Monday, June 20, 2011

ಯರ್ಮುಂಜ ರಾಮಚಂದ್ರ: ಇನ್ನೊಂದು ಫೊಟೋ

ಯರ್ಮುಂಜರ  ಇನ್ನೊಂದು ಫೊಟೊ ಇದೆಯೆಂದು ಮಿತ್ರ ಜನಾರ್ದನ ಭಟ್ ಮೇಲ್ ಕಳಿಸಿದ್ದರು. ಇದು ಅವರೇ ಸಂಪಾದಿಸಿದ ದಕ್ಷಿಣ ಕನ್ನಡದ ಶತಮಾನದ ಕಾವ್ಯ, 1900-2000ದಲ್ಲಿ ಅಚ್ಚಾಗಿದೆ. ಮೇಲೆ ಕಾಣಿಸುವುದೇ ಈ ಫೊಟೋ. ಅವರ ಆ ಪುಸ್ತಕದಿಂದಲೇ ತೆಗೆದುಕೊಂಡಿದ್ದೇನೆ. ಹಿಂದಿನ ಫೊಟೋದ ನಂತರದ ಫೊಟೋ ಇರಬಹುದು. ಮುಖ ಹೆಚ್ಚು ಪ್ರಬುದ್ಧವಾಗಿದೆ.

Saturday, June 18, 2011

ದೇವಾಂಗಣ: ಧರ್ಮಸಂಸ್ಕೃತಿ-ಕಾವ್ಯಸಂಸ್ಕೃತಿ

ಇದು ಜೂನ್ 19, 2011ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಅಂಕಣ. ಮೇಲಿನದ್ದು ಮುಳಿಯರ ಫೊಟೊ.

Wednesday, June 15, 2011

ಕಿವಿಗೆ ಟಿಕ್ಕಿ

ಸಾಂಪ್ರದಾಯಿಕ ವೇಷಭೂಷಣದ ಪ್ರಕಾರ ಕಿವಿಗೆ ಟಿಕ್ಕಿ ಇರುತ್ತಿತ್ತು. ಯರ್ಮುಂಜ ರಾಮಚಂದ್ರರಿಗೂ ಇದ್ದಿರಬೇಕು. ಫೊಟೋದಲ್ಲಿ ಗೊತ್ತಾಗುವುದಿಲ್ಲ. ಸಾದು ಬೊಟ್ಟೇ ಇತ್ತು ಎಂದ ಮೇಲೆ ಟಿಕ್ಕಿ ಇದ್ದಿರಲೇಬೇಕು. ಯಾಕೆಂದರೆ ಅಪ್ಪ ಇರುವ ಯಾರೇ ಆದರೂ ಟಿಕ್ಕಿ ತೆಗೆದಿಡುವುದು ಹವ್ಯಕರಲ್ಲಿ ಅಶುಭ. ಅಪ್ಪ ಸತ್ತಾಗ  ಈ ಟಿಕ್ಕಿ ತೆಗೆಯುತ್ತಾರೆ. ವರ್ಷಾಂತಿಕ ಕಳೆದ ಮೇಲೆ ಮತ್ತೆ ಹಾಕಿಕೊಳ್ಳುತ್ತಾರೆ. ಈಗಲೂ ಕಲ್ಮಡ್ಕ ಮತ್ತು ಸುತ್ತಮುತ್ತ ಊರುಗಳಲ್ಲಿ ಟಿಕ್ಕಿ ಹಾಕಿಕೊಂಡಿರುವವರು ಇದ್ದಾರೆ. ನನಗೂ ಎಸ್ಸೆಸ್ಸೆಲ್ಸಿ ಮುಗಿಯುವ ವರೆಗೆ ಈ ಟಿಕ್ಕಿ ಇತ್ತು. ಆ ಮೇಲೆ ಕಾಲೇಜಿಗೆ ಹೋಗುವವರು ಯಾರೂ ಟಿಕ್ಕಿ ಹಾಕಿಕೊಳ್ಳುವುದಿಲ್ಲ, ಕ್ಲಾಸಿನಲ್ಲಿ ತಮಾಷೆ ಮಾಡಿಯಾರು ಅನ್ನಿಸಿ ತೆಗೆದಿಟ್ಟೆ. ಅಮ್ಮ "ಹಾಂಗೆಲ್ಲಾ ಟಿಕ್ಕಿ ತೆಗೆದಿರ್ಸುಲೆ ಆಗ" ಎಂದರು. ಈಗಲೂ ಕಿವಿಯಲ್ಲಿ ತೂತು ಇದೆ.

ಟಿಕ್ಕಿಯೆಂದರೆ ಚಿಕ್ಕ ಬೆಂಡೋಲೆ. ಇದನ್ನು ಹಾಕಿಕೊಳ್ಳುವ ಕ್ರಮ ಹವ್ಯಕರಲ್ಲಿ ಮಾತ್ರವಲ್ಲದೆ ಇತರ ಅನೇಕ ಜನಾಂಗಗಳಲ್ಲಿ ಇದೆ.

ಯರ್ಮುಂಜ ಕುಟುಂಬ ತಮ್ಮ ಪಂಚಾಂಗಕ್ಕಾಗಿ ಪ್ರಸಿದ್ಧವಾಗಿದೆ. ಇವರು ಪ್ರಕಟಿಸುವ ಪಂಚಾಂಗದ ಹೆಸರು ವೈಜಯಂತೀ ಪಂಚಾಂಗ. ಇದು ಈಗ ತನ್ನ ತೊಂಬತ್ತೈದನೇ ವರ್ಷದಲ್ಲಿದೆ. ಹವ್ಯಕರಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಪಂಚಾಂಗ ಇದು.
ಇದನ್ನು ಪ್ರಾರಂಬಿಸಿದವರು ಯರ್ಮುಂಜ ಶಂಕರ ಜೋಯಿಸರು. ಪಂಚಾಂಗದ ಸಂಚಿಕೆಗಳಲ್ಲಿ ಇವರನ್ನು "ಕರ್ನಾಟಕದಲ್ಲಿ ದೃಕ್ಸಿದ್ಧಾಂತದ ಆದ್ಯ ಪ್ರವರ್ತಕರು" ಎಂದು ಬಣ್ಣಿಸಲಾಗಿದೆ. ಇದರ ಈಗಿನ ಸಂಪಾದಕರು "ಯರ್ಮುಂಜ ಭೀಮ ಜೋಯಿಸರ ಮಗ ಶಂಕರ ಜೋಯಿಸ". ಇದರ ಒಂದು ಸಂಚಿಕೆಯಲ್ಲಿ ಕಲಿಪುರುಷ ಬರುವ ಕುರಿತು ಒಂದು ವಿವರಣೆಯಿತ್ತು. ಕೆಂಪು ಕುದುರೆ ಏರಿ ತಲೆ ಓಡಿನಲ್ಲಿ ನೆತ್ತರು ಕುಡಿಯುತ್ತಾ ದಕ್ಷಿಣ ದಿಕ್ಕಿಗೆ ಪ್ರಯಾಣಿಸುತ್ತಾನೆ ಎಂದೆಲ್ಲಾ ಇತ್ತು ಎಂದು ನೆನಪು. ನಾನು ಈ ವಿವರವನ್ನು ನನ್ನ ನಾಟಕ ಕುದುರೆ ಬಂತು ಕುದುರೆಯಲ್ಲಿ ಬಳಸಿಕೊಂಡಿದ್ದೆ.

ಪ್ರಿಸಂ ಬುಕ್ಸ್ ನವರು ಪ್ರಕಟಿಸಿದ ಯರ್ಮುಂಜರ ಸಮಗ್ರ ಕತೆ ಕವನಗಳ ಬಿಡುಗಡೆ 2002ರಲ್ಲಿ ಪುತ್ತೂರಿನಲ್ಲಿ ಆದಾಗ ರಾಮಚಂದ್ರರ ಅಣ್ಣ ಬಂದಿದ್ದರು. ವೇದಿಕೆಯಲ್ಲಿ ಕೂತಿದ್ದು ಭಾಷಣವನ್ನೂ ಮಾಡಿದರು. ರಾಮಚಂದ್ರ ಎಲ್ಲಿಯಾದರೂ ಪತ್ರಿಕೆಗೆ ಸೇರಬೇಕೆಂದು ಇದ್ದರೆಂದೂ ಅದಕ್ಕಾಗಿ ಉತ್ತರ ಕರ್ನಾಟಕದ ಒಂದು ಊರಿಗೆ--ಬೆಳಗಾವಿಗೆ ಎಂದು ನೆನಪು--ಸಂದರ್ಶನಕ್ಕೆ ಹೋಗಿದ್ದರೆಂದೂ  ಕೊನೆಗೆ ಕಡೆಂಗೋಡ್ಲು ಶಂಕರ ಭಟ್ಟರ ರಾಷ್ಟ್ರಬಂಧುವಿನಲ್ಲಿ ಕೆಲಸ ಸಿಕ್ಕಿತೆಂದೂ ಹೇಳಿದರು. ಅದಾದ ಎರಡು ಮೂರು ವರ್ಷಗಳಲ್ಲಿ ಈ ಅಣ್ಣ ತೀರಿಕೊಂಡರೆಂದು ಸುದ್ದಿ ಬಂತು. ಪುತ್ತೂರಿನ ಆ ಸಭೆಯಲ್ಲಿ ನಾನು ಅವರನ್ನು ಕೇಶುವಲ್ ಆಗಿ ಮಾತಾಡಿಸಿದ್ದೆ, ಅಷ್ಟೆ. ಸರಿಯಾಗಿ ಮಾತಾಡಿಸಿ ಗೌರವ ಅರ್ಪಿಸಬೇಕಾಗಿತ್ತೆಂದು ಈಗ ಅನ್ನಿಸುತ್ತಿದೆ.

ಯರ್ಮುಂಜ ರಾಮಚಂದ್ರರ  ಪ್ರಖ್ಯಾತ ಕವನ "ಯಾರಿಲ್ಲಿಗೆ ಬಂದರು ಕಳೆದಿರುಳು?"ನ್ನು ಇಲ್ಲಿ ಕೊಡುತ್ತಿದ್ದೇನೆ. ಅವರು ಎಷ್ಟು ಒಳ್ಳೆಯ ಲೇಖಕ ಎಂಬುದಕ್ಕೆ ಇದೊಂದು ಉದಾಹರಣೆ ಸಾಕು.

ಯಾರಿಲ್ಲಿಗೆ ಬಂದರು ಕಳೆದಿರುಳು

ಯಾರಿಲ್ಲಿಗೆ ಬಂದರು ಕಳೆದಿರುಳು
ಏ ಗಾಳಿ
ಆ ಕಥೆಯನೊರೆದು ಮುಂದಕೆ ತೆರಳು.

ನೆನೆದು ನೆನೆದು ತನು ಪುಳಕಗೊಳ್ಳುತಿದೆ
ನುಡಿವೆನೆ ದನಿ ನಡುಗುತಿದೆ;
ಸ್ಮೃತಿ ವಿಸ್ಮೃತಿಗಳ ಕಂಬನಿ ಮಾಲೆ
ಎಲ್ಲೆಲ್ಲೂ ತೂಗುತಿದೆ;
ಕಳೆದಿರುಳಿನ ಬೆಳದಿಂಗಳಿನ ಮರೆಯಲಿ
ಏನೂ ಅರಿಯದ ಮುಗ್ಧೆಯ ಕಿವಿಯಲಿ
ಯಾರೇನನು ಪಿಸು ನುಡಿದರು ಹೇಳು
ಏ ಗಾಳಿ
ಆ ಕಥೆಯನೊರೆದು ಮುಂದಕೆ ತೆರಳು.

ನಸುಕಿನ ಬೆಳಕಿನೊಳೆಂಥ ಬಳಲಿಕೆ
ಮೂಡಲ ಹಣೆ ಕಡುಗೆಂಪು!
ಮರಮರದೆಡೆಯಲಿ ಕೂಕೂ ಆಟ
ಭೂಮಿಗೆ ಮೈಮರೆವು.
ಅಲ್ಲಿ ಇಲ್ಲಿ ಗಿಡ ಬಳ್ಳಿ ಮರಗಳು
ಯಾವ ನೆನಪಿನಲೊ ಮೈಮರೆತಿಹವು
ಹೃದಯದೊಳೇನನು ಎರೆದರು ಕೊರೆದರು
ಏ ಗಾಳಿ
ಆ ಕಥೆಯನೊರೆದು ಮುಂದಕೆ ತೆರಳು.

ಮೈಯ್ಯೆಲ್ಲಾ ಗದಗುಟ್ಟುತಲಿದೆಯೇ
ಬೆದರಿಸಿದವರಾರು?
ಮುಖ ತೊಯ್ದಿದೆ, ಕಣ್ಣೀರಿನ ಹನಿಯನು
ಹರಿಯಿಸಿದವರಾರು?
ಯಾರೂ ಕಾಣದ ಆ ಮರೆಯೊಳಗೆ
ಕುಲುಕುಲು ಎನುತಿದೆ ಮೆಲುನಗೆಯ ನೊರೆ
ನಿನ್ನೆಯ ಹಾಡಿನ ದನಿಯಿನ್ನೂ ಗುಣು
ಗುಣಿಸುವ ಮಾಯೆಯಿದೆಂಥದು ಹೇಳು
ಏ ಗಾಳಿ
ಆ ಕಥೆಯನೊರೆದು ಮುಂದಕೆ ತೆರಳು.

(14.3.1954)

**********************


Tuesday, June 14, 2011

ಯರ್ಮುಂಜ ರಾಮಚಂದ್ರ: ಫೊಟೋ

ಇದು ಸಾರ್ವಜನಿಕರಿಗೆ ಲಭ್ಯವಿರುವ ರಾಮಚಂದ್ರರ ಏಕಮಾತ್ರ ಫೊಟೊ. 1950ರ ಹೊತ್ತಿಗೆ--ಆ ಮೇಲೂ ಕೂಡಾ--ಅಪರೂಪಕ್ಕೆ ಫೊಟೋ ತೆಗೆಸುತ್ತಿದ್ದುದರಿಂದ ಇದು ಸಹಜವೇ. ವೇಷಭೂಷಣ ಸಾಂಪ್ರದಾಯಿಕವಾದದ್ದು. ಹಣೆಯಲ್ಲಿರುವುದು ಸಾದು ಬೊಟ್ಟು. ಹೀಗೆ ಹಾಕುವ ಕ್ರಮ ಇತ್ತು. ನನಗೂ ಹಾಕುತ್ತಿದ್ದರು. ಆದರೆ ನಾನು ಹತ್ತು ಹನ್ನೆರಡು ವರ್ಷವಾಗಿದ್ದಾಗ  ಅದನ್ನು ಹಾಕಿಸಿಕೊಳ್ಳುವುದು ನಿಲ್ಲಿಸಿದ್ದೆ. ಯರ್ಮುಂಜರು ಹದಿನೆಂಟು ಇಪ್ಪತ್ತು ವರ್ಷವಾದಾಗಲೂ ಹಾಕಿಕೊಳ್ಳುತ್ತಿದ್ದರೆಂದು ಈ ಫೊಟೋವೇ ಹೇಳುತ್ತದೆ. ಯೋಚನೆಯಲ್ಲಿ ಇದ್ದಷ್ಟು ನಾವೀನ್ಯತೆ ಬಹುಶಃ ಅವರ ಬಾಹ್ಯ ವೇಷಭೂಷಣಗಳಲ್ಲಿ ಇರಲಿಲ್ಲ.

Friday, June 10, 2011

ಯರ್ಮುಂಜ ರಾಮಚಂದ್ರ

ಇದು ಪ್ರಿಸಮ್ ಬುಕ್ಸ್, ಬೆಂಗಳೂರು ಪ್ರಕಟಿಸಿದ ಯರ್ಮುಂಜ ರಾಮಚಂದ್ರರ ಸಮಗ್ರ ಕತೆ, ಕಾವ್ಯ(2002)ಕ್ಕೆ ನಾನು ಬರೆದ ಮುನ್ನುಡಿ. ಮೇಲಿನದ್ದು ಕಲ್ಮಡ್ಕದ ಸಂಗಮ ಸಾಹಿತ್ಯ ಮಾಲೆ 1954ರಲ್ಲಿ ಅವರು ಬದುಕಿದ್ದಾಗ ಪ್ರಕಟಿಸಿದ ಅವರ ಮೊದಲ ಪುಸ್ತಕ ಚಿಕಿತ್ಸೆಯ ಹುಚ್ಚು ಮತ್ತು ಇತರ ಕತೆಗಳುನ ರಕ್ಷಾಪುಟ.
(ಮುಂದುವರಿಯುವುದು)

******************


Monday, June 6, 2011

ಮೂಲತಃ ಎಂದರೆ

ಕೆಲವು ಸಮಯದ ಹಿಂದೆ ನಾ. ಕಸ್ತೂರಿ ಅವರ ಬಗ್ಗೆ ಬರೆಯುತ್ತ ನಾನು ಅವರು ಮೂಲತಃ ಮಲಯಾಳಿ ಎಂಬ ಪದಪುಂಜ ಬಳಸಿದ್ದೆ. ಅದಕ್ಕೆ ಒಬ್ಬರು ಓದುಗರು ಆಕ್ಷೇಪ ಎತ್ತಿದ್ದರು. ಅವರ ಬರೆವಣಿಗೆಯ ಧ್ವನಿ ನಾನು ಮೂಲತಃ ಮಲಯಾಳಿ ಎಂಬುದನ್ನು ಅವಹೇಳನಕಾರಿಯಾಗಿ ಬಳಸುತ್ತಿದ್ದೇನೆ ಎಂಬಂತಿತ್ತು. ಆದ್ದರಿಂದ ಈ ಚಿಕ್ಕ ಟಿಪ್ಪಣಿ.

ಮೂಲತಃ ಇಂಥವರು ಎನ್ನುವುದು ಸಾಹಿತ್ಯ/ಸಂಸ್ಕೃತಿ ಚರ್ಚೆಯಲ್ಲಿ ಬಳಕೆಯಾಗುವ ಒಂದು ಪಾರಿಭಾಷಿಕ ಪದ. ಅದು ವಿವರಣೆ; ಅವಹೇಳನವೂ ಅಲ್ಲ, ಹೊಗಳಿಕೆಯೂ ಅಲ್ಲ. ಮೂಲತಃ ಎಂದರೆ ಇಂಥವರ ಸಂವೇದನೆ ಈ ರೀತಿ ರೂಪುಗೊಂಡಿದೆ ಎಂದು ಅರ್ಥ. ನಾ. ಕಸ್ತೂರಿ ಮೂಲತಃ ಮಲಯಾಳಿ ಎಂದರೆ ಅವರು ತಮ್ಮ ಆರಂಭಿಕ ವರ್ಷಗಳನ್ನು ಮಲಯಾಳ ಸಂಸ್ಕೃತಿಯಲ್ಲಿ ಕಳೆದರು, ಅಲ್ಲಿ ಅವರ ಸಂವೇದನೆ ಬಹುತೇಕ ರೂಪುಗೊಂಡಿತು  ಎಂಬುದನ್ನು ಸೂಚಿಸುತ್ತದೆ. ಬೇರೆಯವರ ಬಗ್ಗೆಯೂ ಈ ಮಾತನ್ನು ಬಳಸುತ್ತೇವೆ. ಉದಾಹರಣೆಗೆ ಇಂಗ್ಲಿಷಿನ ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬನಾದ ಜೋಸೆಫ್ ಕಾನ್ರಾಡ್ ಬಗ್ಗೆ ಇವನು ಮೂಲತಃ ಪೋಲೆಂಡಿನವನು ಎನ್ನುತ್ತೇವೆ. ಇಂಗ್ಲೆಂಡಿನಲ್ಲಿ ನೆಲೆಸಿದ್ದ ಇಂಗ್ಲೆಂಡ್ ಪ್ರಜೆ ಟಿ. ಎಸ್. ಎಲಿಯಟ್ ಬಗ್ಗೆ ಮೂಲತಃ ಅಮೆರಿಕನ್ ಎನ್ನುತ್ತೇವೆ. ರಾಮಾನುಜನ್ ಅಮೆರಿಕಾದಲ್ಲಿ ನೆಲೆಸಿದ್ದರೂ ಮೂಲತಃ ಕನ್ನಡಿಗರು ಎನ್ನುತ್ತೇವೆ. ಇಲ್ಲೆಲ್ಲಾ ಇವರ ಸಂವೇದನೆ ಹೇಗೆ ರೂಪುಗೊಂಡಿದೆ, ಆ ಕಾರಣದಿಂದ ಇವರು ಬರೆಯುತ್ತಿರುವ ಭಾಷೆಯ ಇತರ ಲೇಖಕರಿಗಿಂತ ಇವರು ಹೇಗೆ ಭಿನ್ನ ಎಂಬುದನ್ನು ಸೂಚಿಸುವ ಉದ್ದೇಶವಷ್ಟೇ ಇದೆ.

ಕನ್ನಡದಲ್ಲಿ ಭಾಷೆಯ ಸೂಕ್ಷ್ಮ ಉಪಯೋಗದ ಬಗ್ಗ ಅವಜ್ಞೆ, ನಿರ್ಲಕ್ಷ್ಯ ಮೇಲಿಂದ ಮೇಲೆ ಕಾಣುತ್ತಿದೆ, ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳುವವರ ಸಂಖ್ಯೆ ಕಮ್ಮಿಯಾಗುತ್ತಿದೆ ಎಂದು ನನಗೆ ಆಗ-ಈಗ ಅನ್ನಿಸಿದೆ. ಅದು ನಮ್ಮನ್ನು ಒರಟಾದ, ಕಮ್ಮಿ ಸಂವೇದನೆಯ ಜನರನ್ನಾಗಿ ಮಾಡಿಬಿಡಬಹುದು. ಹೀಗಾಗಿ ಭಾಷಾಸೂಕ್ಷ್ಮತೆ ಉಳಿಸಿ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ಈ ವಿವರಣೆ.
****************************

ಕರ್ನಾಟಕ ಜ್ಞಾನ ಆಯೋಗದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆಯ ವಿಳಾಸ ಈ ಕೆಳಗಿನಂತಿದೆ. ಸಂದರ್ಶಿಸಿ:
www.kanaja.in

Saturday, June 4, 2011

ದೇವಾಂಗಣ 11: ಪಂಪನ ಕಾವ್ಯ: ಸುಜನಾರಿಗೆ ಸಂಬಂಧಿಸಿದಂತೆ

ಇದು ಜೂನ್ 5, 2011ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಅಂಕಣ.

*******************