Monday, January 31, 2011

ಬೇಂದ್ರೆ ಕಾವ್ಯೋತ್ಸವ

ಮಾರ್ಚ್ 20, 2011ರಂದು ಬೋಧಿ ಟ್ರಸ್ಟ್ ವತಿಯಿಂದ ಬೆಂಗಳೂರಿನ ಇಂಡಿಯನ್ ಇನ್ಸ್ಸಿಟ್ಯೂಟ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಬೇಂದ್ರೆ ಕಾವ್ಯೋತ್ಸವ ಮತ್ತು ಇತ್ತೀಚೆಗೆ ಬೋಧಿ ಟ್ರಸ್ಟ್ ಪ್ರಕಟಿಸಿದ ಕೆಲವು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಲಿದೆ. ಸರ್ವಶ್ರೀ ಸಿ. ಆರ್. ಸಿಂಹ, ಶ್ರೀನಿವಾಸ ಪ್ರಭು, ರಘುನಂದನ, ಎನ್.ಮಂಗಳಾ, ನರಹಳ್ಳಿ ಬಾಲಸುಬ್ರಹ್ಮಣ್ಯ,  ಮತ್ತು ಕಲ್ಪನಾ ನಾಗನಾಥ್ ಬೇಂದ್ರೆಯವರ ವಿವಿಧ ಕವನಗಳನ್ನು ಸುಮಾರು ಎರಡು ಗಂಟೆಗಳ ಕಾಲ ವಾಚಿಸುವರು/ಹಾಡುವರು. ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಕವಿ ಎಚ್. ಎಸ್. ವೆಂಕಟೇಶಮೂರ್ತಿ ವಹಿಸುತ್ತಾರೆ. ನರಹಳ್ಳಿ ಬಾಲಸುಬ್ರಹ್ಮಣ್ಯ ಪುಸ್ತಕಗಳ ಕುರಿತು ಮಾತಾಡುತ್ತಾರೆ. ಸಮಾರಂಭ ಬೆಳಿಗ್ಗೆ 9.30ಕ್ಕೆ ಸುರುವಾಗಿ ಮಧ್ಯಾಹ್ನ 1 ಗಂಟೆಗೆ ಮುಗಿಯಲಿದೆ.

ಬೋಧಿ ಟ್ರಸ್ಟ್ ಪ್ರಾರಂಭವಾಗಿ ಹತ್ತು ವರ್ಷ ಪೂರ್ತಿಯಾಯಿತು. ಅದನ್ನು ಸಂಭ್ರಮಿಸಿಕೊಳ್ಳಲು ಹಮ್ಮಿಕೊಂಡ ಕಾರ್ಯಕ್ರಮಗಳಲ್ಲಿ ಇದು ಮೊದಲನೆಯದು.

ಕಾರ್ಯಕ್ರಮಕ್ಕೆ ಬನ್ನಿ. ಕಾವ್ಯಪ್ರೇಮಿಗಳಿಗೆ ತಿಳಿಸಿ, ಕರಕೊಂಡು ಬನ್ನಿ.

ಬೇಸಿಗೆಯ ನಡುಹಗಲು

(ಇದು ನಾನು ಪಂಜ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನನ್ನ ಹದಿನಾರನೇ ವಯಸ್ಸಿನಲ್ಲಿ ಬರೆದ ಪದ್ಯಗಳಲ್ಲಿ ಒಂದು. ಇದು  ಬಾಕಿನ ಸಂಪಾದಿಸಿ ಪ್ರಕಟಿಸುತ್ತಿದ್ದ ಕಾವ್ಯಕ್ಕೆ ಮೀಸಲಾದ ಪತ್ರಿಕೆ ಕವಿತಾದ ಎರಡನೇ ಸಂಚಿಕೆ, ಜೂನ್-ಜುಲೈ 1964ರಲ್ಲಿ ಮೊದಲು ಪ್ರಕಟವಾಯಿತು. ಅದೇ ಸಂಚಿಕೆಯಲ್ಲಿ ರಾಮಚಂದ್ರ ಶರ್ಮರ "ಹೆಸರಗತ್ತೆ", ಜಿ. ಎಸ್. ಶಿವರುದ್ರಪ್ಪನವರ "ಕಾರಿರುಳಲ್ಲಿ" ಎಂಬ ಪದ್ಯ ಕೂಡಾ ಇದ್ದವು. ಆ ಸಮಯದಲ್ಲಿ ನಾನು ಖಾದ್ರಿ ಶಾಮಣ್ಣನವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಗೋಕುಲ ಎಂಬ ವಾರಪತ್ರಿಕೆಯಲ್ಲೂ ತುಂಬಾ ಪದ್ಯ ಪ್ರಕಟಿಸುತ್ತಿದ್ದೆ. ಅವುಗಳಲ್ಲಿ ಹೆಚ್ಚಿನವು ಈಗ ಕಳೆದುಹೋಗಿವೆ).

ದಿಕ್ಕುಗೆಟ್ಟು ಉರಿಗಾರುತಿದೆ ಹುಚ್ಚು ಆಗಸದಲ್ಲಿ ಅಗ್ನಿಗೆಂಡ.
ಹುಟ್ಟಲಿಲ್ಲವೋ ಏನೋ ಭಗೀರಥನೊಬ್ಬ ಇನ್ನೂ ಇವನ ರಾಜ್ಯದಲ್ಲಿ!
ಧೂಳಿನ ಸಾಮ್ರಾಜ್ಯದಲ್ಲಿ ಬಸ್ಸು ಹೊರಟಿದೆ ತೆವಳಿ
ಕುಡಿವ ನೀರನು ಹುಡುಕಿ ಸಮುದ್ರದೆಡೆಗೆ.
ಕೋಟಿ ಕೋಟಿ ವರುಷಗಳ ಹಿಂದಿನ ಸುಮಂಗಲೆಯರೆಲ್ಲ
ನಾಲ್ಕೆ ದಿನದಲ್ಲಿ ಭಸ್ಮೀಭೂತ!
ಸಾರ್ವಜನಿಕ ವಸ್ತು ಪ್ರದರ್ಶನಾಲಯದಲ್ಲಿ
ಕುತ್ತ ನಿಂತಿದೆ ಅಸ್ಥಿಪಂಜರವದೊಂದು.
ತನ್ನ ಹಸಿರು ನಿಶಾನಿಗಾಗಿ ಕೈ ಚಾಚಿ ಬೇಡುತಿದೆ ಉರಿವ ಕೆಂಡವನ್ನು.
ಮೊನ್ನೆ ಮೊನ್ನ ನಗುತಿದ್ದ ಕಂದರನು ನುಂಗಿ ನೀರು ಕುಡಿದಿದೆ ಭೂಮಿ!
ಹಲವು ಚೈತ್ರ ಪುರುಷರನೆ ತಿಂದು ತೇಗಿಹಳೀಕೆ;
ಏನು ಮಾಡಿದರೂ ಹುಟ್ಟು ಗುಣ ಎಲ್ಲಿ ಹೋದೀತು ಹೇಳು....?
ಸಪ್ತಸಾಗರ ಈಜಿ, ಮರಳು ಭೂಮಿಯ ದಾಟಿ,
ಹಸುರ ನಂದನದ ಮಧ್ಯದಲ್ಲಿ
ತಮ್ಮ ಸಾಮ್ರಾಜ್ಯ ಸ್ಥಾಪಿಸಿ ಕೇಕೆ ಹಾಕುತ್ತಿವೆ
ಸ್ಮಶಾನದ ಪ್ರೇತಗಳ ಗುಂಪು!

*        *       *          *


ಕನಸಿನಲಿ ತಿರುಕ ಊರಿನರಸನಾದಂತೆ ಆಗಿದೆ ಈಗ!
ಅಪ್ಸರೆಯ ಮೈಯ್ಯೆಲ್ಲಾ ಒಡೆದು ರಕ್ತ ತೊಟ್ಟಿಕ್ಕುತಿದೆ,
ಮದ್ದು ಮಾಡುವ ವೈದ್ಯ ಬರುವುದಿನ್ನಾವಗಲೋ ಏನೋ!
ಜೇಡಹುಳುವಿನ ಗೆಳೆತನವೆ ವಾಸಿಯೆನಿಸಿದೆ ನನಗೆ
ಹೀಗಾದರೆ ಆಗುವುದೆ ಹೀಗೆ!

*       *         *          *

ಈ ತುಮುಲ ತಂಟೆಯಲಿ ಎದ್ದು ಸಿಡಿದಿದೆ ಬಾಂಬು,
ಎದ್ದೆದ್ದು ಗರ್ಜಿಸಿದೆ ಪ್ರೇತಗಳ ಗುಂಪು!
ಎಂದು ಮುಕ್ತಿಯೊ ನಮಗಿವನಿಂದ?
ಯಾವಾಗಲೋ ಹೊಸತು ಆಡಳಿತದಾರಂಭ?
ಎಷ್ಟು ದಿವಸಗಳಾಯ್ತು ಹೀಗೆ, ಅವ್ಯವಸ್ಥೆ?
ಮುಗಿಯಬಾರದೆ ಬೇಗ ಈ ಹುಚ್ಚುದೊರೆಯ ಕಾರುಭಾರ!

Saturday, January 22, 2011

ಆತ್ಮಕಥನ 9

(ನನ್ನ ಅಭ್ಯಾಸದ ಕೋಣೆ. ಫೊಟೋ ಫ್ರೇಮಿನಲ್ಲಿರುವುದು ನನ್ನ ಮಗಳು ರೋಶ್ನಿ ಮತ್ತು ಅಳಿಯ ಡಾ. ನವೀನ್ ಶರ್ಮ. ರೋಶ್ನಿ ದಂತವೈದ್ಯೆ, ನವೀನ್ ವಿಜ್ಞಾನಿ.)

ಏವಂ ಇಂದ್ರಜಿತ್  ನಾಟಕ ನಿರ್ದೇಶನಕ್ಕೆ ಹಿಂದಿರುಗುತ್ತೇನೆ.

ಆ ನಾಟಕ ನಿರ್ದೇಶನದ ಸಮಯದಲ್ಲಿ ನನಗಾದ ಸೃಜನಶೀಲತೆಯ ಅನುಭವ ಒಂದು ಪದ್ಯ ಅಥವಾ ಕತೆ ಬರೆಯುವಾಗ ಆದದ್ದಕ್ಕಿಂತ ಬೇರೆಯಲ್ಲ. ನನ್ನ ಮನಸ್ಸಿನೊಳಗೆ ಏನಿದೆ ಎನ್ನುವುದನ್ನೂ ಅದನ್ನು ಯಾವ ರೀತಿ ಪರಿಣಾಮಕಾರಿಯಾದ ವಿವರಗಳ ಮೂಲಕ ರೂಪಿಸಬಹುದು ಎಂಬುದನ್ನೂ ನಾನು ನಿರ್ದೇಶನದ ಸಮಯದಲ್ಲೇ ಪತ್ತೆ ಮಾಡಿಕೊಳ್ಳುತ್ತಾ ಹೋದೆ. ಬಹುಶಃ ನಾಟಕ ನಿರ್ದೇಶನವನ್ನೇ ನಾನು ಕೆರಿಯರ್ ಆಗಿ ತೆಗೆದುಕೊಂಡಿದ್ದರೂ ಪದ್ಯ ಅಥವಾ ಕತೆ ಅಥವಾ ನಾಟಕ ಬರೆಯವಾಗ ಅನುಭವಿಸುವ ಸೃಜನಶೀಲತೆಯ ಅನುಭವವನ್ನೇ ಪಡೆಯುತ್ತಿದ್ದೆ. ಒಂದೇ ವ್ಯತ್ಯಾಸವೆಂದರೆ ಸಾಹಿತ್ಯ ಕೃತಿಗಳಲ್ಲಿ ಪದಗಳ ಮೂಲಕ ಸೃಜನಶೀಲತೆಯ ಅನುಭವ ಪಡೆದರೆ ನಾಟಕ ನಿರ್ದೇಶನದಲ್ಲಿ ಅದನ್ನು ನಟರು, ಲೈಟಿನವ, ಹಿನ್ನೆಲೆ ಸಂಗೀತಗಾರ ಮೊದಲಾದವರನ್ನು ಬಳಸಿ ಪಡೆಯಬೇಕಾಗುತ್ತದೆ. ಆಗಲೇ ಹೇಳಿದದಂತೆ, ನಾನು ಹೆಚ್ಚು ಒಂಟಿಯಾಗಿರಲು ಬಯಸುವವ. ನನ್ನ ಈ ಸ್ವಭಾವಕ್ಕೆ ಒಗ್ಗುವುದು ಪೆನ್ನು, ಪೇಪರು, ನನ್ನ ಮನಸ್ಸು ಮತ್ತು ಅಗಾಧ ಸಾಧ್ಯತೆಗಳ ಈ ಸಮೃದ್ಧ ಈ ಜಟಿಲ ಈ ಸರಳ ಕನ್ನಡ ಭಾಷೆಯಲ್ಲಿ ನನಗೆ ದಕ್ಕಿದಷ್ಟರ ಜೊತೆ ಒಂಟಿಯಾಗಿ ಕೂತು ಮಾಡುವ ಬರೆವಣಿಗೆಯ ಕೆಲಸ ಮಾತ್ರ. ಆದರೆ, ಒಂದು ಭಾಷೆಯ ಜೊತೆ ಲೇಖಕನೊಬ್ಬ ಒಂಟಿಯಾಗಿ ಕೂತರೆ ಆತ ಒಂಟಿಯಾಗಿ ಇರುವುದಿಲ್ಲ. ಅವನ ಜೊತೆ ಆ ಭಾಷೆ ಹೊತ್ತುಕೊಂಡ ಭೂತಕಾಲ, ವರ್ತಮಾನಕಾಲ, ಮತ್ತು ಅದು ಮುಂಚಾಚಿ ಕಾಣುವ ಭವಿಷ್ಯತ್ಕಾಲ ಸೇರಿಕೊಳ್ಳುತ್ತವೆ.

ಸೃಜನಶೀಲತೆಯ ಅನುಭವ ಒಬ್ಬ ಒಳ್ಳೆಯ ಸಂಗೀತಗಾರ ಅಥವಾ ಚಿತ್ರಕಾರನಿಗೆ ಆಗುವಂಥಾದ್ದು ಕೂಡಾ ಹೀಗೇ ನಿರ್ದೇಶಕನಿಗೆ ಅಥವಾ ನಟನಿಗೆ ಆಗುವಂಥಾದ್ದೇ ಇರಬಹುದು. ಅದಕ್ಕೆ ವಿರುದ್ಧವಾದ್ದೆಂದರೆ ಒಬ್ಬ ಕುಶಲ ಕೆಲಸಗಾರನ ಕೃತಿನಿರ್ಮಾಣ. ಕುಶಲ ಕೆಲಸಗಾರ ಕೃತಿನಿರ್ಮಾಣದ ಹೊತ್ತಿನಲ್ಲೇ ಹೊಸತೇನನ್ನೂ ಪತ್ತೆ ಮಾಡಿರುವುದಿಲ್ಲ. ಈಗಾಗಲೇ ಒಪ್ಪಿತವಾದ ನಿಯಮಗಳಿಗೆ, ಮಾದರಿಗಳಿಗೆ ಅನುಗುಣವಾಗಿ ಒಪ್ಪಿತವಾದ ರೀತಿಯಲ್ಲಿ ಜನಕ್ಕೆ ಬೇಕಾದ್ದನ್ನ ಉತ್ಪಾದಿಸಿರುತ್ತಾನೆ, ಅಷ್ಟೆ. ಮೊದಲ ಸಲ ಒಂದು ಮೇಜನ್ನು ಸೃಷ್ಟಿಸಿದವನಿಗೂ ಆನಂತರ ಅನೇಕ ಮೇಜುಗಳನ್ನು ಮಾಡಿ ಮಾರಾಟ ಮಾಡುವ ಬಡಗಿಗೂ ಇರುವ ವ್ಯತ್ಯಾಸಕ್ಕೆ ಇದನ್ನು  ಹೋಲಿಸಬಹುದು. ಮೊದಲ ಸಲ ಮೇಜನ್ನು--ಅಥವಾ ಇನ್ನು ಯಾವುದೇ ವಸ್ತುವನ್ನು--ಸೃಷ್ಟಿಸಿದವ ಪ್ರತಿಭಾವಂತ; ಆನಂತರ ಅಂಥಾದ್ದನ್ನು ಉತ್ಪಾದಿಸಿಕೊಂಡು ಹೋದವ ಬಡಗಿ.

ನನ್ನ ನಿರ್ದೇಶನದ ಏವಂ ಇಂದ್ರಜಿತ್ ನ ಮೊದಲ ಪ್ರಯೋಗ ಬಿ. ಆರ್. ಪ್ರಾಜೆಕ್ಟಿನಲ್ಲಿ ನಡೆಯಿತು. ಪ್ರಯೋಗ ಚೆನ್ನಾಗಿತ್ತೆಂದು ನೋಡಿದ ಅನೇಕರು ಹೇಳಿದರು. ಸಾಕಷ್ಟು ಜನ ಪ್ರೇಕ್ಷಕರೂ ಬಂದಿದ್ದರು. ನಾಟಕಕ್ಕೆ ಟಿಕೇಟು ಇಡಲಾಗಿತ್ತು--ನಾಮ ಕೆ ವಾಸ್ತೆ. ಬಿಟ್ಟಿ ನಾಟಕ  ತೋರಿಸಬಾರದು, ಅದನ್ನು ಆಗ ಜನ ಗಂಭಿರವಾಗಿ ತೆಗೆದುಕೊಳ್ಳುವುದಿಲ್ಲ ಎಂಬ ಆಧುನಿಕ ರಂಗಚಳವಳಿಯ ಅಂಗವಾಗಿ. ನಾಟಕ ಇನ್ನೇನು ಮುಗಿಯಲಿದೆ ಎನ್ನುವಾಗ ಕೆಲವರು ಗೇಟಿನ ಹತ್ತಿರ ಸೇರಿ ಇಷ್ಟರ ವರೆಗೆ ಇಲ್ಲಿ ಟಿಕೇಟಿಲ್ಲದೆ ನಾಟಕ ಆಡುತ್ತಿದ್ದರು, ನೀವು ಟಿಕೇಟಿಟ್ಟು ನಾಟಕ ಆಡಿ ಹಣ ಮಾಡಲು ನೋಡುತ್ತಿದ್ದೀರಿ ಎಂದು ಗಲಾಟೆ ಮಾಡಿದರಂತೆ. ಗೇಟಿನ ಹತ್ತಿರ ಇದ್ದವರು ಏನೋ ಸಬೂಬು ಹೇಳಿ ಆಗ ಅವರನ್ನು ಸಾಗಹಾಕಿದರು. ನನಗೆ ಇದು ಗೊತ್ತಾದ್ದು ನಾಟಕ ಮುಗಿದು ನಟ ನಟಿಯರು ವೇಷ ಬಿಚ್ಚಿ ಮನೆಗೆ ಹೊರಡುವ ಹೊತ್ತಲ್ಲಿ. ಆ ನಾಟಕ ಹಣ ಮಾಡುವುದಿರಲಿ--ನನ್ನ ಕೈಯ್ಯಿಂದಲೇ ಸಾಕಷ್ಟು ಖರ್ಚಾಗಿತ್ತು. ನಾಟಕದಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳಿಗೂ ಓಡಾಟ ಕಾಫಿ ತಿಂಡಿ ಎಂದು ಸಾಕಷ್ಟು ಹಣ ಕೈಯ್ಯಿಂದ ಹೋಗಿರಬಹುದು. ಆದರೂ ನಾಟಕ ಆಡಿ ಹಣ ಮಾಡಲು ಹೊರಟಿದ್ದೇವೆ ಎಂಬ ಆಪಾದನೆಯನ್ನು ನಾವು ಅಲ್ಲಿ ಕೆಲವರಿಂದಲಾದರೂ ಕೇಳಬೇಕಾಯಿತು.

ಈ ನಾಟಕದ ಎರಡನೆಯ ಪ್ರಯೋಗ ಕೆಲವು ದಿನಗಳ ಬಳಿಕ ಶಿವಮೊಗ್ಗದಲ್ಲಿ ಕರ್ನಾಟಕ ಸಂಘದಲ್ಲಿ ನಡೆಯಿತು. ಕರ್ನಾಟಕ ಸಂಘದ ಹಾಲಿನಲ್ಲಿ ಎಕೋ ಹೊಡೆಯುತ್ತದೆ. ಎಕೋ ತಡೆಯುವುಕಕ್ಕೆಂದು ಮಾಡಿಗೆ ಕೆಲವು ಮಡಿಕೆಗಳನ್ನು ಕವುಚಿ ಕಟ್ಟಿದ್ದರು. ಇದು ಎಕೋ ತಡೆಯುವ ಒಂದು ಜಾನಪದೀಯ ಕ್ರಮ. ನಾವು ನಾಟಕಕ್ಕೆಂದು ಹಾಲ್ ಬುಕ್ ಮಾಡಿದಾಗ ಮಡಿಕೆಗಳು ಇದ್ದವು. ನಾಟಕಕ್ಕೆ ಇನ್ನೇನು ಒಂದು ದಿವಸ ಇದೆ ಎನ್ನುವಾಗ ಮಡಿಕೆಗಳನ್ನೆಲ್ಲಾ ತೆಗೆದಿದ್ದರು. ನಾಟಕ ಕೆಡಿಸುವುದಕ್ಕಾಗಿ ಇದನ್ನು  ಬೇಕೆಂದೇ ಮಾಡಿದ್ದಾರೆ ಎಂದು ಆ ಮೇಲೆ ನನಗೆ ಯಾರೋ ಹೇಳಿದರು. ಇದ್ದರೂ ಇರಬಹುದು. ಅಥವಾ ಕರ್ನಾಟಕ ಸಂಘದ ವ್ಯವಸ್ಥಾಪಕರ ಗಮನಕ್ಕೆ ಬಾರದೆ ಯಾರೋ ಕೆಲಸದವರು ಮಡಿಕೆಗಳ ಪ್ರಾಮುಖ್ಯತೆ ಗೊತ್ತಿಲ್ಲದೆ ಮಾಡಿದ ಕೆಲಸ ಇರಲೂ ಬಹುದು. ಮೊದಲೇ ಈ ವಿಚಾರ ಗೊತ್ತಾಗಿದ್ದರೆ ಮಡಿಕೆಗಳನ್ನು ನಾಟಕ ಮುಗಿದ ನಂತರ ತೆಗೆಯಿರೆಂದು ನಾನೇ ಪದಾಧಿಕಾರಿಗಳ ಹತ್ತಿರ ಹೋಗಿ ವಿನಂತಿಸಿಕೊಳ್ಳುತ್ತಿದ್ದೆ. ಬೇಂದ್ರೆಯವರ ನಾದಲೀಲೆ   ಪ್ರಕಟಿಸಿದಂಥಾ ಶ್ರೇಷ್ಠ ಪರಂಪರೆಯುಳ್ಳ ಕರ್ನಾಟಕ ಸಂಘ ನನ್ನ ವಿನಂತಿಯನ್ನು ಕಡೆಗಣಿಸುತ್ತಿರಲಿಲ್ಲ. ಅಂತೂ ಪ್ರತಿಧ್ವನಿ ಹೊಡೆದು ಅವತ್ತು ನಾಟಕ ಕೆಟ್ಟದ್ದು ನಿಜ. ಬಿ. ಆರ್. ಪ್ರಾಜೆಕ್ಟ್ ನ ಮೊದಲ ಪ್ರಯೋಗ ನೋಡಲು ಸಾಧ್ಯವಾಗದಿದ್ದ ಕುಲಪತಿಗಳಾದ ಶಾಂತಿನಾಥ ದೇಸಾಯಿಯವರೂ ಅವತ್ತು ನಾಟಕ ನೋಡಲು ಬಂದಿದ್ದರು. ನಾಟಕದ ಬಗ್ಗೆ ಸಾಕಷ್ಟು ತಿಳುವಳಿಕೆಯುಳ್ಳ ಅವರಿಗೂ ಅವತ್ತಿನ ಪ್ರಯೋಗ ಅತೃಪ್ತಿ ಉಂಟುಮಾಡಿರಬಹುದು.


*************

ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ--ಇದರ ಪುಸ್ತಕಗಳನ್ನು ಈಗ ನೇರವಾಗಿ ಪ್ರಕಾಶಕರಿಂದ ಕೊಂಡುಕೊಳ್ಳಬಹುದು. ನಿಮಗೆ ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust, SB Account no. 1600101008058, Canara Bank, Yenmur 574328, Dakshina Kannada District--ಇಲ್ಲಿಗೆ ಜಮೆ ಮಾಡಿ ನಮಗೆ ಪತ್ರ ಬರೆದು ಅಥವಾ bodhitrustk@gmail.comಗೆ ಇಮೇಲ್ ಮಾಡಿ ತಿಳಿಸಿದರೆ ಪುಸ್ತಕಗಳನ್ನು ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ. ಮಾರಾಟಕ್ಕೆ ಲಭ್ಯವಿರುವ ಪುಸ್ತಕಗಳು ಇವು:
1. ಸಮಗ್ರ ನಾಟಕಗಳು, ಸಂಪುಟ 2. ರೂ60.00
2. ಸಮಗ್ರ ನಾಟಕಗಳು, ಸಂಪುಟ 3. ರೂ75.00
3. ಮಾತಾಡುವ ಮರ, ಸಮಗ್ರ ಕಾವ್ಯ, 1964-2003. ರೂ100.00
4. ಹ್ಯಾಮ್ಲೆಟ್. ಅನುವಾದ. ರೂ50.00
5. ಮುಚ್ಚು ಮತ್ತು ಇತರ ಲೇಖನಗಳು. ರೂ60.00

ಐದು ಕವನಗಳು  ಜನವರಿ ತಿಂಗಳ ಕೊನೆಯಲ್ಲಿ ಪ್ರಕಟವಾಗಲಿರುವ ಹೊಸ ಕವನ ಸಂಕಲನ. ಇದರಲ್ಲಿ, ಹೆಸರೇ ಸೂಚಿಸುವಂತೆ, ಐದು ಕವನಗಳಿವೆ. ಇದರಲ್ಲಿ 663 ಸಾಲುಗಳ ದೀರ್ಘ ಕವನ "ಪ್ರೇತಲೋಕ" ಸೇರಿದೆ. ಇದರ ಬೆಲೆ ರೂ50.00.


Friday, January 21, 2011

ಆತ್ಮಕಥನ 8

(ನನ್ನ ತಂದೆ ದೇವ ರಾಘವೇಂದ್ರಯ್ಯ ಮತ್ತು ತಾಯಿ ದೇವ ಹೊನ್ನಮ್ಮ. ಈ ಫೊಟೋದ ಹೊತ್ತಿಗೆ ತಂದೆಗೆ 70 ವರ್ಷ ಮತ್ತು ತಾಯಿಗೆ 60 ವರ್ಷ ಮಿಕ್ಕಿತ್ತು)

ನಾಕು ಜನರ ಜೊತೆ ಹೊಂದಿಕೊಂಡು--ಗುಂಪಿನಲ್ಲಿ--ಕೆಲಸ ಮಾಡಬೇಕು ಎಂಬ ಕಾರಣಕ್ಕಾಗಿಯೇ ನಾಟಕ ನಿರ್ದೇಶನವನ್ನೂ ನಾನು ಬೆಳೆಸಿಕೊಂಡು ಹೋಗಲಿಲ್ಲ. ಆದರೆ ನಿರ್ದೇಶಿಸಿದ ಒಂದು ನಾಟಕ ನನಗೆ ಸೃಜನಶೀಲ ಅನುಭವವನ್ನೇ ಕೊಟ್ಟಿತು. ಅದು ಏವಂ ಇಂದ್ರಜಿತ್  ನಾಟಕದ ನಿರ್ದೇಶನ. ನರಸಿಂಹನ್ ನಿರ್ದೇಶನದ ಆ ನಾಟಕದ ಪ್ರಯೋಗ ನೋಡಿದಾಗಿಂದ ಅದು ನನ್ನ ಮನಸ್ಸನ್ನು ಕಾಡುತ್ತಿತ್ತು. ಕನ್ನಡಕ್ಕೆ ಬಿ. ವಿ. ಕಾರಂತರು, ಇಂಗ್ಲಿಷಿಗೆ ಗಿರೀಶ ಕಾರ್ನಾಡರು ಮಾಡಿದ ಆ ನಾಟಕದ ಅನುವಾದಗಳನ್ನು ಮತ್ತೆ ಮತ್ತೆ ಓದಿದ್ದೆ. ಎರಡೂ ಒಳ್ಳೆಯ ಅನುವಾದಗಳು. ನಾನು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿದ್ದ 1988-1991ರ ಅವಧಿಯಲ್ಲಿ ಒಂದು ನಾಟಕ ಆಡಿಸಬೇಕೆಂಬ ಯೋಚನೆ ಬಂದಾಗ ಮೊದಲು ಹೊಳೆದದ್ದು  ಏವಂ ಇಂದ್ರಜಿತ್. ಅದರ ಪಾತ್ರಗಳಿಗೆ ಹೊಂದುವ ನಟರೂ ಸಿಕ್ಕಿದರು. ಇಬ್ಬರು ವಿದ್ಯಾರ್ಥಿನಿಯರೂ ಪಾತ್ರ ಮಾಡಲು ಒಪ್ಪಿ ಬಂದರು. ನಿಜವಾಗಿ ನಾಟಕದಲ್ಲಿರುವುದು ಒಬ್ಬಳು ಹೆಣ್ಣು ಪಾತ್ರ--ಅವಳ ಹೆಸರು ಮಾನಸಿ. ಒಬ್ಬಳೇ ಆದರೆ ಬರುವುದಿಲ್ಲ ಎಂದು ಅವರಲ್ಲಿ ಒಬ್ಬಳು ಹೇಳಿದ್ದರಿಂದ, ಮಾನಸಿಯನ್ನು ಎರಡು ಪಾತ್ರಗಳಾಗಿ ವಿಂಗಡಿಸಿ ಇಬ್ಬರಿಗೆ ಹಂಚಿ ಕೊಡಬೇಕಾಯಿತು. ಬ್ಲಾಕ್ ಮಾಡುತ್ತಾ ನಾಟಕದ ಹೊಸ ಅರ್ಥಗಳು ಹೊಳೆದವು. ಯಾಂತ್ರೀಕೃತವಾದ, ಅದದೇ ಕೆಲಸ ಮಾಡುತ್ತಾ ಇರುವ ಚಿತ್ರವನ್ನು ಮೊದಲ ದೃಶ್ಯಗಳು ಕೊಟ್ಟವು. ಕೊನೆಯಲ್ಲಿ ಅವರೆಲ್ಲರೂ ಎಲ್ಲಿಗೆಂದು ಗೊತ್ತಿಲ್ಲದೆ ಆದರೂ ಈ ಯಾಂತ್ರೀಕೃತ ಜೀವನದಿಂದ ಹೊರಬರಬೇಕೆಂಬ ತಹತಹದಿಂದ ಯಾತ್ರೆ--ಮೆಟಫರಿಕಲ್ ಅರ್ಥದಲ್ಲಿ--ಹೊರಡುತ್ತಾರೆ. ನಾಟಕದುದ್ದಕ್ಕೆ ನನ್ನ ಆಶಯಗಳಿಗೆ ಹೊಂದುತ್ತದೆಂಬ ಕಾರಣದಿಂದ ತಿರುಮಲೇಶರ "ಮಹಾಪ್ರಸ್ಥಾನ"  ಕವನದ ಸಾಲುಗಳನ್ನು ಹಿನ್ನೆಲೆ ಧ್ವನಿಯಾಗಿ ಬಳಸಿಕೊಂಡಿದ್ದೆ. ಅದೂ ನನಗೆ ಇಷ್ಟವಾದ ಕವನ. ಕನ್ನಡದಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಬಂದ ಅತ್ಯುತ್ತಮ ಕವನಗಳಲ್ಲಿ ಅದೊಂದು. ತಿರುಮಲೇಶರೇನೋ ಅದು ಅಡಿಗರ ರೀತಿಯಲ್ಲಿ ಬರೆದ ಕವನ ಎಂಬ ಅತೃಪ್ತಿಯನ್ನು ಅದು ಪ್ರಕಟವಾಗಿ ಇಪ್ಪತ್ತೈದು ವರ್ಷಗಳ ನಂತರ ವ್ಯಕ್ತಪಡಿಸಿದರು. ಪ್ರಯೋಗಶೀಲ ಲೇಖಕ ಹೀಗೆ ತನ್ನ ಹಿಂದಿನ ಬರೆವಣಿಗೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸುವುದು ಸಹಜ. ಆದರೆ ಅಡಿಗರ ಕಾವ್ಯಕ್ಕೂ "ಮಹಾಪ್ರಸ್ಥಾನ"ಕ್ಕೂ ಇರುವ ಸಂಬಂಧ ವಚನ ಚಳವಳಿಗೆ ಸೇರಿದ ಅಲ್ಲಮ, ಬಸವಣ್ಣ, ದೇವರ ದಾಸಿಮಯ್ಯ ಮೊದಲಾದವರ ಕಾವ್ಯಗಳಿಗೆ ಇರುವ ಪರಸ್ಪರ ಸಂಬಂಧದಷ್ಟೇ ಹೊರತು ಬೇರೆ ಅಲ್ಲ. ಒಂದೇ ನವ್ಯ ಚಳವಳಿಗೆ ಸೇರಿದವರಾದ್ದರಿಂದ ಕೆಲವು ಸಮಾನ ಅಂಶಗಳು ಇವೆ. ಪ್ರತಿಮೆಗಳ ಬಳಕೆ, ಮುಕ್ತಛಂದಸ್ಸಿನ ಬಳಕೆ ಮೊದಲಾದವು ಇಬ್ಬರಿಗೂ ಸಮಾನವಾಗಿರುವ ಕೆಲವು ಅಂಶಗಳು. ಹಾಗೆಯೇ ವ್ಯತ್ಯಾಸವೂ ಇದೆ. "ಮಹಾಪ್ರಸ್ಥಾನ"ದ ಆಂತರಿಕ ಲಯವಿನ್ಯಾಸ, ಮಹಾಭಾರತದ--ಪುರಾಣದ--ಕಥನವನ್ನು ಇಂದಿಗೆ ಹೊಂದಿಸಿಕೊಳ್ಳುವ ಕ್ರಮ, ಅಂತಸ್ಸಾಕ್ಷಿಗೆ ಹೊಂದಿ ಒಂಟಿಯಾಗಿ ಪಯಣಿಸುವುದು ಮಾತ್ರವೇ ಇನ್ನು ಮಾಡಬಹುದಾದ ಕೆಲಸ ಎಂಬ ಮೌಲ್ಯದ ನೆಲೆ ಅಡಿಗರ ಕಾವ್ಯಕ್ಕಿಂತ ಬೇರೆ.

ಅಲ್ಲದೆ, ಮಹಾಭಾರತದ ಕೇಂದ್ರ ಪಾತ್ರ ಯುಧಿಷ್ಠಿರ ಎಂಬ ಈ ಕವನದ ಅಂತಸ್ಥ ನಿಲುವು ನನಗೆ ಒಪ್ಪಿಗೆಯಾದದ್ದು. ಜರ್ಮನ್ ವಿದ್ವಾಂಸ ಹೆನ್ರಿಕ್ ಸಿಮ್ಮರ್ ನಂಥವರು ಇದೇ ನಿಲುವು ತಳೆಯುತ್ತಾರೆ. ನಾನು  ಮಹಾಭಾರತವನ್ನು ಹೀಗೆ ಓದಲು ಸಿಮ್ಮರ್ ನಿಂದಲೇ ಕಲಿತದ್ದು.  Book of Yudhishtira ಎಂದೂ  ಈ ಪುಸ್ತಕಕ್ಕೆ ಹೆಸರಿದೆ. ಬುದ್ಧದೇವ ಮುಖರ್ಜಿ ಅಂತೇನೋ ಹೆಸರಿನ ಒಬ್ಬರು--ಇವರು ಇಂಗ್ಲಿಷ್ ವಿಮರ್ಶಕಿ ಮೀನಾಕ್ಷಿ ಮುಖರ್ಜಿಯವರ ಗಂಡ--ಆ ಹೆಸರಿನ ಒಂದು ಪುಸ್ತಕವನ್ನು ಮಹಾಭಾರತ ಬಗ್ಗೆ ಬರೆದಿದ್ದಾರೆ. ಅವರಿಗೂ ಸಿಮ್ಮರ್ ನಿಂದ ಸೂಚನೆಗಳು ಸಿಕ್ಕಿದವೇ--ಗೊತ್ತಿಲ್ಲ. ಸಿಮ್ಮರ್ ಪುಸ್ತಕ ಅವರ ಪುಸ್ತಕಕ್ಕಿಂತ ಮೊದಲು ಪ್ರಕಟವಾಗಿದೆ. ಯುಧಿಷ್ಠಿರ ಪ್ರತಿನಿಧಿಸುವ ನ್ಯಾಯಾನ್ಯಾಯ ವಿವೇಚನೆ, ಅಹಿಂಸೆ, ಅಪರಿಗ್ರಹ, ನಿಷ್ಠೆ, ಶೌರ್ಯ-ಬುದ್ಧಿವಂತಿಕೆಗಳ ಸಮ್ಮಿಳನದ ಅಗತ್ಯ ಮೊದಲಾದ ಮೌಲ್ಯಗಳು ಒಟ್ಟು ನಮ್ಮ ನಾಡಿನ ಮನಸ್ಸುಗಳ ಮೇಲೆ ಗಾಢ ಪ್ರಭಾವ ಬೀರಿವೆ. ಸಿಮ್ಮರ್ ಗಾಂಧೀಜಿಯವರನ್ನು ಯುಧಿಷ್ಠಿರನಿಗೆ ಹೋಲಿಸುತ್ತಾನೆ. ಅವನ Hinduism ಎಂಬ ಪುಸ್ತಕದಲ್ಲಿನ ಗಾಂಧೀಜಿ ಕುರಿತ ಅಧ್ಯಾಯದ ಹೆಸರೇ "Yudhisthira Returns" ಎಂದು.

ಈ ಹಿನ್ನೆಲೆಯಲ್ಲಿ  ತಿರುಮಲೇಶರ "ಮಹಾಪ್ರಸ್ಥಾನ"ದಲ್ಲಿ  ರಾಜಕೀಯ ಅರ್ಥಗಳನ್ನು ಕಾಣಬಹುದು. ಆದರೆ ಇದು ನಾನು ಆರೋಪಿಸಿರುವ ಅರ್ಥವಾಗಿರುವ ಸಾಧ್ಯತೆಯೇ ಹೆಚ್ಚು. ಆದರೆ ಕಾವ್ಯದಲ್ಲಿ ರಾಜಕೀಯದ ಬಗೆಗಿನ ಕವಿಯ ನಿಲುವುಗಳು ವ್ಯಕ್ತವಾಗುವುದೇ ಹೀಗೆ, ಅನ್ಯೋಕ್ತಿಯಾಗಿ. ರಾಮಚಂದ್ರ ಶರ್ಮರ "ಹೇಸರಗತ್ತೆ"  ಕವನ ವಸಾಹತುಶಾಹಿ ಬಗ್ಗೆ ಎಂಬುದು ವ್ಯಕ್ತವಾಗುವುದು ಈ ರೀತಿಯಲ್ಲೇ--ಅಪರೋಕ್ಷವಾಗಿ. ಎಥಿಯೋಪಿಯಾ ಇಟೆಲಿಯ ವಸಾಹತು ಆಗಿತ್ತು ಎಂಬ ಮಾಹಿತಿ ಗೊತ್ತಿಲ್ಲದಿದ್ದರೆ ಅದು ವಸಾಹತುಶಾಹಿ ಕುರಿತ ಕವನ ಎನ್ನುವುದು ಹೊಳೆಯುವುದಿಲ್ಲ. ಸ್ವತಃ ರಾಮಚಂದ್ರ ಶರ್ಮರೇ ಅದರ ಬಗ್ಗೆ ಅರಿವು ಹೊಂದಿರಲಿಲ್ಲ--ಖಂಡಿತಾ. ಯಾಕೆಂದರೆ ನಾನು "ಹೇಸರಗತ್ತೆ" ಕವನವನ್ನು ವಸಾಹತುಶಾಹಿ ಕುರಿತ ಕವನ ಎಂದು ವಿಶ್ಲೇಷಿಸಿ ಲೇಖನ ಪ್ರಕಟಿಸಿದಾಗ ಅವರು ತನಗೆ ಹೀಗೆಲ್ಲಾ ರಾಜಕೀಯ ಇತ್ಯಾದಿಗಳಲ್ಲಿ ಅಂಥಾ ಆಸಕ್ತಿ ಏನೂ ಇಲ್ಲವೆಂದೂ, ಅದೆಲ್ಲಾ ನಾನು ಹುಡುಕಿಕೊಂಡ ಅರ್ಥಗಳೆಂದೂ ಹೇಳಿದರು. ಮುಂದೊಂದು ಸಲ ಒಂದು ಸಂದರ್ಶನದಲ್ಲಿ ವಸಾಹತುಶಾಹಿಯ ಅನುಭವ ಕುರಿತು ಅದರಲ್ಲಿ ಬರೆದಿದ್ದೇನೆ ಎಂದೂ ಹೇಳಿದರು! ನನ್ನ ವಿಶ್ಲೇಷಣೆ ವೇಲಿಡ್ಡು ಎಂದು ಅವರು ಪರೋಕ್ಷವಾಗಿ ಹೀಗೆ ಒಪ್ಪಿಕೊಂಡಂತಾಯಿತು.

ನನಗೆ ತಿರುಮಲೇಶರ ಕಾವ್ಯವೂ  ಇಷ್ಟ. ಅವರ ಮುಖಾಮುಖಿ ಪ್ರಕಟವಾದ ಸುರುವಿಗೆ ಅದು ಕನ್ನಡ ಭಾಷೆಗೆ ಮಾಡಿದ ಚಿಕಿತ್ಸೆ ಅನ್ನಿಸಿತ್ತು. ಎಲ್ಲಾ ಅಲಂಕಾರಗಳನ್ನು ಬಿಟ್ಟುಕೊಟ್ಟು ಭಾಷೆಯನ್ನು ಎಷ್ಟು ನಿರಾಭರಣ ಮಾಡಬಹುದೋ ಅಷ್ಟು ನಿರಾಭರಣ ಮಾಡಿ ಬರೆದ ಕವನಗಳು ಅವು. ಆನಂತರದ ಕವನಗಳಲ್ಲೂ ನಿರಂತರವಾಗಿ ಪ್ರಯೋಗಶೀಲರಾಗಿರುವ ಕವಿ ಅವರು. ಹೀಗೆ ಅವರ ಕಾವ್ಯ ಮೆಚ್ಚುವಾಗಲೇ ನನಗೆ ಅದು ಸೀಮಿತ ಆಸಕ್ತಿಗಳ ಕಾವ್ಯ ಎಂದೂ ಅನ್ನಿಸುತ್ತದೆ. ಅವರು ಬಾಲ್ಯ ಕಳೆದ ಕುಂಬಳೆ ಸೀಮೆಯಂತೂ ಅತ್ಯಂತ ಶಕ್ತಿಯುತವಾದ--ರೇಸಿಯಾದ--ಕನ್ನಡ ಮಾತಾಡುವ ಪ್ರದೇಶ. ಅಲ್ಲಿನ ಹವ್ಯಕ ಉಪಭಾಷೆ--ತಿರುಮಲೇಶರ ಮನೆಮಾತು--ಮಲಯಾಳದ ಪ್ರಭಾವವೂ ಸೇರಿದ್ದರಿಂದ--ವಿಲಕ್ಷಣ ಪ್ರಭೆಯುಳ್ಳದ್ದು. ತಿರುಮಲೇಶ್ ಅದನ್ನೆಲ್ಲಾ ಬಳಸುವುದಕ್ಕೇ ಹೋಗುವುದಿಲ್ಲ. ಅವೆಲ್ಲಾ ತನಗೆ ಗೊತ್ತೇ ಇಲ್ಲ ಎಂಬಂತೆ ತನ್ನ ಕಾವ್ಯದ ಕನ್ನಡವನ್ನು ನಗರೀಕರಣಗೊಳಿಸಿ ಬಳಸುತ್ತಾರೆ. ಹೀಗೆ ಹೇಳುವಾಗ,  ಅವರು ಪ್ರಯೋಗಶೀಲ ಎನ್ನುವುದೂ ಸೀಮಿತ ಅರ್ಥದಲ್ಲಿ ಎಂಬುದು ಹೊಳೆಯುತ್ತದೆ. ತಾನು ಬಳಸುವ ನಗರೀಕರಣದ ಭಾಷೆಯಲ್ಲಿ ಪ್ರಯೋಗ ಮಾಡುತ್ತಾರೆ ಎನ್ನಬಹುದು, ಅಷ್ಟೆ. ತನ್ನದೇ ಅನುಭವದ  ಬಹು ಅರ್ಥಪೂರ್ಣ ಎಂದು ನಮಗೆ ಅನ್ನಿಸುವ ಅನೇಕ ಅಂಶಗಳನ್ನು ಅವರು ತಮ್ಮ ಕಾವ್ಯದಿಂದ ಹೊರಗಿಟ್ಟಿದ್ದಾರೆ. ಅವರಿಗೆ ಅದು ಅರ್ಥಪೂರ್ಣ ಅನ್ನಿಸದಿದ್ದರೆ, ಯಾಕೆ  ಎನ್ನುವುದು ಅವರ ಕಾವ್ಯವೇ ನಿರ್ಮಿಸಿದ ಅಭಿರುಚಿಯಿಂದ ಸ್ಪಷ್ಟವಾಗುವುದಿಲ್ಲ.

ಈ ಬಗೆಯ ಮಾತು ಬರೆಯಲು ಸಾಧ್ಯವಾದದ್ದು ನನಗೆ ತಿರುಮಲೇಶರ ಜೀವನದ ಕೆಲವು ವಿವರಗಳು ಗೊತ್ತಿರುವುದರಿಂದ ಎಂಬುದು ನಿಜ. ಕಾವ್ಯವನ್ನು ಬರೀ ಕಾವ್ಯವಾಗಿ, ಪುಟದ ಮೇಲಿನ ಪದಗಳ ಬಗ್ಗೆ ಮಾತ್ರ ಗಮನ ಕೊಟ್ಟು ಓದಬೇಕೆನ್ನುವುದು ಒಂದು ಹಂತದ ವರೆಗೆ ಸರಿ. ಕಾವ್ಯವನ್ನು ಹೇಗೆ ಓದಬೇಕೆಂದು ವಿದ್ಯಾರ್ಥಿಗಳಿಗೆ ಕಲಿಸುವ ದೃಷ್ಟಿಯಿಂದ ಈ ವಿಮರ್ಶನ ಸೂತ್ರ ತುಂಬಾ ಉಪಯುಕ್ತ. ಆದರೆ ಒಬ್ಬ ಕವಿ ನಮಗೆ ಇಷ್ಟವಾದಾಗ ನಾವು ಬೇಕೆನ್ನಲಿ ಬೇಡವೆನ್ನಲಿ ಅವನ ಜೀವನದ ವಿವರಗಳು ಗೊತ್ತಾಗುತ್ತಾ ಹೋಗುತ್ತವೆ. ಅವೆಲ್ಲಾ ಅವನ ಕಾವ್ಯ ಕುರಿತ ನಮ್ಮ ಪ್ರತಿಕ್ರಿಯೆಯನ್ನು ಪ್ರಭಾವಿಸುತ್ತವೆ. ಅವನ ಕಾವ್ಯ ಬಹು ಶ್ರೇಷ್ಠವಾಗಿದ್ದರೆ ಉಳಿದೆಲ್ಲವನ್ನೂ ಮರೆಸಿ ನಮ್ಮ ಪ್ರತಿಕ್ರಿಯೆಗಳನ್ನು ಆ ಕಾವ್ಯವೇ ಕಟ್ಟುತ್ತದೆ. ಹಾಗಿಲ್ಲದೆ ಇದ್ದಾಗ ಅವನ ಕಾವ್ಯ ಏನನ್ನು ಹೊರಗಿಟ್ಟಿದೆ, ಕವಿಯಾಗಿ ಅವನಿಗೆ ಏನೆಲ್ಲಾ ಸಾಧ್ಯತೆಗಳಿದ್ದವು, ಅವನ್ನು ಬಳಸದೆ ಇದ್ದದ್ದು ಅವನ ಮಿತಿಯಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ಬರುತ್ತವೆ. ಹೀಗೆ ಯೋಚಿಸಬಾರದು ಎನ್ನುವುದು ಅಸಹಜ:  ನಮ್ಮ ಮನಸ್ಸಿನ ಕೆಲವಂಶ ಹೊರಗೆ ತೆಗೆದಿಟ್ಟು ಯಾವುದಕ್ಕೇ ಆದರೂ ಪ್ರತಿಕ್ರಿಯಿಸಬೇಕೆಂಬ ಅಪೇಕ್ಷೆಯೇ ಅಸಹಜ.

ರಾಮಚಂದ್ರ ಶರ್ಮರ ಕಾವ್ಯವೂ ಸೀಮಿತ ಆಸಕ್ತಿಗಳ, ಸೀಮಿತ ಭಾಷಾಪ್ರಯೋಗಗಳ ಕಾವ್ಯ. ಕಾಮ, ಹಾಗೂ ಅನಿವಾಸಿಯ ಮಾನಸಿಕ ತುಮುಲ--ಇವೆರಡೇ ಅವರ ಮುಖ್ಯ ಆಸಕ್ತಿ, ಬಹುತೇಕ. ಅನಿವಾಸಿಯ ತುಮುಲಗಳನ್ನು, ನೆಲೆ ಕಳೆದುಕೊಂಡವನ, ಗಡೀಪಾರಾದವನ ತುಮುಲಗಳನ್ನು, ಅವರು ಸಮಗ್ರವಾಗಿ ತಳಮುಟ್ಟ ಶೋಧಿಸಿದ್ದಾರೆಂದೂ ಹೇಳುವಂತಿಲ್ಲ. ಅನೇಕ ದೊಡ್ಡ ಲೇಖಕರ ಶೋಧನೆಗೆ ಒಳಗಾದ ವಸ್ತು ಇದು. ಇಪ್ಪತ್ತನೆಯ ಶತಮಾನದ ಎರಡು ಮಹಾಯುದ್ಧಗಳ  ನಂತರ ಗಡೀಪಾರಾದ, ತಮ್ಮ ದೇಶ-ಭಾಷೆಗಳಿಂದ ದೂರವಾದ ಲೇಖಕರ ಸಂಖ್ಯೆ ಹೆಚ್ಚುತ್ತಿದ್ದಂತೆ ಇದು ಜಾಗತಿಕ ಸಾಹಿತ್ಯದಲ್ಲಿ ಬಹುಮುಖೀ ಶೋಧನೆಗೆ ಒಳಗಾದ ಒಂದು ವಸ್ತುವಾಗಿದೆ. ರಾಮಚಂದ್ರ ಶರ್ಮ ಅದನ್ನು ಮೇಲುಮೇಲಿನ ಮಟ್ಟದಲ್ಲಿ ಮಾತ್ರ  ಮುಟ್ಟ್ಟುತ್ತಾರೆ, ಅಷ್ಟೆ. "ಏಳು ಸುತ್ತಿನ ಕೋಟೆ"  ಹದಿ ಹರೆಯದ ಕಾಮ ಕುರಿತು ಬಂದ ಕನ್ನಡದ ಒಂದು ಒಳ್ಳೆಯ ಕವನ ಎಂಬುದು ನಿಜ. ಆದರೆ, ಇಲ್ಲಿಯೂ ಗಂಗಾಧರ ಚಿತ್ತಾಲರ "ಕಾಮೋದಯ" ಹೆಚ್ಚು ವಿಸ್ತಾರವಾದ ವಸ್ತುವನ್ನು ಕುರಿತ ಕವನವಲ್ಲವೇ ಎಂದೂ ಅನ್ನಿಸುತ್ತದೆ.

ಭಾಷೆಯ ಬಳಕೆಯಲ್ಲಿಯೂ  ರಾಮಚಂದ್ರ ಶರ್ಮರು ಕನ್ನಡದ ಸೀಮಿತ ಸಾಧ್ಯತೆಗಳನ್ನು ಮಾತ್ರ ಕಾಣುತ್ತಾರೆ ಅನ್ನಿಸುತ್ತದೆ. ತಿರುಮಲೇಶ್ ತಮಗೆ ಗೊತ್ತಿರುವ ಕನ್ನಡದ ಇತರ ಪ್ರಭೇದಗಳನ್ನು ಬಳಸದೆ ಬಿಟ್ಟು ಬಿಡುತ್ತಾರೆ; ರಾಮಚಂದ್ರ ಶರ್ಮರಿಗೆ ಬೆಂಗಳೂರು ಕನ್ನಡ ಬಿಟ್ಟು ಬೇರೆ ಕನ್ನಡಗಳ ಆತ್ಮೀಯ ಪರಿಚಯವೇ ಇರಲಿಲ್ಲ. ಆತ್ಮೀಯ ಪರಿಚಯಕ್ಕಾಗಿ ಅವರು ಪ್ರಯತ್ನಿಸಲೂ ಇಲ್ಲ. ಅವರ ಸೀಮಿತ ಆಸಕ್ತಿಗಳಿಗೆ ಅಷ್ಟು ಕನ್ನಡ ಸಾಕು ಅನ್ನಿಸಿರಬಹುದು. ಯಾಕೆಂದರೆ, ಒಬ್ಬ ಕವಿಗೆ--ಅಥವಾ ಯಾರಿಗೇ ಆದರೂ--ಕನ್ನಡದ ಅನೇಕ ಪ್ರಭೇದಗಳ ಆತ್ಮೀಯ ಒಳಗೊಳ್ಳುವಿಕೆ ಮತ್ತು ಆಸಕ್ತಿಗಳ ವಿಸ್ತರಣೆ  ಬೇರೆ ಬೇರೆ ಅಲ್ಲ. ಬೇಂದ್ರೆಯವರೇನೋ ಎಲ್ಲಾ ಕನ್ನಡಗಳನ್ನು ಒಳಗೊಂಡ ಒಂದು ಕನ್ನಡವನ್ನು ಕವಿಯೊಬ್ಬ ರೂಡಿಸಿಕೊಳ್ಳಬೇಕು ಎಂದರು. ಹಾಗೆ ಹೇಳುತ್ತಿದ್ದಾಗ ಏಕೀಕರಣ ಅವರ ಮನಸ್ಸಿನಲ್ಲಿ ಇತ್ತು. ಆದರೆ ಒಟ್ಟು ನಾಡಿಗೆ ಸಂಬಂಧಿಸಿದಂತೆ ಮೇಜರ್ ಆಗಿ ಜೀವನದ ಜೊತೆ ಅನುಸಂಧಾನ ನಡೆಸಿ ಬರೆಯಬೇಕಾದರೂ ಕವಿಯೊಬ್ಬನಿಗೆ ಅಂಥಾ ಭಾಷೆಯ ಅಗತ್ಯವಿದೆ. ಅಥವಾ, ಅಂಥಾ ಭಾಷೆಯನ್ನು ಒಬ್ಬ ಕವಿ ರೂಢಿಸಿಕೊಂಡಾಗ ಅವನ ಆಸಕ್ತಿಗಳೂ ಹಾಗೇ ವಿವಿಧವಾಗಿ ಬೆಳೆಯುತ್ತವೆ ಮತ್ತು ವ್ಯಕ್ತಗೊಳ್ಳುತ್ತವೆ.

ತಿರುಮಲೇಶ್, ಶರ್ಮ ಮೊದಲಾದವರು ನಾನು ನನ್ನ ಸಂವೇದನೆ ರೂಪುಗೊಳ್ಳುತ್ತಿದ್ದಾಗ ಓದಿದ ಕವಿಗಳು; ನಾನು ಮೆಚ್ಚಿದ, ಈಗಲೂ ಮೆಚ್ಚುತ್ತಿರುವ, ಒಂಟಿಯಾಗಿದ್ದಾಗ ಸಾಲುಗಳನ್ನು ನೆನೆಸಿಕೊಂಡು ಚಪ್ಪರಿಸುವ ಕವಿತೆಗಳನ್ನು ಬರೆದ  ಕವಿಗಳು. ಹೀಗಾಗಿ ಅವರ ಬಗೆಗಿನ ನನ್ನ ಟೀಕೆ ನನ್ನ ಅಭಿರುಚಿಯ ಟೀಕೆಯೂ ಆಗಿದೆ.


ಆತ್ಮಕಥನ 7

(1965-66ರ ಸುಮಾರಿಗೆ ಶ್ರೀಕೃಷ್ಣ ಆಲನಹಳ್ಳಿ ಪ್ರಕಟಿಸುತ್ತಿದ್ದ ಸಾಹಿತ್ಯಿಕ ತ್ರೈಮಾಸಿಕದ ಮುಖಚಿತ್ರ. ಬೈಂಡಿಂಗಿಗೆ ಪಿನ್ನು ಹಾಕಿರುವುದರಿಂದ ಹಾಳೆಗಳಿಗೆ ತುಕ್ಕು ಹಿಡಿದಿದೆ.)

ಎಲ್ಲಿಗೆ?, ಮೃಚ್ಛಕಟಿಕ  ಮೊದಲಾದ ನಾಟಕಗಳನ್ನು ಆಡಿದ್ದು ಸಮತೆಂತೋ ನಾಟಕ ತಂಡ. ಇದು 1967ರಲ್ಲಿ ಡಾ. ರತ್ನ, ವಿಶ್ವನಾಥ ಮಿರ್ಲೆ, ಸಿಂಧುವಳ್ಳಿ ಅನಂತಮೂರ್ತಿ, ರಾಮೇಶ್ವರಿ ವರ್ಮ ಮೊದಲಾದವರು ಸೇರಿ ಪ್ರಾರಂಭಿಸಿದ ಹವ್ಯಾಸಿ ನಾಟಕ ತಂಡ. ಇದು ಪ್ರಾರಂಭವಾದಾಗ ಸಮತೆಂತೋ ಅಂದರೆ ಏನು ಎಂಬ ಜಿಜ್ಞಾಸೆ ಮೈಸೂರಿನ ರಂಗಾಸಕ್ತರಲ್ಲಿ, ವಿದ್ವಾಂಸರಲ್ಲಿ ಉಂಟಾಗಿತ್ತು. ಯಾರೋ ಹೋಗಿ ಕುವೆಂಪುರನ್ನು ಸಮತೆಂತೋ ಪದದ ಅರ್ಥ ಏನು ಎಂದು ಕೇಳಿದರಂತೆ. ಅವರು, ನನಗೆ ತಿಳಿದಿಲ್ಲ, ಡಿ. ಎಲ್. ನರಸಿಂಹಾಚಾರ್ ಅವರನ್ನು  ಕೇಳಿ, ತಿಳಿದಿದ್ದರೆ ಅವರೊಬ್ಬರಿಗೆ ತಿಳಿದಿರಬಹುದು ಎಂದರಂತೆ. ಡಿ. ಎಲ್. ಎನ್., ನನಗೂ ಗೊತ್ತಿಲ್ಲ, ಸಮತೆ ಎಂತೋ ಎಂಬ ಅರ್ಥದಲ್ಲಿ ಏನಾದರೂ ಬಳಸಿದ್ದಾರೋ ಏನೋ ಎಂದರಂತೆ. ಮುಂದೆ ಒಂದು ನಾಟಕದ ಶೋ ಇದ್ದಾಗ, ಸಮತೆಂತೋ ಎಂದರೆ ಸರಸ್ವತಿಪುರದ ಮಧ್ಯದಲ್ಲಿರುವ ತೆಂಗಿನ ತೋಟ ಎಂದು ಅರ್ಥ ಎಂದು ವಿಶ್ವನಾಥ ಮಿರ್ಲೆ ವಿವರಿಸಿದರು. ಆಗ ಸರಸ್ವತಿಪುರದ ಮಧ್ಯದಲ್ಲಿ ಈಗ ಇರುವ ತೆರೆದ ಚರಂಡಿಗೆ ಒತ್ತಿಕೊಂಡಂತೆ ಒಂದು ತೆಂಗಿನ ತೋಟ ಇತ್ತು. ಒಣಗಿಕೊಂಡಿದ್ದ ಮರಗಳು. ಬಹುಶಃ ಸಿಟಿ ಟ್ರಸ್ಟ್ ಬೋರ್ಡಿನವರು--ಮೂಡಕ್ಕೆ ಆಗ ಇದ್ದ ಹೆಸರು--ಆಗಲೇ ಆ ಜಾಗ ಎಕ್ವೈರ್ ಮಾಡಿದ್ದರೋ ಏನೋ. ಈ ನಾಟಕ ತಂಡದ ರತ್ನ, ಸಿಂಧುವಳ್ಳಿ, ಮಿರ್ಲೆ ಮೊದಲಾದವರ ಮನೆಗಳು ಈ ತೆಂಗಿನ ತೋಟದ ಆಸುಪಾಸಿನಲ್ಲಿಯೇ ಇದ್ದವು.

ಮೇಲೆ ಹೆಸರಿಸಿದ ನಾಟಕಗಳಲ್ಲದೆ ಬೇರೆ ನಾಟಕಗಳನ್ನೂ ಸಮತೆಂತೋದವರು ಆಡಿದ್ದಾರೆ. ಅವುಗಳಲ್ಲಿ ಟಿಂಗರ ಬುಡ್ಡಣ್ದ ತುಂಬಾ ಚೆನ್ನಾಗಿತ್ತೆಂದು ಕೇಳಿದ್ದೇನೆ. ಇನ್ನೊಂದು ನಾಟಕ ಅವರು ಆಡಿದ್ದು ಚೆಕಾವನ  ಕಾಡ್ಮನ್ಸ. ಅವನ ದಿ ಬೇರ್ ನ್ನು ಈ ಹೆಸರಿನಲ್ಲಿ ರೂಪಾಂತರಿಸಿದವರು ಸಿಂಧುವಳ್ಳಿ ಅನಂತಮೂರ್ತಿ.ಅದರಲ್ಲಿ ಎಸ್ತರ್ ಅನಂತಮೂರ್ತಿ ಹೆಂಗಸಿನ ಪಾತ್ರ, ವಿಶ್ವನಾಥ ಮಿರ್ಲೆ ಗಂಡಸಿನ ಪಾತ್ರ ಮಾಡಿದ್ದರು. ಮುಂದೆ ಎಂ. ಎ. ಮುಗಿಸಿ ಬನುಮಯ್ಯ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದಾಗ ನಾನೂ ಸಮತೆಂತೋದ ಒಂದು ನಾಟಕದಲ್ಲಿ ಪಾತ್ರ ವಹಿಸಿದೆ. ಅದು ಜಿ. ಬಿ. ಜೋಶಿಯವರ ನಾಟಕ ಕದಡಿದ ನೀರುನಲ್ಲಿ ಶಂಕರನ ಪಾತ್ರ. ಅದರಲ್ಲಿ ಪಾತ್ರವಹಿಸಿದ ಇತರರು: ಡಾ. ರತ್ನ, ಮಾಧವ ಕುಲಕರ್ಣಿ, ರಾಮೇಶ್ವರಿ ವರ್ಮ, ಲಕ್ಷ್ಮಿ--ಈಗಿನ ಲಕ್ಷ್ಮಿ ಚಂದ್ರಶೇಖರ್. ವಿಶೇಷವೆಂದರೆ ಅದರಲ್ಲಿ ಹಿರಿಯ ನಟರಾದ ಸಂಪತ್  ಗೂಳಪ್ಪನ ಪಾತ್ರ ಮಾಡಿದ್ದರು. ಇವರು ರಂಗಭೂಮಿಯಲ್ಲಿ ಗೌರವಾನ್ವಿತರು ಮಾತ್ರವಲ್ಲ; ಆರ್. ಕೆ. ನಾರಾಯಣ್ ಅವರ ಸ್ನೇಹಿತರೂ ಆಗಿದ್ದರು. ತಮ್ಮ ಮಿ. ಸಂಪತ್  ಕೃತಿಯನ್ನು ಸಂಪತ್ ಅವರಿಗೆ ನಾರಾಯಣ್, "To Mr. Sampath, the original" ಎಂದು ಅಂಕಿತ ಹಾಕಿ ಕೊಟ್ಟಿದ್ದರೆಂದು ಒಂದು ಲೆಜೆಂಡು ಮೈಸೂರಿನಲ್ಲಿ ಇತ್ತು. ನಾರಾಯಣ್ ಸಂಪತ್ ರ ಸಿಟಿ ಪವರ್ ಪ್ರೆಸ್ಸಿನಲ್ಲಿ ಬಂದು ಕೂತುಕೊಳ್ಳುವ ಸಂಪ್ರದಾಯ ಇತ್ತಂತೆ.

ವೇಷ ಹಾಕಿ ರಂಗದ ಮೇಲೆ ಇನ್ನೇನು ಪ್ರವೇಶ ಕೊಡಬೇಕು ಎಂಬಾಗ ಸಂಪತ್ ಅವರಿಗೆ ಜ್ವರ ಬಂದ ಹಾಗೆ ಆಗುತ್ತದೆ; ಹತ್ತಿರದಲ್ಲಿದ್ದವರನ್ನು ನನಗೆ ಜ್ವರ ಬಂದಿದೆಯೋ ನೋಡಿ ಎಂದು ಕೇಳುತ್ತಾರೆ; ಆಗ, ಬಂದಿದೆ ಎಂದು ಹೇಳಬೇಕಾದ್ದು ಹಾಗೆ ಕೇಳಿಸಿಕೊಂಡವನ ಕರ್ತವ್ಯ; ಇದರಿಂದಾಗಿ ಚೆನ್ನಾಗಿ ನಟಿಸಲು ಅಗತ್ಯವಾದ  ಒಂದು ಟೆಂಪರಾಮೆಂಟು ಅವರಲ್ಲಿ ಹುಟ್ಟುತ್ತದೆ ಎಂಬ ಒಂದು ಲೆಜೆಂಡು ಅವರ ಬಗ್ಗೆ ಇತ್ತು. ಅವರು ಪಾತ್ರವಹಿಸಿದ ಆ ದಿವಸ ನನ್ನ  ಹತ್ತಿರ ಅಥವಾ ಬೇರೆ ಯಾರಾದರೂ ಅಲ್ಲಿ  ಗ್ರೀನ್ ರೂಮಿನಲ್ಲಿ  ಇದ್ದವರ ಹತ್ತಿರ ನನಗೆ ಜ್ವರ ಬಂದಿದೆಯೋ ನೋಡಿ ಎಂದು ಕೇಳುತ್ತಾರೆಂದು ಕಾಯುತ್ತಿದ್ದೆ. ಅವರು ಯಾರ ಹತ್ತಿರವೂ ಹಾಗೆ ಕೇಳಲಿಲ್ಲ. ಬಹುಶಃ ಯಾವಾಗಲೋ ಒಂದೆರಡು ಸಲ ಯಾವುದೋ ಕಾಲದಲ್ಲಿ ಹಾಗೆ ಕೇಳಿ ಆ ಲೆಜೆಂಡು ಹುಟ್ಟಿರಬೇಕು. ಎಲ್ಲಾ ಲೆಜೆಂಡು ಹುಟ್ಟುವುದು ಹಾಗೇ ತಾನೇ? ಅದು ನಿಜವೋ ಸುಳ್ಳೊ ಎಂದು ಪರೀಕ್ಷಿಸಿ ಪ್ರಯೋಜನವಿಲ್ಲ. ರಂಗಪ್ರವೇಶವೆಂದರೆ ಅವರಿಗೆ ಒಂದು ಹೈಟನ್ಡ್ ಸ್ಟೇಟ್ ಎಂದು ಅರ್ಥ ಮಾಡಿಕೊಳ್ಳುವುದು ಹೆಚ್ಚು ಸೂಕ್ತ.

ಈ ನಾಟಕದ ರಿಹರ್ಸಲ್  ನಡೆಯುತ್ತಿದ್ದಾಗ ನನಗೊಂದು ವಿಶೇಷ ಅನುಭವವಾಯಿತು. ಶಂಕರನದ್ದು ಮುಖ್ಯ ಪಾತ್ರ. ಆ ಪಾತ್ರ ಕೆಟ್ಟರೆ ಇಡೀ ನಾಟಕ ಕೆಡುವ ಸಾಧ್ಯತೆ ಇತ್ತು. ಆದರೆ ರಿಹರ್ಸಲ್ ಪ್ರಾರಂಭವಾಗಿ ಹದಿನೈದು ದಿನ ಕಳೆದರೂ ನನಗೆ ಆ ಪಾತ್ರವನ್ನು ಪರವಾ ಇಲ್ಲ ಎಂಬ ಮಟ್ಟದಲ್ಲಿ ಅಭಿನಯಿಸುವುದಕ್ಕೂ ಆಗುತ್ತಿರಲಿಲ್ಲ. ತುಂಬಾ ಕೆಟ್ಟದಾಗಿ ಮಾಡುತ್ತಿದ್ದೆ. ನಿರ್ದೇಶಕರಾದ ರತ್ನ ಹೇಳಿ ಹೇಳಿ ಸಾಕಾಗಿ ಕೊನೆಗೆ ನನ್ನ ಬಗ್ಗೆ ಸಾರ್ಕಾಸ್ಟಿಕ್ ಆಗಿ ಮಾತಾಡಲು ಸುರು ಮಾಡಿದ್ದರು. ನನಗೂ ಇದನ್ನು ಬಿಟ್ಟುಬಿಡಬೇಕು, ನಟನೆ ನನಗೆ ಹೇಳಿಸಿದ್ದಲ್ಲ, ಇವತ್ತು ರಿಹರ್ಸಲ್  ಮುಗಿದ ಮೇಲೆ ಏನಾದರೂ ನೆವದಿಂದ  ನಾಳೆಯಿಂದ ನಾನು ಬರುವುದಿಲ್ಲ ಎಂದು ಹೇಳಿ ಬಂದು ಬಿಡುತ್ತೇನೆ ಎಂದುಕೊಂಡೇ ಹೋದೆ. ಹೇಗೂ ನಾಳೆಯಿಂದ ಬರುವುದಿಲ್ಲ, ಇವತ್ತೊಂದು ದಿವಸ ಮೈ ಚಳಿ  ಬಿಟ್ಟು ನನಗೆ ಸರಿ ಕಂಡ ಹಾಗೆ ಅಭಿನಯಿಸುತ್ತೇನೆ ಎಂದು ಅಭಿನಯಿಸಿದೆ. ರಿಹರ್ಸಲ್ ಮುಗಿದ ಮೇಲೆ ಮಾತ್ರ ನನಗೆ ಎಲ್ಲರಿಂದ ಅಭಿನಂದನೆಗಳ ಸುರಿಮಳೆ. ನನ್ನ ಪ್ರವೇಶವೆಂದೊಡನೆ ಮುಖ ಸಿಂಡರಿಸುತ್ತಿದ್ದವರೂ  ಅವತ್ತು ನನ್ನನ್ನು ನಗುನಗುತ್ತಾ ಮಾತಾಡಿಸಿದರು. ಆನಂತರ ನಾನು ನಾಟಕದಿಂದ ನಿರ್ಗಮಿಸಬೇಕೆಂಬ ಯೋಚನೆ ಬಿಟ್ಟುಬಿಟ್ಟೆ. ನಾಟಕ ಮುಗಿದ ಮೇಲೆ ಡಾ. ರತ್ನ ಹೇಳಿದರು: ಅವರೂ ನನ್ನನ್ನು ತೆಗೆದುಹಾಕಿ ಬೇರೆಯವರನ್ನು ತೆಗೆದುಕೊಳ್ಳುವ ಯೋಚನೆ ಮಾಡುತ್ತಿದ್ದರಂತೆ.

ಅಷ್ಟರ ವರೆಗೆ ಹೇಳಿಕೊಟ್ಟದ್ದನ್ನು ಮಾತ್ರ ಮಾಡುತ್ತಿದ್ದವ ಅವತ್ತು ನನ್ನ ಅಂತರಂಗದ ಮಾತಿನಂತೆ ನನಗೆ ಸಹಜವಾದ ಆಂಗಿಕಗಳನ್ನು ಮಾಡಿ ಅಭಿನಯಿಸಿದ್ದೆ. ಅಂತರಂಗ ಮತ್ತು ಬಾಹ್ಯ; ಪಾತ್ರದ ವ್ಯಕ್ತಿತ್ವ ಮತ್ತು ನಮ್ಮ ವ್ಯಕ್ತಿತ್ವ--ಎರಡೂ ಒಟ್ಟಿಗೆ  ಸೇರಿದ ಸಂಧಿಬಿಂದುವಿನಲ್ಲಿ  ಅಭಿನಯಿಸುವುದು ಎಂದು ಬಹುಶಃ ಇದನ್ನು  ಕರೆಯಬಹುದು. ಸ್ಟಾನಿಸ್ಲಾವ್ಸ್ಕಿ ರಂಗದಲ್ಲಿ ಅಂತರಂಗ ಎಂದು ಕರೆಯುವುದು ಇದನ್ನೇ  ಇರಬೇಕು. ಆದರೆ ಮುಂದೆ ನಟನೆಯನ್ನು ನಾನು ಬೆಳೆಸಿಕೊಂಡು ಹೋಗಲಿಲ್ಲ. ಒಂಟಿಯಾಗಿರುವುದನ್ನೇ ಹೆಚ್ಚು ಇಷ್ಟಪಡುವ ನನಗೆ ನಾಲ್ಕು ಜನರ ಜೊತೆ ಹೊಂದಿಕೊಂಡು ಕೆಲಸ ಮಾಡಬೇಕಾದ ನಟನೆ ಹೇಳಿಸಿದ್ದಲ್ಲ ಅನ್ನಿಸಿತು. ಅದಾದ ಕೆಲವು ಸಮಯದಲ್ಲಿ  ನನಗೆ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಕೆಲಸ ಸಿಕ್ಕಿ ಮೈಸೂರು ಬಿಟ್ಟದ್ದರಿಂದ ಶಂಕರನ ಪಾತ್ರವನ್ನೂ ಆನಂತರ ನಾನು ಮಾಡಲಿಲ್ಲ. ಆದರೆ ಮುಂದೆ ಆ ಪಾತ್ರ ಮಾಡಿದ ಎರಡು ಮೂರು ಜನರಲ್ಲಿ ನನ್ನ ಪಾತ್ರವೇ ಚೆನ್ನಾಗಿತ್ತು ಎಂದು ಬೇರೆಯವರು ಮಾತ್ರವಲ್ಲದೆ ರತ್ನ ಕೂಡಾ ನನಗೆ ಹೇಳಿದರು.

ಡಾ.  ರತ್ನ ನನ್ನ ಉಚ್ಛಾರವನ್ನೂ ತಿದ್ದಿದರು. ನಾನು ಕೆಲವು ಸಲ ಕೊನೆಯ ಅಕ್ಷರಗಳನ್ನು ನುಂಗುತ್ತಿದ್ದೆ; ಅಥವಾ/ಮತ್ತು ಬಹಳ ಸ್ಪೀಡಾಗಿ ಮಾತಾಡುತ್ತಿದ್ದೆ. ರಿಹರ್ಸಲ್ಲಿನಲ್ಲಿ ರತ್ನ ವ್ಯಂಗ್ಯವಾಗಿ ಪಾಠವೂ ಹೀಗೇ ಮಾಡೋದೋ ಎಂದು ಕೇಳಿದರು. ಅಕ್ಷರ ನುಂಗುತ್ತೇನೆಂಬುದು ಅವರು ಹೇಳಿಯೇ ನನಗೆ ಗೊತ್ತಾದದ್ದು. ಈಗ ನನ್ನನ್ನು ಸ್ಪಷ್ಟ ಉಚ್ಛಾರದವನೆಂದು ಅನೇಕರು ಹೊಗಳುತ್ತಾರೆ. ಅದಕ್ಕೆ ಕಾರಣ ರತ್ನ. ನನ್ನದು ಕಂಚಿನ ಕಂಠ ಎಂದೂ ಅನ್ನುತ್ತಾರೆ. ನನ್ನ ಧ್ವನಿ ದೊಡ್ಡ. ಕೆರಿಯರಿನ ಪ್ರಾರಂಭದಲ್ಲಿ ತೊಂಭತ್ತು ನೂರು ವಿದ್ಯಾರ್ಥಿಗಳಿದ್ದ ಕ್ಲಾಸಿಗೆ ಪಾಠ ಮಾಡಿ ದೊಡ್ಡಕ್ಕೆ ಮಾತಾಡುವುದು ಅಭ್ಯಾಸವಾಗಿದೆ. ಪ್ರಜ್ಞಾಪೂರ್ವಕವಾಗಿ ಧ್ವನಿ ತಗ್ಗಿಸಿಕೊಳ್ಳದಿದ್ದರೆ ಮಾತು ದೊಡ್ಡ ಧ್ವನಿಯಲ್ಲೇ ಸಾಗುತ್ತಿರುತ್ತದೆ.

ರತ್ನ ಸ್ಪೀಚ್ ತಜ್ಞ. ಮೈಸೂರಿನ ಅಖಿಲ ಬಾರತ ವಾಕ್ ಶ್ರವಣ ಸಂಸ್ಥೆಯ ಮೊದಲ ನಿರ್ದೇಶಕರು. ಇಡೀ ದೇಶಕ್ಕೆ ವಾಕ್ ಶ್ರವಣಕ್ಕೆ ಸಂಬಂಧಿಸಿದ ಮೊದಲ ಸಂಸ್ಥೆ ಅದು. ಮಹಾರಾಜಾ ಕಾಲೇಜಿನಲ್ಲಿ  ಬಿ. ಎ. ಇಂಗ್ಲಿಷ್ ಆನರ್ಸಿನಲ್ಲಿ ಫೇಲಾಗಿ, ಅಮೇರಿಕಕ್ಕೆ ಹೋಗಿ ವಾಕ್ ಶ್ರವಣದಲ್ಲಿ ಇಷ್ಟುದ್ದ  ಡಿಗ್ರಿಗಳನ್ನು ಪಡೆದು ತಜ್ಞರಾಗಿ ಹಿಂದಿರುಗಿ ಕೇಂದ್ರ ಸರಕಾರ ಆಗ ತಾನೇ ಪ್ರಾರಂಭಿಸಿದ ಈ ಸಂಸ್ಥೆಗೆ ಮೊದಲ ನಿರ್ದೇಶಕರಾಗಿದ್ದರು--ತುಂಬಾ ಚಿಕ್ಕ ವಯಸ್ಸಿನಲ್ಲೇ.  ರಾಮಸ್ವಾಮಿ ಸರ್ಕಲ್ಲಿನಿಂದ ಸ್ವಲ್ಪ ಮುಂದೆ ಒಂದು ಮನೆಯಲ್ಲಿ--ಆ ಮನೆಗೆ ಅದಕ್ಕಿಂತ ಮೊದಲು ಹುಜೂರ್ ಸೆಕ್ರೆಟರಿ ಎಂದು ಬೋರ್ಡಿತ್ತು, ಅದು ಮಹಾರಾಜರ  ಸೆಕ್ರೆಟರಿಯ ನಿವಾಸ ಆಗಿದ್ದಿರಬಹುದು--ಈ ಸಂಸ್ಥೆ ಪ್ರಾರಂಭವಾಗಿತ್ತು. ಆಗ ಅಲ್ಲಿ ರತ್ನ ಮತ್ತು  ಮುಂದೆ ಗತಿಸ್ಥಿತಿ  ಬರೆಯಲಿದ್ದ  ಗಿರಿ ಇಬ್ಬರೇ ಸ್ಟಾಫ್ ಇದ್ದರು. ಮೈಸೂರಿನಲ್ಲಿ ಮಹಾರಾಜಾ ಕಾಲೇಜಿಗೆ ಆಗ ತಾನೇ ಸೇರಿದ್ದ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ರತ್ನ ಮತ್ತು ಗಿರಿಯವರನ್ನು ಕೃಷ್ಣ ಆಲನಹಳ್ಳಿ  ಪರಿಚಯ ಮಾಡಿಕೊಟ್ಟಿದ್ದ. ಇನ್ನೂ  ಹದಿನೇಳು ಹದಿನೆಂಟು ವರ್ಷದ ನನ್ನನ್ನು, ನನಗಿಂತ ಸ್ವಲ್ಪ ದೊಡ್ಡವನಾದ ಕೃಷ್ಣನನ್ನು, ಇವರೆಲ್ಲಾ ಸಮಾನರಂತೆ ಕೂತುಕೊಳ್ಳ ಹೇಳಿ, ಕಾಫಿ ತರಿಸಿಕೊಟ್ಟು, ಘನ ವಿಷಯಗಳ ಚರ್ಚೆಗೆ ಅರ್ಹ ಎಂಬಂತೆ ನಡೆಸಿಕೊಳ್ಳುತ್ತಾರೆಂಬುದು ನನಗೆ ಅತ್ಯಂತ ಆಶ್ಚರ್ಯದ ವಿಷಯವಾಗಿತ್ತು; ಆತ್ಮವಿಶ್ವಾಸ ಹೆಚ್ಚಿಸಿದ ವಿಷಯವೂ ಆಗಿತ್ತು.


*************

ಬೋಧಿ ಟ್ರಸ್ಟಿನ ಪುಸ್ತಕ ಬೇಕಾದವರು ಪುಸ್ತಕದ ಮೊತ್ತವನ್ನು Bodhi Trust, SB Account no. 1600101008058, Canara Bank, Yenmur 574328, Dakshina Kannada District, IFSCCNRB0001600--ಇಲ್ಲಿಗ ಜಮೆ ಮಾಡಿ ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ ಇಲ್ಲಿಗೆ ಪತ್ರ ಬರೆದು ಅಥವಾ bodhitrustk@gmail.comಗೆ ಇಮೇಲ್ ಮಾಡಿ ತಿಳಿಸಿದರೆ ಪುಸ್ತಕಗಳನ್ನು  ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ. ಇವು ಮಾರಾಟಕ್ಕೆ ಲಭ್ಯವಿರುವ ಪುಸ್ತಕಗಳು:

1.ಸಮಗ್ರ ನಾಟಕಗಳು ಸಂಪುಟ 2. ರೂ60.00
2. ಸಮಗ್ರ ನಾಟಕಗಳು. ಸಂಪುಟ 3. ರೂ75.00
3. ಮಾತಾಡುವ ಮರ, ಸಮಗ್ರ ಕಾವ್ಯ, 1964-2003. ರೂ100.00
4. ಮುಚ್ಚು ಮತ್ತು ಇತರ ಲೇಖನಗಳು. ರೂ60.00

5. ಹ್ಯಾಮ್ಲೆಟ್. ಅನುವಾದ. ರೂ50.00





Wednesday, January 19, 2011

ಆತ್ಮಕಥನ 6


 (ನನ್ನ ಮನೆ ಅಂಗಳದ ಒಂದು ಚಿತ್ರ. ಚಿತ್ರದಲ್ಲಿರುವುದು ನಾನು, ನನ್ನ ಮಗಳು, ಹಾಗೂ ಅವಳ ಅತ್ತೆ-ಮಾವ)

ನನಗೆ ಕೊಳಲು ಮತ್ತು ಶಂಖ ಬರೆದಾಗ ಹೀಗೆ ಧ್ವನಿಯ ಏರಿಳಿತಗಳ ಮೂಲಕವೇ ರಂಗಾನುಭವ ಉಂಟು ಮಾಡುವ ಒಂದು ನಾಟಕ ಬರೆಯಬೇಕೆಂಬ ಉದ್ದೇಶವಿತ್ತು. ಕೆಲವರು ಸ್ನೇಹಿತರು ಅದರಲ್ಲಿ ಏಕ್ಷನ್ ಇಲ್ಲ ಎಂದರು. ಕೃಷ್ಣನ ಕಾಲಿಗೆ ಬೇಡನ ಬಾಣದಿಂದ ಪೆಟ್ಟಾಗಿ ನಡೆಯಲು ಅಸಾಧ್ಯವಾಗುತ್ತಿರುವ ಸನ್ನವೇಶದಿಂದಲೇ ನಾಟಕ ಪ್ರಾರಂಭವಾಗುತ್ತದೆ. ಕ್ಷಣ ಕ್ಷಣಕ್ಕೆ ಅವನಿಗೆ ನಡೆಯುವುದು--ಹೀಗಾಗಿ ಕ್ರಿಯೆ--ಅಸಾಧ್ಯವಾಗುತ್ತದೆ. ಹೀಗಿರುವಾಗ ಏಕ್ಷನ್ ಇರಲು ಹೇಗೆ ಸಾಧ್ಯ? ಕ್ರಿಯೆ ಅಸಾಧ್ಯವಾಗುತ್ತ ಹೋದಂತೆ ಧ್ವನಿಯನ್ನು, ಕೊಳಲನ್ನು, ಹಿಂದಿನ ನೆನಪುಗಳನ್ನು ಕೃಷ್ಣ ಆಶ್ರಯಿಸಬೇಕಾಗುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಏಕ್ಷನ್ ಮೂಲಕ ಅಲ್ಲ, ಧ್ವನಿಯ ಮತ್ತು ಕೊಳಲ ಧ್ವನಿ ತರಂಗಗಳ ಮೂಲಕ ಈ ನಾಟಕ ಆಡಬೇಕು ಎನ್ನುವುದು ಹೊಳೆದೀತು. ಆದರೂ ಅದರಲ್ಲಿ ನರ್ತನಕ್ಕೆ, ಯುದ್ಧದೃಶ್ಯಕ್ಕೆ ಸಾಕಷ್ಟು ಅವಕಾಶ ಇದೆ. ನಾಟಕದ ಆಶಯ ಸರಿಯಾಗಿ ವ್ಯಕ್ತವಾಗಬೇಕಾದರೆ ಈ ದೃಶ್ಯಗಳನ್ನು ಲೋ ಕೀಯಲ್ಲಿ ತೋರಿಸುವುದು ಅಗತ್ಯ. ಅಥವಾ ಹಿಂದೆಂದೋ ನಡೆದುಹೋದ ಈ ಘಟನೆಗಳಿಗೂ ಇಂದು ಅವುಗಳ ಬಗ್ಗೆ ಯೋಚಿಸುತ್ತಾ ಕೂತ ಕೃಷ್ಣನಿಗೂ ಇರುವ ವ್ಯತ್ಯಾಸ ಸ್ಪಷ್ಟವಾಗುವ ಹಾಗೆ ದೃಶ್ಯಗಳನ್ನು ಯೋಜಿಸಬೇಕು.

ಅಲ್ಲದೆ ಏಕ್ಷನ್ ಬೇರೆ ಏಕ್ಟಿಂಗ್ ಬೇರೆ. ಏಕ್ಷನ್ ಇಲ್ಲದಿದ್ದರೂ ಏಕ್ಟಿಂಗ್ ಇರಬಹುದು. ಮೌನವಾಗಿ ನಿಶ್ಚಲವಾಗಿ ಕೂತುಕೊಳ್ಳುವುದೇ ಅತ್ಯಂತ ಕಷ್ಟದ ಏಕ್ಟಿಂಗ್--ಅದರಲ್ಲಿ ಏಕ್ಷನ್ ಇಲ್ಲದಿದ್ದರೂ. ಅನೇಕ ಸಲ ರಂಗಕರ್ಮಿಗಳು ತಮ್ಮ ಏಕ್ಟಿಂಗಿನ ಅಭಾವವನ್ನು ಏಕ್ಷನ್ನಿನಿಂದ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಾರೆ. ಅಗತ್ಯವಿಲ್ಲದಿದ್ದರೂ ರಂಗಕರ್ಮಿಗಳು ಒಂದು ಡಾನ್ಸ್, ಒಂದು ಚಲನೆ ಹಾಕುವುದು ಏಕ್ಟಿಂಗಿನ ಅಭಾವ ಮುಚ್ಚಿಕೊಳ್ಳಲು ಎಂದು ನನಗೆ ಮೇಲಿಂದ ಮೇಲೆ ಅನ್ನಿಸಿದೆ. ಹಾಗೆಯೇ ಕೆಲವರು ರಂಗಕರ್ಮಿಗಳಲ್ಲಿ ನಾನು ಗಮನಿಸಿದ ಇನ್ನೊಂದು ಅಂಶವೆಂದರೆ ಪದಗಳ ಬಗೆಗಿನ ನಿರ್ಲಕ್ಷ್ಯತೆ. ನಿರ್ದೇಶಕರೊಬ್ಬರು ನನ್ನ ರಥಮುಸಲ ಆಡಿಸಿದಾಗ ನಾನಿದನ್ನು ಸ್ಪಷ್ಟವಾಗಿ ಗಮನಿಸಿದೆ. ಅದರಲ್ಲಿ ಬೇರೊಬ್ಬರು ಬರೆದ ಕೆಲವು ಹಾಡುಗಳನ್ನು ಸೇರಿಸಿದ್ದರು. ಅಂಥಾ ಹಾಡುಗಳ ಒಂದು ಸಾಲು "ತಂಗಾಳಿ ಪಲ್ಲಕ್ಕಿ ಏರಿ ಬರಲಿ". ನೀರು ಈಗಾಗಲೇ ಫ್ಲೈಟಿನಲ್ಲಿ, ಆಹಾರ ಧಾನ್ಯ ಹಡಗಿನಲ್ಲಿ ಬರುತ್ತಿದೆ. ತಂಗಾಳಿಯೊಂದು ಬಿಟ್ಟಿ ಸಿಗುತ್ತಿದೆ. ಅದೂ ಪಲ್ಲಕ್ಕಿ ಏರಿ ಬರಲು ಸುರು ಮಾಡಿದರೆ ಜನತೆಯ ಪಾಡೇನು? ಅಲ್ಲದೆ ಪ್ರಜಾಪ್ರಭುತ್ವವನ್ನು ಎತ್ತಿ  ಹಿಡಿಯುವ ನಾಟಕದ ಆಶಯಕ್ಕೆ ಈ ಸಾಲು ವಿರೋಧ. ಅದೇ ಪ್ರಯೋಗದಲ್ಲಿ, ಪಿಂಗಳೀಕ ಕೊನೆಯಲ್ಲಿ ವೈಶಾಲಿ ಬಿಟ್ಟು ಓಡಿಹೋಗುವಾಗ ಸೈನ್ಯ ಜಮಾಯಿಸಿ ಮತ್ತೆ ನಮ್ಮ ಸಾಮ್ರಾಜ್ಯ ವಿಸ್ತರಿಸುತ್ತೇವೆ ಎನ್ನುತ್ತಾನೆ. ಈ ಮಾತು ನನ್ನ ನಾಟಕದಲ್ಲಿ ಇಲ್ಲ. ನಟ ಮಾತು ಮರೆತು, ಮರೆತದ್ದನ್ನು ತುಂಬಿಕೊಳ್ಳಲೆಂದು ಸಾಮ್ರಾಜ್ಯ ವಿಸ್ತರಿಸುತ್ತೇನೆ ಅಂದಿರಬಹುದು. ಆದರೆ, ನಟ ನಾಟಕವನ್ನು ಕೇರ್ಫುಲ್ ಆಗಿ ಓದಿದ್ದರೆ ಸಾಮ್ರಾಜ್ಯ ವಿಸ್ತರಣೆಯ ಮಾತು ಆಡುತ್ತಿರಲಿಲ್ಲ. ಯಾಕೆಂದರೆ ಇಡೀ ನಾಟಕವೇ ಸಾಮ್ರಾಜ್ಯ ವಿಸ್ತರಣೆಯ ವಿರೋಧಿ, ಮತ್ತು ಪಿಂಗಳೀಕ ಲೇಖಕನ ಆಶಯಗಳನ್ನು ಪ್ರತಿನಿಧಿಸುವ ಪಾತ್ರಗಳಲ್ಲೊಂದು. ಆದರೆ ಹೀಗೆ ನಾಟಕವನ್ನು ಕೇರ್ಫುಲ್  ಆಗಿ ಓದುವವರೇ ಕಮ್ಮಿ. ಸುಬ್ಬಣ್ಣ, ಬಿ. ವಿ. ಕಾರಂತರು, ವಿ. ರಾಮಮೂರ್ತಿ ಮೊದಲಾದ ಕೆಲವರು--ಹೊಸಬರಲ್ಲಿ  ಅಕ್ಷರ, ನಟರಾಜ ಹೊನ್ನವಳ್ಳಿ, ಲಕ್ಷ್ಮಿ ಚಂದ್ರಶೇಖರ್, ಇಕ್ಬಾಲ್ ಅಹಮದ್ ಮತ್ತು ಇನ್ನು ಕೆಲವರು--ಕಾವ್ಯದ ಓದಿನಲ್ಲಿಯೂ ನುರಿತವರು---ಮಾತ್ರ ಹೀಗೆ ಓದುತ್ತಾರೆ ಅನ್ನಬಹುದು. ಇಂದಿನ ಬಹುತೇಕ ರಂಗಕರ್ಮಿಗಳಿಗೆ ದೃಶ್ಯ ಸಾಧ್ಯತೆಗಳ ಬಗ್ಗೆ ಮಾತ್ರ ಗಮನವಿರುತ್ತದೆ. ಆದರೆ ಎಲ್ಲಾ ಮುಖ್ಯ ನಾಟಕಗಳನ್ನು ಲೇಖಕರು ದೃಶ್ಯ ಸಾಧ್ಯತೆಗಳನ್ನು  ಹೇಗೋ ಹಾಗೇ ಶ್ರವ್ಯ ಸಾಧ್ಯತೆಗಳನ್ನೂ ಗಮನದಲ್ಲಿಟ್ಟು ಕಟ್ಟಿರುತ್ತಾರೆ. ಎರಡೂ ಅವರು ಹೇಳಬಯಸುವುದನ್ನು ಪರಿಣಾಮಕಾರಿಯಾಗಿ ಹೇಳಲು ದುಡಿಯುತ್ತವೆ. ಆಂಗಿಕಗಳಷ್ಟೇ ಮಾತು--ಅಲ್ಲಿ ಬಳಸಿದ ಪದಗಳು--ಅದೇ ಪದ, ಪರ್ಯಾಯವಾಗಿ ನಟರಿಗೆ ರಂಗದ ಮೇಲೆ ಹೊಳೆದ ಇನ್ನೊಂದು ಪದ ಅಲ್ಲ--ಮುಖ್ಯ. ಇದನ್ನು ಅರಿಯದ ರಂಗಕರ್ಮಿಗಳು ಒಳ್ಳೆಯ ನಾಟಕಗಳ ಎಂಥಾ ನೋಡಲರ್ಹ ಪ್ರದರ್ಶನ ಮಾಡಿದರೂ ನನಗೆ ಅದರಿಂದ ಸಂತೋಷ ಆಗುವುದಿಲ್ಲ.  ಅದರಿಂದ ಖುಷಿ ಸಿಕ್ಕಬಹುದು; ಆನಂದವಲ್ಲ. ಅರಿವು ಬೆರೆತ ಆನಂದವಂತೂ ಖಂಡಿತ ಅಲ್ಲ. ಮತ್ತು ಒಳ್ಳೆಯ ಕಲೆ ನಮಗೆ ಅರಿವು ಬೆರೆತ ಆನಂದ ಕೊಡುತ್ತದೆ.

ನಾನು  ವಿದ್ಯಾರ್ಥಿಯಾಗಿದ್ದಾಗ ಮೈಸೂರಿನಲ್ಲಿ ಅಮೆಚೂರ್ ನಾಟಕ ಆಡುವುದಕ್ಕೆ ಇದ್ದದ್ದು ಎರಡೇ ಹಾಲುಗಳು. ಒಂದು, ಮಹಾರಾಜಾ ಕಾಲೇಜು ಶತಮಾನೋತ್ಸವ ಭವನ; ಇನ್ನೊಂದು ಗಂಗೋತ್ರಿಯ ಹ್ಯುಮೇನಿಟೀಸ್ ಸಭಾಂಗಣ. ಅದಕ್ಕೆ ಹಿಂದೆ ಸಿ. ಡಿ. ನರಸಿಂಹಯ್ಯನವರು ಮಹಾರಾಜಾ ಕಾಲೇಜು ಪ್ರಿನ್ಸಿಪಾಲರಾಗಿದ್ದಾಗ ರತ್ನ, ವಿಶ್ವನಾಥ ಮಿರ್ಲೆ ಮೊದಲಾದ ಆಗಿನ ವಿದ್ಯಾರ್ಥಿಗಳು ಜೂನಿಯರ್ ಬಿ. ಎ. ಹಾಲಿನಲ್ಲಿ ನಾಟಕ ಆಡುತ್ತಿದ್ದರಂತೆ. ಅದಂತೂ ಪಾಠ ಮಾಡುವುದಕ್ಕೆಂದೇ ರಚಿತವಾದ ಪಲ್ಪಿಟ್. ಆಗಿನ ರಂಗಾಸಕ್ತರು ಲಭ್ಯವಿರುವ ಅವಕಾಶಗಳನ್ನೇ ಬಳಸಿ ನಾಟಕ ಆಡಿದ್ದರು.

ಈಗ ಮೈಸೂರಿನಲ್ಲಿ ಇರುವ ಎಲ್ಲಾ ರಂಗಮಂದಿರಗಳು ಆ ಮೇಲೆ ನಿರ್ಮಿತವಾದವು. ಶತಮಾನೋತ್ಸವ ಭವನ, ಹ್ಯುಮೇನಿಟೀಸ್ ಬ್ಲಾಕ್ ಆಡಿಟೋರಿಯಂ ಕೂಡಾ ರಂಗಮಂದಿರಗಳಲ್ಲ; ಸಭಾಂಗಣಗಳು. ಆದರೂ ಅನಿವಾರ್ಯವಾಗಿ ಅವುಗಳನ್ನೇ ಅಳವಡಿಸಿಕೊಂಡು ನಾಟಕ ಆಡಬೇಕಾಗುತ್ತಿತ್ತು. ಹ್ಯುಮೇನಿಟೀಸ್ ಬ್ಲಾಕ್ ಹಾಲಿನಲ್ಲಿ ನನ್ನ ಸ್ನೇಹಿತ ಬಸವರಾಜು ಮತ್ತೊಬ್ಬರು ಸೇರಿ ಫ್ರೆಂಚ್ ನಾಟಕಕಾರ ಶೀನ್ ಶೆನೆಯ  ಡೆಥ್ ವಾಚ್  ಆಡಿದ್ದರು. ತುಂಬಾ ಭಿನ್ನ  ಪರಿಸರ, ಸಂದರ್ಭಗಳಿಂದಾಗಿ ಅದು ನನ್ನ ಮೇಲೆ ಪರಿಣಾಮ ಬೀರಲಿಲ್ಲ. ವಿದ್ಯಾರ್ಥಿಗಳ ಒಂದು ನಾಟಕ ಸ್ಪರ್ಧೆಯಲ್ಲಿ ಲಂಕೇಶರ ಕತೆ "ಕುರುಡು ಕಾಂಚಾಣ"ವನ್ನು ಒಂದು ಕಾಲೇಜು ತಂಡದವರು ನಾಟಕವಾಗಿ ಪರಿವರ್ತಿಸಿ ಶತಮಾನೋತ್ಸವ ಭವನದಲ್ಲಿ ಆಡಿದ್ದರು. ಹೃದಯ ಕಲಕಿದ ಅಭಿನಯ ಅದು. ಹುಡುಗನೇ ಹುಡುಗಿಯ ಪಾರ್ಟು ಮಾಡಿದ್ದರೂ ನಾಟಕದಲ್ಲಿದ್ದ ಇಂಟೆನ್ಸಿಟಿಯಿಂದಾಗಿ ಕೃತಕ ಅನ್ನಿಸಲಿಲ್ಲ. ಸ್ಪರ್ಧೆಯ ಬೇರೆ ನಾಟಕ ಆಡುತ್ತಿದ್ದಾಗ ಗಲಭೆ ಮಾಡುತ್ತಿದ್ದ ಪ್ರೇಕ್ಷಕರೂ ಈ ನಾಟಕವನ್ನು ಮೌನವಾಗಿ ಕೂತು ನೋಡಿದರು. ಅದು ಯಾವ ಕಾಲೇಜಿನದ್ದೆಂದು ಈಗ ಮರೆತಿದೆ. ಆದರೆ ಆಗ ಆ ನಾಟಕ ಆಡಿದವರಲ್ಲಿ ಕೆಲವರಾದರೂ ಇಂದು ರಂಗಭೂಮಿಯಲ್ಲಿ, ಅಥವಾ ಬೇರೆ ದೃಶ್ಯಮಾಧ್ಯಮದಲ್ಲಿ ದೊಡ್ಡ ಹೆಸರು ಮಾಡಿದವರಿರಬಹುದು.

ಆನಂತರ ನಾನು ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಭಾಷೆಯ ನಾಟಕ ನೋಡಿದ್ದೇನೆ. ಆದರೆ ರಂಗಭೂಮಿ, ನಾಟಕಗಳ ಮೇಲೆ ನನ್ನ ಆಸಕ್ತಿ ಬೆಳೆಯುತ್ತಿದ್ದ ವರ್ಷಗಳಲ್ಲಿ, ನನಗಿನ್ನೂ ಇಪ್ಪತ್ತು ವರ್ಷ ಆಗುವ ಮೊದಲೇ ನೋಡಿದ ಈ ನಾಟಕಗಳು, ಆಗ ಅವು ಹುಟ್ಟಿಸಿದ ಯೋಚನೆ--ಭಾವನೆಗಳು ಮನಸ್ಸಿನಲ್ಲಿ ಫ್ರೆಶ್ಶಾಗಿವೆ. ಅವು ಅಷ್ಟೊಂದು ಪರಿಣಾಮ ಬೀರಿದ್ದು ಕೂಡ ನನ್ನ ಮನಸ್ಸು ಹಸಿಮಣ್ಣಿನ ಗೋಡೆಯಂತೆ ಇದ್ದದ್ದರಿಂದ ಇರಬಹುದು.

**************


ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ--ಇದರ ಪುಸ್ತಕಗಳು ಮಾರಾಟಕ್ಕೆ ಸಿಗುತ್ತವೆ. ನಿಮಗೆ ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust, Canara Bank SB Account no. 1600101008058, Yenmur 574328, Dakshina Kannada District, Karnataka, IFSCCNRB0001600--ಇಲ್ಲಿಗೆ ಜಮೆ ಮಾಡಿ ನಿಮ್ಮ ವಿಳಾಸವನ್ನು ಅಂಚೆ ಮೂಲಕ ಅಥವಾ bodhitrustk@gmail.comಗೆ ಇಮೇಲ್ ಮಾಡಿ ತಿಳಿಸಿದರೆ ಪುಸ್ತಕಗಳನ್ನು ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ. ಇವು ಮಾರಾಟಕ್ಕೆ ಲಭ್ಯವಿರುವ ಪುಸ್ತಕಗಳು:
1. ಸಮಗ್ರ ನಾಟಕಗಳು, ಸಂಪುಟ 2. ರೂ60.00
2. ಸಮಗ್ರ ನಾಟಕಗಳು, ಸಂಪುಟ 3. ರೂ75.00
3. ಮಾತಾಡುವ ಮರ, ಸಮಗ್ರ ಕಾವ್ಯ, 1964-2003. ರೂ100.00
4. ಹ್ಯಾಮ್ಲೆಟ್. ಶೇಕ್ಸ್ಪಿಯರ್ ಅನುವಾದ. ರೂ50.00
5. ಮುಚ್ಚು ಮತ್ತು ಇತರ ಲೇಖನಗಳು. ರೂ60.00  (ಇದರಲ್ಲಿ ವಡ್ಡಾರಾಧನೆ, ಮಹಾಭಾರತ, ಮಾತಾಡುವ ಮರ ಕುರಿತ ಪೇಂಟಿಂಗ್ ಮತ್ತು ಜಾನಪದ ಕತೆ, ವಸಾಹತುಶಾಹಿ, ಶಿವರಾಮ ಕಾರಂತರ ಕಾದಂಬರಿಗಳು, ಅಡಿಗರ ಕಾವ್ಯ ಮೊದಲಾದ ವಿಷಯ ಕುರಿತ ಲೇಖನಗಳಿವೆ)

ಆತ್ಮಕಥನ 5

ನಾನು ನೋಡಿದ ಮತ್ತೊಂದು ಪರಿಣಾಮಕಾರಿ ನಾಟಕವೆಂದರೆ ಟಿ. ಎನ್. ನರಸಿಂಹನ್ ನಿರ್ದೇಶಿಸಿದ ಬಾದಲ್ ಸರ್ಕಾರ ಅವರ ಏವಂ ಇಂದ್ರಜಿತ್. ಇದೂ ಸುಮಾರು 1968 ಅಥವಾ 1969ನೇ ಇಸವಿಯ ಹೊತ್ತಿಗೆ. ಇದನ್ನು ಆಡಿಸಿದಾಗ ನರಸಿಂಹನ್ ಮೈಸೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಪಾತ್ರ ವಹಿಸಿದ್ದವರು ಸಹಾ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ನರಸಿಂಹನ್ ಸ್ನೇಹಿತರು. ಆಡಿದ್ದು ಗಂಗೋತ್ರಿಯ ಹ್ಯುಮೇನಿಟೀಸ್ ಸಭಾಂಗಣದಲ್ಲಿ. ಸಾದಾ ದಿನ ನಿತ್ಯದ ವೇಷಭೂಷಣ. ನಮ್ಮ ಜೊತೆ ಸಭಾಂಗಣದಲ್ಲಿ ನಮ್ಮ ಹಾಗೇ ಬಟ್ಟೆ ತೊಟ್ಟು ಮಾತಾಡುತ್ತಾ ಕೂತಿದ್ದವರೇ ಮೂರನೆಯ ಬೆಲ್ ಆಗುತ್ತಲೇ ರಂಗದ ಮೇಲೆ ಹೋಗಿ ನಾಟಕ ಆಡಲು ಸುರು ಮಾಡಿಬಿಟ್ಟರು. ಲೈಟಿಗೆಂದು ನಟರು ವಾಸಿಸುತ್ತಿದ್ದ ಹಾಸ್ಟೆಲ್ಲಿನಿಂದ ತಂದ ಐದಾರು  ಟೇಬಲ್ ಲ್ಯಾಂಪುಗಳನ್ನು ಅಳವಡಿಸಿದ್ದರು. ಲೈಟ್ ಮ್ಯಾನ್ ಅಂತ ಪ್ರತ್ಯೇಕ ಇಲ್ಲ. ನಟ ನಟಿಯರೇ ತಮ್ಮ ನಟನೆಯ ಸಂದರ್ಭದಲ್ಲೇ ಲೈಟ್ ಹಾಕಿ ಕೂತುಕೊಳ್ಳುತ್ತಾರೆ ಅಥವಾ ಆರಿಸಿ ನಿರ್ಗಮಿಸುತ್ತಾರೆ. ನಟರ ಶಕ್ತಿ ಇದ್ದದ್ದು ಧ್ವನಿಯ ಏರಿಳಿತಗಳಲ್ಲಿ. ಅದೂ, ಇಂದ್ರಜಿತ್ ಪಾತ್ರ ಮಾಡಿದ್ದ ಆನಂದನ--ಇವ ನರಸಿಂಹನ್ ತಮ್ಮ--ಧ್ವನಿಯ ಏರಿಳಿತಗಳು, ಅವು ಉಂಟು ಮಾಡುತ್ತಿದ್ದ ಪರಿಣಾಮ ನನ್ನ ಸ್ಮರಣೀಯ ರಂಗಾನುಭವಗಳಲ್ಲಿ ಒಂದು. ಆ ರೀತಿ ಧ್ವನಿಯ ಮೇಲೆ ಹಿಡಿತವಿರುವ ನಟರನ್ನು ನಾನು ಹೆಚ್ಚಿಗೆ ನೋಡಿಲ್ಲ. ಧ್ವನಿಯ ಏರಿಳಿತಗಳಿಂದಲೇ ಅವರು ಭಾವನೆಗಳನ್ನು ವ್ಯಕ್ತಪಡಿಸಿದ್ದರು.

ಹೀಗೆ ಬರೀ ಧ್ವನಿಯ ಏರಿಳಿತಗಳಿಂದಲೇ ರಂಗಾನುಭವ ಉಂಟುಮಾಡಿದ ಇನ್ನೊಂದು ನಾಟಕ ನಾನು ನೋಡಿದ್ದು ದೆಹಲಿಯಲ್ಲಿ. ಅದು ಸಾಮುವೆಲ್ ಬೆಕೆಟ್ ನ ಹೆಪ್ಪಿ ಡೇಸ್ ನ ಹಿಂದಿ ಅವತರಣಿಕೆಯಾಗಿತ್ತು. ಮೊದಲ ಅಂಕದಲ್ಲಿ ಮುಖ್ಯ ಪಾತ್ರವಾದ ವಿನ್ನಿ ಸೊಂಟದ ವರೆಗೆ ಹುಗಿದು ಹೋಗಿದ್ದಾಳೆ. ಎರಡನೆಯ ಅಂಕದಲ್ಲಿ ಕತ್ತಿನ ವರೆಗೆ. ಹೀಗಾಗಿ ಹೆಚ್ಚಿನ ಅಭಿನಯ, ಕ್ರಿಯೆ ಸಾಧ್ಯವಿಲ್ಲ. ಸಂಪೂರ್ಣವಾಗಿ ಮನಸ್ಸು ಬಂದಂತೆ ಬಳಸಲು ಅವಳಿಗೆ ನಾಟಕದುದ್ದಕ್ಕೆ ಸಿಕ್ಕುವುದು ಧ್ವನಿ ಮಾತ್ರ. ಮೊದಲ ಅಂಕದಲ್ಲಿ ಸೊಂಟದ ಮೇಲ್ಭಾಗ--ಕೈ ಕತ್ತು ಮುಖ--ಎರಡನೆಯ ಅಂಕದಲ್ಲಿ ಕಣ್ಣು--ಧ್ವನಿಗೆ ಪೂರಕವಾಗಿ ಒದಗುತ್ತವೆ. ಆದರೆ ನಾಟಕವನ್ನು ಪ್ರೇಕ್ಷಕರಿಗೆ ತಲುಪಿಸಲು ನಟಿಗಿದ್ದ ಪ್ರಮುಖ ಸಾಧನವೆಂದರೆ ಧ್ವನಿಯೇ. ಅದೊಂದನ್ನೇ ಬಳಸಿ ಆ ನಟಿ ಎರಡು ಗಂಟೆ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದಳು. ಫ್ಲೇಟ್ ಲೈಟ್. ಬೆಳಗಾದ ನಂತರ ಏರುತ್ತಿರುವ ಸೂರ್ಯನ ಪ್ರಖರ ಬೆಳಕು ಮತ್ತು ಬಿಸಿಲಿನಲ್ಲಿ, ಮೊದಲು ಸೊಂಟದ ವರೆಗೆ ಮತ್ತು ಆನಂತರ ಕತ್ತಿನ ವರೆಗೆ ಮಣ್ಣಲ್ಲಿ ಹುಗಿದುಹೋಗಿರುವ ಅವಳಿಗೆ ಸಾಧ್ಯವಿರುವುದು ಸಹಚರ ತನ್ನನ್ನು  ಕೊಲ್ಲುತ್ತಾನೆಯೇ ಎಂದು ನಿರೀಕ್ಷೆಯಲ್ಲಿ ಕಾಯುವುದು ಮಾತ್ರ.

ನಾನು ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದೆ--ಖುಷಿ ದಿನಗಳು ಎಂಬ ಹೆಸರಿನಲ್ಲಿ. ರಂಗಾಯಣದವರು ಇದನ್ನು ಆಡಿದ್ದರು. ನಂದಿನಿ ಮತ್ತು ಬಿ. ಎನ್. ಶಶಿಕಲಾ ವಿನ್ನಿ ಪಾತ್ರ ಮಾಡಿದ್ದರಂತೆ. ನನಗೆ ಅದನ್ನು ನೋಡಲು ಅನಿವಾರ್ಯ ಕಾರಣಗಳಿಂದ ಆಗಲಿಲ್ಲ. ಆದರೆ ಒಂದೆರಡು ದಿನ ಕಳೆದ ಮೇಲೆ ಹಾಗೇ ಉಳಿಸಿಕೊಂಡಿದ್ದ ಸೆಟ್ಟಿಂಗ್ ನೋಡಿದೆ. ಗುಹೆಯ ಹಾಗೆ ಮಾಡಿ ಸುತ್ತ ಎಲುಬು ಅಸ್ಥಿಪಂಜರ ಮೊದಲಾದ ಸಾವಿನ ವಿವಿಧ ವಿವರಗಳನ್ನು ಪೇರಿಸಿದ್ದರು. ಅಂಥಾ ರೂಪಕಶಕ್ತಿಯ ಆ ಮಹಾನ್ ನಾಟಕಕ್ಕೆ ಹಾಗೆ ಅಷ್ಟೊಂದು ವಾಚ್ಯವಾದ ಸೆಟ್ಟಿಂಗ್ ನನಗೆ ಇಷ್ಟವಾಗಲಿಲ್ಲ. ಹವ್ಯಾಸಿ ರಂಗಭೂಮಿಯಲ್ಲಿ ವಾಚಿಕಕ್ಕೆ ಹೆಚ್ಚು ಪ್ರಾಮುಖ್ಯ ಕೊಡುವ ಸಂಪ್ರದಾಯ ಹೊರಟು ಹೋಗಿದೆ ಅನ್ನಿಸುತ್ತದೆ. ಬೆಕೆಟ್ ನ ಈ ನಾಟಕ ಮಾತನ್ನೇ ಆಧರಿಸಿದ್ದು. ಇಂಥದ್ದೇ ಇನ್ನೊಂದು ನಾಟಕ ಈಸ್ಕೈಲಸ್ ನ ಪ್ರೊಮಿಥಿಯಸ್ ಬೌಂಡ್. ಅಲ್ಲೂ ಕ್ರಿಯೆ ಇಲ್ಲ. ಯಾಕೆಂದರೆ ನಾಟಕದ ಪ್ರಾರಂಭದಲ್ಲೇ  ಸೂಯಿಸ್ ದೇವರ ಆಣತಿಯಂತೆ ಪ್ರೊಮಿಥಿಯಸ್ಸನ್ನು ಕಟ್ಟಿ ಬಿಗಿಯಲಾಗಿದೆ. ಇನ್ನು ಉಳಿದಿರುವುದು ಮಾತು ಮಾತು ಮಾತು. ಮಾತಿನಿಂದಲೇ ಒಂದು ಜಗದ್ವಂದ್ಯ ನಾಟಕವನ್ನು ಆ ನಾಟಕಕಾರ ಕಟ್ಟಿಬಿಡುತ್ತಾನೆ. ಅದನ್ನು ಬರೆದವ ಈಸ್ಕೈಲಸ್ ಇರಲಾರ, ಅವನ ನಂತರದವರು ಯಾರೋ ಬರೆದಿರಬೇಕು ಎಂಬ ಥಿಯರಿ ಇರುವುದರಿಂದ ನಾಟಕಕಾರ ಎಂದು ಸೂಚಿಸಿದ್ದೇನೆ. ಆದರೆ ನಾಟಕ ಎಂದರೇ ಕ್ರಿಯೆ ಎಂಬಂತೆ ವರ್ತಿಸುವ ಕನ್ನಡ ರಂಗಭೂಮಿಗೆ ಪ್ರೊಮಿಥಿಯಸ್ ಬೌಂಡ್  ಒಂದು ಒಳ್ಳೆಯ ಏಂಟಿಡೋಟು. ಹೆಪ್ಪಿ ಡೇಸ್  ಗ್ರೀಕ್ ನಾಟಕದ ಆ ಪರಂಪರೆಯನ್ನು ಮುಂದುವರಿಸುವ ಕೃತಿ. ನನಗೆ ತಿಳಿದಂತೆ ಇಡೀ ಜಗತ್ತಿನ ನಾಟಕ ರಾಶಿಯಲ್ಲಿ  ಕ್ರಿಯೆಯನ್ನು ಸಂಪೂರ್ಣ ಬಿಟ್ಟುಕೊಟ್ಟು--ಚಲನೆಯನ್ನೇ ನಿಶ್ಚಲಗೊಳಿಸಿ--ಬರೆದ ನಾಟಕಗಳು ಇವು ಎರಡೇ.

**********

ಬೋಧಿ ಟ್ರಸ್ಟ್ ನ ಈ ಕೆಳಗಿನ ಪುಸ್ತಕಗಳು ಮಾರಾಟಕ್ಕೆ ಸಿಗುತ್ತವೆ. ನಿಮಗೆ ಬೇಕಾದ ಪುಸ್ತಕದ ಮೊಬಲಗನ್ನು Bodhi Trust, SB Account no.1600101008058, Canara Bank, Yenmur 574328, Dakshina Kannada District, IFSC CNRB0001600--ಇಲ್ಲಿಗೆ ಜಮೆ ಮಾಡಿ ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ--ಇಲ್ಲಿಗೆ ಪತ್ರ ಬರೆದು ಅಥವಾ bodhitrustk@gmail.comಗೆ ಇಮೇಲ್ ಮಾಡಿ ತಿಳಿಸಿದರೆ ಪುಸ್ತಕ ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ.
ಲಭ್ಯವಿರುವ ಪುಸ್ತಕಗಳು:
1. ಸಮಗ್ರ ನಾಟಕಗಳು, ಸಂಪುಟ 2 ರೂ60.00
2. ಸಮಗ್ರ ನಾಟಕಗಳು, ಸಂಪುಟ 3. ರೂ75.00
3. ಮಾತಾಡುವ ಮರ, ಸಮಗ್ರ ಕಾವ್ಯ, 1964-2003. ರೂ100.00
4. ಮುಚ್ಚು ಮತ್ತು ಇತರ ಲೇಖನಗಳು. ರೂ60.00
5. ಹ್ಯಾಮ್ಲೆಟ್. ಶೇಕ್ಸಪಿಯರ್ ಅನುವಾದ. ರೂ50.00

Tuesday, January 18, 2011

ಆತ್ಮಕಥನ 4

(ಇದು 1974-75ರ ಸುಮಾರಿನ ನನ್ನ ಒಂದು ಫೊಟೋ. ಇದನ್ನು ತೆಗೆದವಳು  ಎ. ಶಶಿಕಲಾ. ಹಿಂದಿನ ಕಂತಿನಲ್ಲಿ ಹಾಕಿದ ನನ್ನ ತಂದೆ ಮತ್ತು ಮಗಳ ಫೊಟೋ ಮತ್ತು ಸುರುವಿನ ಕಂತಿನಲ್ಲಿ ಹಾಕಿದ ನನ್ನ ಈಗಿನ ಮನೆ-ಅಂಗಳದ ಫೊಟೋ ತೆಗೆದವಳೂ ಅವಳೇ. ಈ ಕಪ್ಪು ಬಿಳಿ ಚಿತ್ರಗಳು ಕ್ಲಿಕ್ 3 ಎಂಬ ಅತ್ಯಂತ ಸಾಧಾರಣ ಕ್ಯಾಮೆರಾದಲ್ಲಿ ತೆಗೆದವುಗಳು)

ಚೆನ್ನಯ್ಯ ಒಳ್ಳೆಯ ನಟರು. ನ ರತ್ನರ ಎಲ್ಲಿಗೆ? ಯಲ್ಲಿ ಸಣ್ಣವನ ಪಾತ್ರ ಮಾಡಿದ್ದರು. ಅದು ಆಗ--ಸುಮಾರು 1967ರಲ್ಲಿ--ನಾನು ಆ ಬಗೆಯ ಹವ್ಯಾಸಿ ನಾಟಕಗಳನ್ನು ನೋಡಿದ್ದೇ ಸುರು ಆಗಿರುವಾಗ--ಪರಿಣಾಮಕಾರಿ ಅನ್ನಿಸಿತ್ತು. ಕೊನೆಯಲ್ಲಿ ಸಣ್ಣವ ಶಿರಡಿ ಸಾಯಿಬಾಬನ ಹಾಗೆ ಕೂರುವುದು, ತನ್ನ ಪೆದ್ದುತನದಲ್ಲಿಯೇ--ಏನು ಮಾಡುವುದೆಂದು ಗೊತ್ತಾಗದೆ-ಹತ್ತಿರ ಬಂದವನ ಕೆನ್ನೆಗೆ ಬಾರಿಸಿ ಪವಾಡ ಪುರುಷ ಎಂದಾಗಿಬಿಡುವುದು ಈಗಲೂ ನೆನಪಾಗುವ ಪರಿಣಾಮಕಾರಿ ರಂಗಾನುಭವವಾಗಿ ಉಳಿದುಕೊಂಡಿದೆ. ಅವರು ಅಭಿನಯಿಸಿದ ಇನ್ನೊಂದು ನಾಟಕ ನಾನು ನೋಡಿದ್ದು ಮೃಚ್ಛಕಟಿಕ. ಅದರಲ್ಲಿ ಅವರು ಶಕಾರನ ಪಾತ್ರ ವಹಿಸಿದ್ದರು. ಸ್ಪಷ್ಟ ಉಚ್ಛಾರವಿದ್ದ ಅವರು ಶ ಬದಲು ಸ ಹೇಳುತ್ತಿದ್ದುದು ಹೇಳುತ್ತಿದ್ದವನ ಕಾಕ್ಶುವರ್ನೆಸ್ಸಿನಿಂದಾಗಿಯೇ ಪರಿಣಾಮಕಾರಿಯಾಗಿತ್ತು. ಆದರೆ ನಾನು ದೆಹಲಿಯಲ್ಲಿ ಹಬೀಬ್ ತನ್ವೀರ್ ಅವರ ಮಿಟ್ಟೀ ಕಾ ಗಾಡಿ  ಕೂಡಾ ನೋಡಿದ್ದೆ. ಅದು ಎಮರ್ಜೆನ್ಸಿ ಸಮಯದಲ್ಲಿ. ಪ್ರಧಾನ ಮಂತ್ರಿಯ ಮಗ ಸಂಜಯ ಗಾಂಧಿ ಬಲಾತ್ಕಾರದ ನಸ್ಬಂದಿ, ಸ್ಲಮ್ಮುಗಳಿಂದ ಜನರನ್ನು ಒಕ್ಕಲೆಬ್ಬಿಸಿ ಎಲ್ಲೆಲ್ಲಿಯೋ ದೂರದ ಕಾಲೊನಿಗಳಿಗೆ ಕಳಿಸುವುದು ಮೊದಲಾದವುಗಳ ಮೂಲಕ ದರ್ಬಾರು ನಡೆಸುತ್ತಿದ್ದ ಸಮಯ. ಅಂಥಲ್ಲಿ, ಶಕಾರ ರಾಜನ ಆಸ್ಥಾನಕ್ಕ ಬಂದು ಕೂತು ಕುಂಡೆ ತೂಗುತ್ತಾ ಮೈ ಹೂಂ ರಾಜ್ ಕೆ ಸಾಲಾ ಎನ್ನುವುದು ಹೊಸತೇ ಅರ್ಥ ಪಡೆದಿತ್ತು. ಆ ಪ್ರಯೋಗಕ್ಕೆ ಹೋಲಿಸಿದರೆ ಮೈಸೂರಿನ ಈ ಪ್ರಯೋಗ ಒಂದು ಒಳ್ಳೆಯ ಮನರಂಜನೆ ಒದಗಿಸಿತು ಎನ್ನಬಹುದು, ಅಷ್ಟೆ. ಆದರೆ ಇದು ಹಿನ್ನೋಟದಲ್ಲಿ ಈಗ ಹೇಳುವ ಮಾತು. ಆಗ, ಅದನ್ನು ನೋಡಿದ ಸುಮಾರು 1967ನೇ ಇಸವಿ ಹೊತ್ತಿಗೆ, ನಾನು ಮಹಾರಾಜಾ ಕಾಲೇಜಿಗೆ ಬಿ.ಎ. ವಿದ್ಯಾರ್ಥಿಯಾಗಿ ಸೇರಿ ಒಂದು ವರ್ಷ ಆಗಿತ್ತಷ್ಟೆ. ಆ ವರೆಗೆ ನಾನು ನೋಡಿದ್ದು ಯಕ್ಷಗಾನ ಮತ್ತು ಕಂಪನಿ ನಾಟಕಗಳ ಅನುಕರಣೆಯಾದ ಕೆಲವು ನಾಟಕಗಳನ್ನು ಮಾತ್ರ. ಅಥವ ಎ. ಎಸ್. ಮೂರ್ತಿ, ಕೆ. ಗುಂಡಣ್ಣ ಮೊದಲಾದವರ ಕಾಮೆಡಿಗಳು. ಹೊಸ ನಾಟಕಗಳನ್ನು ಓದಿ, ಕೇಳು ಜನಮೇಜಯದಂಥಾ ನಾಟಕಗಳ ರೇಡಿಯೋ ರೂಪ ಕೇಳಿ ಗೊತ್ತಿದ್ದರೂ ಇಂಥಾ ಹೊಸ ನಾಟಕ ರಂಗದ ಮೇಲೆ ನೋಡಿದ್ದು ಇದೇ ಮೊದಲು. ಮೈಸೂರಿನ ಇತರ ಪ್ರೇಕ್ಷಕರಿಗೂ ಇದು ಹೊಸ ರಂಗಾನುಭವವೇ ಆಗಿತ್ತು. ಹೀಗಾಗಿ ಎಲ್ಲ ಪರಿಮಿತಿಗಳ ಮಧ್ಯೆಯೂ ನನ್ನ ಮನಸ್ಸಿಗೆ ಇದು ಹೊಸತು ಸೇರಿಸಿತು.

ಮೈಸೂರಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ನೋಡಿದ್ದರಲ್ಲಿ ಪರಿಣಾಮಕಾರಿ ಎನ್ನಿಸಿದ ನಾಟಕಗಳಲ್ಲಿ ಇವೆರಡು ಮುಖ್ಯವಾದವು. ಇದೇ ಸಂದರ್ಭದಲ್ಲಿ ಎನ್ನೆಸ್ಡಿ ತರಬೇತಿ ಹೊಂದಿದ್ದ ಅಶೋಕ ಮಂದಣ್ಣ ಬರ್ನಾರ್ಡ್ ಶಾನ  ಆರ್ಮ್ಸ್  ಅಂಡ್  ಮ್ಯಾನ್ ಎಂಬೊಂದು ನಾಟಕ ಇಂಗ್ಲಿಷಿನಲ್ಲಿ ಆಡಿದ್ದರು. ಅದರ ಸ್ಟೇಜ್ ಸೆಟ್ಟಿಂಗ್ ಪರಿಣಾಮಕಾರಿ ಆಗಿದ್ದರೂ ನಾಟಕದ ಆಂಗಿಕ, ಮಾತಿನ ಕ್ರಮ ನನಗೆ ತುಂಬಾ ದೂರದ್ದು, ನನ್ನ ಅನುಭವವಾಗಿ ಮಾರ್ಪಡಲು ಸಾಧ್ಯವಾಗದಷ್ಟು ಪ್ರತ್ಯೇಕವಾದದ್ದು ಅನ್ನಿಸಿತು. ಇಂಥದ್ದೇ ಮತ್ತೊಂದು ಪರಕೀಯ ಅನ್ನಿಸಿದ ನಾಟಕವನ್ನು ನಾನು ಬೆಂಗಳೂರಿನ ಬಾಲಭವನದಲ್ಲಿ ನೋಡಿದ್ದೆ--ಸುಮಾರು 1973ರಲ್ಲಿ. ಅದು ಸಾಮುವೆಲ್ ಬೆಕಟ್ ನ ಒಂದು ನಾಟಕದ ರಂಗಪ್ರಯೋಗ. ಇಂಗ್ಲಿಷಿನಲ್ಲಿ. ಇಡೀ ಪ್ರಯೋಗವನ್ನು ಎಷ್ಟು ಯುರೋಪುಮಯವಾಗಿಸಿದ್ದರೆಂದರೆ, ನಮ್ಮವರೇ ಆದ ನಟರು ಮೈಗೆಲ್ಲಾ ಬಿಳಿ ಬಣ್ಣ ಬಳಿದುಕೊಂಡು ಯುರೋಪಿನವರಂತೆ ಕಾಣಲು ಪ್ರಯತ್ನಿಸಿದ್ದರು. ನಡಿಗೆ, ಉಚ್ಛಾರಗಳು ಯುರೋಪಿನ ಅನುಕರಣೆ. ತುಂಬಾ ಕೃತಕ ಅನ್ನಿಸಿತು. ನಟನೊಬ್ಬ ತನ್ನ ವ್ಯಕ್ತಿತ್ವ ಬಳಸಿಯೇ ಅಭಿನಯಿಸಬೇಕು; ವ್ಯಕ್ತಿತ್ವ ಮರೆಸಿ ಅಲ್ಲ; ಮೆರೆಸಿಯೂ ಅಲ್ಲ. ಇದನ್ನು ಅನುವಾದಕ್ಕೆ  ಹೋಲಿಸಬಹುದು. ಮೂಲಕೃತಿಯನ್ನು ಹೇಗಿದೆಯೋ ಹಾಗೆಯೇ ಪದಶಃ ಅನುವಾದಿಸಿ ಇನ್ನೊಂದು ಭಾಷೆಗೆ ತರುತ್ತೇನೆ ಎನ್ನುವ ಸಾಹಸ ಪರಿಣಾಮಕಾರಿ ಆಗಲಾರದು. ಒಳ್ಳೆಯ ಅನುವಾದ ಮೂಲಕೃತಿ, ಅನುವಾದವಾಗುವ ಭಾಷೆಯ ಜಾಯಮಾನ, ಹಾಗೂ ಅನುವಾದಕನ ವ್ಯಕ್ತಿತ್ವ--ಈ ಮೂರೂ ಸೇರಿದ ಸಂಧಿಬಿಂದುವಿನಲ್ಲಿ ಸಂಭವಿಸುತ್ತದೆ. ನಟನೆಯೂ ಹಾಗೆಯೇ: ಮೂಲಕೃತಿ--ಅಥವಾ ಲೇಖಕ ಚಿತ್ರಿಸಿದ ಪಾತ್ರದ ವ್ಯಕ್ತಿತ್ವ--ಮತ್ತು ನಟನ ವ್ಯಕ್ತಿತ್ವಗಳೆರಡೂ ಸೇರಿದ ಸಂಧಿಬಿಂದುವಿನಲ್ಲಿ ಒಳ್ಳೆಯ ನಟನೆ ಸಂಭವಿಸುತ್ತದೆ.

**********

ಬೋಧಿ ಟ್ರಸ್ಟ್ ಪುಸ್ತಕಗಳು ಮಾರಾಟಕ್ಕೆ ಸಿಗುತ್ತವೆ. ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust, SB Account No.1600101008058, Canara Bank, Yenmur 574328, Dakshina Kannada District, IFSC CNRB0001600 ಇಲ್ಲಿಗೆ ಜಮೆ ಮಾಡಿ ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ--ಇಲ್ಲಿಗೆ ಅಂಚೆ ಮೂಲಕ ಅಥವಾ bodhitrustk@gmail.comಗೆ ಇಮೇಲ್ ಮೂಲಕ ತಿಳಿಸಿದರೆ ಪುಸ್ತಕ ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ. ಇವು ಮಾರಾಟಕ್ಕೆ ಸಿಗುವ ಪುಸ್ತಕಗಳು:
1. ಸಮಗ್ರ ನಾಟಕಗಳು, ಸಂಪುಟ 2. ರೂ60.00
2. ಸಮಗ್ರ ನಾಟಕಗಳು, ಸಂಪುಟ 3. ರೂ75.00
3. ಹ್ಯಾಮ್ಲೆಟ್. ಅನುವಾದ. ರೂ50.00
4. ಮುಚ್ಚು ಮತ್ತು ಇತರ ಲೇಖನಗಳು. ರೂ50.00
5. ಮಾತಾಡುವ ಮರ, ಸಮಗ್ರ ಕಾವ್ಯ, 1964-2003. ರೂ100.00

Monday, January 17, 2011

ಆತ್ಮಕಥನ 3

(ಈ ಫೊಟೋ ನನ್ನ ತಂದೆ ಮತ್ತು ನನ್ನ ಮಗಳನ್ನು ತೋರಿಸುತ್ತದೆ. ಸುಮಾರು 1978ನೇ ಇಸವಿಯ ಫೊಟೋ. ದೆಹಲಿಯ ನನ್ನ ಮನೆಯಲ್ಲಿ. ಎರಡನೆಯ ಫೊಟೋ ಚೆನ್ನಯ್ಯನವರ ಕವನ ಸಂಗ್ರಹದ ಮುಖಚಿತ್ರ ಹಾಗೂ ಹಿಂಬದಿ. ಇದು ನವೆಂಬರ್ 1964ರಲ್ಲಿ ಲಹರಿ ಬುದ್ಧಿ ಪ್ರಚಾರ ಯೋಜನೆಯಿಂದ  ಪ್ರಕಟವಾದ ಪುಸ್ತಕ. ಇದಕ್ಕೆ ರಾಜೀವ ತಾರಾನಾಥರ ಮುನ್ನುಡಿ ಇತ್ತು. ಇದರಲ್ಲಿ "ಚೆನ್ನಯ್ಯನವರ ಸೋಲುಗಳೂ ಆಸಕ್ತಿಯನ್ನು ಕೆರಳಿಸುತ್ತವೆ. ಏಕೆಂದರೆ, ಅವುಗಳು ಅವರ ಸಫಲತೆಗಳ ಅತಿರೇಕದಿಂದ ಉಂಟಾದಂಥವು" ಎಂಬಂಥಾ ವಾಕ್ಯಗಳಿವೆ. ಇಂದು ಈ ಬಗೆಯ ಸೂಕ್ಷ್ಮ ವ್ಯತ್ಯಾಸಗಳನ್ನು ಮಾಡಿ ಯಾರಾದರೂ ಬರೆದರೆ "ಗೊಂದಲಗೊಂಡಿದ್ದಾರೆ, ಕಂಫ್ಯೂಸ್ಡ್ ಮೈಂಡ್" ಎಂಬ ಹಣೆಪಟ್ಟಿ ನಿಶ್ಚಿತ.)

ಚೆನ್ನಯ್ಯನವರ ಕವನಗಳು ಈ ನಲುವತ್ತು ವರ್ಷಗಳಲ್ಲೇ ಹಳತಾಗಿವೆ ಅನ್ನಿಸುತ್ತದೆ. ಜಯದೇವ ಈಗಲೂ ಕಾವ್ಯಪ್ರೇಮಿಗಳನ್ನು ಆಕರ್ಷಿಸಲು ಅವನ ಕಾವ್ಯದ ಲಯ, ಪದಬಂಧ, ವಾತಾವರಣ ಸೃಷ್ಟಿ, ನಾಟಕೀಯತೆ ಕಾರಣ ಇರಬಹುದು.ಲಲಿತ ಲವಂಗ ಲತಾ ಪರಿಶೀಲನ ಕೋಮಲ ಮಲಯ ಸಮೀರೇ/ನಕುರು ನಿತಂಬಿನಿ ಗಮನ ವಿಳಂಬನ ಕೂಜಿತ ಕುಂಜ ಕುಟೀರೇ ಅಥವಾ ಚಂದನ ಚರ್ಚಿತ ನೀಲ ಕಲೇವರ ಪೀತ ವಸನ ಮಾಲಿ ಎಂಬಂಥಾ ಸಾಲುಗಳನ್ನು ಒಮ್ಮೆ ಓದಿದ ನಂತರ ಯಾರು ಮತ್ತೆ ಮತ್ತೆ ಮೆಲುಕು ಹಾಕದಿರಲು ಸಾಧ್ಯ? ಕನ್ನಡದಲ್ಲಿ ಅಡಿಗರು ಇದೇ ಬಗೆಯ ಲಯ ಮತ್ತು ವಾತಾವರಣ ಸೃಷ್ಟಿಗಾಗಿ ತಮ್ಮ "ಕೃಷ್ಣನ ಕೊಳಲು" ಪದ್ಯದಲ್ಲಿ ಪ್ರಯತ್ನಿಸಿದ್ದರು. ಶ್ಯಾಮತಮಾಲಚ್ಛಾಯೆ/ಮೈ ಚಾಚಿದೆ ಚಂದ್ರಿಕಾ ಮಾಯೆ/ಮಸುಕು ತಾರೆ ತಿಂಗಳಲ್ಲಿ ಬೇಯೆ/ಕಸಕು ಗಾಳಿ ಕಸಿವಿಸಿಗೆದೆ ಸೀಯೆ/ಸುತ್ತುವ ಮುತ್ತುವ ಎಲೆ ಸೆರಗೆತ್ತುವ/ಸಮೀರ ಸಂತತ ಹಾಯೆ/ತಾರೆ ತೀರದಲಿ ಮರಿ ಮುರಿ ಮೋಡ/ಬೆಳಕು ಚಿಮುಕಿನಲಿ ತೋಯೆ/ದಡಕದ ಕದಕೆ ಕೈ ಹಚ್ಚಿ ಯಮುನೆ ನಿಶ್ಶಬ್ದ ನಿಂತು ಕಾಯೆ/ಬೆಳ್ಳಿ ಮುಲಾಮನು ತೊಟ್ಟು ಮರವು ಗಿಡ ಬಳ್ಳಿ ಕುಣಿದು ತಲೆಯೊಲೆಯೆ/ದಿಗಂತದಾಚೆಗು ಸ್ವಪ್ನಮಾದಕ ಜ್ವಾಲೆ ಜಾಲ ಅಲೆಯೆ/ತುಟಿಯ ಕಚ್ಚಿ ಮಾಧವಿ ನಸು ಸುಯ್ಯೆ/ಕಣ್ಣು ಮಿಟುಕಿಸಿತು ತಾರೆ ಎಂಬಂಥಾ ಸಾಲುಗಳು ಜಯದೇವನ ಹತ್ತಿರ ಹತ್ತಿರ ಬರುವಂಥವು. ಜಯದೇವನ ಪ್ರಭಾವದಲ್ಲಿ ರೂಪುಗಂಡಂಥವೂ ಹೌದು.

ಕಾಮಿ ಸಂಗ್ರಹದ ನಂತರ ಚೆನ್ನಯ್ಯ ಆಮೆ ಎಂಬ ಕವನ ಸಂಗ್ರಹ, ಎಲ್ಲರಂಥವನಲ್ಲ ನನ ಗಂಡ, ಹುಯ್ಯೆಲವೊ ಡಂಗುರವೊ ಎಂಬ ಎರಡು ನಾಟಕಗಳು, ಒಂದು ವಿಮರ್ಶಾಸಂಗ್ರಹ ಪ್ರಕಟಿಸಿದರು. ಎಲ್ಲವೂ ಪರವಾ ಇಲ್ಲ ಎಂಬುದಕ್ಕಿಂತ ಹೆಚ್ಚಿನ ಮಟ್ಟ ಏರಲಿಲ್ಲ. ಕ್ರಮೇಣ ಅವರು ಬರೆಯುವುದನ್ನು ಕಮ್ಮಿ ಮಾಡಿದರು; ಹೆಚ್ಚು ಕಡಿಮೆ ನಿಲ್ಲಿಸಿದರು ಎಂದೇ ಹೇಳಬಹುದು. ಹೊಸತನ್ನು ಕಾಣುವ, ಹೊಸ ವಿಚಾರ ಆಸಕ್ತಿಗಳ ಮೂಲಕ ಮತ್ತೆ ಮತ್ತೆ ತನ್ನನ್ನು ನವೀಕರಿಸಿಕೊಳ್ಳುವ ಶಕ್ತಿಯ ಅಭಾವ ಅವರಲ್ಲಿ ಮತ್ತೆ ಮತ್ತೆ ಕಾಣುತ್ತದೆ. ನವನವೋನ್ಮೇಷಶಾಲಿನೀ ಪ್ರತಿಭಾ ಎಂಬ ಆನಂದವರ್ಧನನ ಮಾತನ್ನು ಒಪ್ಪಿಕೊಂಡರೆ, ದೊಡ್ಡ ಮಟ್ಟದ ಪ್ರತಿಭೆಯ ಅಭಾವ ಕಾಣುತ್ತದೆ ಎಂದು ಹೇಳಬೇಕಾಗುತ್ತದೆ. ತಾಂತ್ರಿಕ ಕೌಶಲ್ಯವನ್ನು ದೊಡ್ಡ ಮಟ್ಟದಲ್ಲಿ ಸಾಧಿಸಿಕೊಳ್ಳುವ ಮೊದಲೇ, ತನ್ನನ್ನು ಕಾಡುವ ಅನುಭವ ವಿಚಾರಗಳ ಶೋಧವನ್ನು ಆಳವಾಗಿ ಪ್ರಾರಂಭಿಸುವ ಮೊದಲೇ ಅವರು ಬರೆವಣಿಗೆಯಲ್ಲಿ ಆಸಕ್ತಿ ಕಳೆದುಕೊಂಡರು ಅನ್ನಿಸುತ್ತದೆ. ಆದರೂ ಅವರ ಕವನಗಳು ಪ್ರಭಾವ ಬೀರಿವೆ--ಮುಖ್ಯವಾಗಿ ಕೃಷ್ಣ ಆಲನಹಳ್ಳಿಯ ಮಣ್ಣಿನ ಹಾಡು ಸಂಗ್ರಹದ ಕವನಗಳ ಮೇಲೆ. ಹಾದರ--ಅಥವಾ, ಮನೆ ಹೊರಗೆ ಪರಪುರುಷನ ಜೊತೆ ಗೃಹಿಣಿಯೊಬ್ಬಳು ನಡೆಸುವ ಸಂಬಂಧ--ಸಂಪ್ರದಾಯದ ವಿರುದ್ಧ, ಪಾತಿವ್ರತ್ಯದ ಹೆಸರಿನಲ್ಲಿ ನಡೆಯುವ ಬಂಧನದ ವಿರುದ್ಧ ನಡೆಸುವ ಬಂಡಾಯ ಎಂಬುದು ಆಲನಹಳ್ಳಿಯ ಈ ಸಂಗ್ರಹದ ಕೆಲವು ಕವನಗಳಲ್ಲಿ ಕಾಣುವ ಆಶಯವೂ ಆಗಿದೆ. ಇದೂ ಸರಳ ದೃಷ್ಟಿಕೋನವೇ. ಸಂಸಾರದ ಒಳಗೇ ಅನೇಕ ಬಂಡಾಯದ ಮಾರ್ಗಗಳನ್ನು ಗೃಹಿಣಿಯೊಬ್ಬಳು ಹುಡುಕಿಕೊಳ್ಳುವುದೇ ಹೆಚ್ಚು. ಕೃಷ್ಣನಿಗೂ ಬಹುಶಃ ಮುಂದೆ ಹಾಗೆ ಅನ್ನಿಸಿರಬಹುದು--ತನ್ನ ಕಾದಂಬರಿಗಳಲ್ಲಿ ಹೆಚ್ಚು ವಿಸ್ತಾರವಾದ ಅನುಭವ ಶೋಧಕ್ಕೆ ಪ್ರಯತ್ನಿಸಿದ್ದ. ಆದರೆ ಅವನಿಗೆ ತನ್ನ ಕೆರಿಯರಿನ ಪ್ರಾರಂಭದ ವರ್ಷಗಳಲ್ಲಿ ಚೆನ್ನಯ್ಯನವರ ಬಗ್ಗೆ ವಿಶೇಷ ಅಭಿಮಾನ ಇತ್ತು. ಆತ ಮಹಾರಾಜಾ ಕಾಲೇಜಿನಲ್ಲಿ ಅವರ ವಿದ್ಯಾರ್ಥಿಯಾಗಿದ್ದದ್ದು ಮಾತ್ರವಲ್ಲ--ತನ್ನ ಪತ್ರಿಕೆ ಸಮೀಕ್ಷಕಕ್ಕೆ ಅವರನ್ನು ಸಂಪಾದಕ ಸಲಹೆಗಾರರನ್ನಾಗಿಯೂ ನೇಮಿಸಿಕೊಂಡಿದ್ದ.

(ಮುಂದುವರಿಯುವುದು)

********************************************



ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ ಪ್ರಕಟಿಸಿದ ಈ ಪುಸ್ತಕಗಳು ಮಾರಾಟಕ್ಕೆ  ಸಿಗುತ್ತವೆ. ನಿಮಗೆ ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust, SB Account no. 1600101008058, Canara Bank, Yenmur 574328, Dakshina Knnada District, Karnataka, IFSC CNRB0001600--ಇಲ್ಲಿಗೆ ಜಮೆ ಮಾಡಿ ಬೋಧಿ ಟ್ರಸ್ಟ್ ವಿಳಾಸಕ್ಕೆ ಅಂಚೆ ಮೂಲಕ ಅಥವಾ bodhitrustk@gmail.comಗೆ ಇಮೇಲ್ ಮೂಲಕ ತಿಳಿಸಿದರೆ ಪುಸ್ತಕಗಳನ್ನು ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ.
1. ಸಮಗ್ರ ನಾಟಕಗಳು, ಸಂಪುಟ 2. ಬೆಲೆ ರೂ60.00
2. ಸಮಗ್ರ ನಾಟಕಗಳು, ಸಂಪುಟ 3. ಬೆಲೆ ರೂ75.00
3. ಮುಚ್ಚು ಮತ್ತು ಇತರ ಲೇಖನಗಳು. ರೂ60.00
4. ಹ್ಯಾಮ್ಲೆಟ್. ಶೆಕ್ಸ್ಪಿಯರ್ ಅನುವಾದ. ರೂ50.00
5. ಮಾತಾಡುವ ಮರ, ಸಮಗ್ರ ಕಾವ್ಯ, 1964-2003. ರೂ100.00
ಎಲ್ಲಾ ಪುಸ್ತಕಗಳ ಲೇಖಕ ನಾನು, ರಾಮಚಂದ್ರ ದೇವ.

Friday, January 14, 2011

ಆತ್ಮಕಥನ 2

(ಮೊದಲ ಚಿತ್ರದಲ್ಲಿರುವುದು ನನ್ನ ತಂದೆ ದೇವ ರಾಘವೇಂದ್ರಯ್ಯ, ತಾಯಿ ದೇವ ಹೊನ್ನಮ್ಮ, ಅಜ್ಜಿ--ಅಮ್ಮಮ್ಮ--ಪೈಲೂರು ಕಾವೇರಮ್ಮ. ನಿಂತಿರುವ ಹುಡುಗ ನಾನು. ಅಮ್ಮ ಎತ್ತಿಕೊಂಡಿರುವುದು ನನ್ನ ತಮ್ಮ ಸತ್ಯನಾರಾಯಣ ಮೂರ್ತಿಯನ್ನು. ನನಗೆ ಆಗ ಸುಮಾರು ಮೂರೂವರೆಯಿಂದ ನಾಲ್ಕು ವರ್ಷ. ಈ ಫೊಟೋ ತೆಗೆದವರು ಗೋಪಾಲಕೃಷ್ಣ ಗೋಳ್ತಜೆ ಎಂಬ ಕಲ್ಮಡ್ಕ ಗ್ರಾಮ ವಾಸಿ. ಈಗ ದಿವಂಗತ. ಇದು ಸುಮಾರು 1952ರ ಫೊಟೋ. ಇನ್ನೊಂದು ಪೂರ್ಣಚಂದ್ರ ತೇಜಸ್ವಿ ಮತ್ತು ಬಿ. ಎನ್. ಶ್ರೀರಾಮ ಪ್ರಕಟಿಸುತ್ತಿದ್ದ ಕಾವ್ಯಪತ್ರಿಕೆ ಲಹರಿಯ ರಕ್ಷಾಪುಟ.)

ಎಚ್. ಎಂ.ಚೆನ್ನಯ್ಯನವರ ಕಾಮಿ ಎಂದರೆ ಬೆಕ್ಕಿನ ಹೆಸರೂ ಹೌದು ಕಾಮುಕ ಎಂದೂ ಹೌದು. ಗೃಹಣಿಯೊಬ್ಬಳಿಗೆ ವಿವಾಹಬಾಹಿರ ಪ್ರಣಯದ ಬಗ್ಗೆ, ಅಲ್ಲಿ ಕಾಮತೃಪ್ತಿಯನ್ನು ಪಡೆಯುವುದರ ಬಗ್ಗೆ ಇರುವ ಸಂಭ್ರಮ ಸಹಜ ಎಂಬುದು ಚೆನ್ನಯ್ಯನವರ ಈ ಕವನಗಳ ನಿಲುವು. ಪ್ರಕಟವಾದ ಸುರುವಿನಲ್ಲಿ ಇದಕ್ಕೆ ಉತ್ಸಾಹದ ಸ್ವಾಗತ ಸಿಕ್ಕಿತ್ತು. ಅದರ ಬಗ್ಗೆ ಆಗ ಯುವ ಲೇಖಕರಲ್ಲಿ ಅಗ್ರಗಣ್ಯರೆಂದು ಹೆಸರು ಮಾಡಿದ್ದ ಅನಂತಮೂರ್ತಿ ಮತ್ತು ಲಂಕೇಶ್ ಲೇಖನ ಬರೆದರು. ಅವು ಶ್ರೀಕೃಷ್ಣ ಆಲನಹಳ್ಳಿಯ ಸಂಪಾದಕತ್ವದ ಸಮೀಕ್ಷಕ ಹಾಗೂ ಬಾಕಿನರ ಸಂಪಾದಕತ್ವದ ಕವಿತಾ  ತ್ರೈಮಾಸಿಕಗಳಲ್ಲಿ ಪ್ರಕಟವಾಗಿದ್ದವು.ಅಡಿಗರ ಸಾಕ್ಷಿಯ ಪ್ರಾಯೋಗಿಕ ಸಂಚಿಕೆಯಲ್ಲಿ ಪ್ರಕಟವಾಗಿದ್ದ  ಕೆಲವು ಕವನಗಳ ಮೂಲಕ ಅವರು ಹುಟ್ಟಿಸಿದ್ದ ನಿರೀಕ್ಷೆ ಈ ಸಂಕಲನದ ಮೂಲಕ ನಿಜವಾಗಿದೆ ಎಂಬ ಭಾವನೆ ಹುಟ್ಟಿತ್ತು. (ಸಾಕ್ಷಿಯಲ್ಲಿ ಅವರ ಹೆಸರು ಎಸ್. ಚೆನ್ನಯ್ಯ ಎಂದು ಪ್ರಕಟವಾಗಿತ್ತು. ಆಗ ಮೈಸೂರಿನಲ್ಲಿ ಸಾಹುಕಾರ ಚೆನ್ನಯ್ಯ ಎಂಬ ಹೆಸರಿನ ಒಬ್ಬರು ರಾಜಕಾರಣಿ ಇದ್ದರು. ಅಡಿಗರು ನಾನೇ ಅವ ಎಂದು ತಿಳಿದುಕೊಂಡಿರಬಹುದು ಎಂದು ಕವಿ ಚೆನ್ನಯ್ಯ ಜೋಕ್ ಮಾಡುತ್ತಿದ್ದರು. ಆದರೆ ಆ ಸಾಧ್ಯತೆ ಕಮ್ಮಿ. ಅಡಿಗರಿಗೆ ರಾಜಕಾರಣಿಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಎಸ್ ಎಂದು ಇನಿಷಿಯಲ್ ಬಿದ್ದದ್ದು ಪರಮೋಷದಿಂದ ಇರಬೇಕು. ಅಲ್ಲದೆ ಸಾಕ್ಷಿಯ ಈ ಸಂಚಿಕೆಯ ಪ್ರೂಫ್ ನೋಡಲು ನಾನು ಅಡಿಗರಿಗೆ ಸಹಾಯ ಮಾಡಿದೆ ಎಂದು ಸುಮತೀಂದ್ರ ನಾಡಿಗರು ಬರೆದುಕೊಂಡಿದ್ದಾರೆ. ಅವರಿಂದಾದ ತಪ್ಪೂ ಇರಬಹುದು.)

ಇಂದು ಕಾಮಿಯ ಈ ಕವನಗಳು ತುಂಬಾ ಸರಳ ಅನ್ನಿಸುತ್ತವೆ. ಮೊದಲನೆಯದಾಗಿ ಕದ್ದು ಮುಚ್ಚಿ ಕಾಮತೃಪ್ತಿ ಪಡೆಯಬೇಕಾದ ಗೃಹಿಣಿಯ ಚಿತ್ರವೇ ಬದಲಾಗಿದೆ. ಚೆನ್ನಯ್ಯ ತಮ್ಮ ಕವನಗಳಲ್ಲಿ ಚಿತ್ರಿಸಿದ ಮಧ್ಯಮ ವರ್ಗದ ಆ ಗೃಹಿಣಿ ಈಗ ಮನೆಯಲ್ಲಿಯೇ ಇರುವವಳಾಗಿರದೆ ಹೊರಗೆ ಹೋಗಿ ಗಂಡಸಿಗೆ ಸಮಾನವಾಗಿ ದುಡಿದು ತರುವವಳಾಗಿದ್ದಾಳೆ. ಕಾಮತೃಪ್ತಿಯನ್ನು ಸಂಸಾರದ ಅಂಗವಾಗಿ ಗಂಡನಿಂದ ಪಡೆಯುತ್ತಾಳೆ; ಅದು ಸಾಧ್ಯವಾಗದಾಗ ಸಂಸಾರ ಬಿಟ್ಟು ಹೊರನಡೆಯುತ್ತಾಳೆ. ಮಧ್ಯಮವರ್ಗದ ಸಮಾಜವೂ ಇದನ್ನು ಹೆಚ್ಚುಹೆಚ್ಚಾಗಿ ಒಪ್ಪಿಕೊಳ್ಳುತ್ತಿದೆ. ಎರಡನೆಯದಾಗಿ, ಹೀಗೆ ಕದ್ದು ಮುಚ್ಚಿ ವ್ಯವಹಾರ ನಡೆಸುವುದು ಗಂಡಿಗೂ ಹೆಣ್ಣಿಗೂ ಕೂಡಿಯೇ ಅಪಮಾನಕರ ಎಂಬ ಅಂಶವನ್ನೇ ಚೆನ್ನಯ್ಯನವರ ಕಾವ್ಯ ಪರಿಗಣಿಸುವುದಿಲ್ಲ. ಮೂರನೆಯದಾಗಿ, ಕಾಮಿಯ ಕವನಗಳು ಗಂಡು ಹೆಣ್ಣಿನ ಸಂಬಂಧದ ಬಗ್ಗೆ, ಕಾಮಕ್ಕೆ ಜೀವನದಲ್ಲಿ ಇರುವ ಮತ್ತು ಇರಬೇಕಾದ ಅನಿವಾರ್ಯ ಪ್ರಾಮುಖ್ಯತೆಯ ಬಗ್ಗೆ ಇವೆ. ಇದೇ ಗಂಡು ಹೆಣ್ಣು ಸಂಬಂಧದ ಬಗ್ಗೆ ಬರೆದಿರುವ ಅನಂತಮೂರ್ತಿ ಕತೆಗಳು, ಸಂಸ್ಕಾರ  ಕಾದಂಬರಿ ಬೇರೆ ಬೇರೆ ಸಾಮಾಜಿಕ, ತಾತ್ವಿಕ ಆಯಾಮಗಳನ್ನು ಪಡೆಯುತ್ತವೆ. ಹಾದರದ ಕತೆಯೆಂದೂ ಪರಿಗಣಿಸಬಹುದಾದ ಟಾಲ್ಸ್ಟಾಯ್ನ ಅನ್ನಾ ಕೆರೆನಿನಾದ ಅನುಭವ ವಿಸ್ತಾರ ಆಳಗಳ ಮುಂದೆ ಇವು ಏನೇನೂ ಅಲ್ಲ. ಚೆನ್ನಯ್ಯನವರ ಕವನಗಳು ಪ್ರಕಟವಾದ ಅರುವತ್ತರ ದಶಕದಲ್ಲಿ ಮೈಸೂರಿನ--ಮತ್ತು ಒಟ್ಟು ಕನ್ನಡದ--ಸಾಹಿತ್ಯಿಕ ವಲಯದಲ್ಲಿ ವಿಸ್ತಾರವಾಗಿ ಚರ್ಚೆಯಾಗುತ್ತಿದ್ದ ಡಿ. ಎಚ್. ಲಾರೆನ್ಸಿನ ಕಾಮದ ಕುರಿತ ದೃಷ್ಟಿಕೋನವೂ ಸಂಕೀರ್ಣವಾದದ್ದು. ಔದ್ಯೋಗೀಕರಣದಿಂದ, ಪೊಳ್ಳು ಪ್ರತಿಷ್ಠೆಯ ಕಾರಣದಿಂದ ಜಡಗೊಂಡ ಜೀವಿಗಳಿಗೆ ಚೈತನ್ಯ ಕೊಡುವ ಅನುಭವವಾಗಿ ಕಾಮ ಅವನಲ್ಲಿ ಕಾಣಿಸಿಕೊಳ್ಳುತ್ತದೆ. ಜೀವಚೈತನ್ಯ ಕೊಡದ, ಆರೋಗ್ಯಕರವಲ್ಲದ ವಿಕೃತ ಕಾಮವನ್ನು ಈ ಕಾರಣಕ್ಕಾಗಿಯೇ ಅವನು ಖಂಡಿಸುತ್ತಾನೆ. ಉದಾಹರಣೆಗೆ ಅವನ "ಟಿಕೆಟ್ ಪ್ಲೀಸ್" ಎಂಬ--ಅವನ ಸಾಹಿತ್ಯಿಕ ಜೀವನದ ಮೊದಲ ವರ್ಷಗಳಲ್ಲಿ ಬರೆದ--ಕತೆ ನೋಡಬಹುದು. ಅಲ್ಲಿ ವಿಷಯಲಂಪಟನಾಗಿ ಹುಡುಗಿಯರ ಮೇಲೆ ಆಸಕ್ತಿ ತೋರಿಸುವ ಒಬ್ಬ ಗಂಡಸು ಮತ್ತು ತಾನು ಸಂಬಂಧ ಹೊಂದಿದವನ ಇಡೀ ವ್ಯಕ್ತಿತ್ವವನ್ನೇ ಪ್ರೀತಿಸಬಯಸುವ ಹುಡುಗಿ--ಇವರಿಬ್ಬರ ಮಧ್ಯೆ ಕಾಂಟ್ರಾಸ್ಟ್ ಇದೆ. ಕೊನೆಗೆ ತನ್ನ ವಿಷಯಲಂಪಟತೆಯ ಕಾರಣದಿಂದಾಗಿ ಆತ ಹುಡುಗಿಯರಿಂದ ಅಪಮಾನ ಅನುಭವಿಸಬೇಕಾಗುತ್ತದೆ. ಅಂತಿಮವಾಗಿ ಗಂಡು ಹೆಣ್ಣಿನ  ಮಧ್ಯೆ ಉಳಿಯುವುದು ಪ್ರೀತಿಯ ಬದಲು ಕಹಿ ಭಾವನೆ ಮಾತ್ರ. ವಿಕೃತ ಕಾಮ ಅಂತಿಮವಾಗಿ ಎಲ್ಲಾ ಹೆಂಗಸರಿಂದ, ಅರ್ಥಪೂರ್ಣ ಸಂಬಂಧಗಳಿಂದ ಆ ಗಂಡುಸನ್ನು ದೂರ ಮಾಡಿದೆ. ಆದ್ದರಿಂದಲೇ ಲಾರೆನ್ಸ್ ಕಾಮದ ಬಗ್ಗೆ ಮಾತ್ರ ಬರೆದ ಎನ್ನುವುದು ಸರಿಯಲ್ಲ. ಯಾವುದು ಅರ್ಥಪೂರ್ಣ ಜೀವನ, ಯಾಂತ್ರಿಕತೆಯ ಮಧ್ಯೆ ಜೀವಚೈತನ್ಯ ಉಳಿಸಿಕೊಳ್ಳುವುದು ಹೇಗೆ ಎನ್ನುವುದು ಅವನ ಕಾಳಜಿಯಾಗಿತ್ತು. ಅರ್ಥಪೂರ್ಣ ಗಂಡು ಹೆಣ್ಣಿನ ಸಂಬಂಧ, ಅದಕ್ಕೆ ಅನುಕೂಲವಾಗಿ ಒದಗಿ ಬರುವ ಕಾಮ ಹೀಗೆ ಜೀವಚೈತನ್ಯ ಉಳಿಸಿಕೊಳ್ಳುವ ಮಾರ್ಗವಾಗಿ ಕಂಡದ್ದರಿಂದ ಅವ ಅದಕ್ಕೆ ಒತ್ತುಕೊಟ್ಟ, ಅಷ್ಟೆ. ಅನುಭವದ ಒಂದು ಮಗ್ಗುಲಿನ ಬಗ್ಗೆ ಮಾತ್ರ ಇರುವ ಚೆನ್ನಯ್ಯನವರ ಕವನಗಳು ಈ ದೃಷ್ಟಿಯಿಂದ ಸರಳ. ಅವರ ಇಡೀ ಸಂಗ್ರಹದಲ್ಲಿ ನನಗೆ "ಲಕ್ಕಜ್ಜಿ" ಎಂಬ ಕವನವೇ ಈಗ ನೆನೆಸಿಕೊಂಡಾಗ ಹೆಚ್ಚು ಒಳ್ಳೆಯ ಕವನ ಅನ್ನಿಸುತ್ತದೆ. ಅದು ಕಾವ್ಯರೂಪದಲ್ಲಿ ಬರೆದ ಒಂದು ವ್ಯಕ್ತಿಚಿತ್ರಣ.

ಜಯದೇವನ ಗೀತಗೋವಿಂದವೂ ಹಾದರದ ಕತೆಯೇ--ಆದರೆ ಹಾಗೆ ಕರೆಯಲು ಹೆದರಿಕೆಯಾಗುವಷ್ಟು ಉತ್ಕಟ ಪ್ರೇಮದ ಕತೆ. ಆ ಕವಿತೆ ಓದುತ್ತಿದ್ದಂತೆ ಈಗಾಗಲೇ ಗೃಹಿಣಿಯಾಗಿರುವ ರಾಧೆ ಮತ್ತು ಅವಳಿಗಾಗಿ ಹಂಬಲಿಸುತ್ತಿರುವ ಕೃಷ್ಣ ಪರಸ್ಪರ ಸೇರದಿದ್ದರೆ ಪ್ರಕೃತಿಗೇ ಏನೋ ಅಪಚಾರ ಮಾಡಿದಂತಾಗುತ್ತದೆ ಅನ್ನಿಸುತ್ತದೆ. ಹೊಳೆ ಹರಿಯುತ್ತಿದೆ; ಮಾವಿನ ಮರ ಮಲ್ಲಿಗೆಯ ಬಯಕೆಯಲ್ಲಿ  ಕಂಪಿಸುತ್ತಾ ನಿಂತಿದೆ; ಕೃಷ್ಣನ ಕೊಳಲಿನ ಗಾನ ಕೇಳುತ್ತಿದೆ; ಬೆಳುದಿಂಗಳಿನ ಬೆಳಕಿನಲ್ಲಿ ಮರ ಗಿಡ ಬಳ್ಳಿಗಳು ತೊಯ್ದಿವೆ; ರಾಧೆ ಸಿಟ್ಟಾದಳೇ ಎಂದು ಕೃಷ್ಣನ ಮನಸ್ಸು, ಇಷ್ಟೊಂದು ಯುವತಿಯರ ಮಧ್ಯೆ ಕೃಷ್ಣ ತನ್ನನ್ನು ನೆನಪಿಟ್ಟುಕೊಂಡಿರಬಹುದೇ ಎಂದು ರಾಧೆಯ ಮನಸ್ಸು ಕ್ಷೋಭೆಗೊಂಡಿದೆ.  ಇಂಥಾ ರಾತ್ರಿಯಲ್ಲಿ ಈ ಉತ್ಕಟ ಪ್ರೇಮಿಗಳು ಕೂಡದೇ ಬೇರೆ ಬೇರೆ ಉಳಿದರೆ ಪ್ರಕೃತಿ ಪಿಶಾಚಿಗಳ ನರ್ತನದಿಂದ, ಹೊಂಚಿ ಕೂತ ಕೊಲೆಗಡುಕರ ಕುತಂತ್ರದಿಂದ ತನ್ನ ತಳಮಳವನ್ನು ತಣಿಸಿಕೊಳ್ಳಬೇಕಾದೀತು.

ಚೆನ್ನಯ್ಯನವರ "ಚಂದ್ರಗ್ರಹಣ"ದಂಥಾ ಕವನವನ್ನು ಆಗ ಓದಿದಾಗ ಜಯದೇವ ನೆನಪಾಗಿರಲಿಲ್ಲ. ಈಗ ಇದನ್ನು ಬರೆಯುವಾಗ ಫಕ್ಕನೆ ನೆನಪಿಗೆ ಬಂದ.

(ಮುಂದುವರಿಯುವುದು)

Monday, January 10, 2011

ಆತ್ಮಕಥನ 1

(ಮೊದಲ ಚಿತ್ರ ನನ್ನ ಈಗಿನ ಮನೆಯ ಅಂಗಳ ಹಾಗೂ ಮನೆಯ ಒಂದು ನೋಟ ತೋರಿಸುತ್ತದೆ. ರಾಮತ್ತಿಕಾರಿ  ಈ ಜಾಗದ ಹೆಸರು; ಕಲ್ಮಡ್ಕ ಊರಿನ ಹೆಸರು. ಇನ್ನೊಂದು ಚಿತ್ರ ಕವಿತಾ, ಜೂನ್-ಜುಲೈ 1964 --ಗ್ರೀಷ್ಮ ಸಂಚಿಕೆಯ ಮುಖಪುಟ. ಇದು ಕವಿತಾದ ಎರಡನೆಯ ಸಂಚಿಕೆ. ಇದರಲ್ಲಿ ನನ್ನ ಮೊದಲ ಕವನಗಳಲ್ಲಿ ಒಂದಾದ  "ಬೇಸಿಗೆಯ ನಡುಹಗಲು" ಪ್ರಕಟವಾಗಿತ್ತು. ರಾಮಚಂದ್ರ ಶರ್ಮರ ಪ್ರಖ್ಯಾತ ಕವನ "ಹೇಸರಗತ್ತೆ"ಯೂ ಮೊದಲು ಪ್ರಕಟವಾದದ್ದು ಇದೇ ಸಂಚಿಕೆಯಲ್ಲಿ. ಈ ಸಂಚಿಕೆಯಲ್ಲಿ ಭಾರತಿಯವರ "ಬೃಂದಾವನ", ವಿನಾಯಕರ "ಅಜಗರದ ಹಾಡು", ಜಿ. ಎಸ್. ಶಿವರುದ್ರಪ್ಪನವರ "ಕಾರಿರುಳಲ್ಲಿ" ಎಂಬ ಕವನಗಳಲ್ಲದೆ  ಪಿ. ಶ್ರೀನಿವಾಸ್ ರಾವ್ ಹಾಗೂ ಸುಮತೀಂದ್ರ ನಾಡಿಗರ ಲೇಖನಗಳೂ ಇದ್ದವು. ಅಥರ್ವವೇದದ "ಕಾವ್ಯಂ ನ ಮಮಾರ ನ ಜೀರ್ಯತೇ" (=ಕಾವ್ಯಕ್ಕೆ ಮುಪ್ಪಿಲ್ಲ, ಸಾವಿಲ್ಲ) ಎಂಬುದು ಈ ಪತ್ರಿಕೆಯ ಧ್ಯೇಯವಾಕ್ಯವಾಗಿತ್ತು.)




ಜನವರಿ 20, 2008
ರಾಮತ್ತಿಕಾರಿ, ಕಲ್ಮಡ್ಕ

ಬೆಕ್ಕುಗಳ ಪ್ರಣಯ ಲೀಲೆಗಳು ಥೇಟ್ ಮನುಷ್ಯರದಂತೆಯೇ. ಮೊನ್ನೆ ಒಂದು ಕಂಟ ಬೆಕ್ಕಿನ ಎದುರು ಇದೇ ಈ ಮಂಗು ಬೆಕ್ಕು ಎಂಥೆಂಥಾ ಪ್ರಣಯ ಭಂಗಿಗಳನ್ನು ಪ್ರದರ್ಶಿಸಿತು ಎನ್ನುತ್ತೀರಿ--ಆ ಪೆದ್ದು ಗುಂಡ ಪ್ರತಿಕ್ರಿಯಿಸದೆ ತನ್ನ ಪಾಡಿಗೆ ತಾನು ಕಿಟಿಕಿ ಮೇಲೆ ಕೂತಿತ್ತು. ಮನುಷ್ಯರಲ್ಲೂ ಉಮೇದಿನ ಗಂಡು ಮತ್ತು ನಿರ್ಲಕ್ಷ್ಯದ ಹೆಣ್ಣು ಅಥವಾ ವೈಸ್ ವರ್ಸಾ ಕಾಮನ್ನು. ಆದರೆ ಗಂಡು ಆನಂತರ ಹೆಣ್ಣಿಗೆ ಒಲಿದಿರಬೇಕು. ತೋಟದಿಂದ ಪ್ರಣಯದ ಕರೆ ಮಾಡುತ್ತಿತ್ತು. ಈ ಬೆಕ್ಕುಗಳು ಪ್ರೀತಿ ಮಾಡುವುದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಹೊತ್ತು ಪ್ರಣಯದ ಕರೆ ಮಾಡುವುದರಲ್ಲಿ ಕಳೆಯುತ್ತವೆ. ತೋಟದಲ್ಲಿಯೇ ಒಂದಕ್ಕೊಂದು ಸ್ವಲ್ಪ ದೂರದಲ್ಲಿ ಕೂತು ಪರಸ್ಪರ ಕರೆಯುತ್ತಿದ್ದವು. ಇವೆಲ್ಲಾ ಎರಡು ಮೂರು ದಿನ ಅಷ್ಟೆ. ಆ ಮೇಲೆ ಕಂಟ ಬೆಕ್ಕು ತನ್ನ ಪಾಡಿಗೆ ತಾನು ಹೊರಟುಹೋಯಿತು. ನಾನು ಆ ಮೇಲೆ ಅದನ್ನು ಸುತ್ತಮುತ್ತ ಎಲ್ಲಿಯೂ ನೋಡಲಿಲ್ಲ.

ಬೆಕ್ಕು ಹೇಗೆ ಸಾಯುತ್ತದೆನ್ನುವುದು ಗೊತ್ತಿಲ್ಲ ಎನ್ನುತ್ತಾರೆ. ಬೆಕ್ಕಿನ ಹೆಣ ನೋಡಿದವರು ಯಾರೂ ಇಲ್ಲ ಎನ್ನುವುದು ಜನರ ನಂಬಿಕೆ.  ಆದರೆ ನನ್ನ ಒಂದು ಬೆಕ್ಕಿನ ಮರಿ ನನ್ನ ಎದುರೇ ಮನೆಯಲ್ಲಿಯೇ ಸತ್ತುಹೋಯಿತು. ಒಂದೆರಡು ದಿನಗಳಿಂದ ಹುಷಾರಿಲ್ಲದೆ ಇತ್ತು. ಹೆಚ್ಚಾಗಿ ದನ ಎಮ್ಮೆಗಳಿಗೆ ಔಷಧಿ ಕೊಡುವ ನಮ್ಮ ವೆಟರಿನರಿ ಡಾಕ್ಟರು--ಇವರಿಗೆ ಗೋಡಾಕ್ಟರುಗಳೆಂದೇ ಹೆಸರು, ಆದರೆ ಹಾಗೆ ಕರೆದರೆ ಮಾತ್ರ ಅವರಿಗೆ ಇಷ್ಟವಾಗುವುದಿಲ್ಲ, ವೆಟರಿನರಿ ಡಾಕ್ಟರು ಎಂದು ಕರೆಯಬೇಕೆಂದು ಅಪೇಕ್ಷಿಸುತ್ತಾರೆ--ಇದಕ್ಕೆ ಏನಾದರೂ ಔಷಧಿ ಕೊಡಬಹುದೇ ಎಂದು ವಿಚಾರಿಸುವಷ್ಟೂ ಸಮಯ ಸಿಗಲಿಲ್ಲ. ಸಾಯುವ ತುಸು ಮೊದಲು ಹಾಲು ಬೇಕಾದಾಗ ಮಾಡುವ ರೀತಿಯ ಶಬ್ದ ಮಾಡಿತು. ಆದರೆ ಹಾಲು ಕುಡಿಯುವುದು ಹೋಗಲಿ, ತಲೆ ಪೊಕ್ಕಿಸುವುದಕ್ಕೇ ಆಗುತ್ತಿರಲಿಲ್ಲ.

ಕೆಲವು ಸಲ ಬೆಕ್ಕು ಅರಣೆ, ಒಳ್ಳೆ ಹಾವು ಮೊದಲಾದವುಗಳನ್ನು ಹಿಡಿದುಕೊಂಡು ಮನೆಯೊಳಗೆ ಬರುವುದಿದೆ. ಆ ಕಾರಣಕ್ಕಾಗಿಯೇ ಕೆಲವರು ಬೆಕ್ಕು ಸಾಕಲು ಇಷ್ಟಪಡುವುದಿಲ್ಲ. ಹಾವನ್ನು ಅರೆ ಸಾಯಿಸಿ ಮನೆಯೊಳಗೆ ತರುತ್ತದೆಂದು ಹೆದರುತ್ತಾರೆ. ಅರೆ ಪೆಟ್ಟಾದ ಹಾವು ಮನುಷ್ಯರಿಗೆ ಕಚ್ಚಿ, ವಿಷದ ಹಾವಾದರೆ ಕೊಂದೂ ಬಿಡಬಹುದಲ್ಲ? ಆದರೆ ಹೀಗೆ ಬೆಕ್ಕು ಅರೆ ಜೀವ ಮಾಡಿ ಮನೆಯೊಳಗೆ ತಂದ ಹಾವು ಮನುಷ್ಯರಿಗೆ ಕಚ್ಚಿದ ಒಂದೇ ಒಂದು ಉದಾಹರಣೆ ನನಗೆ ತಿಳಿದಂತೆ ಇಲ್ಲ. ಅದಕ್ಕೆ ಮುಖ್ಯ ಕಾರಣ ತನ್ನ ಕೊಳ್ಳೆಯನ್ನು ಬೆಕ್ಕು ಅರೆ ಪೆಟ್ಟು ಮಾಡಿ ಬಿಟ್ಟು ಹೋಗುವುದಿಲ್ಲ. ನಿಧಾನವಾಗಿ ಅದರ ಜೊತೆ ಆಟ ಆಡಿ ಕೊಂದು ತಿಂದು ಆದ ಮೇಲೇ ಅದು ಕೊಳ್ಳೆಯನ್ನು ಬಿಟ್ಟು ಕದಲುವುದು.ಈ ಕೊಳ್ಳೆಗಳ ಬಗ್ಗೆ ಅವು ಪೊಸೆಸ್ಸಿವ್ ಆಗಿರುತ್ತವೆ. ನನ್ನ ಎರಡು ಬೆಕ್ಕಿನ ಮರಿಗಳು ಹಾಲು ಅಥವಾ ಅನ್ನಕ್ಕಾಗಿ ಜಗಳ ಮಾಡಿಕೊಂಡದ್ದಿಲ್ಲ. ಆದರೆ ಒಂದರ ಕೊಳ್ಳೆಯನ್ನು ಬಯಸಿ ಇನ್ನೊಂದು ಹತ್ತಿರ ಹೋದರೆ ಜಗಳವಾಗುತ್ತದೆ.

ಕಕ್ಕದ ವಿಷಯದಲ್ಲಿ ಈ ಬೆಕ್ಕುಗಳು ಹೈಜೀನಿನ ನಿಯಮಗಳನ್ನು ಪಾಲಿಸುತ್ತವೆ. ಮೊನ್ನೆ ಒಂದು ಬೆಕ್ಕಿನ ರೀತಿಯಂತೂ ನೋಡುವಂತಿತ್ತು. ಸುಮಾರು ಎರಡು ತಿಂಗಳ ಹಿಂದೆ ಟೆಲಿಫೋನ್ ಕೇಬಲ್ ಹಾಕುವುದಕ್ಕೆ ಅಂಗಳದಲ್ಲಿ ಕಣಿ ತೋಡಿ ಕೇಬಲ್ ಹಾಕಿದ ಮೇಲೆ ಮಣ್ಣಲ್ಲಿ ಮುಚ್ಚಲಾಗಿತ್ತು. ಹುದುಲು ಮಣ್ಣು. ಬಿಳಿ ಬೆಕ್ಕು ಬಂದು ಗುಂಡಿ ತೋಡಿ ಮುಚ್ಚಿದ್ದ ಮಣ್ಣನ್ನು ಪಂಜದಿಂದ ಒಕ್ಕಿ  ಚಿಕ್ಕದೊಂದು ಗುಂಡಿ ಮಾಡಿ ಆ ಗುಂಡಿಗೆ ಕಕ್ಕಸು ಬೀಳುವಂತೆ ಬುಕ್ಕಿತು. ಕಕ್ಕ ಮಾಡಿದ ಮೇಲೆ ಮಣ್ಣನ್ನು ಕಾಲಿನಿಂದ ಎಳೆದು ಆ ಗುಂಡಿಯನ್ನು ಮುಚ್ಚಿ ಮುಚ್ಚಿದ ಜಾಗದ ಸಮೀಪ ಮೂಗು ತೆಗೆದುಕೊಂಡು ಹೋಗಿ ಮೂಸಿ ನೋಡಿ ವಾಸನೆ ಬರುತ್ತಿಲ್ಲವೆಂದು ಖಾತ್ರಿ ಆದ್ದರಿಂದಲೋ ಏನೋ ಹೊರಟುಹೋಯಿತು. ಎಂಥಾ ಸಿನಿಕನೂ ಶುಚಿತ್ವದ ಬಗೆಗಿನ ಬೆಕ್ಕುಗಳ ನಿಷ್ಠೆ ಮೆಚ್ಚದಿರುವುದು ಅಸಾಧ್ಯ. ಇವು ಮನೆಯೊಳಗೆ ಕಕ್ಕ ಮಾಡುವುದು ಇಲ್ಲವೇ ಇಲ್ಲ. ಶುಚಿತ್ವದ ಬಗೆಗಿನ ಬೆಕ್ಕುಗಳ ಅತಿ ಕಾಳಜಿಯಿಂದಾಗಿಯೇ ಅವು ಮನೆಯೊಳಗೆ ಸಾಯುವುದಿಲ್ಲ ಎಂಬ ನಂಬಿಕೆ ಹುಟ್ಟಿರಬಹುದು.

ನವ್ಯಸಾಹಿತ್ಯದ ಮೊದಲ ವರ್ಷಗಳಲ್ಲಿ ಬೆಕ್ಕು ಒಂದು ಪ್ರಮುಖ ಸಂಕೇತ ಆಗಿತ್ತು. ನನಗೆ ತಿಳಿದಂತೆ ಇದನ್ನು ಗಮನ ಸೆಳೆಯುವ ಹಾಗೆ ಬಳಸಿದವರು ಎಚ್. ಎಂ. ಚೆನ್ನಯ್ಯ. ಅವರ ಮೊದಲ ಕವನಸಂಗ್ರಹದ ಹೆಸರೇ ಕಾಮಿ. ಇದು ಪ್ರಕಟವಾದದ್ದು 1964ರಲ್ಲಿ. ಪ್ರಕಟಿಸಿದವರು ಕಾವ್ಯಕ್ಕೇ ಮೀಸಲಾದ ತ್ರೈಮಾಸಿಕ ಪತ್ರಿಕೆ ಲಹರಿ ಪ್ರಕಟಿಸುತ್ತಿದ್ದ ಬಿ. ಎನ್. ಶ್ರೀರಾಮ ಮತ್ತು ಪೂರ್ಣಚಂದ್ರ ತೇಜಸ್ವಿ. ಆ ವರ್ಷ ಕನ್ನಡದಲ್ಲಿ ಕಾವ್ಯಕ್ಕಾಗಿ ಕವಿತಾ ಮತ್ತು ಲಹರಿ--ಈ ಎರಡು ಪತ್ರಿಕೆಗಳು ಪ್ರಾರಂಭವಾದವು. ಎರಡೂ ತ್ರೈಮಾಸಿಕಗಳು. ಎರಡು ಪತ್ರಿಕೆಗಳೂ ಕೆಲವು ಮುಖ್ಯ ಕವನಗಳನ್ನು ಪ್ರಕಟಿಸಿ ಪ್ರಭಾವಶಾಲಿಯಾಗಿ ನಾಕೈದು ವರ್ಷ ಕೆಲಸಮಾಡಿದವು. ಬಾಕಿನ ನಡೆಸುತ್ತಿದ್ದ ಕವಿತಾ ಮುಂದೆ ಅಡಿಗರ ಸಾಕ್ಷಿ  ಜೊತೆ ವಿಲೀನಗೊಂಡರೆ ಲಹರಿ ಪ್ರಕಟಣೆಯನ್ನು ನಿಲ್ಲಿಸಿತು. ಲಹರಿ ಬುದ್ಧಿ ಪ್ರಚಾರ ಯೋಜನೆ ಎಂಬ ಮಾಲಿಕೆ ಸುರು ಮಾಡಿ ಅದರಲ್ಲಿ ಕಾಮಿ, ತೇಜಸ್ವಿಯವರ ವ್ಯಕ್ತಿ ವಿಶಿಷ್ಟ ಸಿದ್ಧಾಂತ ಹಾಗೂ ಯಮಳ ಪ್ರಶ್ನೆಗಳನ್ನು ಪ್ರಕಟಿಸಿದ್ದರು. ತೇಜಸ್ವಿ ಜೊತೆಗಿದ್ದರೂ ಇವುಗಳನ್ನು ನೋಡಿಕೊಳ್ಳುತ್ತಿದ್ದವರು ಶ್ರೀರಾಮ. ಇವರು ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನಿವೃತ್ತರಾದರು. ಅಲ್ಲಿ ನನ್ನ ಸಹೋದ್ಯೋಗಿ. ತೇಜಸ್ವಿಯವರ ಬರೆವಣಿಗೆ ಓದಿದವರಿಗೆ ಇವರ ಹೆಸರು ಪರಿಚಿತ. ಆದರೆ ತೇಜಸ್ವಿಯವರಲ್ಲಿ ಇವರ ವ್ಯಕ್ತಿತ್ವದ ಪೂರ್ತಿ ನೋಟ ಸಿಕ್ಕುವುದಿಲ್ಲ. ಇವರು ಗಂಭೀರ ವ್ಯಕ್ತಿ. ಲಹರಿಯ ಸಂಚಿಕೆಗಳ ಕಾವ್ಯ ಮತ್ತು ಪುಸ್ತಕಗಳು ಇವರ ಅಭಿರುಚಿಯನ್ನು ಸಮರ್ಥವಾಗಿ ಅಭಿವ್ಯಕ್ತಿಸುತ್ತವೆ. ಈಗ ಪುಸ್ತಕ ಪ್ರಕಾಶನ ಎಂಬ ಪ್ರಕಾಶನದ ಮೂಲಕ ತೇಜಸ್ವಿಯವರ ಪುಸ್ತಕ ಪ್ರಕಟಿಸುತ್ತಿದ್ದಾರೆ. ಕನ್ನಡದ ಯಶಸ್ವಿ ಪ್ರಕಾಶಕರಲ್ಲೊಬ್ಬರು. ತಮ್ಮ ಪಾಡಿಗೆ ತಮ್ಮ ಕೆಲಸ ಮಾಡುತ್ತಿರುವವರು. ಇವರ ಶ್ರೀಮತಿಯವರಾದ ಪದ್ಮಾ ಶ್ರೀರಾಮ್ ಸಸ್ಯಲೋಕದ ಬಗ್ಗೆ ಕಾವ್ಯದ ನೆಂಟು ಬೆರೆಸಿ ಬರೆಯಬಲ್ಲವರು. ಬಿ. ಜಿ. ಎಲ್. ಸ್ವಾಮಿಯವರ ಬರೆವಣಿಗೆಯಲ್ಲಿ ಕಾಣುವುದಕ್ಕಿಂತ ಭಿನ್ನವಾದ ಸಸ್ಯಲೋಕ ಇವರ ಬರೆವಣಿಗೆಯಲ್ಲಿ ಕಾಣುತ್ತದೆ. ಸಸ್ಯಗಳಿಗೆ ಸಂಬಂಧಿಸಿದಂತೆ ಕನ್ನಡ ಕಾವ್ಯಗಳಲ್ಲಿರುವ ಉಲ್ಲೇಖಗಳನ್ನು ತಿಳಿಯುವುದಕ್ಕಾಗಿ ಸಹಾ ಇವರ ಬರೆವಣಿಗೆ ಓದಬೇಕು.

(ಮುಂದುವರಿಯುವುದು)

Sunday, January 9, 2011

ಉಪನಿಷತ್ತು ಕುರಿತು 4

ಉಪನಿಷತ್ತುಗಳಲ್ಲಿ ಸಾವನ್ನು ಮನುಷ್ಯ ಹೇಗೆ ಎದುರಿಸುತ್ತಾನೆ ಎಂಬ ಬಗ್ಗೆ ಚಿಂತನೆಗಳಿವೆ. ಉದಾಹರಣೆಗೆ ಬೃಹದಾರಣ್ಯಕದಲ್ಲಿ ನುಂಗಲೆಂದು ಸಾವು ಬಾಯಿ ಅಗಲಿಸುತ್ತದೆ. ಅಗಲಿಸಿದ ಆ ಬಾಯಿಯಿಂದಲೇ ಭಾಣ್ ಎಂಬ ಶಬ್ದ ಬರುತ್ತದೆ. ಆ ಭಾಣ್ ಶಬ್ದವನ್ನೇ ಬಳಸಿ `ಅವನು` ಎಂದು ಸೂಚಿತನಾದ ವ್ಯಕ್ತಿ ಉದ್ಗೀಥ ಮಾಡಿ ಹಾಡುತ್ತಾನೆ. ಹೀಗೆ ಸಾವಿನ ಬಾಯಿಯಿಂದಲೇ ಸಾವನ್ನು ಎದುರಿಸುವ ಉದ್ಗೀಥ ಹುಟ್ಟುತ್ತದೆ. ಛಾಂದೋಗ್ಯದಲ್ಲೂ ಹೀಗೇ ಸಾವನ್ನು ಎದುರಿಸುವ ಪ್ರಸಂಗ ಬರುತ್ತದೆ. ದೇವತೆಗಳಿಗೆ ಸಾವಿನ ಭಯವಾಗಿ ಅವರು ಛಂದಸ್ಸಿನಲ್ಲಿ, ವೇದಗಳಲ್ಲಿ ಅಡಗಿ ತಮ್ಮನ್ನು ತಾವು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಸಾವಿನ ಅಪರಿಹಾರ್ಯತೆಯ ಅರಿವು ಉಪನಿಷತ್ಕಾರರಿಗೆ ಇದೆ. ಹಾಗೆಯೇ ಮನಸ್ಸಿನ ಮೂಲಕ, ಅರಿವಿನ ಮೂಲಕ, ಉದ್ಗೀಥದ ಮೂಲಕ ಅದನ್ನು ಮೀರಬಲ್ಲೆವು ಎಂಬ ಅರಿವೂ ಇದೆ.

ಕಠೋಪನಿಷತ್ತಿನಲ್ಲೂ ಸಾವಿನ ಕುರಿತ ಚಿಂತನೆ ಕಾಣುತ್ತದೆ. ಈ ಉಪನಿಷತ್ತು ನಚಿಕೇತ ಎಂಬ ಹುಡುಗ ಸಾವು ಮತ್ತು
ಕಾಲಗಳ ದೇವರಾದ ಯಮನನ್ನು ಭೇಟಿಯಾಗಿ ನಡೆಸುವ ಸಂಭಾಷಣೆಯಿಂದ ಕೂಡಿದೆ. ನಚಿಕೇತನ ತಂದೆ ವಾಜಶ್ರವಸ ಸದ್ಗತಿ ಬೇಕೆಂದು ತನ್ನಲ್ಲಿದ್ದ ಎಲ್ಲಾ ಬಡಕಲು ದನಗಳನ್ನು ಬ್ರಾಹ್ಮಣರಿಗೆ ದಾನ ಕೊಡುತ್ತಾನೆ. ಅದನ್ನು ಕಾಣುತ್ತಿದ್ದ ನಚಿಕೇತ ನನ್ನನ್ನು ಯಾರಿಗೆ ಕೊಡುತ್ತೀ ಎಂದು ತಂದೆಯನ್ನು ಕೇಳುತ್ತಾನೆ. ತಂದೆ ಉತ್ತರಿಸುವುದಿಲ್ಲ. ನಚಿಕೇತ ಪಟ್ಟು ಬಿಡದೆ ಮತ್ತೆ ಮತ್ತೆ ಕೇಳಿದಾಗ ಸಿಟ್ಟಿಗೆದ್ದ ತಂದೆ ಹಾ, ನಿನ್ನನ್ನು ಯಮನಿಗೆ ಕೊಡುತ್ತೇನೆ ಎಂದು ಗದರುತ್ತಾನೆ. ತಂದೆ ಹೇಳಿಯಾಯಿತಲ್ಲ, ಹಾಗಾದರೆ ಕೊಟ್ಟ ಹಾಗೇ ಎಂದು ಮನೆ ಬಿಟ್ಟು ಹೊರಟು ನಚಿಕೇತ ಯಮನಲ್ಲಿಗೆ ಬರುತ್ತಾನೆ. ಯಮ ಮನೆಯಲ್ಲಿಲ್ಲ. ಎತ್ತ ಹೋಗಿದ್ದಾನೆ? ಗೊತ್ತಿಲ್ಲ. ಸರಿ, ಬರುವ ವರೆಗೆ ಕಾಯುವ. ಮೂರು ಹಗಲು ಮೂರು ರಾತ್ರಿ ಕಳೆದ ಮೇಲೆ ಯಮ ಬಂದ. ಕಾಯುತ್ತಿರುವ ನಚಿಕೇತನ ಶ್ರದ್ಧೆಯಿಂದ ಖುಷಿಯಾಗಿ ನಿನಗೆ ಬೇಕಾದ ಮೂರು ವರ ಕೊಡುತ್ತೇನೆ ಎಂದ. ಮೊದಲನೆಯದಾಗಿ ನಚಿಕೇತ ಬಯಸಿದ್ದು ತನ್ನ ತಂದೆಯ ಜತೆ ತನ್ನ ಸಂಬಂಧ ಹಿಂದಿನಂತೆ ಪ್ರೀತಿಪೂರ್ವಕವಾಗಿ ಇರಬೇಕು ಎಂದು. ಎರಡನೆಯ ವರವಾಗಿ ನಚಿಕೇತ ಕೇಳಿದ: "ಸ್ವರ್ಗದಲ್ಲಿ ಸಾವಿಲ್ಲ; ಸಾವಿನ ಭಯವೂ ಇಲ್ಲ. ಯಜ್ಞದ ಮೂಲಕ ಇಂಥಾ ಸ್ವರ್ಗ ಪಡೆಯಬಹುದು ಅನ್ನುತ್ತಾರೆ. ಅದು ಯಾವ ಯಜ್ಞ? ಅದನ್ನು ಮಾಡುವುದು ಹೇಗೆ?" ಯಮ ನಚಿಕೇತನಿಗೆ ಯಜ್ಞ ಮಾಡುವ ಕ್ರಮ ತಿಳಿಸಿಕೊಟ್ಟದ್ದಲ್ಲದೆ ಅದನ್ನು ಮುಂದೆ ಜನ ನಚಿಕೇತಾಗ್ನಿ ಎಂಬ ಹೆಸರಿನಿಂದ ಕರೆಯುವಂತೆ ನಿಯಮಿಸಿದ.

ನಚಿಕೇತ ಕೇಳಿದ ಮೂರನೆಯ ವರ ಮಾತ್ರ ಯಮನನ್ನು ದಿಕ್ಕುಗೆಡಿಸಿತು. ಅವ ಕೇಳಿದ: "ಸತ್ತ ನಂತರ ಮನುಷ್ಯ ಏನಾಗುತ್ತಾನೆ? ಕೆಲವರು ಹೇಳುತ್ತಾರೆ ದೇಹ ಸತ್ತರೆ ಮುಗಿಯಿತು ಎಂದು; ಇನ್ನು ಕೆಲವರು ಪರಲೋಕದಲ್ಲಿ ಮನುಷ್ಯ ಬದುಕುತ್ತಾನೆ ಎನ್ನುತ್ತಾರೆ. ಯಾವುದು ನಿಜ?"
ಯಮ: ಇಂಥಾ ಪ್ರಶ್ನೆ ಕೇಳಬಾರದು. ಬೇರೆ ಕೇಳು.
ನಚಿಕೇತ: ಇಲ್ಲ. ಈ ಪ್ರಶ್ನೆಗೇ ಉತ್ತರ ಬೇಕು.
ಯಮ: ದೇವರುಗಳಿಗೇ ಈ ಪ್ರಶ್ನೆಗೆ ಉತ್ತರ ಗೊತ್ತಿಲ್ಲ. ನಿನಗೆ ಹೇಗೆ ಹೇಳುವುದು? ಎಷ್ಟು ಹಣ, ವಸ್ತ್ರ, ಚಿನ್ನ--ಏನು ಬೇಕು ಕೇಳು, ಕೊಡುತ್ತೇನೆ. ಈ ಪ್ರಶ್ನೆ ಕೇಳಬೇಡ.
ನಚಿಕೇತ: ನನಗೆ ಇವು ಯಾವುದೂ ಬೇಡ. ನನ್ನ ಪ್ರಶ್ನೆಗೆ ಉತ್ತರ ಬೇಕು. ಹೇಳು.
ಯಮ: ನಿನ್ನನ್ನು ದೊಡ್ಡದೊಂದು ಸಾಮ್ರಾಜ್ಯಕ್ಕೆ ಚಕ್ರವರ್ತಿಯಾಗಿ ಮಾಡುತ್ತೇನೆ. ಈ ಪ್ರಶ್ನೆ ಕೇಳಬೇಡ.
ನಚಿಕೇತ: ನನಗೆ ಸಾಮ್ರಾಜ್ಯ ಬೇಡ. ಸತ್ಯ ಬೇಕು. ಹೇಳು.
ಯಮ: ಇದೊಂದು ಬಿಟ್ಟು ಬೇರೆ ಏನು ಬೇಕಾದರೂ ಕೇಳು. ಕೊಡುತ್ತೇನೆ.
ನಚಿಕೇತ: ನಿನ್ನ ಹೊರತಾಗಿ ಬೇರೆ ಯಾರನ್ನೂ ನಾನು ಈ ಪ್ರಶ್ನೆ ಕೇಳಲಾರೆ. ಇದಕ್ಕೆ ಉತ್ತರ ಬೇಕು. ಹೇಳು.


ನನಗೆ ಈ ಕತೆಯಲ್ಲಿ ಇಷ್ಟವಾದದ್ದು ನಚಿಕೇತ ತಾನು ನಂಬಿದ್ದರ ಬಗ್ಗ್ಗೆ ತೋರಿಸುವ ಶ್ರದ್ಧೆ. ಎಂಥಾ ಪ್ರಲೋಭನೆಗಳಿಂದಲೂ ಅವನ ಬೌದ್ಧಿಕ ಕುತೂಹಲ, ಸತ್ಯ ತಿಳಿಯಬೇಕೆಂಬ ನಿಷ್ಠೆ ಸುಮ್ಮನಾಗುವುದಿಲ್ಲ. ಆದ್ದರಿಂದಲೇ ನನಗೆ ಅವನು ಭಾರತೀಯ ವಾಙ್ಮಯದಲ್ಲಿ ಚಿತ್ರಿತನಾಗಿರುವ ಮೊದಲ ಬುದ್ಧಿಜೀವಿಗಳಲ್ಲಿ ಒಬ್ಬ ಅನ್ನಿಸುತ್ತದೆ. ಉಪನಿಷತ್ತುಗಳಲ್ಲಿ ಈ ಬಗೆಯ ಬುದ್ಧಿಜೀವಿಗಳ ಚಿತ್ರ ಮತ್ತೆ ಮತ್ತೆ ಬರುತ್ತದೆ. ಅವರು ಸ್ವತಂತ್ರರು. ತಮ್ಮ ಅಭಿಪ್ರಾಯಗಳಿಗೂ ಕಟ್ಟುಬೀಳದಷ್ಟು ಸ್ವತಂತ್ರರು. ಅವರ ಬದ್ಧತೆ ಅವರ ಶ್ರದ್ಧೆಗೆ ಮಾತ್ರ. ಅವರ ಎದುರಾಳಿಗಳೂ ಈ ಬುದ್ಧಿಜೀವಿಗಳ ಶ್ರದ್ಧೆಗೆ ಸೋಲುವವರು. ಕಠೋಪನಿಷತ್ತುನಲ್ಲಿಯೂ ಕೊನೆಗೆ ಯಮ ಸೋತು ನಚಿಕೇತನಿಗೆ ಜೀವನದ ಕೆಲವು ರಹಸ್ಯಗಳನ್ನು ಹೇಳುತ್ತಾನೆ. ಸಾವಿನ ಈ ದೇವರು ಬದುಕು ಹೇಗೆ ಯಾವ ರೀತಿಯಲ್ಲಿ ಅರ್ಥಪೂರ್ಣವಾಗುತ್ತದೆ ಎಂದು ವಿವೇಚಿಸುತ್ತಾನೆ. ಅವನು ಶ್ರೇಯ ಪ್ರೇಯ ಎಂದು ಎರಡು ವಿಂಗಡಣೆಮಾಡುತ್ತಾನೆ. ಪ್ರೇಯ ಖುಷಿ ಕೊಡುವಂಥಾದ್ದು. ಶ್ರೇಯ ಒಳ್ಳೆಯದು. ನಚಿಕೇತ ಆರಿಸಿರುವಂತೆ ಶ್ರೇಯವಾದ್ದನ್ನು ಆರಿಸಬೇಕು, ಪ್ರೇಯವನ್ನಲ್ಲ ಎನ್ನುತ್ತಾನೆ; ಸಾರಥಿಯಾದವನು ರಥವನ್ನು ನಡೆಸುವಂತೆ ಮನಸ್ಸನ್ನು ನಡೆಸಬೇಕು ಎನ್ನುತ್ತಾನೆ; ಸಮಚಿತ್ತದಲ್ಲಿ ಉಳಿಯುವುದೇ ಮುಖ್ಯ ಎನ್ನುತ್ತಾನೆ. ಕ್ರಿಸ್ತ ಪೂರ್ವ 6-7 ಶತಮಾನದ್ದೆಂದು ಅಂದಾಜಿಸಿರುವ ಈ ಕೃತಿಯ ಕೆಲವು ರೂಪಕಗಳು, ಶ್ರೇಯ ಪ್ರೇಯಗಳೆಂಬ ವಿಂಗಡಣೆ ಗ್ರೀಕರ ಪ್ಲೇಟೋ (ಕ್ರಿಸ್ತ ಪೂರ್ವ 428-348)ನ ಮೇಲೆ ಪ್ರಭಾವ ಬೀರಿದೆ ಎನ್ನುತ್ತಾರೆ. ಕನ್ನಡದಲ್ಲಂತೂ ನಾವು ಪಾಶ್ಚಾತ್ಯರಿಂದ ಎಷ್ಟು ಪಡೆದಿದ್ದೇವೆ ಎಂಬುದರ ಪಟ್ಟಿಯೇ ಆಗಾಗ ಬರುತ್ತಿರುತ್ತದೆ. ಎಷ್ಟು ಕೊಟ್ಟಿದ್ದೇವೆ ಎಂಬುದರ ತಖ್ತೆ ಅಷ್ಟು ಸರಿಯಾಗಿ ಆಗಿಲ್ಲ. ಆಗುವುದು ಅಗತ್ಯ. ಅದು ಕನಿಷ್ಠ ನಮ್ಮ ಆತ್ಮವಿಶ್ವಾಸವನ್ನಾದರೂ ಹೆಚ್ಚಿಸಬಲ್ಲುದು.

Wednesday, January 5, 2011

ಮತ್ತೆ ಬಂದ ಕುದುರೆ


ನಮಗೆ ಲೇಖಕರಿಗೆ ಒಂದು ಕೃತಿಯ ಜೀವಂತಿಕೆಯ ಪರೀಕ್ಷೆ ನಡೆಯುವುದು ಅದಕ್ಕೆ ಎಷ್ಟು ಪ್ರಶಸ್ತಿ ಬಂತು, ಯಾರು ಹೇಗೆ ಹೊಗಳಿದರು ಎಂಬುದರ ಮೇಲಿಂದ ಅಲ್ಲ. ಒಂದು ಕೃತಿ ಎಷ್ಟು ಕಾಲ ಉಳಿಯಿತು ಎಂಬುದು ಅದರ ಸತ್ತ್ವಪರೀಕ್ಷೆಯ ಮಾನದಂಡವಾಗಿರುತ್ತದೆ. ಯಾಕೆಂದರೆ ಪ್ರಕಟವಾದ ಸುರುವಿಗೆ ಎಂಥಾ ಕೃತಿಯನ್ನೂ ಹೊಗಳುವವರು ಸಿಕ್ಕುತ್ತಾರೆ; ಸ್ನೇಹಿತರು ದಾಕ್ಷಿಣ್ಯಕ್ಕಾಗಿ, ಹಿರಿಯರು ಪ್ರೋತ್ಸಾಹಿಸಲೆಂದು, ಕೆಲವರು ನಮ್ಮ ಗುಂಪು ಬೆಳೆಯಲಿ ಎಂದು--ಹೀಗೆ ವಿವಿಧ ಕಾರಣಕ್ಕಾಗಿ ಕೃತಿ ಪ್ರಕಟವಾದ ಸುರುವಿಗೆ ಹೊಗಳುವವರು ಸಾಕಷ್ಟು ಜನ ಸಿಗುತ್ತಾರೆ. ತರುಣ ಲೇಖಕರಾಗಿದ್ದರಂತೂ ಜಾಸ್ತಿಯೇ ಸಿಗುತ್ತಾರೆ. ಸಾಮಾನ್ಯ ಸತ್ತ್ವದ ಲೇಖಕರು ಅದನ್ನು ನಂಬಿ ಒಂದೆರಡು ಕೃತಿ ಬರೆಯುವುದರ ಒಳಗೆ ಮಹಾನ್ ಲೇಖಕರ ವರಸೆಗಳನ್ನೆಲ್ಲಾ ರೂಢಿಸಿಕೊಂಡು ಸೃಜನಶೀಲರಾಗಿ ಗೊಟಕ್ ಅಂದಿರುತ್ತಾರೆ. ನಿಜವಾದ ಸತ್ತ್ವವುಳ್ಳವ ಮಾತ್ರ ಇಂಥದ್ದರ ಮಧ್ಯೆ ಬೆಳೆಯುತ್ತಾನೆ. ಆದ್ದರಿಂದಲೇ ಒಬ್ಬ ಲೇಖಕನಿಗೆ ಪ್ರಯೋಜನಕ್ಕೆ ಬರುವುದು ಸ್ವವಿಮರ್ಶೆ ಮಾತ್ರ. ಇನ್ನೊಬ್ಬರ ವಿಮರ್ಶೆ ಈ ಸ್ವವಿಮರ್ಶೆಯನ್ನು ಪ್ರಚೋದಿಸುವುದಿದ್ದರೆ ಮಾತ್ರ ಉಪಕಾರಿ. ಹೀಗಾಗಿಯೇ ಒಬ್ಬ ಲೇಖಕನಿಗೆ ತನ್ನ ವಿರುದ್ಧವೇ ಯೋಚಿಸಲು ಸಾಧ್ಯವಾಗಬೇಕು ಎಂಬ ಕುವೆಂಪುರವರ ಮಾತು ಮಹತ್ತ್ವದ್ದು. ಲೇಖಕರು ಮಾತ್ರವಲ್ಲ--ಅತ್ಯುತ್ತಮ ಮಾನವರೂ ತಮ್ಮ ವಿರುದ್ಧವೇ ತಾವು ಯೋಚಿಸುವ ಶಕ್ತಿ ಹೊಂದಿರುತ್ತಾರೆ.

ಈ ಎಲ್ಲಾ ಯೋಚನೆಗಳು ಮನಸ್ಸಿಗೆ ಬಂದದ್ದು ಇತ್ತೀಚೆಗೆ ಖ್ಯಾತ ರಂಗ ನಿರ್ದೇಶಕಿ ಎನ್. ಮಂಗಳಾ ನನ್ನ ನಾಟಕ ಕುದುರೆ ಬಂತು ಕುದುರೆಯನ್ನು ಆಡುತ್ತೇನೆ ಎಂದಾಗ. ಆ ನಾಟಕ ಬರೆದದ್ದು ಇಪ್ಪತ್ತೇಳು ವರ್ಷಗಳ ಹಿಂದೆ. 1983ರಲ್ಲಿ ಅದು ಪುಸ್ತಕವಾಗಿ ಪ್ರಕಟವೂ ಆಗಿತ್ತು. ಇಪ್ಪತ್ತೇಳು ವರ್ಷ ಎಂದರೆ ಇಡೀ ಒಂದು ಹೊಸ ಜನಾಂಗವೇ ರೂಪು ತಳೆದು ನಿಂತಿದೆ. ಇಷ್ಟು ವರ್ಷ ಕಳೆದ ಮೇಲೆ ಈ ನಾಟಕ ಒಳ್ಳೆಯ ಅಭಿರುಚಿ ಉಳ್ಳ, ಬಿ. ವಿ. ಕಾರಂತರ ಜೊತೆ ರಂಗಾಯಣ ಜೊತೆ ಇದ್ದ ಮಂಗಳಾರಂಥಾ ನಿರ್ದೇಶಕಿಯನ್ನು ಆಕರ್ಷಿಸುತ್ತದೆ ಎಂದರೆ--ಆ ನಾಟಕದಲ್ಲಿ ಸತ್ತ್ವ ಇರಬಹುದು ಎನ್ನಿಸಿತು. ಜೊತೆಗೆ ಈ ನಾಟಕ ಆಡುತ್ತಿದ್ದವರು ಬೆಮೆಲ್ ಕಾರ್ಮಿಕ ಸಂಘ ರೂಪಿಸಿಕೊಂಡ ಸ್ನೇಹರಂಗ ಎಂಬ ರಂಗಸಂಸ್ಥೆ. ಈ  ಕಾರ್ಮಿಕ ಸಂಘಗಳು ರಂಗತಂಡಗಳನ್ನು ರೂಪಿಸಿಕೊಂಡಾಗ ಎಂಥಾ ಪ್ರಾಮಾಣಿಕತೆಯಿಂದ ಮತ್ತು ನಿಷ್ಠೆಯಿಂದ ಕೆಲಸ ಮಾಡುತ್ತಾರೆಂಬುದನ್ನು ನಾನು ಹತ್ತಿರದಿಂದ ನೋಡಿದವ. ನಾನು ಪ್ರಜಾವಾಣಿಯ ಸಹಾಯಕ ಸಂಪಾದಕನಾಗಿದ್ದಾಗ ಅಲ್ಲಿನ ಲಲಿತ ಕಲಾ ಸಂಘದ ಅಧ್ಯಕ್ಷನಾಗಿದ್ದೆ. ಆ ಲಲಿತ ಕಲಾ ಸಂಘದ ಹೆಚ್ಚಿನ ಕಾಯಕರ್ತರು ಪ್ರೆಸ್ಸಿನ ಕೆಲಸಗಾರರು. ಲೆಟರ್  ಪ್ರೆಸ್ಸಿನ ದಿನಗಳವು ಅವು; ನೈಟ್ ಶಿಫ್ಟ್ ಇರುತ್ತಿತ್ತು; ಇಂಥಲ್ಲಿ  ನಾಟಕ ಆಡುವುದು ಎಂದರೆ ದಿನನಿತ್ಯದ ಯಾಂತ್ರಿಕತೆಯ ಹೊರಗೆ ಸೃಜನಶೀಲತೆಯನ್ನು ಹುಡುಕಿಕೊಳ್ಳುವ ಕ್ರಮವಾಗಿತ್ತು. ಬೆಮೆಲ್ ಕಾರ್ಮಿಕರಿಗೂ ಅದು ಅಂಥಾ ಸೃಜನಶೀಲತೆಯ ಖುಷಿ ಕೊಟ್ಟ ಕೆಲಸವೇ ಆಗಿರಬೇಕು. ಮೊದಲ ಪ್ರದರ್ಶನ ನಡೆದ ಜನವರಿ 2ರಂದು ಕಲಾಕ್ಷೇತ್ರದ ಪ್ರೇಕ್ಷಾಂಗಣ  ಬೆಮೆಲ್ ಕಾರ್ಮಿಕರಿಂದ ತುಂಬಿ ತುಳುಕುತ್ತಿತ್ತಂತೆ. 1970ರ ದಶಕದಲ್ಲಿ ಬೆಂಗಳೂರಿನಲ್ಲಿ ರಂಗ ಚಳವಳಿ ಪ್ರಾರಂಭವಾದಾಗ ಇದ್ದ ಪ್ರೇಕ್ಷಕರು ಹೆಚ್ಚಿನವರು ಮಧ್ಯಮ ವರ್ಗದವರು. ನಟ ನಟಿಯರೂ ಮಧ್ಯಮ ವರ್ಗದವರೇ. ಈಗ ಕಾರ್ಮಿಕ ವರ್ಗದಿಂದ ಪ್ರೇಕ್ಷಕರು ಮತ್ತು ನಟರು ಬರುತ್ತಿದ್ದಾರೆ ಎಂದರೆ ರಂಗ ಚಳವಳಿ ವ್ಯಾಪಿಸಿದೆ ಎನ್ನುವುದು ಸ್ಪಷ್ಟ. ಅಷ್ಟೇ ಮಟ್ಟಿಗೆ ಅಭಿರುಚಿಯೂ ವ್ಯಾಪಿಸಿದೆಯೇ? ವ್ಯಾಪಿಸುವಂತೆ ನೋಡಿಕೊಳ್ಳಬೇಕಾದ್ದು ಎಲ್ಲರ ಕರ್ತವ್ಯ. ಆದರೆ  ಎಲ್ಲರಿಗೆ ಅವಕಾಶವಿರುವ, ಎಲ್ಲವೂ ಎಲ್ಲರೂ ಪ್ರಚಾರ ಪಡೆಯುವ ಪ್ರಜಾಪ್ರಭುತ್ವದಲ್ಲಿ ಅತ್ಯುತ್ತಮವಾದದ್ದನ್ನು ಮಾತ್ರ ಪ್ರೋಮೋಟ್ ಮಾಡುವುದು ಸುಲಭವಲ್ಲ. ಒಳ್ಳೆಯ ನಾಟಕಗಳನ್ನು ಚೆನ್ನಾಗಿ ಆಡುತ್ತೇವೆ ಎಂದು ಸ್ನೇಹರಂಗದವರು ವ್ರತ ತೊಟ್ಟರೆ, ಈ ಪ್ರಚಾರಗಳ ಕಾಲದಲ್ಲಿ ಅದೇ ಮುಖ್ಯ ಸಾಧನೆ.

ಕುದುರೆ ಬಂತು ಕುದುರೆ   ಬರೆದದ್ದು ಅವಸರದಲ್ಲಿ. ಹೀಗೆ ಅವಸರದಲ್ಲಿ ನಾನು ಬರೆಯುವುದು ಅಪರೂಪ. ವರ್ಷಾನುಗಟ್ಟಲೆ ತೆಗೆದುಕೊಂಡು ನಿಧಾನಕ್ಕೆ ತಿದ್ದಿ ಬರೆಯುವುದು ನನ್ನ ಬರೆವಣಿಗೆಯ ಕ್ರಮ. ಅದಕ್ಕೆ ಇರುವ ಕೆಲವೇ ಅಪವಾದಗಳಲ್ಲಿ ಈ ನಾಟಕ ಒಂದು. 1981ರಲ್ಲಿ ನನ್ನ ನಾಟಕ ರಥಮುಸಲ ಕಲಾಕ್ಷೇತ್ರದಲ್ಲಿ ಮೊದಲ ಪ್ರಯೋಗ ಕಂಡಿತ್ತು ಹಾಗೂ ಪುಸ್ತಕವಾಗಿ ಪ್ರಕಟವೂ ಆಗಿತ್ತು. ಇದರ ರಂಗಪ್ರಯೋಗ ಚೆನ್ನಾಗಿ ಆಗದಿದ್ದರೂ ಕೆ. ವಿ. ಸುಬ್ಬಣ್ಣ, ಅನಂತಮೂರ್ತಿ, ಶಾಂತಿನಾಥ ದೇಸಾಯಿ, ಅಡಿಗರು ಮೊದಲಾದ ನಾನು ಗೌರವಿಸುತ್ತಿದ್ದ ಅನೇಕರು ಪ್ರಕಟಿತ ನಾಟಕವನ್ನು ಮೆಚ್ಚಿದ್ದರು. ಹೀಗಾಗಿ ನಾನು ನಾಟಕ ಬರೆಯಬಲ್ಲೆನೆಂಬ ವಿಶ್ವಾಸವನ್ನು ಅನೇಕರಲ್ಲಿ ಹುಟ್ಟಿಸಿದ್ದೆ. ಅಂಥವರಲ್ಲಿ ಒಬ್ಬ ಟಿ. ಎನ್. ನರಸಿಂಹನ್. ವಿದ್ಯಾರ್ಥಿ ದಿನಗಳಿಂದ ಗುರುತಿದ್ದ ಅವ ಬಂದು ನನ್ನ ಹತ್ತಿರ ಒಂದು ಕತೆ ಹೇಳಿ ಇದನ್ನು ನಾಟಕವಾಗಿ ಬರೆದು ಕೊಡು ಅಂದ. ನನ್ನಲ್ಲಿ ಆ ಕತೆ ಅನೇಕ ಭಾವನೆಗಳನ್ನು ಹುಟ್ಟಿಸಿತು. ಹೀಗಾಗಿ ಬರೆಯಲು ಕೂತೆ. ಬರೆಯುತ್ತಿದ್ದಂತೆ ಕತೆ ಬೇರೆಯೇ ರೂಪ ತಾಳಿ ನಾಟಕವಾಯಿತು. ಅವನ ಕತೆಯಲ್ಲಿಲ್ಲದ ಪಾತ್ರಗಳೂ ಹುಟ್ಟಿಕೊಂಡವು. ಅಂತಿಮವಾಗಿ ತಿದ್ದಿ ಪ್ರಕಟಿಸುವ  ಹೊತ್ತಿಗೆ ನಾಟಕ ಈಗಿರುವ ರೂಪ ತಾಳಿತು.

ಅವಸರದಲ್ಲಿ ಬರೆದಿದ್ದರೂ ನನಗೆ ಇದರ ಬರೆವಣಿಗೆ ಖುಷಿ ಕೊಟ್ಟಿತ್ತು. ಒಂದು ಕಾರಣ, ಬರೆಯುತ್ತಾ ಕುದುರೆಯ ವಿವಿಧ ಸಾಂಕೇತಿಕ ಆಯಾಮಗಳು ಹೊಳೆಯತೊಡಗಿದ್ದು. ಅವುಗಳಲ್ಲಿ ಒಂದು ಕೀಲು ಕುದುರೆಯ ಕಥೆ. ಇದು ಅರೇಬಿಯನ್ ನೈಟ್ಸಿನಲ್ಲಿ ಬರುವ ಕಥೆ. ಕುದುರೆ ನಂಬಿ ಹತ್ತಿದವ ಎಲ್ಲಿಯೋ ಕಳೆದು ಹೋಗುತ್ತಾನೆ ಎಂಬ ಈ ಕಥೆ ಅನೇಕ ಸಾಧ್ಯತೆಗಳನ್ನು ಹೊಳೆಯಿಸಿತು. ಹೀಗಾಗಿಯೇ ಮರುಮುದ್ರಣವಾದಾಗ ನಾಟಕಕ್ಕೆ ಕೀಲುಕುದುರೆ ಎಂಬ ಉಪಶೀರ್ಷಿಕೆಯನ್ನೂ ಕೊಟ್ಟೆ--ಅಲ್ಲಿನ ಎಲ್ಲ ಪಾತ್ರಗಳೂ ಒಂದಲ್ಲ ಒಂದು ಕುದುರೆ ಹತ್ತಿರುತ್ತಾರೆ ಮತ್ತು ಇಳಿಯುವುದು ಹೇಗೆಂದು ಗೊತ್ತಿಲ್ಲದೆ ಕುದುರೆಯ ಬೆನ್ನಿಗೆ ನೇತಾಡುತ್ತಿರುತ್ತಾರೆ ಎಂಬ ಅರ್ಥದಲ್ಲಿ.

ಈ ನಾಟಕ ತನ್ನ ಅವತಾರಗಳಲ್ಲಿ ಅದೃಷ್ಟಶಾಲಿ. ಯಾರು ಯಾರೋ ಓದಿ ಇದನ್ನು ಇಷ್ಟಪಟ್ಟಿದ್ದಾರೆ, ಆಡಿದ್ದಾರೆ. ಪುಸ್ತಕವಾಗಿ ಪ್ರಕಟವಾದ ಸುರುವಿಗೆ ನಮ್ಮ ನಾಡಿನ ಪ್ರಮುಖ ನಾಟಕಕಾರರಲ್ಲೊಬ್ಬರಾದ ಶ್ರೀರಂಗರು "ವಾಸ್ತವಿಕತೆಯನ್ನು ನಮ್ಮವರು ಎದುರಿಸುವ ವಿವಿಧ ಬಣ್ಣಗಳನ್ನು ಚಿತ್ರಿಸುವ ಸಹಜ ಪಾತ್ರಗಳ ದಿನನಿತ್ಯದ ಆಡುಮಾತಿನ ಶೈಲಿಯ ಒಳ್ಳೆಯ ನಾಟಕ ಕುದುರೆ ಬಂತು ಕುದುರೆ...ಭೂತ ಮತ್ತು ಭವಿಷ್ಯತ್ಕಾಲಗಳನ್ನು ನಂಬಿ ಕಷ್ಟನಷ್ಟಗಳ ವರ್ತಮಾನ ಕಾಲವನ್ನು ಸಹಿಸಿಕೊಳ್ಳುವ ನಮ್ಮ ಸಾಮಾನ್ಯ ಸಾಮಾಜಿಕರ ಚಿತ್ರ ನಾಟಕದಲ್ಲಿ ಪರಿಣಾಮಕಾರಕವಾಗಿ ಎದ್ದು ನಿಂತಿದೆ" ಎಂದು ಪ್ರಜಾವಾಣಿಯಲ್ಲಿ ರೆವ್ಯೂ ಬರೆದರು. ಸಿನೆಮಾ ನಟ ಪ್ರಕಾಶ್ ರೈ ಅಂತಿಮ ಬಿಕಾಂನಲ್ಲಿದ್ದಾಗ ಇದನ್ನು ಗೆಳೆಯರ ಜೊತೆ ಸೇರಿ ಆಡಿದ್ದರು. ಭದ್ರಾವತಿಯಲ್ಲಿ ಯಾರೋ ಒಬ್ಬರು ಓದಿ ಗಣೇಶೋತ್ಸವದಂದು ಆಡಿದ್ದರು.  ಜೋಗದಲ್ಲಿ ಈಗ ಎರಡು ವರ್ಷಗಳ ಕೆಳಗೆ ಇದನ್ನೋದಿ ಖುಷಿಯಾಗಿ ಬೇರೆಲ್ಲಾ ರಿಹರ್ಸಲ್ ನಿಲ್ಲಿಸಿ ಈ ನಾಟಕವನ್ನು ಆಡಿಸಿದೆ ಎಂದು ಒಬ್ಬರು ರಂಗಕರ್ಮಿ ಫೋನ್ ಮಾಡಿದ್ದರು. ಈ ನಾಟಕದ ಹೆಂಗಸಿಗೆ ಆದ ಥರದ್ದೇ ಅನುಭವ ಆದ ಮತ್ತೊಬ್ಬರು ಮಹಿಳೆ ಇದನ್ನು ಹಿಂದಿಗೆ ಅನುವಾದಿಸಿದ್ದರು. ಸಾಹಿತ್ಯ ಅಕಾಡೆಮಿ ಹಿಂದಿ  ದ್ವ್ಯಮಾಸಿಕ ಸಮಕಾಲೀನ್ ಭಾರತೀಯ್ ಸಾಹಿತ್ಯ್  ಸಂಪಾದಕ ಲೇಖಕ ಗಿರಿಧರ್ ರಾಠಿ ಇದನ್ನು ಇಷ್ಟಪಟ್ಟು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಈ ನಾಟಕದ ಜೊತೆ ಬೇರೆ ಭಾರತೀಯ ಭಾಷೆಗಳ ಐದಾರು ನಾಟಕಗಳನ್ನು ಸೇರಿಸಿ ಅದನ್ನು ಅವರು ಸಮಕಾಲೀನ ಭಾರತೀಯ ನಾಟಕಗಳ ವಿಶೇಷ ಸಂಚಿಕೆಯನ್ನಾಗಿ ರೂಪಿಸಿದ್ದರು. ಈಗ  ಬೆಮೆಲ್ ಕಾರ್ಮಿಕರು ಇದನ್ನು ಆಡಿದ ಮೇಲೆ ಮತ್ತೆ ಇಂಥದೊಂದು ನಾಟಕ ಬರೆಯಬೇಕು ಅನ್ನಿಸುತ್ತದೆ. ಕಾರ್ಮಿಕರ ಜೊತೆಗಿನ ನನ್ನ ಅನುಭವ ಆಧರಿಸಿಯೇ ಬರೆಯಬೇಕು.

ಇಂಥಾ ನಾಟಕದ ಮುಖ್ಯ ಅನುಕೂಲವೆಂದರೆ ರಂಗಸಜ್ಜಿಕೆ, ವೇಷ ಭೂಷಣಗಳಿಗಾಗಿ ಇವಕ್ಕೆ ಹೆಚ್ಚು ಖರ್ಚಾಗುವುದಿಲ್ಲ. ದಿನನಿತ್ಯದ ಕಾಸ್ಟ್ಯೂಮ್, ಸರಳ ರಂಗಸಜ್ಜಿಕೆ  ಸಾಕು. ಕಾರ್ಮಿಕರೇ ಸೇರಿ ಆಡುತ್ತಾರೆ ಎಂದ ಮೇಲೆ ಹೆಚ್ಚು ಹಣ ತೊಡಗಿಸದೆ ಆಡಬಹುದಾದ ಇಂಥಾ ನಾಟಕಗಳ ಅಗತ್ಯವಿದೆ. ಆದರೆ, ನನಗೆ ನಾಟಕ ಎಂದರೆ ಬರಿಯ ದೃಶ್ಯಗಳ ಜೋಡಣೆ ಅಲ್ಲ. ಆಂಗಿಕದಷ್ಟೇ ವಾಚಿಕವೂ ಮುಖ್ಯ. ಅದು ಕಾಲ ದೇಶಕ್ಕೆ ಬದ್ಧವಾದ ಮನುಷ್ಯನ ಪಾಡಿನ ಬಗ್ಗೆ  ಹೇಳುತ್ತಿರಬೇಕು. ಅಂದರೆ, ಒಟ್ಟಾಗಿ ಅದೊಂದು ಮೆಟಫರ್ ಆಗಿರಬೇಕು. ಅಂಥದೊಂದನ್ನು ಬರೆಯಬೇಕು ಎಂಬ ಆಸೆಯನ್ನು ಮತ್ತೆ ಈ ಪ್ರಯೋಗ ಮೂಡಿಸಿದೆ.