Sunday, August 12, 2012

ಮುಂದಿನ ಪುಸ್ತಕ

ನನ್ನ ಮುಂದಿನ ಪುಸ್ತಕ ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ. ಇದು 1993ರಲ್ಲಿ ಮೊದಲು ಮುದ್ರಣವಾಗಿತ್ತು. ಪ್ರಕಟವಾದ ಆರು ತಿಂಗಳಲ್ಲಿ ಪ್ರತಿಗಳು ಮುಗಿದಿದ್ದವು. ಈಗ ಸುಮಾರು ಎರಡು ದಶಕಗಳ ನಂತರ ಪರಿಷ್ಕೃತ ಆವೃತ್ತಿ ಪ್ರಕಟವಾಗುತ್ತಿದೆ. ಇದರಲ್ಲಿ ನಾನು ಶೇಕ್ ಸ್ಪಿಯರ್ ಬಗ್ಗೆ ಇದು ವರೆಗೆ ಬರೆದ ಎಲ್ಲಾ ಬರೆಹಗಳು ಇವೆ. ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ ಮಾತ್ರವಲ್ಲದೆ ನಾಟಕಗಳು, ಸಾನೆಟ್ಟುಗಳು ಹಾಗೂ ಶೇಕ್ ಸ್ಪಿಯರ್ ಅಧ್ಯಯನ ಕುರಿತ ಲೇಖನಗಳಿವೆ. ಸುಮಾರು ಇನ್ನೂರು ಪುಟಗಳ ಈ ಪುಸ್ತಕ ಸೆಪ್ಟೆಂಬರ್ ಹೊತ್ತಿಗೆ ಬಿಡುಗಡೆಯಾಗುತ್ತದೆ.

ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ ಅನೇಕರಿಂದ ಮೆಚ್ಚುಗೆ ಪಡೆದ ಕೃತಿ. ಯು. ಆರ್. ಅನಂತಮೂರ್ತಿಯವರು "ನನಗೆ ತಿಳಿದಂತೆ ಈ ಬಗೆಯ ಕೃತಿ ಕನ್ನಡದಲ್ಲಾಗಲೀ ಇಂಗ್ಲಿಷಿನಲ್ಲಾಗಲೀ ಇದು ವರೆಗೆ ಪ್ರಕಟವಾಗಿಲ್ಲ. ಇದು ತೌಲನಿಕ ವಿಮರ್ಶೆಗೆ ನೀಡಿದ ಹೊಸ ಕೊಡುಗೆಯಾಗಿದೆ" ಎಂದು ಇದರ ಬಗ್ಗೆ ಬರೆದಿದ್ದರು. "ವಸಾಹತುಶಾಹಿ ಪ್ರಭಾವ, ಸೃಜನಶೀಲತೆ ಕುರಿತಂತೆ ಕನ್ನಡದ ಕೃತಿಗಳನ್ನು ಹಿಡಿದು, ವಿಶ್ಲೇಷಿಸಿ, ಸ್ಪಷ್ಟವಾದ ಒಳನೋಟಗಳಿಗೆ/ತೀರ್ಮಾನಗಳಿಗೆ ತಲುಪಿದ ಮೊದಲ ಕೃತಿಯೆಂದರೆ ಇವರ ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ ಎಂದು ನನ್ನ ಅನಿಸಿಕೆ. ವಸಾಹತುಶಾಹಿ ಪ್ರಭಾವ ನಮ್ಮ ಮನಸ್ಸಿನ ಆಳ ಅಗಲಗಳನ್ನು ಎಲ್ಲೆಲ್ಲಿ ಹೇಗೆ ಹೇಗೆ ಉಡ ಹಿಡಿಯಬಹುದು ಮತ್ತು ಅಂತಹ ಪ್ರಭಾವದಿಂದ ಹೊರಬರಲು ಇರುವ ಸೃಜನಶೀಲ ಉಪಾಯಗಳು ಯಾವುವು ಎಂಬುದರ ಸೂಕ್ಷ್ಮಗಳನ್ನು ತಿಳಿಯಲು ಡಾ. ದೇವ ಅವರ ಕೃತಿಯ ಓದು ಕಡ್ಡಾಯ" ಎಂದು ಕೆ. ಸತ್ಯನಾರಾಯಣ ಬರೆದಿದ್ದರು.

ಕಳೆದ ಹನ್ನೆರಡು ವರ್ಷಗಳಿಂದ ಹಳ್ಳಿಯಲ್ಲಿ ವಾಸಿಸುತ್ತಿರುವ ನಾನು ಅನೇಕ ಸಮಯದಿಂದ ಬರೆಯಬೇಕೆಂದಿದ್ದುದರ ಬಹುಭಾಗವನ್ನು ಈ ಅವಧಿಯಲ್ಲಿ ಬರೆದೆ. ಅವು ಮುಂದಿನ ಎರಡು ಮೂರು ವರ್ಷಗಳ ಅವಧಿಯಲ್ಲಿ ಇಪ್ಪತ್ತು ಸಂಪುಟಗಳಲ್ಲಿ ಪ್ರಕಟವಾಗಲಿವೆ. ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ ಈ ಮಾಲಿಕೆಯ ಆರನೆಯ ಪುಸ್ತಕ. ಸಮಗ್ರ ನಾಟಕಗಳ ನಾಲ್ಕು ಸಂಪುಟಗಳು ಮತ್ತು ಸಮಗ್ರ ಕಥೆಗಳ ಒಂದು ಸಂಪುಟ ಈಗಾಗಲೇ ಪ್ರಕಟವಾಗಿವೆ. ಸಮಗ್ರ ಕಥೆಗಳ ಎರಡನೆಯ ಸಂಪುಟ, ಆತ್ಮಕಥನ ದೇವಲೋಕ ಪರಲೋಕ, ಅನುವಾದಗಳ ಮೂರು ಸಂಪುಟಗಳು, ಸಮಗ್ರ ಕಾವ್ಯದ ಮೊದಲ ಸಂಪುಟ, ಮತ್ತು ನಾಟಕಗಳ ಇಂಗ್ಲಿಷ್ ಅನುವಾದಗಳ ಸಂಪುಟಗಳು ಮುಂದಿನ ವರ್ಷ ಪ್ರಕಟವಾಗಲಿವೆ.