Saturday, February 26, 2011

ಮಾತಾಡುವ ಮರ: ಟಿಪ್ಪಣಿಗಳು

"ಮಾತಾಡುವ ಮರ" ಕವನದಲ್ಲಿ ನಾನು ಕೆಲವು ಭಿತ್ತಿಗಳನ್ನು ಬಳಸಿದ್ದೇನೆ. ಭಿತ್ತಿ ಸುಮಾರಾಗಿ ಇಂಗ್ಲಿಷಿನ allusionsಗೆ ಪರ್ಯಾಯ ಪದ. ನನಗೆ ತಿಳಿದಂತೆ ಪಂಪ ಈ ಪದವನ್ನು ಈ ಅರ್ಥದಲ್ಲಿ ಮೊದಲು ಬಳಸಿದ್ದ. ಅಕಡೆಮಿಕ್ ಚರ್ಚೆ ಪ್ರಾರಂಭಿಸಿದರೆ ಭಿತ್ತಿ ಮತ್ತು ಎಲ್ಯೂಶನ್ನುಗಳ ಮಧ್ಯೆ ಸೂಕ್ಷ್ಮ ವ್ಯತ್ಯಾಸಗಳನ್ನು ಕಾಣಬಹುದು. ಅದಕ್ಕೆ ಹೋಗದೆ "ಮಾತಾಡುವ ಮರ"ದಲ್ಲಿ ನಾನು ಬಳಸಿದ ಭಿತ್ತಿ ಅಥವಾ ಎಲ್ಯೂಶನ್ನುಗಳ  ಬಗ್ಗೆ ಇಲ್ಲಿ ಬರೆಯುತ್ತೇನೆ.

ಹೀಗೆ ಭಿತ್ತಿ ಅಥವಾ ಎಲ್ಯೂಶನ್ನುಗಳನ್ನು ಬಳಸುವುದರ ಉಪಯೋಗ ಮತ್ತು ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು:
1. ಇದು ಪರಂಪರೆಯಿಂದ  ಅಥವಾ ಬೇರೆ ಸಂಸ್ಕೃತಿಯಿಂದ ಬಂದ ಕೃತಿಗಳನ್ನು ಇಂದಿನ ನಮ್ಮ ಕೃತಿಯ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳುವ ಕ್ರಮ.
2. ಇತರ ಕೃತಿಗಳ ಪ್ರಭಾವವನ್ನು ನಮ್ಮ ಕೃತಿಗಳ ಚೌಕಟ್ಟಿನಲ್ಲಿ ಅರಗಿಸಿಕೊಳ್ಳುವ ಪ್ರಯತ್ನವೂ ಹೌದು.
3. ಇನ್ನೊಂದು ಕೃತಿಯ ಚೌಕಟ್ಟು/ಹಿನ್ನೆಲೆಗಳನ್ನು ತನ್ನ ಕೃತಿಯಲ್ಲಿ ಬಳಸಿಕೊಳ್ಳುವ ಮೂಲಕ ಆ ಕೃತಿಯ ಅರ್ಥವ್ಯಾಪ್ತಿಯನ್ನು ಒಬ್ಬ ಲೇಖಕ ಹಿಗ್ಗಿಸಿಕೊಳ್ಳುತ್ತಾನೆ.
4. ಭಿತ್ತಿಯ ಬಳಕೆ ಕಾಳಿದಾಸನ ಕುಮಾರಸಂಭವದಷ್ಟು ಹಳತು. ಪಂಪ, ಅಡಿಗರು, ಬೇಂದ್ರೆ, ಟಿ. ಎಸ್. ಎಲಿಯಟ್, ಜೇಮ್ಸ್ ಜಾಯ್ಸ್ ಮೊದಲಾದವರು ಭಿತ್ತಿ/allusionsನ್ನು ಪರಿಣಾಮಕಾರಿಯಾಗಿ ಬಳಸಿದ ಲೇಖಕರು. ಶೇಕ್ ಸ್ಪಿಯರ್ ತನ್ನ ನಾಟಕಗಳ ಅನೇಕ ಸಾಲುಗಳಲ್ಲಿ allusions ಬಳಸುತ್ತಾನೆ. ಇದೊಂದೇ ವಿಷಯ ಸಾಕು--ಆತನಿಗೆ ತಾನು ಬರೆಯುತ್ತಿದ್ದ ವಸ್ತುಗಳ ಬಗ್ಗೆ ಗಾಢ ಪಾಂಡಿತ್ಯವಿತ್ತು ಎಂಬುದನ್ನು ತೋರಿಸಲು.

ಈಗ "ಮಾತಾಡುವ ಮರ"ದ ಭಿತ್ತಿಗಳು:

1. ಮಾತಾಡುವ ಮರ ಒಂದು ದಂತಕತೆ ಮತ್ತು ಪೇಂಟಿಂಗ್. ಈ ಚಿತ್ರದ ಮೂಲರೂಪ ಹರಪ್ಪಾದ ಸೀಲುಗಳಲ್ಲಿ ನೋಡಲು ಸಿಗುತ್ತದಂತೆ. ನನಗೆ ಇಲ್ಲಿ ಮುಖ್ಯವಾದದ್ದು ಇದು ಭಾರತೀಯ ನಾಗರಕತೆಯ ಆದಿಮ ವರ್ಷಗಳಿಂದ ಚಾಲ್ತಿಯಲ್ಲಿರುವ  ಒಂದು ಸಂಕೇತ ಎಂಬುದು. ಹಾಗೆಯೇ ಇದು ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯಗಳಲ್ಲಿ ಬಳಕೆಯಲ್ಲಿರುವ ಸಂಕೇತ. ಮುಸ್ಲಿಂ ಸಂಪ್ರದಾಯದಲ್ಲಿ ಇದನ್ನು ವಾಕ್ ವಾಕ್ ಮರ ಎನ್ನುತ್ತಾರೆ.
2. ಗ್ರೀಕರ ಅಲೆಕ್ಸಾಂಡರ್ ಭಾರತಕ್ಕೆ ದಂಡು ಕಟ್ಟಿಕೊಂಡು ಬಂದಾಗ ಮಾತಾಡಿಸಬೇಕೆಂದು ಈ ಮರ ಹುಡುಕಿಕೊಂಡು ಹೋದನಂತೆ. ಅವನಿಗೆ ಸಿಕ್ಕಿ ಮಾತಾಡಿಸಲು ಸಾಧ್ಯವಾಗದ್ದರಿಂದಲೇ ಅವ ಭಾರತದಿಂದ ಹಿಮ್ಮೆಟ್ಟಬೇಕಾಯಿತು ಎಂಬ ಒಂದು ಕತೆಯಿದೆ.
3. 3ನೇ ಭಾಗದಲ್ಲಿ "ಸಿಡಿಲೇ ಸಿಡಿ ಸಿಡಿ" ಇತ್ಯಾದಿ ನಂತರದ ಏಳು ಸಾಲುಗಳು ಶೇಕ್ ಸ್ಪಿಯರ್ ನ  ಕಿಂಗ್ ಲಿಯರ್ ನಿಂದ, 5ನೇ ಭಾಗದ ಗವರ್ನರ್ ಮತ್ತು ವೇಶ್ಯೆಯ ಮಧ್ಯದ ಸಂಭಾಷಣೆಗಳು ಪೆರಿಕ್ಲಸ್ ನಿಂದ, 8ನೇ ಭಾಗದ "ನೀನೇನು ಕುರುಡಿಯೋ?" ನಂತರದ ಹನ್ನೆರಡು ಸಾಲುಗಳು ಹ್ಯಾಮ್ಲೆಟ್ ನಿಂದ ತೆಗೆದುಕೊಂಡವುಗಳಾಗಿವೆ. ಅವುಗಳ ಮೂಲ ಗೊತ್ತಿರುವವರಿಗೆ ಅವು ವೈದೃಶ್ಯದಲ್ಲಿ ಅಥವಾ ಸಾಮ್ಯದಲ್ಲಿ ಹೊಳೆಯಿಸುವ ಅರ್ಥ ಸ್ಪಷ್ಟವಾದೀತು. ಪರಿಕಲ ಹತ್ತೊಂಬತ್ತನೇ ಶತಮಾನದ Periclesನ ಒಂದು ಕನ್ನಡ ರೂಪಾಂತರದ ಹೆಸರು. ಮರೀನಾ ಅವನ ಮಗಳು.
4. ಕಾರ್ತೀಕ ಮತ್ತು ವಿದ್ಯುಚ್ಚೋರ ರಿಸಿಯ ಕತೆಗಳು ವಡ್ಡಾರಾಧನೆ ಯಲ್ಲಿ ಬರುತ್ತವೆ. ನನ್ನ ಉದ್ದೇಶಕ್ಕೆ  ಹೊಂದುವಂತೆ ಬದಲಾಯಿಸಿ ಬಳಸಿದ್ದೇನೆ.
5. ಕೊನೆಯ ಭಾಗದಲ್ಲಿ ಬರುವ ದದದ ಕತೆ ಬೃಹದಾರಣ್ಯಕ ಉಪನಿಷತ್ತು ನಲ್ಲಿ ಬರುತ್ತದೆ. ಗುಡುಗು ಮತ್ತೆ ಮತ್ತೆ ಗುಡುಗುತ್ತಾ ದದದ ಎನ್ನುತ್ತದೆ ಎಂದು ಈ ಕತೆ ಕೊನೆಯಾಗುತ್ತದೆ. ಇದನ್ನು ಎಲಿಯಟ್ ತನ್ನ The Waste Landನಲ್ಲಿ,
ಬೇಂದ್ರೆ ತಮ್ಮ "ಸಹಸ್ರತಂತೀ ನಿಸ್ವನದಂತೆ"ಯಲ್ಲಿ ಈ ಮೊದಲು ಬೇರೆ ಬೇರೆ ಅರ್ಥಗಳಲ್ಲಿ ಬಳಸಿದ್ದಾರೆ.

*************


ಬೋಧಿ ಟ್ರಸ್ಟ್ ಪ್ರಕಟಣೆಗಳನ್ನು ಈಗ flipkart  online bookstoreನಿಂದ ಪಡೆಯಬಹುದು. www.flipkart.comಗೆ enter ಕೊಟ್ಟು Books by Ramachandra Devaಗೆ search ಕೊಟ್ಟರೆ ಅವರಲ್ಲಿ ಲಭ್ಯವಿರುವ ನನ್ನ ಪುಸ್ತಕಗಳ  ವಿವರ ಮತ್ತು ಹೇಗೆ ಕೊಂಡುಕೊಳ್ಳಬಹುದು ಎಂಬ ವಿವರ ಬರುತ್ತವೆ.

No comments:

Post a Comment