Friday, March 25, 2011

ಡಾಗ್ ಶೋ: ನಾಯಿಗಳೇ ಪಾತ್ರಗಳು

ಮೇಲಿನದ್ದು ಮಾರ್ಚ್ 20ರಂದು ಬಿಡುಗಡೆಯಾದ ಪುಸ್ತಕಗಳಲ್ಲಿ ಒಂದು. ಇದರಲ್ಲಿ ಮೂರು ನಾಟಕಗಳಿವೆ. ಡಾಗ್ ಶೋ ನಾಯಿಗಳೇ ಪಾತ್ರಗಳಾಗುಳ್ಳ ನಾಟಕ. ಇದರಲ್ಲಿ ಮೂರು ಬಗೆಯ ನಾಯಿಗಳಿವೆ. ಶುನಕ ನಮ್ಮ ಪುರಾಣಗಳಲ್ಲಿ, ಮಹಾಭಾರತದಲ್ಲಿ, ಉಪನಿಷತ್ತುಗಳಲ್ಲಿ ಬರುವವುಗಳು. ನಾಯಿಗಳು ಊರು ನಾಯಿಗಳು, ಬೀದಿ ನಾಯಿಗಳು. ಡಾಗುಗಳು ಅಲ್ಶೇಷಿಯನ್ ಮೊದಲಾದ ವಿದೇಶೀ ತಳಿಗಳು. ಒಂದಕ್ಕೊಂದರ ಮಧ್ಯೆ ಜಗಳವಾಗುತ್ತದೆ; ವಿದೇಶೀ ತಳಿಯಾದ ಡಾಗು ತಾನೇ ಪರಮೋಚ್ಛ ಎಂದರೆ ಪುರಾತನದ ಶುನಕ ತಾನೇ ಪರಮೋಚ್ಛ ಎನ್ನುತ್ತದೆ. ಬೀದಿ ನಾಯಿಗಳು ನಾವು ಶುನಕಗಳ ವಂಶಸ್ಥರು ಎನ್ನುತ್ತವೆ. ಇದರಿಂದ ಪುರಾತನ ಶುನಕಗಳಿಗೆ ಸಿಟ್ಟು ಬರುತ್ತದೆ. ಯುದ್ಧದ ವರೆಗೆ ಹೋಗುತ್ತದೆ. ಕೊನೆಗೆ ಹೆಣ್ಣು ಡಾಗುಗಳ ಹಿಂದೆ ಗಂಡು ನಾಯಿಗಳೂ ಗಂಡು ನಾಯಿಗಳ ಹಿಂದೆ ಹೆಣ್ಣು ಡಾಗುಗಳೂ ಹೋಗಿ ಮಕ್ಕಳನ್ನು ಹುಟ್ಟಿಸುವುದರಿಂದ ಯುದ್ಧ ಅಸಾಧ್ಯವಾಗಿ ರಾಜಿಯಲ್ಲಿ ಮುಗಿಯುತ್ತದೆ.

ರಾಹು ಮತ್ತು ಕೇತುವಿನಲ್ಲಿ ರುಂಡ ಮತ್ತು ಮುಂಡ ಮಾತ್ರ ಇವೆ. ರಾಹು ರುಂಡ; ಕೇತು ಮುಂಡ. ಪುರಾಣದ ಪ್ರಕಾರ, ಈ ರುಂಡ ಮುಂಡ ಅಸುರನಾದ ಒಬ್ಬನೇ ವ್ಯಕ್ತಿಗೆ ಸೇರಿದವುಗಳು.  ಅವ ಅಮೃತ ಹಂಚುತ್ತಿದ್ದಾಗ ಸುರನ ವೇಷ ತೊಟ್ಟು ಸಾಲಿನಲ್ಲಿ ಹೋಗಿ ಕೂತ. ಅಮೃತ ಹಂಚುತ್ತಿದ್ದ ದೇವರಿಗೆ ಇದು ಗೊತ್ತಾಗಿ ಅಮೃತ ಹಂಚುತ್ತಿದ್ದ ಸೌಟಿನಿಂದ ಅವನ ತಲೆ ಕತ್ತರಿಸಿದ. ಆಗ ಸೌಟಲ್ಲಿದ್ದ ಅಮೃತ ಅವನ ದೇಹಕ್ಕೆ ಸೇರಿ ಅವ ಅಮರನಾದ. ಹೀಗೆ ಅಮರನಾಗಬೇಕೆಂಬ ಅವನ ಆಸೆ ಪೂರೈಸಿತು. ಅಷ್ಟರ ಮಟ್ಟಿಗೆ ದೇವರು ಸೋತ. ಆದರೆ ಅವನೂ  ವಿಚ್ಛಿದ್ರನೂ ಆಗಿಬಿಟ್ಟ. ಅಮರ, ಆದರೆ ವಿಚ್ಛಿದ್ರ. ನನ್ನ ನಾಟಕ ರುಂಡ ಮುಂಡಗಳು ಪ್ರತ್ಯೇಕಗೊಂಡು ಎಲ್ಲಿಯೋ ಬಿದ್ದಿದ್ದವರು ಮತ್ತೆ ಒಂದೇ ಕಡೆ ಅಕಸ್ಮಾತ್ತಾಗಿ ಸೇರುವುದರಿಂದ ಪ್ರಾರಂಭವಾಗುತ್ತದೆ. ಕೇತು ಬರೀ ದೇಹ: ಯೋಚಿಸಲಾರ, ಮಾತಾಡಲಾರ. ಆದರೆ ಕೈ ಕಾಲುಗಳೂ, ಕೈಯ್ಯಲ್ಲಿ ಕತ್ತಿಯೂ ಇರುವುದರಿಂದ ಕ್ರಿಯೆಯಲ್ಲಿ ತೊಡಗಬಲ್ಲ. ರಾಹು ಬರೀ ರುಂಡ: ಏನೂ ಮಾಡಲಾರ; ಆದರೆ ಕಣ್ಣು ಕಿವಿ ನಾಲಗೆಗಳಿರುವುದರಿಂದ ಗ್ರಹಿಸಬಲ್ಲ; ಯೋಚಿಸಬಲ್ಲ; ಮಾತಾಡಬಲ್ಲ. ನಾಟಕದುದ್ದಕ್ಕೂ ರಾಹು ತನ್ನ ಒಳಗುದಿಗಳನ್ನು ಹೇಳುತ್ತಾ ತನ್ನ ದೇಹದ ಜೊತೆ ಒಂದಾಗಲು ಪ್ರಯತ್ನಿಸುತ್ತಾನೆ. ಅವನು ದೇಹದ ಜೊತೆ ಸೇರಿಬಿಟ್ಟರೆ ಈ ವಿಚ್ಛಿದ್ರ ಸ್ಥಿತಿ ಮುಗಿಯುತ್ತದೆ; ಪೂರ್ಣನಾಗುತ್ತಾನೆ. ಅಮರತ್ವ ಸಿದ್ಧಿಸಿರುವ ಅವನು ಪೂರ್ಣನಾದರೆ ದೇವರಿಗೆ ಸಮಾನನಾಗುತ್ತಾನೆ; ದೇವರಿಗೆ ಸರಿ ಸಮಾನವಾದ ರಾಜ್ಯವನ್ನು ಕಟ್ಟುವುದು ಅವನಿಗೆ ಸಾಧ್ಯವಾಗುತ್ತದೆ. ಆದರೆ ಮುಂಡ ಮಾತ್ರನಾದ ಕೇತು ಮಾತ್ರ ತನ್ನ ದೇಹದ ಜೊತೆ ಸೇರಿ ಇಡಿಯಾಗಬೇಕೆಂಬ  ರಾಹುವಿನ ಆಸೆಗೆ  ಕುಮ್ಮಕ್ಕು ಕೊಡುವವನಲ್ಲ. ಅವನಿಗೆ ತನ್ನ ದೇಹವನ್ನು--ದೇಹದ ಆಸೆಗಳನ್ನು, ಸೆಳೆತಗಳನ್ನು--ಮೆದುಳು--ಬುದ್ಧಿಶಕ್ತಿ--ನಿಯಂತ್ರಸುವುದು ಬೇಕಾಗಿಲ್ಲ. ದೇಹಕ್ಕೆ ಬೇಕಾದಂತೆ ಸ್ವಚ್ಛಂದವಾಗಿ, ಬುದ್ಧಿಯ ನಿಯಂತ್ರಣವಿಲ್ಲದೆ  ನಡೆದುಕೊಳ್ಳುವುದರಲ್ಲಿ ಮಹಾ ಶಕ್ತಿಶಾಲಿಯೂ ಆಯುಧವನ್ನು ಹೊಂದಿದವನೂ ಆದ ಅವನು ಹೆಚ್ಚು ಸುಖ ಕಾಣುತ್ತಾನೆ.

ಕನ್ನಡ ಸಾಹಿತ್ಯದಲ್ಲಿ ಅಪೂರ್ಣತೆ ಒಂದು ಮುಖ್ಯ ವಸ್ತು. ಹಯವದನ ಅಪೂರ್ಣತೆ ಬಗೆಗಿನ ಕೃತಿ ಎಂಬುದು ಈಗಾಗಲೇ ಚರ್ಚೆ ಆಗಿರುವಂಥದು. ಶಿವರಾಮ ಕಾರಂತರ ಕಾದಂಬರಿ ಮೈ ಮನಗಳ ಸುಳಿಯಲ್ಲಿ  ಕೂಡಾ ಇದೇ  ವಸ್ತುವನ್ನು ಹೊಂದಿದೆ. ನನ್ನನ್ನೂ ಈ ವಸ್ತು ಅನೇಕ ವರ್ಷಗಳಿಂದ ಕಾಡುತ್ತಿತ್ತು. ತತ್ವಜ್ಞಾನದಲ್ಲಿ ದೇಹ ಮನಸ್ಸುಗಳ ಡೈಕಾಟಮಿ ಬಗ್ಗೆ ಓದಿದ್ದು ಅನೇಕ ವಿಚಾರಗಳನ್ನು ಸ್ಪಷ್ಟಪಡಿಸಿಕೊಳ್ಳಲು ನೆರವಾಯಿತು. ಇದಕ್ಕಿಂತ ಮೊದಲು "ಎಷ್ಟೊಂದು ಹುಡುಗಿಯರು"  ಮೊದಲಾದ ನನ್ನ ಪದ್ಯಗಳಲ್ಲಿ ಈ ವಸ್ತುವನ್ನು ಬೇರೆ ರೀತಿಯಲ್ಲಿ ಡೀಲ್  ಮಾಡಿದ್ದೆ. ರಾಹು ಮತ್ತು ಕೇತುವಿನ ಕತೆಯಲ್ಲಿ ನನಗೆ ಅದಕ್ಕೆ ಬೇಕಾದ ಒಂದು ಘಟ್ಟಿ ಮೆಟಫರ್ ಸಿಕ್ಕಿತು. ಆ ಹೆಸರಿನ ಒಂದು ಪದ್ಯವನ್ನೂ ಈ ನಾಟಕ ಬರೆದಾದ ಮೇಲೆ ಬರೆದೆ. ಅದು ನನ್ನ ಹೊಸ ಸಂಗ್ರಹ ಐದು ಕವನಗಳುನಲ್ಲಿದೆ.

ಜರಾಸಂಧ  ಕೂಡಾ ಪುರಾಣದ ಕತೆಯನ್ನು ಪುನರ್ವ್ಯಾಖ್ಯಾನಿಸಿದ ನಾಟಕ. ಒಬ್ಬ ಚೆನ್ನಾಗಿ ಕುಣಿಯುವ ಒಳ್ಳೆಯ ಅಂಗಸೌಷ್ಠವದ ವ್ಯಕ್ತಿಯನ್ನ ಒಂದು ಆಯುಧ ಸೀಳಿ ಎಸೆಯುವುದು, ಆ ಸೀಳುಗಳು ಮತ್ತೆ ಕೂಡುವುದು, ಕೊನೆಗೆ ಸೀಳಿ ರಿವರ್ಸ್ ರೀತಿಯಲ್ಲಿ ಎಸೆಯುವುದು, ಅವು ಕೂಡಲಾಗದೆ, ಆದರೆ ಕೂಡುವುದಕ್ಕಾಗಿ ಒದ್ದಾಡುತ್ತಾ, ವಿಚ್ಛಿದ್ರವಾದರೂ ಒದ್ದಾಡುತ್ತಾ--ಹೀಗೆ ಈ ನಾಟಕ. ಚಿಕ್ಕದು. ಸುಮಾರು ನಾಲ್ಕು ಪುಟ. ಮಾತಿಲ್ಲ. ಹಾಡು ಮತ್ತು ಕ್ರಿಯೆ ಮಾತ್ರ. ಆದರೆ ಆಡಲು  ಹೆಚ್ಚು ಕಡಿಮೆ ಒಂದು ಗಂಟೆ ಬೇಕಾಗಬಹುದು.

ಪುಸ್ತಕದ ಕುರಿತು ಮಾತಾಡಿದ ಡಾ. ನರಹಳ್ಳಿ  ಬಾಲಸುಬ್ರಹ್ಮಣ್ಯ ಅವರು ಇವು ಕುವೆಂಪು ಹೇಳುವ ರೀತಿಯ ಮನೋರಂಗಭೂಮಿಗಾಗಿ ಬರೆದ ನಾಟಕಗಳೆಂದೂ ಅವುಗಳನ್ನು ಆಡಬೇಕೆಂಬ ಇಚ್ಛೆ ಲೇಖಕರಿಗೆ ಇದ್ದಂತಿಲ್ಲ ಎಂದೂ ಹೇಳಿದರು. ನಾಟಕಕಾರನೊಬ್ಬ ಪ್ರಸ್ತುತ ಅಸ್ತಿತ್ವದಲ್ಲಿರುವ ರಂಗಭೂಮಿಗೆ ಮಾತ್ರ ಬರೆಯಬಾರದು., ತನ್ನ ಮನಸ್ಸಿನಲ್ಲಿರುವ ರಂಗಭೂಮಿಗಾಗಿ ಬರೆಯಬೇಕು, ಆಗ ಅವನಿಗೆ ಪ್ರಸ್ತುತ ರಂಗಭೂಮಿಯಿಂದ ಬಿಡುಗಡೆ ಪಡೆದು ಪ್ರಯೋಗಶೀಲನಾಗಲು ಸಾಧ್ಯವಾಗುತ್ತದೆ ಎಂಬುದು ನನ್ನ ನಿಲುವು. ಆದರೆ ಈ ನಾಟಕಗಳನ್ನು ಆಡಲು ಸಾಧ್ಯವಿಲ್ಲ ಎಂಬುದು ಸರಿಯಲ್ಲ. ಇವುಗಳನ್ನು ಮುಖವಾಡ ಮತ್ತು ವೇಷ ಬಳಸಿ ಸುಲಭವಾಗಿ ಆಡಬಹುದು. ಡಾಗ್ ಶೋದಲ್ಲಿ ಶುನಕ, ನಾಯಿ, ಡಾಗುಗಳಿಗಾಗಿ ವಿಭಿನ್ನ ಮುಖವಾಡ ಮತ್ತು ವೇಷ ಬಳಸಬಹುದು. ಮತ್ತು ಈ ಮುಖವಾಡ ಭೂತಕೋಲದಷ್ಟು ಹಳತು. ಭೂತಕೋಲದಲ್ಲಿ ಪಿಲಿಚಾಮುಂಡಿ, ರಕ್ತೇಶ್ವರಿ ಮೊದಲಾದ ಭೂತಗಳಿಗೆ ಮುಖವಾಡಗಳಿವೆ. ಮುಖವಾಡ ಎಲ್ಲಾ ಭೂತಚಾವಡಿಗಳ ಅವಿಭಾಜ್ಯ ಅಂಗ. ಹಾಗೆಯೇ ವೇಷ ಬದಲಾವಣೆಯಿಂದ ಪಾತ್ರಗಳ ವ್ಯಕ್ತಿತ್ವ  ಸೂಚಿಸಬಹುದು ಎಂಬುದು ಕೂಡಾ. ಬಿ. ವಿ. ಕಾರಂತರು ಹಯವದನದಲ್ಲಿ ಕಪಿಲ ದೇವದತ್ತರ ತಲೆ ಬದಲಾದದ್ದನ್ನು ವೇಷ ಬದಲಾವಣೆಯ ಮೂಲಕವೇ ಸೂಚಿಸಿದ್ದರು. ಡಾಗು--ನಾಯಿ--ಶುನಕಗಳಿಗೆ ಪ್ರತ್ಯೇಕ ಕಾಸ್ಟ್ಯೂಮು ಹಾಕುವ ಮೂಲಕ ಅವುಗಳ ವ್ಯತ್ಯಾಸ ಸೂಚಿಸಬಹುದು. ಹೀಗೆ ಈ ನಾಟಕ ಕಾಸ್ಟ್ಯೂಮು ಮಾಡುವವರಿಗೆ ಒಂದು ಸೃಜನಶೀಲ ಅವಕಾಶ ಒದಗಿಸುತ್ತದೆ ಎಂದು ನನ್ನ ತಿಳುವಳಿಕೆ. ಒಂದು ನಾಟಕದ ಪ್ರಯೋಗದಲ್ಲಿ ತೊಡಗುವ ಎಲ್ಲರಿಗೆ--ನಟ ನಟಿಯರು, ಕಾಸ್ಟ್ಯೂಮು ಮಾಡುವವರು, ಲೈಟು ಮಾಡುವವರು, ಧ್ವನಿ ಸಂಯೋಜಕರು, ರಂಗ ವಿನ್ಯಾಸಕರು, ಎಲ್ಲರಿಗೆ--ಸೃಜನಶೀಲ ಅವಕಾಶಗಳನ್ನು ಒದಗಿಸುವ ನಾಟಕ ಬರೆಯಬೇಕೆಂಬುದು ನನ್ನ ಆಸೆಗಳಲ್ಲಿ ಒಂದು.

ಡಾಗ್ ಶೋ ಗೀತನಾಟಕ. ಗೀತ-ನೃತ್ಯಗಳೇ ಅದರ ಮುಖ್ಯ ಜೀವಾಳ. ಪುತಿನ, ಶಿವರಾಮ ಕಾರಂತ ಮೊದಲಾದವರ ಗೀತ ನಾಟಕ ಓದಿದಾಗಿಂದ, ಬಿ. ವಿ. ಕಾರಂತರ ಪ್ರಯೋಗಗಳನ್ನು ನೋಡಿದಾಗಿಂದ ಹೊಸ ಬಗೆಯ ಗೀತ ನಾಟಕ ಬರೆಯಬೇಕೆಂದು ಮನಸ್ಸಲ್ಲಿ ತುಂಬಾ ಇತ್ತು. ಹಾಡಿನ ರೀತಿಯಲ್ಲಿ ಇಲ್ಲಿನ ಪಾತ್ರಗಳು ಮಾತಾಡುವುದು ವಾಸ್ತವದ ಕಟ್ಟಪಾಡಿಗಳಿಂದ ಅವನ್ನು ಬಿಡುಗಡೆ ಮಾಡುವುದಕ್ಕೂ ಅಗತ್ಯ.

ಬಹುಶಃ ಸಂಪೂರ್ಣವಾಗಿ ಪ್ರಾಣಿಗಳನ್ನೇ ಪಾತ್ರವಾಗಿ ಹೊಂದಿರುವ ಕನ್ನಡದ ಮೊದಲನೆಯ ನಾಟಕ ಇದಾಗಿರಬಹುದು. ನನ್ನ ಮೂಗೇಲ ಕಥಾಸಂಗ್ರಹದ  ಮುನ್ನುಡಿಯಲ್ಲಿ ಮತ್ತೆ ನಮ್ಮ ಪ್ರಾಚೀನ ಕೃತಿಗಳ ಬರೆವಣಿಗೆಯ ಕ್ರಮಕ್ಕೆ ಹಿಂದೆ ಹೋಗಿ ನಮ್ಮನ್ನು ನಾವು ಪುನರ್ ಆವಿಷ್ಕರಿಸಿಕೊಳ್ಳಬೇಕು ಎಂದಿದ್ದೆ. ಡಾಗ್ ಶೋ ಪ್ರಾಣಿಗಳೇ ತುಂಬಿರುವ ಪಂಚತಂತ್ರದ ಪ್ರಪಂಚಕ್ಕೆ ಹಿಂದೆ ಹೋಗಿ ಇಂದಿನ ಮನುಷ್ಯ ಸಮಾಜಕ್ಕೆ ಸೇರಿದ ಅನುಭವವವನ್ನು ಹೇಳುವ ಪ್ರಯತ್ನವಾಗಿದೆ.

ರಾಹು ಮತ್ತು ಕೇತು ಬೊಂಬೆ ಆಟ. ಇದನ್ನು ಮತ್ತು ಜರಾಸಂಧವನ್ನು ಎನಿಮೇಶನ್ ಸಿನೆಮಾ ಕೂಡಾ ಮಾಡಬಹುದು. ಇದರಲ್ಲಿ ಕ್ರಿಯೆ ಇಲ್ಲ ಎನ್ನುವುದು ಸರಿಯಲ್ಲ. ಕೇತು ನಾಟಕದುದ್ದಕ್ಕೆ ಕ್ರಿಯೆಯಲ್ಲಿ ತೊಡಗಿದ್ದಾನೆ. ಅದಕ್ಕಿಂತ ಹೆಚ್ಚು, ನನಗೆ ವಾಚಿಕದ ವಿವಿಧ ಸಾಧ್ಯತೆಗಳನ್ನು ಅನ್ವೇಷಿಬೇಕಾಗಿತ್ತು. ರಾಹು ನಾಟಕದುದ್ದಕ್ಕೆ ಮಾತಾಡುತ್ತಾನೆ. ವಿವಿಧ ರೀತಿಯಲ್ಲಿ ಮಾತಾಡುತ್ತಾನೆ. ಜೊತೆಗೆ ಬೋರು ಕಳೆಯಲು ವಿಧ ಬಗೆಯ ಶಬ್ದ ಮಾಡುತ್ತಾನೆ; ಪ್ರತಿಧ್ವನಿಗಳು ಮತ್ತೆ ಮತ್ತೆ ಕೇಳುವ ರೀತಿಯಲ್ಲಿ  ಮಾತಾಡುತ್ತಾನೆ. ಹೀಗೆ ಧ್ವನಿಗಳ, ಮಾತಿನ  ವಿವಿಧ ಸಾಧ್ಯತೆಗಳನ್ನು ತಿಳಿದುಕೊಳ್ಳುವುದಕ್ಕಾಗಿಯೇ ಈ ನಾಟಕ ಬರೆದೆ ಅಂದರೂ ಸಲ್ಲುತ್ತದೆ. ಅದಕ್ಕೆ ಬೇಕಾದ ಅವಕಾಶಗಳಿಲ್ಲದ ರಂಗಶಾಲೆಯಲ್ಲಿ ಈ ನಾಟಕ ಆಡಲೂ ಬಾರದು. ಆಡುವುದು ಸಾಧ್ಯವೂ ಆಗಲಾರದು. ಎಕೋ ಹೊಡೆಯುವ ರಂಗಶಾಲೆಗಳು ಬೇರೆ ನಾಟಕಗಳಿಗೆ ತ್ಯಾಜ್ಯ; ಈ ನಾಟಕಕ್ಕೆ ಅದೇ ಪ್ರಯೋಜನಕಾರಿ.

ಡಾಗ್ ಶೋ ಜಾಕ್ಕಿ ನಾಯಿಗೆ ಅರ್ಪಿತವಾಗಿದೆ. ಜಾಕ್ಕಿ ನನ್ನನ್ನು ತುಂಬಾ ಹಚ್ಚಿಕೊಂಡಿದ್ದ ಒಂದು ನಾಯಿ. ನಾಯಿಗಳ ಬಗ್ಗೆ ನನಗೆ ಗೊತ್ತಿರುವ ಹೆಚ್ಚಿನ ವಿಷಯಗಳನ್ನು ಕಲಿತದ್ದು ಇದರಿಂದಲೇ. ಇದು ನನ್ನ ತಮ್ಮನ ಮನೆಯ ನಾಯಿ. ಆದರೆ ಅಲ್ಲಿ ಕಟ್ಟಿ ಹಾಕಿದರೂ ಹೇಗೋ ತಪ್ಪಿಸಿಕೊಂಡು ಬಂದು ನನ್ನ ಮನೆಯಲ್ಲಿ ಇರುತ್ತಿತ್ತು. ನಾನು ಕಲ್ಮಡ್ಕ ಪೇಟೆಗೆ ನಡೆದುಕೊಂಡು ಹೊರಟರೆ ನನ್ನ ಹಿಂದಿನಿಂದಲೇ ಹೊರಡುತ್ತಿತ್ತು. ಎದುರಿಗೆ ಯಾವುದಾದರೂ ನಾಯಿ ಬಂದರೆ ಅಡಗಿಕೊಳ್ಳುತ್ತಿತ್ತು. ಪುಕ್ಕ ಅಂದರೆ ಪುಕ್ಕ. ಚಿಕ್ಕಂದಿನಲ್ಲಿ ಯಾವುದಾದರೂ ನಾಯಿಯಿಂದ ಪೆಟ್ಟು ತಿಂದಿತ್ತೋ ಏನೋ; ಹೆದರಿಕೆ ಕೂತುಬಿಟ್ಟಿತ್ತು. ಹೆಣ್ಣು ನಾಯಿ ಎದುರು ಬಂದರೆ ಮಾತ್ರ ಜೊತೆಗೆ ಬರುವುದು ಬಿಟ್ಟು ಅದರ ಜೊತೆ ಹೋಗಿ ಕುಶಲ ವಿಚಾರಿಸಿ ಮೂಸಬೇಕಾದ ಕಡೆ ಮೂಸಿ ನೋಡಿ ಮತ್ತೆ ನನ್ನನ್ನು ಸೇರುತ್ತಿತ್ತು. ನಾನು ಕಾರಿನಲ್ಲಿ ಹೋದರೆ ಅದಕ್ಕೆ ಜೊತೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಅಗ ಗೇಟಿನ ಹತ್ತಿರ ಪಾಂಕು ಹಿಡಿದು ಅಳುತ್ತಾ ಕೂತಿರುತ್ತಿತ್ತಂತೆ. ನನ್ನ ತಮ್ಮನ ಮನೆಯ  ನಾಯಿ, ಅಲ್ಲಿಗೇ ಹೋಗುವುದಾದರೆ ಹೋಗಲಿ ಎಂದು ನಾನು ಅದಕ್ಕೆ ಅನ್ನ ಹಾಕದೆ ಕೂಡಾ ಇದ್ದೆ. ನನ್ನ ಮನೆ ಎದುರೇ ಉಪವಾಸ ಕೂತಿರುತ್ತಿತ್ತೇ ಹೊರತು ಅಲ್ಲಿಗೆ ಹೋಗುತ್ತಿರಲಿಲ್ಲ. ಅವರು ಅದಕ್ಕಾಗಿಯೇ ಒಂದು ಗೂಡು ಮಾಡಿಸಿ ಸಂಕೋಲೆಯಲ್ಲಿ ಕಟ್ಟಿ ಹಾಕಿದರೂ ಹೇಗೋ ತಪ್ಪಿಸಿಕೊಂಡು ನನ್ನ ಮನೆ ಮುಂದೆ ಹಾಜರಾಗುತ್ತಿತ್ತು. ಬಾಗಿಲು ಹಾಕಿದ್ದರೆ ಬಾಗಿಲನ್ನೇ ನೋಡುತ್ತಾ ಕಾಯುತ್ತಾ ಇರುತ್ತಿತ್ತು. ಕಿಟಿಕಿಯಲ್ಲಿ ನನ್ನ ಮುಖ ಕಂಡರೆ ಅದಕ್ಕೇ ವಿಶಿಷ್ಟವಾದ ಕೆಲವು ಧ್ವನಿಗಳಿಂದ ತನ್ನ ಇರವನ್ನು ಸೂಚಿಸುತ್ತಿತ್ತು; ಬಾಗಿಲು ತೆಗೆದರೆ ಒಂದು ನರ್ತನ ಮತ್ತು ಕುಂಯ್ ಕುಂಯ್; ಖುಷಿ. ಕೆಲವು ವರ್ಷಗಳ ಹಿಂದೆ ಸತ್ತು ಹೋಯಿತು. ಆಗಿನ್ನೂ ಅದಕ್ಕೆ ಎಂಟು ವರ್ಷವೂ ಆಗಿರಲಿಲ್ಲ. ಎಂಟು ವರ್ಷ ನಾಯಿಗಳಿಗೆ ಸಾಯುವ ವಯಸ್ಸಲ್ಲ. ಕೆಲವು ಹದಿನೈದು ಹದಿನಾರು ವರ್ಷಗಳ ವರೆಗೆ ಬದುಕುತ್ತವಂತೆ. ಇದು ಯಾಕೋ ಬೇಗ ಸತ್ತುಹೋಯಿತು. ಸಾಯುವ ಮೊದಲು ಅತ್ತಿತ್ತಂತೆ. ಏನು ನೋವಾಯಿತೋ ಏನೋ. ಅತ್ತು, ಸ್ವಲ್ಪ ಹೊತ್ತಿಗೆ ಸತ್ತುಹೋಯಿತು. ಸಾಯುವ ಮೊದಲು ನೀರು ಕುಡಿದಿತ್ತು. ಅದು ಸತ್ತದ್ದು ಅಕ್ಟೋಬರ್ 10, 2005ರ ಪೂರ್ವಾಹ್ನ ಸುಮಾರು ಹನ್ನೊಂದು ಗಂಟೆ ಹೊತ್ತಿಗೆ. ಐದು ವರ್ಷಗಳೇ ಕಳೆದವು. ಆದರೆ ಈಗ ಇತ್ತು ಎಂಬಂತೆ ಅದರ ಇರುವಿಕೆ ಮನಸ್ಸಲ್ಲಿ ಹಸಿರಾಗಿದೆ.


No comments:

Post a Comment