(ಇದು 1974-75ರ ಸುಮಾರಿನ ನನ್ನ ಒಂದು ಫೊಟೋ. ಇದನ್ನು ತೆಗೆದವಳು ಎ. ಶಶಿಕಲಾ. ಹಿಂದಿನ ಕಂತಿನಲ್ಲಿ ಹಾಕಿದ ನನ್ನ ತಂದೆ ಮತ್ತು ಮಗಳ ಫೊಟೋ ಮತ್ತು ಸುರುವಿನ ಕಂತಿನಲ್ಲಿ ಹಾಕಿದ ನನ್ನ ಈಗಿನ ಮನೆ-ಅಂಗಳದ ಫೊಟೋ ತೆಗೆದವಳೂ ಅವಳೇ. ಈ ಕಪ್ಪು ಬಿಳಿ ಚಿತ್ರಗಳು ಕ್ಲಿಕ್ 3 ಎಂಬ ಅತ್ಯಂತ ಸಾಧಾರಣ ಕ್ಯಾಮೆರಾದಲ್ಲಿ ತೆಗೆದವುಗಳು)
ಚೆನ್ನಯ್ಯ ಒಳ್ಳೆಯ ನಟರು. ನ ರತ್ನರ ಎಲ್ಲಿಗೆ? ಯಲ್ಲಿ ಸಣ್ಣವನ ಪಾತ್ರ ಮಾಡಿದ್ದರು. ಅದು ಆಗ--ಸುಮಾರು 1967ರಲ್ಲಿ--ನಾನು ಆ ಬಗೆಯ ಹವ್ಯಾಸಿ ನಾಟಕಗಳನ್ನು ನೋಡಿದ್ದೇ ಸುರು ಆಗಿರುವಾಗ--ಪರಿಣಾಮಕಾರಿ ಅನ್ನಿಸಿತ್ತು. ಕೊನೆಯಲ್ಲಿ ಸಣ್ಣವ ಶಿರಡಿ ಸಾಯಿಬಾಬನ ಹಾಗೆ ಕೂರುವುದು, ತನ್ನ ಪೆದ್ದುತನದಲ್ಲಿಯೇ--ಏನು ಮಾಡುವುದೆಂದು ಗೊತ್ತಾಗದೆ-ಹತ್ತಿರ ಬಂದವನ ಕೆನ್ನೆಗೆ ಬಾರಿಸಿ ಪವಾಡ ಪುರುಷ ಎಂದಾಗಿಬಿಡುವುದು ಈಗಲೂ ನೆನಪಾಗುವ ಪರಿಣಾಮಕಾರಿ ರಂಗಾನುಭವವಾಗಿ ಉಳಿದುಕೊಂಡಿದೆ. ಅವರು ಅಭಿನಯಿಸಿದ ಇನ್ನೊಂದು ನಾಟಕ ನಾನು ನೋಡಿದ್ದು ಮೃಚ್ಛಕಟಿಕ. ಅದರಲ್ಲಿ ಅವರು ಶಕಾರನ ಪಾತ್ರ ವಹಿಸಿದ್ದರು. ಸ್ಪಷ್ಟ ಉಚ್ಛಾರವಿದ್ದ ಅವರು ಶ ಬದಲು ಸ ಹೇಳುತ್ತಿದ್ದುದು ಹೇಳುತ್ತಿದ್ದವನ ಕಾಕ್ಶುವರ್ನೆಸ್ಸಿನಿಂದಾಗಿಯೇ ಪರಿಣಾಮಕಾರಿಯಾಗಿತ್ತು. ಆದರೆ ನಾನು ದೆಹಲಿಯಲ್ಲಿ ಹಬೀಬ್ ತನ್ವೀರ್ ಅವರ ಮಿಟ್ಟೀ ಕಾ ಗಾಡಿ ಕೂಡಾ ನೋಡಿದ್ದೆ. ಅದು ಎಮರ್ಜೆನ್ಸಿ ಸಮಯದಲ್ಲಿ. ಪ್ರಧಾನ ಮಂತ್ರಿಯ ಮಗ ಸಂಜಯ ಗಾಂಧಿ ಬಲಾತ್ಕಾರದ ನಸ್ಬಂದಿ, ಸ್ಲಮ್ಮುಗಳಿಂದ ಜನರನ್ನು ಒಕ್ಕಲೆಬ್ಬಿಸಿ ಎಲ್ಲೆಲ್ಲಿಯೋ ದೂರದ ಕಾಲೊನಿಗಳಿಗೆ ಕಳಿಸುವುದು ಮೊದಲಾದವುಗಳ ಮೂಲಕ ದರ್ಬಾರು ನಡೆಸುತ್ತಿದ್ದ ಸಮಯ. ಅಂಥಲ್ಲಿ, ಶಕಾರ ರಾಜನ ಆಸ್ಥಾನಕ್ಕ ಬಂದು ಕೂತು ಕುಂಡೆ ತೂಗುತ್ತಾ ಮೈ ಹೂಂ ರಾಜ್ ಕೆ ಸಾಲಾ ಎನ್ನುವುದು ಹೊಸತೇ ಅರ್ಥ ಪಡೆದಿತ್ತು. ಆ ಪ್ರಯೋಗಕ್ಕೆ ಹೋಲಿಸಿದರೆ ಮೈಸೂರಿನ ಈ ಪ್ರಯೋಗ ಒಂದು ಒಳ್ಳೆಯ ಮನರಂಜನೆ ಒದಗಿಸಿತು ಎನ್ನಬಹುದು, ಅಷ್ಟೆ. ಆದರೆ ಇದು ಹಿನ್ನೋಟದಲ್ಲಿ ಈಗ ಹೇಳುವ ಮಾತು. ಆಗ, ಅದನ್ನು ನೋಡಿದ ಸುಮಾರು 1967ನೇ ಇಸವಿ ಹೊತ್ತಿಗೆ, ನಾನು ಮಹಾರಾಜಾ ಕಾಲೇಜಿಗೆ ಬಿ.ಎ. ವಿದ್ಯಾರ್ಥಿಯಾಗಿ ಸೇರಿ ಒಂದು ವರ್ಷ ಆಗಿತ್ತಷ್ಟೆ. ಆ ವರೆಗೆ ನಾನು ನೋಡಿದ್ದು ಯಕ್ಷಗಾನ ಮತ್ತು ಕಂಪನಿ ನಾಟಕಗಳ ಅನುಕರಣೆಯಾದ ಕೆಲವು ನಾಟಕಗಳನ್ನು ಮಾತ್ರ. ಅಥವ ಎ. ಎಸ್. ಮೂರ್ತಿ, ಕೆ. ಗುಂಡಣ್ಣ ಮೊದಲಾದವರ ಕಾಮೆಡಿಗಳು. ಹೊಸ ನಾಟಕಗಳನ್ನು ಓದಿ, ಕೇಳು ಜನಮೇಜಯದಂಥಾ ನಾಟಕಗಳ ರೇಡಿಯೋ ರೂಪ ಕೇಳಿ ಗೊತ್ತಿದ್ದರೂ ಇಂಥಾ ಹೊಸ ನಾಟಕ ರಂಗದ ಮೇಲೆ ನೋಡಿದ್ದು ಇದೇ ಮೊದಲು. ಮೈಸೂರಿನ ಇತರ ಪ್ರೇಕ್ಷಕರಿಗೂ ಇದು ಹೊಸ ರಂಗಾನುಭವವೇ ಆಗಿತ್ತು. ಹೀಗಾಗಿ ಎಲ್ಲ ಪರಿಮಿತಿಗಳ ಮಧ್ಯೆಯೂ ನನ್ನ ಮನಸ್ಸಿಗೆ ಇದು ಹೊಸತು ಸೇರಿಸಿತು.
ಮೈಸೂರಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ನೋಡಿದ್ದರಲ್ಲಿ ಪರಿಣಾಮಕಾರಿ ಎನ್ನಿಸಿದ ನಾಟಕಗಳಲ್ಲಿ ಇವೆರಡು ಮುಖ್ಯವಾದವು. ಇದೇ ಸಂದರ್ಭದಲ್ಲಿ ಎನ್ನೆಸ್ಡಿ ತರಬೇತಿ ಹೊಂದಿದ್ದ ಅಶೋಕ ಮಂದಣ್ಣ ಬರ್ನಾರ್ಡ್ ಶಾನ ಆರ್ಮ್ಸ್ ಅಂಡ್ ಮ್ಯಾನ್ ಎಂಬೊಂದು ನಾಟಕ ಇಂಗ್ಲಿಷಿನಲ್ಲಿ ಆಡಿದ್ದರು. ಅದರ ಸ್ಟೇಜ್ ಸೆಟ್ಟಿಂಗ್ ಪರಿಣಾಮಕಾರಿ ಆಗಿದ್ದರೂ ನಾಟಕದ ಆಂಗಿಕ, ಮಾತಿನ ಕ್ರಮ ನನಗೆ ತುಂಬಾ ದೂರದ್ದು, ನನ್ನ ಅನುಭವವಾಗಿ ಮಾರ್ಪಡಲು ಸಾಧ್ಯವಾಗದಷ್ಟು ಪ್ರತ್ಯೇಕವಾದದ್ದು ಅನ್ನಿಸಿತು. ಇಂಥದ್ದೇ ಮತ್ತೊಂದು ಪರಕೀಯ ಅನ್ನಿಸಿದ ನಾಟಕವನ್ನು ನಾನು ಬೆಂಗಳೂರಿನ ಬಾಲಭವನದಲ್ಲಿ ನೋಡಿದ್ದೆ--ಸುಮಾರು 1973ರಲ್ಲಿ. ಅದು ಸಾಮುವೆಲ್ ಬೆಕಟ್ ನ ಒಂದು ನಾಟಕದ ರಂಗಪ್ರಯೋಗ. ಇಂಗ್ಲಿಷಿನಲ್ಲಿ. ಇಡೀ ಪ್ರಯೋಗವನ್ನು ಎಷ್ಟು ಯುರೋಪುಮಯವಾಗಿಸಿದ್ದರೆಂದರೆ, ನಮ್ಮವರೇ ಆದ ನಟರು ಮೈಗೆಲ್ಲಾ ಬಿಳಿ ಬಣ್ಣ ಬಳಿದುಕೊಂಡು ಯುರೋಪಿನವರಂತೆ ಕಾಣಲು ಪ್ರಯತ್ನಿಸಿದ್ದರು. ನಡಿಗೆ, ಉಚ್ಛಾರಗಳು ಯುರೋಪಿನ ಅನುಕರಣೆ. ತುಂಬಾ ಕೃತಕ ಅನ್ನಿಸಿತು. ನಟನೊಬ್ಬ ತನ್ನ ವ್ಯಕ್ತಿತ್ವ ಬಳಸಿಯೇ ಅಭಿನಯಿಸಬೇಕು; ವ್ಯಕ್ತಿತ್ವ ಮರೆಸಿ ಅಲ್ಲ; ಮೆರೆಸಿಯೂ ಅಲ್ಲ. ಇದನ್ನು ಅನುವಾದಕ್ಕೆ ಹೋಲಿಸಬಹುದು. ಮೂಲಕೃತಿಯನ್ನು ಹೇಗಿದೆಯೋ ಹಾಗೆಯೇ ಪದಶಃ ಅನುವಾದಿಸಿ ಇನ್ನೊಂದು ಭಾಷೆಗೆ ತರುತ್ತೇನೆ ಎನ್ನುವ ಸಾಹಸ ಪರಿಣಾಮಕಾರಿ ಆಗಲಾರದು. ಒಳ್ಳೆಯ ಅನುವಾದ ಮೂಲಕೃತಿ, ಅನುವಾದವಾಗುವ ಭಾಷೆಯ ಜಾಯಮಾನ, ಹಾಗೂ ಅನುವಾದಕನ ವ್ಯಕ್ತಿತ್ವ--ಈ ಮೂರೂ ಸೇರಿದ ಸಂಧಿಬಿಂದುವಿನಲ್ಲಿ ಸಂಭವಿಸುತ್ತದೆ. ನಟನೆಯೂ ಹಾಗೆಯೇ: ಮೂಲಕೃತಿ--ಅಥವಾ ಲೇಖಕ ಚಿತ್ರಿಸಿದ ಪಾತ್ರದ ವ್ಯಕ್ತಿತ್ವ--ಮತ್ತು ನಟನ ವ್ಯಕ್ತಿತ್ವಗಳೆರಡೂ ಸೇರಿದ ಸಂಧಿಬಿಂದುವಿನಲ್ಲಿ ಒಳ್ಳೆಯ ನಟನೆ ಸಂಭವಿಸುತ್ತದೆ.
**********
ಬೋಧಿ ಟ್ರಸ್ಟ್ ಪುಸ್ತಕಗಳು ಮಾರಾಟಕ್ಕೆ ಸಿಗುತ್ತವೆ. ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust, SB Account No.1600101008058, Canara Bank, Yenmur 574328, Dakshina Kannada District, IFSC CNRB0001600 ಇಲ್ಲಿಗೆ ಜಮೆ ಮಾಡಿ ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ--ಇಲ್ಲಿಗೆ ಅಂಚೆ ಮೂಲಕ ಅಥವಾ bodhitrustk@gmail.comಗೆ ಇಮೇಲ್ ಮೂಲಕ ತಿಳಿಸಿದರೆ ಪುಸ್ತಕ ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ. ಇವು ಮಾರಾಟಕ್ಕೆ ಸಿಗುವ ಪುಸ್ತಕಗಳು:
1. ಸಮಗ್ರ ನಾಟಕಗಳು, ಸಂಪುಟ 2. ರೂ60.00
2. ಸಮಗ್ರ ನಾಟಕಗಳು, ಸಂಪುಟ 3. ರೂ75.00
3. ಹ್ಯಾಮ್ಲೆಟ್. ಅನುವಾದ. ರೂ50.00
4. ಮುಚ್ಚು ಮತ್ತು ಇತರ ಲೇಖನಗಳು. ರೂ50.00
5. ಮಾತಾಡುವ ಮರ, ಸಮಗ್ರ ಕಾವ್ಯ, 1964-2003. ರೂ100.00
No comments:
Post a Comment