Wednesday, March 9, 2011

ಮತ್ತ್ತೆ ಕೆಲವು ಪ್ರೇಮಕವನಗಳು

ಪ್ರೇಮಕವನಗಳಲ್ಲಿ ಎರಡು ವಿಧ: ಒಂದು ವಿಧದ ಮಾದರಿಯಾಗಿ "ನನ್ನ ಪ್ರೇಮದ ಹುಡುಗಿ ಚೆಂಗುಲಾಬಿಯ ಕೆಂಪು" ಅಥವಾ "ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು" ಎಂಬ ರೀತಿಯ ಕವನಗಳನ್ನು ನೋಡಬಹುದು. ಇಲ್ಲಿ ಹುಡುಗಿ ಸ್ವಪ್ನಲೋಕದಲ್ಲಿ ಕಾಣುವಂಥಾ ಅಪ್ಸರೆ; ಅವಳಲ್ಲಿ ಎಲ್ಲಾ ಒಳ್ಳೆಯ ಗುಣಗಳೂ ಇವೆ; ಹುಡುಗನೂ ಹೀಗೇ ಆದರ್ಶ ವ್ಯಕ್ತಿ. ಅವರ ಜಗತ್ತಿನಲ್ಲಿ ಪ್ರೇಮ ಮತ್ತು ಪ್ರೇಮ ಮಾತ್ರ ಇದೆ. ಇನ್ನೊಂದು ರೀತಿಯ ಪ್ರೇಮ ಕವನಗಳಲ್ಲಿ ಒಲವು ಇರುತ್ತದೆ; ಅದರ ಜೊತೆಗೆ ಗಂಡು ಹೆಣ್ಣುಗಳ ಸಂಬಂಧದಲ್ಲಿ ಸಹಜವಾಗಿ ಬರುವ ಅಸೂಯೆ, ಸಣ್ಣತನ, ಕೊಂಕು, ಬಡತನದ ಕಷ್ಟ, ಸಿರಿತನದ ಬಿಂಕ ಇತ್ಯಾದಿಗಳೂ ಇರುತ್ತವೆ. ಬೇಂದ್ರೆಯವರ ಕವನಗಳು ಅಂಥವು: "ಎಲ್ಲಿರುವೆ ರಾಜಗಂಭೀರಾ" ಎನ್ನುವಾಗಲೂ ಆತ "ನೀರಾ"-ಚಂಚಲ--ಎಂಬುದನ್ನು ಸಹಾ ನೆನಪಿಸಿಕೊಳ್ಳುವಂಥವು; ಅಥವಾ, "ಸಖಿ ನಮ್ಮ ಸಖ್ಯದ ಆಖ್ಯಾನ ಕಟು ಮಧುರ" ಎಂದು ಕಟುವನ್ನೂ ಮಧುರವನ್ನೂ ಒಟ್ಟಿಗೆ ತರಲು ಬಯಸುವಂಥವು: ಕಟು ಪದದ ಮೂಲ ಅರ್ಥ ಸಾವು ಎಂಬುದನ್ನು ನೆನಪಿಸಿಕೊಂಡರೆ (ಆದ್ದರಿಂದಲೇ ಯಮನ ಜೊತೆಗಿನ ನಚಿಕೇತನ ಸಂವಾದವುಳ್ಳ ಉಪನಿಷತ್ತಿಗೆ ಕಠೋಪನಿಷತ್ತು ಎಂದು ಹೆಸರು) ಬೇಂದ್ರೆಯವರು ಪ್ರೇಮ ಕುರಿತ ಎಷ್ಟು ಸಂಕೀರ್ಣ ಅನುಭವಗಳನ್ನು ಅಭಿವ್ಯಕ್ತಿಸಲು ಪ್ರಯತ್ನಿಸುತ್ತಿದ್ದರು ಎಂಬುದು ಗೊತ್ತಾಗುತ್ತದೆ. ಅಡಿಗರ "ನೀ ಬಳಿಯೊಳಿರುವಾಗ್ಗೆ" ಅಥವಾ "ಚಿಂತಾಮಣಿಯಲ್ಲಿ ಕಂಡ ಮುಖ" ಅಥವಾ "ಸಂತೋಷವಾಗುತ್ತದೆ" ಎಂಬಂಥಾ ಕವನಗಳಲ್ಲೂ ಇದೇ ಮಟ್ಟದ ಸಂಕೀರ್ಣತೆ ಕಾಣುತ್ತದೆ. ನರಸಿಂಹಸ್ವಾಮಿಯವರ ಬಹುಜನ ಪ್ರಿಯ ಮೈಸೂರು ಮಲ್ಲಿಗೆಯ ಅನುಭವ ಸರಳವಾಗಿದೆ; ಆದರೆ  ಅನಂತರ ಬರೆದ ಕವನಗಳಲ್ಲಿ ಅವರು ಹೆಚ್ಚು ಸಂಕೀರ್ಣ ಭಾವನೆಗಳನ್ನು ಅಭಿವ್ಯಕ್ತಿಸಲು ಪ್ರಯತ್ನಿಸಿದರು. ಜೀವನ ಸಂಕೀರ್ಣವಾದದ್ದು. ಸಾಹಿತ್ಯ ಈ ಸಂಕೀರ್ಣ ಜೀವನದ ಬಗ್ಗೆ ನಮ್ಮ ಅರಿವನ್ನು ವಿಸ್ತರಿಸುವ ಕೆಲಸ ಮಾಡಬೇಕು; ಜೀವನದಿಂದ ಪಲಾಯನ ಮಾಡಲು  ಮಾರ್ಗ ಆಗಬಾರದು. ಹೀಗಾಗಿ ಇಂಥಾ ಸಂಕೀರ್ಣ ಜೀವನದ ಬಗ್ಗೆ ಬರೆಯುವ ಸಾಹಿತ್ಯವೂ ಸಂಕೀರ್ಣವಾಗಿರಬೇಕಾದ್ದು ಅನಿವಾರ್ಯ.

ಪ್ರೇಮ ಕುರಿತ ನನಗೆ ತುಂಬಾ ಇಷ್ಟವಾದ ಕೃತಿ ಶೇಕ್ಸ್ಪಿಯರನ ನಾಟಕ ಒಥೆಲ್ಲೊ. ಇದು ಕರಿಯ ಒಥೆಲ್ಲೊ ಮತ್ತು ಬಿಳಿಯ ಡೆಸ್ಡಿಮೊನಾ ನಡುವಿನ ಪ್ರೇಮ ಕುರಿತ ನಾಟಕ. ಆದರೆ ಇದು ಇಯಾಗೋನಂಥ ಪರಮ ದುಷ್ಟನಿರುವ ಲೋಕ; ಜೊತೆಗೆ ಒಥೆಲ್ಲೋ ಮತ್ತು ಡೆಸ್ಡಿಮೋನಾ ಪರಸ್ಪರರನ್ನು ಅರಿತುಕೊಂಡಿಲ್ಲ.  ಡೆಸ್ಡಿಮೋನಾ ಪಾತಿವ್ರತ್ಯ ಸಾಧ್ಯವಿಲ್ಲದವಳು ಎಂದು ಒಥೆಲ್ಲೊ ತಿಳಿದುಕೊಂಡಿದ್ದರೆ ಡೆಸ್ಡಿಮೋನಾ ತನ್ನ ಗಂಡನಾದ ಒಥೆಲ್ಲೊ ಅಸೂಯೆಗೆ ಪಕ್ಕಾಗುವವನೇ ಅಲ್ಲ ಎಂದು ತಿಳಿದುಕೊಂಡಿದ್ದಾಳೆ. ಇಂಥಾ ಜಗತ್ತಲ್ಲಿ ಪ್ರೇಮ ಎಷ್ಟು ಕಷ್ಟ ಎಂಬುದನ್ನು ನಾಟಕ ತೋರಿಸುತ್ತದೆ; ಆದರೆ ಈ ಭಯಾನಕ ಜಗತ್ತಿನಲ್ಲಿ ಪ್ರೇಮ ಹೊರತಾಗಿ ಬೇರೆ ಯಾವುದೂ ಮನುಷ್ಯರನ್ನು ವಿನಾಶದಿಂದ ಕಾಪಾಡಲಾರದು ಎಂದೂ ಇಂಥಾ ಜಗತ್ತಿನಲ್ಲಿ ಪ್ರೇಮ ಗಟ್ಟಿಯಾಗಿ ಉಳಿಯಬೇಕಾದರೆ ಅದು ತಿಳುವಳಿಕೆಯಿಂದ ಕೂಡಿರಬೇಕಾದ್ದು ಅನಿವಾರ್ಯ ಎಂದೂ ತೋರಿಸುತ್ತದೆ.

ನನ್ನ ಪ್ರೇಮ ಕವನಗಳ ಹಿಂದಿರುವ ಯೋಚನೆ ಇದು. ಇಲ್ಲಿ ಮಾತಾಡುವ ಮರ ಸಂಗ್ರಹದಿಂದ ತೆಗೆದುಕೊಂಡ ಮತ್ತೂ ಕೆಲವು ಪ್ರೇಮ ಕವನಗಳನ್ನು ಕೊಡುತ್ತಿದ್ದೇನೆ.1.

ದೇವದಾಸಿಯರ ಮೀಸಲು ಮುರಿವ ಉತ್ಸಾಹ--
ನೆರೆವರು ಸೇಂದಿ ಗುತ್ತಿಗೆ ಕೊಟ್ಟು ನಾಡಿನ
ಕ್ಷೇಮ ಅಭಿವೃದ್ಧಿ ಯೋಜನೆ ಹಣದ ಗಣನೀಯ
ಅಂಶ ಗಳಿಸುವ ನಮ್ಮ ಸರಕಾರಕ್ಕ ಸೇರಿದ ಕೆಲ
ಎಂಎಲ್ ಎ ಮಂತ್ರಿ ಅಧಿಕಾರಿಗಳು--ಯಲ್ಲಮ್ಮ
ಕೃಪೆಯಲ್ಲಿ.  ದೇವಸ್ವರೂಪಿಗಳೆಂದು ತಿಳಿವರು ಇವರ
ದೇವದಾಸಿಯರ ಗುತ್ತಿಗೆ ಹಿಡಿದ ಪೂಜಾರಿ
ಶರಣ ಸಂದೋಹ ಬಲ; ಕಟ್ಟಿ ನನ್ನರಿಯನ್ನು
ನೀಡುವರು ನೆಲೆ; ಬೆಲೆ ಕಲೆಗೆ ಧರ್ಮಕ್ಕೆ.

ಹೀಗೂ ಉಂಟು: ಪ್ರೀತಿ ತೋರಿಸಿ ಕರೆವ; ಸಂಸಾರ
ನಡೆಸುವ, ಗಂಡನ್ನ ಆಳುವ ಕನಸು; ಒಲವಿನ ಹಸಿವು--
ಹೋಗುವಳು. ಅಂದುಕೊಳ್ಳುವ: "ಕರೆದಾಗ ಬರುವವಳು
ಕುಲಟೆ; ರೇಟು ನೋಡಿ ಮಾರಿದರಾಯ್ತು; ತುಸು ಅಂಶ
ಜಡ್ಜು ಪೊಲೀಸರಿಗೆ--ನಡೆದರೆ ಕೇಸು."

2

ಐ ಲವ್ ಯೂ ಎಂದ. ನಿನ್ನ ಕಣ್ಣು ಅದೆಷ್ಟು ಚೆಂದ ಎಂದ.
ನನಗೆ ಇದು ವರೆಗೆ ಹಾಗ ಯಾರೂ ಅಂದಿರಲಿಲ್ಲ. ಎದೆಯಲ್ಲಿ
ಸಿಹಿ ಸಿಹಿ ಆಯ್ತು. ಕಾಲೇಜು ಬಿಟ್ಟು ಬಾ ಸೀದ
ಬಸ್ಟೇಂಡಿಗೆ ಎಂದ. ರಾತ್ರಿಯ ಜರ್ನಿ. ಸಿಕ್ಕು ಸಿಕ್ಕಲ್ಲಿ
ಕೈ ಬಿಟ್ಟ. ಡೆಲ್ಲಿಯಲ್ಲಿ ಆಂಟಿ ಮನೆಯಲ್ಲಿ
ಮದುವೆ ಎಂದ. ಬಸ್ಸಿಳಿದು ಹೋಟೆಲ್ಲಿಗೆ ಯಾಕೆ
ಎಂದು ಕೇಳಿದ್ದಕ್ಕೆ ಆಂಟಿ ಮನೆ ಎಲ್ಲಿ
ಹುಡುಕಬೇಕು ಎಂದ. ಹೋಟೆಲ್ಲು ರೂಮಲ್ಲಿ ಅವನ
ಡ್ರೇಸೇ ಬದಲಾಯ್ತು. ಯಾರೋ ವಿಸಿಟರಿಗೆ ನನ್ನ
--ಇವನ ಎದುರೇ ಅವ ನನ್ನ ಮುಟ್ಟಿ ಪರೀಕ್ಷಿಸಿ ನೋಡಿ
ಬಾರ್ಗೇನು ಮಾಡಿ--ಎಷ್ಟೋ ಮೊತ್ತಕ್ಕ ಮಾರಿದನು. ಆ ಮೇಲೆ
ನನ್ನ ಎಷ್ಟೋ ಜನರು ಎಷ್ಟೋ ಕಾಲ ಹತ್ತಿದರು.
ಮುಟ್ಟು ನಿಂತಾಗ ಬಸಿರು ತೆಗೆಯಿಸಿದ. ಬಳಿಕ
ಮತ್ತೊಬ್ಬನಿಗೆ ಕೊಟ್ಟ. ಕೂಡುವುದಿಲ್ಲ ಎಂದಲ್ಲಿ ಬಿಗಿದರು
ಉಪವಾಸ ಕೋದಂಡ. ಕೇಳಿದರೆ ಹೇಳಿದ ಹಾಗೆ
ಬ್ರಾಂದಿ, ಹೋಟೆಲ್ಲು ತಿಂಡಿ, ಸಿನೆಮಾ, ದೇವಸ್ಥಾನ.

ಪುಣ್ಯ ಹೆಚ್ಚಿದರೆ ಮುಂದಿನ ಜನ್ಮ ಗರತಿ ಆಗುವೆನಂತೆ.
ಹಬ್ಬಲಿ ಏಡ್ಸ್; ಕುಟ್ಟೆ ಸುರಿಯಲಿ; ರಿವೆಂಜು ರುಚಿ;
ಮನೆಗೆ ಮರಳುವುದು ಆಗದ ಮಾತು. ತಿಳಿಯಲಿ: ಸತ್ತೆ;
ಅಥವಾ ಪ್ರಿಯನೊಡನೆ ಸಹಭಾಗಿ ಸುಖಿ ಸೀಮಂತೆ.

3

ಈ ಲವ್ ಅನ್ನೋದು ಯೂಸಿಲ್ಲ. ಮಾಡು, ಬೇಡ ಹೇಳೂದಿಲ್ಲ.
ಆದರೆ ಕೀಪು ಅಂತ ಇರ್ಲಿ. ಮದುವೆ ಬೇಡ.
ಮದುವೆಗೆ ನೋಡು--ಮೂರು ಜಾತಕ ಫೊಟೋ ಬಂದವೆ.
ಇವ್ಳು ಮಿನಿಸ್ಟ್ರ ಮಗಳು; ಇವಳು ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ಹೋಲ್ಡರ್;
ಮತ್ತೆ ಇವಳ ಅಪ್ಪ ನೋಡು ಸೆಕ್ರೆಟೇರಿಯಟ್ಟಿನಲ್ಲಿ ಆಫೀಸರ್ರು.
ಕಾಂಟ್ರಾಕ್ಟ್, ಟೆಂಡರ್ ಎಪ್ರೋವಲ್ ಇವರ ಜವಾಬ್ದಾರಿ.
ಮೂವರಲ್ಲಿ ಯಾರನ್ನು ಮಾಡ್ಕಂಡ್ರೂ ಫ್ಯೂಚರ್ ಈಸ್ ಸೆಕ್ಯೂರ್ಡ್.

ಅಲ್ಲಯ್ಯಾ--ಈ ಫಿಲಾಸಫಿ ಲಿಟರೇಚರ್ ಪಟರೇಚರ್ ಓದ್ತಾ ಇರ್ತೀಯಲ್ಲ--ಏನಕ್ಕೆ?
ಹಂಗೂ ಇಂಟಲೆಕ್ಚುವಲ್ ಪ್ರೊಫೆಶನ್ನೇ ಬೇಕಂತಿದ್ರೆ
ಹೊರಸ್ಕೋಪು ನೋಡೋದು ಕಲಿತ್ಕೋ.
ಕ್ರಿಸ್ಟಲ್ ಗೇಸಿಂಗ್ ಪಾಚೆಟ್ ಕವಡೆ ಪಂಚಾಂಗ--
ಭವಿಷ್ಯ ಹೇಳೋರು ಅಂದರೆ
ಎಂಥಾ ಮಂತ್ರಿ ಪೊಲಿಟಿಶಿಯನ್ ಮಿಸೆಸ್ ಹತ್ರಾನೂ ಸಲೀಸಾಗಿ ಹೋಗ್ಬಹುದು.
ಒಂಚೂರು ಪ್ರಾಣಾಯಾಮ ಯೋಗ ಕಲಿತ್ಕೊಂಡ್ರೆ
ಅಮೆರಿಕಾಕ್ಕೆ ವಲಸೆ ಹೋಗಿಯೂ ಪ್ರಾಕ್ಟೀಸು ಮಾಡ್ಬಹುದು.
ಯಾವಾಗಲೂ ಒಂದು ಕಾಲು ಆಚೆ ಇಟ್ಟಿರೋದು ಒಳ್ಳೇದು.

ಪುರಾನಾ ಖಿಲಾ ಮತ್ತು ಜೂ ಇರುವಲ್ಲಿ ಹಿಂದೆ ಇತ್ತಂತೆ ಇಂದ್ರಪ್ರಸ್ಥ--
ಅದರಿಂದ ಮುಂದೆ ಏಳು ಜನ್ಮಗಳಲ್ಲಿ
ಬೆಳೆದು ನಿಂತಿದೆ ಡೆಲ್ಲಿ.
ಅದೂ ಬದಲಿದೆ ಈಗ:
ಅರಮನೆ ಮ್ಯೂಸಿಯಂ ಆಗಿ, ಹವಾಮಹಲು ಹೋಟೆಲ್ ಆಗಿ,
ಭಿಲ್ಲ ರಂಗ ಬುದ್ಧ ಜಯಂತಿ ಪಾರ್ಕಲ್ಲಿ ಅವತರಿಸಿ.
ಒಂದು ನವಿಲು, ಗರಿಗಳ ಫುಟ್ಪಾಥಲ್ಲಿ ಉದುರಿಸಿಕೊಂಡು,
ರಸ್ತೆ ಮಧ್ಯೆ, ರಾಷ್ಟ್ರಪಕ್ಷಿ,
ನೀರಡಿಸಿ ನಿಂತಿತ್ತು. ರೆಕ್ಕೆ ತುಂಡು ಮಾಡಿ, ಕಾಲು ಕಟ್ಟಿ
ರಾಶಿ ರಾಶಿ ಕೋಳಿ ಲಾರೀಲಿ ತುಂಬಿ ತೆಕ್ಕೊಂಡು ಹೋಗ್ತಿದ್ದರು.
ಬೆಳಿಗ್ಗೆ ಕೊಕ್ಕೊಕ್ಕೊ ಅಂತಿದ್ದ ಕೋಳಿ
ಬಿಸಿಲಲ್ಲಿ ಬಾಯಿ ಅಗಲಿ ಮುಚ್ಚಿ ಅಗಲಿಸಿ ಮುಚ್ಚಿ ಮಾಡ್ತಿದ್ದವು.
ಕಾಲ ಸ್ಥಳ ಎಲ್ಲಾ ಯದ್ವಾತದ್ವಾ ಆಗದೆ.
ಯಾವಾಗ ಎಲ್ಲಿ ಏನಾಗುತ್ತೆ ಗೊತ್ತಿಲ್ಲ.
ಸರಿಯಾದ ಕಡೆ ನೋಡಿ ಹತ್ತಬೇಕಾದ ಕಡೆ ಹತ್ತಿ
ಆಯಕಟ್ಟಿನ ಜಾಗ ಹಿಡಕೊಂಡು ಕೂತುಕೋ.
ಆ ಮೇಲೆ ಬೇಟ ಸಲೀಸು.
ಇಲ್ಲಾಂದ್ರೆ ತಾಪತ್ರಯ ತಪ್ಪಿದ್ದಲ್ಲ.

4

ಅಪ್ಪನ ಮನೆಗೆ ಹೋಗಿ ಒಂದು ಲಕ್ಷ ತಕ್ಕೊಂಬಾ ಹೇಳಿದೆ.
ನಾನು ಹೋಗೂದಿಲ್ಲ ಹೇಳಿದಳು.
ಪೈಸೆ ಅಗತ್ಯ ಉಂಟು, ಹೋಗು, ಒಳ್ಳೇ ಮಾತಿಲಿ ಕೇಳು,
ಅಳಿಯ-ಮಗಳಿಗೆ ಕೊಡದ್ದೆ ಇನ್ನು ಯಾರಿಗೆ ಕೊಡುತ್ತಾರೆ ಹೇಳಿದೆ.
ಅಪ್ಪನ ಹತ್ತಿರ ದುಡ್ಡಿಲ್ಲ ಹೇಳಿದಳು.
ಅದು ಹೇಳುದು ನೀನಲ್ಲ;
ಒಂದು ವೇಳೆ ಇಲ್ಲದ್ದರೆ ಸಾಲ ಮಾಡಿ ಕೊಡಲಿ ಹೇಳಿದೆ.
ನೀವೇ ಸಾಲ ಮಾಡಿ ಹೇಳಿದಳು.
ನೀನು ಹೋಗ್ತೀಯೋ ಇಲ್ಲವೋ ಕೇಳಿದೆ.
ಇಲ್ಲ ಹೇಳಿದಳು.
ಹೋಗು, ನಾಳೆ ಉದಯಲ್ಲಿ ಹೋದರೆ
ಪೈಸೆ ತೆಕ್ಕೊಂಡು ನಾಡಿದ್ದು ಹೊತ್ತು ಕಂತುವಾಗ ಬರಬಹುದು ಹೇಳಿದೆ.
ಪೈಸೆ ಸಿಕ್ಕದ್ದರೆ?--ಕೇಳಿದಳು.
ಪೈಸೆ ತಾರದ್ದೆ ಇಲ್ಲಿಗೆ ಬರುವ ಅಗತ್ಯ ಇಲ್ಲ ಹೇಳಿದೆ.
ಹೆಂಡತಿಯ ಸಾಕಲಾಗದ್ದವ ಒಬ್ಬ ಗಂಡಸೋ ಕೇಳಿದಳು.
ನಾನು ಗಂಡಸು ಹೌದೋ ಅಲ್ಲವೋ ರಾತ್ರಿ ಗೊತ್ತಾಗುತ್ತದೆ ಹೇಳಿದೆ.
ಆ ಕೆಲಸ ನಾಯಿ ಸಹಾ ಮಾಡುತ್ತವು ಹೇಳಿದಳು.
ಎಂಥ ಹೇಳಿದೆ, ಹೇಳು ಇನ್ನೊಂದು ಸಲ ಹೇಳಿದೆ.
ನಿಮ್ಮ ರಾತ್ರಿ ಕೆಲಸ ನಾಯಿ ಸಹಾ ಮಾಡುತ್ತು ಹೇಳಿದಳು.
ನಿನ್ನಂಥಾ ತಾಟಕಿಯ ಕೊಂದರೆ ತಪ್ಪಿಲ್ಲ ಹೇಳಿದೆ.
ತಾಖತ್ತಿದ್ದರೆ ಕೊಲ್ಲಿ ನೋಡುವ ಹೇಳಿದಳು.
ನನ್ನ ತಾಖತ್ತು ತೋರಿಸಬೇಕಾ ಕೇಳಿದೆ.
ಇದ್ದರೆ ಅಲ್ಲವೊ ತೋರಿಸಲು ಹೇಳಿದಳು.
ಇಂಥಾ ಮಾತಿಗೆ ಯಾವ ಗಂಡಂಗೆ ಸಿಟ್ಟು ಬಾರ?
ಚಿಮಿಣಿ ಎಣ್ಣೆ ಹೊಯ್ದೆ ಕಿಚ್ಚಿ ಕೊಟ್ಟೆ.
ಬೊಬ್ಬೆ ಹೊಡೆದಳು. ಗಳಿಗ್ಗೆ . ಕರಂಚಿ ಸತ್ತಳು.

5

ಅವಳೊಂದು ಮರ
ಅವನು ಹೂವಿನ ಬಳ್ಳಿ;
ಮೈ ಬಳಸಿ ಮೇಲಕ್ಕೆ
ಹತ್ತುತ್ತಿದ್ದ.

ಹಾವಾಗಿ ಪೊಟರೆ ಒಳ
ನುಗ್ಗುತ್ತಿದ್ದ.

ತೋಳನ್ನು ಕೊಕ್ಕಲ್ಲಿ
ತಿವಿಯುತ್ತಿದ್ದ.

ಮರ ಅಲ್ಲಾಡದೇ ಇತ್ತು
ಇದ್ದ ಹಾಗೇ.

ಮಂಚ ಮಾಡಿದ ಕಡಿದು
ಮಲಗಿ ಎದ್ದ.

******************
ಬೋಧಿ ಟ್ರಸ್ಟ್ ಪುಸ್ತಕಗಳು ಈಗ ಆನ್ ಲೈನ್ ಪುಸ್ತಕ ಮಳಿಗೆ flipkartನಲ್ಲಿ ಸಿಗುತ್ತವೆ. www.flipkart.comಗೆ Enter ಕೊಟ್ಟು Books by Ramachandra Deva ಎಂದು search ಕೊಟ್ಟರೆ ಪುಸ್ತಕಗಳ ಪಟ್ಟಿ ಮತ್ತು ಹೇಗೆ ಕೊಂಡುಕೊಳ್ಳಬಹುದು ಎಂಬ ವಿವರ ಬರುತ್ತದೆ.


ಮೇಲಿನದ್ದು ಬೇಂದ್ರೆಯವರ ಒಂದು ಕವನಕ್ಕೆ ಕೆ. ಕೆ. ಹೆಬ್ಬಾರರು ಬರೆದ ಚಿತ್ರ.

2 comments:

 1. Sir, this is a good combination of Traditional & modern.. Kannada Kavite.. I really enjoyed reading it...

  Best Regards
  Meena Spoorthy

  ReplyDelete
 2. Thanks Meena. I am glad you liked it.
  Would you be free on March 20th? Do come to Bendre Poetry Festival at Indian Institute of World Culture Auditorium.
  Ramachandra Deva

  ReplyDelete