Thursday, February 23, 2012

ನಾಟಕಗಳ ಕುರಿತು

ಕೆಲವು ದಿನಗಳ ಹಿಂದೆ ನನ್ನ ಸಮಗ್ರ ಕಥೆಗಳು ಓದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ಪ್ರೊಫೆಸರ್ ಹರಿಯಪ್ಪ ಪೇಜಾವರ ಈಗ ನನ್ನ ಸಮಗ್ರ ನಾಟಕಗಳನ್ನು ಓದಿ ಪ್ರತಿಕ್ರಿಯೆ ಬರೆದು ಕಳಿಸಿದ್ದಾರೆ. ಸೂಕ್ಷ್ಮ ಮನಸ್ಸಿನ ಈ ಒಳ್ಳೆಯ ಸಮಕಾಲೀನ ಕವಿಯ ಪ್ರತಿಕ್ರಿಯೆಯಿಂದ ನನಗೆ ಸಹಜವಾಗಿಯೇ ಸಂತೋಷವಾಗಿದೆ. ಅಲ್ಲದೆ ನಮ್ಮಲ್ಲಿ ಹೀಗೆ ಪ್ರತಿಕ್ರಿಯೆ ವ್ಯಕ್ತಪಡಿಸುವವರು ವಿರಳ. ಹೊಟ್ಟೆಕಿಚ್ಚಿನಿಂದ ಬೈಯ್ಯವವರು, ಇಲ್ಲದ ಕೊಸರು ತೆಗೆಯುವವರು ಹೆಚ್ಚಿರುವಾಗ ಹರಿಯಪ್ಪನವರ ಈ ಮುಕ್ತ ಮನಸ್ಸಿನ ಮೆಚ್ಚುಕೆ ವಿಶೇಷ ಅನ್ನಿಸಿತು. ಅದೂ ಅವರ ಪ್ರತಿಕ್ರಿಯೆಯನ್ನು ಇಲ್ಲಿ ಪ್ರಕಟಪಡಿಸಲು ಒಂದು ಮುಖ್ಯ ಕಾರಣ.

ಇದು ಅವರ ಪತ್ರ:

"ನಿಮ್ಮ ನಾಟಕಗಳನ್ನು ಓದಿದೆ. ಎಲ್ಲ ಮಹತ್ತ್ವಾಕಾಂಕ್ಷೆಯ ಬರೆಹಗಳು. ಅನಂತಮೂರ್ತಿಯ ನಂತರ ಸದ್ಯ ಕನ್ನಡದ ಸಂದರ್ಭದಲ್ಲಿ ಇಷ್ಟೊಂದು ಮಹತ್ತ್ವಾಕಾಂಕ್ಷೆಯಿಂದ ಬರೆಯುತ್ತಿರುವವರು ನೀವು ಮಾತ್ರ ಅನ್ನಿಸುತ್ತದೆ. (ಡಾಗ್ ಶೋ, ರಾಹು ಮತ್ತು ಕೇತು, ದಂಗೆ--ಇವು ಇಂಥವು). ಸಾಮಾಜಿಕ, ರಾಜಕೀಯ ಆಧ್ಯಾತ್ಮಿಕ ಆಯಾಮಗಳನ್ನೊಳಗೊಂಡ--ನಿಮ್ಮ ಕಥೆ ಕವಿತೆಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಈ ಕಾಳಜಿ ಇಲ್ಲೂ ಮುಂದುವರಿದಿದೆ. ಆಧುನಿಕೋತ್ತರ ರಚನೆಗೆ ತೀರಾ ಹತ್ತಿರದವು ಅನ್ನಿಸುವ ನಿಮ್ಮ ಕೃತಿಗಳು, ಅಂಚಿನಲ್ಲಿರುವವರ ಬಗೆಗಿನ ಕಾಳಜಿ, ಭಾಷೆಯ ಮೂಲಕ ಸೃಷ್ಟಿ, ಸಂವಹನದ ಅವಶ್ಯಕತೆ, ಬದುಕು/ಸಾವು, ರೂಪ/ರೂಪಾಂತರ, ಶಿಷ್ಟ/ಅಶಿಷ್ಟ, ಸಂಸ್ಕೃತಿ/ವಿಕೃತಿ, ಹಿಂಸೆ/ಅಹಿಂಸೆ, ಸತ್ಯ/ಸುಳ್ಳು, ಮನಸ್ಸು/ದೇಹ, ವಿಚಾರ/ಭಾವ, ಚೈತನ್ಯ/ಬುದ್ಧಿ--ಇಂಥವುಗಳ ಯುಗ್ಮಗಳನ್ನು ಅವುಗಳೆಲ್ಲದರ ಸಂಕಿರ್ಣತೆಯಲ್ಲಿ ಅಭಿವ್ಯಕ್ತಿಸುವ ನಿಮ್ಮ ಕೃತಿಗಳು ನಮ್ಮ ಇವೊತ್ತಿನ ದಿನಮಾನವನ್ನು ದರ್ಶಿಸುತ್ತವೆ. ಆಧುನಿಕ ಬದುಕಿಗೆ 'ಕನ್ನಡಿ'ಯಾಗುತ್ತ ಸಮಾಜಕ್ಕೆ ಅದು 'ದೀಪ'ವೂ ಆಗುತ್ತದೆ. ಪುರಾಣ ಭಂಜನೆಯ ಮೂಲಕವೇ ನವ ಪುರಾಣ ಸೃಷ್ಟಿಸುತ್ತೀರಿ ನೀವು ನಿಮ್ಮ ನಾಟಕಗಳ ಮೂಲಕ. ರಥಮುಸಲ ಶೇಕ್ ಸ್ಪಿಯರ್ ಗೆ ಋಣಿಯಾಗಿದ್ದೂ ಅದು ನಿಮ್ಮದೇ ಆಗಿದೆ. ಅಲ್ಲಲ್ಲಿ, ಮುಖ್ಯವಾಗಿ ರಾಹು ಮತ್ತು ಕೇತು, ದಂಗೆ, ಇಂಥಲ್ಲಿ--ಅಬ್ಸರ್ಡಿಟಿ, ಅಸ್ತಿತ್ವವಾದದ ನೆರಳು--ಕಂಡೂ ಕಾಣಿಸದೆ ಜೀರ್ಣಸ್ಥ ರೂಪದಲ್ಲಿ ಕಾಣಿಸುತ್ತದೆ. ರಾಹು ಮತ್ತು ಕೇತು ಒಟ್ಟಿಗೇ ನಾಟಕವೂ ಕಥೆಯೂ ಆಗಿದೆ. ಪುಟ್ಟಿಯ ಪಯಣ ತುಂಬ ಲವಲವಿಕೆಯ--ರಂಗದಲ್ಲಿ ತುಂಬ ಯಶಸ್ವಿಯಾಗಬಹುದಾದ ಬರೆಹ."

--ಹರಿಯಪ್ಪ ಪೇಜಾವರ

Wednesday, February 22, 2012

ಬೆಳ್ಳೆ ರಾಮಚಂದ್ರ ರಾಯರು

ಪುತ್ತೂರಿನ ಕುರಿತು ಬರೆದ "ಕಿರು ಹಣತೆಗಳು" ಎಂಬ ಲೇಖನದಲ್ಲಿ ನನಗೆ ಪುತ್ತೂರಿನಲ್ಲಿ ವಾಸಿಸಿದ್ದ ಒಬ್ಬ ಮುಖ್ಯ ವ್ಯಕ್ತಿಯ ಹೆಸರು ಉಲ್ಲೇಖಿಸಲು ಬಿಟ್ಟು ಹೋಗಿದೆ. ಅವರೇ ಬೆಳ್ಳೆ ರಾಮಚಂದ್ರ ರಾಯರು. ಕೋರ್ಟು ರಸ್ತೆಯಲ್ಲಿ ಹಿಂದೆ  ಪಬ್ಲಿಕ್ ಲೈಬ್ರೆರಿ ಇದ್ದ ಕಟ್ಟಡದ ಪಕ್ಕದ ಕಟ್ಟಡದಲ್ಲಿ ಅವರ ಕಛೇರಿ ಇತ್ತು. ಅವರು ವೃತ್ತಿಯಲ್ಲಿ ವಕೀಲರು. ಆದರೆ ಇಂಗ್ಲಿಷ್ ಅಧ್ಯಾಪಕರಾಗಬೇಕೆಂಬ ಆಸೆ ಇದ್ದವರು. ವಿವೇಕಾನಂದ ಕಾಲೇಜು ಸುರುವಾದಾಗ ಅದರ ಪ್ರಾರಂಭದ ದಿನಗಳಲ್ಲಿ ಅವರು ಅಲ್ಲಿ ಇಂಗ್ಲಿಷ್ ಪಾಠ ಮಾಡಿದ್ದರು. ಈ ಸಲದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸ್ವಪ್ನ ಸಾರಸ್ವತದ ಲೇಖಕ ಗೋಪಾಲಕೃಷ್ಣ ಪೈ ಅಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ರಾಮಚಂದ್ರ ರಾಯರು ಅವರಿಗೆ ಇಂಗ್ಲಿಷ್ ಪಾಠ ಮಾಡಿದ್ದರಂತೆ.

ಅವರ ಚಿರವಿರಹಿ ಒಳ್ಳೆಯ ಕಾದಂಬರಿ. ಅದು ಮತ್ತು ಅವರ ಇತರ ಬರೆಹ ಸೇರಿ ಇತ್ತೀಚೆಗೆ ಪುನರ್ಮುದ್ರಣವಾಗಿದೆ. ಅವರು ಶೇಕ್ ಸ್ಪಿಯರಿನ ಮೊದಲ ನಾಟಕಗಳಲ್ಲೊಂದಾದ Two Gentlemen of Veronaವನ್ನು ಕನ್ನಡಕ್ಕೆ ತಂದಿದ್ದಾರೆ. ಹರಿಹರಪ್ರಿಯ ಅದನ್ನು ಪತ್ತೆ ಮಾಡಿ ತಮ್ಮ ಪತ್ರಿಕೆ ಪ್ರಜಾಸಾಹಿತ್ಯದಲ್ಲಿ ಅದರ ಬಗ್ಗೆ ಬರೆದಿದ್ದರು.

Saturday, February 18, 2012

ಹರಿಯಪ್ಪ ಪೇಜಾವರ

ಹರಿಯಪ್ಪ ಪೇಜಾವರ ಕನ್ನಡದ ಒಬ್ಬ ಪ್ರಮುಖ ಕವಿ. ತನ್ನಷ್ಟಕ್ಕೆ ಗಂಭೀರ ಕವನಗಳನ್ನು ಬರೆಯುತ್ತಾ ಅದಕ್ಕೆ ಸಂಬಂಧಿಸಿದ ಯಾವ ರಾಜಕೀಯವನ್ನೂ ಮಾಡದೆ ನಿಜವಾದ ಸಹೃದಯರ ಪ್ರತಿಕ್ರಿಯೆಯಿಂದ ತೃಪ್ತಿ ಕಾಣುತ್ತಿರುವವರು. ಸುಮಾರಾಗಿ ಅನೇಕ ಕವಿಗಳು ಮಾಡುವ ದೊಡ್ಡವರನ್ನು ಮೆಚ್ಚಿಸುವುದು, ವಿಮರ್ಶೆ ಬರೆಸುವುದು, ಅವಾರ್ಡಿಗಾಗಿ ಪ್ರಯತ್ನಿಸುವುದು ಮೊದಲಾದ ಏನನ್ನೂ ಮಾಡದ ಪ್ರಾಮಾಣಿಕ ಸಾಹಿತ್ಯ ಪ್ರೇಮಿ. ಹೀಗಾಗಿ ಅವರು ನನ್ನ ಸಮಗ್ರ ಕಥೆಗಳನ್ನು ಓದಿ ತಾವಾಗಿ ಬರೆದ ಪತ್ರದಿಂದ ನನಗೆ ಖುಷಿಯಾಗಿದೆ. ಅದೂ ಪುಸ್ತಕವನ್ನು ಅವರು ಬೋಧಿ ಟ್ರಸ್ಟಿಗೆ ಹಣ ಕಳಿಸಿ ತರಿಸಿಕೊಂಡು ಓದಿ ಬರೆದ ಪತ್ರ ಇದು. ಬಿಟ್ಟಿ ಪ್ರತಿಗಳನ್ನು ಅಪೇಕ್ಷಿಸುವವರೇ ಹೆಚ್ಚಿರುವಾಗ ಹೀಗೆ ಹಣ ಕಳಿಸಿ ಪುಸ್ತಕ ತರಿಸಿಕೊಳ್ಳುವವರು ಕಮ್ಮಿ. ಅವರ  ಪತ್ರ ಮುಖ್ಯ ಅನ್ನಿಸಿದ್ದರಿಂದ, ಅದಕ್ಕಿಂತ ಹೆಚ್ಚು ಇಂಥಾ ಸಂವೇದನಾಶೀಲ ಕವಿಯ ಮೆಚ್ಚುಕೆಯಿಂದ ಖುಷಿ ಮತ್ತು ಹೆಮ್ಮೆ ಅನ್ನಿಸಿದ್ದರಿಂದ ಅವರ ಒಪ್ಪಿಗೆ ಪಡೆದು ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.

ಇದು ಅವರ ಪತ್ರ:

"ಅರ್ಬುದ ಮತ್ತು ಪುಣ್ಯಕೋಟಿ" ಕನ್ನಡದ ಕಥೆಗಳ ಸಂದರ್ಭದಲ್ಲೇ ಒಂದು ಹೊಸಬಗೆಯ ಕಥೆ. ಅವನ, ಅವಳ, ನಿರೂಪಕನ ವಾಯ್ಸುಗಳನ್ನು ಭೂತ ವರ್ತಮಾನಗಳನ್ನು ತುಂಡುಗಡಿಯದಂತೆ ಒಂದೇ ಬಿಂದುವಿನಲ್ಲಿ ಸಂಧಿಸುವ ಬಗೆ--ಕನ್ನಡದ ಕಥಾಜಗತ್ತಿಗೇ ಹೊಸತು ಅನ್ನಿಸಿತು. ಅರ್ಬುದ ಹೆಸರು ಹರಡಿಕೊಳ್ಳುವ ಹಿಂಸೆಯ ಕ್ಯಾನ್ಸರಿನ ಪ್ರತೀಕವಾಗುತ್ತ ಸತ್ಯ ತಲೆಕೆಳಗಾದ, ಹಿಂಸೆ ಭ್ರಷ್ಟಾಚಾರ ವಿಜೃಂಭಿಸುವ, ಮನುಷ್ಯನ ಅಂತರ್ವಾಣಿಗೆ (ಪುಣ್ಯಕೋಟಿಯ ಅಂಬಾದನಿ) ಕುರುಡಾಗುವ ಅಬ್ಬರದ ಸದ್ದಿನ ಬೇಬಲ್  ಗೋಪುರದ ಶಿಖರವೇರುತ್ತಿರುವ ಸ್ಥಿತಿಯ ಮಧ್ಯೆಯೂ ಮತ್ತೆ ಅಂತರ್ವಾಣಿ --ಮನುಷ್ಯ ಸಂಬಂಧಕ್ಕೆ ಹಪಹಪಿಸುವ (ಪೋಸ್ಟ್, ಫೋನ್, ಮೊಬೈಲ್ ಮುಂತಾದ ಆಧುನಿಕ ಸಂಪರ್ಕ ಮಾಧ್ಯಮಗಳ ರೂಪಕದ ಜತೆ) ಮೂಲಕ ಕಥೆ ಕೊನೆಯಾಗುವುದು ಬದುಕಿನ ಬಗ್ಗೆ ಆಶೆ ಹುಟ್ಟಿಸುವಂತಿದೆ. ಇಡೀ ಕಥೆ ನನಗೆ ಆಧುನಿಕೋತ್ತರ ರಚನೆಯಾಗಿ ಕಾಣಿಸಿತು. ಬರೆವಣಿಗೆ ಎಲ್ಲೂ ತುಂಡುಗಡಿಯದೆ ನಿಲುಗಡೆ ಆಯ್ತು ಅನ್ನಿಸಿದಾಗಲೂ ಮತ್ತೆ ("ಅರೆ, ಮತ್ತೆ ರಿಂಗಾಗ್ತಿದೆ", ಅಂದರೆ ಮನುಷ್ಯನ--ಸಂಬಂಧಕ್ಕೆ ಹಪಹಪಿಸುವ--ಪಾಡು--) ಮುಂದುವರಿಯುವ ಸೂಚನೆಯಂತಿದೆ. ಇಡಿಯ ಕಥೆಯ ಶೈಲಿಯೇ ಬದುಕಿನ ಅರಾಜಕ, ಹಿಂಸ್ರ, ಗದ್ದಲದ ಬೇಬಲ್ ಗೋಪುರದ ಅಭಿನಯದಂತಿದೆ. ಭಾಷೆಯ ಜೀವಂತ ಬಳಕೆಯ ಬಗ್ಗೆ, ಶಬ್ದಸೂತಕವನ್ನು ಮೀರುವ ಹಂಬಲಕ್ಕೆ ಭಾಷ್ಯ ಬರೆದಂತಿದೆ ಈ ಕಥೆ. ಆಧುನಿಕ ರಾಜಕೀಯ ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ (ಸತ್ಯವನ್ನೇ ಹೇಳಬೇಕಾದ ಮಾಧ್ಯಮಗಳಲ್ಲಿ ಕೂಡ) ಬೇರಿಳಿದ ಭ್ರಷ್ಟಾಚಾರ, ಹಿಂಸಾನಂದದ ಬಗೆಗೂ ಟೀಕೆ ಬರೆದಂತಿದೆ. ಒಟ್ಟಿನಲ್ಲಿ ಇದು ಕಥೆಯಲ್ಲ; ಒಂದು ಆಧುನಿಕ ಕಾವ್ಯವೇ ಆಗಿದೆ.

ಇನ್ನು ಭೇತಾಳ ಕಥೆ. ಬೇರೆ ಬೇರೆ ಪಾತ್ರಗಳ ಮೂಲಕ ಕಥೆ ಹೇಳುವುದು ಕನ್ನಡಕ್ಕೇನೂ ಹೊಸದಲ್ಲ. ಟಾಗೋರ್ ಈ ತಂತ್ರವನ್ನು ಬಹಳ ಚೆನ್ನಾಗಿಯೇ ನಿರ್ವಹಿಸಿದರು ಅನ್ನಿಸುತ್ತದೆ. ನಡುವೆ ನವ್ಯದ ಮತ್ತಿನಲ್ಲಿ  ಈ ತಂತ್ರ ಮೂಲೆಗೆ ಬಿದ್ದಿದ್ದು ಇದೀಗ ಮತ್ತೆ ಮುಂಚೂಣಿಗೆ ಬರುತ್ತಿರುವುದಕ್ಕೆ ಸಾಕ್ಷಿ ಈ ಕತೆ. ಇದೂ ಒಂದು ಆಧುನಿಕ ಕತೆಯೇ. ದಿವ್ಯ ಭವ್ಯ ಎಂದೆಲ್ಲ ಮತ್ತೆ ಪರಂಪರೆಗೇ ಜೋತುಬಿದ್ದ ನಮ್ಮ ಹಿರಿಯ ಬರೆಹಗಾರರ ಮಧ್ಯೆ ನೀವು ಪೂರ್ವ ಪಶ್ಚಿಮವನ್ನು ಬೆಸೆಯುವ ಮೂಲಕ ಬೇತಾಳಸ್ಥಿತಿಯನ್ನು ಮೀರಲೆತ್ನಿಸುವ ಪಾತ್ರಗಳನ್ನು ಸೃಷ್ಟಿಸಿರುವುದು ಕುತೂಹಲಕಾರಿಯಾಗಿದೆ. ದೇಹ ಮನಸ್ಸನ್ನು ಬೆಸೆಯಲೆತ್ನಿಸುವ, ಕೆಡಹುವ ಹಿಂಸೆಗಿಂತ ಪ್ರಜ್ಞಾಪೂರ್ವಕವಾಗಿ ನಾಗರಿಕತೆಯನ್ನು ಕಟ್ಟುವ, ಎಲ್ಲವನ್ನೂ ಸಮಾನ ನೆಲೆಯಲ್ಲಿ ನೋಡಬೇಕೆನ್ನುವ, ಅಂಚಿನಲ್ಲಿರುವವರ ಬೇತಾಳ ಸ್ಥಿತಿಯನ್ನು ನಿವಾರಿಸಲೆತ್ನಿಸುವ, ಭಾಷೆಯನ್ನು ಸೃಷ್ಟಿಗಾಗಿ, ವಿವೇಚನೆಗಾಗಿ, ಸಂಬಂಧಕ್ಕಾಗಿ ಬಳಸಿಕೊಳ್ಳುವ ಕಾಳಜಿ, ಬದುಕು ಸಾವು ಮುಖ ಮುಖವಾಡದ ಪ್ರೇತಸ್ಥಿತಿ, ಈ ಪ್ರೇತಸ್ಥಿತಿಯನ್ನು ತನ್ನ ಲಾಭಕ್ಕೆ ಬಳಸುವ ಸಮಾಜದ ಕಾನೂನು--ಹೀಗೆ ಈ ಎಲ್ಲ ಇವೊತ್ತಿನ ದಿನಮಾನದ ಕಾಳಜಿಗಳನ್ನು ತೆಕ್ಕೆಗೆ ತೆಗೆದುಕೊಂಡ ಈ ಕತೆಯ ಬೀಸು ದೊಡ್ಡದು. ವರದಿ, ಬೇರೆ ಬೇರೆ ಪಾತ್ರಗಳ ಮೂಲಕ ಕಥೆ ಹೇಳುತ್ತ--ನೀವು objectivityಯನ್ನು ಸಾಧಿಸುವುದರಿಂದ ಕಥೆಯ ಆಶಯ ಹೆಚ್ಚು ಗಟ್ಟಿಮುಟ್ಟಾಗಿದೆ. ಕಥೆ ಕೂಡಾ ಬೇತಾಳ ಕತೆಯ ತಂತ್ರವನ್ನು ಅಳವಡಿಸಿಕೊಂಡಿದೆ.--(ಮುಖ್ಯವಾಗಿ ತುಕ್ಕಪ್ಪಯ್ಯ).

"ಜೀವಪಕ್ಷಿಯ ಕತೆ"  ಮತ್ತೆ ಓದಿದೆ. ಅವೊತ್ತು ಓದಿ ಪಟ್ಟ ಬೆರಗು ಖುಷಿ ಮತ್ತೆ ಮರುಕೊಳಿಸಿತು. "ಮೂಗೇಲ" ಕಾಫ್ಕಾನ "ಮೆಟಾಮೊರ್ಫೊಸಿಸ್" ನ್ನು ನೆನಪಿಸುತ್ತದೆ ನಿಜ. ಆದರೆ ಅದು ಅಂತಿಮವಾಗಿ ನಿಮ್ಮದೇ, ಕನ್ನಡದ್ದೇ ಆಗಿದೆ.

ಕಥೆಗಳ ನಡುವೆ ನೀವು ಉದಯವಾಣಿಯಲ್ಲಿ ಬರೆಯುತ್ತಿದ್ದ ಕಥೆಯಂಥ ಪ್ರಬಂಧವೂ ಸೇರಿದಂತಿದೆ. "ಕ್ರೌಂಚ"ದ ಭಾಷೆ ತುಸು ಅಳ್ಳಕ ಅನ್ನಿಸಿತು.

ರಿಸಾರ್ಟ್, ಜೀವಪಕ್ಷಿ, ಅರ್ಬುದ ಮತ್ತು ಪುಣ್ಯಕೋಟಿ, ಬೇತಾಳ ಕಥೆ ಬರೆದ ಮೇಲೆ--ಮತ್ತೆ ಇನ್ನು ಯಾವ ಕಥೆ ಬರೆಯದಿದ್ದರೂ ಪರವಾ ಇಲ್ಲ, ನೀವು ನಮ್ಮ ನಡುವಿನ ಮಹತ್ತ್ವದ ಕಥೆಗಾರರಾಗಿಯೇ ಉಳಿಯುತ್ತೀರಿ. ಇಂಥಾ ಕತೆಗಳನ್ನು ಓದಿದಾಗ ಬದುಕಿದ್ದು ಸಾರ್ಥಕ ಅನ್ನಿಸುತ್ತದೆ.

--ಹರಿಯಪ್ಪ ಪೇಜಾವರ."

Sunday, February 12, 2012

ಕಿರು ಹಣತೆಗಳು

ಪುತ್ತೂರು ಕಳೆದ ಶತಮಾನದ ಮೊದಲಿನಿಂದಲೂ ಒಂದಲ್ಲ ಒಂದು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿರುವ ಪೇಟೆ. ಹಟ್ಟಿಯಂಗಡಿ ನಾರಾಯಣ ರಾಯರ ಆಂಗ್ಲ ಕವಿತಾವಳಿ ಮುದ್ರಣವಾದದ್ದು ಪುತ್ತೂರಿನ ಸಹಕಾರಿ ಮುದ್ರಣಾಲಯದಲ್ಲಿ. ಇದು, ನೆನಪಿನಿಂದ ದಾಖಲಿಸುವುದಾದರೆ, 1916ರಲ್ಲಿ. ಆಂಗ್ಲ ಕವಿತಾವಳಿ ಕನ್ನಡ ಕಾವ್ಯದಲ್ಲಿ ಪ್ರಮುಖ ಹೆಸರು. ಬಿ. ಎಂ. ಶ್ರೀಕಂಠಯ್ಯನವರು ಇಂಗ್ಲಿಷ್ ಕವಿತೆಗಳು  ಮೂಲಕ ಹೊಸ ಛಂದಸ್ಸು ವಸ್ತುಗಳನ್ನು ಕನ್ನಡಕ್ಕೆ ತರುವ ಮೊದಲು ಅದಕ್ಕಾಗಿ ನಡೆದ ಕೆಲವು ಪ್ರಯತ್ನಗಳಲ್ಲಿ  ನಾರಾಯಣ ರಾಯರ ಈ ಅನುವಾದ ಮುಖ್ಯವಾದದ್ದು.

ಮುಂದೆ ಮೊಳಹಳ್ಳಿ ಶಿವರಾಯರು, ಅವರ ನಿಮಿತ್ತವಾಗಿ ಬಂದ ಶಿವರಾಮ ಕಾರಂತರು ನಡೆಸಿದ ದಸರಾ ಉತ್ಸವಗಳು, ಸಾಹಿತ್ಯ ಗೋಷ್ಠಿಗಳು, ಯಕ್ಷರಂಗ ಪ್ರಯೋಗಗಳು ಪ್ರಖ್ಯಾತವಿವೆ. ನಾಲ್ಕು ದಶಕಗಳಿಗೂ ಮಿಕ್ಕಿ ಕಾಲ ಈ ಊರು ಶಿವರಾಮ ಕಾರಂತರ ಕಾರ್ಯಕ್ಷೇತ್ರವಾಗಿತ್ತು. ಬಿ. ವಿ. ಕಾರಂತರ ಆರಂಭದ ರಂಗಪ್ರಯತ್ನಗಳೂ ಈ ಊರಿನಲ್ಲೇ ನಡೆದವು. ಇಲ್ಲಿಂದಲೇ ಅವರು ತಮ್ಮ ರಂಗಕಾಯಕದ ಪ್ರಯಾಣ ಪ್ರಾರಂಭಿಸಿದರು. ಉಗ್ರಾಣ ಮಂಗೇಶ ರಾಯರು, ಕಡವ ಶಂಭು ಶರ್ಮರು, ಮೊನಚು ಗೆರೆಗಳ ವ್ಯಂಗ್ಯ ಚಿತ್ರಕಾರ, ಶಿಂಗಣ್ಣ ಸೃಷ್ಟಿಕರ್ತ ಕನ್ನೆಪ್ಪಾಡಿ ರಾಮಕೃಷ್ಣ ಭಟ್ ಇಲ್ಲೇ ಇದ್ದವರು. ವ್ಯಂಗ್ಯ ಚಿತ್ರಗಳಿಗೆ ಮೀಸಲಾದ ಪತ್ರಿಕೆ ಇಂದ್ರಧನುಸ್ ಅವರ ಸಂಪಾದಕತ್ವದಲ್ಲಿ ಇಲ್ಲಿಂದಲೇ ಪ್ರಕಟವಾಗುತ್ತಿತ್ತು. ಈಗ ಐ. ಕೆ. ಬೊಳುವಾರು ಮತ್ತು ಅವರ ಸ್ನೇಹಿತರು ತಮ್ಮ ನಾಟಕ ಪ್ರಯೋಗಗಳ ಮೂಲಕ  ಪುತ್ತೂರಿನ ರಂಗಚಟುವಟಿಕೆಗಳನ್ನು ಜೀವಂತವಾಗಿ ಇಟ್ಟಿದ್ದಾರೆ. ಪ್ರತಿಭಾವಂತ ರಂಗಕರ್ಮಿಗಳಾದ ಮೋಹನ ಸೋನ ಮತ್ತು ಮೂರ್ತಿ ದೇರಾಜೆ ಇಲ್ಲೇ ಸಮೀಪದ ವಿಟ್ಲದವರು. ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ  ಎಚ್. ಜಿ. ಶ್ರೀಧರ ಮೌನವಾಗಿ ತಮ್ಮ ಕೆಲಸ ಮಾಡಿಕೊಂಡು ಹೋಗುವವರು. ಅದೇ ಕಾಲೇಜಿನ ಈಗಿನ ಪ್ರಿನ್ಸಿಪಾಲ್  ಡಾ. ಮಾಧವ ಭಟ್ ನಾನು ಕಂಡ ಗಾಢ ಸಾಹಿತ್ಯಾಸಕ್ತಿಯ ವ್ಯಕ್ತಿಗಳಲ್ಲಿ ಒಬ್ಬರು. ಬೋಳಂತಕೋಡಿ ಈಶ್ವರ ಭಟ್ಟರು ಕರ್ನಾಟಕ ಸಂಘದ ಮೂಲಕ ಅನೇಕ ಮುಖ್ಯ ಪುಸ್ತಕ ಪ್ರಕಟಿಸಿದವರು. ಈ ಕರ್ನಾಟಕ ಸಂಘ ಪ್ರಾರಂಭಿಸಿದವರಲ್ಲಿ ಶಿವರಾಮ ಕಾರಂತರೂ ಒಬ್ಬರು.

ನೆನಪಿಗೆ ಬಂದ ಹೆಸರುಗಳನ್ನು ಮಾತ್ರ ಬರೆದೆ. ಅನೇಕರು ಸೇರಿ ಈ ಊರಿನ ಸಾಂಸ್ಕೃತಿ ನಕಾಶೆಯನ್ನು ರೂಪಿಸಿದ್ದಾರೆ. ಮುಖ್ಯ ಎಂದರೆ ಇಲ್ಲಿನ ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳು ಹನಿಗಡಿಯದ ಹಾಗೆ ನೋಡಿಕೊಂಡಿದ್ದಾರೆ ಎನ್ನುವುದು.

ಮೊನ್ನೆ ಫೆಬ್ರುವರಿ ನಾಲ್ಕನೇ ತಾರೀಕಿನಿಂದ ಒಂದು ವಾರ ಕಾಲ ಪುರಂದರ ಭಟ್  ಪುತ್ತೂರಿನ ತಮ್ಮ ಮನೆಯಲ್ಲಿ ಸಾಹಿತ್ಯ ಕಲಾ ಕುಶಲೋಪರಿ ನಡೆಸಿದರು. ಇದು ಕರ್ನಾಟಕ ಸಂಘ ಮತ್ತು ಅನ್ಯಾನ್ಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಒಂಭತ್ತು ದಿನಗಳ ಕಾರ್ಯಕ್ರಮ ಸಮುಚ್ಚಯ. ಸುಜನಾ ಸ್ಮರಣೆ, ಮೂರು ಆಧುನಿಕ ಕೃತಿಗಳ ಕುರಿತ ಉಪನ್ಯಾಸಗಳು, ನಾಟಕಗಳು, ಕಂಬಾರ ಸಾಹಿತ್ಯ ಗೋಷ್ಠಿ, ಶೈಕ್ಷಣಿಕ ಗೋಷ್ಠಿ ಮೊದಲಾದ ಕಾರ್ಯಕ್ರಮಗಳಿದ್ದವು. ಭಾಗವಹಿಸಿದ ಹೆಚ್ಚಿನವರು ಸುತ್ತುಮುತ್ತಲಿನ ಊರುಗಳ, ಅಥವಾ ಪುತ್ತೂರಿನ ಸಾಹಿತ್ಯ ಸಾಂಸ್ಕೃತಿಕ ಆಸಕ್ತರು. ಕಳೆದ ಎಂಟು ವರ್ಷಗಳಿಂದ ಹೀಗೆ ಇವರು ಈ ರೀತಿಯ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.

ನನಗೆ ಇದರಲ್ಲಿ ಮುಖ್ಯ ಅನ್ನಿಸಿದ್ದು ರಾಜಕಾರಣಿಗಳನ್ನು ದೂರ ಇಟ್ಟದ್ದು. ಕಾರ್ಯಕ್ರಮಗಳ ವಿಷಯ ಕುರಿತು ನಿಜಜೀವನದಲ್ಲೂ ಜೀವಂತ ಆಸಕ್ತಿ ಇಲ್ಲದ ಯಾರ ಹೆಸರೂ ಆಮಂತ್ರಣ ಪತ್ರಿಕೆಯಲ್ಲಿ ಇರಲಿಲ್ಲ. ಗ್ಲಾಮರಿಗಾಗಿ, ಪ್ರತಿಷ್ಠೆಗೆಂದು, ಯಾರನ್ನೋ ಮೆಚ್ಚಿಸಲೆಂದು ಕಾರ್ಯಕರ್ತರು ಯಾರನ್ನೂ ಆಹ್ವಾನಿಸಲಿಲ್ಲ.

ನನ್ನ ಎದುರು ಇನ್ನೊಂದು ಆಮಂತ್ರಣ ಪತ್ರಿಕೆಯಿದೆ. ಇದೂ ನೆರೆ ಊರಿನದ್ದೇ. ರಂಗಚಟುವಟಿಕೆಗೆ ಸಂಬಂಧಪಟ್ಟದ್ದೇ. ಅದು ಪ್ರಾರಂಭವಾಗುವುದೇ ರಾಜಕಾರಣಿಯೊಬ್ಬರ ಹೆಸರಿನಿಂದ. ಅನೇಕ ಗ್ಲಾಮರ್ ಹೆಸರುಗಳಿವೆ.

ಇಂಥಾ ಸಂಸ್ಥೆ, ಚಟುವಟಿಕೆಗಳು ಕಿರು ಹಣತೆಗಳು. ಕಿರು ಹಣತೆಗಳಾಗಿ ಉರಿದು ಸುತ್ತ ಬೆಳಕು ಚೆಲ್ಲಿ  ಮನಸ್ಸು ಬೆಳಗಿಸಬೇಕು. ಹಾಗಿದ್ದಾಗ ಮಾತ್ರ ಅವಕ್ಕೆ ಬೆಲೆ. ಆಗ ನಮಗೂ ಅವು ಮುಖ್ಯ ಅನ್ನಿಸುತ್ತದೆ. ಗ್ಲಾಮರ್, ಸಿಗಬಹುದಾದ ಹಣ, ರಾಜಕಾರಣಿಗಳ ಕೃಪೆ ಮೊದಲಾದವುಗಳಿಗೆ ಬಲಿ ಬೀಳುವ ಸಂಸ್ಥೆಗಳಿಂದ ದೂರ ಇರೋಣ ಅನ್ನಿಸುತ್ತದೆ. 

**********************


"ರಿಸಾರ್ಟ್, ಜೀವಪಕ್ಷಿ, ಅರ್ಬುದ ಮತ್ತು ಪುಣ್ಯಕೋಟಿ, ಬೇತಾಳ ಕಥೆ ಬರೆದ ಮೇಲೆ ಮತ್ತೆ ಇನ್ನು ಯಾವ ಕಥೆ ಬರೆಯದಿದ್ದರೂ ಪರವಾ ಇಲ್ಲ. ನೀವು ನಮ್ಮ ನಡುವಿನ ಮಹತ್ವದ ಕಥೆಗಾರರಾಗಿಯೇ ಉಳಿಯುತ್ತೀರಿ. ಇಂಥ ಕಥೆಗಳನ್ನು ಓದಿದಾಗ ಬದುಕಿದ್ದು ಸಾರ್ಥಕ ಅನ್ನಿಸುತ್ತದೆ."

----ಹರಿಯಪ್ಪ ಪೇಜಾವರ
(ಕವಿ, ಪ್ರಾಧ್ಯಾಪಕ)

Thursday, February 9, 2012

ಬೋಧಿ ಟ್ರಸ್ಟ್ ಪುಸ್ತಕಗಳು

ಬೋಧಿ ಟ್ರಸ್ಟ್ ನ ಈ ಕೆಳಗಿನ ಪುಸ್ತಕಗಳು ಈಗ ಮಾರಾಟಕ್ಕೆ ಲಭ್ಯವಿವೆ. ಕೆಳಗಿನ ಕರಪತ್ರದಲ್ಲಿ ಇವುಗಳನ್ನು ಕೊಂಡುಕೊಳ್ಳುವ ವಿಧಾನವನ್ನು ವಿವರಿಸಲಾಗಿದೆ. ನಮ್ಮ ಪುಸ್ತಕಗಳು ಅನೇಕ ಪುಸ್ತಕದ ಅಂಗಡಿಗಳಲ್ಲಿ ಲಭ್ಯ ಇರಲಾರವು. ಹೀಗಾಗಿ ನೇರವಾಗಿ ನಮ್ಮಿಂದ ಕೊಂಡುಕೊಂಡರೆ ಅನುಕೂಲ. ಹಾಗೆ ಕೊಂಡುಕೊಳ್ಳುವವರಿಗೆ ಶೇಕಡಾ 25 ರಿಯಾಯ್ತಿಯಿದೆ. ಪುಸ್ತಕಗಳ ಬಗ್ಗೆ ಹೆಚ್ಚಿನ ವಿವರ ಬೇಕಾದವರು bodhitrustk@gmail.com ಗೆ ಬರೆಯಿರಿ ಅಥವಾ 9482622589ಗೆ ಫೋನ್ ಮಾಡಿ.

ಸದ್ಯದಲ್ಲಿ ಪ್ರಕಟವಾಗಲಿರುವ ಪುಸ್ತಕ:
ಶೇಕ್ ಸ್ಪಿಯರ್: ಎರಡು ಸಂಸ್ಕೃತಿಗಳಲ್ಲಿ
ಪರಿಷ್ಕೃತ ವಿಸ್ತೃತ ಆವೃತ್ತಿ.

"ನನಗೆ ತಿಳಿದಂತೆ ಈ ಬಗೆಯ ಕೃತಿ ಕನ್ನಡದಲ್ಲಾಗಲೀ ಇಂಗ್ಲಿಷಿನಲ್ಲಾಗಲೀ ಇದು ವರೆಗೆ ಪ್ರಕಟವಾಗಿಲ್ಲ ಮತ್ತು ಇದು ತೌಲನಿಕ ವಿಮರ್ಶೆಗೆ ನೀಡಿದ ಹೊಸ ಕೊಡುಗೆಯಾಗಿದೆ."
 --ಯು. ಆರ್. ಅನಂತಮೂರ್ತಿ.


Monday, February 6, 2012

ಬಿ. ದಾಮೋದರ ರಾವ್

ಬಿ. ದಾಮೋದರ ರಾವ್ ಅವರು ಸುಮಾರು ಎರಡು ವರ್ಷಗಳ ಕೆಳಗೆ ನಿಧನರಾದರು. ಆಗ ಅವರ ಬಂಧುಗಳು ಮತ್ತು ಸ್ನೇಹಿತರು ಸೇರಿ ಅವರ ಕುರಿತು ಒಂದು ಪುಸ್ತಕ ತರುವ ಯೋಜನೆ ಹಾಕಿಕೊಂಡಿದ್ದರು. ಈ  ಲೇಖನ ಆ ಪುಸ್ತಕಕ್ಕಾಗಿ ಬರೆದದ್ದು. ನನಗೆ ತಿಳಿದಂತೆ ಆ ಪುಸ್ತಕ ಇದು ವರೆಗೆ ಪ್ರಕಟವಾಗಿಲ್ಲ. ನನ್ನ ಲೇಖನ ಆಸಕ್ತರಿಗೆ ಲಭ್ಯವಾಗಲಿ ಎಂಬ ದೃಷ್ಟಿಯಿಂದ ಇಲ್ಲಿ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.Saturday, February 4, 2012

¨ಬಕ ಕುರಿತು

ಎಂ. ಎಸ್. ಕೆ. ಪ್ರಭು ಈಗ ದಿವಂಗತರು. ಆಕಾಶವಾಣಿಯಲ್ಲಿ ಕೆಲಸದಲ್ಲಿದ್ದರು. ಭೈರಪ್ಪನವರ ಸ್ನೇಹಿತರು. ಅವರ ಕಾದಂಬರಿಗಳ ಡ್ರಾಫ್ಟುಗಳನ್ನು ಓದಿ ಚರ್ಚಿಸುತ್ತಿದ್ದರಂತೆ. ಭೈರಪ್ಪನವರು ತಮ್ಮ ಒಂದು ಕಾದಂಬರಿಯನ್ನು ಅವರಿಗೆ ಅರ್ಪಿಸಿದ್ದಾರೆ.

ಈಗ ಪ್ರಭು ತಮ್ಮ ಸೋಮಶೇಖರ್ ತಮ್ಮ ಅಣ್ಣನ ಕುರಿತು ಒಂದು ಪುಸ್ತಕ ತರುತ್ತಿದ್ದಾರೆ. ಈ ಕೆಳಗಿನದ್ದು ಆ ಪುಸ್ತಕಕ್ಕಾಗಿ ಬರೆದ ಲೇಖನ.


*********************************