Sunday, January 9, 2011

ಉಪನಿಷತ್ತು ಕುರಿತು 4

ಉಪನಿಷತ್ತುಗಳಲ್ಲಿ ಸಾವನ್ನು ಮನುಷ್ಯ ಹೇಗೆ ಎದುರಿಸುತ್ತಾನೆ ಎಂಬ ಬಗ್ಗೆ ಚಿಂತನೆಗಳಿವೆ. ಉದಾಹರಣೆಗೆ ಬೃಹದಾರಣ್ಯಕದಲ್ಲಿ ನುಂಗಲೆಂದು ಸಾವು ಬಾಯಿ ಅಗಲಿಸುತ್ತದೆ. ಅಗಲಿಸಿದ ಆ ಬಾಯಿಯಿಂದಲೇ ಭಾಣ್ ಎಂಬ ಶಬ್ದ ಬರುತ್ತದೆ. ಆ ಭಾಣ್ ಶಬ್ದವನ್ನೇ ಬಳಸಿ `ಅವನು` ಎಂದು ಸೂಚಿತನಾದ ವ್ಯಕ್ತಿ ಉದ್ಗೀಥ ಮಾಡಿ ಹಾಡುತ್ತಾನೆ. ಹೀಗೆ ಸಾವಿನ ಬಾಯಿಯಿಂದಲೇ ಸಾವನ್ನು ಎದುರಿಸುವ ಉದ್ಗೀಥ ಹುಟ್ಟುತ್ತದೆ. ಛಾಂದೋಗ್ಯದಲ್ಲೂ ಹೀಗೇ ಸಾವನ್ನು ಎದುರಿಸುವ ಪ್ರಸಂಗ ಬರುತ್ತದೆ. ದೇವತೆಗಳಿಗೆ ಸಾವಿನ ಭಯವಾಗಿ ಅವರು ಛಂದಸ್ಸಿನಲ್ಲಿ, ವೇದಗಳಲ್ಲಿ ಅಡಗಿ ತಮ್ಮನ್ನು ತಾವು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಸಾವಿನ ಅಪರಿಹಾರ್ಯತೆಯ ಅರಿವು ಉಪನಿಷತ್ಕಾರರಿಗೆ ಇದೆ. ಹಾಗೆಯೇ ಮನಸ್ಸಿನ ಮೂಲಕ, ಅರಿವಿನ ಮೂಲಕ, ಉದ್ಗೀಥದ ಮೂಲಕ ಅದನ್ನು ಮೀರಬಲ್ಲೆವು ಎಂಬ ಅರಿವೂ ಇದೆ.

ಕಠೋಪನಿಷತ್ತಿನಲ್ಲೂ ಸಾವಿನ ಕುರಿತ ಚಿಂತನೆ ಕಾಣುತ್ತದೆ. ಈ ಉಪನಿಷತ್ತು ನಚಿಕೇತ ಎಂಬ ಹುಡುಗ ಸಾವು ಮತ್ತು
ಕಾಲಗಳ ದೇವರಾದ ಯಮನನ್ನು ಭೇಟಿಯಾಗಿ ನಡೆಸುವ ಸಂಭಾಷಣೆಯಿಂದ ಕೂಡಿದೆ. ನಚಿಕೇತನ ತಂದೆ ವಾಜಶ್ರವಸ ಸದ್ಗತಿ ಬೇಕೆಂದು ತನ್ನಲ್ಲಿದ್ದ ಎಲ್ಲಾ ಬಡಕಲು ದನಗಳನ್ನು ಬ್ರಾಹ್ಮಣರಿಗೆ ದಾನ ಕೊಡುತ್ತಾನೆ. ಅದನ್ನು ಕಾಣುತ್ತಿದ್ದ ನಚಿಕೇತ ನನ್ನನ್ನು ಯಾರಿಗೆ ಕೊಡುತ್ತೀ ಎಂದು ತಂದೆಯನ್ನು ಕೇಳುತ್ತಾನೆ. ತಂದೆ ಉತ್ತರಿಸುವುದಿಲ್ಲ. ನಚಿಕೇತ ಪಟ್ಟು ಬಿಡದೆ ಮತ್ತೆ ಮತ್ತೆ ಕೇಳಿದಾಗ ಸಿಟ್ಟಿಗೆದ್ದ ತಂದೆ ಹಾ, ನಿನ್ನನ್ನು ಯಮನಿಗೆ ಕೊಡುತ್ತೇನೆ ಎಂದು ಗದರುತ್ತಾನೆ. ತಂದೆ ಹೇಳಿಯಾಯಿತಲ್ಲ, ಹಾಗಾದರೆ ಕೊಟ್ಟ ಹಾಗೇ ಎಂದು ಮನೆ ಬಿಟ್ಟು ಹೊರಟು ನಚಿಕೇತ ಯಮನಲ್ಲಿಗೆ ಬರುತ್ತಾನೆ. ಯಮ ಮನೆಯಲ್ಲಿಲ್ಲ. ಎತ್ತ ಹೋಗಿದ್ದಾನೆ? ಗೊತ್ತಿಲ್ಲ. ಸರಿ, ಬರುವ ವರೆಗೆ ಕಾಯುವ. ಮೂರು ಹಗಲು ಮೂರು ರಾತ್ರಿ ಕಳೆದ ಮೇಲೆ ಯಮ ಬಂದ. ಕಾಯುತ್ತಿರುವ ನಚಿಕೇತನ ಶ್ರದ್ಧೆಯಿಂದ ಖುಷಿಯಾಗಿ ನಿನಗೆ ಬೇಕಾದ ಮೂರು ವರ ಕೊಡುತ್ತೇನೆ ಎಂದ. ಮೊದಲನೆಯದಾಗಿ ನಚಿಕೇತ ಬಯಸಿದ್ದು ತನ್ನ ತಂದೆಯ ಜತೆ ತನ್ನ ಸಂಬಂಧ ಹಿಂದಿನಂತೆ ಪ್ರೀತಿಪೂರ್ವಕವಾಗಿ ಇರಬೇಕು ಎಂದು. ಎರಡನೆಯ ವರವಾಗಿ ನಚಿಕೇತ ಕೇಳಿದ: "ಸ್ವರ್ಗದಲ್ಲಿ ಸಾವಿಲ್ಲ; ಸಾವಿನ ಭಯವೂ ಇಲ್ಲ. ಯಜ್ಞದ ಮೂಲಕ ಇಂಥಾ ಸ್ವರ್ಗ ಪಡೆಯಬಹುದು ಅನ್ನುತ್ತಾರೆ. ಅದು ಯಾವ ಯಜ್ಞ? ಅದನ್ನು ಮಾಡುವುದು ಹೇಗೆ?" ಯಮ ನಚಿಕೇತನಿಗೆ ಯಜ್ಞ ಮಾಡುವ ಕ್ರಮ ತಿಳಿಸಿಕೊಟ್ಟದ್ದಲ್ಲದೆ ಅದನ್ನು ಮುಂದೆ ಜನ ನಚಿಕೇತಾಗ್ನಿ ಎಂಬ ಹೆಸರಿನಿಂದ ಕರೆಯುವಂತೆ ನಿಯಮಿಸಿದ.

ನಚಿಕೇತ ಕೇಳಿದ ಮೂರನೆಯ ವರ ಮಾತ್ರ ಯಮನನ್ನು ದಿಕ್ಕುಗೆಡಿಸಿತು. ಅವ ಕೇಳಿದ: "ಸತ್ತ ನಂತರ ಮನುಷ್ಯ ಏನಾಗುತ್ತಾನೆ? ಕೆಲವರು ಹೇಳುತ್ತಾರೆ ದೇಹ ಸತ್ತರೆ ಮುಗಿಯಿತು ಎಂದು; ಇನ್ನು ಕೆಲವರು ಪರಲೋಕದಲ್ಲಿ ಮನುಷ್ಯ ಬದುಕುತ್ತಾನೆ ಎನ್ನುತ್ತಾರೆ. ಯಾವುದು ನಿಜ?"
ಯಮ: ಇಂಥಾ ಪ್ರಶ್ನೆ ಕೇಳಬಾರದು. ಬೇರೆ ಕೇಳು.
ನಚಿಕೇತ: ಇಲ್ಲ. ಈ ಪ್ರಶ್ನೆಗೇ ಉತ್ತರ ಬೇಕು.
ಯಮ: ದೇವರುಗಳಿಗೇ ಈ ಪ್ರಶ್ನೆಗೆ ಉತ್ತರ ಗೊತ್ತಿಲ್ಲ. ನಿನಗೆ ಹೇಗೆ ಹೇಳುವುದು? ಎಷ್ಟು ಹಣ, ವಸ್ತ್ರ, ಚಿನ್ನ--ಏನು ಬೇಕು ಕೇಳು, ಕೊಡುತ್ತೇನೆ. ಈ ಪ್ರಶ್ನೆ ಕೇಳಬೇಡ.
ನಚಿಕೇತ: ನನಗೆ ಇವು ಯಾವುದೂ ಬೇಡ. ನನ್ನ ಪ್ರಶ್ನೆಗೆ ಉತ್ತರ ಬೇಕು. ಹೇಳು.
ಯಮ: ನಿನ್ನನ್ನು ದೊಡ್ಡದೊಂದು ಸಾಮ್ರಾಜ್ಯಕ್ಕೆ ಚಕ್ರವರ್ತಿಯಾಗಿ ಮಾಡುತ್ತೇನೆ. ಈ ಪ್ರಶ್ನೆ ಕೇಳಬೇಡ.
ನಚಿಕೇತ: ನನಗೆ ಸಾಮ್ರಾಜ್ಯ ಬೇಡ. ಸತ್ಯ ಬೇಕು. ಹೇಳು.
ಯಮ: ಇದೊಂದು ಬಿಟ್ಟು ಬೇರೆ ಏನು ಬೇಕಾದರೂ ಕೇಳು. ಕೊಡುತ್ತೇನೆ.
ನಚಿಕೇತ: ನಿನ್ನ ಹೊರತಾಗಿ ಬೇರೆ ಯಾರನ್ನೂ ನಾನು ಈ ಪ್ರಶ್ನೆ ಕೇಳಲಾರೆ. ಇದಕ್ಕೆ ಉತ್ತರ ಬೇಕು. ಹೇಳು.


ನನಗೆ ಈ ಕತೆಯಲ್ಲಿ ಇಷ್ಟವಾದದ್ದು ನಚಿಕೇತ ತಾನು ನಂಬಿದ್ದರ ಬಗ್ಗ್ಗೆ ತೋರಿಸುವ ಶ್ರದ್ಧೆ. ಎಂಥಾ ಪ್ರಲೋಭನೆಗಳಿಂದಲೂ ಅವನ ಬೌದ್ಧಿಕ ಕುತೂಹಲ, ಸತ್ಯ ತಿಳಿಯಬೇಕೆಂಬ ನಿಷ್ಠೆ ಸುಮ್ಮನಾಗುವುದಿಲ್ಲ. ಆದ್ದರಿಂದಲೇ ನನಗೆ ಅವನು ಭಾರತೀಯ ವಾಙ್ಮಯದಲ್ಲಿ ಚಿತ್ರಿತನಾಗಿರುವ ಮೊದಲ ಬುದ್ಧಿಜೀವಿಗಳಲ್ಲಿ ಒಬ್ಬ ಅನ್ನಿಸುತ್ತದೆ. ಉಪನಿಷತ್ತುಗಳಲ್ಲಿ ಈ ಬಗೆಯ ಬುದ್ಧಿಜೀವಿಗಳ ಚಿತ್ರ ಮತ್ತೆ ಮತ್ತೆ ಬರುತ್ತದೆ. ಅವರು ಸ್ವತಂತ್ರರು. ತಮ್ಮ ಅಭಿಪ್ರಾಯಗಳಿಗೂ ಕಟ್ಟುಬೀಳದಷ್ಟು ಸ್ವತಂತ್ರರು. ಅವರ ಬದ್ಧತೆ ಅವರ ಶ್ರದ್ಧೆಗೆ ಮಾತ್ರ. ಅವರ ಎದುರಾಳಿಗಳೂ ಈ ಬುದ್ಧಿಜೀವಿಗಳ ಶ್ರದ್ಧೆಗೆ ಸೋಲುವವರು. ಕಠೋಪನಿಷತ್ತುನಲ್ಲಿಯೂ ಕೊನೆಗೆ ಯಮ ಸೋತು ನಚಿಕೇತನಿಗೆ ಜೀವನದ ಕೆಲವು ರಹಸ್ಯಗಳನ್ನು ಹೇಳುತ್ತಾನೆ. ಸಾವಿನ ಈ ದೇವರು ಬದುಕು ಹೇಗೆ ಯಾವ ರೀತಿಯಲ್ಲಿ ಅರ್ಥಪೂರ್ಣವಾಗುತ್ತದೆ ಎಂದು ವಿವೇಚಿಸುತ್ತಾನೆ. ಅವನು ಶ್ರೇಯ ಪ್ರೇಯ ಎಂದು ಎರಡು ವಿಂಗಡಣೆಮಾಡುತ್ತಾನೆ. ಪ್ರೇಯ ಖುಷಿ ಕೊಡುವಂಥಾದ್ದು. ಶ್ರೇಯ ಒಳ್ಳೆಯದು. ನಚಿಕೇತ ಆರಿಸಿರುವಂತೆ ಶ್ರೇಯವಾದ್ದನ್ನು ಆರಿಸಬೇಕು, ಪ್ರೇಯವನ್ನಲ್ಲ ಎನ್ನುತ್ತಾನೆ; ಸಾರಥಿಯಾದವನು ರಥವನ್ನು ನಡೆಸುವಂತೆ ಮನಸ್ಸನ್ನು ನಡೆಸಬೇಕು ಎನ್ನುತ್ತಾನೆ; ಸಮಚಿತ್ತದಲ್ಲಿ ಉಳಿಯುವುದೇ ಮುಖ್ಯ ಎನ್ನುತ್ತಾನೆ. ಕ್ರಿಸ್ತ ಪೂರ್ವ 6-7 ಶತಮಾನದ್ದೆಂದು ಅಂದಾಜಿಸಿರುವ ಈ ಕೃತಿಯ ಕೆಲವು ರೂಪಕಗಳು, ಶ್ರೇಯ ಪ್ರೇಯಗಳೆಂಬ ವಿಂಗಡಣೆ ಗ್ರೀಕರ ಪ್ಲೇಟೋ (ಕ್ರಿಸ್ತ ಪೂರ್ವ 428-348)ನ ಮೇಲೆ ಪ್ರಭಾವ ಬೀರಿದೆ ಎನ್ನುತ್ತಾರೆ. ಕನ್ನಡದಲ್ಲಂತೂ ನಾವು ಪಾಶ್ಚಾತ್ಯರಿಂದ ಎಷ್ಟು ಪಡೆದಿದ್ದೇವೆ ಎಂಬುದರ ಪಟ್ಟಿಯೇ ಆಗಾಗ ಬರುತ್ತಿರುತ್ತದೆ. ಎಷ್ಟು ಕೊಟ್ಟಿದ್ದೇವೆ ಎಂಬುದರ ತಖ್ತೆ ಅಷ್ಟು ಸರಿಯಾಗಿ ಆಗಿಲ್ಲ. ಆಗುವುದು ಅಗತ್ಯ. ಅದು ಕನಿಷ್ಠ ನಮ್ಮ ಆತ್ಮವಿಶ್ವಾಸವನ್ನಾದರೂ ಹೆಚ್ಚಿಸಬಲ್ಲುದು.

No comments:

Post a Comment