Friday, January 21, 2011

ಆತ್ಮಕಥನ 7

(1965-66ರ ಸುಮಾರಿಗೆ ಶ್ರೀಕೃಷ್ಣ ಆಲನಹಳ್ಳಿ ಪ್ರಕಟಿಸುತ್ತಿದ್ದ ಸಾಹಿತ್ಯಿಕ ತ್ರೈಮಾಸಿಕದ ಮುಖಚಿತ್ರ. ಬೈಂಡಿಂಗಿಗೆ ಪಿನ್ನು ಹಾಕಿರುವುದರಿಂದ ಹಾಳೆಗಳಿಗೆ ತುಕ್ಕು ಹಿಡಿದಿದೆ.)

ಎಲ್ಲಿಗೆ?, ಮೃಚ್ಛಕಟಿಕ  ಮೊದಲಾದ ನಾಟಕಗಳನ್ನು ಆಡಿದ್ದು ಸಮತೆಂತೋ ನಾಟಕ ತಂಡ. ಇದು 1967ರಲ್ಲಿ ಡಾ. ರತ್ನ, ವಿಶ್ವನಾಥ ಮಿರ್ಲೆ, ಸಿಂಧುವಳ್ಳಿ ಅನಂತಮೂರ್ತಿ, ರಾಮೇಶ್ವರಿ ವರ್ಮ ಮೊದಲಾದವರು ಸೇರಿ ಪ್ರಾರಂಭಿಸಿದ ಹವ್ಯಾಸಿ ನಾಟಕ ತಂಡ. ಇದು ಪ್ರಾರಂಭವಾದಾಗ ಸಮತೆಂತೋ ಅಂದರೆ ಏನು ಎಂಬ ಜಿಜ್ಞಾಸೆ ಮೈಸೂರಿನ ರಂಗಾಸಕ್ತರಲ್ಲಿ, ವಿದ್ವಾಂಸರಲ್ಲಿ ಉಂಟಾಗಿತ್ತು. ಯಾರೋ ಹೋಗಿ ಕುವೆಂಪುರನ್ನು ಸಮತೆಂತೋ ಪದದ ಅರ್ಥ ಏನು ಎಂದು ಕೇಳಿದರಂತೆ. ಅವರು, ನನಗೆ ತಿಳಿದಿಲ್ಲ, ಡಿ. ಎಲ್. ನರಸಿಂಹಾಚಾರ್ ಅವರನ್ನು  ಕೇಳಿ, ತಿಳಿದಿದ್ದರೆ ಅವರೊಬ್ಬರಿಗೆ ತಿಳಿದಿರಬಹುದು ಎಂದರಂತೆ. ಡಿ. ಎಲ್. ಎನ್., ನನಗೂ ಗೊತ್ತಿಲ್ಲ, ಸಮತೆ ಎಂತೋ ಎಂಬ ಅರ್ಥದಲ್ಲಿ ಏನಾದರೂ ಬಳಸಿದ್ದಾರೋ ಏನೋ ಎಂದರಂತೆ. ಮುಂದೆ ಒಂದು ನಾಟಕದ ಶೋ ಇದ್ದಾಗ, ಸಮತೆಂತೋ ಎಂದರೆ ಸರಸ್ವತಿಪುರದ ಮಧ್ಯದಲ್ಲಿರುವ ತೆಂಗಿನ ತೋಟ ಎಂದು ಅರ್ಥ ಎಂದು ವಿಶ್ವನಾಥ ಮಿರ್ಲೆ ವಿವರಿಸಿದರು. ಆಗ ಸರಸ್ವತಿಪುರದ ಮಧ್ಯದಲ್ಲಿ ಈಗ ಇರುವ ತೆರೆದ ಚರಂಡಿಗೆ ಒತ್ತಿಕೊಂಡಂತೆ ಒಂದು ತೆಂಗಿನ ತೋಟ ಇತ್ತು. ಒಣಗಿಕೊಂಡಿದ್ದ ಮರಗಳು. ಬಹುಶಃ ಸಿಟಿ ಟ್ರಸ್ಟ್ ಬೋರ್ಡಿನವರು--ಮೂಡಕ್ಕೆ ಆಗ ಇದ್ದ ಹೆಸರು--ಆಗಲೇ ಆ ಜಾಗ ಎಕ್ವೈರ್ ಮಾಡಿದ್ದರೋ ಏನೋ. ಈ ನಾಟಕ ತಂಡದ ರತ್ನ, ಸಿಂಧುವಳ್ಳಿ, ಮಿರ್ಲೆ ಮೊದಲಾದವರ ಮನೆಗಳು ಈ ತೆಂಗಿನ ತೋಟದ ಆಸುಪಾಸಿನಲ್ಲಿಯೇ ಇದ್ದವು.

ಮೇಲೆ ಹೆಸರಿಸಿದ ನಾಟಕಗಳಲ್ಲದೆ ಬೇರೆ ನಾಟಕಗಳನ್ನೂ ಸಮತೆಂತೋದವರು ಆಡಿದ್ದಾರೆ. ಅವುಗಳಲ್ಲಿ ಟಿಂಗರ ಬುಡ್ಡಣ್ದ ತುಂಬಾ ಚೆನ್ನಾಗಿತ್ತೆಂದು ಕೇಳಿದ್ದೇನೆ. ಇನ್ನೊಂದು ನಾಟಕ ಅವರು ಆಡಿದ್ದು ಚೆಕಾವನ  ಕಾಡ್ಮನ್ಸ. ಅವನ ದಿ ಬೇರ್ ನ್ನು ಈ ಹೆಸರಿನಲ್ಲಿ ರೂಪಾಂತರಿಸಿದವರು ಸಿಂಧುವಳ್ಳಿ ಅನಂತಮೂರ್ತಿ.ಅದರಲ್ಲಿ ಎಸ್ತರ್ ಅನಂತಮೂರ್ತಿ ಹೆಂಗಸಿನ ಪಾತ್ರ, ವಿಶ್ವನಾಥ ಮಿರ್ಲೆ ಗಂಡಸಿನ ಪಾತ್ರ ಮಾಡಿದ್ದರು. ಮುಂದೆ ಎಂ. ಎ. ಮುಗಿಸಿ ಬನುಮಯ್ಯ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದಾಗ ನಾನೂ ಸಮತೆಂತೋದ ಒಂದು ನಾಟಕದಲ್ಲಿ ಪಾತ್ರ ವಹಿಸಿದೆ. ಅದು ಜಿ. ಬಿ. ಜೋಶಿಯವರ ನಾಟಕ ಕದಡಿದ ನೀರುನಲ್ಲಿ ಶಂಕರನ ಪಾತ್ರ. ಅದರಲ್ಲಿ ಪಾತ್ರವಹಿಸಿದ ಇತರರು: ಡಾ. ರತ್ನ, ಮಾಧವ ಕುಲಕರ್ಣಿ, ರಾಮೇಶ್ವರಿ ವರ್ಮ, ಲಕ್ಷ್ಮಿ--ಈಗಿನ ಲಕ್ಷ್ಮಿ ಚಂದ್ರಶೇಖರ್. ವಿಶೇಷವೆಂದರೆ ಅದರಲ್ಲಿ ಹಿರಿಯ ನಟರಾದ ಸಂಪತ್  ಗೂಳಪ್ಪನ ಪಾತ್ರ ಮಾಡಿದ್ದರು. ಇವರು ರಂಗಭೂಮಿಯಲ್ಲಿ ಗೌರವಾನ್ವಿತರು ಮಾತ್ರವಲ್ಲ; ಆರ್. ಕೆ. ನಾರಾಯಣ್ ಅವರ ಸ್ನೇಹಿತರೂ ಆಗಿದ್ದರು. ತಮ್ಮ ಮಿ. ಸಂಪತ್  ಕೃತಿಯನ್ನು ಸಂಪತ್ ಅವರಿಗೆ ನಾರಾಯಣ್, "To Mr. Sampath, the original" ಎಂದು ಅಂಕಿತ ಹಾಕಿ ಕೊಟ್ಟಿದ್ದರೆಂದು ಒಂದು ಲೆಜೆಂಡು ಮೈಸೂರಿನಲ್ಲಿ ಇತ್ತು. ನಾರಾಯಣ್ ಸಂಪತ್ ರ ಸಿಟಿ ಪವರ್ ಪ್ರೆಸ್ಸಿನಲ್ಲಿ ಬಂದು ಕೂತುಕೊಳ್ಳುವ ಸಂಪ್ರದಾಯ ಇತ್ತಂತೆ.

ವೇಷ ಹಾಕಿ ರಂಗದ ಮೇಲೆ ಇನ್ನೇನು ಪ್ರವೇಶ ಕೊಡಬೇಕು ಎಂಬಾಗ ಸಂಪತ್ ಅವರಿಗೆ ಜ್ವರ ಬಂದ ಹಾಗೆ ಆಗುತ್ತದೆ; ಹತ್ತಿರದಲ್ಲಿದ್ದವರನ್ನು ನನಗೆ ಜ್ವರ ಬಂದಿದೆಯೋ ನೋಡಿ ಎಂದು ಕೇಳುತ್ತಾರೆ; ಆಗ, ಬಂದಿದೆ ಎಂದು ಹೇಳಬೇಕಾದ್ದು ಹಾಗೆ ಕೇಳಿಸಿಕೊಂಡವನ ಕರ್ತವ್ಯ; ಇದರಿಂದಾಗಿ ಚೆನ್ನಾಗಿ ನಟಿಸಲು ಅಗತ್ಯವಾದ  ಒಂದು ಟೆಂಪರಾಮೆಂಟು ಅವರಲ್ಲಿ ಹುಟ್ಟುತ್ತದೆ ಎಂಬ ಒಂದು ಲೆಜೆಂಡು ಅವರ ಬಗ್ಗೆ ಇತ್ತು. ಅವರು ಪಾತ್ರವಹಿಸಿದ ಆ ದಿವಸ ನನ್ನ  ಹತ್ತಿರ ಅಥವಾ ಬೇರೆ ಯಾರಾದರೂ ಅಲ್ಲಿ  ಗ್ರೀನ್ ರೂಮಿನಲ್ಲಿ  ಇದ್ದವರ ಹತ್ತಿರ ನನಗೆ ಜ್ವರ ಬಂದಿದೆಯೋ ನೋಡಿ ಎಂದು ಕೇಳುತ್ತಾರೆಂದು ಕಾಯುತ್ತಿದ್ದೆ. ಅವರು ಯಾರ ಹತ್ತಿರವೂ ಹಾಗೆ ಕೇಳಲಿಲ್ಲ. ಬಹುಶಃ ಯಾವಾಗಲೋ ಒಂದೆರಡು ಸಲ ಯಾವುದೋ ಕಾಲದಲ್ಲಿ ಹಾಗೆ ಕೇಳಿ ಆ ಲೆಜೆಂಡು ಹುಟ್ಟಿರಬೇಕು. ಎಲ್ಲಾ ಲೆಜೆಂಡು ಹುಟ್ಟುವುದು ಹಾಗೇ ತಾನೇ? ಅದು ನಿಜವೋ ಸುಳ್ಳೊ ಎಂದು ಪರೀಕ್ಷಿಸಿ ಪ್ರಯೋಜನವಿಲ್ಲ. ರಂಗಪ್ರವೇಶವೆಂದರೆ ಅವರಿಗೆ ಒಂದು ಹೈಟನ್ಡ್ ಸ್ಟೇಟ್ ಎಂದು ಅರ್ಥ ಮಾಡಿಕೊಳ್ಳುವುದು ಹೆಚ್ಚು ಸೂಕ್ತ.

ಈ ನಾಟಕದ ರಿಹರ್ಸಲ್  ನಡೆಯುತ್ತಿದ್ದಾಗ ನನಗೊಂದು ವಿಶೇಷ ಅನುಭವವಾಯಿತು. ಶಂಕರನದ್ದು ಮುಖ್ಯ ಪಾತ್ರ. ಆ ಪಾತ್ರ ಕೆಟ್ಟರೆ ಇಡೀ ನಾಟಕ ಕೆಡುವ ಸಾಧ್ಯತೆ ಇತ್ತು. ಆದರೆ ರಿಹರ್ಸಲ್ ಪ್ರಾರಂಭವಾಗಿ ಹದಿನೈದು ದಿನ ಕಳೆದರೂ ನನಗೆ ಆ ಪಾತ್ರವನ್ನು ಪರವಾ ಇಲ್ಲ ಎಂಬ ಮಟ್ಟದಲ್ಲಿ ಅಭಿನಯಿಸುವುದಕ್ಕೂ ಆಗುತ್ತಿರಲಿಲ್ಲ. ತುಂಬಾ ಕೆಟ್ಟದಾಗಿ ಮಾಡುತ್ತಿದ್ದೆ. ನಿರ್ದೇಶಕರಾದ ರತ್ನ ಹೇಳಿ ಹೇಳಿ ಸಾಕಾಗಿ ಕೊನೆಗೆ ನನ್ನ ಬಗ್ಗೆ ಸಾರ್ಕಾಸ್ಟಿಕ್ ಆಗಿ ಮಾತಾಡಲು ಸುರು ಮಾಡಿದ್ದರು. ನನಗೂ ಇದನ್ನು ಬಿಟ್ಟುಬಿಡಬೇಕು, ನಟನೆ ನನಗೆ ಹೇಳಿಸಿದ್ದಲ್ಲ, ಇವತ್ತು ರಿಹರ್ಸಲ್  ಮುಗಿದ ಮೇಲೆ ಏನಾದರೂ ನೆವದಿಂದ  ನಾಳೆಯಿಂದ ನಾನು ಬರುವುದಿಲ್ಲ ಎಂದು ಹೇಳಿ ಬಂದು ಬಿಡುತ್ತೇನೆ ಎಂದುಕೊಂಡೇ ಹೋದೆ. ಹೇಗೂ ನಾಳೆಯಿಂದ ಬರುವುದಿಲ್ಲ, ಇವತ್ತೊಂದು ದಿವಸ ಮೈ ಚಳಿ  ಬಿಟ್ಟು ನನಗೆ ಸರಿ ಕಂಡ ಹಾಗೆ ಅಭಿನಯಿಸುತ್ತೇನೆ ಎಂದು ಅಭಿನಯಿಸಿದೆ. ರಿಹರ್ಸಲ್ ಮುಗಿದ ಮೇಲೆ ಮಾತ್ರ ನನಗೆ ಎಲ್ಲರಿಂದ ಅಭಿನಂದನೆಗಳ ಸುರಿಮಳೆ. ನನ್ನ ಪ್ರವೇಶವೆಂದೊಡನೆ ಮುಖ ಸಿಂಡರಿಸುತ್ತಿದ್ದವರೂ  ಅವತ್ತು ನನ್ನನ್ನು ನಗುನಗುತ್ತಾ ಮಾತಾಡಿಸಿದರು. ಆನಂತರ ನಾನು ನಾಟಕದಿಂದ ನಿರ್ಗಮಿಸಬೇಕೆಂಬ ಯೋಚನೆ ಬಿಟ್ಟುಬಿಟ್ಟೆ. ನಾಟಕ ಮುಗಿದ ಮೇಲೆ ಡಾ. ರತ್ನ ಹೇಳಿದರು: ಅವರೂ ನನ್ನನ್ನು ತೆಗೆದುಹಾಕಿ ಬೇರೆಯವರನ್ನು ತೆಗೆದುಕೊಳ್ಳುವ ಯೋಚನೆ ಮಾಡುತ್ತಿದ್ದರಂತೆ.

ಅಷ್ಟರ ವರೆಗೆ ಹೇಳಿಕೊಟ್ಟದ್ದನ್ನು ಮಾತ್ರ ಮಾಡುತ್ತಿದ್ದವ ಅವತ್ತು ನನ್ನ ಅಂತರಂಗದ ಮಾತಿನಂತೆ ನನಗೆ ಸಹಜವಾದ ಆಂಗಿಕಗಳನ್ನು ಮಾಡಿ ಅಭಿನಯಿಸಿದ್ದೆ. ಅಂತರಂಗ ಮತ್ತು ಬಾಹ್ಯ; ಪಾತ್ರದ ವ್ಯಕ್ತಿತ್ವ ಮತ್ತು ನಮ್ಮ ವ್ಯಕ್ತಿತ್ವ--ಎರಡೂ ಒಟ್ಟಿಗೆ  ಸೇರಿದ ಸಂಧಿಬಿಂದುವಿನಲ್ಲಿ  ಅಭಿನಯಿಸುವುದು ಎಂದು ಬಹುಶಃ ಇದನ್ನು  ಕರೆಯಬಹುದು. ಸ್ಟಾನಿಸ್ಲಾವ್ಸ್ಕಿ ರಂಗದಲ್ಲಿ ಅಂತರಂಗ ಎಂದು ಕರೆಯುವುದು ಇದನ್ನೇ  ಇರಬೇಕು. ಆದರೆ ಮುಂದೆ ನಟನೆಯನ್ನು ನಾನು ಬೆಳೆಸಿಕೊಂಡು ಹೋಗಲಿಲ್ಲ. ಒಂಟಿಯಾಗಿರುವುದನ್ನೇ ಹೆಚ್ಚು ಇಷ್ಟಪಡುವ ನನಗೆ ನಾಲ್ಕು ಜನರ ಜೊತೆ ಹೊಂದಿಕೊಂಡು ಕೆಲಸ ಮಾಡಬೇಕಾದ ನಟನೆ ಹೇಳಿಸಿದ್ದಲ್ಲ ಅನ್ನಿಸಿತು. ಅದಾದ ಕೆಲವು ಸಮಯದಲ್ಲಿ  ನನಗೆ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಕೆಲಸ ಸಿಕ್ಕಿ ಮೈಸೂರು ಬಿಟ್ಟದ್ದರಿಂದ ಶಂಕರನ ಪಾತ್ರವನ್ನೂ ಆನಂತರ ನಾನು ಮಾಡಲಿಲ್ಲ. ಆದರೆ ಮುಂದೆ ಆ ಪಾತ್ರ ಮಾಡಿದ ಎರಡು ಮೂರು ಜನರಲ್ಲಿ ನನ್ನ ಪಾತ್ರವೇ ಚೆನ್ನಾಗಿತ್ತು ಎಂದು ಬೇರೆಯವರು ಮಾತ್ರವಲ್ಲದೆ ರತ್ನ ಕೂಡಾ ನನಗೆ ಹೇಳಿದರು.

ಡಾ.  ರತ್ನ ನನ್ನ ಉಚ್ಛಾರವನ್ನೂ ತಿದ್ದಿದರು. ನಾನು ಕೆಲವು ಸಲ ಕೊನೆಯ ಅಕ್ಷರಗಳನ್ನು ನುಂಗುತ್ತಿದ್ದೆ; ಅಥವಾ/ಮತ್ತು ಬಹಳ ಸ್ಪೀಡಾಗಿ ಮಾತಾಡುತ್ತಿದ್ದೆ. ರಿಹರ್ಸಲ್ಲಿನಲ್ಲಿ ರತ್ನ ವ್ಯಂಗ್ಯವಾಗಿ ಪಾಠವೂ ಹೀಗೇ ಮಾಡೋದೋ ಎಂದು ಕೇಳಿದರು. ಅಕ್ಷರ ನುಂಗುತ್ತೇನೆಂಬುದು ಅವರು ಹೇಳಿಯೇ ನನಗೆ ಗೊತ್ತಾದದ್ದು. ಈಗ ನನ್ನನ್ನು ಸ್ಪಷ್ಟ ಉಚ್ಛಾರದವನೆಂದು ಅನೇಕರು ಹೊಗಳುತ್ತಾರೆ. ಅದಕ್ಕೆ ಕಾರಣ ರತ್ನ. ನನ್ನದು ಕಂಚಿನ ಕಂಠ ಎಂದೂ ಅನ್ನುತ್ತಾರೆ. ನನ್ನ ಧ್ವನಿ ದೊಡ್ಡ. ಕೆರಿಯರಿನ ಪ್ರಾರಂಭದಲ್ಲಿ ತೊಂಭತ್ತು ನೂರು ವಿದ್ಯಾರ್ಥಿಗಳಿದ್ದ ಕ್ಲಾಸಿಗೆ ಪಾಠ ಮಾಡಿ ದೊಡ್ಡಕ್ಕೆ ಮಾತಾಡುವುದು ಅಭ್ಯಾಸವಾಗಿದೆ. ಪ್ರಜ್ಞಾಪೂರ್ವಕವಾಗಿ ಧ್ವನಿ ತಗ್ಗಿಸಿಕೊಳ್ಳದಿದ್ದರೆ ಮಾತು ದೊಡ್ಡ ಧ್ವನಿಯಲ್ಲೇ ಸಾಗುತ್ತಿರುತ್ತದೆ.

ರತ್ನ ಸ್ಪೀಚ್ ತಜ್ಞ. ಮೈಸೂರಿನ ಅಖಿಲ ಬಾರತ ವಾಕ್ ಶ್ರವಣ ಸಂಸ್ಥೆಯ ಮೊದಲ ನಿರ್ದೇಶಕರು. ಇಡೀ ದೇಶಕ್ಕೆ ವಾಕ್ ಶ್ರವಣಕ್ಕೆ ಸಂಬಂಧಿಸಿದ ಮೊದಲ ಸಂಸ್ಥೆ ಅದು. ಮಹಾರಾಜಾ ಕಾಲೇಜಿನಲ್ಲಿ  ಬಿ. ಎ. ಇಂಗ್ಲಿಷ್ ಆನರ್ಸಿನಲ್ಲಿ ಫೇಲಾಗಿ, ಅಮೇರಿಕಕ್ಕೆ ಹೋಗಿ ವಾಕ್ ಶ್ರವಣದಲ್ಲಿ ಇಷ್ಟುದ್ದ  ಡಿಗ್ರಿಗಳನ್ನು ಪಡೆದು ತಜ್ಞರಾಗಿ ಹಿಂದಿರುಗಿ ಕೇಂದ್ರ ಸರಕಾರ ಆಗ ತಾನೇ ಪ್ರಾರಂಭಿಸಿದ ಈ ಸಂಸ್ಥೆಗೆ ಮೊದಲ ನಿರ್ದೇಶಕರಾಗಿದ್ದರು--ತುಂಬಾ ಚಿಕ್ಕ ವಯಸ್ಸಿನಲ್ಲೇ.  ರಾಮಸ್ವಾಮಿ ಸರ್ಕಲ್ಲಿನಿಂದ ಸ್ವಲ್ಪ ಮುಂದೆ ಒಂದು ಮನೆಯಲ್ಲಿ--ಆ ಮನೆಗೆ ಅದಕ್ಕಿಂತ ಮೊದಲು ಹುಜೂರ್ ಸೆಕ್ರೆಟರಿ ಎಂದು ಬೋರ್ಡಿತ್ತು, ಅದು ಮಹಾರಾಜರ  ಸೆಕ್ರೆಟರಿಯ ನಿವಾಸ ಆಗಿದ್ದಿರಬಹುದು--ಈ ಸಂಸ್ಥೆ ಪ್ರಾರಂಭವಾಗಿತ್ತು. ಆಗ ಅಲ್ಲಿ ರತ್ನ ಮತ್ತು  ಮುಂದೆ ಗತಿಸ್ಥಿತಿ  ಬರೆಯಲಿದ್ದ  ಗಿರಿ ಇಬ್ಬರೇ ಸ್ಟಾಫ್ ಇದ್ದರು. ಮೈಸೂರಿನಲ್ಲಿ ಮಹಾರಾಜಾ ಕಾಲೇಜಿಗೆ ಆಗ ತಾನೇ ಸೇರಿದ್ದ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ರತ್ನ ಮತ್ತು ಗಿರಿಯವರನ್ನು ಕೃಷ್ಣ ಆಲನಹಳ್ಳಿ  ಪರಿಚಯ ಮಾಡಿಕೊಟ್ಟಿದ್ದ. ಇನ್ನೂ  ಹದಿನೇಳು ಹದಿನೆಂಟು ವರ್ಷದ ನನ್ನನ್ನು, ನನಗಿಂತ ಸ್ವಲ್ಪ ದೊಡ್ಡವನಾದ ಕೃಷ್ಣನನ್ನು, ಇವರೆಲ್ಲಾ ಸಮಾನರಂತೆ ಕೂತುಕೊಳ್ಳ ಹೇಳಿ, ಕಾಫಿ ತರಿಸಿಕೊಟ್ಟು, ಘನ ವಿಷಯಗಳ ಚರ್ಚೆಗೆ ಅರ್ಹ ಎಂಬಂತೆ ನಡೆಸಿಕೊಳ್ಳುತ್ತಾರೆಂಬುದು ನನಗೆ ಅತ್ಯಂತ ಆಶ್ಚರ್ಯದ ವಿಷಯವಾಗಿತ್ತು; ಆತ್ಮವಿಶ್ವಾಸ ಹೆಚ್ಚಿಸಿದ ವಿಷಯವೂ ಆಗಿತ್ತು.


*************

ಬೋಧಿ ಟ್ರಸ್ಟಿನ ಪುಸ್ತಕ ಬೇಕಾದವರು ಪುಸ್ತಕದ ಮೊತ್ತವನ್ನು Bodhi Trust, SB Account no. 1600101008058, Canara Bank, Yenmur 574328, Dakshina Kannada District, IFSCCNRB0001600--ಇಲ್ಲಿಗ ಜಮೆ ಮಾಡಿ ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ ಇಲ್ಲಿಗೆ ಪತ್ರ ಬರೆದು ಅಥವಾ bodhitrustk@gmail.comಗೆ ಇಮೇಲ್ ಮಾಡಿ ತಿಳಿಸಿದರೆ ಪುಸ್ತಕಗಳನ್ನು  ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ. ಇವು ಮಾರಾಟಕ್ಕೆ ಲಭ್ಯವಿರುವ ಪುಸ್ತಕಗಳು:

1.ಸಮಗ್ರ ನಾಟಕಗಳು ಸಂಪುಟ 2. ರೂ60.00
2. ಸಮಗ್ರ ನಾಟಕಗಳು. ಸಂಪುಟ 3. ರೂ75.00
3. ಮಾತಾಡುವ ಮರ, ಸಮಗ್ರ ಕಾವ್ಯ, 1964-2003. ರೂ100.00
4. ಮುಚ್ಚು ಮತ್ತು ಇತರ ಲೇಖನಗಳು. ರೂ60.00

5. ಹ್ಯಾಮ್ಲೆಟ್. ಅನುವಾದ. ರೂ50.00

No comments:

Post a Comment