(ಮೊದಲ ಚಿತ್ರದಲ್ಲಿರುವುದು ನನ್ನ ತಂದೆ ದೇವ ರಾಘವೇಂದ್ರಯ್ಯ, ತಾಯಿ ದೇವ ಹೊನ್ನಮ್ಮ, ಅಜ್ಜಿ--ಅಮ್ಮಮ್ಮ--ಪೈಲೂರು ಕಾವೇರಮ್ಮ. ನಿಂತಿರುವ ಹುಡುಗ ನಾನು. ಅಮ್ಮ ಎತ್ತಿಕೊಂಡಿರುವುದು ನನ್ನ ತಮ್ಮ ಸತ್ಯನಾರಾಯಣ ಮೂರ್ತಿಯನ್ನು. ನನಗೆ ಆಗ ಸುಮಾರು ಮೂರೂವರೆಯಿಂದ ನಾಲ್ಕು ವರ್ಷ. ಈ ಫೊಟೋ ತೆಗೆದವರು ಗೋಪಾಲಕೃಷ್ಣ ಗೋಳ್ತಜೆ ಎಂಬ ಕಲ್ಮಡ್ಕ ಗ್ರಾಮ ವಾಸಿ. ಈಗ ದಿವಂಗತ. ಇದು ಸುಮಾರು 1952ರ ಫೊಟೋ. ಇನ್ನೊಂದು ಪೂರ್ಣಚಂದ್ರ ತೇಜಸ್ವಿ ಮತ್ತು ಬಿ. ಎನ್. ಶ್ರೀರಾಮ ಪ್ರಕಟಿಸುತ್ತಿದ್ದ ಕಾವ್ಯಪತ್ರಿಕೆ ಲಹರಿಯ ರಕ್ಷಾಪುಟ.)
ಎಚ್. ಎಂ.ಚೆನ್ನಯ್ಯನವರ ಕಾಮಿ ಎಂದರೆ ಬೆಕ್ಕಿನ ಹೆಸರೂ ಹೌದು ಕಾಮುಕ ಎಂದೂ ಹೌದು. ಗೃಹಣಿಯೊಬ್ಬಳಿಗೆ ವಿವಾಹಬಾಹಿರ ಪ್ರಣಯದ ಬಗ್ಗೆ, ಅಲ್ಲಿ ಕಾಮತೃಪ್ತಿಯನ್ನು ಪಡೆಯುವುದರ ಬಗ್ಗೆ ಇರುವ ಸಂಭ್ರಮ ಸಹಜ ಎಂಬುದು ಚೆನ್ನಯ್ಯನವರ ಈ ಕವನಗಳ ನಿಲುವು. ಪ್ರಕಟವಾದ ಸುರುವಿನಲ್ಲಿ ಇದಕ್ಕೆ ಉತ್ಸಾಹದ ಸ್ವಾಗತ ಸಿಕ್ಕಿತ್ತು. ಅದರ ಬಗ್ಗೆ ಆಗ ಯುವ ಲೇಖಕರಲ್ಲಿ ಅಗ್ರಗಣ್ಯರೆಂದು ಹೆಸರು ಮಾಡಿದ್ದ ಅನಂತಮೂರ್ತಿ ಮತ್ತು ಲಂಕೇಶ್ ಲೇಖನ ಬರೆದರು. ಅವು ಶ್ರೀಕೃಷ್ಣ ಆಲನಹಳ್ಳಿಯ ಸಂಪಾದಕತ್ವದ ಸಮೀಕ್ಷಕ ಹಾಗೂ ಬಾಕಿನರ ಸಂಪಾದಕತ್ವದ ಕವಿತಾ ತ್ರೈಮಾಸಿಕಗಳಲ್ಲಿ ಪ್ರಕಟವಾಗಿದ್ದವು.ಅಡಿಗರ ಸಾಕ್ಷಿಯ ಪ್ರಾಯೋಗಿಕ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಕೆಲವು ಕವನಗಳ ಮೂಲಕ ಅವರು ಹುಟ್ಟಿಸಿದ್ದ ನಿರೀಕ್ಷೆ ಈ ಸಂಕಲನದ ಮೂಲಕ ನಿಜವಾಗಿದೆ ಎಂಬ ಭಾವನೆ ಹುಟ್ಟಿತ್ತು. (ಸಾಕ್ಷಿಯಲ್ಲಿ ಅವರ ಹೆಸರು ಎಸ್. ಚೆನ್ನಯ್ಯ ಎಂದು ಪ್ರಕಟವಾಗಿತ್ತು. ಆಗ ಮೈಸೂರಿನಲ್ಲಿ ಸಾಹುಕಾರ ಚೆನ್ನಯ್ಯ ಎಂಬ ಹೆಸರಿನ ಒಬ್ಬರು ರಾಜಕಾರಣಿ ಇದ್ದರು. ಅಡಿಗರು ನಾನೇ ಅವ ಎಂದು ತಿಳಿದುಕೊಂಡಿರಬಹುದು ಎಂದು ಕವಿ ಚೆನ್ನಯ್ಯ ಜೋಕ್ ಮಾಡುತ್ತಿದ್ದರು. ಆದರೆ ಆ ಸಾಧ್ಯತೆ ಕಮ್ಮಿ. ಅಡಿಗರಿಗೆ ರಾಜಕಾರಣಿಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಎಸ್ ಎಂದು ಇನಿಷಿಯಲ್ ಬಿದ್ದದ್ದು ಪರಮೋಷದಿಂದ ಇರಬೇಕು. ಅಲ್ಲದೆ ಸಾಕ್ಷಿಯ ಈ ಸಂಚಿಕೆಯ ಪ್ರೂಫ್ ನೋಡಲು ನಾನು ಅಡಿಗರಿಗೆ ಸಹಾಯ ಮಾಡಿದೆ ಎಂದು ಸುಮತೀಂದ್ರ ನಾಡಿಗರು ಬರೆದುಕೊಂಡಿದ್ದಾರೆ. ಅವರಿಂದಾದ ತಪ್ಪೂ ಇರಬಹುದು.)
ಇಂದು ಕಾಮಿಯ ಈ ಕವನಗಳು ತುಂಬಾ ಸರಳ ಅನ್ನಿಸುತ್ತವೆ. ಮೊದಲನೆಯದಾಗಿ ಕದ್ದು ಮುಚ್ಚಿ ಕಾಮತೃಪ್ತಿ ಪಡೆಯಬೇಕಾದ ಗೃಹಿಣಿಯ ಚಿತ್ರವೇ ಬದಲಾಗಿದೆ. ಚೆನ್ನಯ್ಯ ತಮ್ಮ ಕವನಗಳಲ್ಲಿ ಚಿತ್ರಿಸಿದ ಮಧ್ಯಮ ವರ್ಗದ ಆ ಗೃಹಿಣಿ ಈಗ ಮನೆಯಲ್ಲಿಯೇ ಇರುವವಳಾಗಿರದೆ ಹೊರಗೆ ಹೋಗಿ ಗಂಡಸಿಗೆ ಸಮಾನವಾಗಿ ದುಡಿದು ತರುವವಳಾಗಿದ್ದಾಳೆ. ಕಾಮತೃಪ್ತಿಯನ್ನು ಸಂಸಾರದ ಅಂಗವಾಗಿ ಗಂಡನಿಂದ ಪಡೆಯುತ್ತಾಳೆ; ಅದು ಸಾಧ್ಯವಾಗದಾಗ ಸಂಸಾರ ಬಿಟ್ಟು ಹೊರನಡೆಯುತ್ತಾಳೆ. ಮಧ್ಯಮವರ್ಗದ ಸಮಾಜವೂ ಇದನ್ನು ಹೆಚ್ಚುಹೆಚ್ಚಾಗಿ ಒಪ್ಪಿಕೊಳ್ಳುತ್ತಿದೆ. ಎರಡನೆಯದಾಗಿ, ಹೀಗೆ ಕದ್ದು ಮುಚ್ಚಿ ವ್ಯವಹಾರ ನಡೆಸುವುದು ಗಂಡಿಗೂ ಹೆಣ್ಣಿಗೂ ಕೂಡಿಯೇ ಅಪಮಾನಕರ ಎಂಬ ಅಂಶವನ್ನೇ ಚೆನ್ನಯ್ಯನವರ ಕಾವ್ಯ ಪರಿಗಣಿಸುವುದಿಲ್ಲ. ಮೂರನೆಯದಾಗಿ, ಕಾಮಿಯ ಕವನಗಳು ಗಂಡು ಹೆಣ್ಣಿನ ಸಂಬಂಧದ ಬಗ್ಗೆ, ಕಾಮಕ್ಕೆ ಜೀವನದಲ್ಲಿ ಇರುವ ಮತ್ತು ಇರಬೇಕಾದ ಅನಿವಾರ್ಯ ಪ್ರಾಮುಖ್ಯತೆಯ ಬಗ್ಗೆ ಇವೆ. ಇದೇ ಗಂಡು ಹೆಣ್ಣು ಸಂಬಂಧದ ಬಗ್ಗೆ ಬರೆದಿರುವ ಅನಂತಮೂರ್ತಿ ಕತೆಗಳು, ಸಂಸ್ಕಾರ ಕಾದಂಬರಿ ಬೇರೆ ಬೇರೆ ಸಾಮಾಜಿಕ, ತಾತ್ವಿಕ ಆಯಾಮಗಳನ್ನು ಪಡೆಯುತ್ತವೆ. ಹಾದರದ ಕತೆಯೆಂದೂ ಪರಿಗಣಿಸಬಹುದಾದ ಟಾಲ್ಸ್ಟಾಯ್ನ ಅನ್ನಾ ಕೆರೆನಿನಾದ ಅನುಭವ ವಿಸ್ತಾರ ಆಳಗಳ ಮುಂದೆ ಇವು ಏನೇನೂ ಅಲ್ಲ. ಚೆನ್ನಯ್ಯನವರ ಕವನಗಳು ಪ್ರಕಟವಾದ ಅರುವತ್ತರ ದಶಕದಲ್ಲಿ ಮೈಸೂರಿನ--ಮತ್ತು ಒಟ್ಟು ಕನ್ನಡದ--ಸಾಹಿತ್ಯಿಕ ವಲಯದಲ್ಲಿ ವಿಸ್ತಾರವಾಗಿ ಚರ್ಚೆಯಾಗುತ್ತಿದ್ದ ಡಿ. ಎಚ್. ಲಾರೆನ್ಸಿನ ಕಾಮದ ಕುರಿತ ದೃಷ್ಟಿಕೋನವೂ ಸಂಕೀರ್ಣವಾದದ್ದು. ಔದ್ಯೋಗೀಕರಣದಿಂದ, ಪೊಳ್ಳು ಪ್ರತಿಷ್ಠೆಯ ಕಾರಣದಿಂದ ಜಡಗೊಂಡ ಜೀವಿಗಳಿಗೆ ಚೈತನ್ಯ ಕೊಡುವ ಅನುಭವವಾಗಿ ಕಾಮ ಅವನಲ್ಲಿ ಕಾಣಿಸಿಕೊಳ್ಳುತ್ತದೆ. ಜೀವಚೈತನ್ಯ ಕೊಡದ, ಆರೋಗ್ಯಕರವಲ್ಲದ ವಿಕೃತ ಕಾಮವನ್ನು ಈ ಕಾರಣಕ್ಕಾಗಿಯೇ ಅವನು ಖಂಡಿಸುತ್ತಾನೆ. ಉದಾಹರಣೆಗೆ ಅವನ "ಟಿಕೆಟ್ ಪ್ಲೀಸ್" ಎಂಬ--ಅವನ ಸಾಹಿತ್ಯಿಕ ಜೀವನದ ಮೊದಲ ವರ್ಷಗಳಲ್ಲಿ ಬರೆದ--ಕತೆ ನೋಡಬಹುದು. ಅಲ್ಲಿ ವಿಷಯಲಂಪಟನಾಗಿ ಹುಡುಗಿಯರ ಮೇಲೆ ಆಸಕ್ತಿ ತೋರಿಸುವ ಒಬ್ಬ ಗಂಡಸು ಮತ್ತು ತಾನು ಸಂಬಂಧ ಹೊಂದಿದವನ ಇಡೀ ವ್ಯಕ್ತಿತ್ವವನ್ನೇ ಪ್ರೀತಿಸಬಯಸುವ ಹುಡುಗಿ--ಇವರಿಬ್ಬರ ಮಧ್ಯೆ ಕಾಂಟ್ರಾಸ್ಟ್ ಇದೆ. ಕೊನೆಗೆ ತನ್ನ ವಿಷಯಲಂಪಟತೆಯ ಕಾರಣದಿಂದಾಗಿ ಆತ ಹುಡುಗಿಯರಿಂದ ಅಪಮಾನ ಅನುಭವಿಸಬೇಕಾಗುತ್ತದೆ. ಅಂತಿಮವಾಗಿ ಗಂಡು ಹೆಣ್ಣಿನ ಮಧ್ಯೆ ಉಳಿಯುವುದು ಪ್ರೀತಿಯ ಬದಲು ಕಹಿ ಭಾವನೆ ಮಾತ್ರ. ವಿಕೃತ ಕಾಮ ಅಂತಿಮವಾಗಿ ಎಲ್ಲಾ ಹೆಂಗಸರಿಂದ, ಅರ್ಥಪೂರ್ಣ ಸಂಬಂಧಗಳಿಂದ ಆ ಗಂಡುಸನ್ನು ದೂರ ಮಾಡಿದೆ. ಆದ್ದರಿಂದಲೇ ಲಾರೆನ್ಸ್ ಕಾಮದ ಬಗ್ಗೆ ಮಾತ್ರ ಬರೆದ ಎನ್ನುವುದು ಸರಿಯಲ್ಲ. ಯಾವುದು ಅರ್ಥಪೂರ್ಣ ಜೀವನ, ಯಾಂತ್ರಿಕತೆಯ ಮಧ್ಯೆ ಜೀವಚೈತನ್ಯ ಉಳಿಸಿಕೊಳ್ಳುವುದು ಹೇಗೆ ಎನ್ನುವುದು ಅವನ ಕಾಳಜಿಯಾಗಿತ್ತು. ಅರ್ಥಪೂರ್ಣ ಗಂಡು ಹೆಣ್ಣಿನ ಸಂಬಂಧ, ಅದಕ್ಕೆ ಅನುಕೂಲವಾಗಿ ಒದಗಿ ಬರುವ ಕಾಮ ಹೀಗೆ ಜೀವಚೈತನ್ಯ ಉಳಿಸಿಕೊಳ್ಳುವ ಮಾರ್ಗವಾಗಿ ಕಂಡದ್ದರಿಂದ ಅವ ಅದಕ್ಕೆ ಒತ್ತುಕೊಟ್ಟ, ಅಷ್ಟೆ. ಅನುಭವದ ಒಂದು ಮಗ್ಗುಲಿನ ಬಗ್ಗೆ ಮಾತ್ರ ಇರುವ ಚೆನ್ನಯ್ಯನವರ ಕವನಗಳು ಈ ದೃಷ್ಟಿಯಿಂದ ಸರಳ. ಅವರ ಇಡೀ ಸಂಗ್ರಹದಲ್ಲಿ ನನಗೆ "ಲಕ್ಕಜ್ಜಿ" ಎಂಬ ಕವನವೇ ಈಗ ನೆನೆಸಿಕೊಂಡಾಗ ಹೆಚ್ಚು ಒಳ್ಳೆಯ ಕವನ ಅನ್ನಿಸುತ್ತದೆ. ಅದು ಕಾವ್ಯರೂಪದಲ್ಲಿ ಬರೆದ ಒಂದು ವ್ಯಕ್ತಿಚಿತ್ರಣ.
ಜಯದೇವನ ಗೀತಗೋವಿಂದವೂ ಹಾದರದ ಕತೆಯೇ--ಆದರೆ ಹಾಗೆ ಕರೆಯಲು ಹೆದರಿಕೆಯಾಗುವಷ್ಟು ಉತ್ಕಟ ಪ್ರೇಮದ ಕತೆ. ಆ ಕವಿತೆ ಓದುತ್ತಿದ್ದಂತೆ ಈಗಾಗಲೇ ಗೃಹಿಣಿಯಾಗಿರುವ ರಾಧೆ ಮತ್ತು ಅವಳಿಗಾಗಿ ಹಂಬಲಿಸುತ್ತಿರುವ ಕೃಷ್ಣ ಪರಸ್ಪರ ಸೇರದಿದ್ದರೆ ಪ್ರಕೃತಿಗೇ ಏನೋ ಅಪಚಾರ ಮಾಡಿದಂತಾಗುತ್ತದೆ ಅನ್ನಿಸುತ್ತದೆ. ಹೊಳೆ ಹರಿಯುತ್ತಿದೆ; ಮಾವಿನ ಮರ ಮಲ್ಲಿಗೆಯ ಬಯಕೆಯಲ್ಲಿ ಕಂಪಿಸುತ್ತಾ ನಿಂತಿದೆ; ಕೃಷ್ಣನ ಕೊಳಲಿನ ಗಾನ ಕೇಳುತ್ತಿದೆ; ಬೆಳುದಿಂಗಳಿನ ಬೆಳಕಿನಲ್ಲಿ ಮರ ಗಿಡ ಬಳ್ಳಿಗಳು ತೊಯ್ದಿವೆ; ರಾಧೆ ಸಿಟ್ಟಾದಳೇ ಎಂದು ಕೃಷ್ಣನ ಮನಸ್ಸು, ಇಷ್ಟೊಂದು ಯುವತಿಯರ ಮಧ್ಯೆ ಕೃಷ್ಣ ತನ್ನನ್ನು ನೆನಪಿಟ್ಟುಕೊಂಡಿರಬಹುದೇ ಎಂದು ರಾಧೆಯ ಮನಸ್ಸು ಕ್ಷೋಭೆಗೊಂಡಿದೆ. ಇಂಥಾ ರಾತ್ರಿಯಲ್ಲಿ ಈ ಉತ್ಕಟ ಪ್ರೇಮಿಗಳು ಕೂಡದೇ ಬೇರೆ ಬೇರೆ ಉಳಿದರೆ ಪ್ರಕೃತಿ ಪಿಶಾಚಿಗಳ ನರ್ತನದಿಂದ, ಹೊಂಚಿ ಕೂತ ಕೊಲೆಗಡುಕರ ಕುತಂತ್ರದಿಂದ ತನ್ನ ತಳಮಳವನ್ನು ತಣಿಸಿಕೊಳ್ಳಬೇಕಾದೀತು.
ಚೆನ್ನಯ್ಯನವರ "ಚಂದ್ರಗ್ರಹಣ"ದಂಥಾ ಕವನವನ್ನು ಆಗ ಓದಿದಾಗ ಜಯದೇವ ನೆನಪಾಗಿರಲಿಲ್ಲ. ಈಗ ಇದನ್ನು ಬರೆಯುವಾಗ ಫಕ್ಕನೆ ನೆನಪಿಗೆ ಬಂದ.
(ಮುಂದುವರಿಯುವುದು)
No comments:
Post a Comment