ಶಿವರಾಮ ಕಾರಂತರು ವಿಮರ್ಶಕರ ಬಗ್ಗೆ ಯೋಚಿಸುತ್ತಿರಲಿಲ್ಲ ಎಂದು ಅವರ ಹುಟ್ಟುಹಬ್ಬದ ದಿನ ನಾನು ಹೇಳಿದ ಮಾತನ್ನು ಒಬ್ಬ ಓದುಗರು ಇಷ್ಟ ಪಟ್ಟಿದ್ದಾರೆ. ನಿಜವಾಗಿ ನೋಡಿದರೆ ಯಾವ ಮುಖ್ಯ ಲೇಖಕನೂ ವಿಮರ್ಶಕರು ಏನು ಹೇಳುತ್ತಾರೆ ಎಂಬ ಬಗ್ಗೆ ಯೋಚಿಸುವುದಿಲ್ಲ. ಅವನು ತನ್ನ ಮನಸ್ಸಿನಲ್ಲಿರುವ ತನ್ನ ಅನುಭವ ಮತ್ತು ತಾನು ಅಭಿವ್ಯಕ್ತಿಗಾಗಿ ಆರಿಸಿಕೊಂಡ ಭಾಷೆ ಬಗ್ಗೆ ಮಾತ್ರ ಯೋಚಿಸುತ್ತಾನೆ. ಹೆಚ್ಚಿನ ವಿಮರ್ಶಕರು ಕೆಲವು ಪೂರ್ವನಿರ್ಧಾರಿತ ತೀರ್ಮಾನಗಳಿಂದ ಹೊರಡುತ್ತಾರೆ, ಅದಕ್ಕಿಂತ ಭಿನ್ನವಾಗಿರುವ ಕೃತಿ ಅವರಿಗೆ ರುಚಿಸುವುದಿಲ್ಲ, ಅವರ ಪೂರ್ವನಿರ್ಧಾರಿತ ಅಭಿರುಚಿಗೆ ಅನುಗುಣವಾಗಿ ಲೇಖಕರು ಬರೆಯಹೊರಟರೆ ಯಾವ ಹೊಸ ಬಗೆಯ ಪ್ರಯೋಗವೂ ಸಾಧ್ಯವಾಗುವುದಿಲ್ಲ. ಆದರೂ ಕೆಲವು ವಿಮರ್ಶಕರ ಟೀಕೆಯಿಂದ ಲೇಖಕರ ಸ್ವವಿಮರ್ಶೆ ಹೆಚ್ಚುತ್ತದೆ ಮತ್ತು ಅದರಿಂದ ಬರೆವಣಿಗೆಗೆ ಅನುಕೂಲವಾಗುತ್ತದೆ ಎಂಬುದು ನಿಜ. ಹೀಗೆ ಸಹಾಯ ಮಾಡುವವರನ್ನು ಲೇಖಕನಿಗೆ ಹೊರಗಿನವನಾದ ವಿಮರ್ಶಕ ಅನ್ನುವುದಕ್ಕಿಂತ ಲೇಖಕ ಏನು ಮಾಡುತ್ತಾನೆಂಬುದನ್ನು ಸಹಾನುಭೂತಿಯಿಂದ ತಿಳಿದ ಮತ್ತು ತಿಳಿಯಬಲ್ಲ ಸಹೃದಯ ಎನ್ನುವುದು ಹೆಚ್ಚು ಸರಿ. ಕುರ್ತಕೋಟಿ ಅನೇಕರಿಗೆ ಇಂಥಾ ಸಹೃದಯರಾಗಿದ್ದರು; ಅಡಿಗರು ಅವರ ಹತ್ತಿರದವರಿಗೆ ಇಂಥಾ ಸಹೃದಯರಾಗಿದ್ದರು.
ಕಾರಂತರ ಹಾಗೆ ಬೇಂದ್ರೆಯವರೂ ಅಕಡೆಮಿಕ್ ಆದ, ವಿದ್ಯಾವಂತರಾದ ಲೇಖಕ ವಿಮರ್ಶಕ ಮೊದಲಾದವರಿಗೆ ಹೆಚ್ಚು ಬೆಲೆ ಕೊಡುತ್ತಿರಲಿಲ್ಲ. ಅವರಿಗೆ ಮಾತಾಡಲು ಬಿಡದೆ, ಇವರ ಮಾತನ್ನು ಕೇಳಬೇಕಾದ ಅಗತ್ಯವೇ ಇಲ್ಲ ಎಂಬಂತೆ ತಾವೇ ಮಾತಾಡುತ್ತಿದ್ದರಂತೆ. ಆದರೆ ಹಳ್ಳಿಯ ಜನ ಬಂದರೆ, ಹಳ್ಳಿ ಹಾಡುಗಳನ್ನು ಹೇಳುವವರು ಬಂದರೆ, ಗಂಟೆಗಟ್ಟಲೆ ನಿಷ್ಠೆಯಿಂದ ಅವರ ಮಾತು ಕೇಳುತ್ತಾ ಕೂತಿರುತ್ತಿದ್ದರಂತೆ. ಈ ಮಾತನ್ನು ಕೀರ್ತಿನಾಥ ಕುರ್ತಕೋಟಿ ಎಲ್ಲೋ ಉಲ್ಲೇಖಿಸುತ್ತಾರೆ. ಎಲ್ಲಿ ಎಂದು ನೆನಪಿಗೆ ಬರುತ್ತಿಲ್ಲ. ಪುಸ್ತಕದ ಬದನೇಕಾಯಿಗಳಾದ ಈ ಅಕಡೆಮಿಕ್ ಜನರಿಂದ ಕಲಿಯುವುದು ಏನೂ ಇಲ್ಲ, ಆದರೆ ಸ್ವಂತ ಅನುಭವದ ಮಾತು ಹೇಳುವ ಹಳ್ಳಿ ಜನರಿಂದ ಕಲಿಯುವುದು ಇದೆ ಎಂದು ಅವರಿಗೆ ಅನ್ನಿಸಿರಬಹುದು.
ಸ್ವವಿಮರ್ಶೆ ಹೆಚ್ಚಿಸದ ವಿಮರ್ಶೆಯಿಂದ ಲೇಖಕನಿಗೆ ಆಗಬೇಕಾದ್ದು ಏನೂ ಇಲ್ಲ. ಅಂಥಾ ವಿಮರ್ಶೆ ಬರೀ ತರಲೆ.

No comments:
Post a Comment