Friday, January 21, 2011

ಆತ್ಮಕಥನ 8

(ನನ್ನ ತಂದೆ ದೇವ ರಾಘವೇಂದ್ರಯ್ಯ ಮತ್ತು ತಾಯಿ ದೇವ ಹೊನ್ನಮ್ಮ. ಈ ಫೊಟೋದ ಹೊತ್ತಿಗೆ ತಂದೆಗೆ 70 ವರ್ಷ ಮತ್ತು ತಾಯಿಗೆ 60 ವರ್ಷ ಮಿಕ್ಕಿತ್ತು)

ನಾಕು ಜನರ ಜೊತೆ ಹೊಂದಿಕೊಂಡು--ಗುಂಪಿನಲ್ಲಿ--ಕೆಲಸ ಮಾಡಬೇಕು ಎಂಬ ಕಾರಣಕ್ಕಾಗಿಯೇ ನಾಟಕ ನಿರ್ದೇಶನವನ್ನೂ ನಾನು ಬೆಳೆಸಿಕೊಂಡು ಹೋಗಲಿಲ್ಲ. ಆದರೆ ನಿರ್ದೇಶಿಸಿದ ಒಂದು ನಾಟಕ ನನಗೆ ಸೃಜನಶೀಲ ಅನುಭವವನ್ನೇ ಕೊಟ್ಟಿತು. ಅದು ಏವಂ ಇಂದ್ರಜಿತ್  ನಾಟಕದ ನಿರ್ದೇಶನ. ನರಸಿಂಹನ್ ನಿರ್ದೇಶನದ ಆ ನಾಟಕದ ಪ್ರಯೋಗ ನೋಡಿದಾಗಿಂದ ಅದು ನನ್ನ ಮನಸ್ಸನ್ನು ಕಾಡುತ್ತಿತ್ತು. ಕನ್ನಡಕ್ಕೆ ಬಿ. ವಿ. ಕಾರಂತರು, ಇಂಗ್ಲಿಷಿಗೆ ಗಿರೀಶ ಕಾರ್ನಾಡರು ಮಾಡಿದ ಆ ನಾಟಕದ ಅನುವಾದಗಳನ್ನು ಮತ್ತೆ ಮತ್ತೆ ಓದಿದ್ದೆ. ಎರಡೂ ಒಳ್ಳೆಯ ಅನುವಾದಗಳು. ನಾನು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿದ್ದ 1988-1991ರ ಅವಧಿಯಲ್ಲಿ ಒಂದು ನಾಟಕ ಆಡಿಸಬೇಕೆಂಬ ಯೋಚನೆ ಬಂದಾಗ ಮೊದಲು ಹೊಳೆದದ್ದು  ಏವಂ ಇಂದ್ರಜಿತ್. ಅದರ ಪಾತ್ರಗಳಿಗೆ ಹೊಂದುವ ನಟರೂ ಸಿಕ್ಕಿದರು. ಇಬ್ಬರು ವಿದ್ಯಾರ್ಥಿನಿಯರೂ ಪಾತ್ರ ಮಾಡಲು ಒಪ್ಪಿ ಬಂದರು. ನಿಜವಾಗಿ ನಾಟಕದಲ್ಲಿರುವುದು ಒಬ್ಬಳು ಹೆಣ್ಣು ಪಾತ್ರ--ಅವಳ ಹೆಸರು ಮಾನಸಿ. ಒಬ್ಬಳೇ ಆದರೆ ಬರುವುದಿಲ್ಲ ಎಂದು ಅವರಲ್ಲಿ ಒಬ್ಬಳು ಹೇಳಿದ್ದರಿಂದ, ಮಾನಸಿಯನ್ನು ಎರಡು ಪಾತ್ರಗಳಾಗಿ ವಿಂಗಡಿಸಿ ಇಬ್ಬರಿಗೆ ಹಂಚಿ ಕೊಡಬೇಕಾಯಿತು. ಬ್ಲಾಕ್ ಮಾಡುತ್ತಾ ನಾಟಕದ ಹೊಸ ಅರ್ಥಗಳು ಹೊಳೆದವು. ಯಾಂತ್ರೀಕೃತವಾದ, ಅದದೇ ಕೆಲಸ ಮಾಡುತ್ತಾ ಇರುವ ಚಿತ್ರವನ್ನು ಮೊದಲ ದೃಶ್ಯಗಳು ಕೊಟ್ಟವು. ಕೊನೆಯಲ್ಲಿ ಅವರೆಲ್ಲರೂ ಎಲ್ಲಿಗೆಂದು ಗೊತ್ತಿಲ್ಲದೆ ಆದರೂ ಈ ಯಾಂತ್ರೀಕೃತ ಜೀವನದಿಂದ ಹೊರಬರಬೇಕೆಂಬ ತಹತಹದಿಂದ ಯಾತ್ರೆ--ಮೆಟಫರಿಕಲ್ ಅರ್ಥದಲ್ಲಿ--ಹೊರಡುತ್ತಾರೆ. ನಾಟಕದುದ್ದಕ್ಕೆ ನನ್ನ ಆಶಯಗಳಿಗೆ ಹೊಂದುತ್ತದೆಂಬ ಕಾರಣದಿಂದ ತಿರುಮಲೇಶರ "ಮಹಾಪ್ರಸ್ಥಾನ"  ಕವನದ ಸಾಲುಗಳನ್ನು ಹಿನ್ನೆಲೆ ಧ್ವನಿಯಾಗಿ ಬಳಸಿಕೊಂಡಿದ್ದೆ. ಅದೂ ನನಗೆ ಇಷ್ಟವಾದ ಕವನ. ಕನ್ನಡದಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಬಂದ ಅತ್ಯುತ್ತಮ ಕವನಗಳಲ್ಲಿ ಅದೊಂದು. ತಿರುಮಲೇಶರೇನೋ ಅದು ಅಡಿಗರ ರೀತಿಯಲ್ಲಿ ಬರೆದ ಕವನ ಎಂಬ ಅತೃಪ್ತಿಯನ್ನು ಅದು ಪ್ರಕಟವಾಗಿ ಇಪ್ಪತ್ತೈದು ವರ್ಷಗಳ ನಂತರ ವ್ಯಕ್ತಪಡಿಸಿದರು. ಪ್ರಯೋಗಶೀಲ ಲೇಖಕ ಹೀಗೆ ತನ್ನ ಹಿಂದಿನ ಬರೆವಣಿಗೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸುವುದು ಸಹಜ. ಆದರೆ ಅಡಿಗರ ಕಾವ್ಯಕ್ಕೂ "ಮಹಾಪ್ರಸ್ಥಾನ"ಕ್ಕೂ ಇರುವ ಸಂಬಂಧ ವಚನ ಚಳವಳಿಗೆ ಸೇರಿದ ಅಲ್ಲಮ, ಬಸವಣ್ಣ, ದೇವರ ದಾಸಿಮಯ್ಯ ಮೊದಲಾದವರ ಕಾವ್ಯಗಳಿಗೆ ಇರುವ ಪರಸ್ಪರ ಸಂಬಂಧದಷ್ಟೇ ಹೊರತು ಬೇರೆ ಅಲ್ಲ. ಒಂದೇ ನವ್ಯ ಚಳವಳಿಗೆ ಸೇರಿದವರಾದ್ದರಿಂದ ಕೆಲವು ಸಮಾನ ಅಂಶಗಳು ಇವೆ. ಪ್ರತಿಮೆಗಳ ಬಳಕೆ, ಮುಕ್ತಛಂದಸ್ಸಿನ ಬಳಕೆ ಮೊದಲಾದವು ಇಬ್ಬರಿಗೂ ಸಮಾನವಾಗಿರುವ ಕೆಲವು ಅಂಶಗಳು. ಹಾಗೆಯೇ ವ್ಯತ್ಯಾಸವೂ ಇದೆ. "ಮಹಾಪ್ರಸ್ಥಾನ"ದ ಆಂತರಿಕ ಲಯವಿನ್ಯಾಸ, ಮಹಾಭಾರತದ--ಪುರಾಣದ--ಕಥನವನ್ನು ಇಂದಿಗೆ ಹೊಂದಿಸಿಕೊಳ್ಳುವ ಕ್ರಮ, ಅಂತಸ್ಸಾಕ್ಷಿಗೆ ಹೊಂದಿ ಒಂಟಿಯಾಗಿ ಪಯಣಿಸುವುದು ಮಾತ್ರವೇ ಇನ್ನು ಮಾಡಬಹುದಾದ ಕೆಲಸ ಎಂಬ ಮೌಲ್ಯದ ನೆಲೆ ಅಡಿಗರ ಕಾವ್ಯಕ್ಕಿಂತ ಬೇರೆ.

ಅಲ್ಲದೆ, ಮಹಾಭಾರತದ ಕೇಂದ್ರ ಪಾತ್ರ ಯುಧಿಷ್ಠಿರ ಎಂಬ ಈ ಕವನದ ಅಂತಸ್ಥ ನಿಲುವು ನನಗೆ ಒಪ್ಪಿಗೆಯಾದದ್ದು. ಜರ್ಮನ್ ವಿದ್ವಾಂಸ ಹೆನ್ರಿಕ್ ಸಿಮ್ಮರ್ ನಂಥವರು ಇದೇ ನಿಲುವು ತಳೆಯುತ್ತಾರೆ. ನಾನು  ಮಹಾಭಾರತವನ್ನು ಹೀಗೆ ಓದಲು ಸಿಮ್ಮರ್ ನಿಂದಲೇ ಕಲಿತದ್ದು.  Book of Yudhishtira ಎಂದೂ  ಈ ಪುಸ್ತಕಕ್ಕೆ ಹೆಸರಿದೆ. ಬುದ್ಧದೇವ ಮುಖರ್ಜಿ ಅಂತೇನೋ ಹೆಸರಿನ ಒಬ್ಬರು--ಇವರು ಇಂಗ್ಲಿಷ್ ವಿಮರ್ಶಕಿ ಮೀನಾಕ್ಷಿ ಮುಖರ್ಜಿಯವರ ಗಂಡ--ಆ ಹೆಸರಿನ ಒಂದು ಪುಸ್ತಕವನ್ನು ಮಹಾಭಾರತ ಬಗ್ಗೆ ಬರೆದಿದ್ದಾರೆ. ಅವರಿಗೂ ಸಿಮ್ಮರ್ ನಿಂದ ಸೂಚನೆಗಳು ಸಿಕ್ಕಿದವೇ--ಗೊತ್ತಿಲ್ಲ. ಸಿಮ್ಮರ್ ಪುಸ್ತಕ ಅವರ ಪುಸ್ತಕಕ್ಕಿಂತ ಮೊದಲು ಪ್ರಕಟವಾಗಿದೆ. ಯುಧಿಷ್ಠಿರ ಪ್ರತಿನಿಧಿಸುವ ನ್ಯಾಯಾನ್ಯಾಯ ವಿವೇಚನೆ, ಅಹಿಂಸೆ, ಅಪರಿಗ್ರಹ, ನಿಷ್ಠೆ, ಶೌರ್ಯ-ಬುದ್ಧಿವಂತಿಕೆಗಳ ಸಮ್ಮಿಳನದ ಅಗತ್ಯ ಮೊದಲಾದ ಮೌಲ್ಯಗಳು ಒಟ್ಟು ನಮ್ಮ ನಾಡಿನ ಮನಸ್ಸುಗಳ ಮೇಲೆ ಗಾಢ ಪ್ರಭಾವ ಬೀರಿವೆ. ಸಿಮ್ಮರ್ ಗಾಂಧೀಜಿಯವರನ್ನು ಯುಧಿಷ್ಠಿರನಿಗೆ ಹೋಲಿಸುತ್ತಾನೆ. ಅವನ Hinduism ಎಂಬ ಪುಸ್ತಕದಲ್ಲಿನ ಗಾಂಧೀಜಿ ಕುರಿತ ಅಧ್ಯಾಯದ ಹೆಸರೇ "Yudhisthira Returns" ಎಂದು.

ಈ ಹಿನ್ನೆಲೆಯಲ್ಲಿ  ತಿರುಮಲೇಶರ "ಮಹಾಪ್ರಸ್ಥಾನ"ದಲ್ಲಿ  ರಾಜಕೀಯ ಅರ್ಥಗಳನ್ನು ಕಾಣಬಹುದು. ಆದರೆ ಇದು ನಾನು ಆರೋಪಿಸಿರುವ ಅರ್ಥವಾಗಿರುವ ಸಾಧ್ಯತೆಯೇ ಹೆಚ್ಚು. ಆದರೆ ಕಾವ್ಯದಲ್ಲಿ ರಾಜಕೀಯದ ಬಗೆಗಿನ ಕವಿಯ ನಿಲುವುಗಳು ವ್ಯಕ್ತವಾಗುವುದೇ ಹೀಗೆ, ಅನ್ಯೋಕ್ತಿಯಾಗಿ. ರಾಮಚಂದ್ರ ಶರ್ಮರ "ಹೇಸರಗತ್ತೆ"  ಕವನ ವಸಾಹತುಶಾಹಿ ಬಗ್ಗೆ ಎಂಬುದು ವ್ಯಕ್ತವಾಗುವುದು ಈ ರೀತಿಯಲ್ಲೇ--ಅಪರೋಕ್ಷವಾಗಿ. ಎಥಿಯೋಪಿಯಾ ಇಟೆಲಿಯ ವಸಾಹತು ಆಗಿತ್ತು ಎಂಬ ಮಾಹಿತಿ ಗೊತ್ತಿಲ್ಲದಿದ್ದರೆ ಅದು ವಸಾಹತುಶಾಹಿ ಕುರಿತ ಕವನ ಎನ್ನುವುದು ಹೊಳೆಯುವುದಿಲ್ಲ. ಸ್ವತಃ ರಾಮಚಂದ್ರ ಶರ್ಮರೇ ಅದರ ಬಗ್ಗೆ ಅರಿವು ಹೊಂದಿರಲಿಲ್ಲ--ಖಂಡಿತಾ. ಯಾಕೆಂದರೆ ನಾನು "ಹೇಸರಗತ್ತೆ" ಕವನವನ್ನು ವಸಾಹತುಶಾಹಿ ಕುರಿತ ಕವನ ಎಂದು ವಿಶ್ಲೇಷಿಸಿ ಲೇಖನ ಪ್ರಕಟಿಸಿದಾಗ ಅವರು ತನಗೆ ಹೀಗೆಲ್ಲಾ ರಾಜಕೀಯ ಇತ್ಯಾದಿಗಳಲ್ಲಿ ಅಂಥಾ ಆಸಕ್ತಿ ಏನೂ ಇಲ್ಲವೆಂದೂ, ಅದೆಲ್ಲಾ ನಾನು ಹುಡುಕಿಕೊಂಡ ಅರ್ಥಗಳೆಂದೂ ಹೇಳಿದರು. ಮುಂದೊಂದು ಸಲ ಒಂದು ಸಂದರ್ಶನದಲ್ಲಿ ವಸಾಹತುಶಾಹಿಯ ಅನುಭವ ಕುರಿತು ಅದರಲ್ಲಿ ಬರೆದಿದ್ದೇನೆ ಎಂದೂ ಹೇಳಿದರು! ನನ್ನ ವಿಶ್ಲೇಷಣೆ ವೇಲಿಡ್ಡು ಎಂದು ಅವರು ಪರೋಕ್ಷವಾಗಿ ಹೀಗೆ ಒಪ್ಪಿಕೊಂಡಂತಾಯಿತು.

ನನಗೆ ತಿರುಮಲೇಶರ ಕಾವ್ಯವೂ  ಇಷ್ಟ. ಅವರ ಮುಖಾಮುಖಿ ಪ್ರಕಟವಾದ ಸುರುವಿಗೆ ಅದು ಕನ್ನಡ ಭಾಷೆಗೆ ಮಾಡಿದ ಚಿಕಿತ್ಸೆ ಅನ್ನಿಸಿತ್ತು. ಎಲ್ಲಾ ಅಲಂಕಾರಗಳನ್ನು ಬಿಟ್ಟುಕೊಟ್ಟು ಭಾಷೆಯನ್ನು ಎಷ್ಟು ನಿರಾಭರಣ ಮಾಡಬಹುದೋ ಅಷ್ಟು ನಿರಾಭರಣ ಮಾಡಿ ಬರೆದ ಕವನಗಳು ಅವು. ಆನಂತರದ ಕವನಗಳಲ್ಲೂ ನಿರಂತರವಾಗಿ ಪ್ರಯೋಗಶೀಲರಾಗಿರುವ ಕವಿ ಅವರು. ಹೀಗೆ ಅವರ ಕಾವ್ಯ ಮೆಚ್ಚುವಾಗಲೇ ನನಗೆ ಅದು ಸೀಮಿತ ಆಸಕ್ತಿಗಳ ಕಾವ್ಯ ಎಂದೂ ಅನ್ನಿಸುತ್ತದೆ. ಅವರು ಬಾಲ್ಯ ಕಳೆದ ಕುಂಬಳೆ ಸೀಮೆಯಂತೂ ಅತ್ಯಂತ ಶಕ್ತಿಯುತವಾದ--ರೇಸಿಯಾದ--ಕನ್ನಡ ಮಾತಾಡುವ ಪ್ರದೇಶ. ಅಲ್ಲಿನ ಹವ್ಯಕ ಉಪಭಾಷೆ--ತಿರುಮಲೇಶರ ಮನೆಮಾತು--ಮಲಯಾಳದ ಪ್ರಭಾವವೂ ಸೇರಿದ್ದರಿಂದ--ವಿಲಕ್ಷಣ ಪ್ರಭೆಯುಳ್ಳದ್ದು. ತಿರುಮಲೇಶ್ ಅದನ್ನೆಲ್ಲಾ ಬಳಸುವುದಕ್ಕೇ ಹೋಗುವುದಿಲ್ಲ. ಅವೆಲ್ಲಾ ತನಗೆ ಗೊತ್ತೇ ಇಲ್ಲ ಎಂಬಂತೆ ತನ್ನ ಕಾವ್ಯದ ಕನ್ನಡವನ್ನು ನಗರೀಕರಣಗೊಳಿಸಿ ಬಳಸುತ್ತಾರೆ. ಹೀಗೆ ಹೇಳುವಾಗ,  ಅವರು ಪ್ರಯೋಗಶೀಲ ಎನ್ನುವುದೂ ಸೀಮಿತ ಅರ್ಥದಲ್ಲಿ ಎಂಬುದು ಹೊಳೆಯುತ್ತದೆ. ತಾನು ಬಳಸುವ ನಗರೀಕರಣದ ಭಾಷೆಯಲ್ಲಿ ಪ್ರಯೋಗ ಮಾಡುತ್ತಾರೆ ಎನ್ನಬಹುದು, ಅಷ್ಟೆ. ತನ್ನದೇ ಅನುಭವದ  ಬಹು ಅರ್ಥಪೂರ್ಣ ಎಂದು ನಮಗೆ ಅನ್ನಿಸುವ ಅನೇಕ ಅಂಶಗಳನ್ನು ಅವರು ತಮ್ಮ ಕಾವ್ಯದಿಂದ ಹೊರಗಿಟ್ಟಿದ್ದಾರೆ. ಅವರಿಗೆ ಅದು ಅರ್ಥಪೂರ್ಣ ಅನ್ನಿಸದಿದ್ದರೆ, ಯಾಕೆ  ಎನ್ನುವುದು ಅವರ ಕಾವ್ಯವೇ ನಿರ್ಮಿಸಿದ ಅಭಿರುಚಿಯಿಂದ ಸ್ಪಷ್ಟವಾಗುವುದಿಲ್ಲ.

ಈ ಬಗೆಯ ಮಾತು ಬರೆಯಲು ಸಾಧ್ಯವಾದದ್ದು ನನಗೆ ತಿರುಮಲೇಶರ ಜೀವನದ ಕೆಲವು ವಿವರಗಳು ಗೊತ್ತಿರುವುದರಿಂದ ಎಂಬುದು ನಿಜ. ಕಾವ್ಯವನ್ನು ಬರೀ ಕಾವ್ಯವಾಗಿ, ಪುಟದ ಮೇಲಿನ ಪದಗಳ ಬಗ್ಗೆ ಮಾತ್ರ ಗಮನ ಕೊಟ್ಟು ಓದಬೇಕೆನ್ನುವುದು ಒಂದು ಹಂತದ ವರೆಗೆ ಸರಿ. ಕಾವ್ಯವನ್ನು ಹೇಗೆ ಓದಬೇಕೆಂದು ವಿದ್ಯಾರ್ಥಿಗಳಿಗೆ ಕಲಿಸುವ ದೃಷ್ಟಿಯಿಂದ ಈ ವಿಮರ್ಶನ ಸೂತ್ರ ತುಂಬಾ ಉಪಯುಕ್ತ. ಆದರೆ ಒಬ್ಬ ಕವಿ ನಮಗೆ ಇಷ್ಟವಾದಾಗ ನಾವು ಬೇಕೆನ್ನಲಿ ಬೇಡವೆನ್ನಲಿ ಅವನ ಜೀವನದ ವಿವರಗಳು ಗೊತ್ತಾಗುತ್ತಾ ಹೋಗುತ್ತವೆ. ಅವೆಲ್ಲಾ ಅವನ ಕಾವ್ಯ ಕುರಿತ ನಮ್ಮ ಪ್ರತಿಕ್ರಿಯೆಯನ್ನು ಪ್ರಭಾವಿಸುತ್ತವೆ. ಅವನ ಕಾವ್ಯ ಬಹು ಶ್ರೇಷ್ಠವಾಗಿದ್ದರೆ ಉಳಿದೆಲ್ಲವನ್ನೂ ಮರೆಸಿ ನಮ್ಮ ಪ್ರತಿಕ್ರಿಯೆಗಳನ್ನು ಆ ಕಾವ್ಯವೇ ಕಟ್ಟುತ್ತದೆ. ಹಾಗಿಲ್ಲದೆ ಇದ್ದಾಗ ಅವನ ಕಾವ್ಯ ಏನನ್ನು ಹೊರಗಿಟ್ಟಿದೆ, ಕವಿಯಾಗಿ ಅವನಿಗೆ ಏನೆಲ್ಲಾ ಸಾಧ್ಯತೆಗಳಿದ್ದವು, ಅವನ್ನು ಬಳಸದೆ ಇದ್ದದ್ದು ಅವನ ಮಿತಿಯಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ಬರುತ್ತವೆ. ಹೀಗೆ ಯೋಚಿಸಬಾರದು ಎನ್ನುವುದು ಅಸಹಜ:  ನಮ್ಮ ಮನಸ್ಸಿನ ಕೆಲವಂಶ ಹೊರಗೆ ತೆಗೆದಿಟ್ಟು ಯಾವುದಕ್ಕೇ ಆದರೂ ಪ್ರತಿಕ್ರಿಯಿಸಬೇಕೆಂಬ ಅಪೇಕ್ಷೆಯೇ ಅಸಹಜ.

ರಾಮಚಂದ್ರ ಶರ್ಮರ ಕಾವ್ಯವೂ ಸೀಮಿತ ಆಸಕ್ತಿಗಳ, ಸೀಮಿತ ಭಾಷಾಪ್ರಯೋಗಗಳ ಕಾವ್ಯ. ಕಾಮ, ಹಾಗೂ ಅನಿವಾಸಿಯ ಮಾನಸಿಕ ತುಮುಲ--ಇವೆರಡೇ ಅವರ ಮುಖ್ಯ ಆಸಕ್ತಿ, ಬಹುತೇಕ. ಅನಿವಾಸಿಯ ತುಮುಲಗಳನ್ನು, ನೆಲೆ ಕಳೆದುಕೊಂಡವನ, ಗಡೀಪಾರಾದವನ ತುಮುಲಗಳನ್ನು, ಅವರು ಸಮಗ್ರವಾಗಿ ತಳಮುಟ್ಟ ಶೋಧಿಸಿದ್ದಾರೆಂದೂ ಹೇಳುವಂತಿಲ್ಲ. ಅನೇಕ ದೊಡ್ಡ ಲೇಖಕರ ಶೋಧನೆಗೆ ಒಳಗಾದ ವಸ್ತು ಇದು. ಇಪ್ಪತ್ತನೆಯ ಶತಮಾನದ ಎರಡು ಮಹಾಯುದ್ಧಗಳ  ನಂತರ ಗಡೀಪಾರಾದ, ತಮ್ಮ ದೇಶ-ಭಾಷೆಗಳಿಂದ ದೂರವಾದ ಲೇಖಕರ ಸಂಖ್ಯೆ ಹೆಚ್ಚುತ್ತಿದ್ದಂತೆ ಇದು ಜಾಗತಿಕ ಸಾಹಿತ್ಯದಲ್ಲಿ ಬಹುಮುಖೀ ಶೋಧನೆಗೆ ಒಳಗಾದ ಒಂದು ವಸ್ತುವಾಗಿದೆ. ರಾಮಚಂದ್ರ ಶರ್ಮ ಅದನ್ನು ಮೇಲುಮೇಲಿನ ಮಟ್ಟದಲ್ಲಿ ಮಾತ್ರ  ಮುಟ್ಟ್ಟುತ್ತಾರೆ, ಅಷ್ಟೆ. "ಏಳು ಸುತ್ತಿನ ಕೋಟೆ"  ಹದಿ ಹರೆಯದ ಕಾಮ ಕುರಿತು ಬಂದ ಕನ್ನಡದ ಒಂದು ಒಳ್ಳೆಯ ಕವನ ಎಂಬುದು ನಿಜ. ಆದರೆ, ಇಲ್ಲಿಯೂ ಗಂಗಾಧರ ಚಿತ್ತಾಲರ "ಕಾಮೋದಯ" ಹೆಚ್ಚು ವಿಸ್ತಾರವಾದ ವಸ್ತುವನ್ನು ಕುರಿತ ಕವನವಲ್ಲವೇ ಎಂದೂ ಅನ್ನಿಸುತ್ತದೆ.

ಭಾಷೆಯ ಬಳಕೆಯಲ್ಲಿಯೂ  ರಾಮಚಂದ್ರ ಶರ್ಮರು ಕನ್ನಡದ ಸೀಮಿತ ಸಾಧ್ಯತೆಗಳನ್ನು ಮಾತ್ರ ಕಾಣುತ್ತಾರೆ ಅನ್ನಿಸುತ್ತದೆ. ತಿರುಮಲೇಶ್ ತಮಗೆ ಗೊತ್ತಿರುವ ಕನ್ನಡದ ಇತರ ಪ್ರಭೇದಗಳನ್ನು ಬಳಸದೆ ಬಿಟ್ಟು ಬಿಡುತ್ತಾರೆ; ರಾಮಚಂದ್ರ ಶರ್ಮರಿಗೆ ಬೆಂಗಳೂರು ಕನ್ನಡ ಬಿಟ್ಟು ಬೇರೆ ಕನ್ನಡಗಳ ಆತ್ಮೀಯ ಪರಿಚಯವೇ ಇರಲಿಲ್ಲ. ಆತ್ಮೀಯ ಪರಿಚಯಕ್ಕಾಗಿ ಅವರು ಪ್ರಯತ್ನಿಸಲೂ ಇಲ್ಲ. ಅವರ ಸೀಮಿತ ಆಸಕ್ತಿಗಳಿಗೆ ಅಷ್ಟು ಕನ್ನಡ ಸಾಕು ಅನ್ನಿಸಿರಬಹುದು. ಯಾಕೆಂದರೆ, ಒಬ್ಬ ಕವಿಗೆ--ಅಥವಾ ಯಾರಿಗೇ ಆದರೂ--ಕನ್ನಡದ ಅನೇಕ ಪ್ರಭೇದಗಳ ಆತ್ಮೀಯ ಒಳಗೊಳ್ಳುವಿಕೆ ಮತ್ತು ಆಸಕ್ತಿಗಳ ವಿಸ್ತರಣೆ  ಬೇರೆ ಬೇರೆ ಅಲ್ಲ. ಬೇಂದ್ರೆಯವರೇನೋ ಎಲ್ಲಾ ಕನ್ನಡಗಳನ್ನು ಒಳಗೊಂಡ ಒಂದು ಕನ್ನಡವನ್ನು ಕವಿಯೊಬ್ಬ ರೂಡಿಸಿಕೊಳ್ಳಬೇಕು ಎಂದರು. ಹಾಗೆ ಹೇಳುತ್ತಿದ್ದಾಗ ಏಕೀಕರಣ ಅವರ ಮನಸ್ಸಿನಲ್ಲಿ ಇತ್ತು. ಆದರೆ ಒಟ್ಟು ನಾಡಿಗೆ ಸಂಬಂಧಿಸಿದಂತೆ ಮೇಜರ್ ಆಗಿ ಜೀವನದ ಜೊತೆ ಅನುಸಂಧಾನ ನಡೆಸಿ ಬರೆಯಬೇಕಾದರೂ ಕವಿಯೊಬ್ಬನಿಗೆ ಅಂಥಾ ಭಾಷೆಯ ಅಗತ್ಯವಿದೆ. ಅಥವಾ, ಅಂಥಾ ಭಾಷೆಯನ್ನು ಒಬ್ಬ ಕವಿ ರೂಢಿಸಿಕೊಂಡಾಗ ಅವನ ಆಸಕ್ತಿಗಳೂ ಹಾಗೇ ವಿವಿಧವಾಗಿ ಬೆಳೆಯುತ್ತವೆ ಮತ್ತು ವ್ಯಕ್ತಗೊಳ್ಳುತ್ತವೆ.

ತಿರುಮಲೇಶ್, ಶರ್ಮ ಮೊದಲಾದವರು ನಾನು ನನ್ನ ಸಂವೇದನೆ ರೂಪುಗೊಳ್ಳುತ್ತಿದ್ದಾಗ ಓದಿದ ಕವಿಗಳು; ನಾನು ಮೆಚ್ಚಿದ, ಈಗಲೂ ಮೆಚ್ಚುತ್ತಿರುವ, ಒಂಟಿಯಾಗಿದ್ದಾಗ ಸಾಲುಗಳನ್ನು ನೆನೆಸಿಕೊಂಡು ಚಪ್ಪರಿಸುವ ಕವಿತೆಗಳನ್ನು ಬರೆದ  ಕವಿಗಳು. ಹೀಗಾಗಿ ಅವರ ಬಗೆಗಿನ ನನ್ನ ಟೀಕೆ ನನ್ನ ಅಭಿರುಚಿಯ ಟೀಕೆಯೂ ಆಗಿದೆ.


No comments:

Post a Comment