Thursday, April 28, 2011

ಶಾಂತಿನಾಥ ದೇಸಾಯಿ--2

********************


ಶಾಂತಿನಾಥ ದೇಸಾಯಿ--1

ಮೇಲಿನದ್ದು ನಾನು ಸಂಪಾದಿಸಿ ನುಡಿ ಪುಸ್ತಕ ಪ್ರಕಟಿಸಿದ ಶಾಂತಿನಾಥ ದೇಸಾಯಿ ವಾಚಿಕೆಗೆ ನಾನು ಬರೆದ ಮುನ್ನುಡಿ. ಮುಂದುವರಿಯುವುದು.

**********************


Monday, April 25, 2011

Adiga`s Poetry: a ReappraisalThis article first appeared  in Prasanga, vol. 40, published by Regional Resources Centre for Folk Performing Arts, Udupi in 2010. Its chief editor is Prof. H. Krishna Bhat.  I thank Dr. N. T. Bhat  for taking interest in its publication.

*******************


Saturday, April 23, 2011

ದೇವಾಂಗಣ 8

ಇದು ವಿಜಯ ಕರ್ನಾಟಕದ ಎಪ್ರಿಲ್ 24ರ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಅಂಕಣ.

*************************


ಯು. ಆರ್. ಅನಂತಮೂರ್ತಿ--3 (ಭೈರಪ್ಪ, ಲಂಕೇಶರಿಗೆ ಸಂಬಂಧಿಸಿ)


ಮೇಲಿನ ಲೇಖನ ಬರೆದದ್ದು 1999ರಲ್ಲಿ. 2000ನೇ ಇಸವಿಯಲ್ಲಿ ಮಿತ್ರ ಮುರಳೀಧರ ಉಪಾಧ್ಯರ ಸಂಪಾದಕತ್ವದಲ್ಲಿ ಬಂದ ಅನಂತಮೂರ್ತಿ ಕುರಿತ ಲೇಖನಗಳ ಪುಸ್ತಕದಲ್ಲಿ ಇದು ಮೊದಲು ಪ್ರಕಟವಾಗಿತ್ತು. ಪುಸ್ತಕ ಸಂಪಾದಿಸುವ ಯೋಜನೆ ಹಾಕಿದಾಗ ಮುರಳೀಧರ ನನಗೆ ಒಂದು ಕಾಗದ ಬರೆದು 1970ರ ಆಸುಪಾಸಿನಲ್ಲಿ ನಾನು ಅನಂತಮೂರ್ತಿ ಕುರಿತು ಬರೆದು ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದಲ್ಲಿ ಬರುತ್ತಿದ್ದ ಸಾಕ್ಷಿ  ತ್ರೈಮಾಸಿಕದಲ್ಲಿ ಮೊದಲು ಪ್ರಕಟಿಸಿದ್ದ ಲೇಖನವನ್ನು ಸೇರಿಸಿಕೊಳ್ಳಲು ಒಪ್ಪಿಗೆ ಕೇಳಿದರು. ಆ ಲೇಖನ ಬರೆದು ಸುಮಾರು ಮೂವತ್ತು  ವರ್ಷಗಳಾಗಿದ್ದವು. ಈ ಅವಧಿಯಲ್ಲಿ ಅನಂತಮೂರ್ತಿಯವರ ಬರೆವಣಿಗೆಯೂ ಬದಲಾಗಿತ್ತು, ನನ್ನ ಯೋಚನೆಗಳೂ ಬದಲಾಗಿದ್ದವು. ಹೀಗಾಗಿ ಆ ಹಳೆಯ ಲೇಖನ ಬೇಡ, ಪ್ರತ್ಯೇಕ ಬರೆದು ಕೊಡುತ್ತೇನೆ ಎಂದು ಅನಂತಮೂರ್ತಿಯವರ ಎಲ್ಲಾ ಬರೆಹ ಮತ್ತೊಮ್ಮೆ ಕೂತು ಓದಿ ಮೇಲಿನ ಲೇಖನ ಬರೆದೆ.

ಆ ಲೇಖನ ಬರೆದಾಗ ಅನಂತಮೂರ್ತಿಯವರ ಪ್ರಮುಖ ಸಮಕಾಲೀನ ಲೇಖಕರ ಬರೆಹಗಳು ನನ್ನ ಮನಸ್ಸಿನಲ್ಲಿದ್ದವು. ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ, ಶಾಂತಿನಾಥ ದೇಸಾಯಿ, ಲಂಕೇಶ್, ಯಶವಂತ ಚಿತ್ತಾಲ, ಗಂಗಾಧರ ಚಿತ್ತಾಲ, ರಾಮಚಂದ್ರ ಶರ್ಮ--ಅವರೆಲ್ಲರ ಬರೆಹಗಳು ನನಗೆ ಬೇರೆ ಬೇರೆ ಕಾರಣಗಳಿಗಾಗಿ ಇಷ್ಟ. ಗೋಪಾಲಕೃಷ್ಣ  ಅಡಿಗರಂತೂ ಕವಿಯಾಗಿ ಮಾತ್ರವಲ್ಲ, ನನ್ನ ಅಭ್ಯುದಯದಲ್ಲಿ ಆಸಕ್ತರಾಗಿದ್ದವರು,  ಪಿತೃ ಸಮಾನರು ಎಂದು ನಾನು ಗೌರವದಿಂದ ನೆನೆಸಿಕೊಳ್ಳುವವರು.

ಇವರೆಲ್ಲರನ್ನು ಸಾಹಿತ್ಯದ ಬಗ್ಗೆ ಆಸಕ್ತಿ ತಳೆಯಲು ಪ್ರಾರಂಭಿಸಿದಾಗಲೇ ಓದಿದ್ದೆ. ಲಂಕೇಶರ ನಾಟಕ ನನ್ನ ತಂಗಿಗೊಂದು ಗಂಡು ಕೊಡಿಯನ್ನು  ನಾನು ಮತ್ತು ಇನ್ನಿಬ್ಬರು ಸ್ನೇಹಿತರು  ನಾನು ಹೈಸ್ಕೂಲು ಓದುತ್ತಿದ್ದಾಗ ಪ್ರಾರಂಭಿಸಿದ ವಸಂತ ಸಾಹಿತ್ಯ ಎಂಬ ಪ್ರಕಾಶನದ ಮೂಲಕ ಪ್ರಕಟಿಸಿದ್ದೆವು. ಮುಂದೆ ನಾನು ಕಾಲೇಜು ಓದುತ್ತಿದ್ದಾಗ ಪ್ರಜಾವಾಣಿ  ಕಥಾಸ್ಪರ್ಧೆಗೆ ನನ್ನ ಮೊದಲ ಕಥೆ "ದೂರ ನಿಂತವರು" ಕಳಿಸಿದ್ದೆ. ವಿದ್ಯಾರ್ಥಿ ವಿಭಾಗದಿಂದ ಸ್ಪರ್ಧೆಗೆ ಕಳಿಸಿದ ಆ ಕತೆಯನ್ನು ಸಾರ್ವಜನಿಕ ವಿಭಾಗದಲ್ಲಿ ಪರಿಗಣಿಸಿ ಎರಡನೇ ಬಹುಮಾನ ಕೊಟ್ಟಿದ್ದರು. ಮೊದಲನೆಯ ಬಹುಮಾನ ಸಾರ್ವಜನಿಕ ವಿಭಾಗದಿಂದಲೇ ಸ್ಪರ್ಧಿಸಿದ್ದ ಸೂ. ರಮಾಕಂತ್ ಗೆ ಸಿಕ್ಕಿತ್ತು.  ಆಗ ಚಂದ್ರಶೇಖರ ಕಂಬಾರರಂಥಾ ಘಟಾನುಘಟಿಗಳಲ್ಲದೆ ಮಹಾರಾಜಾ ಕಾಲೇಜಿನ ನನ್ನ ಒಬ್ಬರು ಅಧ್ಯಾಪಕರೂ ಸ್ಪರ್ಧಿಸಿದ್ದರು. ಆಗ ತೀರ್ಪುಗಾರರಾಗಿದ್ದವರು ಎಂ. ಕೆ. ಇಂದಿರಾ, ಭಾರತೀಪ್ರೀಯ, ಮತ್ತು ಲಂಕೇಶ್. ತೀರ್ಪುಗಾರರ ಪರವಾಗಿ ಬರೆದ ಸಮೀಕ್ಷೆಯಲ್ಲಿ ಲಂಕೇಶ್  ನನ್ನ ಮತ್ತು ರಮಾಕಾಂತರ ಕತೆಗಳನ್ನು ಗಿಡ ಹೂ ಬಿಟ್ಟಂತೆ ಅರಳಿರುವ ಕತೆಗಳೆಂದು ಹೊಗಳಿದ್ದರು. ಅವರ ಅಭಿಪ್ರಾಯ ನಾವು ನಮ್ಮ ವಯಸ್ಸಿಗೆ ಸಹಜವಾದ  ಅನುಭವಗಳನ್ನು ಕತೆಯಾಗಿ ಮಾಡಿದ್ದೇವೆ ಎಂದಾಗಿತ್ತು. ಆಗಿನ್ನೂ ಹದಿನೆಂಟು ವರ್ಷದವನಾಗಿದ್ದ ನಾನು ಹಳ್ಳಿ ಬಿಟ್ಟು ಪೇಟೆಗೆ ಬಂದದ್ದು, ಅದರಿಂದಾಗಿ ಮನೆಯವರಿಂದ ದೂರ ಆದದ್ದು ಮೊದಲಾದವುಗಳ ಕುರಿತು ಬರೆದಿದ್ದೆ. ನನಗಿಂತ ದೊಡ್ಡವರಾದ ರಮಾಕಾಂತ ಹೆಚ್ಚು ಪ್ರೌಢರ ಅನುಭವಕ್ಕೆ ಶರೀರ ಕೊಟ್ಟಿದ್ದರು. 

ಮುಂದೆ ಎರಡು ಮೂರು ವರ್ಷ ಕಳೆದ ಮೇಲೆ ನಾನಿನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಲಂಕೇಶ್ ನನಗೆ ಅಪಮಾನಕರವಾಗಿ ಬೈದು ಬರೆದರು. ಅದಕ್ಕೆ ಕಾರಣ-- ಅವರೇ ನನ್ನ ಸ್ನೇಹಿತನ ಹತ್ತಿರ ಹೇಳಿದಂತೆ--ಬುದ್ಧಣ್ಣ ಹಿಂಗಮಿರೆ ಹೊಸ ಜನಾಂಗದ ಕವಿತೆಗಳು ಎಂಬ ಒಂದು ಕವನ ಸಂಗ್ರಹ ತಂದಿದ್ದರು; ಅದರಲ್ಲಿ ನನ್ನದೊಂದು ಕವಿತೆ ಇತ್ತು; ಅದರಲ್ಲಿ ನನಗೆ ಇಷ್ಟವಾದ ಹಿಂದಿನ ತಲೆಮಾರಿನ ಲೇಖಕರ ಹೆಸರು ಹೇಳುವಾಗ ನಾನು ಅವರ ಹೆಸರು ಹೇಳಿಲ್ಲ ಎಂದು ಅವರಿಗೆ ಸಿಟ್ಟು ಬಂದಿತ್ತಂತೆ.
ಇದಾದ ಕೆಲವು ವರ್ಷದ ಮೇಲೆ ನನ್ನ ಇಂದ್ರಪ್ರಸ್ಥ ಪ್ರಕಟವಾದಾಗ ಅದನ್ನು  ಹೊಗಳಿದರು. ಅದರ ಬಗ್ಗೆ ಬರೆದರು.

ಲಂಕೇಶರಿಗೆ ಸ್ಥಾಯೀಭಾವ ಸಿಟ್ಟು, ಅಸೂಯೆಗಳು, ಸಾಹಿತ್ಯಿಕ ಅಭಿರುಚಿ ಮೊದಲಾದವು ಸಂಚಾರೀಭಾವಗಳು ಎಂಬ ಮಾತು ಇಂಥಾ ವರ್ತನೆಯಿಂದಲೇ ಹುಟ್ಟಿರಬಹುದು.

ಆದರೆ ಆಗ ಆಗಲೀ ಅನಂತಮೂರ್ತಿ ಕುರಿತ ಮೇಲಿನ ಲೇಖನ ಬರೆಯುತ್ತಿದ್ದಾಗಲಾಗಲೀ ನಾನು ಭೈರಪ್ಪನವರನ್ನು ಗಂಭೀರವಾಗಿ ಪರಿಗಣಿಸಿದ್ದೆ ಎಂದು ಹೇಳಲಾರೆ. ಅನೇಕರು  ಯೋಚಿಸುವಂತೆ ನಾನೂ ಅವರೊಬ್ಬ ಜನಪ್ರಿಯ ಕಾದಂಬರಿಕಾರ ಎಂದೇ ತಿಳಿದುಕೊಂಡಿದ್ದೆ. 2000ನೇ ಇಸವಿ ಹೊತ್ತಿಗೆ ಜ್ಞಾನಪೀಠ ಪ್ರಶಸ್ತಿ ಸಮಿತಿಯವರು ಆ ವರ್ಷದ ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಕೇಳಿದರು. ಹೀಗೆ ಅವರು ಬಹುಶಃ ಅನೇಕ ಲೇಖಕರನ್ನು ದೇಶಾದ್ಯಂತ ಕೇಳುತ್ತಾರೆ. ನಾನು ಯಾರನ್ನದರೂ ಸೂಚಿಸುವ ಮೊದಲು ಮತ್ತೊಮ್ಮೆ ಇವರನ್ನೆಲ್ಲಾ ಯಾಕೆ ಓದಬಾರದು ಅನ್ನಿಸಿ ಎಲ್ಲರನ್ನೂ ಓದಿದೆ. ಭೈರಪ್ಪನವರನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ,  ಇದೇ ಸಂದರ್ಭ ಎಂದು ಅವರ ಎಲ್ಲಾ ಪುಸ್ತಕಗಳನ್ನು ತರಿಸಿ ಓದಿದೆ. ನನಗೆ ಆಶ್ಚರ್ಯ ಕಾದಿತ್ತು.

ಆಗ ನನಗೆ ಅನ್ನಿಸಿದ್ದು ಹೀಗೆ.

ಭೈರಪ್ಪನವರ ಕಾದಂಬರಿಗಳಲ್ಲಿ ಎರಡು ಹಂತಗಳನ್ನು ಕಾಣಬಹುದು. ಮೊದಲನೆಯ ಹಂತ ಪರ್ವದ ವರೆಗೆ. ಅಷ್ಟರ ವರೆಗೆ ಅವರು ತಮ್ಮ ಸಿದ್ಧಾಂತಗಳಿಗೆ ಅನುಗುಣವಾಗಿ ಪಾತ್ರಗಳನ್ನು ಘಟನೆಗಳನ್ನು ರೂಪಿಸಿಕೊಳ್ಳುತ್ತಿದ್ದರು. ತಮ್ಮ ಸಿದ್ಧಾಂತಗಳ ಪ್ರತಿಪಾದನೆಯೇ ಅವರಿಗೆ ಮುಖ್ಯವಾಗಿತ್ತು ಹೊರತು ಕಾದಂಬರಿಯ ಕಲೆಯಾಗಲೀ ಅನುಭವಶೋಧವಾಗಲೀ ಅಲ್ಲ. ಆದರೆ ಪರ್ವ ಮತ್ತು ಆನಂತರ ಅವರ ಬರೆವಣಿಗೆಯ ಕ್ರಮ ಬದಲಾಗಿದೆ. ಇಲ್ಲಿ ತಮ್ಮ ಸಿದ್ಧಾಂತಗಳನ್ನೇ ಅವರು ಅನುಭವದ ಬೆಳಕಿನಲ್ಲಿ ಪರೀಕ್ಷಿಸುತ್ತಿದ್ದಾರೆ. ಪರ್ವ ಮತ್ತು ಆನಂತರದ  ಅವರ ಬರೆವಣಿಗೆಗಳು ಕಲಾಕೃತಿಗಳು. ಪರ್ವದ ಬಳಿಕ ಅವರ ಬರೆವಣಿಗೆ ಬದಲಾಗಿದೆ ಎಂಬುದನ್ನು ಪರಿಗಣಿಸದೆ ಹೋದರೆ ಲೇಖಕರಾಗಿ ಅವರ ಮಹತ್ವ ಗೊತ್ತಾಗುವುದಿಲ್ಲ. ಯಾಕೆಂದರೆ ಅವರು ಕಲಾಕೃತಿಗಳನ್ನು ನಿರ್ಮಿಸತೊಡಗಿದ್ದೇ ಪರ್ವ ಮತ್ತು ಆನಂತರ. ಅದಕ್ಕಿಂತ ಹಿಂದಿನ ಬರೆವಣಿಗೆಯಲ್ಲಿ ಸಿದ್ಧಾಂತ ಪ್ರತಿಪಾದನೆಯೇ ಹೆಚ್ಚು. ಗೃಹಭಂಗ ಒಂದು ವಿನಾಯಿತಿ ನಿಜ. ಆದರೆ ಪರ್ವದ ನಂತರ ಗೃಹಭಂಗವನ್ನು  ಮೀರಿಸುವ ಕೃತಿಗಳನ್ನು ಅವರು ರಚಿಸಿದ್ದಾರೆ. ನೆಲೆ, ತಂತು, ಸಾಕ್ಷಿ ಕೆಲವು ಉದಾಹರಣೆಗಳು.

ಭೈರಪ್ಪನವರ ಬಗ್ಗೆ ಎರಡು ದೃಷ್ಟಿಕೋನಗಳಿವೆ. ಒಂದು ದೃಷ್ಟಿಕೋನದ ಪ್ರಕಾರ ಅವರೊಬ್ಬ ಜನಪ್ರಿಯ ಕಾದಂಬರಿಕಾರ. ಈ ದೃಷ್ಟಿಕೋನದ ಪ್ರವರ್ತಕರು ಅನಂತಮೂರ್ತಿ. 1970ರ ಸುಮಾರಿಗೆ ಗ್ರಹಣ ಕಾದಂಬರಿಗೆ ಸಂಬಂಧಿಸಿದಂತೆ ಅವರು ಈ ವಿಶ್ಲೇಷಣೆ ಮಾಡಿದರು. ಸುಮಾರು ನಲುವತ್ತು ವರ್ಷಗಳ ಹಿಂದಿನ ಈ ನಿಲುವನ್ನೇ ಅವರು ಇತ್ತೀಚೆಗೆ ಮೂರು ನಾಲ್ಕು ವರ್ಷಗಳ ಹಿಂದೆ ಆವರಣ ಪ್ರಕಟವಾದ ಸುರುವಿಗೆ ಮತ್ತೆ ಪ್ರತಿಪಾದಿಸಿದ್ದಾರೆ. ಅದರಲ್ಲಿ ಅವರು ಹೇಳುತ್ತಿರುವುದು ಭೈರಪ್ಪನವರ ಎಲ್ಲಾ ಕಾದಂಬರಿಗಳಲ್ಲಿ ಪದಗಳು ಓದುಗರನ್ನು ಮೆಚ್ಚಿಸುವುದಕ್ಕಾಗಿ ಬಳಕೆಯಾಗಿವೆ ಎಂದು. ಆದ್ದರಿಂದಲೇ ಅವರು ಜನಪ್ರಿಯನಾಗುವುದರತ್ತ--ಬಾಹ್ಯದತ್ತ-- ಮುಖಮಾಡಿ ಬರೆಯುತ್ತಿರುವ, ಅಂತರ್ದೃಷ್ಟಿ ಇಲ್ಲದ ಲೇಖಕ ಎಂದು. ಅದನ್ನು ಓದಿದಾಗ ಈ ದೃಷ್ಟಿಕೋನವನ್ನು ಪರ್ವದ ನಂತರ ಪ್ರಕಟವಾದ ತಂತು, ಸಾಕ್ಷಿ, ನೆಲೆಗಳಂಥಾ ಕಾದಂಬರಿಗಳ ಬಗ್ಗೆ ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ಕೇಳಬೇಕೆನ್ನಿಸಿತು. ಅವು ಕನ್ನಡದಲ್ಲಿ 20ನೇ ಶತಮಾನದಲ್ಲಿ ಬಂದ ಶ್ರೇಷ್ಠ ಕಾದಂಬರಿಗಳಲ್ಲಿ ಕೆಲವು.

ಇನ್ನೊಂದು ದೃಷ್ಟಿಕೋನ ಭೈರಪ್ಪನವರ ಎಲ್ಲಾ ಕಾದಂಬರಿಗಳನ್ನು ಶ್ರೇಷ್ಠ ಎಂದು ಪರಿಗಣಿಸುತ್ತದೆ. ಈ ದೃಷ್ಟಿಕೋನದವರು ಪರ್ವದ ವರೆಗೆ ಅವರು ತಮ್ಮ ಥಿಯರಿಗಳಿಗೆ ಅನುಗುಣವಾಗಿ ಪಾತ್ರ ಮತ್ತು ವಿವರ ಆರಿಸಿ ಬರೆಯುತ್ತಿದ್ದರು, ಅಲ್ಲಿ ಅನುಭವ ಶೋಧ ಇರಲಿಲ್ಲ, ತತ್ತ್ವ  ಪ್ರತಿಪಾದನೆ ಮಾತ್ರ ಇತ್ತು ಎಂಬುದನ್ನು ಪರಿಗಣಿಸುವುದಿಲ್ಲ.

ಕಾದಂಬರಿಗಳಾಗಿ ನನಗೆ ಪರ್ವದ ವರೆಗಿನ ಬರವಣಿಗೆ ಬಗ್ಗೆ ವಿಶೇಷ ಉತ್ಸಾಹ ಇಲ್ಲ. ಅಲ್ಲಿ ತತ್ವಪ್ರತಿಪಾದನೆಯೇ ಮುಖ್ಯವಾಗಿ ಕಲೆ ಹಿಂದೆ ಉಳಿಯುತ್ತದೆ. ಪರ್ವ ಮತ್ತು ಆನಂತರದ ಶ್ರೇಷ್ಠ ಕಾದಂಬರಿಗಳ ಬರೆವಣಿಗೆಗಾಗಿ ಮಾಡಿದ ತಯಾರಿ ಎಂದು ಬೇಕಾದರೆ ಅವನ್ನು ಪರಿಗಣಿಸಬಹುದು. ಅಲ್ಲಿ ವಿಪುಲವಾದ ವಿವರಗಳಿವೆ. ಆದರೆ ತಮ್ಮ ಥಿಯರಿಗಳನ್ನು ಮೀರಿ ಅವನ್ನು ಕಲಾಕೃತಿಗಳ ಅಂಗವಾಗಿ ಕಟ್ಟಲು ಪ್ರಾರಂಭಿಸಿದ್ದು ಪರ್ವದ ನಂತರ.

ಈ ಕಾದಂಬರಿಗಳಲ್ಲಿ ಕೆಳ ಮಟ್ಟದ ಸಾಧನೆ ಎಂದು ಹೇಳಬಹುದಾದ್ದು ಆವರಣವನ್ನು ಮಾತ್ರ. ಆದರೆ ಅನಂತಮೂರ್ತಿಯವರು ಹೇಳುವಂತೆ ಅದರಲ್ಲಿ ದ್ವೇಷ ಇದೆ ಎಂಬುದು ಕಾರಣ ಅಲ್ಲ. ಜೊತೆ ಲೇಖಕರನ್ನು ಬೇಂದ್ರೆ , ಅಡಿಗರಿಂದ ಹಿಡಿದು ಅನೇಕರು ತಮ್ಮ ಕೃತಿಗಳಲ್ಲಿ ಲೇವಡಿ ಮಾಡಿದ್ದಾರೆ. ಅನಂತಮೂರ್ತಿಯವರೇ ತಮ್ಮ ಭಾರತೀಪುರದಲ್ಲಿ ಒಂದು ಕಾಲದ ತಮ್ಮ ಸ್ನೇಹಿತರನ್ನು ಲೇವಡಿ ಮಾಡಿದ್ದಾರೆ. ಡಾಸ್ಟವಸ್ಕಿಯ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾದ ದಿ ಪೊಸೆಸ್ಡ್ ನಲ್ಲಿ ಇನ್ನೊಬ್ಬ ಶ್ರೇಷ್ಠ ಕಾದಂಬರಿಕಾರ ಟರ್ಜಿನೀವನನ್ನು ಲೇವಡಿ ಮಾಡಲಾಗಿದೆ. ಇದು ಗೊತ್ತಿದ್ದವರಿಗೆ ಆಯಿತು; ಇಲ್ಲದವರಿಗೆ ಇವರು ಕಾದಂಬರಿಯ ಪಾತ್ರಗಳಾಗಿ ಮಾತ್ರ ಗೋಚರಿಸುತ್ತಾರೆ. ಪ್ರೊಫೆಸರ್ ಶಾಸ್ತ್ರಿಯ ಚಿತ್ರಣದಲ್ಲಿ ದ್ವೇಷಕ್ಕಿಂತ ಹೆಚ್ಚು ಗಾಢ ಆಸಕ್ತಿಯೇ ಕಾಣುತ್ತದೆ. ಆತ ಲೇಖಕರು ತಮ್ಮನ್ನು ಪೂರ್ತಿ ತೊಡಗಿಸಿಕೊಂಡು ಚಿತ್ರಿಸಿದ ಪಾತ್ರ. ಆದರೆ ನನಗೆ ಆ ಕಾದಂಬರಿ ಅಷ್ಟೊಂದು ದೊಡ್ಡ ಸಾಧನೆ ಅಲ್ಲ ಎನ್ನಿಸದಿರಲು ಕಾರಣ ಅಲ್ಲಿನ ಮುಸ್ಲಿಮರ ಚಿತ್ರಣ ಪುಸ್ತಕಗಳಿಂದ ತೆಗೆದ ವಿವರಗಳನ್ನು ಆಧರಿಸಿದೆ ಎನ್ನುವುದಾಗಿದೆ. ಫಕೀರ್ ಮಹಮ್ಮದ್ ಕಟ್ಪಾಡಿ, ಸಾರಾ ಅಬೂಬಕ್ಕರ್ ಮೊದಲಾದರು ಕೊಡುವ ಮುಸ್ಲಿಮರ ಜೀವನ ಚಿತ್ರಣ ಹೆಚ್ಚು ಆತ್ಮೀಯವಾಗಿದೆ. ಅಲ್ಲದೆ ಮುಸ್ಲಿಮರ ಜೀವನ ನಮಾಜಿಗೆ ಸೀಮಿತವಾದದ್ದಲ್ಲ. ಉಳಿದ ಜನಾಂಗಗಳಂತೆ ಬಸುರು ಬಾಣಂತನ ಹುಟ್ಟು ಮದುವೆ ಸಾವುಗಳಿಂದ ಸುತ್ತುವರಿದದ್ದು. ಈ ಕಾದಂಬರಿಯಲಲ್ಲಿ ಭೈರಪ್ಪನವರು ಪರ್ವ-ಪೂರ್ವ ಕಾದಂಬರಿಗಳಂತೆ ಮತ್ತೆ ತಮ್ಮ ಥಿಯರಿಗೆ ಅನುಗುಣವಾಗಿ ಬರೆದಿದ್ದಾರೆ.

ಅನಂತಮೂರ್ತಿ ಜೊತೆಗೆ ಭೈರಪ್ಪನವರನ್ನು ಹೋಲಿಸುವಂತೆ ಅನಂತಮೂರ್ತಿಯವರೇ ಒತ್ತಾಯಿಸುತ್ತಾರೆ. ಯಾಕೆಂದರೆ ಅವರನ್ನು ಜನಪ್ರಿಯ ಕಾದಂಬರಿಕಾರ, ಗಂಭೀರ ಪರಿಶೀಲನೆಗೆ ಅರ್ಹ ಅಲ್ಲ ಎಂಬ ರೀತಿಯಲ್ಲಿ ಬರೆದವರು ಅನಂತಮೂರ್ತಿಯವರೇ. ಆದರೆ ಪರ್ವ ಮತ್ತು ಆನಂತರದ ಕಾದಂಬರಿಗಳಲ್ಲಿ--ಆವರಣ ಹೊರತು ಪಡಿಸಿ--ಚಿತ್ರಿತವಾಗುವ ಅನುಭವ ವಿಸ್ತಾರ, ಪಾತ್ರ ಚಿತ್ರಣ, ವ್ಯಾಪ್ತಿಗಳು ಅವರನ್ನು ಕನ್ನಡದ ಒಬ್ಬ ಶ್ರೇಷ್ಠ ಕಾದಂಬರಿಕಾರರನ್ನಾಗಿ ಮಾಡಿವೆ. ಅವರ ದೃಷ್ಟಿಕೋನ ನನ್ನ ದೃಷ್ಟಿಕೋನ ಅಲ್ಲ ಎಂಬುದು ಅವರ ಉತ್ತಮಿಕೆಯನ್ನು ಮೆಚ್ಚಲು ನನಗೆ ತೊಂದರೆ ಆಗಿಲ್ಲ--ಎಲಿಯಟ್ ನ ಕ್ರಿಶ್ಚಿಯನ್ ದೃಷ್ಟಿಕೋನ, ಶೇಕ್ ಸ್ಪಿಯರನ ವಂಶಪಾರಂಪರ್ಯ-ರಾಜತ್ವ-ನಿಷ್ಠ-ದೃಷ್ಟಿಕೋನ ಅವರ ಕೃತಿಗಳನ್ನು ಮೆಚ್ಚಲು ಹೇಗೆ ತೊಂದರೆ ಆಗಿಲ್ಲವೋ ಹಾಗೆ.

1999ರಲ್ಲಿ ಅನಂತಮೂರ್ತಿ ಕುರಿತು ಬರೆದ ಲೇಖನ ಈ ಟಿಪ್ಪಣಿ ಇಲ್ಲದೆ ಪೂರ್ಣ ಎಂದು ಈಗ ಅನ್ನಿಸುವುದಿಲ್ಲವಾದ್ದರಿಂದ ಇದನ್ನು ಸೇರಿಸಿದ್ದೇನೆ.
Wednesday, April 20, 2011

ಯು. ಆರ್. ಅನಂತಮೂರ್ತಿ--2*********************************


ಯು. ಆರ್. ಅನಂತಮೂರ್ತಿ--1


ಮೇಲಿನದ್ದು ಮಿತ್ರ ಮುರಳೀಧರ ಉಪಾಧ್ಯ ಯು. ಆರ್. ಅನಂತಮೂರ್ತಿ ಮೇಲೆ 2000ರಲ್ಲಿ ತಂದ  (ಪ್ರಕಾಶಕರು: ಕರ್ನಾಟಕ ಸಂಘ, ಪುತ್ತೂರು) ಪುಸ್ತಕದಲ್ಲಿ ಪ್ರಕಟವಾದ ನನ್ನ ಲೇಖನದ ಭಾಗ. ಮುಂದುವರಿಯುವುದು.

***************