Saturday, November 26, 2011

ವಿಮರ್ಶಕರು ಮತ್ತು ಲೇಖಕರು

ಶಿವರಾಮ ಕಾರಂತರು ವಿಮರ್ಶಕರ ಬಗ್ಗೆ ಯೋಚಿಸುತ್ತಿರಲಿಲ್ಲ ಎಂದು ಅವರ ಹುಟ್ಟುಹಬ್ಬದ ದಿನ ನಾನು ಹೇಳಿದ ಮಾತನ್ನು ಒಬ್ಬ ಓದುಗರು ಇಷ್ಟ ಪಟ್ಟಿದ್ದಾರೆ. ನಿಜವಾಗಿ ನೋಡಿದರೆ ಯಾವ ಮುಖ್ಯ ಲೇಖಕನೂ ವಿಮರ್ಶಕರು ಏನು ಹೇಳುತ್ತಾರೆ ಎಂಬ ಬಗ್ಗೆ ಯೋಚಿಸುವುದಿಲ್ಲ. ಅವನು ತನ್ನ ಮನಸ್ಸಿನಲ್ಲಿರುವ ತನ್ನ ಅನುಭವ ಮತ್ತು ತಾನು ಅಭಿವ್ಯಕ್ತಿಗಾಗಿ ಆರಿಸಿಕೊಂಡ ಭಾಷೆ ಬಗ್ಗೆ  ಮಾತ್ರ ಯೋಚಿಸುತ್ತಾನೆ. ಹೆಚ್ಚಿನ ವಿಮರ್ಶಕರು ಕೆಲವು ಪೂರ್ವನಿರ್ಧಾರಿತ ತೀರ್ಮಾನಗಳಿಂದ ಹೊರಡುತ್ತಾರೆ, ಅದಕ್ಕಿಂತ ಭಿನ್ನವಾಗಿರುವ ಕೃತಿ ಅವರಿಗೆ ರುಚಿಸುವುದಿಲ್ಲ, ಅವರ ಪೂರ್ವನಿರ್ಧಾರಿತ ಅಭಿರುಚಿಗೆ ಅನುಗುಣವಾಗಿ ಲೇಖಕರು ಬರೆಯಹೊರಟರೆ ಯಾವ ಹೊಸ ಬಗೆಯ ಪ್ರಯೋಗವೂ ಸಾಧ್ಯವಾಗುವುದಿಲ್ಲ. ಆದರೂ ಕೆಲವು ವಿಮರ್ಶಕರ ಟೀಕೆಯಿಂದ ಲೇಖಕರ ಸ್ವವಿಮರ್ಶೆ ಹೆಚ್ಚುತ್ತದೆ ಮತ್ತು ಅದರಿಂದ ಬರೆವಣಿಗೆಗೆ ಅನುಕೂಲವಾಗುತ್ತದೆ ಎಂಬುದು ನಿಜ. ಹೀಗೆ ಸಹಾಯ ಮಾಡುವವರನ್ನು ಲೇಖಕನಿಗೆ ಹೊರಗಿನವನಾದ ವಿಮರ್ಶಕ ಅನ್ನುವುದಕ್ಕಿಂತ ಲೇಖಕ ಏನು ಮಾಡುತ್ತಾನೆಂಬುದನ್ನು ಸಹಾನುಭೂತಿಯಿಂದ ತಿಳಿದ ಮತ್ತು ತಿಳಿಯಬಲ್ಲ ಸಹೃದಯ ಎನ್ನುವುದು ಹೆಚ್ಚು ಸರಿ. ಕುರ್ತಕೋಟಿ ಅನೇಕರಿಗೆ ಇಂಥಾ ಸಹೃದಯರಾಗಿದ್ದರು; ಅಡಿಗರು ಅವರ ಹತ್ತಿರದವರಿಗೆ ಇಂಥಾ ಸಹೃದಯರಾಗಿದ್ದರು.

ಕಾರಂತರ ಹಾಗೆ ಬೇಂದ್ರೆಯವರೂ ಅಕಡೆಮಿಕ್ ಆದ, ವಿದ್ಯಾವಂತರಾದ ಲೇಖಕ ವಿಮರ್ಶಕ ಮೊದಲಾದವರಿಗೆ ಹೆಚ್ಚು ಬೆಲೆ ಕೊಡುತ್ತಿರಲಿಲ್ಲ. ಅವರಿಗೆ ಮಾತಾಡಲು ಬಿಡದೆ, ಇವರ ಮಾತನ್ನು ಕೇಳಬೇಕಾದ ಅಗತ್ಯವೇ ಇಲ್ಲ ಎಂಬಂತೆ ತಾವೇ ಮಾತಾಡುತ್ತಿದ್ದರಂತೆ. ಆದರೆ ಹಳ್ಳಿಯ ಜನ ಬಂದರೆ, ಹಳ್ಳಿ ಹಾಡುಗಳನ್ನು ಹೇಳುವವರು ಬಂದರೆ, ಗಂಟೆಗಟ್ಟಲೆ ನಿಷ್ಠೆಯಿಂದ ಅವರ ಮಾತು ಕೇಳುತ್ತಾ ಕೂತಿರುತ್ತಿದ್ದರಂತೆ. ಈ ಮಾತನ್ನು ಕೀರ್ತಿನಾಥ ಕುರ್ತಕೋಟಿ ಎಲ್ಲೋ ಉಲ್ಲೇಖಿಸುತ್ತಾರೆ. ಎಲ್ಲಿ ಎಂದು ನೆನಪಿಗೆ ಬರುತ್ತಿಲ್ಲ.  ಪುಸ್ತಕದ ಬದನೇಕಾಯಿಗಳಾದ ಈ ಅಕಡೆಮಿಕ್ ಜನರಿಂದ ಕಲಿಯುವುದು ಏನೂ ಇಲ್ಲ, ಆದರೆ ಸ್ವಂತ ಅನುಭವದ ಮಾತು ಹೇಳುವ ಹಳ್ಳಿ ಜನರಿಂದ ಕಲಿಯುವುದು ಇದೆ ಎಂದು ಅವರಿಗೆ  ಅನ್ನಿಸಿರಬಹುದು.

ಸ್ವವಿಮರ್ಶೆ ಹೆಚ್ಚಿಸದ ವಿಮರ್ಶೆಯಿಂದ ಲೇಖಕನಿಗೆ ಆಗಬೇಕಾದ್ದು ಏನೂ ಇಲ್ಲ. ಅಂಥಾ ವಿಮರ್ಶೆ ಬರೀ ತರಲೆ.

Tuesday, November 22, 2011

ಇಕ್ಬಾಲ್ ಅಹ್ಮದ್ ಮತ್ತು ಹ್ಯಾಮ್ಲೆಟ್

ನಾನು ಹ್ಯಾಮ್ಲೆಟ್ ಅನುವಾದಿಸಿದ್ದು 1978ರಲ್ಲಿ. ಅದರ ನಂತರದ ಈ ಮೂವತ್ತಮೂರು ವರ್ಷಗಳಲ್ಲಿ ಅದನ್ನು ಬೇರೆ ಬೇರೆಯವರು ಆಡಿದ್ದಾರೆ; ರೇಡಿಯೋದಲ್ಲಿ ಪ್ರಸಾರ ಮಾಡಿದ್ದಾರೆ. ಆದರೆ ಅದರ ಬಗ್ಗೆ ನಿರಂತರವಾಗಿ ಅಭಿಮಾನ ಇಟ್ಟುಕೊಂಡು ಆಡುತ್ತಾ ಬಂದವರು ರಂಗ ನಿರ್ದೇಶಕ, ಚಿತ್ರಕಾರ, ಲೇಖಕ ಇಕ್ಬಾಲ್ ಅಹ್ಮದ್. ಇತ್ತೀಚೆಗೆ ಕಿನ್ನರ ಮೇಳಕ್ಕಾಗಿ ಅವರು ಅದನ್ನು ಮತ್ತೆ ಆಡಿಸಿದ್ದಾರೆ. ನಮ್ಮ ಜಾನಪದ ಹಾಗೂ ಪಾಶ್ಚಾತ್ಯ ಆಂಗಿಕಗಳನ್ನು ಮೇಳೈಸಿ ಮಾಡಿದ ಈ ಪ್ರಯೋಗ ನನಗಂತೂ ಖುಷಿ ಕೊಟ್ಟಿತು. ಈ ಸಂದರ್ಭದಲ್ಲಿ ಹ್ಯಾಮ್ಲೆಟ್  ಬಗ್ಗೆ ಆರು ವರ್ಷಗಳ ಹಿಂದೆ ಇಕ್ಬಾಲ್ ಬರೆದ ಲೇಖನವನ್ನು ಇಲ್ಲಿ ಸಾದರ ಪಡಿಸುತ್ತಿದ್ದೇನೆ. ಈ ಪ್ರತಿಭಾವಂತ ಸ್ನೇಹಿತ ಎಷ್ಟು ಒಳ್ಳೆಯ ಲೇಖಕ ಎಂಬುದನ್ನು ತೋರಿಸುವುದು ಒಂದು ಉದ್ದೇಶ; ಇವರ ಈ ಮೆಚ್ಚುವಿಕೆಯಿಂದ ನನಗಾದ ಸಂತೋಷ ಹಂಚಿಕೊಳ್ಳುವುದು ಇನ್ನೊಂದು ಉದ್ದೇಶ.
ಇದು ಅವರ ಲೇಖನ:


Thursday, November 17, 2011

ವಿರಾಮದ ಬಳಿಕ

ಸುಮಾರು ಮೂರು ವಾರಗಳಿಂದ ಇಂಟರನೆಟ್ ಹಾಳಾಗಿ ನನಗೆ ಬ್ಲಾಗ್ ಬರೆಯುವುದಕ್ಕಾಗಲೀ ಮೇಲ್ ನೋಡುವುದಕ್ಕಾಗಲೀ ಆಗಿರಲಿಲ್ಲ. ಹಾಳಾಗಲು ಕಾರಣ ಸಿಡಿಲು. ಈ ವರ್ಷ ಮಳೆಗಾಲಕ್ಕೆ ಮೊದಲು ಮತ್ತು ಆ ಮೇಲೆ ತುಂಬಾ ಹೊತ್ತು ತುಂಬಾ ದಿವಸ ನಿರಂತರವಾಗಿ ಸಿಡಿಲು ಗುಡುಗು. ಇಂಥಾ ಗುಡುಗು ಸಿಡಿಲಿಗೆ ಡಿಸಿಕನೆಕ್ಟ್ ಮಾಡಿದರೂ ಇಲೆಕ್ಟ್ರಾನಿಕ್ ಗೂಡ್ಸುಗಳು ಸುಟ್ಟು ಹೋಗುತ್ತವೆ. ಬೇಗ ರಿಪೇರಿ ಮಾಡಲು ಸಾಧ್ಯ, ಸಂಬಂಧ ಪಟ್ಟವರು ಮನಸ್ಸು ಮಾಡಿದರೆ. ಅಂತೂ ನಿನ್ನೆ ನನ್ನದು ರಿಪೇರಿಯಾಗಿದೆ.

ಈ ಅವಧಿಯಲ್ಲಿ ಬಿಟ್ಟು ಹೋಗಿರುವುದರ ಕುರಿತು ಬರೆಯಬೇಕಾಗಿದೆ. ಮೊದಲು ಮೇಲಿಗೆ ಉತ್ತರಿಸಬೇಕು.

Saturday, October 15, 2011

ಕೋಡಂಗಿಗಳು

ಕೋಡಂಗಿಗಳು ಕುರಿತ ಈ ಕೆಳಗಿನ ಲೇಖನವನ್ನು ಬರೆದದ್ದು ಇಪ್ಪತ್ತೈದು ವರ್ಷಗಳ ಹಿಂದೆ. ಶೂದ್ರ ಮಾಸ ಪತ್ರಿಕೆಯ ಮೇ 1986ರ ಸಂಚಿಕೆಯಲ್ಲಿ ಇದು ಮೊದಲು ಪ್ರಕಟವಾಗಿತ್ತು. ಆನಂತರ ನನ್ನ ಲೇಖನಗಳ ಸಂಗ್ರಹ ಮುಚ್ಚು (1994)ನಲ್ಲಿ ಪ್ರಕಟವಾಗಿದೆ. ಕೋಡಂಗಿ ಪಾತ್ರವಾಗಿ ಮತ್ತು ಒಂದು ಕಾನ್ಸೆಪ್ಟಾಗಿ ನನ್ನ ಇತರ ಬರೆವಣಿಗೆಯಲ್ಲಿ ಸಹಾ ಬಂದಿದೆ. ರಥಮುಸಲ (1981)ದಲ್ಲಿ ಕೋಡಂಗಿಯ ಇನ್ನೊಂದು ಮುಖವಾದ ವಿದೂಷಕ ಒಂದು ಪಾತ್ರ. ನನ್ನ ಕಥೆ "ರಿಸಾರ್ಟ್"ನಲ್ಲಿ ಸಹಾ ಕೋಡಂಗಿ ಒಂದು ಪಾತ್ರ. ಎರಡೂ ಕೃತಿಗಳಲ್ಲಿ ಕೋಡಂಗಿ ಧೀರೋದಾತ್ತರಾದ ಅಥವಾ ಹಾಗಾಗಲು ಪ್ರಯತ್ನಿಸುವ ಚೇತಕ ಮತ್ತು ಸುಬ್ರಾಯ ಭಟ್ಟರ ಇನ್ನೊಂದು ಮುಖವನ್ನು ಪ್ರತಿನಿಧಿಸುತ್ತಾನೆ. ಕೋಡಂಗಿ, ಕೋಡಂಗಿತನ ನನ್ನ ಪ್ರಮುಖ ಆಸಕ್ತಿಗಳಲ್ಲಿ ಒಂದು.

ನಾನು ಈಗ ಈ ಲೇಖನದ ಮುಂದುವರಿದ ಭಾಗ ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆ ಬರೆದ ಈ ಲೇಖನದ ಕಡೆಗೆ ಓದುಗರ ಗಮನ ಸೆಳೆಯಬೇಕು ಅನ್ನಿಸಿತು. ಹೀಗಾಗಿ ಈ ಮರುಮುದ್ರಣ.

--------------------------------------------------------------------------------



ಈ ಪುಸ್ತಕದ ಮುಖಚಿತ್ರ ಪೀಟರ್ ಬ್ರೂಗೆಲ್ ನ ಒಂದು ಚಿತ್ರ ತೋರಿಸುತ್ತದೆ. ಅಕ್ಷರಗಳು ಮನೊಹರ ಅವರದು.

Thursday, October 13, 2011

ಸಮಗ್ರ ಕಥೆಗಳು, ಸಂಪುಟ 1

ಇದು ಸದ್ಯದಲ್ಲಿ ಪ್ರಕಟವಾಗಲಿರುವ ನನ್ನ ಹೊಸ ಪುಸ್ತಕ. ಇದರಲ್ಲಿ ಒಂಭತ್ತು ಕಥೆಗಳಿವೆ. ಪುಟಗಳು: 180.
ಮೇಲಿನ ಮುಖಚಿತ್ರ ಮಾಡಿದವರು ಖ್ಯಾತ ಚಿತ್ರ ಕಲಾವಿದ ಜಾನ್ ಚಂದ್ರನ್.
ಪ್ರಕಾಶಕರು: ಬೋಧಿ ಟ್ರಸ್ಟ್.

Monday, October 3, 2011

ಬೋಧಿ ಟ್ರಸ್ಟ್ ಪುಸ್ತಕಗಳು

ಮೇಲಿನ ಬೋಧಿ ಟ್ರಸ್ಟ್ ಪ್ರಕಟಣೆಗಳ ಪಟ್ಟಿಯಲ್ಲಿ ಮಾತಾಡುವ ಮರದ ಪ್ರತಿಗಳು ಮುಗಿದಿವೆ. ಈ ಕೆಳಗಿನ ಪುಸ್ತಕಗಳು ಕೊಂಡುಕೊಳ್ಳಲು ಸಿಗುತ್ತವೆ.