ನಾನು ನೋಡಿದ ಮತ್ತೊಂದು ಪರಿಣಾಮಕಾರಿ ನಾಟಕವೆಂದರೆ ಟಿ. ಎನ್. ನರಸಿಂಹನ್ ನಿರ್ದೇಶಿಸಿದ ಬಾದಲ್ ಸರ್ಕಾರ ಅವರ ಏವಂ ಇಂದ್ರಜಿತ್. ಇದೂ ಸುಮಾರು 1968 ಅಥವಾ 1969ನೇ ಇಸವಿಯ ಹೊತ್ತಿಗೆ. ಇದನ್ನು ಆಡಿಸಿದಾಗ ನರಸಿಂಹನ್ ಮೈಸೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಪಾತ್ರ ವಹಿಸಿದ್ದವರು ಸಹಾ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ನರಸಿಂಹನ್ ಸ್ನೇಹಿತರು. ಆಡಿದ್ದು ಗಂಗೋತ್ರಿಯ ಹ್ಯುಮೇನಿಟೀಸ್ ಸಭಾಂಗಣದಲ್ಲಿ. ಸಾದಾ ದಿನ ನಿತ್ಯದ ವೇಷಭೂಷಣ. ನಮ್ಮ ಜೊತೆ ಸಭಾಂಗಣದಲ್ಲಿ ನಮ್ಮ ಹಾಗೇ ಬಟ್ಟೆ ತೊಟ್ಟು ಮಾತಾಡುತ್ತಾ ಕೂತಿದ್ದವರೇ ಮೂರನೆಯ ಬೆಲ್ ಆಗುತ್ತಲೇ ರಂಗದ ಮೇಲೆ ಹೋಗಿ ನಾಟಕ ಆಡಲು ಸುರು ಮಾಡಿಬಿಟ್ಟರು. ಲೈಟಿಗೆಂದು ನಟರು ವಾಸಿಸುತ್ತಿದ್ದ ಹಾಸ್ಟೆಲ್ಲಿನಿಂದ ತಂದ ಐದಾರು ಟೇಬಲ್ ಲ್ಯಾಂಪುಗಳನ್ನು ಅಳವಡಿಸಿದ್ದರು. ಲೈಟ್ ಮ್ಯಾನ್ ಅಂತ ಪ್ರತ್ಯೇಕ ಇಲ್ಲ. ನಟ ನಟಿಯರೇ ತಮ್ಮ ನಟನೆಯ ಸಂದರ್ಭದಲ್ಲೇ ಲೈಟ್ ಹಾಕಿ ಕೂತುಕೊಳ್ಳುತ್ತಾರೆ ಅಥವಾ ಆರಿಸಿ ನಿರ್ಗಮಿಸುತ್ತಾರೆ. ನಟರ ಶಕ್ತಿ ಇದ್ದದ್ದು ಧ್ವನಿಯ ಏರಿಳಿತಗಳಲ್ಲಿ. ಅದೂ, ಇಂದ್ರಜಿತ್ ಪಾತ್ರ ಮಾಡಿದ್ದ ಆನಂದನ--ಇವ ನರಸಿಂಹನ್ ತಮ್ಮ--ಧ್ವನಿಯ ಏರಿಳಿತಗಳು, ಅವು ಉಂಟು ಮಾಡುತ್ತಿದ್ದ ಪರಿಣಾಮ ನನ್ನ ಸ್ಮರಣೀಯ ರಂಗಾನುಭವಗಳಲ್ಲಿ ಒಂದು. ಆ ರೀತಿ ಧ್ವನಿಯ ಮೇಲೆ ಹಿಡಿತವಿರುವ ನಟರನ್ನು ನಾನು ಹೆಚ್ಚಿಗೆ ನೋಡಿಲ್ಲ. ಧ್ವನಿಯ ಏರಿಳಿತಗಳಿಂದಲೇ ಅವರು ಭಾವನೆಗಳನ್ನು ವ್ಯಕ್ತಪಡಿಸಿದ್ದರು.
ಹೀಗೆ ಬರೀ ಧ್ವನಿಯ ಏರಿಳಿತಗಳಿಂದಲೇ ರಂಗಾನುಭವ ಉಂಟುಮಾಡಿದ ಇನ್ನೊಂದು ನಾಟಕ ನಾನು ನೋಡಿದ್ದು ದೆಹಲಿಯಲ್ಲಿ. ಅದು ಸಾಮುವೆಲ್ ಬೆಕೆಟ್ ನ ಹೆಪ್ಪಿ ಡೇಸ್ ನ ಹಿಂದಿ ಅವತರಣಿಕೆಯಾಗಿತ್ತು. ಮೊದಲ ಅಂಕದಲ್ಲಿ ಮುಖ್ಯ ಪಾತ್ರವಾದ ವಿನ್ನಿ ಸೊಂಟದ ವರೆಗೆ ಹುಗಿದು ಹೋಗಿದ್ದಾಳೆ. ಎರಡನೆಯ ಅಂಕದಲ್ಲಿ ಕತ್ತಿನ ವರೆಗೆ. ಹೀಗಾಗಿ ಹೆಚ್ಚಿನ ಅಭಿನಯ, ಕ್ರಿಯೆ ಸಾಧ್ಯವಿಲ್ಲ. ಸಂಪೂರ್ಣವಾಗಿ ಮನಸ್ಸು ಬಂದಂತೆ ಬಳಸಲು ಅವಳಿಗೆ ನಾಟಕದುದ್ದಕ್ಕೆ ಸಿಕ್ಕುವುದು ಧ್ವನಿ ಮಾತ್ರ. ಮೊದಲ ಅಂಕದಲ್ಲಿ ಸೊಂಟದ ಮೇಲ್ಭಾಗ--ಕೈ ಕತ್ತು ಮುಖ--ಎರಡನೆಯ ಅಂಕದಲ್ಲಿ ಕಣ್ಣು--ಧ್ವನಿಗೆ ಪೂರಕವಾಗಿ ಒದಗುತ್ತವೆ. ಆದರೆ ನಾಟಕವನ್ನು ಪ್ರೇಕ್ಷಕರಿಗೆ ತಲುಪಿಸಲು ನಟಿಗಿದ್ದ ಪ್ರಮುಖ ಸಾಧನವೆಂದರೆ ಧ್ವನಿಯೇ. ಅದೊಂದನ್ನೇ ಬಳಸಿ ಆ ನಟಿ ಎರಡು ಗಂಟೆ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದಳು. ಫ್ಲೇಟ್ ಲೈಟ್. ಬೆಳಗಾದ ನಂತರ ಏರುತ್ತಿರುವ ಸೂರ್ಯನ ಪ್ರಖರ ಬೆಳಕು ಮತ್ತು ಬಿಸಿಲಿನಲ್ಲಿ, ಮೊದಲು ಸೊಂಟದ ವರೆಗೆ ಮತ್ತು ಆನಂತರ ಕತ್ತಿನ ವರೆಗೆ ಮಣ್ಣಲ್ಲಿ ಹುಗಿದುಹೋಗಿರುವ ಅವಳಿಗೆ ಸಾಧ್ಯವಿರುವುದು ಸಹಚರ ತನ್ನನ್ನು ಕೊಲ್ಲುತ್ತಾನೆಯೇ ಎಂದು ನಿರೀಕ್ಷೆಯಲ್ಲಿ ಕಾಯುವುದು ಮಾತ್ರ.
ನಾನು ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದೆ--ಖುಷಿ ದಿನಗಳು ಎಂಬ ಹೆಸರಿನಲ್ಲಿ. ರಂಗಾಯಣದವರು ಇದನ್ನು ಆಡಿದ್ದರು. ನಂದಿನಿ ಮತ್ತು ಬಿ. ಎನ್. ಶಶಿಕಲಾ ವಿನ್ನಿ ಪಾತ್ರ ಮಾಡಿದ್ದರಂತೆ. ನನಗೆ ಅದನ್ನು ನೋಡಲು ಅನಿವಾರ್ಯ ಕಾರಣಗಳಿಂದ ಆಗಲಿಲ್ಲ. ಆದರೆ ಒಂದೆರಡು ದಿನ ಕಳೆದ ಮೇಲೆ ಹಾಗೇ ಉಳಿಸಿಕೊಂಡಿದ್ದ ಸೆಟ್ಟಿಂಗ್ ನೋಡಿದೆ. ಗುಹೆಯ ಹಾಗೆ ಮಾಡಿ ಸುತ್ತ ಎಲುಬು ಅಸ್ಥಿಪಂಜರ ಮೊದಲಾದ ಸಾವಿನ ವಿವಿಧ ವಿವರಗಳನ್ನು ಪೇರಿಸಿದ್ದರು. ಅಂಥಾ ರೂಪಕಶಕ್ತಿಯ ಆ ಮಹಾನ್ ನಾಟಕಕ್ಕೆ ಹಾಗೆ ಅಷ್ಟೊಂದು ವಾಚ್ಯವಾದ ಸೆಟ್ಟಿಂಗ್ ನನಗೆ ಇಷ್ಟವಾಗಲಿಲ್ಲ. ಹವ್ಯಾಸಿ ರಂಗಭೂಮಿಯಲ್ಲಿ ವಾಚಿಕಕ್ಕೆ ಹೆಚ್ಚು ಪ್ರಾಮುಖ್ಯ ಕೊಡುವ ಸಂಪ್ರದಾಯ ಹೊರಟು ಹೋಗಿದೆ ಅನ್ನಿಸುತ್ತದೆ. ಬೆಕೆಟ್ ನ ಈ ನಾಟಕ ಮಾತನ್ನೇ ಆಧರಿಸಿದ್ದು. ಇಂಥದ್ದೇ ಇನ್ನೊಂದು ನಾಟಕ ಈಸ್ಕೈಲಸ್ ನ ಪ್ರೊಮಿಥಿಯಸ್ ಬೌಂಡ್. ಅಲ್ಲೂ ಕ್ರಿಯೆ ಇಲ್ಲ. ಯಾಕೆಂದರೆ ನಾಟಕದ ಪ್ರಾರಂಭದಲ್ಲೇ ಸೂಯಿಸ್ ದೇವರ ಆಣತಿಯಂತೆ ಪ್ರೊಮಿಥಿಯಸ್ಸನ್ನು ಕಟ್ಟಿ ಬಿಗಿಯಲಾಗಿದೆ. ಇನ್ನು ಉಳಿದಿರುವುದು ಮಾತು ಮಾತು ಮಾತು. ಮಾತಿನಿಂದಲೇ ಒಂದು ಜಗದ್ವಂದ್ಯ ನಾಟಕವನ್ನು ಆ ನಾಟಕಕಾರ ಕಟ್ಟಿಬಿಡುತ್ತಾನೆ. ಅದನ್ನು ಬರೆದವ ಈಸ್ಕೈಲಸ್ ಇರಲಾರ, ಅವನ ನಂತರದವರು ಯಾರೋ ಬರೆದಿರಬೇಕು ಎಂಬ ಥಿಯರಿ ಇರುವುದರಿಂದ ನಾಟಕಕಾರ ಎಂದು ಸೂಚಿಸಿದ್ದೇನೆ. ಆದರೆ ನಾಟಕ ಎಂದರೇ ಕ್ರಿಯೆ ಎಂಬಂತೆ ವರ್ತಿಸುವ ಕನ್ನಡ ರಂಗಭೂಮಿಗೆ ಪ್ರೊಮಿಥಿಯಸ್ ಬೌಂಡ್ ಒಂದು ಒಳ್ಳೆಯ ಏಂಟಿಡೋಟು. ಹೆಪ್ಪಿ ಡೇಸ್ ಗ್ರೀಕ್ ನಾಟಕದ ಆ ಪರಂಪರೆಯನ್ನು ಮುಂದುವರಿಸುವ ಕೃತಿ. ನನಗೆ ತಿಳಿದಂತೆ ಇಡೀ ಜಗತ್ತಿನ ನಾಟಕ ರಾಶಿಯಲ್ಲಿ ಕ್ರಿಯೆಯನ್ನು ಸಂಪೂರ್ಣ ಬಿಟ್ಟುಕೊಟ್ಟು--ಚಲನೆಯನ್ನೇ ನಿಶ್ಚಲಗೊಳಿಸಿ--ಬರೆದ ನಾಟಕಗಳು ಇವು ಎರಡೇ.
**********
ಬೋಧಿ ಟ್ರಸ್ಟ್ ನ ಈ ಕೆಳಗಿನ ಪುಸ್ತಕಗಳು ಮಾರಾಟಕ್ಕೆ ಸಿಗುತ್ತವೆ. ನಿಮಗೆ ಬೇಕಾದ ಪುಸ್ತಕದ ಮೊಬಲಗನ್ನು Bodhi Trust, SB Account no.1600101008058, Canara Bank, Yenmur 574328, Dakshina Kannada District, IFSC CNRB0001600--ಇಲ್ಲಿಗೆ ಜಮೆ ಮಾಡಿ ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ--ಇಲ್ಲಿಗೆ ಪತ್ರ ಬರೆದು ಅಥವಾ bodhitrustk@gmail.comಗೆ ಇಮೇಲ್ ಮಾಡಿ ತಿಳಿಸಿದರೆ ಪುಸ್ತಕ ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ.
ಲಭ್ಯವಿರುವ ಪುಸ್ತಕಗಳು:
1. ಸಮಗ್ರ ನಾಟಕಗಳು, ಸಂಪುಟ 2 ರೂ60.00
2. ಸಮಗ್ರ ನಾಟಕಗಳು, ಸಂಪುಟ 3. ರೂ75.00
3. ಮಾತಾಡುವ ಮರ, ಸಮಗ್ರ ಕಾವ್ಯ, 1964-2003. ರೂ100.00
4. ಮುಚ್ಚು ಮತ್ತು ಇತರ ಲೇಖನಗಳು. ರೂ60.00
5. ಹ್ಯಾಮ್ಲೆಟ್. ಶೇಕ್ಸಪಿಯರ್ ಅನುವಾದ. ರೂ50.00
No comments:
Post a Comment