ಬಾಂಛೋಥ್ ಸೂಳೇಮಗನ್ನ ತಂದು.

ಈ ಇಲೆಕ್ಷನ್ದಾಗೆ ನಾ ಗೆಲ್ದಿದ್ದರೆ ಹಾಕ್ಸೂ ಹಾಕ್ಸಾನು ಅನ್ನು.
ಅದೇ ಭಯ ದಿನಾ ರಾತ್ರಿ ಕಾಡ್ತೈತೋ ಮಗನೇ.
ಗೆಲ್ಬೇಕು--ಏನೇ ಆಗ್ಲಿ ಗೆಲ್ಬೇಕು.
ರಿಗ್ ಮಾಡಾಕೆ ಎರೇಂಜ್ ಮಾಡು.
ಎಂಟು ಗಂಟೆಗೆ ಮೊದ್ಲು ಎಲ್ಲಾ ಓಟು ಹಾಕಿ ಮುಗಿದ್ಬಿಡ್ಲಿ.
ಒಂದು ವೇಳೆ ಏನು ಮಾಡಿದರೂ ಗೆಲ್ಲಾಕಾಯಾಕಿಲ್ಲ ಅಂದರೆ
ಎದುರಾಳೀನ ಒಂಜಿನಕ್ಕೆ  ಮೊದಲೇ ಕಚಕ್ ಮಾಡಿಸ್ಬಿಡು.
ಸಪಾರಿ ಕೊಡು. ನೀನೇ ಮಾಡೋಕ್ಹೋಗಿ ಸಿಕ್ಬಿದ್ದೀಯ--ದುಡ್ಡು
ಯಾರಾದ್ರೂ ಬಿಸಿನೆಸ್ಮನ್ನು, ಇಂಡಸ್ಟ್ರಿಯಲಿಸ್ಟು, ಹೋಟೆಲ್ ಓನರ್ ಹತ್ರ ಇಸ್ಕೋ.
ಕೊಡಲ್ಲ ಅನ್ನೋ ಧೈರ್ಯ ಯಾವ ಸೂಳೇಮಗಂಗ್ ಐತಲೇ--
ಗೆದ್ದು ಒಂದು ಪೊಸಿಶನ್ ಈ ಸಲ ಪಡೀಲಿಲ್ಲಾಂದ್ರೆ
ನಾ ಹೋದೆ. ಆ ಮ್ಯಾಗೆ  ಈ ಜನ್ಮದಾಗೆ ರೌಡಿಪಟ್ಟ ಮುಗಿಯೋ ಹಂಗಿಲ್ಲ.

ಬೇವಾರ್ಸಿ ನನ್ ಮಗನೇ, ದೇವಸ್ಥಾನಕ್ಕೆ ಡೊನೇಷನ್ ಕೊಟ್ಟವ್ರೆ,
ಮಸೀದಿಲಿ ನಮಾಜು ಮಾಡವ್ರೆ,
ಜಾತ್ಯತೀತ ಸೆಕ್ಯೂಲರ್ ಡೆಮಕ್ರಾಟಿಕ್ ಲೀಡರ್
ಅಂತ ಪೇಪರ್ನಾಗೆ ಹಾಕ್ಸು. ಇಡೀ ಕ್ಷೇತ್ರದಾಗೆ
ಕ್ರಿಶ್ಚಿಯನ್ ಓಟರ್ಸ್ ಒಟ್ಟು ಇರೋರೇ ಮುನ್ನೂರು ಜನ--
ಹಂಗಾಗಿ ಇಗರ್ಜಿ ಪಂಚಾತಿಕೆ ಬುಟ್ಬುಡು.
ಯಾರಾದ್ರೂ ನನ್ನ ಟೀಕಿಸಿದ್ರೆ
ಕೆಳವರ್ಗದವರನ್ನ, ಶೋಷಿತರನ್ನ ರಿಪ್ರಸೆಂಟ್ ಮಾಡೋರಿಗೆ
ಇಂದು ನಮ್ಮ ದೇಶದಾಗೆ ಉಳಿಗಾಲ ಇಲ್ಲ
ಅಂತ ವಾಚಕರ ವಾಣೀಲಿ ಕಾಗದ ಬರೋಕೆ ವ್ಯವಸ್ಥೆ ಮಾಡ್ಸು.
ಬುದ್ಧಿಜೀವಿಗಳು ಭಾಷಣದಲ್ಲಿ ಹಂಗಂತ ಹೇಳ್ಲಿ.
ಗಟ್ಟಿ ಕುಳವಾರು, ನಮಗೆ ಬೇಕಾದ ಹಾಗೆ ಪ್ರಚಾರ ಕೊಡ್ತಾನೆ ಅಂತಾದ್ರೆ
ತುಸು ಜಾಸ್ತೀನೇ ಬಿಸಾಕು.
ಹೂಂ. ದಯಮಾಡ್ಸು. ಬಾಗ್ಲು ಹಾಕ್ಕೊಂಡು ಹೋಗು. ಯಾರಾದ್ರೂ ಬಂದ್ರೆ
ಕಾನ್ಫರೆನ್ಸ್ನಾಗವ್ರೆ,  ಸ್ಟಡಿ ಮಾಡ್ತವ್ರೆ ಅಂತ ಬೊಗಳಾಕೆ
ಆ ನನ ಮಗ ದರವಾನಂಗೆ ಹೇಳು.
ಹಡಬೆ ಬಡ್ಡೆತ್ತಾವು. ಎಲ್ಲಾ ಬುಡ್ಸಿ ಬುಡ್ಸಿ ಹೇಳ್ಬೇಕು.
ಬಾಟ್ಲಿ ತತ್ತಾ. ನಂಜಿಕೊಳ್ಳೋಕೆ ಯಾವಳಾದ್ರೂ ಅದಾಳೇನ್ಲಾ?
ಕಳ್ಸು ಮತ್ತೆ.

19

(ಡೆಲ್ಲಿಯಲ್ಲಿ ಕಂಡದ್ದು)

ಇಪ್ಪತ್ತೆಂಟು ತಲೆ, ಹದಿನಾಲ್ಕು ದಾಡೆ
ಮೂವತ್ತಾರು ಕೈ, ಸಾವಿರದೆಂಟು ನಾಲಗೆ
ಕಣ್ಣಿನ ಬದಲು ಎರಡು ಬೆಂಕಿಯ ಗೋಳ

ಗಾಳಿಯನ್ನು ಹಿಡಿದು ಗುಹೆಯಲ್ಲಿ ಒಗೆದ;
ಬೆಳಕನ್ನು ಹಿಡಿದು ಕತ್ತಲೆಯಲ್ಲಿ ಮುಳುಗಿಸಿದ;
ಮಾತನ್ನು ತಿರುಚಿ ಕೊರಳಲ್ಲಿ ಹೂತ.

ಗಾಳಿಯ ಪ್ರಾಣವನ್ನು
ಬೆಳಕಿನ ದೀಪ್ತಿಯನ್ನು
ಮಾತಿನ ಧ್ವನಿಯನ್ನು
ಕೊಂದ;

ತನ್ನ ಹೃದಯದ ಬೆಂಕಿಯನ್ನೆತ್ತಿ ಅಪ್ಪಿ ಮುದ್ದಾಡಿ
ತೊಟ್ಟಿಲಲ್ಲಿಟ್ಟು ಮಲಗಿಸಿ ತೂಗಿ

ಹಸಿವಾದಾಗ ಅದನ್ನೇ ತಿನ್ನುತ್ತಿದ್ದ.

22

ಈ ಲವ್ ಅನ್ನೋದು ಯೂಸಿಲ್ಲ. ಮಾಡು. ಬೇಡ ಹೇಳೂದಿಲ್ಲ.
ಆದರೆ ಕೀಪು ಅಂತ ಇರ್ಲಿ. ಮದುವೆ ಬೇಡ.
ಮದುವೆಗೆ ನೋಡು--ಮೂರು ಜಾತಕ ಫೊಟೋ ಬಂದವೆ.
ಇವ್ಳು ಮಿನಿಸ್ಟ್ರ ಮಗಳು; ಇವಳು ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ಹೋಲ್ಡರ್;
ಮತ್ತೆ ಇವಳ ಅಪ್ಪ ನೋಡು ಸೆಕ್ರೆಟೇರಿಯಟ್ನಲ್ಲಿ ಆಫಿಸರ್ರು.
ಕಾಂಟ್ರಾಕ್ಟ್, ಟೆಂಡರ್ ಎಪ್ರೋವಲ್ ಇವರ ಜವಾಬ್ದಾರಿ.
ಮೂವರಲ್ಲಿ ಯಾರನ್ನು ಮಾಡ್ಕಂಡ್ರೂ ಫ್ಯೂಚರ್ ಈಸ್ ಸೆಕ್ಯೂರ್ಡ್.

ಅಲ್ಲಯ್ಯಾ--ಈ ಫಿಲಾಸಫಿ ಲಿಟರೇಚರ್ ಪಟರೇಚರ್ ಓದ್ತಾ ಇರ್ತೀಯಲ್ಲ--ಏನಕ್ಕೆ?
ಹಂಗೂ ಇಂಟಲೆಕ್ಚುವಲ್ ಪ್ರೊಫೆಶನ್ನೇ ಬೇಕಂತಿದ್ರೆ
ಹೊರಸ್ಕೋಪು ನೋಡೋದು ಕಲಿತ್ಕೋ.
ಕ್ರಿಸ್ಟಲ್ ಗೇಸಿಂಗ್, ಪಾಂಚೆಟ್, ಕವಡೆ, ಪಂಚಾಂಗ--
ಭವಿಷ್ಯ ಹೇಳೋರು ಅಂದರೆ
ಎಂಥಾ ಮಂತ್ರಿ ಪೊಲಿಟಿಶಿಯನ್ ಮಿಸೆಸ್ ಹತ್ರಾನೂ ಸಲೀಸಾಗಿ ಹೋಗ್ಬಹುದು.
ಒಂಚೂರು ಪ್ರಾಣಾಯಾಮ ಯೋಗ ಕಲಿತ್ಕೊಂಡ್ರೆ
ಅಮೆರಕಾಕ್ಕೆ ವಲಸೆ ಹೋಗಿಯೂ ಪ್ರಾಕ್ಟೀಸು ಮಾಡ್ಬಹುದು.
ಯಾವಾಗಲೂ ಒಂದು ಕಾಲು ಆಚೆ ಇಟ್ಟಿರೋದು ಒಳ್ಳೇದು.

ಪುರಾನಾ ಖಿಲಾ ಮತ್ತು ಜೂ ಇರುವಲ್ಲಿ ಹಿಂದೆ ಇತ್ತಂತೆ ಇಂದ್ರಪ್ರಸ್ಥ--
ಅದರಿಂದ ಮುಂದೆ ಏಳು ಜನ್ಮಗಳಲ್ಲಿ
ಬೆಳೆದು ನಿಂತಿದೆ ಡೆಲ್ಲಿ.
ಅದೂ ಬದಲಿದೆ ಈಗ:
ಅರಮನೆ ಮ್ಯೂಸಿಯಂ ಆಗಿ, ಹವಾಮಹಲು ಹೋಟೆಲ್ ಆಗಿ,
ಭಿಲ್ಲ ರಂಗ ಬುದ್ಧ ಜಯಂತಿ ಪಾರ್ಕಲ್ಲಿ  ಅವತರಿಸಿ.
ಒಂದು ನವಿಲು, ಗರಿಗಳ ಫುಟ್ಪಾಥಲ್ಲಿ ಉದುರಿಸಿಕೊಂಡು,
ರಸ್ತೆ  ಮಧ್ಯೆ, ರಾಷ್ಟ್ರಪಕ್ಷಿ,
ನೀರಡಿಸಿ ನಿಂತಿತ್ತು. ರೆಕ್ಕೆ ತುಂಡು ಮಾಡಿ, ಕಾಲು ಕಟ್ಟಿ,
ರಾಶಿ ರಾಶಿ ಕೋಳಿ ಲಾರೀಲಿ ತುಂಬಿ ತೆಕ್ಕೊಂಡು ಹೋಗ್ತಿದ್ದರು.
ಬೆಳಿಗ್ಗೆ ಕೊಕ್ಕೊಕ್ಕೋ ಅಂತಿದ್ದ ಕೋಳಿ
ಬಿಸಿಲಲ್ಲಿ ಬಾಯಿ ಅಗಲಿಸಿ ಮುಚ್ಚಿ ಅಗಲಿಸಿ ಮುಚ್ಚಿ ಮಾಡ್ತಿದ್ದವು.
ಕಾಲ, ಸ್ಥಳ ಎಲ್ಲಾ ಯದ್ವಾತದ್ವ ಆಗದೆ.
ಯಾವಾಗ ಎಲ್ಲಿ ಏನಾಗುತ್ತೆ ಗೊತ್ತಿಲ್ಲ.
ಸರಿಯಾದ ಕಡೆ ನೋಡಿ, ಹತ್ತಬೇಕಾದ ಕಡೆ ಹತ್ತಿ,
ಆಯಕಟ್ಟಿನ ಜಾಗ ಹಿಡಕೊಂಡು ಕೂತುಕೋ.
ಆ ಮೇಲೆ ಬೇಟ ಸಲೀಸು.
ಇಲ್ಲಾಂದ್ರೆ ತಾಪತ್ರಯ ತಪ್ಪಿದ್ದಲ್ಲ.

26

ಬೆಳಕು ಮೂಡೆ ಮುಳುಂಕುಗಳ ತುಂಬುವುದು,
ವಿರಸ ವಿಚ್ಛಿದ್ರ ಕೊನೆಯಾಗಿ ಸತ್ತ್ವಶೀಲರ ಪ್ರಾಣ
ಗುಡಿ ಕಟ್ಟುವುದು ಎಂದು ಮಂಗಳ ಮಾತು ಆಡುವುದು

ಮಂಗನಿಗೆ ಬಿಸ್ಕೀಟು ತಿನ್ನಿಸುವ, ಕಾಗೆ ಕಾಕಾದಲ್ಲಿ
ವಿಶ್ವದ ಕುಣಿತ ಕಾಣುವ, ಭವಲೋಕ
ದೇವಲೋಕವೆ ಎಂಬ ಶುಭ ಜಾಯಮಾನಕ್ಕೆ ಸರಿ.
ಇರುಳು ಪಸರಿಸಿದೆ; ಹೊರಬೀಳಲಳವಲ್ಲ; ಕೊಲೆಗಡುಕ
ಕಳ್ಳ ತಲೆಹಿಡುಕ ರೌಡಿ ರಾಜಾರೋಷ ತಿರುಗುವರು.
ಪೊಲೀಸು ಅಧಿಕಾರಿ ಮಂತ್ರಿ ನ್ಯಾಯಾಧೀಶ
ಭೂಗತರ ಸೆರೆ; ಮತ್ತು; ಏಡ್ಸ್ ಇನಿಬರಿಗೆ; ಅರಿವುಳ್ಳ
ಕೆಲವರಿಗೆ ಪೊರೆ ಪುಕ್ಕು; ಗುಡಿಯ
ಗೋಡೆ ಜರಿದಿದೆ; ಹೊನ್ನ ಕಳಶ ಕುಸಿದಿದೆ; ಕಾಲೆಂಬ
ಕಂಬ ಜರಿದಿದೆ; ಹುಚ್ಚು ಶಿರ; ಹುಳಿತ ಯೋಚನೆ; ಭೀತಿ;
ನುಡಿ ಸ್ಫಟಿಕ ಶಲಾಕೆ ಆಗದೆ ಒಳಗೆ ಕುರುಡುತ್ತಿದೆ.

28

(ಡೆಲ್ಲಿವಾಲಾ--4)

ವರ್ಷ ಎಂಭತ್ತಲ್ಲ ನೂರ ಎಂಭತ್ತು ಕಳೆದರೂ
ಕಂಡದ್ದು ಮಾತ್ರ
ನಾಲ್ಕು, ಬರೀ ನಾಲ್ಕು ನಕ್ಷತ್ರ.

ಒತ್ತಿ ಒತ್ತಿ ಬರುವ ಒಳಗಿನ ಇರುಳು
ಇರುಳ ಎಳೆ ಎಳೆ ತಮಸ್ಸ ಅಂಧಕಾರದ ಘೋರ
ಉಸಿರು ಕಟ್ಟಿಸಿದಲ್ಲಿ
ಬಯಲು ಅಥವಾ ಗುಡ್ಡೆ ತುದಿ ಹತ್ತಿ
ನಿಲ್ಲೋಣ ಅನಿಸುತ್ತಿತ್ತು; ನಿಂತಲ್ಲಿ ತಿಳಿಯುತ್ತಿತ್ತು
ಲಕ್ಷ ಲಕ್ಷ ನಕ್ಷತ್ರ
ಗಿಡ ಮರ ಬಂಡೆ
ಸುಗಂಧ ದುರ್ಗಂಧ ವಾಸನೆ, ಮತ್ತು
ಜುಳು ಜುಳು ಹರಿವ ಅಂತರಗಂಗೆ.

ಬಾಗಿಲು ಮುಚ್ಚಿ ಒಳಗಿಂದ
ಕೀಹೋಲು ಸಂದಿಯಲ್ಲಿಣುಕಿ
ವರ್ಷ ಎಂಭತ್ತಲ್ಲ ನೂರ ಎಂಭತ್ತು ಕಳೆದರೂ
ನಾಲ್ಕಾದರೂ ಕಂಡದ್ದು ಬೆಳಕಿನ ಭಾಗ್ಯ.

30

ಜೀವನದ ಸಾರ್ಥಕ್ಯ ಏನೆಂದು ಕಾಡುವುದು
ಸಾವು ಇಂಥವರನ್ನು ಒದ್ದೊಯ್ಯಲು;
ಜೀವ ಜೀವದ ಮಧ್ಯೆ ಐಸು ಬೆಳೆಸಿರಲಿಲ್ಲ,
ಭವದ ಅನುಭವದಲ್ಲಿ ಬೆಳೆದಿದ್ದರು.

ಮಾತು ಮಾತಿಗೆ ಸ್ವರ್ಗ ಪಾಪ ಪುಣ್ಯದ ಹೆಸರು
ಕೂತುಕೊಂಡಿರುವಂತೆ ಮರಸಿಗಾಗಿ
ಸತ್ತ ಮನಸ್ಸಿನ ಮಂದಿ ಹೇಳಿ ಕಾಡುವ ಹಾಗೆ
ಆತು ಸಂಸ್ಕೃತ ಶ್ಲೋಕ ಊರೆಗಾಗಿ

ಕೊಂದವರಲ್ಲ ಹೇಳುತ್ತ ಮನಸ್ಸುಗಳ ಸೃಜನತ್ವ;
ಚೆಂದದ್ದು ಬಾಳುವೆಯು, ಪರಿಮಳದ
ಗಂಧ ತೀಡಿದ ಹಾಗೆ ಇವರ ಬದುಕೆಂದೇನು
ಹಿಂದಿಂದು ಹೋಲಿಕೆಯ ಮರಳಿ ಬಳಸಿ.

ಇಂಥವರು ಹೋದಾಗ ಎಂಥದ್ದು ಉಳಿದೀತು?--
ಸಂತೆ ಸರಕಿನ ರೀತಿಯಂಥ ಬದುಕು,
ಮಂಥರೆಯಂಥವರು, ಹೊಟ್ಟೆ ಹುಳಗಳ ಹಾಗೆ
ತಿಂತಿಣಿಸಿ ಒಳಶಕ್ತಿ ಹೀರುವವರು;

ತಪ್ಪು ಹುಡುಕುವ ಬಾಸು, ಕಪ್ಪ ಸುಲಿಯುವ ಅರಸ,
ಕೆಪ್ಪ ಕೂತಿದ್ದಾನೆ ಮೇಲಿನೊಡೆಯ;
ಅಪ್ಪಿ ಒಂದಾಗದೆಯೆ ಸಹಧರ್ಮಿ ಬೀಗಿದೆ ವಿರಸ,
ಉಪ್ಪುಗಂಜಿಯ ಊಟ, ಸೂಳೆ ಸರಸ.

ಲಂಚ ಹೊಡೆಯುವ ಜಡ್ಜು, ಫೈಲು ನುಂಗುವ ಕ್ಲರ್ಕು,
ಅಂಚೆ ಕೆಟ್ಟಿದೆ, ಸ್ವಗತ, ಪೆಟ್ಟಿ ವಾಸ;
ಇಂಚು ಇಂಚೇ ಹಿಂಡಿ ಜೀವ ತಿನ್ನುವ ಏಡ್ಸು,
ಸಂಚು ಪಡೆ ಆಡಳಿತ, ದೇಶ ದಾಸ.

ಎಂಥದ್ದು ಉಳಿದೀತು ಇಂಥವರ ಕೊಂದಾಗ?--
ಜಂತು ಆಸೆಯ ದೊಡ್ಡ ದೊಡ್ಡ ಪಡೆಯು
ಎಂಥೆಂಥದೋ ರೂಪ ತೊಟ್ಟು ಕುಣಿದಾಡುವುದು--
ಶಾಂತಿ ಸಹನೆಯ ವೇಷ ಮಾತು ಕೂಡ.

ಕೊಂದಾಗ ಇಂಥವರ ಎಂಥದ್ದು ಉಳಿದೀತು?--
ಎಂದಿಗೂ ಎದೆಗುಂದಿ ಕೂರಲಿಲ್ಲ;
ಕುಂದು ಕಾಣದ ನಡತೆ, ಕುಂದು ಕಾಣದ ಮಾತು,
ಬಂಧ ಹಾಳಾಗದ್ದ ಮೌಲ್ಯ ನಿಷ್ಠೆ:

ಉಳಿದೀತು ಎಂಥದ್ದು ಇಂಥವರ ಕೊಂದಾಗ?--
ಕೊಳಕು ಮಂಡಲ ಪಾಳ್ಯ ನೆಗೆದು ಮೆರೆದು
ಒಳ್ಳೆಯದು ನಾಗರಿಕ ಪಾತಾಳ ಸೇರುವುದು
ಕಳೆದು ಕವನಕ್ಕಿರುವ ಮುಖ್ಯ ಕಾರ್ಯ.

ಜೀವನದ ಸಾರ್ಥಕ್ಯ ಏನೆಂದು ಕಾಡುವುದು
ನಾವು ಇಂಥವರನ್ನು ಕಳೆದುಕೊಳಲು;
ಜೀವಗಳ ಆಳುವುದು ರೌಡಿ ಯಮ ವೈಷಮ್ಯ;
ದೇವ ಹೇಳಿದ್ದು ಇದು--ನಷ್ಟ ಅರಿವು.

31

 (ಗೃಹಿಣಿಯ ಹಾಡು)

ಮಲಗು ನಿದ್ರಿಸು ಕಂದ ಪುಟ್ಟಾಣಿ ಜೋ ಜೋ
ಚೆಂದ ಕನಸಿನ ಮುದ್ದು ಮುದ್ದು ಮುದ್ದಾಣಿ ಜೋ ಜೋ

ಇದ್ದ ಬೆಳಕೂ ಹೋಗಿ ಬಿರುಗಾಳಿ ಬೀಸಿ
ಮಿಂಚು ಮಿಂಚಿತು ಗುಡುಗು ಸಿಡಿಲು ಆರ್ಭಟಿಸಿ;
ಬಂದೀತೆ ಮಳೆ? ನೀರು ಒಳ?
ಕಳೆಯಬೇಕಿದೆ ಇರುಳು ಆತಂಕ ಹಾಸಿ.

ಮಲಗು ನಿದ್ರಿಸು ಕಂದ ನಿನಗೇನು ಹಾಳು
ಆಗದೆಯೆ ಬೆಳಗಾತ ನಗುನಗುತ ಏಳು.

ದರೋಡೆಕೋರರು ಬಂದು ಇದ್ದುದ ಕದ್ದು
ಮುಗಿಸಿಬಿಡುವರು ಅಡ್ಡ ಬಂದವರ ಹೊಡೆದು;
ಮಕ್ಕಳನ್ನೂ ಅವರು ಎತ್ತಿ ಕೊಂಡೊಯ್ಯುವರು
ಕೈಯ್ಯೋ ಕಾಲೋ ತಿರುಚಿ ಬೇಡ ಕಳಿಸುವರು.

ಮಲಗು ನಿದ್ರಿಸು ಕಂದ ಯಾವುದೇ ಗೋಳು
ನಿನ್ನ ಮುಟ್ಟದೆ ದಿನವು ನಗುನಗುತ ಏಳು.

ಆಚೆ ಬದಿಯಲ್ಲೆಲ್ಲೊ ಭಿಕ್ಷುಕ ಹುಡುಗ
ಬಲ ಮೀರಿ ಕಿರುಚುವನು: ತಾಯಿ ಕೊಡಿ ಅನ್ನ;
ಈಚೆ ಬದಿಯಲ್ಲೆರಡು ನಾಯಿ ಮರಿ, ತಾಯಿ
ಕುಂಯ್ಗುಟ್ಟಿ ಪಾಂಕ್ಹಿಡಿದು ಪಡುತ್ತಲಿವೆ ಬನ್ನ.

ಇವು ನಿನಗೆ ದುಸ್ವಪ್ನ ಆಗಿ ಬರದಿರಲಿ
ಬರುವವರು ಒಗೆತನದ ಸಖರಾಗಿ ಬರಲಿ.

ಮಲಗು ನಿದ್ರಿಸು ಕಂದ ಚೆಲು ನಗುವ ಶುಭವೆ
ಇಂಥ ಕಾವಳದಲ್ಲು ಹೊಳೆವ ಸಿರಿ ಮುಖವೆ

ಬೇರು ಎಲ್ಲೇ ಇರಲಿ, ಒಳಗಿನ ಜ್ಯೋತಿ
ಆರದ ಹಾಗೆ ಇರಲಿ ಒಡಲಿನ ಧಾತು;
ಸಿರಿ ಮುಖದಲ್ಲಿ ಬಂದರು ನೆರಿಗೆ, ಪಟು
ಇರಲಿ ಕಣ್ಣು ಕಿವಿ ತಲೆ ಮಾತು.

ಮಲಗು ನಿದ್ರಿಸು ಕಂದ ಪುಟ್ಟಾಣಿ ಜೋ ಜೋ
ಯೋಗ ನಿದ್ರೆಯ ಆದಿ ಶಿಶು ಮುದ್ದು ಜೋ ಜೋ

32

ಮಲಗಿದ ಮಕ್ಕಳ ಮುಗಿಸಿದೆ ಈಗ
ಭ್ರೂಣದ ಸುತ್ತ ಹಬ್ಬಿದೆ ಅಸ್ತ್ರ.

ದೇವರು ಬರುವನೆ ಕಾಪಾಡುವನೆ
ಭ್ರೂಣವ ಉಳಿಸೀ ಮೈ ಬೆಳೆಸುವನೆ?

ಇದ್ದರೆ ತಾಖತ್ತಿದ್ದರೆ ಬರಲಿ.
ಅಡಗಲು ಗುಹೆಯೋ ಆಳದ ಬಂಕರೊ
ಇದ್ದರು ಅಣುವಿನ ಉರಿಯಲಿ ಸುಡುವೆನು
ಗರ್ಭದ ಕತ್ತಲ ತಾಯಿಯ ಲೋಕವ.

ಅಂತೂ ಹೇಗೋ ಹುಟ್ಟಿದರೂ ಸಹ
ಕೈಯ್ಯೋ ಕಾಲೋ ಕಣ್ಣೋ ತಲೆಯೋ
ತಿರುಚಿಯೊ ಉರುಟಿಯೊ ಮೆಳ್ಳೋ ಕುಳ್ಳೋ--
ನೆಲವೂ ಕೂಡಾ ಸತ್ತದ್ದೇ ಪರಿ

ಉರುಳುತ ಅಸವಳಿಯುತ ನೀರಡಿಸುತ
ಕಟ್ಟದೆ ಏನೂ ಹುಟ್ಟಿಸಲಾಗದೆ
ಮಾಡುವರೇನೂ? ಮಕ್ಕಳ ಮುಗಿಸಿದೆ;
ಭ್ರೂಣದ ಸುತ್ತ ಈಗಿದೆ ಅಸ್ತ್ರ.

(ಮೇಲಿನವು ನನ್ನ "ಇಂದ್ರಪ್ರಸ್ಥ" (2) ಎಂಬ 32 ಭಾಗಗಳಿರುವ ದೀರ್ಘ ಕವನದ ಕೆಲವು ಭಾಗಗಳು. ಇಡೀ ಕವನ ನನ್ನ ಕವನ ಸಂಗ್ರಹ ಮಾತಾಡುವ ಮರ  (2003)ದಲ್ಲಿ ಲಭ್ಯವಿದೆ.
*************

ಬೋಧಿ ಟ್ರಸ್ಟ್  ಪುಸ್ತಕಗಳು ಬೆಂಗಳೂರಿನಲ್ಲಿ ನ್ಯೂ ಪ್ರೀಮಿಯರ್ ಬುಕ್ ಶಾಪ್, ಬನಶಂಕರಿ ಎರಡನೇ ಹಂತ, ಬೆಂಗಳೂರು
ಹಾಗೂ ಅತ್ರಿ ಬುಕ್ ಸೆಂಟರ್, ಮಂಗಳೂರು--ಇಲ್ಲಿ ಸಿಕ್ಕುತ್ತವೆ. ಅಥವಾ, Bodhi Trust, SB Account no.1600101008058, Canara Bank, Yenmur 574328, Sullia Taluk, Karnataka, IFSC: CNRB0001600-- ಇಲ್ಲಿಗೆ ನಿಮಗೆ ಬೇಕಾದ ಪುಸ್ತಕಗಳ ಮೊತ್ತ ಜಮೆ ಮಾಡಿ bodhitrustk@gmail.comಗೆ ವಿಳಾಸ ತಿಳಿಸಿದರೆ ಪುಸ್ತಕ ಕಳಿಸುತ್ತೇವೆ. ಡೊನೇಶನ್ನುಗಳಿಗೆ ಸ್ವಾಗತ. ಡೊನೇಷನ್ನನ್ನೂ ಮೇಲಿನ ಅಕೌಂಟಿಗೆ ಜಮೆ ಮಾಡಿ ಇಮೇಲ್ ಮೂಲಕ ತಿಳಿಸಿರಿ.

ಮಾರಾಟಕ್ಕೆ ಲಭ್ಯವಿರುವ ನಮ್ಮ ಪುಸ್ತಕಗಳು:
1. ಮಾತಾಡುವ ಮರ. ಸಮಗ್ರ ಕಾವ್ಯ, 1964-2003. ರೂ100.00
2. ಹ್ಯಾಮ್ಲೆಟ್. ಅನುವಾದ. ರೂ50.00
3. ಮುಚ್ಚು ಮತ್ತು ಇತರ ಲೇಖನಗಳು. ರೂ50.00
4. ಸಮಗ್ರ ನಾಟಕಗಳು, ಸಂಪುಟ 2. ರೂ60.00
5. ಸಮಗ್ರ ನಾಟಕಗಳು, ಸಂಪುಟ 3. ರೂ75.00


ಉದ್ಘಾಟನೆಯ ಇನ್ನಷ್ಟು ಫೊಟೋಗಳು

ಇವು ಬೋಧಿ ಟ್ರಸ್ಟ್ ಉದ್ಘಾಟನೆಯ ದಿನ ಉಡುವೆಕೋಡಿ ಮನೆಯಲ್ಲಿ ತೆಗೆದ ಇನ್ನಷ್ಟು ಫೊಟೋಗಳು.
ಫೊಟೋದಲ್ಲಿರುವುದು ಬಿ. ವಿ. ಕಾರಂತರು, ನಾನು ಮತ್ತು ಜಯರಾಮ ಪಾಟೀಲ. ಇವರು ಬಾಬುಕೋಡಿ ಪ್ರತಿಷ್ಠಾನದ ಸದಸ್ಯರು.

Sunday, December 26, 2010

ಬೋಧಿ ಟ್ರಸ್ಟ್: ಹತ್ತು ವರ್ಷ

ಬೋಧಿ ಟ್ರಸ್ಟ್ ಪ್ರಾರಂಭವಾಗಿ ಹತ್ತು ವರ್ಷವಾಯಿತು. ಈ ಚಿತ್ರಗಳು ಆಗಸ್ಟ್ 6, 2000ರಂದು ಬಿ. ವಿ. ಕಾರಂತರು ಕಲ್ಮಡ್ಕದಲ್ಲಿ ಮಾಡಿದ ಉದ್ಘಾಟನಾ ಭಾಷಣದವುಗಳು. ಮೊದಲನೆಯ ಚಿತ್ರ ನಾನು ಮಾಡುತ್ತಿರುವ ಸ್ವಾಗತ ಭಾಷಣ ಮತ್ತು ಕೂತಿರುವ ಬಿ. ವಿ. ಕಾರಂತರು. ಅವರಿಗೆ ಆಗ ತಾನೇ ಕ್ಯಾನ್ಸರ್ ಇದೆಯೆಂದು ಪತ್ತೆಯಾಗಿತ್ತು. ಅದನ್ನು ತೋರಿಸಿಕೊಡದೆ ಮಾತಾಡಿದರು. ನಾಲ್ಕನೆಯ ಚಿತ್ರದಲ್ಲಿ ಕೆಂಪು ಅಂಗಿ ಹಾಕಿ ಕ್ಯಾಮೆರಾ ಹಿಡಿದು ಕೂತವರು ಉಡುವೆಕೋಡಿ ರಾಧಾಕೃಷ್ಣ. ಅಲ್ಲೇ ಸ್ವಲ್ಪ ಹಿಂಬದಿಯಲ್ಲಿರುವವರು--ಎಡಗೈಯ್ಯನ್ನು ಬಾಯಿಯ ಮೇಲೆ ಇಟ್ಟುಕೊಂಡು ಕೂತ ಹುಡುಗ--ಅವರ ಅಣ್ಣ--ಈಗ ದಿವಂಗತ-- ಉಡುವೆಕೋಡಿ ಶಿವಶಂಕರ. ಒಂದು ಒಳ್ಳೆಯ ಪದ್ಯ ಬರೆದಿದ್ದ. ಆಗ ನನಗಿನ್ನೂ ಮನೆ ಆಗಿರಲಿಲ್ಲ. ಹೀಗಾಗಿ ನನ್ನ ಹತ್ತಿರದ ಬಂಧುವಾದ ಶಿವಶಂಕರನ ಮನೆಯಲ್ಲಿ ಬಿ. ವಿ. ಕಾರಂತರಿಗೆ ವ್ಯವಸ್ಥೆ ಮಾಡಲಾಗಿತ್ತು. ಅವತ್ತು ಕಾರಂತರು ಬಯಸಿ ತಂಬಳಿ ಮಾಡಿಸಿಕೊಂಡಿದ್ದರು. ಎರಡನೆಯ ಸಾಲಿನಲ್ಲಿ ಎಡಬದಿಗೆ ಮೊದಲನೆಯವರಾಗಿ ಮುಖಕ್ಕೆ ಕೈ ಹಿಡಿದು ಕೂತವರು ಟಿ. ಜಿ. ಮುಡೂರರು. ಅವರ ಹಿಂದೆ ಇರುವವರು ಕೆರೆಕ್ಕೋಡಿ ಗಣಪತಿ ಭಟ್ಟರು. ಮೂರನೆಯ ಚಿತ್ರದಲ್ಲಿ ಕಾರಂತರಿಗೆ ನೆನಪಿನ ಕಾಣಿಕೆ ಕೊಡುತ್ತಿರುವವರೂ ಇವರೇ. ಇವರೇ ಸುಮಾರು ಅರುವತ್ತು ವರ್ಷಗಳ ಹಿಂದೆ ಕಲ್ಮಡ್ಕದಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆ ಪ್ರಾರಂಭಿಸಿ ಇಲ್ಲಿ ಒಂದು ಬದಲಾವಣೆ ತಂದವರು. ಯರ್ಮುಂಜ ರಾಮಚಂದ್ರರ ಪ್ರಥಮ ಕಥಾಸಂಗ್ರಹ  ಚಿಕಿತ್ಸೆಯ ಹುಚ್ಚು ಮತ್ತು ಇತರ ಕಥೆಗಳು (1955) ಪ್ರಕಟಿಸಿದವರೂ ಇವರೇ. ಗಣಪತಿ ಭಟ್ಟರು ಈಗ ದಿವಂಗತರು. ನನಗೆ ಹೈಸ್ಕೂಲಿನಲ್ಲಿ ಅಧ್ಯಾಪಕರೂ ಆಗಿದ್ದ ಮುಡೂರರು ಈಗ ಪಂಜದಲ್ಲಿ ನೆಲೆಸಿದ್ದಾರೆ. ಕವಿ. ಒಳ್ಳೆಯ ಕವಿ. ಕೆಲವು ಒಳ್ಳೆಯ ಕತೆ ಬರೆದಿದ್ದಾರೆ. ಹೊನ್ನಮ್ಮನ ಕೆರೆ ಎಂಬ ಹೆಸರಿನ ಒಂದು ಒಳ್ಳೆಯ ಜಾನಪದ ಕವನವನ್ನು ಮಡಿಕೇರಿಯಲ್ಲಿ ಜಾನಪದ ಕಾವ್ಯ ಸಂಗ್ರಹ ವ್ಯಾಪಕವಾಗಿ ಪ್ರಾರಂಭವಾಗುವುದಕ್ಕೆ ಮೊದಲೇ 1950ರ ದಶಕದಲ್ಲೇ ಸಂಗ್ರಹಿಸಿದ್ದಾರೆ. ಇವರ ಜೊತೆಯ ಇನ್ನೊಬ್ಬರಾದ ಕೆ. ರಾಮಚಂದ್ರ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಓದುತ್ತಿದ್ದಾಗ ತಮ್ಮ 24-25ನೆಯ ವಯಸ್ಸಿನಲ್ಲಿ ಕ್ಷಯರೋಗದಿಂದ ತೀರಿಕೊಂಡರು. ಇವರ ಕವನ "ಸುಪ್ತಶಕ್ತಿ"ಯನ್ನು  ಕಲ್ಮಡ್ಕದ ಶಾಲಾ ವಿದ್ಯಾರ್ಥಿಗಳ ಮೂಲಕ ಸುಮಾರು ಎಂಟು ವರ್ಷಗಳ ಹಿಂದೆ ಒಂದು ಸಮಾರಂಭದಲ್ಲಿ ಹಾಡಿ ಸಭಿಕರೆದುರು ಸಾದರ ಪಡಿಸಲಾಯಿತು. ಅವತ್ತು ಪುತ್ತೂರಿನ ಬೋಳಂತಕೋಡಿ ಈಶ್ವರ ಭಟ್ಟರ ಕರ್ನಾಟಕ ಸಂಘ ಪುನರ್ಮುದ್ರಿಸಿದ ಅವರ ಕವನ ಸಂಗ್ರಹದ ಬಿಡುಗಡೆ ಇತ್ತು. ಆ ಪುಸ್ತಕದ ಹೆಸರು: ಬಿದ್ದದ್ದು ಗರಿಯಲ್ಲ, ಹಕ್ಕಿಯೇ.
ಹತ್ತು ವರ್ಷವಾದ್ದನ್ನು ಸಂಭ್ರಮಿಸಿಕೊಳ್ಳಲು ಈಗಾಗಲೇ ಭಾರತೀಯ ಕಾವ್ಯದ ಆರ್ಕೈವ್ ಪ್ರಾರಂಭಿಸಿದ್ದೇವೆ. ಇದರ ವಿಳಾಸ: http://kavyodyoga.blogspot.com  ನೋಡಿ, ಓದಿ. ಒಳ್ಳೆಯ ಕವಿತೆಗಳ ಒಳ್ಳೆಯ ಅನುವಾದಗಳಿದ್ದರೆ ತಿಳಿಸಿ, ಕಳಿಸಿ.

ಇದರ ಜೊತೆಗೆ ಕಾವ್ಯೋತ್ಸವ ನಡೆಸಬೇಕೆಂದಿದ್ದೇವೆ. ಮೊದಲ ಕಾವ್ಯೋತ್ಸವ ಮಾರ್ಚ್ 20ರಂದು ಬೆಂಗಳೂರಿನಲ್ಲಿ ನಡೆಯಲಿದೆ.

Friday, December 24, 2010

ಇಂದ್ರಪ್ರಸ್ಥ-1

ಊರು ಕಟ್ಟುವ ಮೊದಲು ಧ್ವಂಸ ಆಗಲೇ ಬೇಕಾದದ್ದು ಈ ಕಾಡು
ಎಂದು ಯೋಚಿಸಿದ ಕೃಷ್ಣ ಮತ್ತು ಪಾರ್ಥ
ಒಣಕು ಬಳ್ಳಿಗೆ ತರಗೆಲೆಗೆ ಕಾಷ್ಠಕ್ಕೆ
ಕಿಚ್ಚಿಟ್ಟರು. ಬೆಳಕು ಹಬ್ಬಲು ಕಾಡ ಕತ್ತಲೆಯ ಆಳಕ್ಕೆ
ಪ್ರಾಣಿಗಳು ಹಕ್ಕಿಗಳು
ಧಾವಿಸಲು ತೊಡಗಿದವು--ಚೀರುತ್ತ ಕೂಗುತ್ತ.
ಕಾಡ ಆಚೀಚೆ ಕೃಷ್ಣ-ಅರ್ಜುನ ನಿಂತು
ಪ್ರಾಣಿಗಳು ತಪ್ಪಿಸಲು ಹವಣುವುದ ಕಂಡೊಡನೆ
ಬೆನ್ನಟ್ಟಿ ಹಿಡಿಯುವರು, ಮರಳಿ ಉರಿಗೆಸೆಯುವರು.
ಕೊಳ ಹಳ್ಳ ನೀರೊರತೆ ಇತ್ಯಾದಿ ಜಲತಾಣ
ಕುತ ಕುತ ಕುದಿದು ತೇಲಿದವು
ಆಮೆ ನೀರೊಳ್ಳೆ ಮೀನು ಮೊಸಳೆಗಳು.
ಪ್ರತಿ ಜೀವ ಈಗ ಉರಿಯುವ ದೊಂದಿ.
ಸುಟ್ಟ ರೆಕ್ಕೆ ಕಿತ್ತ ಕಣ್ಣು ತುಂಡಾದ ಬಾಲ ತಲೆಗಳ
ವಿಧ ಬಗೆಯ ಪಕ್ಷಿ ಪ್ರಾಣಿ
ಪ್ರಾಣ ಸಂಕಟದಲ್ಲಿ ಮೇಲಕ್ಕೆ ಚಿಮ್ಮಿದರೆ
ಪಾರ್ಥ ಬಾಣಗಳಿಂದ ಎರಡಾಗಿ ತುಂಡರಿಸಿ
ಗಹ ಗಹ ನಕ್ಕು ಮತ್ತೆ ಆಹುತಿ ಕೊಡುವ.

ದೇವತೆಗಳು ಇಂದ್ರನಿಗೆ ಮೊರೆಯಿಟ್ಟರು.

ಆತ ನಿರಂತರ ಮಳೆ ಬೀಳಿಸಿದ
ಖಾಂಡವದ ಕಾಡನ್ನು, ಜೀವಗಳನ್ನು
ಉಳಿಸಿಯೇ ತೀರುವೆನೆಂದು.
ಆವಿಯಾಯಿತು
ನೆಲಕ್ಕೆ ಬೀಳುವ ಮೊದಲೇ.

ಇಂದ್ರ ಮಳೆಧಾರೆ ಹೆಚ್ಚಿಸಿದ.

ಹೀಗೆ ಸುರಿದರೆ ಪ್ರಳಯ
ಈತ, ಈ ಪುರವೈರಿ,
ಹೊಸನಗರ ಕಟ್ಟುವುದಕ್ಕೆ ಎಂದು ಸಹ ಬಿಡ ಎಂದು
ಕಾಡಿನ ಮೇಲೆ ಬಾಣಗಳ ಮಾಡು ನಿರ್ಮಿಸಿ ಪಾರ್ಥ
ಮಳೆಯ ಹನಿ ಚಿತೆ ಮೇಲೆ
ಬೀಳದ ರೀತಿ ತಡೆ ತಂದ. ಪರಿಣಾಮವಾಗಿ
ಕಾಡು ಬೆಂಕಿಗೆ ಸುಟ್ಟು
ಹೊಸ ಜನದ ಹೊಸ ಊರು ಕಟ್ಟಿ ಮುಗಿವುದು ಎಂದು
ಕೃಷ್ಣ ಯುಧಿಷ್ಠಿರ ಪಾರ್ಥ ಮೊದಲಾದ ನಾಗರಿಕ
ಜನಕ್ಕೀಗ ಅನ್ನಿಸಿತು.

ನಾಡು ಕಟ್ಟುವುದಕ್ಕೆ ಇದ್ದ ಅಡಚಣೆ ಅಷ್ಟು
ಬೇಗ ಪ್ರಾಣಿಗಳಿಂದ ಹಿಂಗುವಂತಿರಲಿಲ್ಲ.
ರೆಕ್ಕೆಗಳಿಂದ ಕೊಕ್ಕುಗಳಿಂದ ಕೈಯಿಂದ ಪಂಜಗಳಿಂದ
ಮುಗಿಸಿಯೇ ತೀರುವೆವೆಂದು
ಮೋಡಗಳಂತೆ ಆವರಿಸಿ ಹಾರಿ ಬಂದವು ಗರುಡ
ಮೊದಲಾದ ಹಕ್ಕಿಗಳು;
ಪಾತಾಳ ಏರಿ ಬಂದವು ಹಾವು, ಬಾಯಲ್ಲಿ ವಿಷ ಸುರಿಸಿ.

ಒಬ್ಬ ಯಃಕಶ್ಚಿತ್ ಮನುಷ್ಯ ತಾವು ವಾಸಿಸುವ ನಗರಕ್ಕೆ ಸರಿಸಮವಾದ
ನಗರ ಒಂದನ್ನು ಇಳೆ ಮೇಲೆ ಕಟ್ಟ ಹೊರಟದ್ದು ಕಂಡು
ಕೃಷ್ಣನಂಥಾ ದೇವರೂ ಅವನ ಜೊತೆಗೇ ಸೇರಿದ್ದಕ್ಕೆ ರೇಗಿ
ಯಕ್ಷ ರಾಕ್ಷಸ ಗಂಧರ್ವ ದೇವ ಕಿನ್ನರರು
ಒಟ್ಟಿಗೇ ಎರಗಿ ಬಂದರು--ಬಂಡೆಗಳ ಮಳೆಗರೆದು
ಇಂದ್ರ ಮತ್ತಷ್ಟು ಮಳೆ ಹೊಯ್ದು.
ಪಾರ್ಥ ಜಗ್ಗುವಂತಿರಲಿಲ್ಲ.
                                ಕೊನೆಯಲ್ಲಿ
ಈ ಮಗ ಏನಾದರೂ ಮಾಡಿಕೊಂಡು ಹಾಳಾಗಲಿ,
ನಗರ ಕಟ್ಟಿದ ಮೇಲೆ ಸೇಡು ತೀರಿಸೋಣ; ಅದಕ್ಕಿಂತ ಮೊದಲು
ಇದೊಂದು ನೋಡೋಣ, ಕೊನೆ ಬಾರಿ, ಎಂದು
ದೊಡ್ಡದೊಂದು ಪರ್ವತವನ್ನು
ಖಾಂಡವದ ಕಡೆ ಎಸೆದು ಆ ಇಂದ್ರ, ಪಾರ್ಥನ ಅಪ್ಪ,
ಮುಖ ತಿರುಗಿಸಿ ಹೊರಟು ಹೋದ.
ಅವನೊಡನೆ ಇತರರೂ ಹಿಂದಿರುಗಿದರು.

ತನ್ನೆಡೆಗೆ ಬರುತ್ತಿದ್ದ ಪರ್ವತವನ್ನು ಪಾರ್ಥ
ಛಿದ್ರಿಸಿದ ತುಂಡು ತುಂಡಾಗಿ. ಖಾಂಡವದ ಮೇಲೆ ಬಿದ್ದವು
ಆ ತುಂಡು ತುಂಡುಗಳು. ಇನ್ನಷ್ಟು
ಪ್ರಾಣಿ ಸತ್ತವು; ಗಿಡ ಮರ ಉರುಳಿದವು;
ಸಮತಟ್ಟು ಬಂದವು
ತೆವರು ತಗ್ಗುಗಳು.

ದೇವರೇ ಕೈ ಬಿಟ್ಟು ಹಿಂದಿರುಗಿ ಹೋಗಿರುವಾಗ
ಜೀವ ಉಳಿಯುವ ಆಸೆ ಯಾರಿಗೂ ಇರಲಿಲ್ಲ.
ಸಿಂಹ ಘರ್ಜಿಸಿ ಆನೆ ಘೀಳಿಟ್ಟು ನರಿ ತೋಳ ಊಳಿಟ್ಟು
ಹಕ್ಕಿಗಳು ಕಿರುಚಿ ಹುಳಗಳು ಚಿರುಟಿ
ಬೆಂಕಿ ಹಬ್ಬುತ್ತಿತ್ತು--ಅಗಲಕ್ಕೆ ಉದ್ದಕ್ಕೆ.

ತಪ್ಪಿಸಿಕೊಂಡು ಹೋದ ತಕ್ಷಕ ಎಂಬ ಹಾವೊಂದು ಬಿಟ್ಟು
ಉಳಿದ ಪ್ರತಿಯೊಂದು ಕಬಳಿಸಿ ಅಗ್ನಿ
ಸುಟ್ಟ ಮರ ಹೆಣಗಳ ರಾಶಿ ಬೆಂದ ಇಳೆ
ಕೊಟ್ಟು ವಿರಮಿಸಿತು. ಈಗ ಪಾರ್ಥ
ಮಳೆ ಕೆಳಗೆ ಇಳಿಯದ ಹಾಗೆ ತಡೆದಿದ್ದ ತಡೆ ತೆಗೆದ.
ಬೂದಿ ಇದ್ದಿಲ ರಾಶಿ ಮರಗಳ ತುಂಡು ರೆಕ್ಕೆಗಳು ಅಸ್ಥಿಗಳು
ತೊಳೆದು ಹೋದವು. ಹಳ್ಳ ಕೊಳ್ಳಗಳು
ಮರಳಿ ತುಂಬಿದವು. ಆ ಮೇಲೆ

ರಸ್ತೆ ಮನೆ ಶಾಲೆ ಕೋಟೆಗಳ ಕಾಲುವೆಯ ಕಂದಕವ
ಬುರುಜುಗಳ ದ್ವಾರಗಳ ಕಛೇರಿಗಳ ಲಾಯಗಳ
ಕಟ್ಟಿದರು. ಅಲ್ಲಿ ವಾಸಿಸಲು
ಕವಿಗಳು ನರ್ತಕರು ವರ್ತಕರು ಪಂಡಿತರು
ಬಂದು ನೆಲೆಸಿದರು. ಉದ್ಯಾನವನಕ್ಕೆ
ಮಾವು ನೇರಿಲೆ ಕದಂಬ ಮಲ್ಲಿಗೆ ಮೊದಲಾದ ಫಲ ಪುಷ್ಪ
ನವಿಲು ಗಿಳಿ ಶಾರ್ಙಕವೇ ಮೊದಲಾದ ಹಕ್ಕಿಗಳು
ಬಂದು ಸೇರಿದವು; ಹುಲಿ ಸಿಂಹ ಚಿರತೆ ಚಿಂಪಾಂಜಿ ನರಿ ಮುಸುವ
ಏಡಿಗಳು ಹಾವುಗಳು ಮೀನುಗಳು ಉಡ ಕೋತಿ
ಮೃಗಶಾಲೆಯಲ್ಲಿ; ಆನೆಗಳು ಮಾವುತನ ಕುದುರೆಗಳು ರಾವುತನ
ಅಂಕುಶಕ್ಕೊಳಪಟ್ಟು; ಕಾಡಿನ ಪ್ರಾಣಿ
ಹೀಗೆ, ನಾಡ ಸರಹದ್ದಲ್ಲಿ
ಬಂದು ಉಳಿದವು ಈಗ.

ನಾಡು ಈ ರೀತಿ ಬೆಳೆದ ಮೇಲೊಂದು ಹುಣ್ಣಿಮೆ ರಾತ್ರಿ
ಯುಧಿಷ್ಠಿರನೇ ಮೊದಲಾದ ಪಾಂಡವರು ಕೃಷ್ಣನೊಡಗೂಡಿ
ನೆಟ್ಟು ಬೆಳೆಸಿದ ಕಾಡಿನ ನಡುವೆ ಕಟ್ಟಿ ನಿರ್ಮಿಸಿದ ಹೊಳೆ ದಂಡೆ
ಮೇಲೆ ಸೇರಿತು ಗೋಷ್ಠಿ.
ಮದಿರೆ ಸಂಗೀತ ಸಖೀಜನ ಸೇರಿ
ದ್ರೌಪದಿ ಸುಭದ್ರೆಯರು ನರ್ತಿಸಲು ತೊಡಗಿದರು.
ಕೆಲವರು ಈಜಿ ಕೆಲವರು ಹಾಡಿ ಸಂಕಥಿಸಿ ಕೆಲರು
ಅತ್ತು ಕಣ್ಣೊರೆಸಿದರು, ನಕ್ಕು ಮಾತಾಡಿದರು ವಿನೋದಕ್ಕೆ ತೊಡಗಿದರು.
ಕೆಲರು ಸುಖದೊಂದು ಮಾತನ್ನು ಅಪರಿಚಿತ ಕಿವಿಯಲ್ಲಿ ಉಸುರಿದರು.
ಬೆಳೆಸಿದ್ದ ಕಾಡಿನ ಹೂವು ಗಿಡ ಎಲೆ ತಳಿರು ಕೊಳ ನೀರು
ಚಂದ್ರನ ಬೆಳಕಿಂದ, ನಕ್ಷತ್ರಗಳ ಪ್ರತಿಬಿಂಬದಿಂದ
ಗುಟ್ಟುಗಳಿಂದ ನುಡಿಸುಯ್ಲಿನಿಂದ ಕಿಲಕಿಲದ ನಗುವಿಂದ
ಉಲ್ಲಾಸದಿಂದ ಆಯಾಸದಿಂದ ಮೈಮುರಿತದಿಂದ ಎದೆ ಬಡಿತದಿಂದ
ಕೊಳಲಿಂದ ವೀಣೆಗಳಿಂದ ಗೆಜ್ಜೆ ಕಿಲಕಿಲದಿಂದ ಮೃದಂಗಗಳಿಂದ
ಪ್ರತಿಧ್ವನಿಸತೊಡಗಿತ್ತು--ಆಕಾಶದಲ್ಲಿರುವ

ಇಂದ್ರನೇ ಮೊದಲಾದ
ದೇವರಿಗೆ ಕೇಳುವ ಹಾಗೆ.

*****


ಟಿಪ್ಪಣಿ: 1. ಮಹಾಭಾರತದಲ್ಲಿ ಪಾಂಡವರು ಇಂದ್ರಪ್ರಸ್ಥ ನಗರ ಕಟ್ಟಿ ವಾಸಿಸಲು ಸುರು ಮಾಡಿದ ಮೇಲೆ ಅಗ್ನಿಯ ಹಸಿವು ತಣಿಸಲು ಖಾಂಡವವನ ಸುಟ್ಟರು ಎಂಬ ಕತೆ ಬರುತ್ತದೆ. ನನಗೆ ಬೇಕಾದ್ದನ್ನು ಹೇಳುವುದಕ್ಕಾಗಿ ಕಾಡು ಸುಟ್ಟ ಮೇಲೆ ನಗರ ಕಟ್ಟಿದರು ಎಂದು ಈ ಕತೆಯನ್ನು ಇಲ್ಲಿ ಬದಲಾಯಿಸಿಕೊಂಡಿದ್ದೇನೆ. ಈ ಪದ್ಯ ಮೊದಲು ಮಾತಾಡುವ ಮರದಲ್ಲಿ ಪ್ರಕಟವಾಗಿದೆ.
2.  ಬೋಧಿ ಟ್ರಸ್ಟ್ KAVYODYOGA ಎಂಬ ಹೊಸ ಬ್ಲಾಗ್ ಸುರು ಮಾಡಿದೆ. ಇದು ಭಾರತೀಯ ಕಾವ್ಯ ಖಜಾನೆ. ಈ ನಾಡಿನ ಯಾವುದೇ ಭಾಷೆಯ ಕಾವ್ಯದ ಇಂಗ್ಲಿಷ್ ಅನುವಾದಗಳನ್ನು ಈ ಸೈಟಿನಲ್ಲಿ ಪ್ರಕಟಣೆಗಾಗಿ ಕಳಿಸಬಹುದು. ವಿಳಾಸ: bodhitrustk@gmail.com    KAVYODYOGAದ ವಿಳಾಸ: http://kavyodyoga.blogspot.com
3. Bodhi Trust accepts donations. Please send cheques and DDs to Bodhi Trust, Kalmadka 574212, Bellare, Karnataka. For details, please write to bodhitrustk@gmail.com
4. Bodhi Trust books in Kannada are available for sale.For details, please contact the above email address.ಶಾಂತಿನಾಥ ದೇಸಾಯಿ ವಾಚಿಕೆ ನನ್ನ ಇತ್ತೀಚಿನ ಪುಸ್ತಕ. ಇದಕ್ಕೆ ನಾನು ಬರೆದ ದೀರ್ಘ ಪ್ರಸ್ತಾವನೆಯಿದೆ. ಅದರಲ್ಲಿ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನನಗೆ ಮತ್ತು ದೇಸಾಯಿಯವರಿಗೆ ಆದ ಅನುಭವಗಳ ವಿವರವೂ ಇದೆ.

Sunday, December 19, 2010

ಹಾಡು

ಹೀಗೇ ತೆವಳುತ್ತ ಇರುವಾಗ ಪ್ರಭುವೇ
ಬಂದು ಕಾಡು ನನ್ನ
ಮುಟ್ಟಿ ನೋಡು.

ಮರಳುಗಾಡೇ ಅಲ್ಲ ಹುಗಿವ ಹುದುಲೇ ಅಲ್ಲ
ಫಲವತ್ತು ನೆಲವೇ
ಹೂಡಿ ನೋಡು.

ಬೆರೆ ಬೆರೆ ಶಬ್ದವ ಕವಿತೆಯ ಮಾಡುವ
ಮಾತಿನ ಪ್ರಾಣವೆ
ಬಂದು ಆಡು.

ಒಳಗಿನ ಕತ್ತಲ ಫಕ್ಕನೆ  ಬೆಳಗುವ
ಬಾನಿನ ಬೆಳಕೇ
ಬಳಿ ಸಾರು.

ಎಂದೋ ಬರುವವ ಬಾರದೆ ಕೂತವ
ಎಲ್ಲಾದರು ತುಸು
ಚಹರೆ ತೋರು.


ದಾರಿಯ ಹುಡುಕುತ್ತ ತೆವಳುತ್ತ ಇರುವಾಗ
ಪ್ರಭುವೇ ಫಕ್ಕನೆ ಬಂದು ಕಾಡು ನನ್ನ
ಒಳ ಸೇರು.
(ಮಾತಾಡುವ ಮರ  ಸಂಗ್ರಹದಲ್ಲಿ ಮೊದಲು ಪ್ರಕಟವಾಗಿರುವ ಕವನ)

Saturday, December 18, 2010

KEEP QUIET, OR

Didn`t I tell you
not to drive away
the fly
from the dirt?
You didn`t listen.
It flew from the dirt
and is now sitting
on the puss
flowing from the wound.
Don`t drive it away
from there: it may
fly and sit
on the rice
you are to eat.

Or, if you can aim right
clap your hands once and kill it stright
sit back and relax.


(Translated from original Kannada by me. Kannada original is published in Mataduva mara, my collected poems.)

**********

Bodhi Trust has now started a new blog. It is an archive for Indian poetry in English translations. Visit:
http://kavyodyoga.blogspot.com

Tuesday, December 14, 2010

POETRY: THE VERY FOUNDATION OF CIVILIZATION

Let me write about the new blog Bodhi Trust has started recently. Its address is:

http://kavyodyoga.blogspot.com

This blog is an archive for  Indian poetry in English translations. Bodhi Trust wants to make it as comprehensive as possible by including as many good Indian poems in English translations as possible. We want to publish the poems already published in print-from, and the new ones. We also want to identify new good poems, have them translated into English, and publish them. For this, we need the help of our readers and fellow-poets.

These are the problems we face:

1. Getting copies of the poems already available in print-form is a difficult task. Many books are out of print; many are published by the small-publishers or authors themselves, and are not properly distributed. Readers can help us by emailing those poems to Bodhi Trust. We will also be grateful to writers if  they email  their poems to us.--both already published and the new ones.

2. If we have come across poems in printed versions, it is becoming difficult to obtain permission from the copyright holders. Quite often their addresses are not available, or, proverbially, Indian writers do not reply to the letters. We make every attempt to trace the copyright holders and get their permission.  If we fail in spite of our best efforts, we will act depending on the individual cases. For example, in spite of all the efforts, we have failed to locate the copyright holder of some of the English translations of Muktibodh`s poetry. Bodhi Trust sincerely feels it is better to publish Muktibodh`s poems in its blog and make them available to poetry-lovers rather than leave out his great poetry altogether.

3. Readers can respond to these poems by sending comments, critics and theoreticians by discussing individual poems and poetry in general.

4. Poetry is the subtlest use of language. And, Bodhi Trust believes that the very foundation of human civilization is language--not engines, not houses, not clothes, not aeroplanes, not money--but the language which preserves memory and passes it on to another person or another generation or another culture.Therefore, poetry is one of the very important things of a civilization. Any attempt to make this develop and flourish has the support of Bodhi Trust.

*********

Bodhi Trust accepts donations. Money can be remitted to Bodhi Trust, SB Account no.1600101008058, Canara Bank, Yenmur 574328, Dakshina Kannada District, Karnataka, IFSC CNRB0001600.

Bodhi Trust publications can be bought by remitting the price of the books directly to the above account and informing us of your address. Email address of Bodhi trust is: bodhitrustk@gmail.com


These are some of our publications:


1.Hamlet: Kannada translation of Shakespeare`s Hamlet. Rs50.00

2. Muccu mattu itara lekhnagalu. Essays on Mahabharata, clowns in Yakshagana, Shivarama Karanth`s novels, colonization etc.Rs60.00

3. Mataduva mara: collected poems, 1964-2003.Rs100.00

4. Samagra natakagalu vol.2. Rs60.00

5. Samagra natakagalu vol.3 Rs75.00

All these are by me--that is, Ramachandra Deva.

Saturday, December 11, 2010

POETRY ARCHIVE

Today Bodhi Trust, an organization which runs on no-loss, no-profit basis, and of which I am the Chairman, has started a new blog. The major aim of this blog is to create an archive for poetry and other serious, lively writings in English translations from Indian languages. As an inaugural publication, Bodhi Trust today has published "Song of the Earth", English translation of Gopalakrishna Adiga's Kannada poem "Bhumigita"  in its blog. Please visit: http://kavyodyoga.blogspot.com

We invite good English translations of good writings from Indian languages to be published in this blog. Please contact: bodhitrustk@gmail.com

Friday, December 10, 2010

ಉಪನಿಷತ್ತು ಕುರಿತು--3

ಯಜ್ಞವನ್ನು ಪ್ರತಿಮೆಯಾಗಿ ಬಳಸುವ ಒಂದು ಶ್ಲೋಕ ಬೃಹದಾರಣ್ಯಕದಲ್ಲಿದೆ. ಈ ಮೊದಲು ಎಂ. ಜಿ. ಕೃಷ್ಣಮೂರ್ತಿ ಈ ಶ್ಲೋಕ ವಿಶ್ಲೇಷಿಸಿದ್ದಾರೆ. ಇದು ಎಂಜಿಕೆಯವರ ಇಂಗ್ಲಿಷ್ ಲೇಖನ ಅನುವಾದಿಸಿದ ಶ್ರೀನಿವಾಸ ರಾವ್  ತಯಾರಿಸಿದ ಅನುವಾದ:

ಓ ಗೌತಮ, ಈ ಲೋಕವೇ ಒಂದು ಹೋಮಾಗ್ನಿ.  ಈ ಪೃಥ್ವಿಯೇ ಆ ಅಗ್ನಿಗೆ ಸಮಿತ್ತು; ಅಗ್ನಿ ಹೊಗೆ, ರಾತ್ರಿಯೇ ಜ್ವಾಲೆ; ಚಂದ್ರನೇ ಕೆಂಡ; ನಕ್ಷತ್ರಗಳು ಕಿಡಿಗಳು. ಈ ಅಗ್ನಿಯಲ್ಲಿ ದೇವತೆಗಳು ಮಳೆಯನ್ನು ಹೋಮ ಮಾಡುತ್ತಾರೆ. ಈ ಆಹುತಿಯಿಂದ ಅನ್ನ ಹುಟ್ಟುತ್ತದೆ.

ಓ ಗೌತಮ, ಪುರುಷನೇ ಒಂದು ಹೋಮಾಗ್ನಿ. ಅವನ ತೆರೆದ ಬಾಯಿಯೇ ಸಮಿತ್ತು; ಪ್ರಾಣವೇ ಹೊಗೆ; ಮಾತೇ ಜ್ವಾಲೆ; ಕಣ್ಣೇ ಕೆಂಡ; ಕಿವಿಗಳೇ ಕಿಡಿಗಳು. ಈ ಅಗ್ನಿಯಲ್ಲಿ ದೇವತೆಗಳು ಅನ್ನವನ್ನು ಹೋಮ ಮಾಡುತ್ತಾರೆ. ಈ ಆಹುತಿಯಿಂದ ವೀರ್ಯ ಹುಟ್ಟುತ್ತದೆ.

ಓ ಗೌತಮ, ಸ್ತ್ರೀಯೇ  ಒಂದು ಹೋಮಾಗ್ನಿ. ಭಗವೇ ಸಮಿತ್ತು; ಕೇಶಗಳೇ ಹೊಗೆ; ಯೋನಿಮುಖವೇ ಜ್ವಾಲೆ; ಪುರುಷೇಂದ್ರಿಯ ಪ್ರವೇಶವೇ ಕೆಂಡ; ಆನಂದಾನುಭವವೇ ಕಿಡಿಗಳು. ಈ ಅಗ್ನಿಯಲ್ಲಿ  ದೇವತೆಗಳು  ರೇತಸ್ಸನ್ನು ಹೋಮ ಮಾಡುತ್ತಾರೆ. ಈ ಆಹುತಿಯಿಂದ ಪುರುಷನು ಜನಿಸುತ್ತಾನೆ. ಅವನು ಬದುಕಿರುವಷ್ಟು ಕಾಲ ಬದುಕಿದ್ದು ಸಾಯುತ್ತಾನೆ. ಸತ್ತ ಮೇಲೆ ಅವನನ್ನು ಅಗ್ನಿಗರ್ಪಿಸುತ್ತಾರೆ. ಅವನ ಅಗ್ನಿ ಅಗ್ನಿಯಾಗುತ್ತದೆ; ಸಮಿತ್ತು ಸಮಿತ್ತಾಗುತ್ತದೆ; ಹೊಗೆ ಹೊಗೆಯಾಗುತ್ತದೆ; ಜ್ವಾಲೆ ಜ್ವಾಲೆಯಾಗುತ್ತದೆ; ಕೆಂಡ ಕೆಂಡವಾಗುತ್ತದೆ; ಕಿಡಿಗಳು ಕಿಡಿಗಳಾಗುತ್ತವೆ. ಈ ಅಗ್ನಿಯಲ್ಲಿ ದೇವತೆಗಳು ಪುರುಷನನ್ನು ಹೋಮ ಮಾಡುತ್ತಾರೆ. ಈ ಆಹುತಿಯಿಂದ ದೀಪ್ತಿವಂತ ಮನುಷ್ಯನು ಜನಿಸುತ್ತಾನೆ.

ಎಂ. ಜಿ. ಕೃಷ್ಣಮೂರ್ತಿ ಇದನ್ನು  ಲೈಂಗಿಕ ಕ್ರಿಯೆಯನ್ನು ನಿಸ್ಸಂಕೋಚವಾಗಿ ವಿವರಿಸುವ ಬರೆವಣಿಗೆ ಎಂದು ಉದಾಹರಿಸುತ್ತಾರೆ. ಅದು ನಿಜ. ಎಷ್ಟು ನಿಸ್ಸಂಕೋಚವಾಗಿ ಎಂದರೆ, ಸ್ವಾಮೀ ಆದಿದೇವಾನಂದರು ಮೂಲದ "ತಸ್ಯಾ ಉಪಸ್ಥ ಏವ ಸಮಿತ್"  ಎಂಬಲ್ಲಿಂದ "ದೇವಾ ರೇತೋಜುಹ್ವತಿ" ಎಂಬಲ್ಲಿ ವರೆಗಿನ ಮಾತುಗಳನ್ನು ಅನುವಾದಿಸದೆ ಚುಕ್ಕಿ ಹಾಕಿ ಬಿಟ್ಟುಬಿಡುತ್ತಾರೆ. ಸುಮಾರು 2800 ವರ್ಷಗಳ ಹಿಂದೆ ಬೃಹದಾರಣ್ಯಕ  ರಚನೆಯಾದಾಗ ಇಲ್ಲದೆ ಇದ್ದ ಸಂಕೋಚ ಆಧುನಿಕರಾದ ನಮಗೆ ಬಂದುಬಿಟ್ಟಿದೆ!

ಲೈಂಗಿಕ ಕ್ರಿಯೆಯನ್ನು ನಿಸ್ಸಂಕೋಚವಾಗಿ ವಿವರಿಸುವ ಬರೆವಣಿಗೆ ಎನ್ನುವುದರ ಜೊತೆಗೆ ಈ ಶ್ಲೋಕ ಭಾಷೆಯಲ್ಲಿ ಮಾಡಿದ ಅಪರೂಪದ ಪ್ರಯೋಗ ಎಂದೂ ಅನ್ನಿಸುತ್ತದೆ. ಯಜ್ಞದ ವಿವರಗಳ ಮೂಲಕ  ಈ  ಉಪನಿಷತ್ಕಾರ ಇಡೀ ವಿಶ್ವದ ವ್ಯಾಪಾರ ಚಿತ್ರಿಸುತ್ತಾನೆ. ಯಜ್ಞದ ವಿವರಗಳ ಮೇಲೆ ಎಷ್ಟು ಬೌದ್ಧಿಕ ಭಾರ ಹೇರಬಹುದೋ ಅಷ್ಟನ್ನೂ ಇಲ್ಲಿ ಹೇರಲಾಗಿದೆ. ಎಷ್ಟು ಎಳೆಯಬಹುದೋ ಅಷ್ಟೂ ಎಳೆಯಲಾಗಿದೆ. ಇದು ಇಂಗ್ಲಿಷ್ ಮೆಟಫಿಸಿಕಲ್ ಕವಿಗಳಲ್ಲಿ ಕಾಣುತ್ತದೆ ಎನ್ನುವ ವಿಟ್ ರೀತಿಯದ್ದು. ಆದರೆ ಮೆಟಫಿಸಿಕಲ್ ಕವಿಗಳ ವಿಟ್ಟಿಗಿಂತ ಎಷ್ಟೋ ಮೇಲುಮಟ್ಟದಲ್ಲಿ ಈ ರಚನೆ ಕೆಲಸ ಮಾಡುತ್ತದೆ. ಯಾಕೆಂದರೆ ಜಗತ್ತಿನ ಒಟ್ಟು ವ್ಯಾಪಾರವೇ ಇಲ್ಲಿನ ವಸ್ತು. ವಿವರಗಳು ಹೊಳೆಸುವಷ್ಟನ್ನು ಮಾತ್ರ ಸೂಚಿಸುತ್ತೇನೆ ಎಂಬ ಮಾತು ಇಲ್ಲಿ ಅಪ್ರಸ್ತುತ. ಭಾಷೆ ಮತ್ತು ವಿವರಗಳು ಇಲ್ಲಿ ಅಮೂರ್ತ ಬೌದ್ಧಿಕತೆಯ ವಾಹಕವಾಗುತ್ತವೆ. ಲೇಖಕನಿಗೆ ದಿನನಿತ್ಯದ ವಿವರಗಳು ಬರೆಹಗಾರನ ಅಮೂರ್ತ ಕಲ್ಪನೆಗಳನ್ನು/ವಿಚಾರಗಳನ್ನು ಅಭವ್ಯಕ್ತಿಸಲು ಅಸಮರ್ಥ ಅನ್ನಿಸಿದಾಗ ಆ ವಿವರಗಳನ್ನು ಹೀಗೆ ಎಷ್ಟು ಸಾಧ್ಯವೋ ಅಷ್ಟು ಎಳೆದು ಬಳಸುವುದು ಅನಿವಾರ್ಯ.

ಇದು ಯಜ್ಞದ ಮೇಲಿನ ಟೀಕೆ ಕೂಡಾ ಆಗಿದೆ. ವೈದಿಕ ಯಜ್ಞವನ್ನು ಬ್ರಹ್ಮಚರ್ಯದಲ್ಲಿರುವ ಪತಿ ಪತ್ನಿಯರು ನಡೆಸುತ್ತಾರೆ. ಇಲ್ಲಿ ಅವರ ಕೂಡುವಿಕೆಯನ್ನೇ ಉಪನಿಷತ್ಕಾರ ಯಜ್ಞ ಅನ್ನುತ್ತಿದ್ದಾನೆ. ಯಜ್ಞದಲ್ಲಿ ದೇವತೆಗಳ ಪ್ರೀತ್ಯರ್ಥವಾಗಿ ಆಹುತಿ ಕೊಡುವುದಾದರೆ ಇಲ್ಲಿ ಪರಸ್ಪರರ ಪ್ರೀತ್ಯರ್ಥವಾಗಿ ದೇಹದಿಂದ ಹುಟ್ಟಿದ ವೀರ್ಯವನ್ನು ಹೋಮ ಮಾಡಲಾಗುತ್ತದೆ. ಇಡೀ ಜೀವನವೇ ಒಂದು ಹೋಮ. ಅದರಲ್ಲಿ ಪಾರಭೌತಿಕವಾದದ್ದು ಏನೂ ಇಲ್ಲ. ಬದುಕಲ್ಲಿ ತೊಡಗುವುದು ಮತ್ತು ಸಮಯ ಬಂದಾಗ ಸಾಯುವುದು--ಇದೇ ಯಜ್ಞ. ವೈದಿಕ ಯಜ್ಞವನ್ನು ಅವರದ್ದೇ ಪಾರಿಭಾಷಿಕ ಪದಗಳನ್ನು ಬಳಸಿ ಉಪನಿಷತ್ಕಾರ ಟೀಕಿಸುತ್ತಿದ್ದಾನೆ; ಪರ್ಯಾಯವಾದ ಒಂದು ಯಜ್ಞವಿಧಾನವನ್ನು ಸೂಚಿಸುತ್ತಿದ್ದಾನೆ.

ಅಡಿಗರ ಕವನ "ಶಾಂತವೇರಿಯ ಅಶಾಂತ ಸಂತ"ದಲ್ಲಿ ಯಜ್ಞದ ಬಳಕೆಗೂ ಈ ಬರೆಹದಲ್ಲಿ ಯಜ್ಞದ ಬಳಕೆಗೂ ಇರುವ ವ್ಯತ್ಯಾಸ ಕುತೂಹಲಕಾರಿಯಾಗಿದೆ. ಇಲ್ಲಿ ವಸ್ತು ಹೆಚ್ಚು ವಿಸ್ತಾರವಾದದ್ದು. ಉಪನಿಷತ್ತಿನ ಈ ಬರೆವಣಿಗೆ, "ಶಾಂತವೇರಿಯ ಅಶಾಂತ ಸಂತ", ಬೇಂದ್ರೆಯವರ "ನೃತ್ಯಯಜ್ಞ", ಹಾಗೂ ಗಿರೀಶ ಕಾರ್ನಾಡರ ಅಗ್ನಿ ಮತ್ತು ಮಳೆಗಳ ತೌಲನಿಕ ಅಧ್ಯಯನ ಯಜ್ಞ ಮತ್ತು ನೃತ್ಯ/ನಾಟಕಗಳ ಬಗ್ಗೆ ನಮ್ಮ ಕೆಲವು ಲೇಖಕರು ಏನು ಯೋಚಿಸುತ್ತಾರೆಂದು ತಿಳಿಯಲು ನೆರವಾಗಬಲ್ಲುದು. ಉಪನಿಷತ್ಕಾರ ಯಜ್ಞದ ವಿವರಗಳಲ್ಲಿ ವಿಶ್ವದ ವ್ಯಾಪಾರ ನಿರೂಪಿಸಿದರೆ ಬೇಂದ್ರೆ ನೃತ್ಯದ ವಿವರಗಳಲ್ಲಿ ವಿಶ್ವದ ವ್ಯಾಪಾರ ಚಿತ್ರಿಸುತ್ತಾರೆ. ಅಗ್ನಿ ಮತ್ತು ಮಳೆ  ಯಜ್ಞ ಜೀವವಿರೋಧಿ, ನೃತ್ಯ/ನಾಟಕ ಜೀವಪರ ಎಂಬ ಸರಳ ಸಿದ್ಧಾಂತ ನಿರೂಪಿಸುತ್ತದೆ. ಅದರ ಬರೆವಣಿಗೆಯೂ ಯಾಂತ್ರಿಕವಾಗಿದೆ. ಏನಿದ್ದರೂ, ನಮ್ಮ ಸಂಸ್ಕೃತಿಯಲ್ಲಿ ನೃತ್ಯ/ನಾಟಕಗಳ ಸಾದೃಶ್ಯ-ವೈದೃಶ್ಯ ಸಂಬಂಧ ಪುರಾತನವಾದದ್ದು ಎಂಬುದು ನಿಜ.

ನಿರ್ಭೀತ ಲೈಂಗಿಕ ವಿವರಗಳುಳ್ಳ ಇನ್ನೊಂದು ಶ್ಲೋಕದಲ್ಲಿ "ಅವನು" (ಅಥವಾ "ಪುರುಷ")  ಒಂಟಿಯಾಗಿದ್ದರಿಂದ ಭಯಪಡುತ್ತಾನೆ. ಯಾಕೆಂದರೆ ಏಕಾಕಿತನದಿಂದ ಭಯವುಂಟಾಗುತ್ತದೆ. ಆ ಮೇಲೆ ಅವನು ಇಲ್ಲಿ ಬೇರೆ ಯಾರೂ ಇಲ್ಲದಿರುವಾಗ ನಾನು ಹೆದರುವುದಾದರೂ ಯಾರಿಗೆ ಎಂದು ಯೋಚಿಸಿದನು. ಈ ಯೋಚನೆಯಿಂದ ಭಯ ಹೊರಟುಹೋಯಿತು. ಹೀಗಾಗಿ ಭಯ ಹುಟ್ಟುವುದು ಇನ್ನೊಬ್ಬರಿಂದ. ಆದರೆ ಅವನಿಗೆ ರಮಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವನು ಏಕಾಕಿ. ಹೀಗಾಗಿ ತನ್ನ ಶರೀರವನ್ನೇ ಎರಡಾಗಿ ಮಾಡಿ, ಸ್ತ್ರೀಯನ್ನು ಸೃಷ್ಟಿಸಿ ಅವಳನ್ನು ಕೂಡುತ್ತಾನೆ. ಅದರಿಂದ ಮನುಷ್ಯರು ಹುಟ್ಟಿದರು. ಆದರೆ ಆ ಸ್ತ್ರೀ ನಡೆದದ್ದರ ಬಗ್ಗೆ ಯೋಚಿಸಿ ತಾನೇ ಸೃಷ್ಟಿಸಿದ ನನ್ನನ್ನು ಹೇಗೆ ಕೂಡುತ್ತಾನೆಂದು  ಹಸುವಾದಳು. ಅವನು ಹೋರಿಯಾಗಿ ಅವಳನ್ನು ಕೂಡಿದ. ಆ ಶತರೂಪೆ ಕುದುರೆಯಾದಳು. ಇವನು ಕುದುರೆಯಾಗಿ ಅವಳನ್ನು ಕೂಡಿದ.  ಅವಳು ಕತ್ತೆಯಾದಾಗ ಇವನು ಕತ್ತೆಯಾಗಿ ಕೂಡಿ, ಆಡಾದಾಗ ಆಡಾಗಿ ಕೂಡಿ, ಆನೆಯಾದಾಗ ಆನೆಯಾಗಿ ಕೂಡಿ, ಇರುವೆಯಾದಾಗ ಇರುವೆಯಾಗಿ ಕೂಡಿ.....ಅವಳು ಸೃಷ್ಟಿಯ ಏನೆಲ್ಲವೂ ಆದಳೋ ಅವನು ಅದೆಲ್ಲವೂ ಆಗಿ ಕೂಡಿದ. ಹೀಗೆ ಮನುಷ್ಯರಿಂದ ತೊಡಗಿ ಇರುವೆ ಕ್ರಿಮಿ ಕೀಟಗಳ ತನಕ ಮೈಥುನದಿಂದ ಏನೇನು ಹುಟ್ಟುತ್ತದೆಯೋ ಅದೆಲ್ಲವನ್ನೂ ಅವರು ಸೃಷ್ಟಿಸಿದರು.

ಇದು ಆನಂದದ ಪರಾಕಾಷ್ಠೆ ಸೂಚಿಸುವ ಶ್ಲೋಕ ಎಂದು ಒಮ್ಮ ಅನ್ನಿಸಿತ್ತು. ಇದು ಏಕಾಕಿತನ  ಮತ್ತು ಅದನ್ನು ಮೀರುವ ಪ್ರಯತ್ನ ಕುರಿತ ಶ್ಲೋಕವೂ ಹೌದು ಎಂದು ಈಗ ಅನ್ನಿಸುತ್ತದೆ. ಉಪನಿಷತ್ಕಾರ ಭಯ ಒಂಟಿಯಾಗಿರುವುದರಿಂದಲೂ ಹುಟ್ಟುತ್ತದೆ, ಜೊತೆಯಲ್ಲಿ ಇನ್ನೊಬ್ಬರಿರುವುದರಿಂದಲೂ ಹುಟ್ಟುತ್ತದೆ ಎನ್ನುತ್ತಾನೆ. ಆದರೆ ಅವನು ರಮಿಸುವ ಯೋಚನೆಯಿಂದಲೇ ಇನ್ನೊಬ್ಬರನ್ನು ಸೃಷ್ಟಿಸುತ್ತಾನೆ. ಆಕೆ ತಾನು ಸೃಷ್ಟಿಸಿದವಳನ್ನು ತಾನೇ ಕೂಡಬಾರದೆಂಬ ಕೌಟುಂಬಿಕ ನಿಯಮದ ಆಚರಣೆಗೆ ಪ್ರಯತ್ನಿಸುವುದರಿಂದ ಸಮಾಜ ನಿರ್ಮಾಣಕ್ಕೆ  ಅಸ್ತಿವಾರ ಹಾಕುವವಳು. ಅವನಿಂದ ತಪ್ಪಿಸಿಕೊಳ್ಳಲು ಅವಳು ಮಾಡುವ ಪ್ರಯತ್ನವೇ ಅವನನ್ನು ಪ್ರಚೋದಿಸುತ್ತದೆ ಎಂಬ ವಿವರದ ಹಿಂದೆ ಗಂಡು-ಹೆಣ್ಣು ಆಕರ್ಷಣೆ ಕುರಿತ ಒಳನೋಟ ಇದೆ. ಎಲ್ಲಾ ಜೀವಿಗಳು ಒಂದೇ ಜೀವಿಯ ವಿವಿಧ ರೂಪಗಳು ಎಂಬುದನ್ನೂ  ಶ್ಲೋಕ ಸೂಚಿಸುತ್ತದೆ. ದೇಹವು ಸ್ತ್ರೀಯಿಂದ ಪೂರ್ಣವಾಗುತ್ತದೆ ಎಂಬ ಮಾತು ಇದೇ ಶ್ಲೋಕದಲ್ಲಿ ಬರುತ್ತದೆ. ಹೀಗೆ ಪೂರ್ಣವಾಗುವ ತನಕ "ಈ ದೇಹವು ಅರ್ಧವಾಗಿರುವ ಬೀಜದಂತೆ ಅರ್ಧವಾಗಿದೆ". ಅಂದರೆ, ಒಂಟಿಯಾಗಿ ಭಯಪಡುತ್ತಿರುವುದೂ ಬೇಕಿಲ್ಲ; ಇನ್ನೊಬ್ಬರ ಬಗ್ಗೆ ಭಯ ಪಡುತ್ತಿರುವುದೂ ಬೇಕಿಲ್ಲ. ಮೂರನೆಯದೊಂದು ಸ್ಥಿತಿಯೆಂದರೆ ಇನ್ನೊಬ್ಬರ ಜೊತೆ ಸೇರಿ ತನ್ನ ಅಪೂರ್ಣತ್ವವನ್ನು ಕಳೆದುಕೊಳ್ಳುವುದು.

ನನಗೆ ಬೃಹದಾರಣ್ಯಕ ದಲ್ಲಿ  ಇಷ್ಟವಾದ ಇನ್ನೊಂದು ಶ್ಲೋಕ ಮರಣ, ಪಾಪ ಮತ್ತು ಉದ್ಗೀಥಗಳ ಸಂಬಂಧ ಹೇಳುತ್ತದೆ. ಇದೂ ಇಲ್ಲಿ ಮೊದಲು ಏನೂ ಇರಲಿಲ್ಲ ("ನೈವೇಹ ಕಿಂಚನಾಗ್ರ ಆಸೀತ್", I-II) ಎಂಬ ಮಾತಿನಿಂದಲೇ ಪ್ರಾರಂಭವಾಗುತ್ತದೆ. ಏನೂ ಇಲ್ಲದೇ ಇದ್ದಾಗ ಇದ್ದದ್ದು ಸದಾ ಹಸಿದುಕೊಂಡೇ ಇರುತ್ತಿದ್ದ, ಭೋಜನೇಚ್ಛೆಯೊಂದೇ ಇದ್ದ ಮೃತ್ಯು ಮಾತ್ರ. ಮೃತ್ಯು ತಿನ್ನಲೆಂದು ಬಾಯಿ ತೆರೆದಾಗ ಉಂಟಾದ ಭಾಣ್ ಶಬ್ದದಿಂದ ವಾಕ್ಕಾಯಿತು. ಹೀಗೆ ವಿನಾಶದ ಒಡಲಿನಿಂದಲೇ ವಿನಾಶ ಎದುರಿಸುವ ವಾಕ್ಕು ಹುಟ್ಟಿಕೊಂಡಿತು. ಆನಂತರ ಅಸುರರು ಮತ್ತು ದೇವತೆಗಳ ಮಧ್ಯೆ ಲೋಕದ ಅಧಿಪತ್ಯಕ್ಕಾಗಿ ಸ್ಪರ್ಧೆ ಹುಟ್ಟಿತು. ದೇವತೆಗಳು ಬಹುಸಂಖ್ಯಾತರಾದ ಅಸುರರನ್ನು ಮೀರಿಸಲು ಇರುವ ಮಾರ್ಗವೆಂದು ವಾಕ್ಕಿನಿಂದ ಉದ್ಗೀಥ ಮಾಡಿ ಹಾಡಿದರು. ಈ ಉದ್ಗೀಥದಿಂದ ದೇವತೆಗಳು ತಮ್ಮನ್ನು ಮೀರುವರೆಂದು ಅಸುರರು ಅದನ್ನು ಪಾಪದಿಂದ ಹೊಡೆದರು. ಆದರೆ ಸೋಲದೆ ದೇವತೆಗಳು ವಾಕ್ಕಿನ ಮೂಲಕ, ಘ್ರಾಣೇಂದ್ರಿಯದ ಮೂಲಕ, ಚಕ್ಷುವಿನ ಮೂಲಕ, ಶ್ರೋತ್ರದ ಮೂಲಕ, ಮನಸ್ಸಿನ ಮೂಲಕ, ಪ್ರಾಣದ ಮೂಲಕ ಉದ್ಗೀಥ ಹಾಡಿ ಅಸುರರನ್ನು ಸೋಲಿಸಿದರು. ಹೀಗೆ ಲೋಕದ ಅಧಿಪತ್ಯ ಗಾನ ಮಾಡಬಲ್ಲ, "ಸ್ವರವೇ ಸಂಪತ್ತಾಗುಳ್ಳ", "ಸ್ವರವೇ ಸುವರ್ಣವಾದ" ಅಲ್ಪಸಂಖ್ಯಾತರಿಗೆ ಸಿಕ್ಕಿತು.

ನನಗಿಲ್ಲಿ ಮುಖ್ಯವಾದ್ದು ಉಪನಿಷತ್ಕಾರ ಅಸುರರ ದೈಹಿಕ ಬಲವನ್ನು ಉದ್ಗೀಥದ ಮೂಲಕ ಎದುರಿಸಿ ಗೆಲ್ಲಬಹುದು ಎಂದು ಸೂಚಿಸಿದ್ದು. ಬೃಹದಾರಣ್ಯಕ ತನ್ನ ರೂಪಕ, ಸುತ್ತುಬಳಸು ಭಾಷೆ, ಕನ್ಸೀಟುಗಳ ಮೂಲಕ ಕಾಣಿಸುವುದು ಮನಸ್ಸು ಮತ್ತು ಅದರಿಂದ ಸಾಧಿಸಬಹುದಾದ್ದು ಏನು ಎಂಬುದನ್ನು. ಬೇರೆ ಬೇರೆ ರೀತಿಯಲ್ಲಿ ಮನಸ್ಸಿನ ವಿವಿಧ ಸಾಧ್ಯತೆಗಳನ್ನೇ ಆತ ಹುಡುಕುತ್ತಿದ್ದಾನೆ. ಬಹುಸಂಖ್ಯಾತರ ದೈಹಿಕ ಬಲದೆದುರು ಅಲ್ಪಸಂಖ್ಯಾತರ ಈ ಶಕ್ತಿ ಗೆಲ್ಲುತ್ತದೆ ಎಂಬ ವಿಶ್ವಾಸ ಅವನದ್ದು. ಕೊನೆಗೆ ವಾಕ್ಕು ಮೃತ್ಯುವನ್ನು ದಾಟಿ ಮುಕ್ತವಾಗುತ್ತದೆ ಎಂಬ ಮಾತೂ ಬರುತ್ತದೆ. ಇಂಥಾ ಸಂದರ್ಭದಲ್ಲಿ ಭಾಷೆಗೆ ಸಂಬಂಧಿಸಿದ ಮಾತು ಆಧಿಭೌತಿಕ ಆಯಾಮ ಪಡೆಯುತ್ತದೆ.

ಸಾವನ್ನು ಮೀರುವುದು, ಗೆಲ್ಲುವುದು ವೈದಿಕ ಕರ್ಮಕಾಂಡಗಳ ಒಂದು ಉದ್ದೇಶವೂ ಹೌದು. ಮೃತ್ಯುಂಜಯ  ಹೋಮ ಎಂಬ ಒಂದು ಹೋಮವೇ ಇದೆ. ಆದರೆ ಉಪನಿಷತ್ಕಾರರಿಗೆ ಸಾವನ್ನು ಗೆಲ್ಲುವುದು ಕರ್ಮಕಾಂಡಗಳ ಮೂಲಕವಾಗಿ ಅಲ್ಲ; ಮನಸ್ಸಿನ, ದೇಹದ ವಿವಿಧ ಸಾಧ್ಯತೆಗಳ ಮೂಲಕ. ಉದ್ಗೀಥ ಹಾಡಿ ಸಾವನ್ನು ಗೆಲ್ಲುವುದು  ಹೀಗೆ ಸಾವು ಗೆಲ್ಲುವ ಕ್ರಮಗಳಲ್ಲಿ ಒಂದು.

 **********************


ಇವು ಮಾರಾಟಕ್ಕೆ ಲಭ್ಯವಿರುವ ಬೋಧಿ ಟ್ರಸ್ಟಿನ ಪ್ರಕಟಣೆಗಳು.ಸಮಗ್ರ ನಾಟಕಗಳು
ಸಂಪುಟ 3. ಅಶ್ವತ್ಥಾಮ, ಹುಲಿಯ ಕಥೆ, ದಂಗೆ-ಈ ಮೂರು ನಾಟಕಗಳು. ರೂ75.00

ಸಮಗ್ರ ನಾಟಕಗಳು ಸಂಪುಟ 2
ಪುಟ್ಟಿಯ ಪಯಣ, ಸುದರ್ಶನ--
ಈ ಎರಡು ನಾಟಕಗಳು.
ರೂ60.00

ಶೇಕ್ಸ್ಪಿಯರ್: ಎರಡು ಸಂಸ್ಕೃತಿಗಳಲ್ಲಿ. ಪ್ರತಿಗಳು ಮುಗಿದಿವೆ. ಸದ್ಯದಲ್ಲಿ ಶೇಕ್ಸ್ಪಿಯರ್ ಕುರಿತ ನನ್ನ ಎಲ್ಲಾ ಬರೆಹಗಳು ಸಮಗ್ರ ಗದ್ಯ ಸಂಪುಟ 1 ಆಗಿ ಪ್ರಕಟವಾಗಲಿದೆ. ಅದರ ಭಾಗವಾಗಿ  ಈ ಪುಸ್ತಕವೂ ಪುನರ್ಮುದ್ರಣವಾಗಲಿದೆ.
 
ಮುಚ್ಚು ಮತ್ತು ಇತರ ಲೇಖನಗಳು. ಮಹಾಭಾರತ, ವಡ್ಡಾರಾಧನೆ, ಕೋಡಂಗಿಗಳು, ಅಡಿಗರ ಕಾವ್ಯ, ಕಾರಂತರ ಕಾದಂಬರಿಗಳು ಮೊದಲಾದ ವಿಷಯ ಕುರಿತ ಲೇಖನಗಳು. ಬೆಲೆ ರೂ60.00

ನಿಮಗೆ ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust SB Account no. 1600101008058, Canara Bank, Yenmur 574328, Sullia Taluk, Karnataka, IFSC CNRB0001600--ಇಲ್ಲಿಗೆ ಜಮೆ ಮಾಡಿ ನಿಮ್ಮ ವಿಳಾಸವನ್ನು  bodhitrustk@gmail.com ಗೆ ಇಮೇಲ್ ಮಾಡಿ  ಅಥವಾ ಪತ್ರ ಬರೆದು ತಿಳಿಸಿದರೆ ಪುಸ್ತಕಗಳನ್ನು ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ.

Thursday, December 2, 2010

ಕುದುರೆ ಖುರಪುಟದಗ್ನಿಕಿಡಿ ಹಾರುತಿದೆ

ತುಂಬಾ ಸಮಯದ ಹಿಂದೆ--ಬಹುಶಃ ಮೂವತ್ತು ವರ್ಷಕ್ಕೂ ಹಿಂದೆ---ಕೆಲವು ವಾಚಿಕೆಗಳು ಪ್ರಕಟವಾಗಿದ್ದವು. ಇದನ್ನು ಸಾಹಿತ್ಯ ಪರಿಷತ್ತು ಪ್ರಕಟಿಸಿತೇ? ಹಾಗೆಂದು ಅಸ್ಪಷ್ಟ ನೆನಪು. ಸ್ಪಷ್ಟವಾಗಿ ನೆನಪಿರುವುದೆಂದರೆ ನಿರಂಜನ ವಾಚಿಕೆ ಎಂಬೊಂದು ವಾಚಿಕೆ ಪ್ರಕಟವಾಗಿತ್ತು ಎಂಬುದು. ನಿರಂಜನರ ಓದುಗರ ಸಂಖ್ಯೆ ಕ್ಷೀಣಿಸುತ್ತಿದ್ದ ಸಮಯದಲ್ಲಿ ಅವರ ಬಗ್ಗೆ ಈ ವಾಚಿಕೆ ಹೊಸ ಆಸಕ್ತಿ ಹುಟ್ಟಿಸುವ ಪ್ರಯತ್ನವಾಗಿ ಬಂದಿತ್ತು ಎಂದೂ ನೆನಪು. ಓದುಗರ ಸಂಖ್ಯೆ ಕ್ಷೀಣಿಸಲು ಮುಖ್ಯ ಕಾರಣ ನವ್ಯ ಸಾಹಿತ್ಯ ಚಳವಳಿಯಿಂದಾಗಿ ಅಭಿರುಚಿ ಬದಲಾದದ್ದು. ಕಾವ್ಯದ ಧ್ವನಿಶಕ್ತಿ ಇಲ್ಲದ ಯಾವ ಬರೆವಣಿಗೆಯೂ ಆಗ ಅಷ್ಟೊಂದು ಪ್ರಮುಖ ಅನ್ನಿಸುತ್ತಿರಲಿಲ್ಲ.  ನಿರಂಜನ ವಾಚಿಕೆಗೆ ಯಾವ ಪ್ರತಿಕ್ರಿಯೆ ಬಂತು, ಇದರ  ಜೊತೆಗೆ ಬೇರೆ ವಾಚಿಕೆಗಳು ಬಂದುವೇ ಹೇಗೆ ಗೊತ್ತಿಲ್ಲ. ಬಂದಿರಬಹುದು. ಆದರೆ ಆನಂತರ ಈ ವಾಚಿಕೆ ಬರುವ ಸಂಪ್ರದಾಯ ಕನ್ನಡದಲ್ಲಿ ನಿಂತು ಹೋಯಿತು. ಆಯ್ದ ಕವನ ಕತೆ ಇತ್ಯಾದಿ ಬರುತ್ತವೆ. ವಾಚಿಕೆಗಳು ಬಂದಂತಿಲ್ಲ. ಆದರೆ ವಾಚಿಕೆ ಒಬ್ಬ ಲೇಖಕನ ಸಮಗ್ರ ಕೃತಿಗಳಿಗೆ ಒಂದು ಮುನ್ನುಡಿಯಿದ್ದಂತೆ: ಅವನನ್ನು ಪರಿಚಯಿಸಿ  ಹೆಚ್ಚು ಓದುಗರನ್ನು ದೊರಕಿಸಿಕೊಡುವುದರಲ್ಲಿ ಇಂಥಾ ವಾಚಿಕೆಗಳ ಮಹತ್ವವಿದೆ.

ಇಂಗ್ಲಿಷಿನಲ್ಲಿ ಈ ಬಗೆಯ ವಾಚಿಕೆಗಳು ಅನೇಕ ಲೇಖಕರ ಬಗ್ಗೆ ಇವೆ. ವಾಚಿಕೆ ಎನ್ನುವ ಕನ್ನಡ ಪದವೂ ಸೇರಿದಂತೆ ಇಡೀ ವಾಚಿಕೆಯ ಪರಿಕಲ್ಪನೆಯೇ ಇಂಗ್ಲಿಷಿನಿಂದ ಬಂದದ್ದು. ಇಂಗ್ಲಿಷಿನಲ್ಲಿ ಇವು ಪಠ್ಯಪುಸ್ತಕಗಳ ಅಗತ್ಯ ಪೂರೈಸುವ  ಉದ್ದೇಶ ಹೊಂದಿವೆ. ಕೆಲವು ತುಂಬಾ ಒಳ್ಳೆಯ ವಾಚಿಕೆಗಳೂ ಇಂಗ್ಲಿಷಿನಲ್ಲಿ ಇವೆ. ನಾನು ಆಗಾಗ ಬಳಸುವ ಫ್ರೆಡರಿಕ್ ನೀಷೆ ರೀಡರ್ ಫಕ್ಕನೆ ನೆನಪಾಗುವ ಒಂದು ಉದಾಹರಣೆ.

ಕನ್ನಡದಲ್ಲಿ ಹಿಂದೆ ಬಂದ ವಾಚಿಕೆಗಳ ನಂತರ ಈಗ ನುಡಿ ಪುಸ್ತಕ ಪ್ರಕಾಶನದ ರಂಗನಾಥನ್ ಮತ್ತೆ ವಾಚಿಕೆಗಳ ಸಂಪ್ರದಾಯ ಪ್ರಾರಂಭಿಸಿದ್ದಾರೆ. ಮುಂದೆ ಅನೇಕ ಮುಖ್ಯ ಲೇಖಕರ ವಾಚಿಕೆ ಪ್ರಕಟಿಸುವ ಯೋಜನೆ ಅವರಿಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಲೇಖಕರಲ್ಲದೆ ಮರೆಗೆ ಸರಿದ ಒಳ್ಳೆಯ ಲೇಖಕರು, ಅಥವಾ ಯಾರ ಪುಸ್ತಕಗಳು ಸುಲಭವಾಗಿ ಸಿಕ್ಕುತ್ತಿಲ್ಲವೋ ಅಂಥಾ ಲೇಖರು--ಇಂಥವರ ವಾಚಿಕೆಗಳ ಅಗತ್ಯವೂ  ಕನ್ನಡಕ್ಕೆ ಇದೆ. ಅನಕೃ, ತರಾಸು, ನಿರಂಜನ, ಎಂ.ಕೆ. ಇಂದಿರಾ, ಬಸವರಾಜ ಕಟ್ಟೀಮನಿ, ಪುತಿನ, ತೀನಂಶ್ರೀ--ಹೀಗೆ ವಾಚಿಕೆಗಳು ಪ್ರಕಟವಾಗಬೇಕಾದ ಅಗತ್ಯವಿರುವ ಲೇಖಕರ ಪಟ್ಟಿಯನ್ನೇ ಕೊಡಬಹುದು. ಅನಕೃ ಶ್ರೇಷ್ಠ ಲೇಖಕರೆಂದು ಪ್ರತಿಪಾದಿಸಿದರೆ ಅದನ್ನು ಒಪ್ಪುವವರು ಕಮ್ಮಿ ಇರಬಹುದು.  ಆದರೆ ಅವರ ಐತಿಹಾಸಿಕ ಮಹತ್ವವನ್ನು ಯಾರೂ ಅಲ್ಲಗಳೆಯಲಾರರು. ಅದು ಏನು ಎಂಬುದನ್ನು ವಾಚಿಕೆ ಓದುಗರ ಎದುರು ಇಡಬಲ್ಲುದು; ಅವರ ಬಗ್ಗೆ --ಅವರಂಥಾ ಇನ್ನೂ  ಕೆಲವರ ಬಗ್ಗೆ --ಹೊಸ ಚರ್ಚೆ ನಡೆಯುವಂತೆ ನೋಡಿಕೊಳ್ಳಬಲ್ಲುದು.

ಕೆಲವು ತಿಂಗಳ  ಹಿಂಧೆ ರಂಗನಾಥನ್ ವೈದೇಹಿ ವಾಚಿಕೆ ಪ್ರಕಟಿಸಿದ್ದರು. ವೈದೇಹಿ ಬಗ್ಗೆ ಅದೊಂದು ಒಳ್ಳೆಯ ವಾಚಿಕೆ.  ಆ ವಾಚಿಕೆ ಓದಿ ವೈದೇಹಿ ಬಗ್ಗೆ ಹೊಸ ಆಸಕ್ತಿ ಬೆಳೆಸಿಕೊಂಡವರನ್ನು ನಾನು ಬಲ್ಲೆ. ವೈದೇಹಿ ತುಂಬಾ ಒಳ್ಳೆಯ ಲೇಖಕಿ ಮಾತ್ರವೇ ಅಲ್ಲ. ಅವರ ಬರೆವಣಿಗೆಗೆ ಮನಸ್ಸನ್ನು ಮೃದುಗೊಳಿಸಬಲ್ಲ ಗುಣವಿದೆ. ಇಂದಿನ ಯಾಂತ್ರಿಕ ಜೀವನದಲ್ಲಿ, ಪ್ರತಿಯೊಬ್ಬರೂ ಹಣದ ಅಥವಾ ಇತರ ಒಂದಲ್ಲ ಒಂದು ಸೌಕರ್ಯಗಳ ಬೆನ್ನು ಹತ್ತಿರುವ ಈ ದಿನಗಳಲ್ಲಿ ಮನಸ್ಸನ್ನು ಮೃದುಗೊಳಿಸಬಲ್ಲ, ನಮ್ಮನ್ನು ಮತ್ತೆ ನೋಯಬಲ್ಲ, ಮುದಗೊಳ್ಳಬಲ್ಲ ವ್ಯಕ್ತಿಗಳನ್ನಾಗಿ ಮಾಡಬಲ್ಲ ವೈದೇಹಿಯವರ ಬರೆವಣಿಗೆಗಳು ಆ ಕಾರಣಕ್ಕಾಗಿಯೇ  ನಮ್ಮ ಈ  ನಾಗರಿಕತೆಗೆ ಗುಣಕಾರಿಯಾಗಬಲ್ಲ ಗುಣ ಹೊಂದಿವೆ.

ರಂಗನಾಥನ್ ತಮ್ಮ ಪ್ರಕಾಶನದ ಮೂಲಕ ಈ ವಾರ ಮತ್ತೆ ಮೂರು ವಾಚಿಕೆ ಬಿಡುಗಡೆಗೊಳಿಸುತ್ತಿದ್ದಾರೆ. ಅವುಗಳಲ್ಲಿ ಒಂದು ವಾಚಿಕೆ ಶಾಂತಿನಾಥ ದೇಸಾಯಿ ಬಗ್ಗೆ. ಇದನ್ನು ನಾನೇ ಸಂಪಾದಿಸಿ ಕೊಟ್ಟಿದ್ದೇನೆ.ಇದರ ಸಂಪಾದನೆಗಾಗಿ ದೇಸಾಯಿಯವರ ಎಲ್ಲಾ ಬರೆವಣಿಗೆಗಳನ್ನು ಶಿಸ್ತುಬದ್ಧವಾಗಿ ಅಧ್ಯಯನ ಮಾಡುತ್ತಿದ್ದಂತೆ ಇವರೆಷ್ಟು ಒಳ್ಳೆಯ ಲೇಖಕ ಎಂದು ಸ್ಪಷ್ಟವಾಗಿ ಅರಿವಿಗೆ ಬಂತು. ಅವರ ಬರೆವಣಿಗೆ ಬಗೆಗಿನ ನನ್ನ ಮರುಓದು ವಾಚಿಕೆಯ ದೀರ್ಘ ಪ್ರಸ್ತಾವನೆಯಾಗಿ ಪ್ರಕಟವಾಗುತ್ತಿದೆ. ಓದುಗರು ಅದನ್ನು ದೇಸಾಯಿಯವರ ಬರೆಹಗಳ ಜೊತೆಗೆ ಓದುವುದು ಸೂಕ್ತವಾದ್ದರಿಂದ ಇಲ್ಲಿ ಕೊಡುತ್ತಿಲ್ಲ.

ದೇಸಾಯಿಯವರದ್ದು ನಾನು ಬರೆಯುತ್ತಿರುವ ನಾಲ್ಕನೆಯ ಮರುಓದು. ಇದಕ್ಕಿಂತ ಮೊದಲು ಕನಕದಾಸ, ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ ಕುರಿತು ಮರು ಓದುಗಳನ್ನು ಪ್ರಕಟಿಸಿದ್ದೆ. ಮುಂದೆ ಪಂಪ, ಕವಿರಾಜಮಾರ್ಗದಿಂದ ಪ್ರಾರಂಭಿಸಿ ಇಪ್ಪತ್ತನೆಯ ಶತಮಾನದ ವರೆಗೆ ನನಗೆ ಮುಖ್ಯ ಅನ್ನಿಸಿದ ಲೇಖಕರ ಬಗ್ಗೆ ಮರು ಓದುಗಳ ಲೇಖನ ಬರೆಯಬೇಕೆಂದಿದೆ. ಈ ಬ್ಲಾಗಿನಲ್ಲಿ ನಾನು ಬರೆಯುತ್ತಿರುವ ಉಪನಿಷತ್ತು ಕುರಿತ ಲೇಖನ ಮಾಲೆಯೂ ಮರುಓದುಗಳೇ. ಒಟ್ಟು ನನಗೆ ಇಷ್ಟವಾದ ಸಂಸ್ಕ್ರತ, ಕನ್ನಡ, ಯುರೋಪಿನ ಭಾಷೆಗಳ ಕೃತಿಗಳು--ಇವುಗಳ ಬಗ್ಗೆ ಮರುಓದಿನ ಸರಣಿ ಬರೆಯಬೇಕೆಂದುಕೊಂಡಿದ್ದೇನೆ. ಇವು ಮುಂದೆ ಪುಸ್ತಕಗಳಾಗಿ ಪ್ರಕಟವಾಗಲಿವೆ.

ನುಡಿ ಪುಸ್ತಕದಿಂದ ಈಗ ಪ್ರಕಟಿಸುತ್ತಿರುವ ವಾಚಿಕೆಗಳಲ್ಲಿ ಒಂದು ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ. ಆಲನಹಳ್ಳಿ ನನಗೆ ಹೈಸ್ಕೂಲು ದಿನಗಳಿಂದ ಗುರುತಿದ್ದ ಏಕವಚನದ ಸಲಿಗೆಯ ಸ್ನೇಹಿತ. ನಾನು ಪಂಜ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಅವನು ಮೈಸೂರು ಮಹಾರಾಜಾ ಕಾಲೇಜಿ ವಿದ್ಯಾರ್ಥಿಯಾಗಿದ್ದ. ಆಗಲೇ ಸಮೀಕ್ಷಕ  ಎಂಬ ಹೆಸರಿನ ಒಂದು ಸಾಹಿತ್ಯ ಪತ್ರಿಕೆ ಪ್ರಾರಂಭಿಸಿದ್ದ. ಅದರ ಪರವಾಗಿ ನನಗೆ ಪದ್ಯ ಕಳಿಸುವಂತೆ, ಚಂದಾ ಕಳಿಸುವಂತೆ ಪತ್ರ ಬರೆದಿದ್ದ. ನನ್ನ ಪದ್ಯಗಳು ಆಗ ಸಂಕ್ರಮಣ, ಗೋಕುಲ  ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಹೀಗೆ ಅವನಿಗೆ ನನ್ನ ವಿಳಾಸ ಸಿಕ್ಕಿತ್ತು.  ಕೊನೆಗೆ ಚಂದಾ ಮತ್ತು ಪದ್ಯ ಕಳಿಸಿದೆ. ಸಮೀಕ್ಷಕ  ಆಗಿನ ಒಂದು ಒಳ್ಳೆಯ ಸಾಹಿತ್ಯಿಕ ಪತ್ರಿಕೆ. ಅದರಲ್ಲಿ ಆಗಿನ ಅನೇಕ ಪ್ರಸಿದ್ಧ ಲೇಖಕರು ಬರೆದಿದ್ದರು. ಎಚ್. ಎಂ. ಚೆನ್ನಯ್ಯ ಅದರ ಸಾಹತ್ಯಿಕ ಸಲಹೆಗಾರಲ್ಲಿ ಒಬ್ಬರು. ಪೋಲಂಕಿ ರಾಮಮೂರ್ತಿಯವರ ಒಂದು ಬರೆಹ ಅದರಲ್ಲಿ ಪ್ರಕಟವಾಗಿತ್ತು. ಲಂಕೇಶರ "ನನ್ನ ಸುತ್ತಾ" ಎಂಬ ಕವನ ಮೊದಲು ಪ್ರಕಟವಾದದ್ದು ಅದರಲ್ಲೇ.

ಈ ರಸ್ತೆಗಳು ಈ ಮನೆಗಳು ಈ ಮರಗಳು ಈ ಮನುಷ್ಯರು
ಈ ವೀರರು ಈ ಪೀಡೆಗಳು ಈ ರಂಭೆ ಈ ರಂಗ ಈ ಶಿವ
ಕಣ್ಣೆದುರಿನ ಈ ನರಕಕೆ, ಈ ನಗರದ ಈ ಪುಲಕಕೆ,
ಈ ಹುಡುಗರ ತಂಡ, ಈ ಕನ್ಯೆಯ ಖಂಡ, ಭಾಷಣಗಳ ಭಂಡ
ಈ ಹೆಂಗಸರು ಹಾರಾಡುವ ಈ ಹೆಂಗಸರು ತೂರಾಡುವ ಈ ಹೆಂಗಸರು
ಉಸಿರಾಡುವ ಬಸಿರಾಗುವ ಬೆರಗಾಗುವ ಹೊರಗಾಗುವ
(ಈ ಗಂಡು ಈ ಥರ ಸುಮ್ಮನೆ ಕೊರಗಾಡುವ)

ಅವರೆಲ್ಲರ ಸ್ವಪ್ನದ ಸರ್ಪಕೆ ಚಪ್ಪಾಳೆಯ ಹೊಡೆವ
ಈ ಹಬ್ಬದ  ಸಂಭ್ರಮ, ಈ ಕೃಷ್ಣನ ಕಾಟ,
ಈ ಮಂತ್ರದ ಪಾಠ....

"ಈ ಮನೆಗಳು ಈ ಜನಗಳು ಈ ನರಕ ಈ ಪುಲಕ"  ಎಂದು ಕೊನೆಯಾಗುವ ಈ ಕವನದ ಮೇಲಿನ ಸಾಲಿನ ಕೃಷ್ಣ ಆಲನಹಳ್ಳಿ ಕೃಷ್ಣನೇ. ಸಮೀಕ್ಷಕಕ್ಕೆ ಪದ್ಯ ಕೊಡಿ ಎಂಬ ಕೃಷ್ಣನ ವರಾತವನ್ನೇ ಲಂಕೇಶ್ ಪದ್ಯದ ಒಂದು  ಸಾಲು ಮಾಡಿದ್ದರು. ಅವನ ಹಠದಿಂದಾಗಿ ಕನ್ನಡಕ್ಕೆ ಅನುರಣನ ಲಯದ ಒಂದು ಒಳ್ಳೆಯ ಪದ್ಯ ಸಿಕ್ಕಿದಂತಾಯಿತು. ಬೇಂದ್ರೆಯವರ "ಈ ಇದೂ ತುಂಬಿ ಆ ಅದೂ ತುಂಬಿ  ಯಾವುದೂ ತುಂಬಿ ಇರದೇ ತುಂಬಿ ಕಳೆದರೂ  ತುಂಬಿ ಉಳಿದರೂ ತುಂಬಿ ತುಂಬಿ ಬರದೇ" ಎಂಬಿತ್ಯಾದಿ ಸಾಲುಗಳಿರುವ ಪದ್ಯ  ಅದೇ ಬಗೆಯ ಅನುರಣನ ಲಯವಿರುವ ಪದ್ಯ. ಬರೀ ತುಂಬಿ ಪದದ ಅನುರಣನದಿಂದ ಬೇಂದ್ರೆ ಎಂಥಾ ಪರಿಣಾಮ ಸಾಧಿಸುತ್ತಾರೆ ಎಂಬುದಕ್ಕೆ ಈ ಕೆಲವು ಸಾಲು ನೋಡಿ:

ತುಂಬಿದ್ದು ತಾನೆ ಎಂದೆಂದು ತುಳುಕದೆಂದೆಂದರೂನು ತುಂಬಿ
ತೂತೂಬು ತುಂಬಿ ಹೊರಸೂಸಿ ಚೆಲ್ಲಿ ತುಳುಕಾಡಿ ಮತ್ತೆ ತುಂಬಿ
ಮುಮ್ಮೊದಲೆ ತುಂಬಿ ಮೊಳಕೆಯಲಿ ತುಂಬಿ ಚಿಚ್ಚಿಗುರಿನಲ್ಲಿ ತುಂಬಿ
ಎಲೆ ನನೆಯು ತುಂಬಿ ಹೂ ಹೀಚು ತುಂಬಿ ಮಿಡಿ ಕಾಯಿ ಹಣ್ಣು ತುಂಬಿ

ನೆಲ ಹೂತು ತುಂಬಿ ಮನಸೋತು ತುಂಬಿ ಉಸಿರಾಟ ತುಂಬಿ ತುಂಬಿ
ಜಗವರಳಿ ಕಂಡು ಕಣ್ತುಂಬಿ ಮರಳಿ ಮರುಳಾಗಿ ತುಂಬಿ ತುಂಬಿ
ರಸದುಂಬಿ ತುಂಬಿ ನಾಲಗೆಯು ಎಂಬ ದುರದುಂಬಿ ತುಂಬಿ ತುಂಬಿ
ಝೇಂಕಾರ ಕೇಳಿ ಕಿವಿ ತುಂಬಿ ತುಂಬಿ ಓಂಕಾರ ತುಂಬಿ ತುಂಬಿ

ಆ ತುಂಬಿನಿಂದ ತುಟಿವರೆಗು ತುಂಬಿ ತುದಿ ವರೆಗು ತುಂಬಿ ತುಂಬಿ
ಅಂಗಾಂಗ ತುಂಬಿ ಲಿಂಗಾಂಗ ತುಂಬಿ ಆಲಿಂಗನಾಂಗ ತುಂಬಿ
ಆಚಾರ ತುಂಬಿ ಉಚ್ಚಾರ ತುಂಬಿ ಸಂಚಾರ ತುಂಬಿ ತುಂಬಿ
ವಿಶ್ರಾಂತಿ ತುಂಬಿ ಸ್ಥಿರ ಶಾಂತಿ ತುಂಬಿ ಕಡು ಕಾಂತಿ ತುಂಬಿ ತುಂಬಿ

ಗುರುವಿಂದ ತುಂಬಿ ಅರವಿಂದ ತುಂಬಿ ತುಂಬುರುವಿನಿಂದ ತುಂಬಿ
ತಾಯೆಂದು ತುಂಬಿ ತಂದೆಂದು ತುಂಬಿ ಕಂದನ್ನ ತನ್ನ ತುಂಬಿ
ಅಂಬಿಕೆಯ ತುಂಬಿ ನಂಬಿಕೆಯ ತುಂಬಿ ಕಣ್ಗೊಂಬೆ ರಂಭೆ ತುಂಬಿ
ಶ್ರೀಮಾತೆ ತುಂಬಿ ಈ ಮಾತೆ ತುಂಬಿ ತಂತಾನೆ ಬಂತು ತುಂಬಿ

ಈ ಪದ್ಯದ ಬಳಿಕ ಅದೇ ಬಗೆಯ ಅನುರಣನ ಲಯವಿರುವ ಪದ್ಯ ಕನ್ನಡದಲ್ಲಿ ಬಂದದ್ದೆಂದರೆ ಲಂಕೇಶರ "ನನ್ನ ಸುತ್ತಾ". ಕೃಷ್ಣನ ಒತ್ತಾಯದ ಕಾರಣವಾಗಿ ಲಂಕೇಶರಿಂದ ಆ ಪದ್ಯ ನಮಗೆ  ಲಭ್ಯವಾಯಿತು. 

ಹೈಸ್ಕೂಲು, ಪಿಯುಸಿ ಮುಗಿಸಿದ ಮೇಲೆ ನಾನೂ ಮಹಾರಾಜಾ ಕಾಲೇಜು ಸೇರಿದೆ. ನಾನು ಮೊದಲ ಬಿ. ಎ. ಯಲ್ಲಿದ್ದಾಗ ಕೃಷ್ಣ  ಅಂತಿಮ ಬಿ.ಎ.ಯಲ್ಲಿದ್ದ. ನಾನು ಕಾಲೇಜು ಸೇರಿ  ಎರಡು ಮೂರು ದಿನ ಕಳೆದ ಮೇಲೆ   ಅವನ ಪರಿಚಯ ಮಾಡಿಕೊಳ್ಳಲೆಂದು ಅವನ ಕ್ಲಾಸು ನಡೆಯುತ್ತಿದ್ದ ರೂಮಿನ ಹೊರಗೆ ನಿಂತಿದ್ದೆ. ಹತ್ತು ಹದಿನೈದು ಜನರಿದ್ದ ಮೇಜರ್ ಕನ್ನಡ ಕ್ಲಾಸು ಅದು. ಕ್ಲಾಸಿನಲ್ಲಿ ಹಿಂದಿನ ಬೆಂಚಿನಲ್ಲಿ ಕೂತಿದ್ದ ಒಬ್ಬ ಏನೇನೋ ಚೇಷ್ಟೆ ಮಾಡುತ್ತಾ ನಗುತ್ತಾ ಪಿಸಿ ಪಿಸಿ ಮಾತಾಡುತ್ತಾ ಕೂತಿದ್ದ. ನನಗೆ ಅವನೇ ಕೃಷ್ಣ ಅನ್ನಿಸಿತು. ಹೌದು, ಅವನೇ ಕೃಷ್ಣನಾಗಿದ್ದ. ಕ್ಲಾಸು ಬಿಟ್ಟು ಹೊರಗೆ ಬಂದಾಗ __ಕ್ಲಾಸು ಬಿಟ್ಟೊಡನೆ ಗಂಭೀರವಾಗಿ ಹೊರಗೆ ಬಂದ__ನನ್ನ ಹೆಸರು ಹೇಳಿ ಪರಿಚಯ ಮಾಡಿಕೊಂಡೆ. ಬನ್ನಿ, ಕಾಫಿ ಕುಡಿಯೋಣ ಎಂದು ಕ್ಯಾಂಟೀನಿಗೆ ಕರೆದುಕೊಂಡು ಹೋದ. ಕ್ಯಾಂಟೀನಿನಲ್ಲಿ   ಅಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಎಂದು ಪ್ರತ್ಯೇಕ ಸ್ಥಳಗಳಿದ್ದವು. ನಾನು ವಿದ್ಯಾರ್ಥಿಗಳ ಸ್ಥಳದ ಕಡೆ ಹೋಗುತ್ತಿದ್ದರೆ ಇಲ್ಲೇ ಬನ್ನಿ ಎಂದು ಹೋಗಿ ಅಧ್ಯಾಪಕರಿಗೆ ಮೀಸಲಾದ ಸ್ಥಳದಲ್ಲಿ ಕೂತು ಸಿಗರೇಟು, ಬೈಟು ಕಾಫಿ ತರಹೇಳಿದ.   ನಾನು ಕಾಫಿ ಕುಡಿದು ಮುಗಿಸಿ ಕ್ಲಾಸಿದೆ ಎಂದು ಹೊರಡಲು ಏಳುತ್ತಿದ್ದಂತೆ ಚಕ್ಕರ್ ಹೊಡೀರ್ರೀ ಎಂದ. ಅಲ್ಲೇ ಇದ್ದ ಕೆ. ರಾಮದಾಸ್, ಈಗ ತಾನೇ ಕಾಲೇಜು ಸೇರಿದ್ದಾರೆ, ಅವರಿಗೆ ನಿನ್ನ ಬುದ್ಧಿ ಕಲಿಸಿ ಹಾಳು ಮಾಡಬೇಡ ಎಂದು ಬೈದರು. ಆದರೆ ನನಗೆ ದಿನ ಹೋದಂತೆ ಚಕ್ಕರ್ ಹೊಡೆಯುವುದರಲ್ಲಿ ಕೃಷ್ಣನೇ ಮಾದರಿಯಾದ. ಮತ್ತು ಮಹಾರಾಜಾ ಕಾಲೇಜಿನಲ್ಲಿ ಚಕ್ಕರ್ ಹೊಡೆದವರ ಒಂದು ದೊಡ್ಡ ಪರಂಪರೆಯೇ ಇತ್ತು. ಅಲ್ಲದೆ ಚಕ್ಕರ್ ಹೊಡೆದದ್ದಕ್ಕೂ  ಆ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೂ ಏನೇನೂ ಸಂಬಂಧವಿರಲಿಲ್ಲ. ನಮಗಿಂತ ಸುಮಾರು ಇಪ್ಪತ್ತು ವರ್ಷ ಮೊದಲು ಆ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಕೆ. ವಿ. ಸುಬ್ಬಣ್ಣ ಎಟೆಂಡೆನ್ಸ್ ಶಾರ್ಟೇಜ್ ಆಗಿ ಕೊನೆಗೆ ಎಟೆಂಡೆನ್ಸ್ ರಿಜಿಸ್ಟರ್ ಹಾರಿಸಿ ಸುಟ್ಟು ಹಾಕಿದ್ದರಂತೆ. ಅನಂತಮೂರ್ತಿಯವರಿಗೆ ಎಟೆಂಡೆನ್ಸ್ ಶಾರ್ಟೇಜ್ ಆಗಿ ಪರೀಕ್ಷೆಗೆ ಕೂರಲಿಕ್ಕಾಗದೆ ಅದೇ ಕ್ಲಾಸಿನಲ್ಲಿ ಮತ್ತೊಂದು ವರ್ಷ ಕೂರಬೇಕಾಗಿ ಬಂದಿತ್ತು. ಹಾಗೆಂದು ಅವರೇ ಬರೆದುಕೊಂಡಿದ್ದಾರೆ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ನಮ್ಮ ಸಮಸ್ಯೆ ಓದಿನದ್ದಾಗಿರಲಿಲ್ಲ. ಅದನ್ನು ಚಕ್ಕರ್ ಹೊಡೆದರೂ ಮಾಡಿರುತ್ತಿದ್ದೆವು. ಸಮಸ್ಯೆ ಎಟೆಂಡೆನ್ಸ್ ಭರ್ತಿ ಮಾಡುವುದು ಹೇಗೆ ಎಂಬುದೇ ಆಗಿರುತ್ತಿತ್ತು.

ಅದೇ ವರ್ಷ ಅವನ ಕವನ ಸಂಗ್ರಹ ಮಣ್ಣಿನ ಹಾಡು ಪ್ರಕಟವಾಗಿತ್ತು. ಮುನ್ನುಡಿಯಲ್ಲಿ  ಅಡಿಗರು ಅದನ್ನು ಕನ್ನಡ ಕಾವ್ಯದಲ್ಲಿ ನಡೆದ ಘಾತಪಲ್ಲಟ ಎಂದು ಬಣ್ಣಿಸಿದ್ದರು. ಅದು ಕೃಷ್ಣನಿಗೆ  ದೊಡ್ಡ ಹೆಸರು ತಂದ ಪುಸ್ತಕ. ಎಷ್ಟು ಹೆಸರು ಎಂದರೆ--ನಮಗೆಲ್ಲರಿಗೆ ಅಧ್ಯಾಪಕರಾಗಿದ್ದ ಎಸ್. ನಾರಾಯಣ ಶೆಟ್ಟರು, ಲೈಬ್ರೆರಿಯಿಂದ ಕೃಷ್ಣನ ಪುಸ್ತಕ ಎಲ್ಲರೂ ತೆಗೆದುಕೊಂಡು ಹೋಗಿ ಓದುತ್ತಾರೆ, ನನ್ನದು ಯಾರೂ ತೆಗೆದುಕೊಂಡು ಹೋಗುವುದಿಲ್ಲ, ನನ್ನದನ್ನೂ  ತೆಗೆದುಕೊಂಡು ಹೋಗಲಿ ಎಂದು ಲೈಬ್ರೆರಿಯಲ್ಲಿ ನನ್ನ ಪುಸ್ತಕವನ್ನು ಅವನ ಪುಸ್ತಕದ ಹತ್ತಿರವೇ ಇಟ್ಟೆ, ಆದರೂ ಯಾರೂ ತೆಗೆದುಕೊಂಡು ಹೋಗಲಿಲ್ಲ ಎಂದು ಹೇಳುತ್ತಿದ್ದರು. ತಮಾಷೆಯಾಗಿ ಹೇಳಿದ ಆ ಮಾತು ನಿಜವೂ ಆಗಿತ್ತು. ಕೃಷ್ಣ ಒಳ್ಳೆಯ ಲೇಖಕ ಮಾತ್ರ ಅಲ್ಲ, ಜನಪ್ರಿಯನೂ ಆಗಿದ್ದ.

ಮುಂದೆ ಆತ ಕಾದಂಬರಿಗಳನ್ನು  ಬರೆಯಲು ಪ್ರಾರಂಭಿಸಿದ. ಅವನ ಕಾಡು, ಪರಸಂಗದ ಗೆಂಡೆತಿಮ್ಮ, ಗೀಜಗನ ಗೂಡು ಸಿನೆಮಾಗಳಾದವು. ಅವನಿಗೆ ಖ್ಯಾತಿ ಬಂತು. ಹಣ ಬಂತೇ? ಬಹುಶಃ ಇಲ್ಲ. ತೋಟ ಮಾಡಿದ. ಅದು ಫಲ ಬರುವಷ್ಟು ಬೆಳೆಯುವ ಹೊತ್ತಿಗೆ ಸತ್ತ. ಸಮೀಕ್ಷಕ ಪ್ರಕಟಿಸುವಾಗಲೂ ಅವನು ಶ್ರೀಮಂತನಾಗಿರಲಿಲ್ಲ. ತಂದೆಯನ್ನು ಚಿಕ್ಕಂದಿನಲ್ಲಿ ಕಳೆದುಕೊಂಡಿದ್ದ. ತಾಯಿ ಊರಿನಲ್ಲಿ ಇದ್ದರು. ಅವನು ಶಿವರಾತ್ರೀಶ್ವರ ಹಾಸ್ಟೆಲ್ಲಿನಲ್ಲಿ ಫ್ರೀ ಊಟ ಮಾಡುತ್ತಿದ್ದ. ಗೀತಾ ರಸ್ತೆಯಲ್ಲಿ ಸಂಪಿಗೆ ಮರದ ಕೆಳಗಿದ್ದ ಆ ರೂಮಿಗೆ ಹದಿನೈದು ರೂಪಾಯಿ ಬಾಡಿಗೆ. ಹಣ ಎಲ್ಲಿಂದ ತರುತ್ತಿದ್ದ? ನಾಳೆ ಕೊಡುತ್ತೇನೆಂದು ಎಲ್ಲೆಲ್ಲಿಂದಲೋ ತರುತ್ತಿದ್ದನೆಂದು ಕಾಣುತ್ತದೆ. ಸಾಕಷ್ಟು ಕಡೆ ಉದ್ದರಿಗಳಿರುತ್ತಿದ್ದವು.

 ಬಡಾಯಿ, ಸುಳ್ಳು, ಎಗ್ಗಿಲ್ಲದೆ ನಡೆದುಕೊಳ್ಳುವುದು  ಮೊದಲಾದವುಗಳ  ಮಧ್ಯೆ ಸಹಾ ತನ್ನ ಬರೆವಣಿಗೆಯ ಇತಿ ಮಿತಿಗಳ ಬಗ್ಗೆ  ಕೃಷ್ಣನಿಗೆ  ಗಾಢ ಎಚ್ಚರವಿತ್ತು. ಆದ್ದರಿಂದಲೇ ಅವನು ಬೆಳೆಯುತ್ತಿದ್ದ ಲೇಖಕ. ಕಾವ್ಯದಿಂದ ಕಾದಂಬರಿಗೆ ಬದಲಾಯಿಸಿಕೊಂಡದ್ದೇ ಹೆಚ್ಚು ಅನುಭವವನ್ನು ಕಾದಂಬರಿಯಲ್ಲಿ  ಹೇಳಬಹುದೆಂದು. ಅವನ ಕೊನೆಯ ಕೃತಿಗಳಾದ "ತಿಕ ಸುಟ್ಟ ದೇವರು" "ಅರಮನೆ"  ಮೊದಲಾದವುಗಳಲ್ಲಿ ಭಾಷೆಯ ಬಳಕೆ, ಅನುಭವ ಹೆಚ್ಚು ಮಾಗಿದ್ದು ಕಾಣುತ್ತೇವೆ. ಅವನು ಶ್ರೇಷ್ಠತೆಯ ಹತ್ತಿರ ಹತ್ತಿರ ತಲುಪಿದ್ದ.

ಅವನ ಒಂದು ಕವನದಲ್ಲಿ  ಕುದುರೆ ಖುರಪುಟದಗ್ನಿಕಿಡಿ ಹಾರುತಿದೆ ಎಂಬ ಪದಪುಂಜ ಬರುತ್ತದೆ. ಕುಮಾರವ್ಯಾಸನನ್ನು ಅನುಸರಿಸಿ ಬಳಸಿದ ಪದಪುಂಜ ಅದು. ಅವನು ಸತ್ತು ಸುಮಾರು ಇಪ್ಪತ್ತು ವರ್ಷಗಳ ಬಳಿಕ ಅವನ ಬರೆವಣಿಗೆಯ ವಾಚಿಕೆ ಪ್ರಕಟವಾಗುತ್ತಿದೆ. ಒಂದು ಇಡೀ ಜನಾಂಗವೇ ಅವನ ನಿಧನದ ಬಳಿಕ ಲೇಖಕರಾಗಿ ಓದುಗರಾಗಿ ರೂಪುಗೊಂಡಿದೆ.  ಇವರೆಲ್ಲಾ ಈಗ ಮತ್ತೆ "ಈ ಕೃಷ್ಣನ ಕಾಟ"ಕ್ಕೆ ತಲೆಯೊಡ್ಡುತ್ತಾರೆ ಎಂದರೆ, ಸವಾರ ಸವಾರಿಸಿ ಹೋದ ಮೇಲೂ ಕುದುರೆ ಖುರಪುಟದಗ್ನಿಕಿಡಿ ಹಾರುತಿದೆ ಎಂದು ಮತ್ತೆ ಹೇಳಬೇಕೆನ್ನಿಸುತ್ತದೆ. ಇನ್ನು ಇಪ್ಪತ್ತೈದು ವರ್ಷ ಕಳೆದ ಮೇಲೆ ಬರುವ ಹೊಸ ಜನಾಂಗವೂ ಇವನ ಬರೆವಣಿಗೆಯನ್ನು ಮತ್ತೆ ಹೊಸದಾಗಿ ಓದಬಹುದು. ಮತ್ತೆ ಅವನು ತನ್ನ ಬರೆವಣಿಗೆಯ ಮೂಲಕ ಸಾಧಿಸಿದ ಧೀಮಂತ  ಅಶ್ವಗತಿಯನ್ನು,  ಆ ಅಶ್ವಗತಿ ತನ್ನ ಖುರಪುಟದಿಂದ ಹಾರಿಸಿದ ಅಗ್ನಿಕಿಡಿಯನ್ನು ಕುತೂಹಲದಿಂದ ನೋಡಬಹುದು ಅನ್ನಿಸುತ್ತದೆ.

**********

ನಾನು ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಬರೆದೆ. ಅವು ಮತ್ತು ಹಿಂದಿನ ಬರೆವಣಿಗೆ ಸೇರಿ ಮುಂದಿನ ನಾಕೈದು ವರ್ಷಗಳಲ್ಲಿ ನನ್ನ ಎಲ್ಲಾ ಬರೆವಣಿಗೆಗಳು ಸುಮಾರು ಇಪ್ಪತ್ತು ಸಂಪುಟಗಳಲ್ಲಿ  ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ--ಇದರ  ಮೂಲಕ ಪ್ರಕಟವಾಗಲಿವೆ. ನಮ್ಮ ಪುಸ್ತಕಗಳು ನ್ಯೂ ಪ್ರೀಮಿಯರ್ ಬುಕ್ ಶಾಪ್, ಬನಶಂಕರಿ ಎರಡನೇ ಹಂತ, ಬಿಡಿಎ ಕಾಂಪ್ಲೆಕ್ಸ್ ಎದುರು, ಬೆಂಗಳೂರು 70 ಮತ್ತು ಅತ್ರಿ ಬುಕ್ ಸೆಂಟರ್, ಮಂಗಳೂರು-- ಇಲ್ಲಿ  ಸಿಗುತ್ತವೆ. ಇವಲ್ಲದೆ ನಮ್ಮ ಪ್ರಕಟಣೆಗಳನ್ನು ನೀವು ಈಗ ನೇರವಾಗಿ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ನಿಮಗೆ ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust, SB Account No.1600101008058, Canara Bank, Yenmur-574328, Sullia Taluk, Dakshina Kannada District, Karnataka; IFSC: CNRB0001600---ಇಲ್ಲಿಗೆ ಕಳಿಸಿ ನಿಮ್ಮ ವಿಳಾಸವನ್ನುbodhitrustk@gmail.comಗೆ ಇಮೇಲ್ ಮಾಡಿ ಅಥವಾ ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ ಇಲ್ಲಿಗೆ
ಪತ್ರ ಬರೆದು ತಿಳಿಸಿದರೆ ಪುಸ್ತಕಗಳನ್ನು ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ. ವಿದೇಶದಲ್ಲಿರುವವರು ಅಂಚೆವೆಚ್ಚ ಸೇರಿಸಿ ಕಳಿಸಿ.

ಬೋಧಿ ಟ್ರಸ್ಟ್ ಲಾಭ ಬೇಡ ನಷ್ಟ ಬೇಡ ಆಧಾರದ ಮೇಲೆ ನಡೆದುಕೊಂಡು ಹೋಗಬೇಕೆಂದು ಬಯಸುತ್ತಿರುವ ಸಂಸ್ಥೆ.


ಇವು ಸದ್ಯಕ್ಕೆ  ಮಾರಾಟಕ್ಕೆ ಲಭ್ಯವಿರುವ ಪುಸ್ತಕಗಳು. ಎಲ್ಲಾ ಪುಸ್ತಕಗಳ ಲೇಖಕ ನಾನು, ರಾಮಚಂದ್ರ ದೇವ


ಸಮಗ್ರ ನಾಟಕಗಳು. ಸಂಪುಟ 3. ಅಶ್ವತ್ಥಾಮ, ಹುಲಿಯ ಕಥೆ, ದಂಗೆ--ಈ ಮೂರು ನಾಟಕಗಳಿವೆ. ಬೆಲೆ ರೂ75.00

ಮುಚ್ಚು ಮತ್ತು ಇತರ ಲೇಖನಗಳು. ಬೆಲೆ ರೂ60.00


ಮಹಾಭಾರತ, ವಡ್ಡಾರಾಧನೆ, ಕೋಡಂಗಿಗಳು, ಮಾತಾಡುವ ಮರ ಕುರಿತ ಜಾನಪದ ಕತೆ ಹಾಗೂ ಪೈಂಟಿಂಗ್, ಅಡಿಗರ ಕಾವ್ಯ, ಶಿವರಾಮ ಕಾರಂತರ ಕಾದಂಬರಿಗಳು ಮೊದಲಾದ ವಿಷಯ ಕುರಿತ ಲೇಖನಗಳಿವೆ.

              ಸಮಗ್ರ ನಾಟಕಗಳು  ಸಂಪುಟ 2.
              ಪುಟ್ಟಿಯ ಪಯಣ, ಸುದರ್ಶನ--
             ಈ ಎರಡು ನಾಟಕಗಳಿವೆ.
              ಬೆಲೆ ರೂ60.00
ಹ್ಯಾಮ್ಲೆಟ್. ಶೇಕ್ಸ್ಪಿಯರ್ ಅನುವಾದ.
ಬೆಲೆ ರೂ 50.00
                           ಮಾತಾಡುವ ಮರ
                ಸಮಗ್ರ ಕಾವ್ಯ, 1964-2003
                              ಬೆಲೆ ರೂ100.00