Wednesday, March 23, 2011

ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು


(ಮೊನ್ನೆ ಬಿಡುಗಡೆಯಾದ ಪುಸ್ತಕಗಳಲ್ಲಿ ಒಂದು)

ಮಾರ್ಚ್ 20ರಂದು ಬೇಂದ್ರೆ ಕಾವ್ಯೋತ್ಸವ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಚೆನ್ನಾಗಿ ನಡೆಯಿತು. ಶ್ರೀ ಸಿ. ಆರ್. ಸಿಂಹ, ಶ್ರೀನಿವಾಸ ಪ್ರಭು, ಕಲ್ಪನಾ ನಾಗನಾಥ್, ಮಂಗಳಾ, ರಘುನಂದನ ಬೇಂದ್ರೆ ಪದ್ಯಗಳನ್ನು ಚೆನ್ನಾಗಿ ಹಾಡಿದರು/ಓದಿದರು. ಪ್ರತಿಯೊಬ್ಬರೂ ಬೇಂದ್ರೆಯವರ ಕವನಗಳ ಒಂದಿಲ್ಲೊಂದು ಮುಖದ ಬಗ್ಗೆ ನಮ್ಮ ಗಮನ ಸೆಳೆದರು. ಕಲ್ಪನಾ ಕವನಗಳ ಹಾಡಿಸಿಕೊಳ್ಳುವ ಶಕ್ತಿಯ ಬಗ್ಗೆ ನಮ್ಮ ಗಮನ ಸೆಳೆದರೆ ಸಿಂಹ ಮತ್ತು ಮಂಗಲಾ ಕವನಗಳ ನಾಟಕೀಯ ಶಕ್ತಿಯ ಬಗ್ಗೆ ಗಮನ ಸೆಳೆದರು. ರಘುನಂದನ್ ಬೇಂದ್ರೆಯವರ ಕವನಗಳ ವಸ್ತು ವೈವಿಧ್ಯತೆ  ಬಗ್ಗೆ ನಮ್ಮ ಗಮನ ಸೆಳೆದರು. ಅವರು ಮತ್ತು ಶ್ರೀನಿವಾಸ ಪ್ರಭು ಕವನಗಳು ತಮ್ಮ ಗತಿಯಿಂದ ಸೂಚಿಸುವ ಓದಿನ ಕ್ರಮ ಯಾವುದು ಎಂಬುದನ್ನು ಹುಡುಕುತ್ತಿದ್ದರು. ರಘುನಂದನ್, "ಈಚಲು ಮರದವ್ವ" ಪದ್ಯದ ಲಯವೇ ಅದನ್ನು ಹೇಗೆ ಓದಬೇಕೆಂಬುದನ್ನು ಸೂಚಿಸುತ್ತದೆ ಎಂದದ್ದು ಬೆಲೆಯುಳ್ಳ ಮಾತು. ಪ್ರತಿ ಮುಖ್ಯ ಕವನಕ್ಕೆ--ಪದಗಳ ಸೂಕ್ಷ್ಮವನ್ನು ಅರಿತು ಬರೆದ ಕವನಕ್ಕೆ-- ಅದರದ್ದೇ ಶಬ್ದ ಸಂಗೀತವಿದೆ, ಹೊರಗಿನಿಂದ ಆರೋಪಿಸಿದ ಸಂಗೀತದಿಂದ ಅದನ್ನು ಓದುವುದು ಅದರ ಸೂಕ್ಷ್ಮತೆಗಳನ್ನು ನಾಶಮಾಡಬಲ್ಲುದು ಎಂಬ ಮಾತನ್ನು ಇದು ಸಮರ್ಥಿಸುತ್ತದೆ.

"ಸಚ್ಚಿದಾನಂದ" ಕವನವನ್ನು ಸಿಂಹ ಮತ್ತು ಮಂಗಲಾ--ಇಬ್ಬರೂ ಓದಿದರು. ಇಬ್ಬರು ಓದಿದ ರೀತಿ ಭಿನ್ನವಾಗಿತ್ತು. ಅದೇ ಬೇಂದ್ರೆ ಕವನದ ಮುಖ್ಯ ಗುಣಗಳಲ್ಲಿ ಒಂದು. ವಿಭಿನ್ನ ರೀತಿಯಲ್ಲಿ ಅವರ ಕವನಗಳನ್ನು ಓದಬಹುದು. ಓದಿದಾಗ ಕವನಗಳ ಶಕ್ತಿ ಮಾತ್ರವಲ್ಲ, ಓದುವವನ ಪ್ರತಿಭೆಯೂ ಗೊತ್ತಾಗುತ್ತದೆ. ಬೇಂದ್ರೆ ಕವನಗಳು ತಮ್ಮ ಶಕ್ತಿಯನ್ನು ವ್ಯಕ್ತಪಡಿಸುತ್ತಿರುವಂತೆ ತಮ್ಮನ್ನು ಓದುವವನ/ತಮ್ಮ ಬಗ್ಗೆ ಬರೆಯುವವನ ಶಕ್ತಿಯನ್ನೂ ವ್ಯಕ್ತಪಡಿಸುತ್ತವೆ. ಸಿಂಹ ಮತ್ತು ಮಂಗಲಾರ ಎರಡು ವಿಭಿನ್ನ ಓದುಗಳು ಅವರು ಎಷ್ಟು ಭಿನ್ನ ರಂಗವ್ಯಕ್ತಿತ್ವ ಹೊಂದಿದವರು ಎಂಬುದನ್ನೂ ಸೂಚಿಸಿತು.

ಆ ದಿನ ಬೇಂದ್ರೆ ಪದ್ಯಗಳನ್ನು ಓದಿದವರೆಲ್ಲರೂ ರಂಗಕರ್ಮಿಗಳು. ಹೆಚ್ಚು ಕಡಿಮೆ ಒಂದು ತಲೆಮಾರಿಗಿಂತಲೂ ಹೆಚ್ಚು ಸಮಯದಿಂದ ರಂಗಭೂಮಿಯಲ್ಲಿ ಕೆಲಸ ಮಾಡಿದವರು. ಸಿಂಹ ಆಧುನಿಕ ರಂಗ ಚಳವಳಿಯ ಜೊತೆಜೊತೆಗೇ ಸಾಗಿ ಬಂದವರು. ರಘುನಂದನ ಸ್ವತಃ ನಿರ್ದೇಶಕರು; ಹೊಸ ಪ್ರಯೋಗ ಮಾಡುತ್ತಿರುವ ನಾಟಕಕಾರರು. ಶ್ರೀನಿವಾಸ ಪ್ರಭು, ಕಲ್ಪನಾ, ಮತ್ತು ಮಂಗಲಾ ಕನ್ನಡ ರಂಗಭೂಮಿಯ ಅವಿಭಾಜ್ಯ ಅಂಗವಾದವರು. ಪ್ರಭು ಮತ್ತು ಮಂಗಲಾ ವೈಯಕ್ತಿಕವಾಗಿ ನನಗೆ ಹತ್ತಿರದವರೂ ಹೌದು: ಪ್ರಭು ನನ್ನ ಹ್ಯಾಮ್ಲೆಟ್  ಅನುವಾದದಲ್ಲಿ ಹ್ಯಾಮ್ಲೆಟ್ ಪಾತ್ರ ಮಾಡಿದ್ದರು; ಆಗಿನ ಅವರ ಡಯಲಾಗ್ ಹೇಳುವ ಕ್ರಮ ಈಗಲೂ ದಂತಕಥೆಯಾಗಿ ಉಳಿದಿದೆ.  ಆ ಅನುವಾದ ಜನರ ಗಮನ ಸೆಳೆಯಲು ಅವರ ಡಯಲಾಗ್ ಡೆಲಿವರಿಯೂ ಒಂದು ಮುಖ್ಯ ಕಾರಣ.  ರಥಮುಸಲದ ಮೊದಲ ಪ್ರಯೋಗ ಅವರ ನಿರ್ದೇಶನದಲ್ಲೇ ಆಯಿತು. ಮಂಗಲಾ ಇತ್ತೀಚೆಗೆ ನನ್ನ ಕುದುರೆ ಬಂತು ಕುದುರೆ  ಆಡಿಸಿದ್ದರು. ಹೀಗಾಗಿ ಇವರನ್ನು ಬೇಂದ್ರೆ ಕಾವ್ಯೋತ್ಸವದಲ್ಲಿ ಭಾಗವಹಿಸುವಂತೆ ನಾನು ಸ್ನೇಹದ ಸಲುಗೆಯಿಂದಲೇ ಕೇಳಿದ್ದೆ. ಅದರ ಜೊತೆಗೆ ಈ ಪ್ರಸಿದ್ಧ ರಂಗಕರ್ಮಿಗಳು ಬೇಂದ್ರೆಯವರ ಕವನಗಳ ನಾಟಕೀಯ ಗುಣವನ್ನು ಸಮರ್ಥವಾಗಿ ವ್ಯಕ್ತಪಡಿಸಬಲ್ಲರು ಎಂದೂ ಇತ್ತು. ಯಾಕೆಂದರೆ ಬೇಂದ್ರೆಯವರ ಕವನಗಳ ಭಾವಗೀತಾತ್ಮಕತೆ ಬಗ್ಗೆ ತುಂಬಾ ಜನ ಮಾತಾಡುತ್ತಾರೆ. ಆದರೆ ಅವುಗಳ ನಾಟಕೀಯ ಗುಣಗಳ ಬಗ್ಗೆ ಮಾತಾಡುವವರು ಕಮ್ಮಿ. ಅವತ್ತಿನ ಓದಿನ ಕ್ರಮ ಕವನಗಳ  ನಾಟಕೀಯ ಗುಣದ ಬಗ್ಗೆ ಒತ್ತು ಕೊಟ್ಟಿತ್ತು ಎಂದು ನನ್ನ ಅನ್ನಿಸಿಕೆ.

ಅವತ್ತಿನ ಕಾರ್ಯಕ್ರಮದ ವಿಶೇಷ ಎಂದರೆ ತೊಂಭತ್ತೈದು ವರ್ಷದ ಹಿರಿಯರಾದ ಬೆಳೆಗೆರೆ ಕೃಷ್ಣಶಾಸ್ತ್ರಿಗಳು ಬಂದದ್ದು. ಅತಿಥಿಗಳನ್ನು ಸ್ವಾಗತಿಸಲೆಂದು ನಾನು ಹೊರಗೆ ನಿಂತಿದ್ದಾಗ ಒಬ್ಬ ಯುವಕರ ಸ್ಕೂಟರಿನ ಪಿಲಿಯನ್ನಲ್ಲಿ ಕೂತು ಈ ಹಿರಿಯರು ಬಂದರು. ಬೇಂದ್ರೆ ಕಾವ್ಯ ಓದುವುದು ಎಲ್ಲಿ ಎಂದು ಮೆಲು ದನಿಯಲ್ಲಿ ಕೇಳಿ ಒಳಗೆ ಬಂದರು. ಕಾಲು ಮುಟ್ಟಿ ನಮಸ್ಕರಿಸಿದರೆ ಅರ್ಧದಲ್ಲಿ ತಡೆದರು. ರಘುನಂದನ್ ನಮಸ್ಕರಿಸಿದಾಗಲೂ ತಡೆದರು. ಇತ್ತೀಚೆಗೆ ಶೂಸ್ ಹಾಕಿದ್ದ ಕಾಲಿಗೇ ನಮಸ್ಕಾರ ಪಡೆದ ಒಬ್ಬ ಲೇಖಕರನ್ನು ನೋಡಿದ್ದ ನನಗೆ ಇದು ವಿಶೇಷ ಅನ್ನಿಸಿತು. ಆ ಮೇಲೆ ಕಾರ್ಯಕ್ರಮ ಮುಗಿಯುವ ವರೆಗೆ ಆ ಸಾಧಾರಣ ಕುರ್ಚಿಯಲ್ಲಿ ಕೇಳುತ್ತಾ ಕೂತಿದ್ದರು--ಅತ್ಯಂತ ಹಿಂದಿನ ಸಾಲಿನಲ್ಲಿ. ಐವತ್ತು ಅರುವತ್ತು ವರುಷಕ್ಕೇ ಕಿವುಡು ಬರುವವರಿರುವಾಗ ಹಿಂದಿನ ಸಾಲಿನಲ್ಲಿ ಕೂತ ಅವರ ಶ್ರವಣ ಶಕ್ತಿ, ಬೇಂದ್ರೆ ಕಾವ್ಯದ ಬಗೆಗಿನ ಆಸಕ್ತಿ ದೊಡ್ಡದು ಅನ್ನಿಸಿತು.

ಬೇಂದ್ರೆ ಕವನಗಳ ಬಗೆಗಿನ ಆಸಕ್ತಿ ಎಂದರೆ ಪದಗಳ/ಭಾಷೆಯ ಶ್ರೀಮಂತ ಉಪಯೋಗದ ಬಗೆಗಿನ ಆಸಕ್ತಿ ಎಂದು ಬೇರೆ ಹೇಳಬೇಕಾಗಿಲ್ಲ.
No comments:

Post a Comment