(ಈ ಫೊಟೋ ನನ್ನ ತಂದೆ ಮತ್ತು ನನ್ನ ಮಗಳನ್ನು ತೋರಿಸುತ್ತದೆ. ಸುಮಾರು 1978ನೇ ಇಸವಿಯ ಫೊಟೋ. ದೆಹಲಿಯ ನನ್ನ ಮನೆಯಲ್ಲಿ. ಎರಡನೆಯ ಫೊಟೋ ಚೆನ್ನಯ್ಯನವರ ಕವನ ಸಂಗ್ರಹದ ಮುಖಚಿತ್ರ ಹಾಗೂ ಹಿಂಬದಿ. ಇದು ನವೆಂಬರ್ 1964ರಲ್ಲಿ ಲಹರಿ ಬುದ್ಧಿ ಪ್ರಚಾರ ಯೋಜನೆಯಿಂದ ಪ್ರಕಟವಾದ ಪುಸ್ತಕ. ಇದಕ್ಕೆ ರಾಜೀವ ತಾರಾನಾಥರ ಮುನ್ನುಡಿ ಇತ್ತು. ಇದರಲ್ಲಿ "ಚೆನ್ನಯ್ಯನವರ ಸೋಲುಗಳೂ ಆಸಕ್ತಿಯನ್ನು ಕೆರಳಿಸುತ್ತವೆ. ಏಕೆಂದರೆ, ಅವುಗಳು ಅವರ ಸಫಲತೆಗಳ ಅತಿರೇಕದಿಂದ ಉಂಟಾದಂಥವು" ಎಂಬಂಥಾ ವಾಕ್ಯಗಳಿವೆ. ಇಂದು ಈ ಬಗೆಯ ಸೂಕ್ಷ್ಮ ವ್ಯತ್ಯಾಸಗಳನ್ನು ಮಾಡಿ ಯಾರಾದರೂ ಬರೆದರೆ "ಗೊಂದಲಗೊಂಡಿದ್ದಾರೆ, ಕಂಫ್ಯೂಸ್ಡ್ ಮೈಂಡ್" ಎಂಬ ಹಣೆಪಟ್ಟಿ ನಿಶ್ಚಿತ.)
ಚೆನ್ನಯ್ಯನವರ ಕವನಗಳು ಈ ನಲುವತ್ತು ವರ್ಷಗಳಲ್ಲೇ ಹಳತಾಗಿವೆ ಅನ್ನಿಸುತ್ತದೆ. ಜಯದೇವ ಈಗಲೂ ಕಾವ್ಯಪ್ರೇಮಿಗಳನ್ನು ಆಕರ್ಷಿಸಲು ಅವನ ಕಾವ್ಯದ ಲಯ, ಪದಬಂಧ, ವಾತಾವರಣ ಸೃಷ್ಟಿ, ನಾಟಕೀಯತೆ ಕಾರಣ ಇರಬಹುದು.ಲಲಿತ ಲವಂಗ ಲತಾ ಪರಿಶೀಲನ ಕೋಮಲ ಮಲಯ ಸಮೀರೇ/ನಕುರು ನಿತಂಬಿನಿ ಗಮನ ವಿಳಂಬನ ಕೂಜಿತ ಕುಂಜ ಕುಟೀರೇ ಅಥವಾ ಚಂದನ ಚರ್ಚಿತ ನೀಲ ಕಲೇವರ ಪೀತ ವಸನ ಮಾಲಿ ಎಂಬಂಥಾ ಸಾಲುಗಳನ್ನು ಒಮ್ಮೆ ಓದಿದ ನಂತರ ಯಾರು ಮತ್ತೆ ಮತ್ತೆ ಮೆಲುಕು ಹಾಕದಿರಲು ಸಾಧ್ಯ? ಕನ್ನಡದಲ್ಲಿ ಅಡಿಗರು ಇದೇ ಬಗೆಯ ಲಯ ಮತ್ತು ವಾತಾವರಣ ಸೃಷ್ಟಿಗಾಗಿ ತಮ್ಮ "ಕೃಷ್ಣನ ಕೊಳಲು" ಪದ್ಯದಲ್ಲಿ ಪ್ರಯತ್ನಿಸಿದ್ದರು. ಶ್ಯಾಮತಮಾಲಚ್ಛಾಯೆ/ಮೈ ಚಾಚಿದೆ ಚಂದ್ರಿಕಾ ಮಾಯೆ/ಮಸುಕು ತಾರೆ ತಿಂಗಳಲ್ಲಿ ಬೇಯೆ/ಕಸಕು ಗಾಳಿ ಕಸಿವಿಸಿಗೆದೆ ಸೀಯೆ/ಸುತ್ತುವ ಮುತ್ತುವ ಎಲೆ ಸೆರಗೆತ್ತುವ/ಸಮೀರ ಸಂತತ ಹಾಯೆ/ತಾರೆ ತೀರದಲಿ ಮರಿ ಮುರಿ ಮೋಡ/ಬೆಳಕು ಚಿಮುಕಿನಲಿ ತೋಯೆ/ದಡಕದ ಕದಕೆ ಕೈ ಹಚ್ಚಿ ಯಮುನೆ ನಿಶ್ಶಬ್ದ ನಿಂತು ಕಾಯೆ/ಬೆಳ್ಳಿ ಮುಲಾಮನು ತೊಟ್ಟು ಮರವು ಗಿಡ ಬಳ್ಳಿ ಕುಣಿದು ತಲೆಯೊಲೆಯೆ/ದಿಗಂತದಾಚೆಗು ಸ್ವಪ್ನಮಾದಕ ಜ್ವಾಲೆ ಜಾಲ ಅಲೆಯೆ/ತುಟಿಯ ಕಚ್ಚಿ ಮಾಧವಿ ನಸು ಸುಯ್ಯೆ/ಕಣ್ಣು ಮಿಟುಕಿಸಿತು ತಾರೆ ಎಂಬಂಥಾ ಸಾಲುಗಳು ಜಯದೇವನ ಹತ್ತಿರ ಹತ್ತಿರ ಬರುವಂಥವು. ಜಯದೇವನ ಪ್ರಭಾವದಲ್ಲಿ ರೂಪುಗಂಡಂಥವೂ ಹೌದು.
ಕಾಮಿ ಸಂಗ್ರಹದ ನಂತರ ಚೆನ್ನಯ್ಯ ಆಮೆ ಎಂಬ ಕವನ ಸಂಗ್ರಹ, ಎಲ್ಲರಂಥವನಲ್ಲ ನನ ಗಂಡ, ಹುಯ್ಯೆಲವೊ ಡಂಗುರವೊ ಎಂಬ ಎರಡು ನಾಟಕಗಳು, ಒಂದು ವಿಮರ್ಶಾಸಂಗ್ರಹ ಪ್ರಕಟಿಸಿದರು. ಎಲ್ಲವೂ ಪರವಾ ಇಲ್ಲ ಎಂಬುದಕ್ಕಿಂತ ಹೆಚ್ಚಿನ ಮಟ್ಟ ಏರಲಿಲ್ಲ. ಕ್ರಮೇಣ ಅವರು ಬರೆಯುವುದನ್ನು ಕಮ್ಮಿ ಮಾಡಿದರು; ಹೆಚ್ಚು ಕಡಿಮೆ ನಿಲ್ಲಿಸಿದರು ಎಂದೇ ಹೇಳಬಹುದು. ಹೊಸತನ್ನು ಕಾಣುವ, ಹೊಸ ವಿಚಾರ ಆಸಕ್ತಿಗಳ ಮೂಲಕ ಮತ್ತೆ ಮತ್ತೆ ತನ್ನನ್ನು ನವೀಕರಿಸಿಕೊಳ್ಳುವ ಶಕ್ತಿಯ ಅಭಾವ ಅವರಲ್ಲಿ ಮತ್ತೆ ಮತ್ತೆ ಕಾಣುತ್ತದೆ. ನವನವೋನ್ಮೇಷಶಾಲಿನೀ ಪ್ರತಿಭಾ ಎಂಬ ಆನಂದವರ್ಧನನ ಮಾತನ್ನು ಒಪ್ಪಿಕೊಂಡರೆ, ದೊಡ್ಡ ಮಟ್ಟದ ಪ್ರತಿಭೆಯ ಅಭಾವ ಕಾಣುತ್ತದೆ ಎಂದು ಹೇಳಬೇಕಾಗುತ್ತದೆ. ತಾಂತ್ರಿಕ ಕೌಶಲ್ಯವನ್ನು ದೊಡ್ಡ ಮಟ್ಟದಲ್ಲಿ ಸಾಧಿಸಿಕೊಳ್ಳುವ ಮೊದಲೇ, ತನ್ನನ್ನು ಕಾಡುವ ಅನುಭವ ವಿಚಾರಗಳ ಶೋಧವನ್ನು ಆಳವಾಗಿ ಪ್ರಾರಂಭಿಸುವ ಮೊದಲೇ ಅವರು ಬರೆವಣಿಗೆಯಲ್ಲಿ ಆಸಕ್ತಿ ಕಳೆದುಕೊಂಡರು ಅನ್ನಿಸುತ್ತದೆ. ಆದರೂ ಅವರ ಕವನಗಳು ಪ್ರಭಾವ ಬೀರಿವೆ--ಮುಖ್ಯವಾಗಿ ಕೃಷ್ಣ ಆಲನಹಳ್ಳಿಯ ಮಣ್ಣಿನ ಹಾಡು ಸಂಗ್ರಹದ ಕವನಗಳ ಮೇಲೆ. ಹಾದರ--ಅಥವಾ, ಮನೆ ಹೊರಗೆ ಪರಪುರುಷನ ಜೊತೆ ಗೃಹಿಣಿಯೊಬ್ಬಳು ನಡೆಸುವ ಸಂಬಂಧ--ಸಂಪ್ರದಾಯದ ವಿರುದ್ಧ, ಪಾತಿವ್ರತ್ಯದ ಹೆಸರಿನಲ್ಲಿ ನಡೆಯುವ ಬಂಧನದ ವಿರುದ್ಧ ನಡೆಸುವ ಬಂಡಾಯ ಎಂಬುದು ಆಲನಹಳ್ಳಿಯ ಈ ಸಂಗ್ರಹದ ಕೆಲವು ಕವನಗಳಲ್ಲಿ ಕಾಣುವ ಆಶಯವೂ ಆಗಿದೆ. ಇದೂ ಸರಳ ದೃಷ್ಟಿಕೋನವೇ. ಸಂಸಾರದ ಒಳಗೇ ಅನೇಕ ಬಂಡಾಯದ ಮಾರ್ಗಗಳನ್ನು ಗೃಹಿಣಿಯೊಬ್ಬಳು ಹುಡುಕಿಕೊಳ್ಳುವುದೇ ಹೆಚ್ಚು. ಕೃಷ್ಣನಿಗೂ ಬಹುಶಃ ಮುಂದೆ ಹಾಗೆ ಅನ್ನಿಸಿರಬಹುದು--ತನ್ನ ಕಾದಂಬರಿಗಳಲ್ಲಿ ಹೆಚ್ಚು ವಿಸ್ತಾರವಾದ ಅನುಭವ ಶೋಧಕ್ಕೆ ಪ್ರಯತ್ನಿಸಿದ್ದ. ಆದರೆ ಅವನಿಗೆ ತನ್ನ ಕೆರಿಯರಿನ ಪ್ರಾರಂಭದ ವರ್ಷಗಳಲ್ಲಿ ಚೆನ್ನಯ್ಯನವರ ಬಗ್ಗೆ ವಿಶೇಷ ಅಭಿಮಾನ ಇತ್ತು. ಆತ ಮಹಾರಾಜಾ ಕಾಲೇಜಿನಲ್ಲಿ ಅವರ ವಿದ್ಯಾರ್ಥಿಯಾಗಿದ್ದದ್ದು ಮಾತ್ರವಲ್ಲ--ತನ್ನ ಪತ್ರಿಕೆ ಸಮೀಕ್ಷಕಕ್ಕೆ ಅವರನ್ನು ಸಂಪಾದಕ ಸಲಹೆಗಾರರನ್ನಾಗಿಯೂ ನೇಮಿಸಿಕೊಂಡಿದ್ದ.
(ಮುಂದುವರಿಯುವುದು)
********************************************
ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ ಪ್ರಕಟಿಸಿದ ಈ ಪುಸ್ತಕಗಳು ಮಾರಾಟಕ್ಕೆ ಸಿಗುತ್ತವೆ. ನಿಮಗೆ ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust, SB Account no. 1600101008058, Canara Bank, Yenmur 574328, Dakshina Knnada District, Karnataka, IFSC CNRB0001600--ಇಲ್ಲಿಗೆ ಜಮೆ ಮಾಡಿ ಬೋಧಿ ಟ್ರಸ್ಟ್ ವಿಳಾಸಕ್ಕೆ ಅಂಚೆ ಮೂಲಕ ಅಥವಾ bodhitrustk@gmail.comಗೆ ಇಮೇಲ್ ಮೂಲಕ ತಿಳಿಸಿದರೆ ಪುಸ್ತಕಗಳನ್ನು ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ.
1. ಸಮಗ್ರ ನಾಟಕಗಳು, ಸಂಪುಟ 2. ಬೆಲೆ ರೂ60.00
2. ಸಮಗ್ರ ನಾಟಕಗಳು, ಸಂಪುಟ 3. ಬೆಲೆ ರೂ75.00
3. ಮುಚ್ಚು ಮತ್ತು ಇತರ ಲೇಖನಗಳು. ರೂ60.00
4. ಹ್ಯಾಮ್ಲೆಟ್. ಶೆಕ್ಸ್ಪಿಯರ್ ಅನುವಾದ. ರೂ50.00
5. ಮಾತಾಡುವ ಮರ, ಸಮಗ್ರ ಕಾವ್ಯ, 1964-2003. ರೂ100.00
ಎಲ್ಲಾ ಪುಸ್ತಕಗಳ ಲೇಖಕ ನಾನು, ರಾಮಚಂದ್ರ ದೇವ.
No comments:
Post a Comment