Monday, January 10, 2011

ಆತ್ಮಕಥನ 1

(ಮೊದಲ ಚಿತ್ರ ನನ್ನ ಈಗಿನ ಮನೆಯ ಅಂಗಳ ಹಾಗೂ ಮನೆಯ ಒಂದು ನೋಟ ತೋರಿಸುತ್ತದೆ. ರಾಮತ್ತಿಕಾರಿ  ಈ ಜಾಗದ ಹೆಸರು; ಕಲ್ಮಡ್ಕ ಊರಿನ ಹೆಸರು. ಇನ್ನೊಂದು ಚಿತ್ರ ಕವಿತಾ, ಜೂನ್-ಜುಲೈ 1964 --ಗ್ರೀಷ್ಮ ಸಂಚಿಕೆಯ ಮುಖಪುಟ. ಇದು ಕವಿತಾದ ಎರಡನೆಯ ಸಂಚಿಕೆ. ಇದರಲ್ಲಿ ನನ್ನ ಮೊದಲ ಕವನಗಳಲ್ಲಿ ಒಂದಾದ  "ಬೇಸಿಗೆಯ ನಡುಹಗಲು" ಪ್ರಕಟವಾಗಿತ್ತು. ರಾಮಚಂದ್ರ ಶರ್ಮರ ಪ್ರಖ್ಯಾತ ಕವನ "ಹೇಸರಗತ್ತೆ"ಯೂ ಮೊದಲು ಪ್ರಕಟವಾದದ್ದು ಇದೇ ಸಂಚಿಕೆಯಲ್ಲಿ. ಈ ಸಂಚಿಕೆಯಲ್ಲಿ ಭಾರತಿಯವರ "ಬೃಂದಾವನ", ವಿನಾಯಕರ "ಅಜಗರದ ಹಾಡು", ಜಿ. ಎಸ್. ಶಿವರುದ್ರಪ್ಪನವರ "ಕಾರಿರುಳಲ್ಲಿ" ಎಂಬ ಕವನಗಳಲ್ಲದೆ  ಪಿ. ಶ್ರೀನಿವಾಸ್ ರಾವ್ ಹಾಗೂ ಸುಮತೀಂದ್ರ ನಾಡಿಗರ ಲೇಖನಗಳೂ ಇದ್ದವು. ಅಥರ್ವವೇದದ "ಕಾವ್ಯಂ ನ ಮಮಾರ ನ ಜೀರ್ಯತೇ" (=ಕಾವ್ಯಕ್ಕೆ ಮುಪ್ಪಿಲ್ಲ, ಸಾವಿಲ್ಲ) ಎಂಬುದು ಈ ಪತ್ರಿಕೆಯ ಧ್ಯೇಯವಾಕ್ಯವಾಗಿತ್ತು.)




ಜನವರಿ 20, 2008
ರಾಮತ್ತಿಕಾರಿ, ಕಲ್ಮಡ್ಕ

ಬೆಕ್ಕುಗಳ ಪ್ರಣಯ ಲೀಲೆಗಳು ಥೇಟ್ ಮನುಷ್ಯರದಂತೆಯೇ. ಮೊನ್ನೆ ಒಂದು ಕಂಟ ಬೆಕ್ಕಿನ ಎದುರು ಇದೇ ಈ ಮಂಗು ಬೆಕ್ಕು ಎಂಥೆಂಥಾ ಪ್ರಣಯ ಭಂಗಿಗಳನ್ನು ಪ್ರದರ್ಶಿಸಿತು ಎನ್ನುತ್ತೀರಿ--ಆ ಪೆದ್ದು ಗುಂಡ ಪ್ರತಿಕ್ರಿಯಿಸದೆ ತನ್ನ ಪಾಡಿಗೆ ತಾನು ಕಿಟಿಕಿ ಮೇಲೆ ಕೂತಿತ್ತು. ಮನುಷ್ಯರಲ್ಲೂ ಉಮೇದಿನ ಗಂಡು ಮತ್ತು ನಿರ್ಲಕ್ಷ್ಯದ ಹೆಣ್ಣು ಅಥವಾ ವೈಸ್ ವರ್ಸಾ ಕಾಮನ್ನು. ಆದರೆ ಗಂಡು ಆನಂತರ ಹೆಣ್ಣಿಗೆ ಒಲಿದಿರಬೇಕು. ತೋಟದಿಂದ ಪ್ರಣಯದ ಕರೆ ಮಾಡುತ್ತಿತ್ತು. ಈ ಬೆಕ್ಕುಗಳು ಪ್ರೀತಿ ಮಾಡುವುದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಹೊತ್ತು ಪ್ರಣಯದ ಕರೆ ಮಾಡುವುದರಲ್ಲಿ ಕಳೆಯುತ್ತವೆ. ತೋಟದಲ್ಲಿಯೇ ಒಂದಕ್ಕೊಂದು ಸ್ವಲ್ಪ ದೂರದಲ್ಲಿ ಕೂತು ಪರಸ್ಪರ ಕರೆಯುತ್ತಿದ್ದವು. ಇವೆಲ್ಲಾ ಎರಡು ಮೂರು ದಿನ ಅಷ್ಟೆ. ಆ ಮೇಲೆ ಕಂಟ ಬೆಕ್ಕು ತನ್ನ ಪಾಡಿಗೆ ತಾನು ಹೊರಟುಹೋಯಿತು. ನಾನು ಆ ಮೇಲೆ ಅದನ್ನು ಸುತ್ತಮುತ್ತ ಎಲ್ಲಿಯೂ ನೋಡಲಿಲ್ಲ.

ಬೆಕ್ಕು ಹೇಗೆ ಸಾಯುತ್ತದೆನ್ನುವುದು ಗೊತ್ತಿಲ್ಲ ಎನ್ನುತ್ತಾರೆ. ಬೆಕ್ಕಿನ ಹೆಣ ನೋಡಿದವರು ಯಾರೂ ಇಲ್ಲ ಎನ್ನುವುದು ಜನರ ನಂಬಿಕೆ.  ಆದರೆ ನನ್ನ ಒಂದು ಬೆಕ್ಕಿನ ಮರಿ ನನ್ನ ಎದುರೇ ಮನೆಯಲ್ಲಿಯೇ ಸತ್ತುಹೋಯಿತು. ಒಂದೆರಡು ದಿನಗಳಿಂದ ಹುಷಾರಿಲ್ಲದೆ ಇತ್ತು. ಹೆಚ್ಚಾಗಿ ದನ ಎಮ್ಮೆಗಳಿಗೆ ಔಷಧಿ ಕೊಡುವ ನಮ್ಮ ವೆಟರಿನರಿ ಡಾಕ್ಟರು--ಇವರಿಗೆ ಗೋಡಾಕ್ಟರುಗಳೆಂದೇ ಹೆಸರು, ಆದರೆ ಹಾಗೆ ಕರೆದರೆ ಮಾತ್ರ ಅವರಿಗೆ ಇಷ್ಟವಾಗುವುದಿಲ್ಲ, ವೆಟರಿನರಿ ಡಾಕ್ಟರು ಎಂದು ಕರೆಯಬೇಕೆಂದು ಅಪೇಕ್ಷಿಸುತ್ತಾರೆ--ಇದಕ್ಕೆ ಏನಾದರೂ ಔಷಧಿ ಕೊಡಬಹುದೇ ಎಂದು ವಿಚಾರಿಸುವಷ್ಟೂ ಸಮಯ ಸಿಗಲಿಲ್ಲ. ಸಾಯುವ ತುಸು ಮೊದಲು ಹಾಲು ಬೇಕಾದಾಗ ಮಾಡುವ ರೀತಿಯ ಶಬ್ದ ಮಾಡಿತು. ಆದರೆ ಹಾಲು ಕುಡಿಯುವುದು ಹೋಗಲಿ, ತಲೆ ಪೊಕ್ಕಿಸುವುದಕ್ಕೇ ಆಗುತ್ತಿರಲಿಲ್ಲ.

ಕೆಲವು ಸಲ ಬೆಕ್ಕು ಅರಣೆ, ಒಳ್ಳೆ ಹಾವು ಮೊದಲಾದವುಗಳನ್ನು ಹಿಡಿದುಕೊಂಡು ಮನೆಯೊಳಗೆ ಬರುವುದಿದೆ. ಆ ಕಾರಣಕ್ಕಾಗಿಯೇ ಕೆಲವರು ಬೆಕ್ಕು ಸಾಕಲು ಇಷ್ಟಪಡುವುದಿಲ್ಲ. ಹಾವನ್ನು ಅರೆ ಸಾಯಿಸಿ ಮನೆಯೊಳಗೆ ತರುತ್ತದೆಂದು ಹೆದರುತ್ತಾರೆ. ಅರೆ ಪೆಟ್ಟಾದ ಹಾವು ಮನುಷ್ಯರಿಗೆ ಕಚ್ಚಿ, ವಿಷದ ಹಾವಾದರೆ ಕೊಂದೂ ಬಿಡಬಹುದಲ್ಲ? ಆದರೆ ಹೀಗೆ ಬೆಕ್ಕು ಅರೆ ಜೀವ ಮಾಡಿ ಮನೆಯೊಳಗೆ ತಂದ ಹಾವು ಮನುಷ್ಯರಿಗೆ ಕಚ್ಚಿದ ಒಂದೇ ಒಂದು ಉದಾಹರಣೆ ನನಗೆ ತಿಳಿದಂತೆ ಇಲ್ಲ. ಅದಕ್ಕೆ ಮುಖ್ಯ ಕಾರಣ ತನ್ನ ಕೊಳ್ಳೆಯನ್ನು ಬೆಕ್ಕು ಅರೆ ಪೆಟ್ಟು ಮಾಡಿ ಬಿಟ್ಟು ಹೋಗುವುದಿಲ್ಲ. ನಿಧಾನವಾಗಿ ಅದರ ಜೊತೆ ಆಟ ಆಡಿ ಕೊಂದು ತಿಂದು ಆದ ಮೇಲೇ ಅದು ಕೊಳ್ಳೆಯನ್ನು ಬಿಟ್ಟು ಕದಲುವುದು.ಈ ಕೊಳ್ಳೆಗಳ ಬಗ್ಗೆ ಅವು ಪೊಸೆಸ್ಸಿವ್ ಆಗಿರುತ್ತವೆ. ನನ್ನ ಎರಡು ಬೆಕ್ಕಿನ ಮರಿಗಳು ಹಾಲು ಅಥವಾ ಅನ್ನಕ್ಕಾಗಿ ಜಗಳ ಮಾಡಿಕೊಂಡದ್ದಿಲ್ಲ. ಆದರೆ ಒಂದರ ಕೊಳ್ಳೆಯನ್ನು ಬಯಸಿ ಇನ್ನೊಂದು ಹತ್ತಿರ ಹೋದರೆ ಜಗಳವಾಗುತ್ತದೆ.

ಕಕ್ಕದ ವಿಷಯದಲ್ಲಿ ಈ ಬೆಕ್ಕುಗಳು ಹೈಜೀನಿನ ನಿಯಮಗಳನ್ನು ಪಾಲಿಸುತ್ತವೆ. ಮೊನ್ನೆ ಒಂದು ಬೆಕ್ಕಿನ ರೀತಿಯಂತೂ ನೋಡುವಂತಿತ್ತು. ಸುಮಾರು ಎರಡು ತಿಂಗಳ ಹಿಂದೆ ಟೆಲಿಫೋನ್ ಕೇಬಲ್ ಹಾಕುವುದಕ್ಕೆ ಅಂಗಳದಲ್ಲಿ ಕಣಿ ತೋಡಿ ಕೇಬಲ್ ಹಾಕಿದ ಮೇಲೆ ಮಣ್ಣಲ್ಲಿ ಮುಚ್ಚಲಾಗಿತ್ತು. ಹುದುಲು ಮಣ್ಣು. ಬಿಳಿ ಬೆಕ್ಕು ಬಂದು ಗುಂಡಿ ತೋಡಿ ಮುಚ್ಚಿದ್ದ ಮಣ್ಣನ್ನು ಪಂಜದಿಂದ ಒಕ್ಕಿ  ಚಿಕ್ಕದೊಂದು ಗುಂಡಿ ಮಾಡಿ ಆ ಗುಂಡಿಗೆ ಕಕ್ಕಸು ಬೀಳುವಂತೆ ಬುಕ್ಕಿತು. ಕಕ್ಕ ಮಾಡಿದ ಮೇಲೆ ಮಣ್ಣನ್ನು ಕಾಲಿನಿಂದ ಎಳೆದು ಆ ಗುಂಡಿಯನ್ನು ಮುಚ್ಚಿ ಮುಚ್ಚಿದ ಜಾಗದ ಸಮೀಪ ಮೂಗು ತೆಗೆದುಕೊಂಡು ಹೋಗಿ ಮೂಸಿ ನೋಡಿ ವಾಸನೆ ಬರುತ್ತಿಲ್ಲವೆಂದು ಖಾತ್ರಿ ಆದ್ದರಿಂದಲೋ ಏನೋ ಹೊರಟುಹೋಯಿತು. ಎಂಥಾ ಸಿನಿಕನೂ ಶುಚಿತ್ವದ ಬಗೆಗಿನ ಬೆಕ್ಕುಗಳ ನಿಷ್ಠೆ ಮೆಚ್ಚದಿರುವುದು ಅಸಾಧ್ಯ. ಇವು ಮನೆಯೊಳಗೆ ಕಕ್ಕ ಮಾಡುವುದು ಇಲ್ಲವೇ ಇಲ್ಲ. ಶುಚಿತ್ವದ ಬಗೆಗಿನ ಬೆಕ್ಕುಗಳ ಅತಿ ಕಾಳಜಿಯಿಂದಾಗಿಯೇ ಅವು ಮನೆಯೊಳಗೆ ಸಾಯುವುದಿಲ್ಲ ಎಂಬ ನಂಬಿಕೆ ಹುಟ್ಟಿರಬಹುದು.

ನವ್ಯಸಾಹಿತ್ಯದ ಮೊದಲ ವರ್ಷಗಳಲ್ಲಿ ಬೆಕ್ಕು ಒಂದು ಪ್ರಮುಖ ಸಂಕೇತ ಆಗಿತ್ತು. ನನಗೆ ತಿಳಿದಂತೆ ಇದನ್ನು ಗಮನ ಸೆಳೆಯುವ ಹಾಗೆ ಬಳಸಿದವರು ಎಚ್. ಎಂ. ಚೆನ್ನಯ್ಯ. ಅವರ ಮೊದಲ ಕವನಸಂಗ್ರಹದ ಹೆಸರೇ ಕಾಮಿ. ಇದು ಪ್ರಕಟವಾದದ್ದು 1964ರಲ್ಲಿ. ಪ್ರಕಟಿಸಿದವರು ಕಾವ್ಯಕ್ಕೇ ಮೀಸಲಾದ ತ್ರೈಮಾಸಿಕ ಪತ್ರಿಕೆ ಲಹರಿ ಪ್ರಕಟಿಸುತ್ತಿದ್ದ ಬಿ. ಎನ್. ಶ್ರೀರಾಮ ಮತ್ತು ಪೂರ್ಣಚಂದ್ರ ತೇಜಸ್ವಿ. ಆ ವರ್ಷ ಕನ್ನಡದಲ್ಲಿ ಕಾವ್ಯಕ್ಕಾಗಿ ಕವಿತಾ ಮತ್ತು ಲಹರಿ--ಈ ಎರಡು ಪತ್ರಿಕೆಗಳು ಪ್ರಾರಂಭವಾದವು. ಎರಡೂ ತ್ರೈಮಾಸಿಕಗಳು. ಎರಡು ಪತ್ರಿಕೆಗಳೂ ಕೆಲವು ಮುಖ್ಯ ಕವನಗಳನ್ನು ಪ್ರಕಟಿಸಿ ಪ್ರಭಾವಶಾಲಿಯಾಗಿ ನಾಕೈದು ವರ್ಷ ಕೆಲಸಮಾಡಿದವು. ಬಾಕಿನ ನಡೆಸುತ್ತಿದ್ದ ಕವಿತಾ ಮುಂದೆ ಅಡಿಗರ ಸಾಕ್ಷಿ  ಜೊತೆ ವಿಲೀನಗೊಂಡರೆ ಲಹರಿ ಪ್ರಕಟಣೆಯನ್ನು ನಿಲ್ಲಿಸಿತು. ಲಹರಿ ಬುದ್ಧಿ ಪ್ರಚಾರ ಯೋಜನೆ ಎಂಬ ಮಾಲಿಕೆ ಸುರು ಮಾಡಿ ಅದರಲ್ಲಿ ಕಾಮಿ, ತೇಜಸ್ವಿಯವರ ವ್ಯಕ್ತಿ ವಿಶಿಷ್ಟ ಸಿದ್ಧಾಂತ ಹಾಗೂ ಯಮಳ ಪ್ರಶ್ನೆಗಳನ್ನು ಪ್ರಕಟಿಸಿದ್ದರು. ತೇಜಸ್ವಿ ಜೊತೆಗಿದ್ದರೂ ಇವುಗಳನ್ನು ನೋಡಿಕೊಳ್ಳುತ್ತಿದ್ದವರು ಶ್ರೀರಾಮ. ಇವರು ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನಿವೃತ್ತರಾದರು. ಅಲ್ಲಿ ನನ್ನ ಸಹೋದ್ಯೋಗಿ. ತೇಜಸ್ವಿಯವರ ಬರೆವಣಿಗೆ ಓದಿದವರಿಗೆ ಇವರ ಹೆಸರು ಪರಿಚಿತ. ಆದರೆ ತೇಜಸ್ವಿಯವರಲ್ಲಿ ಇವರ ವ್ಯಕ್ತಿತ್ವದ ಪೂರ್ತಿ ನೋಟ ಸಿಕ್ಕುವುದಿಲ್ಲ. ಇವರು ಗಂಭೀರ ವ್ಯಕ್ತಿ. ಲಹರಿಯ ಸಂಚಿಕೆಗಳ ಕಾವ್ಯ ಮತ್ತು ಪುಸ್ತಕಗಳು ಇವರ ಅಭಿರುಚಿಯನ್ನು ಸಮರ್ಥವಾಗಿ ಅಭಿವ್ಯಕ್ತಿಸುತ್ತವೆ. ಈಗ ಪುಸ್ತಕ ಪ್ರಕಾಶನ ಎಂಬ ಪ್ರಕಾಶನದ ಮೂಲಕ ತೇಜಸ್ವಿಯವರ ಪುಸ್ತಕ ಪ್ರಕಟಿಸುತ್ತಿದ್ದಾರೆ. ಕನ್ನಡದ ಯಶಸ್ವಿ ಪ್ರಕಾಶಕರಲ್ಲೊಬ್ಬರು. ತಮ್ಮ ಪಾಡಿಗೆ ತಮ್ಮ ಕೆಲಸ ಮಾಡುತ್ತಿರುವವರು. ಇವರ ಶ್ರೀಮತಿಯವರಾದ ಪದ್ಮಾ ಶ್ರೀರಾಮ್ ಸಸ್ಯಲೋಕದ ಬಗ್ಗೆ ಕಾವ್ಯದ ನೆಂಟು ಬೆರೆಸಿ ಬರೆಯಬಲ್ಲವರು. ಬಿ. ಜಿ. ಎಲ್. ಸ್ವಾಮಿಯವರ ಬರೆವಣಿಗೆಯಲ್ಲಿ ಕಾಣುವುದಕ್ಕಿಂತ ಭಿನ್ನವಾದ ಸಸ್ಯಲೋಕ ಇವರ ಬರೆವಣಿಗೆಯಲ್ಲಿ ಕಾಣುತ್ತದೆ. ಸಸ್ಯಗಳಿಗೆ ಸಂಬಂಧಿಸಿದಂತೆ ಕನ್ನಡ ಕಾವ್ಯಗಳಲ್ಲಿರುವ ಉಲ್ಲೇಖಗಳನ್ನು ತಿಳಿಯುವುದಕ್ಕಾಗಿ ಸಹಾ ಇವರ ಬರೆವಣಿಗೆ ಓದಬೇಕು.

(ಮುಂದುವರಿಯುವುದು)

No comments:

Post a Comment