Thursday, March 31, 2011

ಹೊಸ ಪುಸ್ತಕಗಳು

ಇವು ಮಾರ್ಚ್ 20ರಂದು ಬಿಡುಗಡೆಯಾದ ಪುಸ್ತಕಗಳು. ಇವುಗಳನ್ನು ಓದುಗರು ಪುಸ್ತಕದ ಅಂಗಡಿಗಳಲ್ಲಿ, www.flipkart.comನಲ್ಲಿ ಅಲ್ಲದೆ ನೇರವಾಗಿ ನಮ್ಮಿಂದಲೂ ಕೊಂಡುಕೊಳ್ಳಬಹುದು. ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust, SB Account no. 1600101008058, Canara Bank, Yenmur 574328, Dakshina Kannada District, Karnataka, IFSC: CNRB0001600--ಇಲ್ಲಿಗೆ ಜಮೆ ಮಾಡಿ ವಿಳಾಸ ತಿಳಿಸಿದರೆ ಪುಸ್ತಕಗಳನ್ನು ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ. ಪುಸ್ತಕಗಳ ವಿವರ ಹೀಗಿದೆ.

1. ಐದು ಕವನಗಳು. ರೂ50.00
"ಪ್ರೇತಲೋಕ" ಎಂಬ ಹೆಸರಿನ ದೀರ್ಘ ಕವನವೂ ಸೇರಿದಂತೆ ಐದು ಕವನಗಳಿವೆ. ಈ ಜಗತ್ತಿನಲ್ಲಿ ಒಟ್ಟು ಏಳು ಶತಕೋಟಿ ಪ್ರೇತಗಳಿವೆಯೆಂದು ಕೆನಡಾದ ಪ್ರೇತತಜ್ಞನಾದ ಸ್ಟೀಫನ್ ಹಾರ್ಟ್ವೆಲ್ ಹೇಳುತ್ತಾನೆ. ಆ ಪ್ರೇತಗಳು, ಅವು ವಾಸವಿರುವ ಕತ್ತಲು ಮತ್ತು ಅವನ್ನು ಓಡಿಸಲು ಬೇಕಾದ ಬೆಳಕು ಕುರಿತ ಪದ್ಯ. "ರಾಹು ಮತ್ತು ಕೇತು"  ಹೆಸರಿನ ಮತ್ತೊಂದು ದೀರ್ಘ ಕವನವಿದೆ. ಇದು ಈ ಹೆಸರಿನ ನಾಟಕದ ಮುಂದಿನ ಭಾಗ.

2. ಸಮಗ್ರ ನಾಟಕಗಳು. ಸಂಪುಟ 2. ರೂ60.00
"ಪುಟ್ಟಿಯ ಪಯಣ" ಮತ್ತು "ಸುದರ್ಶನ"--ಈ ಎರಡು ನಾಟಕಗಳು."ಪುಟ್ಟಿಯ ಪಯಣ" ಹದಿನಾಲ್ಕು ವರ್ಷದ ಹುಡುಗಿ ಅಪ್ಪ ಅಮ್ಮ ಆಫೀಸಿಗೆ ಹೋದ ಮೇಲೆ ಒಬ್ಬಳೇ ಮನೆಯಲ್ಲಿದ್ದಾಗ ಮರದ ಕಪಾಟಿನ ಮಾತಿನಂತೆ ಕಾಡಿಗೆ ಹೋಗುವ ಮತ್ತು ಅಲ್ಲಿ ವಿಶೇಷ ಅನುಭವಗಳನ್ನು ಪಡೆದು ಪ್ರಬುದ್ಧೆಯಾಗಿ ಮನೆಗೆ ಮರಳುವ ಕಥೆ. "ಸುದರ್ಶನ" ಶ್ರೀ ವಿಷ್ಣುವಿನ ಆಯುಧವಾದ ಸುದರ್ಶನ ಚಕ್ರದ ಕಥೆ. ಸುದರ್ಶನ ಶ್ರೀ ವಿಷ್ಣುವಿನ ಎಲ್ಲಾ ವಿಜಯಗಳಿಗೆ ತಾನೇ ಕಾರಣ ಎಂದು ಘೋಷಿಸಿ ವಿಷ್ಣುವನ್ನು ಪದಚ್ಯುತಗೊಳಿಸಿ ಜಗನ್ನಿಮಾಯಕನಾಗಿ ಆಳುತ್ತಾನೆ; ಅದಕ್ಕೆ ವಿರುದ್ಧವಾಗಿ ಪ್ರೇಮಿಗಳಾದ ಗುಬ್ಬಚ್ಚಿಗಳು ಪಿತೂರಿ ನಡೆಸುತ್ತವೆ--ಆ  ಕಥೆ.

3. ಸಮಗ್ರ ನಾಟಕಗಳು.  ಸಂಪುಟ 3. ರೂ75.00
"ಅಶ್ವತ್ಥಾಮ", "ಹುಲಿಯ ಕಥೆ" ಮತ್ತು "ದಂಗೆ"--ಈ ಮೂರು ನಾಟಕಗಳು. "ಅಶ್ವತ್ಥಾಮ" ಕುರುಕ್ಷೇತ್ರ ಯುದ್ಧದ ಬಳಿಕ ದ್ರೌಪದಿ ದುರ್ಯೋಧನನ ರಾಣಿ ಬಾನುಮತಿಯನ್ನು ಹೇಗೆ ದಾಸಿಯನ್ನಾಗಿ ಮಾಡಿಕೊಂಡಳು ಮತ್ತು ಅಶ್ವತ್ಥಾಮ ಕೊಂದ ಪಾಡವಪುತ್ರರು ಅವನನ್ನು ಹೇಗೆ ಕಾಡಿದರು ಎಂಬುದರ ಕುರಿತ ನಾಟಕ. "ಹುಲಿಯ ಕತೆ" ಗಾಂಧೀಜಿ ಹಾಗೂ ಅವರ ಪರಿತ್ಯಕ್ತ ಪುತ್ರ ಹರಿಲಾಲ್, ರಾಮ ಮತ್ತು ಅವನ ಪರಿತ್ಯಕ್ತ ಹೆಂಡತಿ ಮಕ್ಕಳಾದ ಸೀತೆ, ಲವ--ಕುಶ ಕುರಿತಾದದದ್ದು. "ದಂಗೆ"  1970ರಲ್ಲಿ ಬರೆದ ಕತೆ "ದಂಗೆಯ ಪ್ರಕರಣ"ದ ಮುಂದಿನ ಭಾಗ; ಬ್ಯೂರೋಕ್ರೆಸಿ ಕುರಿತಾದದ್ದು.

4. ಸಮಗ್ರ ನಾಟಕಗಳು. ಸಂಪುಟ 4. ರೂ75.00
"ಡಾಗ್ ಶೋ", "ರಾಹು ಮತ್ತು ಕೇತು", "ಜರಾಸಂಧ"--ಈ ಮೂರು ನಾಟಕಗಳು. "ಡಾಗ್ ಶೋ" ನಾಯಿಗಳೇ ಪಾತ್ರವಾಗುಳ್ಳ ನಾಟಕ. ಇದರಲ್ಲಿ ಉಪನಿಷತ್ತು ಮಹಾಭಾರತ ಮೊದಲಾದ ಕಡೆ ಬರುವ ಶುನಕಗಳು, ಹಾಲಿ ಇರುವ ಬೀದಿ ನಾಯಿಗಳು, ಅಲ್ಶೇಷಿಯನ್ ಮೊದಲಾದ ವಿದೇಶೀ ತಳಿಗಳು  ಪಾತ್ರಗಳು. "ರಾಹು ಮತ್ತು ಕೇತು" ರಾಹು ಎಂಬ ರುಂಡ ಹಾಗೂ ಕೇತು ಎಂಬ ಮುಂಡ ಕುರಿತ ಬೊಂಬೆಯಾಟ. ಅವರಿಬ್ಬರೂ ಒಂದೇ ವ್ಯಕ್ತಿ. ಅಮೃತ ಕುಡಿದ ಮೇಲೆ ಅಮರರಾಗಿದ್ದಾರೆ. ಆದರೆ ರುಂಡ ಮುಂಡಗಳು ಬೇರ್ಪಟ್ಟು ವಿಚ್ಛಿದ್ರರೂ ಆಗಿಬಿಟ್ಟಿದ್ದಾರೆ. ರಾಹು ಮಾತು, ಯೋಚನೆ; ಕೇತು ಕ್ರಿಯೆ. ರುಂಡ ಮಾತ್ರನಾದ ರಾಹು ತನ್ನ ಮುಂಡವಾದ ಕೇತು ಜೊತೆ ಸೇರಿ ಅಮರನೂ ಸಂಪೂರ್ಣನೂ ಆಗಲು ಪ್ರಯತ್ನಿಸುವ ಕುರಿತ ನಾಟಕ. "ಜರಾಸಂಧ" ಮತ್ತೊಂದು ಬೊಂಬೆ ಆಟ.

Friday, March 25, 2011

ಡಾಗ್ ಶೋ: ನಾಯಿಗಳೇ ಪಾತ್ರಗಳು

ಮೇಲಿನದ್ದು ಮಾರ್ಚ್ 20ರಂದು ಬಿಡುಗಡೆಯಾದ ಪುಸ್ತಕಗಳಲ್ಲಿ ಒಂದು. ಇದರಲ್ಲಿ ಮೂರು ನಾಟಕಗಳಿವೆ. ಡಾಗ್ ಶೋ ನಾಯಿಗಳೇ ಪಾತ್ರಗಳಾಗುಳ್ಳ ನಾಟಕ. ಇದರಲ್ಲಿ ಮೂರು ಬಗೆಯ ನಾಯಿಗಳಿವೆ. ಶುನಕ ನಮ್ಮ ಪುರಾಣಗಳಲ್ಲಿ, ಮಹಾಭಾರತದಲ್ಲಿ, ಉಪನಿಷತ್ತುಗಳಲ್ಲಿ ಬರುವವುಗಳು. ನಾಯಿಗಳು ಊರು ನಾಯಿಗಳು, ಬೀದಿ ನಾಯಿಗಳು. ಡಾಗುಗಳು ಅಲ್ಶೇಷಿಯನ್ ಮೊದಲಾದ ವಿದೇಶೀ ತಳಿಗಳು. ಒಂದಕ್ಕೊಂದರ ಮಧ್ಯೆ ಜಗಳವಾಗುತ್ತದೆ; ವಿದೇಶೀ ತಳಿಯಾದ ಡಾಗು ತಾನೇ ಪರಮೋಚ್ಛ ಎಂದರೆ ಪುರಾತನದ ಶುನಕ ತಾನೇ ಪರಮೋಚ್ಛ ಎನ್ನುತ್ತದೆ. ಬೀದಿ ನಾಯಿಗಳು ನಾವು ಶುನಕಗಳ ವಂಶಸ್ಥರು ಎನ್ನುತ್ತವೆ. ಇದರಿಂದ ಪುರಾತನ ಶುನಕಗಳಿಗೆ ಸಿಟ್ಟು ಬರುತ್ತದೆ. ಯುದ್ಧದ ವರೆಗೆ ಹೋಗುತ್ತದೆ. ಕೊನೆಗೆ ಹೆಣ್ಣು ಡಾಗುಗಳ ಹಿಂದೆ ಗಂಡು ನಾಯಿಗಳೂ ಗಂಡು ನಾಯಿಗಳ ಹಿಂದೆ ಹೆಣ್ಣು ಡಾಗುಗಳೂ ಹೋಗಿ ಮಕ್ಕಳನ್ನು ಹುಟ್ಟಿಸುವುದರಿಂದ ಯುದ್ಧ ಅಸಾಧ್ಯವಾಗಿ ರಾಜಿಯಲ್ಲಿ ಮುಗಿಯುತ್ತದೆ.

ರಾಹು ಮತ್ತು ಕೇತುವಿನಲ್ಲಿ ರುಂಡ ಮತ್ತು ಮುಂಡ ಮಾತ್ರ ಇವೆ. ರಾಹು ರುಂಡ; ಕೇತು ಮುಂಡ. ಪುರಾಣದ ಪ್ರಕಾರ, ಈ ರುಂಡ ಮುಂಡ ಅಸುರನಾದ ಒಬ್ಬನೇ ವ್ಯಕ್ತಿಗೆ ಸೇರಿದವುಗಳು.  ಅವ ಅಮೃತ ಹಂಚುತ್ತಿದ್ದಾಗ ಸುರನ ವೇಷ ತೊಟ್ಟು ಸಾಲಿನಲ್ಲಿ ಹೋಗಿ ಕೂತ. ಅಮೃತ ಹಂಚುತ್ತಿದ್ದ ದೇವರಿಗೆ ಇದು ಗೊತ್ತಾಗಿ ಅಮೃತ ಹಂಚುತ್ತಿದ್ದ ಸೌಟಿನಿಂದ ಅವನ ತಲೆ ಕತ್ತರಿಸಿದ. ಆಗ ಸೌಟಲ್ಲಿದ್ದ ಅಮೃತ ಅವನ ದೇಹಕ್ಕೆ ಸೇರಿ ಅವ ಅಮರನಾದ. ಹೀಗೆ ಅಮರನಾಗಬೇಕೆಂಬ ಅವನ ಆಸೆ ಪೂರೈಸಿತು. ಅಷ್ಟರ ಮಟ್ಟಿಗೆ ದೇವರು ಸೋತ. ಆದರೆ ಅವನೂ  ವಿಚ್ಛಿದ್ರನೂ ಆಗಿಬಿಟ್ಟ. ಅಮರ, ಆದರೆ ವಿಚ್ಛಿದ್ರ. ನನ್ನ ನಾಟಕ ರುಂಡ ಮುಂಡಗಳು ಪ್ರತ್ಯೇಕಗೊಂಡು ಎಲ್ಲಿಯೋ ಬಿದ್ದಿದ್ದವರು ಮತ್ತೆ ಒಂದೇ ಕಡೆ ಅಕಸ್ಮಾತ್ತಾಗಿ ಸೇರುವುದರಿಂದ ಪ್ರಾರಂಭವಾಗುತ್ತದೆ. ಕೇತು ಬರೀ ದೇಹ: ಯೋಚಿಸಲಾರ, ಮಾತಾಡಲಾರ. ಆದರೆ ಕೈ ಕಾಲುಗಳೂ, ಕೈಯ್ಯಲ್ಲಿ ಕತ್ತಿಯೂ ಇರುವುದರಿಂದ ಕ್ರಿಯೆಯಲ್ಲಿ ತೊಡಗಬಲ್ಲ. ರಾಹು ಬರೀ ರುಂಡ: ಏನೂ ಮಾಡಲಾರ; ಆದರೆ ಕಣ್ಣು ಕಿವಿ ನಾಲಗೆಗಳಿರುವುದರಿಂದ ಗ್ರಹಿಸಬಲ್ಲ; ಯೋಚಿಸಬಲ್ಲ; ಮಾತಾಡಬಲ್ಲ. ನಾಟಕದುದ್ದಕ್ಕೂ ರಾಹು ತನ್ನ ಒಳಗುದಿಗಳನ್ನು ಹೇಳುತ್ತಾ ತನ್ನ ದೇಹದ ಜೊತೆ ಒಂದಾಗಲು ಪ್ರಯತ್ನಿಸುತ್ತಾನೆ. ಅವನು ದೇಹದ ಜೊತೆ ಸೇರಿಬಿಟ್ಟರೆ ಈ ವಿಚ್ಛಿದ್ರ ಸ್ಥಿತಿ ಮುಗಿಯುತ್ತದೆ; ಪೂರ್ಣನಾಗುತ್ತಾನೆ. ಅಮರತ್ವ ಸಿದ್ಧಿಸಿರುವ ಅವನು ಪೂರ್ಣನಾದರೆ ದೇವರಿಗೆ ಸಮಾನನಾಗುತ್ತಾನೆ; ದೇವರಿಗೆ ಸರಿ ಸಮಾನವಾದ ರಾಜ್ಯವನ್ನು ಕಟ್ಟುವುದು ಅವನಿಗೆ ಸಾಧ್ಯವಾಗುತ್ತದೆ. ಆದರೆ ಮುಂಡ ಮಾತ್ರನಾದ ಕೇತು ಮಾತ್ರ ತನ್ನ ದೇಹದ ಜೊತೆ ಸೇರಿ ಇಡಿಯಾಗಬೇಕೆಂಬ  ರಾಹುವಿನ ಆಸೆಗೆ  ಕುಮ್ಮಕ್ಕು ಕೊಡುವವನಲ್ಲ. ಅವನಿಗೆ ತನ್ನ ದೇಹವನ್ನು--ದೇಹದ ಆಸೆಗಳನ್ನು, ಸೆಳೆತಗಳನ್ನು--ಮೆದುಳು--ಬುದ್ಧಿಶಕ್ತಿ--ನಿಯಂತ್ರಸುವುದು ಬೇಕಾಗಿಲ್ಲ. ದೇಹಕ್ಕೆ ಬೇಕಾದಂತೆ ಸ್ವಚ್ಛಂದವಾಗಿ, ಬುದ್ಧಿಯ ನಿಯಂತ್ರಣವಿಲ್ಲದೆ  ನಡೆದುಕೊಳ್ಳುವುದರಲ್ಲಿ ಮಹಾ ಶಕ್ತಿಶಾಲಿಯೂ ಆಯುಧವನ್ನು ಹೊಂದಿದವನೂ ಆದ ಅವನು ಹೆಚ್ಚು ಸುಖ ಕಾಣುತ್ತಾನೆ.

ಕನ್ನಡ ಸಾಹಿತ್ಯದಲ್ಲಿ ಅಪೂರ್ಣತೆ ಒಂದು ಮುಖ್ಯ ವಸ್ತು. ಹಯವದನ ಅಪೂರ್ಣತೆ ಬಗೆಗಿನ ಕೃತಿ ಎಂಬುದು ಈಗಾಗಲೇ ಚರ್ಚೆ ಆಗಿರುವಂಥದು. ಶಿವರಾಮ ಕಾರಂತರ ಕಾದಂಬರಿ ಮೈ ಮನಗಳ ಸುಳಿಯಲ್ಲಿ  ಕೂಡಾ ಇದೇ  ವಸ್ತುವನ್ನು ಹೊಂದಿದೆ. ನನ್ನನ್ನೂ ಈ ವಸ್ತು ಅನೇಕ ವರ್ಷಗಳಿಂದ ಕಾಡುತ್ತಿತ್ತು. ತತ್ವಜ್ಞಾನದಲ್ಲಿ ದೇಹ ಮನಸ್ಸುಗಳ ಡೈಕಾಟಮಿ ಬಗ್ಗೆ ಓದಿದ್ದು ಅನೇಕ ವಿಚಾರಗಳನ್ನು ಸ್ಪಷ್ಟಪಡಿಸಿಕೊಳ್ಳಲು ನೆರವಾಯಿತು. ಇದಕ್ಕಿಂತ ಮೊದಲು "ಎಷ್ಟೊಂದು ಹುಡುಗಿಯರು"  ಮೊದಲಾದ ನನ್ನ ಪದ್ಯಗಳಲ್ಲಿ ಈ ವಸ್ತುವನ್ನು ಬೇರೆ ರೀತಿಯಲ್ಲಿ ಡೀಲ್  ಮಾಡಿದ್ದೆ. ರಾಹು ಮತ್ತು ಕೇತುವಿನ ಕತೆಯಲ್ಲಿ ನನಗೆ ಅದಕ್ಕೆ ಬೇಕಾದ ಒಂದು ಘಟ್ಟಿ ಮೆಟಫರ್ ಸಿಕ್ಕಿತು. ಆ ಹೆಸರಿನ ಒಂದು ಪದ್ಯವನ್ನೂ ಈ ನಾಟಕ ಬರೆದಾದ ಮೇಲೆ ಬರೆದೆ. ಅದು ನನ್ನ ಹೊಸ ಸಂಗ್ರಹ ಐದು ಕವನಗಳುನಲ್ಲಿದೆ.

ಜರಾಸಂಧ  ಕೂಡಾ ಪುರಾಣದ ಕತೆಯನ್ನು ಪುನರ್ವ್ಯಾಖ್ಯಾನಿಸಿದ ನಾಟಕ. ಒಬ್ಬ ಚೆನ್ನಾಗಿ ಕುಣಿಯುವ ಒಳ್ಳೆಯ ಅಂಗಸೌಷ್ಠವದ ವ್ಯಕ್ತಿಯನ್ನ ಒಂದು ಆಯುಧ ಸೀಳಿ ಎಸೆಯುವುದು, ಆ ಸೀಳುಗಳು ಮತ್ತೆ ಕೂಡುವುದು, ಕೊನೆಗೆ ಸೀಳಿ ರಿವರ್ಸ್ ರೀತಿಯಲ್ಲಿ ಎಸೆಯುವುದು, ಅವು ಕೂಡಲಾಗದೆ, ಆದರೆ ಕೂಡುವುದಕ್ಕಾಗಿ ಒದ್ದಾಡುತ್ತಾ, ವಿಚ್ಛಿದ್ರವಾದರೂ ಒದ್ದಾಡುತ್ತಾ--ಹೀಗೆ ಈ ನಾಟಕ. ಚಿಕ್ಕದು. ಸುಮಾರು ನಾಲ್ಕು ಪುಟ. ಮಾತಿಲ್ಲ. ಹಾಡು ಮತ್ತು ಕ್ರಿಯೆ ಮಾತ್ರ. ಆದರೆ ಆಡಲು  ಹೆಚ್ಚು ಕಡಿಮೆ ಒಂದು ಗಂಟೆ ಬೇಕಾಗಬಹುದು.

ಪುಸ್ತಕದ ಕುರಿತು ಮಾತಾಡಿದ ಡಾ. ನರಹಳ್ಳಿ  ಬಾಲಸುಬ್ರಹ್ಮಣ್ಯ ಅವರು ಇವು ಕುವೆಂಪು ಹೇಳುವ ರೀತಿಯ ಮನೋರಂಗಭೂಮಿಗಾಗಿ ಬರೆದ ನಾಟಕಗಳೆಂದೂ ಅವುಗಳನ್ನು ಆಡಬೇಕೆಂಬ ಇಚ್ಛೆ ಲೇಖಕರಿಗೆ ಇದ್ದಂತಿಲ್ಲ ಎಂದೂ ಹೇಳಿದರು. ನಾಟಕಕಾರನೊಬ್ಬ ಪ್ರಸ್ತುತ ಅಸ್ತಿತ್ವದಲ್ಲಿರುವ ರಂಗಭೂಮಿಗೆ ಮಾತ್ರ ಬರೆಯಬಾರದು., ತನ್ನ ಮನಸ್ಸಿನಲ್ಲಿರುವ ರಂಗಭೂಮಿಗಾಗಿ ಬರೆಯಬೇಕು, ಆಗ ಅವನಿಗೆ ಪ್ರಸ್ತುತ ರಂಗಭೂಮಿಯಿಂದ ಬಿಡುಗಡೆ ಪಡೆದು ಪ್ರಯೋಗಶೀಲನಾಗಲು ಸಾಧ್ಯವಾಗುತ್ತದೆ ಎಂಬುದು ನನ್ನ ನಿಲುವು. ಆದರೆ ಈ ನಾಟಕಗಳನ್ನು ಆಡಲು ಸಾಧ್ಯವಿಲ್ಲ ಎಂಬುದು ಸರಿಯಲ್ಲ. ಇವುಗಳನ್ನು ಮುಖವಾಡ ಮತ್ತು ವೇಷ ಬಳಸಿ ಸುಲಭವಾಗಿ ಆಡಬಹುದು. ಡಾಗ್ ಶೋದಲ್ಲಿ ಶುನಕ, ನಾಯಿ, ಡಾಗುಗಳಿಗಾಗಿ ವಿಭಿನ್ನ ಮುಖವಾಡ ಮತ್ತು ವೇಷ ಬಳಸಬಹುದು. ಮತ್ತು ಈ ಮುಖವಾಡ ಭೂತಕೋಲದಷ್ಟು ಹಳತು. ಭೂತಕೋಲದಲ್ಲಿ ಪಿಲಿಚಾಮುಂಡಿ, ರಕ್ತೇಶ್ವರಿ ಮೊದಲಾದ ಭೂತಗಳಿಗೆ ಮುಖವಾಡಗಳಿವೆ. ಮುಖವಾಡ ಎಲ್ಲಾ ಭೂತಚಾವಡಿಗಳ ಅವಿಭಾಜ್ಯ ಅಂಗ. ಹಾಗೆಯೇ ವೇಷ ಬದಲಾವಣೆಯಿಂದ ಪಾತ್ರಗಳ ವ್ಯಕ್ತಿತ್ವ  ಸೂಚಿಸಬಹುದು ಎಂಬುದು ಕೂಡಾ. ಬಿ. ವಿ. ಕಾರಂತರು ಹಯವದನದಲ್ಲಿ ಕಪಿಲ ದೇವದತ್ತರ ತಲೆ ಬದಲಾದದ್ದನ್ನು ವೇಷ ಬದಲಾವಣೆಯ ಮೂಲಕವೇ ಸೂಚಿಸಿದ್ದರು. ಡಾಗು--ನಾಯಿ--ಶುನಕಗಳಿಗೆ ಪ್ರತ್ಯೇಕ ಕಾಸ್ಟ್ಯೂಮು ಹಾಕುವ ಮೂಲಕ ಅವುಗಳ ವ್ಯತ್ಯಾಸ ಸೂಚಿಸಬಹುದು. ಹೀಗೆ ಈ ನಾಟಕ ಕಾಸ್ಟ್ಯೂಮು ಮಾಡುವವರಿಗೆ ಒಂದು ಸೃಜನಶೀಲ ಅವಕಾಶ ಒದಗಿಸುತ್ತದೆ ಎಂದು ನನ್ನ ತಿಳುವಳಿಕೆ. ಒಂದು ನಾಟಕದ ಪ್ರಯೋಗದಲ್ಲಿ ತೊಡಗುವ ಎಲ್ಲರಿಗೆ--ನಟ ನಟಿಯರು, ಕಾಸ್ಟ್ಯೂಮು ಮಾಡುವವರು, ಲೈಟು ಮಾಡುವವರು, ಧ್ವನಿ ಸಂಯೋಜಕರು, ರಂಗ ವಿನ್ಯಾಸಕರು, ಎಲ್ಲರಿಗೆ--ಸೃಜನಶೀಲ ಅವಕಾಶಗಳನ್ನು ಒದಗಿಸುವ ನಾಟಕ ಬರೆಯಬೇಕೆಂಬುದು ನನ್ನ ಆಸೆಗಳಲ್ಲಿ ಒಂದು.

ಡಾಗ್ ಶೋ ಗೀತನಾಟಕ. ಗೀತ-ನೃತ್ಯಗಳೇ ಅದರ ಮುಖ್ಯ ಜೀವಾಳ. ಪುತಿನ, ಶಿವರಾಮ ಕಾರಂತ ಮೊದಲಾದವರ ಗೀತ ನಾಟಕ ಓದಿದಾಗಿಂದ, ಬಿ. ವಿ. ಕಾರಂತರ ಪ್ರಯೋಗಗಳನ್ನು ನೋಡಿದಾಗಿಂದ ಹೊಸ ಬಗೆಯ ಗೀತ ನಾಟಕ ಬರೆಯಬೇಕೆಂದು ಮನಸ್ಸಲ್ಲಿ ತುಂಬಾ ಇತ್ತು. ಹಾಡಿನ ರೀತಿಯಲ್ಲಿ ಇಲ್ಲಿನ ಪಾತ್ರಗಳು ಮಾತಾಡುವುದು ವಾಸ್ತವದ ಕಟ್ಟಪಾಡಿಗಳಿಂದ ಅವನ್ನು ಬಿಡುಗಡೆ ಮಾಡುವುದಕ್ಕೂ ಅಗತ್ಯ.

ಬಹುಶಃ ಸಂಪೂರ್ಣವಾಗಿ ಪ್ರಾಣಿಗಳನ್ನೇ ಪಾತ್ರವಾಗಿ ಹೊಂದಿರುವ ಕನ್ನಡದ ಮೊದಲನೆಯ ನಾಟಕ ಇದಾಗಿರಬಹುದು. ನನ್ನ ಮೂಗೇಲ ಕಥಾಸಂಗ್ರಹದ  ಮುನ್ನುಡಿಯಲ್ಲಿ ಮತ್ತೆ ನಮ್ಮ ಪ್ರಾಚೀನ ಕೃತಿಗಳ ಬರೆವಣಿಗೆಯ ಕ್ರಮಕ್ಕೆ ಹಿಂದೆ ಹೋಗಿ ನಮ್ಮನ್ನು ನಾವು ಪುನರ್ ಆವಿಷ್ಕರಿಸಿಕೊಳ್ಳಬೇಕು ಎಂದಿದ್ದೆ. ಡಾಗ್ ಶೋ ಪ್ರಾಣಿಗಳೇ ತುಂಬಿರುವ ಪಂಚತಂತ್ರದ ಪ್ರಪಂಚಕ್ಕೆ ಹಿಂದೆ ಹೋಗಿ ಇಂದಿನ ಮನುಷ್ಯ ಸಮಾಜಕ್ಕೆ ಸೇರಿದ ಅನುಭವವವನ್ನು ಹೇಳುವ ಪ್ರಯತ್ನವಾಗಿದೆ.

ರಾಹು ಮತ್ತು ಕೇತು ಬೊಂಬೆ ಆಟ. ಇದನ್ನು ಮತ್ತು ಜರಾಸಂಧವನ್ನು ಎನಿಮೇಶನ್ ಸಿನೆಮಾ ಕೂಡಾ ಮಾಡಬಹುದು. ಇದರಲ್ಲಿ ಕ್ರಿಯೆ ಇಲ್ಲ ಎನ್ನುವುದು ಸರಿಯಲ್ಲ. ಕೇತು ನಾಟಕದುದ್ದಕ್ಕೆ ಕ್ರಿಯೆಯಲ್ಲಿ ತೊಡಗಿದ್ದಾನೆ. ಅದಕ್ಕಿಂತ ಹೆಚ್ಚು, ನನಗೆ ವಾಚಿಕದ ವಿವಿಧ ಸಾಧ್ಯತೆಗಳನ್ನು ಅನ್ವೇಷಿಬೇಕಾಗಿತ್ತು. ರಾಹು ನಾಟಕದುದ್ದಕ್ಕೆ ಮಾತಾಡುತ್ತಾನೆ. ವಿವಿಧ ರೀತಿಯಲ್ಲಿ ಮಾತಾಡುತ್ತಾನೆ. ಜೊತೆಗೆ ಬೋರು ಕಳೆಯಲು ವಿಧ ಬಗೆಯ ಶಬ್ದ ಮಾಡುತ್ತಾನೆ; ಪ್ರತಿಧ್ವನಿಗಳು ಮತ್ತೆ ಮತ್ತೆ ಕೇಳುವ ರೀತಿಯಲ್ಲಿ  ಮಾತಾಡುತ್ತಾನೆ. ಹೀಗೆ ಧ್ವನಿಗಳ, ಮಾತಿನ  ವಿವಿಧ ಸಾಧ್ಯತೆಗಳನ್ನು ತಿಳಿದುಕೊಳ್ಳುವುದಕ್ಕಾಗಿಯೇ ಈ ನಾಟಕ ಬರೆದೆ ಅಂದರೂ ಸಲ್ಲುತ್ತದೆ. ಅದಕ್ಕೆ ಬೇಕಾದ ಅವಕಾಶಗಳಿಲ್ಲದ ರಂಗಶಾಲೆಯಲ್ಲಿ ಈ ನಾಟಕ ಆಡಲೂ ಬಾರದು. ಆಡುವುದು ಸಾಧ್ಯವೂ ಆಗಲಾರದು. ಎಕೋ ಹೊಡೆಯುವ ರಂಗಶಾಲೆಗಳು ಬೇರೆ ನಾಟಕಗಳಿಗೆ ತ್ಯಾಜ್ಯ; ಈ ನಾಟಕಕ್ಕೆ ಅದೇ ಪ್ರಯೋಜನಕಾರಿ.

ಡಾಗ್ ಶೋ ಜಾಕ್ಕಿ ನಾಯಿಗೆ ಅರ್ಪಿತವಾಗಿದೆ. ಜಾಕ್ಕಿ ನನ್ನನ್ನು ತುಂಬಾ ಹಚ್ಚಿಕೊಂಡಿದ್ದ ಒಂದು ನಾಯಿ. ನಾಯಿಗಳ ಬಗ್ಗೆ ನನಗೆ ಗೊತ್ತಿರುವ ಹೆಚ್ಚಿನ ವಿಷಯಗಳನ್ನು ಕಲಿತದ್ದು ಇದರಿಂದಲೇ. ಇದು ನನ್ನ ತಮ್ಮನ ಮನೆಯ ನಾಯಿ. ಆದರೆ ಅಲ್ಲಿ ಕಟ್ಟಿ ಹಾಕಿದರೂ ಹೇಗೋ ತಪ್ಪಿಸಿಕೊಂಡು ಬಂದು ನನ್ನ ಮನೆಯಲ್ಲಿ ಇರುತ್ತಿತ್ತು. ನಾನು ಕಲ್ಮಡ್ಕ ಪೇಟೆಗೆ ನಡೆದುಕೊಂಡು ಹೊರಟರೆ ನನ್ನ ಹಿಂದಿನಿಂದಲೇ ಹೊರಡುತ್ತಿತ್ತು. ಎದುರಿಗೆ ಯಾವುದಾದರೂ ನಾಯಿ ಬಂದರೆ ಅಡಗಿಕೊಳ್ಳುತ್ತಿತ್ತು. ಪುಕ್ಕ ಅಂದರೆ ಪುಕ್ಕ. ಚಿಕ್ಕಂದಿನಲ್ಲಿ ಯಾವುದಾದರೂ ನಾಯಿಯಿಂದ ಪೆಟ್ಟು ತಿಂದಿತ್ತೋ ಏನೋ; ಹೆದರಿಕೆ ಕೂತುಬಿಟ್ಟಿತ್ತು. ಹೆಣ್ಣು ನಾಯಿ ಎದುರು ಬಂದರೆ ಮಾತ್ರ ಜೊತೆಗೆ ಬರುವುದು ಬಿಟ್ಟು ಅದರ ಜೊತೆ ಹೋಗಿ ಕುಶಲ ವಿಚಾರಿಸಿ ಮೂಸಬೇಕಾದ ಕಡೆ ಮೂಸಿ ನೋಡಿ ಮತ್ತೆ ನನ್ನನ್ನು ಸೇರುತ್ತಿತ್ತು. ನಾನು ಕಾರಿನಲ್ಲಿ ಹೋದರೆ ಅದಕ್ಕೆ ಜೊತೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಅಗ ಗೇಟಿನ ಹತ್ತಿರ ಪಾಂಕು ಹಿಡಿದು ಅಳುತ್ತಾ ಕೂತಿರುತ್ತಿತ್ತಂತೆ. ನನ್ನ ತಮ್ಮನ ಮನೆಯ  ನಾಯಿ, ಅಲ್ಲಿಗೇ ಹೋಗುವುದಾದರೆ ಹೋಗಲಿ ಎಂದು ನಾನು ಅದಕ್ಕೆ ಅನ್ನ ಹಾಕದೆ ಕೂಡಾ ಇದ್ದೆ. ನನ್ನ ಮನೆ ಎದುರೇ ಉಪವಾಸ ಕೂತಿರುತ್ತಿತ್ತೇ ಹೊರತು ಅಲ್ಲಿಗೆ ಹೋಗುತ್ತಿರಲಿಲ್ಲ. ಅವರು ಅದಕ್ಕಾಗಿಯೇ ಒಂದು ಗೂಡು ಮಾಡಿಸಿ ಸಂಕೋಲೆಯಲ್ಲಿ ಕಟ್ಟಿ ಹಾಕಿದರೂ ಹೇಗೋ ತಪ್ಪಿಸಿಕೊಂಡು ನನ್ನ ಮನೆ ಮುಂದೆ ಹಾಜರಾಗುತ್ತಿತ್ತು. ಬಾಗಿಲು ಹಾಕಿದ್ದರೆ ಬಾಗಿಲನ್ನೇ ನೋಡುತ್ತಾ ಕಾಯುತ್ತಾ ಇರುತ್ತಿತ್ತು. ಕಿಟಿಕಿಯಲ್ಲಿ ನನ್ನ ಮುಖ ಕಂಡರೆ ಅದಕ್ಕೇ ವಿಶಿಷ್ಟವಾದ ಕೆಲವು ಧ್ವನಿಗಳಿಂದ ತನ್ನ ಇರವನ್ನು ಸೂಚಿಸುತ್ತಿತ್ತು; ಬಾಗಿಲು ತೆಗೆದರೆ ಒಂದು ನರ್ತನ ಮತ್ತು ಕುಂಯ್ ಕುಂಯ್; ಖುಷಿ. ಕೆಲವು ವರ್ಷಗಳ ಹಿಂದೆ ಸತ್ತು ಹೋಯಿತು. ಆಗಿನ್ನೂ ಅದಕ್ಕೆ ಎಂಟು ವರ್ಷವೂ ಆಗಿರಲಿಲ್ಲ. ಎಂಟು ವರ್ಷ ನಾಯಿಗಳಿಗೆ ಸಾಯುವ ವಯಸ್ಸಲ್ಲ. ಕೆಲವು ಹದಿನೈದು ಹದಿನಾರು ವರ್ಷಗಳ ವರೆಗೆ ಬದುಕುತ್ತವಂತೆ. ಇದು ಯಾಕೋ ಬೇಗ ಸತ್ತುಹೋಯಿತು. ಸಾಯುವ ಮೊದಲು ಅತ್ತಿತ್ತಂತೆ. ಏನು ನೋವಾಯಿತೋ ಏನೋ. ಅತ್ತು, ಸ್ವಲ್ಪ ಹೊತ್ತಿಗೆ ಸತ್ತುಹೋಯಿತು. ಸಾಯುವ ಮೊದಲು ನೀರು ಕುಡಿದಿತ್ತು. ಅದು ಸತ್ತದ್ದು ಅಕ್ಟೋಬರ್ 10, 2005ರ ಪೂರ್ವಾಹ್ನ ಸುಮಾರು ಹನ್ನೊಂದು ಗಂಟೆ ಹೊತ್ತಿಗೆ. ಐದು ವರ್ಷಗಳೇ ಕಳೆದವು. ಆದರೆ ಈಗ ಇತ್ತು ಎಂಬಂತೆ ಅದರ ಇರುವಿಕೆ ಮನಸ್ಸಲ್ಲಿ ಹಸಿರಾಗಿದೆ.


Wednesday, March 23, 2011

ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು


(ಮೊನ್ನೆ ಬಿಡುಗಡೆಯಾದ ಪುಸ್ತಕಗಳಲ್ಲಿ ಒಂದು)

ಮಾರ್ಚ್ 20ರಂದು ಬೇಂದ್ರೆ ಕಾವ್ಯೋತ್ಸವ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಚೆನ್ನಾಗಿ ನಡೆಯಿತು. ಶ್ರೀ ಸಿ. ಆರ್. ಸಿಂಹ, ಶ್ರೀನಿವಾಸ ಪ್ರಭು, ಕಲ್ಪನಾ ನಾಗನಾಥ್, ಮಂಗಳಾ, ರಘುನಂದನ ಬೇಂದ್ರೆ ಪದ್ಯಗಳನ್ನು ಚೆನ್ನಾಗಿ ಹಾಡಿದರು/ಓದಿದರು. ಪ್ರತಿಯೊಬ್ಬರೂ ಬೇಂದ್ರೆಯವರ ಕವನಗಳ ಒಂದಿಲ್ಲೊಂದು ಮುಖದ ಬಗ್ಗೆ ನಮ್ಮ ಗಮನ ಸೆಳೆದರು. ಕಲ್ಪನಾ ಕವನಗಳ ಹಾಡಿಸಿಕೊಳ್ಳುವ ಶಕ್ತಿಯ ಬಗ್ಗೆ ನಮ್ಮ ಗಮನ ಸೆಳೆದರೆ ಸಿಂಹ ಮತ್ತು ಮಂಗಲಾ ಕವನಗಳ ನಾಟಕೀಯ ಶಕ್ತಿಯ ಬಗ್ಗೆ ಗಮನ ಸೆಳೆದರು. ರಘುನಂದನ್ ಬೇಂದ್ರೆಯವರ ಕವನಗಳ ವಸ್ತು ವೈವಿಧ್ಯತೆ  ಬಗ್ಗೆ ನಮ್ಮ ಗಮನ ಸೆಳೆದರು. ಅವರು ಮತ್ತು ಶ್ರೀನಿವಾಸ ಪ್ರಭು ಕವನಗಳು ತಮ್ಮ ಗತಿಯಿಂದ ಸೂಚಿಸುವ ಓದಿನ ಕ್ರಮ ಯಾವುದು ಎಂಬುದನ್ನು ಹುಡುಕುತ್ತಿದ್ದರು. ರಘುನಂದನ್, "ಈಚಲು ಮರದವ್ವ" ಪದ್ಯದ ಲಯವೇ ಅದನ್ನು ಹೇಗೆ ಓದಬೇಕೆಂಬುದನ್ನು ಸೂಚಿಸುತ್ತದೆ ಎಂದದ್ದು ಬೆಲೆಯುಳ್ಳ ಮಾತು. ಪ್ರತಿ ಮುಖ್ಯ ಕವನಕ್ಕೆ--ಪದಗಳ ಸೂಕ್ಷ್ಮವನ್ನು ಅರಿತು ಬರೆದ ಕವನಕ್ಕೆ-- ಅದರದ್ದೇ ಶಬ್ದ ಸಂಗೀತವಿದೆ, ಹೊರಗಿನಿಂದ ಆರೋಪಿಸಿದ ಸಂಗೀತದಿಂದ ಅದನ್ನು ಓದುವುದು ಅದರ ಸೂಕ್ಷ್ಮತೆಗಳನ್ನು ನಾಶಮಾಡಬಲ್ಲುದು ಎಂಬ ಮಾತನ್ನು ಇದು ಸಮರ್ಥಿಸುತ್ತದೆ.

"ಸಚ್ಚಿದಾನಂದ" ಕವನವನ್ನು ಸಿಂಹ ಮತ್ತು ಮಂಗಲಾ--ಇಬ್ಬರೂ ಓದಿದರು. ಇಬ್ಬರು ಓದಿದ ರೀತಿ ಭಿನ್ನವಾಗಿತ್ತು. ಅದೇ ಬೇಂದ್ರೆ ಕವನದ ಮುಖ್ಯ ಗುಣಗಳಲ್ಲಿ ಒಂದು. ವಿಭಿನ್ನ ರೀತಿಯಲ್ಲಿ ಅವರ ಕವನಗಳನ್ನು ಓದಬಹುದು. ಓದಿದಾಗ ಕವನಗಳ ಶಕ್ತಿ ಮಾತ್ರವಲ್ಲ, ಓದುವವನ ಪ್ರತಿಭೆಯೂ ಗೊತ್ತಾಗುತ್ತದೆ. ಬೇಂದ್ರೆ ಕವನಗಳು ತಮ್ಮ ಶಕ್ತಿಯನ್ನು ವ್ಯಕ್ತಪಡಿಸುತ್ತಿರುವಂತೆ ತಮ್ಮನ್ನು ಓದುವವನ/ತಮ್ಮ ಬಗ್ಗೆ ಬರೆಯುವವನ ಶಕ್ತಿಯನ್ನೂ ವ್ಯಕ್ತಪಡಿಸುತ್ತವೆ. ಸಿಂಹ ಮತ್ತು ಮಂಗಲಾರ ಎರಡು ವಿಭಿನ್ನ ಓದುಗಳು ಅವರು ಎಷ್ಟು ಭಿನ್ನ ರಂಗವ್ಯಕ್ತಿತ್ವ ಹೊಂದಿದವರು ಎಂಬುದನ್ನೂ ಸೂಚಿಸಿತು.

ಆ ದಿನ ಬೇಂದ್ರೆ ಪದ್ಯಗಳನ್ನು ಓದಿದವರೆಲ್ಲರೂ ರಂಗಕರ್ಮಿಗಳು. ಹೆಚ್ಚು ಕಡಿಮೆ ಒಂದು ತಲೆಮಾರಿಗಿಂತಲೂ ಹೆಚ್ಚು ಸಮಯದಿಂದ ರಂಗಭೂಮಿಯಲ್ಲಿ ಕೆಲಸ ಮಾಡಿದವರು. ಸಿಂಹ ಆಧುನಿಕ ರಂಗ ಚಳವಳಿಯ ಜೊತೆಜೊತೆಗೇ ಸಾಗಿ ಬಂದವರು. ರಘುನಂದನ ಸ್ವತಃ ನಿರ್ದೇಶಕರು; ಹೊಸ ಪ್ರಯೋಗ ಮಾಡುತ್ತಿರುವ ನಾಟಕಕಾರರು. ಶ್ರೀನಿವಾಸ ಪ್ರಭು, ಕಲ್ಪನಾ, ಮತ್ತು ಮಂಗಲಾ ಕನ್ನಡ ರಂಗಭೂಮಿಯ ಅವಿಭಾಜ್ಯ ಅಂಗವಾದವರು. ಪ್ರಭು ಮತ್ತು ಮಂಗಲಾ ವೈಯಕ್ತಿಕವಾಗಿ ನನಗೆ ಹತ್ತಿರದವರೂ ಹೌದು: ಪ್ರಭು ನನ್ನ ಹ್ಯಾಮ್ಲೆಟ್  ಅನುವಾದದಲ್ಲಿ ಹ್ಯಾಮ್ಲೆಟ್ ಪಾತ್ರ ಮಾಡಿದ್ದರು; ಆಗಿನ ಅವರ ಡಯಲಾಗ್ ಹೇಳುವ ಕ್ರಮ ಈಗಲೂ ದಂತಕಥೆಯಾಗಿ ಉಳಿದಿದೆ.  ಆ ಅನುವಾದ ಜನರ ಗಮನ ಸೆಳೆಯಲು ಅವರ ಡಯಲಾಗ್ ಡೆಲಿವರಿಯೂ ಒಂದು ಮುಖ್ಯ ಕಾರಣ.  ರಥಮುಸಲದ ಮೊದಲ ಪ್ರಯೋಗ ಅವರ ನಿರ್ದೇಶನದಲ್ಲೇ ಆಯಿತು. ಮಂಗಲಾ ಇತ್ತೀಚೆಗೆ ನನ್ನ ಕುದುರೆ ಬಂತು ಕುದುರೆ  ಆಡಿಸಿದ್ದರು. ಹೀಗಾಗಿ ಇವರನ್ನು ಬೇಂದ್ರೆ ಕಾವ್ಯೋತ್ಸವದಲ್ಲಿ ಭಾಗವಹಿಸುವಂತೆ ನಾನು ಸ್ನೇಹದ ಸಲುಗೆಯಿಂದಲೇ ಕೇಳಿದ್ದೆ. ಅದರ ಜೊತೆಗೆ ಈ ಪ್ರಸಿದ್ಧ ರಂಗಕರ್ಮಿಗಳು ಬೇಂದ್ರೆಯವರ ಕವನಗಳ ನಾಟಕೀಯ ಗುಣವನ್ನು ಸಮರ್ಥವಾಗಿ ವ್ಯಕ್ತಪಡಿಸಬಲ್ಲರು ಎಂದೂ ಇತ್ತು. ಯಾಕೆಂದರೆ ಬೇಂದ್ರೆಯವರ ಕವನಗಳ ಭಾವಗೀತಾತ್ಮಕತೆ ಬಗ್ಗೆ ತುಂಬಾ ಜನ ಮಾತಾಡುತ್ತಾರೆ. ಆದರೆ ಅವುಗಳ ನಾಟಕೀಯ ಗುಣಗಳ ಬಗ್ಗೆ ಮಾತಾಡುವವರು ಕಮ್ಮಿ. ಅವತ್ತಿನ ಓದಿನ ಕ್ರಮ ಕವನಗಳ  ನಾಟಕೀಯ ಗುಣದ ಬಗ್ಗೆ ಒತ್ತು ಕೊಟ್ಟಿತ್ತು ಎಂದು ನನ್ನ ಅನ್ನಿಸಿಕೆ.

ಅವತ್ತಿನ ಕಾರ್ಯಕ್ರಮದ ವಿಶೇಷ ಎಂದರೆ ತೊಂಭತ್ತೈದು ವರ್ಷದ ಹಿರಿಯರಾದ ಬೆಳೆಗೆರೆ ಕೃಷ್ಣಶಾಸ್ತ್ರಿಗಳು ಬಂದದ್ದು. ಅತಿಥಿಗಳನ್ನು ಸ್ವಾಗತಿಸಲೆಂದು ನಾನು ಹೊರಗೆ ನಿಂತಿದ್ದಾಗ ಒಬ್ಬ ಯುವಕರ ಸ್ಕೂಟರಿನ ಪಿಲಿಯನ್ನಲ್ಲಿ ಕೂತು ಈ ಹಿರಿಯರು ಬಂದರು. ಬೇಂದ್ರೆ ಕಾವ್ಯ ಓದುವುದು ಎಲ್ಲಿ ಎಂದು ಮೆಲು ದನಿಯಲ್ಲಿ ಕೇಳಿ ಒಳಗೆ ಬಂದರು. ಕಾಲು ಮುಟ್ಟಿ ನಮಸ್ಕರಿಸಿದರೆ ಅರ್ಧದಲ್ಲಿ ತಡೆದರು. ರಘುನಂದನ್ ನಮಸ್ಕರಿಸಿದಾಗಲೂ ತಡೆದರು. ಇತ್ತೀಚೆಗೆ ಶೂಸ್ ಹಾಕಿದ್ದ ಕಾಲಿಗೇ ನಮಸ್ಕಾರ ಪಡೆದ ಒಬ್ಬ ಲೇಖಕರನ್ನು ನೋಡಿದ್ದ ನನಗೆ ಇದು ವಿಶೇಷ ಅನ್ನಿಸಿತು. ಆ ಮೇಲೆ ಕಾರ್ಯಕ್ರಮ ಮುಗಿಯುವ ವರೆಗೆ ಆ ಸಾಧಾರಣ ಕುರ್ಚಿಯಲ್ಲಿ ಕೇಳುತ್ತಾ ಕೂತಿದ್ದರು--ಅತ್ಯಂತ ಹಿಂದಿನ ಸಾಲಿನಲ್ಲಿ. ಐವತ್ತು ಅರುವತ್ತು ವರುಷಕ್ಕೇ ಕಿವುಡು ಬರುವವರಿರುವಾಗ ಹಿಂದಿನ ಸಾಲಿನಲ್ಲಿ ಕೂತ ಅವರ ಶ್ರವಣ ಶಕ್ತಿ, ಬೇಂದ್ರೆ ಕಾವ್ಯದ ಬಗೆಗಿನ ಆಸಕ್ತಿ ದೊಡ್ಡದು ಅನ್ನಿಸಿತು.

ಬೇಂದ್ರೆ ಕವನಗಳ ಬಗೆಗಿನ ಆಸಕ್ತಿ ಎಂದರೆ ಪದಗಳ/ಭಾಷೆಯ ಶ್ರೀಮಂತ ಉಪಯೋಗದ ಬಗೆಗಿನ ಆಸಕ್ತಿ ಎಂದು ಬೇರೆ ಹೇಳಬೇಕಾಗಿಲ್ಲ.




Wednesday, March 16, 2011

ಮಾರ್ಚ್ 20ರ ಬೇಂದ್ರೆ ಕಾವ್ಯೋತ್ಸವ

ಮಾರ್ಚ್ 20ರ ಬೇಂದ್ರೆ ಕಾವ್ಯೋತ್ಸವಕ್ಕಾಗಿ ಸಿದ್ಧತೆ ನಡೆಸುತ್ತಿರುವಾಗ ಅವರ ಕಾವ್ಯದ ಈ ಕೆಲವು ಸಾಲುಗಳು ಫಕ್ಕನೆ ನೆನಪಿಗೆ ಬಂದವು:

ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ನನ್ನ ಕತೆಯನು ಕೇಳಿ  ನಿನ್ನೆದೆಯು ಕರಗಿದರೆ
ಆ ಸವಿಯು ಹಣಿಸು ನನಗೆ.
(ನಾದಲೀಲೆ)

ಕರುಳಿನ ತೊಡಕನು ಕುಸುರಾಗಿ ಬಿಡಿಸಿಟ್ಟು
ತಿರುಗೊಮ್ಮೆ ತೊಡವಾಗಿ ನಾ ಧರಿಸಲೇ?
(ಸಖೀಗೀತ)

ಇದು ಮಂತ್ರ; ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ.
(ಉಯ್ಯಾಲೆ)

ಸಂಜೀಯ ಮುಗಿಲಾಗ ರೊಂಯ್ಬಿಲ್ಲ ಪಟವೊಂದು
ಗಾಳಿ ಸುಳಿಗೆ ಶ್ರುತಿ ಹಿಡಿದ್ಹಾಂಗ
ಗಗನಸಂಚಾರದ ನಾರದನ ವೀಣೆಯ
ಹಾಡೀನ ತೆರಿ ತೆರಿ ಬಡಿಧಾಂಗ
ಆತನೀತನವಂತ ಯಾತನದ ಯಾತನೆಯ
ಯಾತ ಕಿರುಗುಟ್ಟೋದು ನಿಂಧಾಂಗ
ನಾನೀನ ನುಡಿ ನುಂಗಿ ತಾನೀನ ತಾನೆ ತಾ
ತಾನಾಗಿ ತನನsನ ಬಂಧಾಂಗ
ರಂಗೊಂದು ದಂಗೊಂದು ಗುಂಗೊಂದು ಒಂದಕ್ಕೊಂದು
ಹತ್ತಾಗಿ ಜತ್ತಾಗಿ ಸುಳಿಧಾಂಗ
ದಣಿದ ಜೀವದ ಮ್ಯಾಲೆ ಜೇನಿನ ಸುರಿಮಳಿ
ಜೇಂಗುಟ್ಟಿ ಹನಿಹನಿ ಇಳಿಧಾಂಗ
(ಮಾಯಾಕಿನ್ನರಿ)

ಮಾತು ಜ್ಯೋತಿ, ಆ ಹರಳು_ಧೂಮ, ರಸ ಸಲಿಲ, ಭಾವ ಗಾಳಿ
ಕವಿಯೊಳಾಗಿ ಕಟ್ಟಿತ್ತು ಕಾವ್ಯ ನವ ಮೇಘ ರೂಪ ತಾಳಿ.
(ಮೇಘದೂತ--ಕವಿಯ ಮೇಘ)
*******
ತಾನು ಉಂಡ ಎದೆಯೊಲುಮೆ ತಾನು ಸೊಗವಟ್ಟು ಪಡೆದ ಹೆಣ್ಣು
ತಾನು ಕಂಡ ಋತುಮಾನ ತನ್ನ ಬಾಗಿಸಿದ ಚೆಲುವು ಕಣ್ಣು.
ಬಂದ ಬಂದ ನದಿ ಬೆಟ್ಟ ಪಟ್ಟಣದ ರಮ್ಯ ಛಾಯೆಯಿಂದ
ಮೋಡದೊಂದು ನೆಪ ಮಾಡಿ ಹಾಡಿದನು ಯಕ್ಷ-ಮಾಯೆಯಿಂದ.

ಇರಲಿ  ಬೆಟ್ಟ ನದಿ, ಇರಲಿ ಶಿವನ ಸತಿ, ಇರಲಿ ಕಾಡು ನಾಡು
ಇರಲಿ ಕಾಮ-ರತಿ, ಅಜನು-ಇಂದುಮತಿ, ಬರಲಿ ಸಾವು ಕೇಡು.
ಯಕ್ಷ-ಯಕ್ಷಿ ಇರಲಕ್ಷಿ-ಪಕ್ಷಿ ಕಣ್ಗಂಡ ಪಾತ್ರದಿಂದ
ಪ್ರೇಮದಾಟವನು ಕವಿಯು ಆಡಿಸಿದ ಕಾಮಸೂತ್ರದಿಂದ.

ಬೆಟ್ಟಕೊಲಿಯೆ ಮನ ಬೆಟ್ಟದಂತೆ ಬಗೆಗರುಹು ಎತ್ತರಹುದು
ಹೊಳೆಗೆ ಒಲಿಯೆ ಮನ ಹೊಳೆಯ ಹಾಗೆ ಬಗೆ ಭಾವ ಹೊಳಿಸುತಿಹುದು
ಬೆಟ್ಟ ಹೊಳೆಯ ಬಿಟ್ಟಿರದು ನಿನ್ನ ಬಗೆ ಎಂಥ ಭವ್ಯ ರುಚಿಯು
ಕಡಲಿನಂತೆ ಗಂಭೀರ ಗುಂಭ, ಸೌಂದರ್ಯದಂತೆ ಶುಚಿಯು.
(ಮೇಘದೂತ--ಕವಿ ಕಾಳಿದಾಸ)
*******

ಆ  ವಿರಹ ಅಲಸ ಗುರುಪದಗಳಿಂದ ಲೀಲಾsಲೋಲವಾಗಿ
ಆಕ್ರಾಂತವಾಗಿ ಉತ್ಕಂಠೆಯಿಂದ ಲಘುಪದಗಳಿಂದ ಸಾಗಿ
ಮುಗಿತಾಯದಲ್ಲಿ ಗುರುಲಘುಗಳಿಂದ ದಿಂಕಿಡುವ ಹಾಗೆ ನೂಂಕಿ
ಮಂದಾಕ್ರಾಂತದಲ್ಲಿ ವಿರಹಿ ಹೃದಯವನು ಸುಡುವದಣ್ಣ ಬೆಂಕಿ.

ಜಲದ ಭಾರದಲಿ ಜಲದ ಬಾನಿನಲಿ ಮಂದಮಂದವಾಗಿ
ಗಾಳಿಯಿಂದ ಆಕ್ರಾಂತವಾಗಿ ಗುಡುಗುಡುಗಿ ದೂಡಿ ನೂಗಿ
ನದಿಗಾಗಿ ನಡೆದು ಬೆಟ್ಟಕ್ಕೆ ತಡೆದು ನಗರಿಯಲಿ ಮೋದವಡೆದು
ಸಾಗುತಿಹುದು ಮಂದಾsಕ್ರಾಂತ ರಸ ವಿರಹಿ ಛಂದ ಹಿಡಿದು.
(ಮೇಘದೂತ--ಮಂದಾಕ್ರಾಂತ)
******

ಕವಿಯ ಕಮಲಕೃತಿಯಲ್ಲಿ ಉಂಡೆ ನಾನೊಬ್ಬ ಭಾವಭೃಂಗ
ಪಕಳೆ ಮಾತು ಉದಿರಾಡಬಹುದು, ತುಂಬೀತು ಸ್ವಾಂತರಂಗ.
ತೋಳುಗೀಳು ಸಡಲೀತು ಪ್ರಿಯರ ಸುಸ್ನಿಗ್ಧ ಬಂಧದಲ್ಲು
ಪ್ರಾಣ ತುಂಬುವಾ ಅಧರಪಾನ ಇಳಿದೀತೆ ಉದರದಲ್ಲು?
(ಮೇಘದೂತ--ಭಾಷಾಂತರವಲ್ಲ, ಭಾವಗ್ರಹಣ)
********

ನಾನು ಕವಿತೆ ಬರೆಯುವ ಮುನ್ನ....I see them, I touch them, I feel them.
(ಸಿ.ಎನ್.ರಾಮಚಂದ್ರನ್ ಜೊತೆ ಮಾತುಕತೆಯಲ್ಲಿ ಬೇಂದ್ರೆಯವರು ಹೇಳಿದ್ದು)


Wednesday, March 9, 2011

ಮತ್ತ್ತೆ ಕೆಲವು ಪ್ರೇಮಕವನಗಳು

ಪ್ರೇಮಕವನಗಳಲ್ಲಿ ಎರಡು ವಿಧ: ಒಂದು ವಿಧದ ಮಾದರಿಯಾಗಿ "ನನ್ನ ಪ್ರೇಮದ ಹುಡುಗಿ ಚೆಂಗುಲಾಬಿಯ ಕೆಂಪು" ಅಥವಾ "ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು" ಎಂಬ ರೀತಿಯ ಕವನಗಳನ್ನು ನೋಡಬಹುದು. ಇಲ್ಲಿ ಹುಡುಗಿ ಸ್ವಪ್ನಲೋಕದಲ್ಲಿ ಕಾಣುವಂಥಾ ಅಪ್ಸರೆ; ಅವಳಲ್ಲಿ ಎಲ್ಲಾ ಒಳ್ಳೆಯ ಗುಣಗಳೂ ಇವೆ; ಹುಡುಗನೂ ಹೀಗೇ ಆದರ್ಶ ವ್ಯಕ್ತಿ. ಅವರ ಜಗತ್ತಿನಲ್ಲಿ ಪ್ರೇಮ ಮತ್ತು ಪ್ರೇಮ ಮಾತ್ರ ಇದೆ. ಇನ್ನೊಂದು ರೀತಿಯ ಪ್ರೇಮ ಕವನಗಳಲ್ಲಿ ಒಲವು ಇರುತ್ತದೆ; ಅದರ ಜೊತೆಗೆ ಗಂಡು ಹೆಣ್ಣುಗಳ ಸಂಬಂಧದಲ್ಲಿ ಸಹಜವಾಗಿ ಬರುವ ಅಸೂಯೆ, ಸಣ್ಣತನ, ಕೊಂಕು, ಬಡತನದ ಕಷ್ಟ, ಸಿರಿತನದ ಬಿಂಕ ಇತ್ಯಾದಿಗಳೂ ಇರುತ್ತವೆ. ಬೇಂದ್ರೆಯವರ ಕವನಗಳು ಅಂಥವು: "ಎಲ್ಲಿರುವೆ ರಾಜಗಂಭೀರಾ" ಎನ್ನುವಾಗಲೂ ಆತ "ನೀರಾ"-ಚಂಚಲ--ಎಂಬುದನ್ನು ಸಹಾ ನೆನಪಿಸಿಕೊಳ್ಳುವಂಥವು; ಅಥವಾ, "ಸಖಿ ನಮ್ಮ ಸಖ್ಯದ ಆಖ್ಯಾನ ಕಟು ಮಧುರ" ಎಂದು ಕಟುವನ್ನೂ ಮಧುರವನ್ನೂ ಒಟ್ಟಿಗೆ ತರಲು ಬಯಸುವಂಥವು: ಕಟು ಪದದ ಮೂಲ ಅರ್ಥ ಸಾವು ಎಂಬುದನ್ನು ನೆನಪಿಸಿಕೊಂಡರೆ (ಆದ್ದರಿಂದಲೇ ಯಮನ ಜೊತೆಗಿನ ನಚಿಕೇತನ ಸಂವಾದವುಳ್ಳ ಉಪನಿಷತ್ತಿಗೆ ಕಠೋಪನಿಷತ್ತು ಎಂದು ಹೆಸರು) ಬೇಂದ್ರೆಯವರು ಪ್ರೇಮ ಕುರಿತ ಎಷ್ಟು ಸಂಕೀರ್ಣ ಅನುಭವಗಳನ್ನು ಅಭಿವ್ಯಕ್ತಿಸಲು ಪ್ರಯತ್ನಿಸುತ್ತಿದ್ದರು ಎಂಬುದು ಗೊತ್ತಾಗುತ್ತದೆ. ಅಡಿಗರ "ನೀ ಬಳಿಯೊಳಿರುವಾಗ್ಗೆ" ಅಥವಾ "ಚಿಂತಾಮಣಿಯಲ್ಲಿ ಕಂಡ ಮುಖ" ಅಥವಾ "ಸಂತೋಷವಾಗುತ್ತದೆ" ಎಂಬಂಥಾ ಕವನಗಳಲ್ಲೂ ಇದೇ ಮಟ್ಟದ ಸಂಕೀರ್ಣತೆ ಕಾಣುತ್ತದೆ. ನರಸಿಂಹಸ್ವಾಮಿಯವರ ಬಹುಜನ ಪ್ರಿಯ ಮೈಸೂರು ಮಲ್ಲಿಗೆಯ ಅನುಭವ ಸರಳವಾಗಿದೆ; ಆದರೆ  ಅನಂತರ ಬರೆದ ಕವನಗಳಲ್ಲಿ ಅವರು ಹೆಚ್ಚು ಸಂಕೀರ್ಣ ಭಾವನೆಗಳನ್ನು ಅಭಿವ್ಯಕ್ತಿಸಲು ಪ್ರಯತ್ನಿಸಿದರು. ಜೀವನ ಸಂಕೀರ್ಣವಾದದ್ದು. ಸಾಹಿತ್ಯ ಈ ಸಂಕೀರ್ಣ ಜೀವನದ ಬಗ್ಗೆ ನಮ್ಮ ಅರಿವನ್ನು ವಿಸ್ತರಿಸುವ ಕೆಲಸ ಮಾಡಬೇಕು; ಜೀವನದಿಂದ ಪಲಾಯನ ಮಾಡಲು  ಮಾರ್ಗ ಆಗಬಾರದು. ಹೀಗಾಗಿ ಇಂಥಾ ಸಂಕೀರ್ಣ ಜೀವನದ ಬಗ್ಗೆ ಬರೆಯುವ ಸಾಹಿತ್ಯವೂ ಸಂಕೀರ್ಣವಾಗಿರಬೇಕಾದ್ದು ಅನಿವಾರ್ಯ.

ಪ್ರೇಮ ಕುರಿತ ನನಗೆ ತುಂಬಾ ಇಷ್ಟವಾದ ಕೃತಿ ಶೇಕ್ಸ್ಪಿಯರನ ನಾಟಕ ಒಥೆಲ್ಲೊ. ಇದು ಕರಿಯ ಒಥೆಲ್ಲೊ ಮತ್ತು ಬಿಳಿಯ ಡೆಸ್ಡಿಮೊನಾ ನಡುವಿನ ಪ್ರೇಮ ಕುರಿತ ನಾಟಕ. ಆದರೆ ಇದು ಇಯಾಗೋನಂಥ ಪರಮ ದುಷ್ಟನಿರುವ ಲೋಕ; ಜೊತೆಗೆ ಒಥೆಲ್ಲೋ ಮತ್ತು ಡೆಸ್ಡಿಮೋನಾ ಪರಸ್ಪರರನ್ನು ಅರಿತುಕೊಂಡಿಲ್ಲ.  ಡೆಸ್ಡಿಮೋನಾ ಪಾತಿವ್ರತ್ಯ ಸಾಧ್ಯವಿಲ್ಲದವಳು ಎಂದು ಒಥೆಲ್ಲೊ ತಿಳಿದುಕೊಂಡಿದ್ದರೆ ಡೆಸ್ಡಿಮೋನಾ ತನ್ನ ಗಂಡನಾದ ಒಥೆಲ್ಲೊ ಅಸೂಯೆಗೆ ಪಕ್ಕಾಗುವವನೇ ಅಲ್ಲ ಎಂದು ತಿಳಿದುಕೊಂಡಿದ್ದಾಳೆ. ಇಂಥಾ ಜಗತ್ತಲ್ಲಿ ಪ್ರೇಮ ಎಷ್ಟು ಕಷ್ಟ ಎಂಬುದನ್ನು ನಾಟಕ ತೋರಿಸುತ್ತದೆ; ಆದರೆ ಈ ಭಯಾನಕ ಜಗತ್ತಿನಲ್ಲಿ ಪ್ರೇಮ ಹೊರತಾಗಿ ಬೇರೆ ಯಾವುದೂ ಮನುಷ್ಯರನ್ನು ವಿನಾಶದಿಂದ ಕಾಪಾಡಲಾರದು ಎಂದೂ ಇಂಥಾ ಜಗತ್ತಿನಲ್ಲಿ ಪ್ರೇಮ ಗಟ್ಟಿಯಾಗಿ ಉಳಿಯಬೇಕಾದರೆ ಅದು ತಿಳುವಳಿಕೆಯಿಂದ ಕೂಡಿರಬೇಕಾದ್ದು ಅನಿವಾರ್ಯ ಎಂದೂ ತೋರಿಸುತ್ತದೆ.

ನನ್ನ ಪ್ರೇಮ ಕವನಗಳ ಹಿಂದಿರುವ ಯೋಚನೆ ಇದು. ಇಲ್ಲಿ ಮಾತಾಡುವ ಮರ ಸಂಗ್ರಹದಿಂದ ತೆಗೆದುಕೊಂಡ ಮತ್ತೂ ಕೆಲವು ಪ್ರೇಮ ಕವನಗಳನ್ನು ಕೊಡುತ್ತಿದ್ದೇನೆ.



1.

ದೇವದಾಸಿಯರ ಮೀಸಲು ಮುರಿವ ಉತ್ಸಾಹ--
ನೆರೆವರು ಸೇಂದಿ ಗುತ್ತಿಗೆ ಕೊಟ್ಟು ನಾಡಿನ
ಕ್ಷೇಮ ಅಭಿವೃದ್ಧಿ ಯೋಜನೆ ಹಣದ ಗಣನೀಯ
ಅಂಶ ಗಳಿಸುವ ನಮ್ಮ ಸರಕಾರಕ್ಕ ಸೇರಿದ ಕೆಲ
ಎಂಎಲ್ ಎ ಮಂತ್ರಿ ಅಧಿಕಾರಿಗಳು--ಯಲ್ಲಮ್ಮ
ಕೃಪೆಯಲ್ಲಿ.  ದೇವಸ್ವರೂಪಿಗಳೆಂದು ತಿಳಿವರು ಇವರ
ದೇವದಾಸಿಯರ ಗುತ್ತಿಗೆ ಹಿಡಿದ ಪೂಜಾರಿ
ಶರಣ ಸಂದೋಹ ಬಲ; ಕಟ್ಟಿ ನನ್ನರಿಯನ್ನು
ನೀಡುವರು ನೆಲೆ; ಬೆಲೆ ಕಲೆಗೆ ಧರ್ಮಕ್ಕೆ.

ಹೀಗೂ ಉಂಟು: ಪ್ರೀತಿ ತೋರಿಸಿ ಕರೆವ; ಸಂಸಾರ
ನಡೆಸುವ, ಗಂಡನ್ನ ಆಳುವ ಕನಸು; ಒಲವಿನ ಹಸಿವು--
ಹೋಗುವಳು. ಅಂದುಕೊಳ್ಳುವ: "ಕರೆದಾಗ ಬರುವವಳು
ಕುಲಟೆ; ರೇಟು ನೋಡಿ ಮಾರಿದರಾಯ್ತು; ತುಸು ಅಂಶ
ಜಡ್ಜು ಪೊಲೀಸರಿಗೆ--ನಡೆದರೆ ಕೇಸು."

2

ಐ ಲವ್ ಯೂ ಎಂದ. ನಿನ್ನ ಕಣ್ಣು ಅದೆಷ್ಟು ಚೆಂದ ಎಂದ.
ನನಗೆ ಇದು ವರೆಗೆ ಹಾಗ ಯಾರೂ ಅಂದಿರಲಿಲ್ಲ. ಎದೆಯಲ್ಲಿ
ಸಿಹಿ ಸಿಹಿ ಆಯ್ತು. ಕಾಲೇಜು ಬಿಟ್ಟು ಬಾ ಸೀದ
ಬಸ್ಟೇಂಡಿಗೆ ಎಂದ. ರಾತ್ರಿಯ ಜರ್ನಿ. ಸಿಕ್ಕು ಸಿಕ್ಕಲ್ಲಿ
ಕೈ ಬಿಟ್ಟ. ಡೆಲ್ಲಿಯಲ್ಲಿ ಆಂಟಿ ಮನೆಯಲ್ಲಿ
ಮದುವೆ ಎಂದ. ಬಸ್ಸಿಳಿದು ಹೋಟೆಲ್ಲಿಗೆ ಯಾಕೆ
ಎಂದು ಕೇಳಿದ್ದಕ್ಕೆ ಆಂಟಿ ಮನೆ ಎಲ್ಲಿ
ಹುಡುಕಬೇಕು ಎಂದ. ಹೋಟೆಲ್ಲು ರೂಮಲ್ಲಿ ಅವನ
ಡ್ರೇಸೇ ಬದಲಾಯ್ತು. ಯಾರೋ ವಿಸಿಟರಿಗೆ ನನ್ನ
--ಇವನ ಎದುರೇ ಅವ ನನ್ನ ಮುಟ್ಟಿ ಪರೀಕ್ಷಿಸಿ ನೋಡಿ
ಬಾರ್ಗೇನು ಮಾಡಿ--ಎಷ್ಟೋ ಮೊತ್ತಕ್ಕ ಮಾರಿದನು. ಆ ಮೇಲೆ
ನನ್ನ ಎಷ್ಟೋ ಜನರು ಎಷ್ಟೋ ಕಾಲ ಹತ್ತಿದರು.
ಮುಟ್ಟು ನಿಂತಾಗ ಬಸಿರು ತೆಗೆಯಿಸಿದ. ಬಳಿಕ
ಮತ್ತೊಬ್ಬನಿಗೆ ಕೊಟ್ಟ. ಕೂಡುವುದಿಲ್ಲ ಎಂದಲ್ಲಿ ಬಿಗಿದರು
ಉಪವಾಸ ಕೋದಂಡ. ಕೇಳಿದರೆ ಹೇಳಿದ ಹಾಗೆ
ಬ್ರಾಂದಿ, ಹೋಟೆಲ್ಲು ತಿಂಡಿ, ಸಿನೆಮಾ, ದೇವಸ್ಥಾನ.

ಪುಣ್ಯ ಹೆಚ್ಚಿದರೆ ಮುಂದಿನ ಜನ್ಮ ಗರತಿ ಆಗುವೆನಂತೆ.
ಹಬ್ಬಲಿ ಏಡ್ಸ್; ಕುಟ್ಟೆ ಸುರಿಯಲಿ; ರಿವೆಂಜು ರುಚಿ;
ಮನೆಗೆ ಮರಳುವುದು ಆಗದ ಮಾತು. ತಿಳಿಯಲಿ: ಸತ್ತೆ;
ಅಥವಾ ಪ್ರಿಯನೊಡನೆ ಸಹಭಾಗಿ ಸುಖಿ ಸೀಮಂತೆ.

3

ಈ ಲವ್ ಅನ್ನೋದು ಯೂಸಿಲ್ಲ. ಮಾಡು, ಬೇಡ ಹೇಳೂದಿಲ್ಲ.
ಆದರೆ ಕೀಪು ಅಂತ ಇರ್ಲಿ. ಮದುವೆ ಬೇಡ.
ಮದುವೆಗೆ ನೋಡು--ಮೂರು ಜಾತಕ ಫೊಟೋ ಬಂದವೆ.
ಇವ್ಳು ಮಿನಿಸ್ಟ್ರ ಮಗಳು; ಇವಳು ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ಹೋಲ್ಡರ್;
ಮತ್ತೆ ಇವಳ ಅಪ್ಪ ನೋಡು ಸೆಕ್ರೆಟೇರಿಯಟ್ಟಿನಲ್ಲಿ ಆಫೀಸರ್ರು.
ಕಾಂಟ್ರಾಕ್ಟ್, ಟೆಂಡರ್ ಎಪ್ರೋವಲ್ ಇವರ ಜವಾಬ್ದಾರಿ.
ಮೂವರಲ್ಲಿ ಯಾರನ್ನು ಮಾಡ್ಕಂಡ್ರೂ ಫ್ಯೂಚರ್ ಈಸ್ ಸೆಕ್ಯೂರ್ಡ್.

ಅಲ್ಲಯ್ಯಾ--ಈ ಫಿಲಾಸಫಿ ಲಿಟರೇಚರ್ ಪಟರೇಚರ್ ಓದ್ತಾ ಇರ್ತೀಯಲ್ಲ--ಏನಕ್ಕೆ?
ಹಂಗೂ ಇಂಟಲೆಕ್ಚುವಲ್ ಪ್ರೊಫೆಶನ್ನೇ ಬೇಕಂತಿದ್ರೆ
ಹೊರಸ್ಕೋಪು ನೋಡೋದು ಕಲಿತ್ಕೋ.
ಕ್ರಿಸ್ಟಲ್ ಗೇಸಿಂಗ್ ಪಾಚೆಟ್ ಕವಡೆ ಪಂಚಾಂಗ--
ಭವಿಷ್ಯ ಹೇಳೋರು ಅಂದರೆ
ಎಂಥಾ ಮಂತ್ರಿ ಪೊಲಿಟಿಶಿಯನ್ ಮಿಸೆಸ್ ಹತ್ರಾನೂ ಸಲೀಸಾಗಿ ಹೋಗ್ಬಹುದು.
ಒಂಚೂರು ಪ್ರಾಣಾಯಾಮ ಯೋಗ ಕಲಿತ್ಕೊಂಡ್ರೆ
ಅಮೆರಿಕಾಕ್ಕೆ ವಲಸೆ ಹೋಗಿಯೂ ಪ್ರಾಕ್ಟೀಸು ಮಾಡ್ಬಹುದು.
ಯಾವಾಗಲೂ ಒಂದು ಕಾಲು ಆಚೆ ಇಟ್ಟಿರೋದು ಒಳ್ಳೇದು.

ಪುರಾನಾ ಖಿಲಾ ಮತ್ತು ಜೂ ಇರುವಲ್ಲಿ ಹಿಂದೆ ಇತ್ತಂತೆ ಇಂದ್ರಪ್ರಸ್ಥ--
ಅದರಿಂದ ಮುಂದೆ ಏಳು ಜನ್ಮಗಳಲ್ಲಿ
ಬೆಳೆದು ನಿಂತಿದೆ ಡೆಲ್ಲಿ.
ಅದೂ ಬದಲಿದೆ ಈಗ:
ಅರಮನೆ ಮ್ಯೂಸಿಯಂ ಆಗಿ, ಹವಾಮಹಲು ಹೋಟೆಲ್ ಆಗಿ,
ಭಿಲ್ಲ ರಂಗ ಬುದ್ಧ ಜಯಂತಿ ಪಾರ್ಕಲ್ಲಿ ಅವತರಿಸಿ.
ಒಂದು ನವಿಲು, ಗರಿಗಳ ಫುಟ್ಪಾಥಲ್ಲಿ ಉದುರಿಸಿಕೊಂಡು,
ರಸ್ತೆ ಮಧ್ಯೆ, ರಾಷ್ಟ್ರಪಕ್ಷಿ,
ನೀರಡಿಸಿ ನಿಂತಿತ್ತು. ರೆಕ್ಕೆ ತುಂಡು ಮಾಡಿ, ಕಾಲು ಕಟ್ಟಿ
ರಾಶಿ ರಾಶಿ ಕೋಳಿ ಲಾರೀಲಿ ತುಂಬಿ ತೆಕ್ಕೊಂಡು ಹೋಗ್ತಿದ್ದರು.
ಬೆಳಿಗ್ಗೆ ಕೊಕ್ಕೊಕ್ಕೊ ಅಂತಿದ್ದ ಕೋಳಿ
ಬಿಸಿಲಲ್ಲಿ ಬಾಯಿ ಅಗಲಿ ಮುಚ್ಚಿ ಅಗಲಿಸಿ ಮುಚ್ಚಿ ಮಾಡ್ತಿದ್ದವು.
ಕಾಲ ಸ್ಥಳ ಎಲ್ಲಾ ಯದ್ವಾತದ್ವಾ ಆಗದೆ.
ಯಾವಾಗ ಎಲ್ಲಿ ಏನಾಗುತ್ತೆ ಗೊತ್ತಿಲ್ಲ.
ಸರಿಯಾದ ಕಡೆ ನೋಡಿ ಹತ್ತಬೇಕಾದ ಕಡೆ ಹತ್ತಿ
ಆಯಕಟ್ಟಿನ ಜಾಗ ಹಿಡಕೊಂಡು ಕೂತುಕೋ.
ಆ ಮೇಲೆ ಬೇಟ ಸಲೀಸು.
ಇಲ್ಲಾಂದ್ರೆ ತಾಪತ್ರಯ ತಪ್ಪಿದ್ದಲ್ಲ.

4

ಅಪ್ಪನ ಮನೆಗೆ ಹೋಗಿ ಒಂದು ಲಕ್ಷ ತಕ್ಕೊಂಬಾ ಹೇಳಿದೆ.
ನಾನು ಹೋಗೂದಿಲ್ಲ ಹೇಳಿದಳು.
ಪೈಸೆ ಅಗತ್ಯ ಉಂಟು, ಹೋಗು, ಒಳ್ಳೇ ಮಾತಿಲಿ ಕೇಳು,
ಅಳಿಯ-ಮಗಳಿಗೆ ಕೊಡದ್ದೆ ಇನ್ನು ಯಾರಿಗೆ ಕೊಡುತ್ತಾರೆ ಹೇಳಿದೆ.
ಅಪ್ಪನ ಹತ್ತಿರ ದುಡ್ಡಿಲ್ಲ ಹೇಳಿದಳು.
ಅದು ಹೇಳುದು ನೀನಲ್ಲ;
ಒಂದು ವೇಳೆ ಇಲ್ಲದ್ದರೆ ಸಾಲ ಮಾಡಿ ಕೊಡಲಿ ಹೇಳಿದೆ.
ನೀವೇ ಸಾಲ ಮಾಡಿ ಹೇಳಿದಳು.
ನೀನು ಹೋಗ್ತೀಯೋ ಇಲ್ಲವೋ ಕೇಳಿದೆ.
ಇಲ್ಲ ಹೇಳಿದಳು.
ಹೋಗು, ನಾಳೆ ಉದಯಲ್ಲಿ ಹೋದರೆ
ಪೈಸೆ ತೆಕ್ಕೊಂಡು ನಾಡಿದ್ದು ಹೊತ್ತು ಕಂತುವಾಗ ಬರಬಹುದು ಹೇಳಿದೆ.
ಪೈಸೆ ಸಿಕ್ಕದ್ದರೆ?--ಕೇಳಿದಳು.
ಪೈಸೆ ತಾರದ್ದೆ ಇಲ್ಲಿಗೆ ಬರುವ ಅಗತ್ಯ ಇಲ್ಲ ಹೇಳಿದೆ.
ಹೆಂಡತಿಯ ಸಾಕಲಾಗದ್ದವ ಒಬ್ಬ ಗಂಡಸೋ ಕೇಳಿದಳು.
ನಾನು ಗಂಡಸು ಹೌದೋ ಅಲ್ಲವೋ ರಾತ್ರಿ ಗೊತ್ತಾಗುತ್ತದೆ ಹೇಳಿದೆ.
ಆ ಕೆಲಸ ನಾಯಿ ಸಹಾ ಮಾಡುತ್ತವು ಹೇಳಿದಳು.
ಎಂಥ ಹೇಳಿದೆ, ಹೇಳು ಇನ್ನೊಂದು ಸಲ ಹೇಳಿದೆ.
ನಿಮ್ಮ ರಾತ್ರಿ ಕೆಲಸ ನಾಯಿ ಸಹಾ ಮಾಡುತ್ತು ಹೇಳಿದಳು.
ನಿನ್ನಂಥಾ ತಾಟಕಿಯ ಕೊಂದರೆ ತಪ್ಪಿಲ್ಲ ಹೇಳಿದೆ.
ತಾಖತ್ತಿದ್ದರೆ ಕೊಲ್ಲಿ ನೋಡುವ ಹೇಳಿದಳು.
ನನ್ನ ತಾಖತ್ತು ತೋರಿಸಬೇಕಾ ಕೇಳಿದೆ.
ಇದ್ದರೆ ಅಲ್ಲವೊ ತೋರಿಸಲು ಹೇಳಿದಳು.
ಇಂಥಾ ಮಾತಿಗೆ ಯಾವ ಗಂಡಂಗೆ ಸಿಟ್ಟು ಬಾರ?
ಚಿಮಿಣಿ ಎಣ್ಣೆ ಹೊಯ್ದೆ ಕಿಚ್ಚಿ ಕೊಟ್ಟೆ.
ಬೊಬ್ಬೆ ಹೊಡೆದಳು. ಗಳಿಗ್ಗೆ . ಕರಂಚಿ ಸತ್ತಳು.

5

ಅವಳೊಂದು ಮರ
ಅವನು ಹೂವಿನ ಬಳ್ಳಿ;
ಮೈ ಬಳಸಿ ಮೇಲಕ್ಕೆ
ಹತ್ತುತ್ತಿದ್ದ.

ಹಾವಾಗಿ ಪೊಟರೆ ಒಳ
ನುಗ್ಗುತ್ತಿದ್ದ.

ತೋಳನ್ನು ಕೊಕ್ಕಲ್ಲಿ
ತಿವಿಯುತ್ತಿದ್ದ.

ಮರ ಅಲ್ಲಾಡದೇ ಇತ್ತು
ಇದ್ದ ಹಾಗೇ.

ಮಂಚ ಮಾಡಿದ ಕಡಿದು
ಮಲಗಿ ಎದ್ದ.

******************
ಬೋಧಿ ಟ್ರಸ್ಟ್ ಪುಸ್ತಕಗಳು ಈಗ ಆನ್ ಲೈನ್ ಪುಸ್ತಕ ಮಳಿಗೆ flipkartನಲ್ಲಿ ಸಿಗುತ್ತವೆ. www.flipkart.comಗೆ Enter ಕೊಟ್ಟು Books by Ramachandra Deva ಎಂದು search ಕೊಟ್ಟರೆ ಪುಸ್ತಕಗಳ ಪಟ್ಟಿ ಮತ್ತು ಹೇಗೆ ಕೊಂಡುಕೊಳ್ಳಬಹುದು ಎಂಬ ವಿವರ ಬರುತ್ತದೆ.


ಮೇಲಿನದ್ದು ಬೇಂದ್ರೆಯವರ ಒಂದು ಕವನಕ್ಕೆ ಕೆ. ಕೆ. ಹೆಬ್ಬಾರರು ಬರೆದ ಚಿತ್ರ.

Monday, March 7, 2011

ಮಾರ್ಚ್ 20ರ ಕಾರ್ಯಕ್ರಮ

ನನ್ನ ಮನಸ್ಸು ಈಗ ಮಾರ್ಚ್ 20ರಂದು ನಡೆಸಬೇಕೆಂದು ಯೋಜಿಸಲಾಗಿರುವ ಬೇಂದ್ರೆ ಕಾವ್ಯೋತ್ಸವ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದ ಬಗೆಗಿನ ವಿವರಗಳಿಂದ ತುಂಬಿದೆ.  ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಪ್ರತಿ ಭಾನುವಾರ ನಡೆಯುತ್ತದೆ. ಅದೊಂದು ವಿಶೇಷವಲ್ಲ. ಆದರೆ ಬೇಂದ್ರೆ ಕಾವ್ಯೋತ್ಸವ ಮುಖ್ಯ ಅನ್ನಿಸುತ್ತದೆ. ಭಾಷೆಯ ಬಗ್ಗೆ, ಪದ ಮತ್ತು ಪದಗಳ ವಿವಿಧ ಸಾಧ್ಯತೆಗಳ ಬಗ್ಗೆ ಆಸಕ್ತರಾಗಿರುವ ಕವಿಗಳ ಸಂಖ್ಯೆ ಕಮ್ಮಿಯಾಗುತ್ತಿರುವಾಗ  ಪದಗಳ ಸೊಗಸನ್ನು ಸೂರೆಗೊಳ್ಳುತ್ತಿದ್ದ   ಈ ಕವಿಯನ್ನು ಸಾರ್ವಜನಿಕವಾಗಿ ಓದಿ ಆಸ್ವಾದಿಸುವುದು ರೋಚಕ ಅನುಭವವಾಗಬಲ್ಲುದು. ಬೇಂದ್ರೆ ಪದಗಳ ಸೊಗಸನ್ನು ಎಷ್ಟರ ಮಟ್ಟಿಗೆ ಸೂರೆಗೊಳ್ಳುತ್ತಾರೆ ಎಂದರೆ, ಕೆಲವು ಸಲ ಇವರಿಗೆ ಜೀವನ ಸತ್ಯಕ್ಕಿಂತ ಪದಮೋಹವೇ ಹೆಚ್ಚೇನೋ ಅನ್ನಿಸಿಬಿಡುತ್ತದೆ. ಶಿವರಾಮ ಕಾರಂತರು ಹಾಗೆ ಹೇಳಿಯೂ ಇದ್ದರಂತೆ: ಚೆಂದ ಕೇಳುತ್ತದೆ ಎಂದಾದರೆ ಬೇಂದ್ರೆ ನಿಜವಲ್ಲದ್ದೂ ಹೇಳಿಬಿಡುತ್ತಾರೆ ಎಂದು. ಅಂದರೆ, ಬೇಂದ್ರೆಯವರಿಗೆ ಸೌಂದರ್ಯವೇ ಮುಖ್ಯ, ಸತ್ಯ ಅಲ್ಲ ಎಂದು ಶಿವರಾಮ ಕಾರಂತರು ಸೂಚಿಸುತ್ತಿದ್ದರು. ಇದನ್ನೇ ತಿರುಗಿಸಿ, ಕಾರಂತರ ಒರಟೊರಟಾಗಿ ಬರೆದ ಕಾದಂಬರಿಗಳನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ಸತ್ಯವೇ ಮುಖ್ಯ, ಸೌಂದರ್ಯ ಅಲ್ಲ ಎಂದು ಹೇಳಬಹುದು. ಆದರೆ ಈ ಇಬ್ಬರು ಲೇಖಕರೂ ತಮ್ಮ ಶ್ರೇಷ್ಠ ಕೃತಿಗಳಲ್ಲಿ ಸತ್ಯ ಸೌಂದರ್ಯಗಳ ಸಮಾಗಮವನ್ನು ಸಾಧಿಸುತ್ತಾರೆ.

ಶಿವರಾಮ ಕಾರಂತರ ಮಾತು ಈ ಇಬ್ಬರು ದೊಡ್ಡ ಲೇಖಕರ ಸಾಹಿತ್ಯಿಕ ದೃಷ್ಟಿಕೋನವನ್ನು ಸಮರ್ಥವಾಗಿ ಅಭಿವ್ಯಕ್ತಿಸುತ್ತದೆ.

ಬೇಂದ್ರೆ ಮತ್ತು ಮಾಸ್ತಿ ಬಗ್ಗೆ ಇನ್ನೊಂದು ಕತೆಯಿದೆ. ಬೇಂದ್ರೆ ಮಾಸ್ತಿಯವರಿಗೆ ತಾವು ಬರೆಯಲಿರುವ ಮಾನಸಪುತ್ರ  ಎಂಬ ಕಾದಂಬರಿಯ ಕತೆ ಹೇಳಿದರಂತೆ. ನಮಗೆ ಈ ಕಾದಂಬರಿ ಈಗ ಒಂದು ಶೀರ್ಷಿಕೆಯಾಗಿ ಮಾತ್ರ ಲಭ್ಯವಿದೆ. ಬೇಂದ್ರೆ ಹೇಳಿದ ಕತೆ ಏನೆಂದರೆ, ಕನ್ಯಾಕುಮಾರಿಯಲ್ಲಿ ಒಬ್ಬಳು ಇರುತ್ತಾಳೆ, ಕಾಶ್ಮೀರದಲ್ಲಿ ಇನ್ನೊಬ್ಬ ಇರುತ್ತಾನೆ, ಅವರಿಬ್ಬರ ಮಧ್ಯೆ ಮಾನಸಿಕ ಪ್ರೀತಿ ಬೆಳೆದು ಮಗು ಹುಟ್ಟುತ್ತದೆ, ಅವನೇ ಮಾನಸಪುತ್ರ. ಇದನ್ನು ಕೇಳಿ ಮಾಸ್ತಿ, ಕತೆ ಚೆನ್ನಾಗಿದೆ, ಆದರೆ ಹೇಗೋ ಒಂದು ಸಲ ಅವರ ದೈಹಿಕ ಸಮಾಗಮ ಆಯಿತು ಅಂತ ಸೇರಿಸಿ, ಇಲ್ಲದಿದ್ದರೆ ಮಗು ಹುಟ್ಟಿತು ಅಂತ ಮಾಡೋದು ಕಷ್ಟ ಅಂದರಂತೆ. ಇದೂ ಈ ಇಬ್ಬರು ದೊಡ್ಡ ಲೇಖಕರ ಈಸ್ಥೆಟಿಕ್ ದೃಷ್ಟಿ ತೋರಿಸುತ್ತದೆ. ಮಾಸ್ತಿಯವರಿಗೆ ಜೀವನ ವಿವರಗಳು ವಾಸ್ತವದ ಚೌಕಟ್ಟಿನಲ್ಲಿ ನಡೆಯಬೇಕು. ಎಷ್ಟರ ಮಟ್ಟಿಗೆ ಎಂದರೆ, ರಾವಣನನ್ನು ಕೊಂದ ರಾಮ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಬಂದ ಎಂಬುದನ್ನು ಅವರು ನಿರಾಕರಿಸುತ್ತಾರೆ; ವಾಲ್ಮೀಕಿ ರಾಮಾಯಣದಲ್ಲಿ ಹಾಗಿಲ್ಲ ಎಂದು ಆಧಾರ ಕೊಟ್ಟು ವಿವರಿಸುತ್ತಾರೆ. ಬೇಂದ್ರೆಯ ಸಂವೇದನೆ ಭಿನ್ನವಾದದ್ದು: ಅದು ಗಿಡಗಂಟೆಯ ಕೊರಳಿಂದ ಹಕ್ಕಿಗಳ ಹಾಡು ಕೇಳುವಂಥಾದ್ದು, ಮತ್ತು ಈ ಹಕ್ಕಿಗಳು ಸೂರ್ಯ ಚಂದ್ರರನ್ನೇ ಕಣ್ಣು ಮಾಡಿಕೊಂಡು  ಸಾರ್ವಭೌಮರ ನೆತ್ತಿ ಕುಕ್ಕಿ ಹಾರುವಂಥವುಗಳು. ಮತ್ತು ಕಾಲದ ಈ ಹಕ್ಕಿ ಸಾರ್ವಭೌಮರ ನೆತ್ತಿ ಕುಕ್ಕಿ ಹಾರುತ್ತದೆಂದು ಬೇಂದ್ರೆಯವರು ಬರೆದದ್ದು ಸ್ವಾತಂತ್ರ್ಯಪೂರ್ವದಲ್ಲಿ: ಬ್ರಿಟನ್ನಿನ ಸಾರ್ವಭೌಮ ಭಾರತವನ್ನು ಪದಾಕ್ರಾಂತ ಮಾಡಿಕೊಂಡಿದ್ದ ಸಮಯದಲ್ಲಿ.

***********
ಮೇಲಿನದ್ದು ಮಾರ್ಚ್ 20ರಂದು ಬಿಡುಗಡೆಯಾಗಲಿರುವ ಪುಸ್ತಕಗಳಲ್ಲಿ ಒಂದು. ಈ ಮುಖಚಿತ್ರ ರಚಿಸಿದವರು ಜಾನ್ ಚಂದ್ರನ್. ಕರ್ನಾಟಕದ ಪ್ರತಿಭಾವಂತ ಯುವ ಕಲಾವಿದರಲ್ಲಿ ಇವರು ಒಬ್ಬರು.

Saturday, March 5, 2011

ಐದು ಪ್ರೇಮ ಕವನಗಳು

1. ಉರಿ

ನನ್ನ ಹೃದಯ ಭಾವನೆಗಳೇ ಇಲ್ಲದೆ ತಣ್ಣಗಾಗುತ್ತಿತ್ತು.
ಬೆಚ್ಚಗಾಗಲಿ ಎಂದು ಉರಿವ ಉಲ್ಕೆಗಳ ಬಳಿ ಇಟ್ಟೆ;
ನಕ್ಷತ್ರಗಳ ಕರೆದೆ, ಬನ್ನಿ, ಬೆಚ್ಚಗಾಗಿಸಿ ಎಂದು;
ಸೂರ್ಯನಿಗೆ ಗೋಗರೆದೆ, ಬೆಚ್ಚಗಾಗಿಸೊ ಎಂದು.

ಉಲ್ಕೆಗಳು ಉರಿದು ಕರ್ರಗಾದವು;
ನಕ್ಷತ್ರಗಳು ಕಣ್ಣುಗಳ ಮಿಟುಕಿಸಿದವು;
ಸೂರ್ಯ ಉರಿಯುತ್ತಾ ಉರಿಯುತ್ತಾ ಧಗೆಯ ಹಚ್ಚುತ್ತಿದ್ದ;
ಹೃದಯ ಮಾತ್ರ ಹಾಗೇ ಇತ್ತು.

ನೀನು ಯಾವಾಗ ನನ್ನ ಈ ಇಂಥ ಹೃದಯಕ್ಕೆ ಬಂದೆ?
ಆಗ ನೀನಲ್ಲಿ ಹಬ್ಬಿಸಿದ ಉರಿಗೆ
ಉಲ್ಕೆ ನಕ್ಷತ್ರ ಸೂರ್ಯಗಳೆ
ಬೆವರುತ್ತಲಿದ್ದಾವೆ.

2. ಕರೆ

ಯಾಕೆ ಈ ಕರೆ ಮರಳಿ
ಮರಳಿ ಮರಳಿ?

ನೀನು ಕಾಣುವ ರೀತಿ
ತಿರುಗಿ ನೋಡಲಿ ಹೇಗೆ?
ನಾಶವಾಗದ ಹಾಗೆ
ಮುಂದೆ ನಡೆಯಲಿ ಹೇಗೆ?

ಯಾಕೆ ಈ ಕರೆ ಮರಳಿ
ಮರಳಿ ಮರಳಿ?

******

ಮರೆಗೆ ಕೂರುವುದು
ಕೂಗುವುದು ಬೆದೆ ಬಂದ ನವಿಲಿನ ಹಾಗೆ

ಸ್ನೇಹಾಕಾಂಕ್ಷಿ ಒಬ್ಬಂಟಿ
ಕರೆ ಕೇಳಿ
ಮೆಲ್ಲ ಮೆಲ ಮೆಲ್ಲ
ಬಳಿ ಸಾರುವುದು
ನಿಲ್ಲುವುದು ನೋಡುವುದು ಹೆದರುವುದು
ಮತ್ತೆ ಬಳಿ ಸಾರುವುದು

ಆಗಲೇ ಗುಂಡಿಕ್ಕಿ ಕೊಲ್ಲುವುದು
ಮಾಂಸ ವಿಂಗಡಿಸುವುದು

ಬಿದ್ದ ಗರಿಗಳ ಹೆಕ್ಕಿ
ಬೀಸಣಿಗೆ ಮಾಡುವುದು

*******

ಅಥವಾ ನಿನಗೆ ಕೇಕಿಯ ರೋಷ
ನನಗೆ ನವಿಲಿನ ವೇಷ

ನೀನು ಹಂಸವಾಗಿ
ನಾನೂ ಹಂಸವಾಗಿ ಈಜಿ ಕೂಡಿ

ನೀನು ಸಿಂಹವಾಗಿ
ನಾನೂ ಸಿಂಹವಾಗಿ ಮೊರೆದು ಕೂಡಿ

ನೀನು ಚಿರತೆಯಾಗಿ
ನಾನೂ ಚಿರತೆಯಾಗಿ ನೆಗೆದು ಕೂಡಿ

ನೀನು ಹಾವಾಗಿ
ನಾನೂ ಹಾವಾಗಿ ಹೊರಳಿ ಕೂಡಿ

ಕೋತಿ ನಾಯಿ ನರಿ ಮುಸುವ ನಕ್ಕುರು ಆಡು ಕುರಿ ಜಿಂಕೆ
ಹಂದಿ ಆನೆ ಮಿಡತೆ ಮೀನು ಕಪ್ಪೆ ಏಡಿ ಆಮೆ ದನ ಒಂಟೆ

ಪ್ರತಿಯೊಂದು ನಾವಾಗಿ ಪ್ರತಿಯೊಂದ ಸೃಷ್ಟಿಸಿ ನಾವು

ಗಿಜಿಗುಟ್ಟ ತೊಡಗಿರಲು ಈ ಹಳ್ಳ ಈ ಕೊಳ್ಳ ಈ ಬೆಟ್ಟ ಈ ಗುಡ್ಡ
ನವಿಲಿಂದ ಹಂಸಗಳಿಂದ ಗಿಳಿಯಿಂದ ಚಿರತೆಗಳಿಂದ

ಮರಳಿ ಕರೆ ಮರೆಯಿಂದ
ಮರಳಿ ಮರಳಿ.

                                                                 (1990)



3. ಎಷ್ಟೊಂದು ಹುಡುಗಿಯರು

ಎಷ್ಟೊಂದು ಹುಡುಗಿಯರು, ಎಷ್ಟೊಂದು ಹುಡುಗಿಯರು,
ಎಷ್ಟೊಂದು ಹುಡುಗಿಯರ ಎಷ್ಟು ನಗು, ವೈಯ್ಯಾರ,
ಎಷ್ಟು ಕಟು ನಿರ್ಧಾರ!

ಒಬ್ಬಳು ತಾನು ಹಿಡಿದದ್ದೆ ಆಗಬೇಕೆಂಬವಳು,
ಸಿಡುಕಿ, ಉದ್ದಾಲಕ ಚಂಡಿ;
ಇನ್ನೊಬ್ಬಾಕೆ ಕೊಲೆಯ ಶಕ್ತಿಯ ಮೊಲೆಯ ಹಾಲಿಗೆ ಕರೆದು
ಅತಿಥಿ ನಿದ್ದೆಯ ಕೊಲೆಗೆ ಪತಿಯ ಹೊರಡಿಸಿದವಳು;
ಇನ್ನೊಬ್ಬ ಚೆಲುವೆ ಸಿರಿಗಂಧ ಶಾಲಿನಿ:
ಅಪ್ಪ ಹೇಳಿದನೆಂದು ಪ್ರಿಯಕರನಿಂದ ಮುಖ ತಿರುಗಿ
ಹುಚ್ಚೇರಿ, ಹಾಡುತ್ತ ಕೊಂಬೆಗೆ ಏರಿ,
ನದಿಯ ಕೆಸರಿಗೆ ಬಿದ್ದು ನೀರು ಪಾಲಾದವಳು;
ಮತ್ತೊಬ್ಬ ಕರಿಯ ಸುಂದರಿ
ಪ್ರಣಯಿ ಮುತ್ತಿಡುವ ಮೃದು ಎದೆ ಮೇಲೆ
ಸರ್ಪಗಳ ಚೀಪಲು ಬಿಟ್ಟು ಪ್ರಾಣ ಬಿಟ್ಟವಳು.

ಎಷ್ಟೊಂದು ಹುಡುಗಿಯರು, ಎಷ್ಟೊಂದು ಹುಡುಗಿಯರು,
ಎಷ್ಟೊಂದು ಹುಡುಗಿಯರ ಎಷ್ಟು ರುಚಿ ಮುತ್ತುಗಳು
ಎಷ್ಟು ಮೃದು ಒತ್ತುಗಳು!

ಕಣ್ಣು ಒಬ್ಬಳು ಚೆಲುವೆಯಿಂದ ಇನ್ನೊಬ್ಬಳು ಚೆಲುವೆಗೆ ಹರಿಯುತ್ತದೆ.
ಪಾರ್ಟಿಯಲ್ಲಿ ಪರಿಚಯದಲ್ಲಿ ಬ್ರಾದೆಲ್ಲಿನ ಕಮಟು ಹಾಸಿಗೆಯಲ್ಲಿ,
ಪಂಚತಾರಾ ಹೋಟೆಲ್ಲಿನ ಸೆಂಟು ಸಹವಾಸದಲ್ಲಿ
ಅನ್ಯೋನ್ಯಕ್ಕೆ ಎಳಸುವುದು: ಅಷ್ಟಕ್ಕೆ
ಅರ್ಧಾಂಗ ಕಳೆಯುವುದಿಲ್ಲ.
ವಿಚ್ಛೇದನದಿಂದ ಕೂಡುವಿಕೆಗೂ ಮತ್ತೊಂದು ವಿಚ್ಛೇದನಕ್ಕೂ ಸರಿಯುತ್ತಾ
ದೇಹ ಮನಸ್ಸಿನ ಸಮಾಗಮದ  ಕ್ಷಣ
ಹುಡುಕುತ್ತಲೇ ಇರುತ್ತದೆ--
ಕಾರ್ಮುಗಿಲು ತೂರಿ ಒಂದು ಬೆಳಕಿನ ಬೀಮು
ಇಳೆಯ ಬೆಳಗುವ ಕೃಪೆಯ
ಪರಮ ಗಳಿಗೆಯ ಕುರಿತು.

ಆದರೂ ಮದುವೆಯ ಮೂಲದಿಂದಲೇ ನಾಗರಿಕತೆ ಹುಟ್ಟಿತ್ತೆಂದು ಹೇಳಿದರೆ
ಅಲ್ಲ ಎಂದು ಹೇಳುವವರಾದರೂ ಯಾರು?
ಗ್ರೀಕರ ನಾಗರಿಕತೆ ಮೂಲ ಲೀಡಾಳನ್ನು  ಹಂಸ ಸೇರಿದ್ದ ಗಳಿಗೆಯೋ
ಹೆಲೆನ್ ಮತ್ತು ಕ್ಲೈಟಮ್ನೆಸ್ಟ್ರಾರ ಮದುವೆಯೋ?
ಮದುವೆ ಉಳಿಸುವ ರಾಮನ ಹಟ ಮತ್ತು ಸೀತೆಯ ಪಾತಿವ್ರತ್ಯದ ಜೊತೆ ಸೇರಿ
ಇಂದ್ರಪ್ರಸ್ಥದ ನಾಗರಿಕತೆ ಮತ್ತು ಯುಧಿಷ್ಠಿರನ ಹೊಸ ಧರ್ಮ ಇತ್ತು;
ಒಬ್ಬಳು ಮಣ್ಣಲ್ಲಿ ಹುಗಿದಿದ್ದು ನೇಗಿಲಿನಿಂದ ಬಂದವಳು;
ಇನ್ನೊಬ್ಬಾಕೆ ಅಗ್ನಿಯ ಮಗಳು.

ಎಷ್ಟೊಂದು ಹುಡುಗಿಯರು, ಎಷ್ಟೊಂದು ಹುಡುಗಿಯರು,
ಎಷ್ಟೊಂದು ಹುಡುಗಿಯರ ಎಷ್ಟು ಥರ ಸಂಚಾರ, ಎಷ್ಟು ಥರ ವ್ಯವಹಾರ,
ಅದೆಷ್ಟು ಬಗೆ ಸಂಸಾರ!
                                                        
                                                                              (1990)


4. ನೂಲಿನ ಮನೆ

ಮನೆಯಲ್ಲ, ಬರ್ಸಾತಿ. ಬ್ಯಾಚಲರ್ ಕಾಲದ್ದು. ನೀನು ಹೆಂಡತಿಯಾಗಿ
ಬಂದಾಗ ಅದರಲ್ಲೆ ಸಂಸಾರ ಹೂಡಿದೆವು.

ನಿರಾಶ್ರಿತರ ಕಾಲೊನಿ ಅದು. ಎದುರೊಂದು ಶೀಟು ಮನೆ.
ಮನೆಯಲ್ಲಿ ಗೋಲಿ ಕಣ್ಣಿನ ಮುದುಕಿ. ಒಬ್ಬಂಟಿ.

ನೀನು ಮದುಕಿಯ ಕುರಿತು ಹೇಳಿದ್ದು ನೆನಪುಂಟೆ?--
ಶವದ ಪೆಟ್ಟಗೆಯಂತೆ ಬಾಗಿಲು ತೆರೆದು ಹೊರಗಿಣುಕಿ

ಶವದ ಪೆಟ್ಟಿಗೆ ಹಾಗೆ ಮರಳಿ ಬಾಗಿಲು ಹಾಕಿ
ಒಳಗೆ ಸೇರುವಳೆಂದು. ಮುದುಕಿ ಆದಾಗ ನೀನೂ ಹಾಗೆ

ಆಗುವಿಯೆಂದು ಭಯ ಎಂದೆ. ಆ ಮೇಲೆ ನಿಜವಾಗಿ
ಎದ್ದು ಬಂದಂತಿರುವ ಈ ಚಿತ್ರ ಬರೆದಿದ್ದೆ: ಗಲಭೆ ಕೊಲೆ

ನೆತ್ತರ ಬಣ್ಣ ಹಿನ್ನಲೆಯಲ್ಲಿ ಒಬ್ಬಂಟಿ ಮೊಣಕಾಲಲ್ಲಿ
ಮುಖ ಊರಿ ಕೂತಿದ್ದಾಳೆ; ದೂರದಲ್ಲೊಬ್ಬ ಗಂಡಸು

ತನ್ನಂತೆ ನಿಂತಿದ್ದಾನೆ; ಗಂಡ ಹೆಂಡತಿ ಬಳಚಿ
ಜೇಡ ನೂಲಿನ ಮನೆಯ ಕಟ್ಟುತ್ತಿದೆ.
                                                  
                                                          (1992)


5.  ವಿಚ್ಛೇದ

ಒಂಟಿತನ ದಾಟುವುದಕ್ಕೆ ಸಂಕ ಇಲ್ಲವೆ ಇಲ್ಲ.

ಅವರಿವರ ಕಾಣುತ್ತೇವೆ, ಮಾತಾಡುತ್ತೇವೆ, ಜೋಕು ಮಾಡುತ್ತೇವೆ,
ಪಾರ್ಟಿಯಲ್ಲೋ ನಾಟಕದಲ್ಲೋ ಬೆರೆತಂತೆ ಮಾಡುತ್ತೇವೆ--
ಅಷ್ಟಕ್ಕೆ ಒಂದಾದೆ ಅನ್ನಿಸದು. ಮತ್ತೆ ಮೊದಲಿನ ಹಾಗೆ
ಯಾರನ್ನೋ ನೆನೆಸುವುದು, ಕನಸುವುದು,
ಅವರೊಡನೆ ಸರಿಯಾಗಿ ಕಳೆದೇನೆಂದು ಭ್ರಮಿಸುವುದು,
ಅಂಥವರೊಬ್ಬರು ಸಿಕ್ಕಿದರೆ ಇವರಲ್ಲ,
ಇವರನ್ನಲ್ಲ ನಾ ನೆನೆಸಿದ್ದು ಅನಿಸುವುದು.

ಯಾರು ಬರುವರು ಹಾಗೆ?--
ಇನ್ನಿವರ ಬಿಟ್ಟು ಬೇರೆಲ್ಲಿಗೂ ಹೋಗಬೇಕಾದ್ದಿಲ್ಲ
ಎಂದು ಅನಿಸುವ ಹಾಗೆ? ಸಂಭೋಗದಲ್ಲಿ ಕೆಲವು ಸಲ
ಒಂದಾದೆ ಅನ್ನಿಸಿದರೆ ಸಮೇತ ಈ ಚೆಲುವೆ
ನನ್ನ ಮೆಚ್ಚಿದಳೇ ಪುಲಕಿತಳೇ ಎಂಬಿತ್ಯಾದಿ ದಕ್ಷತೆಯ
ಪ್ರಶ್ನೆಗಳು ತೊಡಕುವುವು. ಇಲ್ಲ. ಇನ್ನೊಂದು ಜೀವದ ಜೊತೆಗೆ
ಕೂಡುವಿಕೆಯೇ ಇಲ್ಲ. ಸಂತರು ಕೆಲರು

ತಮ್ಮಲ್ಲೆ ಇರುವ ಎಳೆಮಗುವ ಕಾಣುತ್ತ
ಕಂಡು ಮಾತಾಡುತ್ತ ಆಡುತ್ತ ಹಾಡುತ್ತ
ಮಗುಮುಖದ ಮೂಲಕವೆ ದೇವರೊಡಗೂಡುತ್ತ
ಇರುವುದುಂಟೆಂದು ಕೇಳಿದ್ದೇನೆ. ಮನಸ್ಸಲ್ಲಿ
ನೆರಿಗೆ ಮುಖ ತುಂಬಿದ ನನಗೆ
ಮಗುಮುಖವೆ ಹೊಳೆಯುತ್ತಿಲ್ಲ.
ವಿಚ್ಛೇದ, ಬರೀ ವಿಚ್ಛೇದ, ಒಂಟಿತನ

ಕಳೆದು ಕೂಡುವುದಕ್ಕೆ ಅಂಕ ಎಲ್ಲೂ ಇಲ್ಲ.



************

1. ಮೇಲಿನ ಕವನಗಳು ನನ್ನ ಕವನ ಸಂಗ್ರಹ ಮಾತಾಡುವ ಮರ, ಸಮಗ್ರ ಕಾವ್ಯ 1964-2003ದಲ್ಲಿ ಈ ಮೊದಲು ಪ್ರಕಟವಾಗಿವೆ.
2. ಬೋಧಿ ಟ್ರಸ್ಟ್ ನ ಪುಸ್ತಕಗಳು ಈಗ ಆನ್ಲೈನ್ ಪುಸ್ತಕ ಮಳಿಗೆ flipkartನಲ್ಲಿ ಸಿಗುತ್ತವೆ. www.flipkart.comಗೆ Enter ಕೊಟ್ಟು books by Ramachandra Deva ಎಂಬುದಕ್ಕೆ search ಕೊಟ್ಟರೆ ಪುಸ್ತಕಗಳ ಪಟ್ಟಿ ಮತ್ತು ಹೇಗೆ ಕೊಂಡುಕೊಳ್ಳಬಹುದು ಎಂಬ ವಿವರ ಬರುತ್ತದೆ.
3. ಇದಲ್ಲದೆ ನಮ್ಮ ಪುಸ್ತಕಗಳು ಪುಸ್ತಕದ ಅಂಗಡಿಗಳಲ್ಲಿ ಸಿಗುತ್ತದೆ. ಸಿಕ್ಕದಿದ್ದರೆ ನಿಮ್ಮ ಹತ್ತಿರದ ಅಂಗಡಿಯವರಿಗೆ ತರಿಸಿಕೊಡಲು ಹೇಳಿ. ಅಥವಾ ನಮಗೆ ಬರೆಯಿರಿ. ನಮ್ಮ ವಿಳಾಸ: bodhitrustk@gmail.com
4. ಮಾರ್ಚ್ 20ರ ಬೇಂದ್ರೆ ಕಾವ್ಯೋತ್ಸವಕ್ಕೆ ಬನ್ನಿ. ಪದ್ಯಗಳನ್ನು ಓದುವವರು ತಮ್ಮ ಡಯಲಾಗ್ ಡೆಲಿವರಿಗಾಗಿ ನಾಡಿನಾದ್ಯಂತ ಪ್ರಖ್ಯಾತರಾಗಿರುವ ಮೇರು ನಟರಾದ ಸಿಂಹ, ಶ್ರಿನಿವಾಸಪ್ರಭು ಮತ್ತು ಹೆಸರಾದ ರಂಗಕರ್ಮಿಗಳಾದ ರಘುನಂದನ, ಮಂಗಲಾ ಮೊದಲಾದವರು; ಓದುವುದು/ಹಾಡುವುದು ಜಗತ್ತಿನ ದೊಡ್ಡ ಕವಿಗಳಲ್ಲೊಬ್ಬರಾದ ಬೇಂದ್ರೆಯವರ ಪದ್ಯಗಳನ್ನು. ಹೀಗಾಗಿ ಇದೊಂದು ಅವಿಸ್ಮರಣೀಯ ಅನುಭವ ಆಗಲಿದೆ.