Monday, February 14, 2011

ಎರಡು ಪದ್ಯಗಳು

1. ಐವತ್ತು

ಅವನಿಗೆ ಈಗ ಐವತ್ತು. ಇಪ್ಪತ್ತೈದು
ವರ್ಷದ ಹಿಂದೆ ಅವ ಪ್ರೀತಿಸಿದ ಆ ಅವಳು
ಪತ್ರವೂ ಬರೆದಿಲ್ಲ ಎಂತಿರುವಳೋ ಎಂದು
ಹಿಮಾಲಯದ ವಿಮಾನ ಹತ್ತಿದ್ದೆ ಅಲಕೆಯ ಕಡೆಗೆ
ಹಾರಿಯೇ ಬಿಟ್ಟಿದ್ದ. ಈಗಲೋ--ತಲೆ ಬೋಳು,
ನೆರೆ ಗಡ್ಡ, ಸುಕ್ಕಿದ ಕತ್ತು, ಹೊಟ್ಟೇ ಡುಮ್ಮು,
ಬಾತಿರುವ ಕಾಲು, ಮೊಣ ಗಂಟು, ಹೂಸಿನ ಗುಟುರು.

ಹಾರಲಾಗುವುದಿಲ್ಲ. ಹಾರಿದರೆ ಹಿಡಿದೇ ಪಟ್ಟು
ಲೋನ್ ತೆಗೆದು ಕಟ್ಟಿಸಿದ ಈ ಮನೆಯ ಕಾಂಪೌಂಡು
ಗೋಡೆಯ ಒಳಗೆ ಹೇಳಿದ್ದೆಂದು ಡಾಕ್ಟರ್ರು
ವ್ಯಾಯಾಮಕ್ಕೆ ಬೇಕಷ್ಟು--ಹೆಂಡತಿ ಜಂಪಿನ ಕೌಂಟು
ಮಾಡುತ್ತ ಇರುವಾಗ: ಅಂಗಾಲು ತುಸುವೆ ತುಸು
ನೆಲದಿಂದ ಎತ್ತರಿಸಿ ಬೆವರುತ್ತ ಸೇಂಕುತ್ತ;
ಹೆಚ್ಚಾದರಲ್ಲೆ ಕೆಳ ಬೀಳುವನು ಭಗದತ್ತ.

2

ಬಿದ್ದರು ದೇಹ ಎದ್ದಿದೆ ಮನಸು
ಹೊರಟಿದೆ ಹುರುಡುತ ಯಾನ;
ಈ ಮೈ ತೊರೆದಿದೆ  ಹೊಸ ಮೈ ಪಡೆದಿದೆ
ಗೆದ್ದಿದೆ ಸಾವಿನ ಬಾಣ;
ಹೆಂಡತಿ ಪ್ರೇಯಸಿ ಭೇದವು ಅಳಿದಿದೆ
ಇರಿದಿದೆ ಫಲಿಸುವ ತಾಣ;
ಹಿಂದಿಗೆ ಇಂದು ಇಂದಿಗೆ ಮುಂದು
ಮೂರೂ ಕಾಲವು ಕೂಡಿ
ಕೆಳಗೇ ಮೇಲೇ ಒಳಗೇ ಹೊರಗೇ
ಎಲ್ಲ ವಿರೋಧವು ಇಂಗಿ
ಸಾವಿರ ಹೂಗಳು ಶಿಖರದಿ ಅರಳಿವೆ
ಹರಿದಿದೆ ಅಂತರಗಂಗಿ;
ಶೆಳಿಯುವ ಮಂಡಿ ನೋಯುವ ಕುಂಡಿ
ಮುಗಿದಿದೆ ಗಾಳಿಯ ಭಂಗಿ.

3

ಆಟ ಗೊತ್ತದೆ ಏನು, ಆಡಿದ್ದೆ ಆಟವೇ,
ಅದು ಬರಿಯ ಹುಡುಗಾಟ, ಅಜ್ಜಯ್ಯ,
ಅಂತಾದ ಸಾವೀಗ ಎದುರು ಕೂತು:

"ಕೈಕಾಲು ಬಿದ್ದಾಗ ಮಗ ಸಹಿತ ಬರಲಿಲ್ಲ,
ಇನ್ನೊಬ್ಬ ಆಚೆ ಕಡೆ ಬೀದೀಲಿ ಮನೆ ಮಾಡಿ
ಇತ್ತ ಕಡೆ ತಲೆ ಸಹಿತ ಹಾಕಲಿಲ್ಲ."

ಒಂಟಿ ಭೀತಿಯ ಹೊತ್ತು ಯಾರು ಬಳಿ ಇದ್ದೇನು?
ಯಾವ ದೇವರು ಯಾವ ಧರ್ಮ ಕಾಪಾಡುವುದು?
ಅವರವರ ತಲೆ ಕೆಳಗೆ ಅವರವರ ಕೈ ಮಾತ್ರ.

ಸಾವು ಆಟದ ಕಾಯಿ ಉರುಳಿಸುತ ಕೇಳತದೆ:
"ಇನ್ನುಂಟೆ ಹಿಕ್ಮತ್ತು ಅಥವ ಆಯಿತೊ ಹೇಗೆ,
ಹೋಗೋಣವೆ ಇಲ್ಲ ಸೊಲ್ಲು ಉಂಟೆ?"

ಆಗ ಅನ್ನುವುದೆಂತು?--ನಾನು ರೆಡಿ, ಹೋಗೋಣ,
ನೀನಿದ್ದಿ, ಜೊತೆಗಾಯ್ತು; ಇಂದಿಂದು ಸ್ಥಿತಿ ಈಗ
ಹಿಂದಿನದ್ದರ ತರ್ಕಸಹಜ ಮುಂದಿನ ಭಾಗ;

ಹುಟ್ಟಿದ್ದ ದಿನದಿಂದ ಇದು ವರೆಗೆ ನಿನ್ನನ್ನು
ಸೋಲಿಸುತ ಬಂದಿದ್ದೆ; ಈಗ ಗೆದ್ದರು ನೀನು
ನನ್ನ ಗೆಲುವಿನ ಕಥನ ಶಕ್ತ ಬೀಜಾಣು.


2. ಚಿಗುರು

ಬೀಜಾಣು ಎಲ್ಲುಂಟು ಎಲ್ಲುಂಟು ಬೊಗಳು,
ಸರ್ವಾಧಿಕಾರಿಯ ತಪ್ಪಿ ಉಳಿಯುವುದು ಸುಳ್ಳು.

ಕಣ್ಣುಗಳ ಕೀಳಿಸುವೆ, ಕೈ ಕಾಲು ಮುರಿಯಿಸುವೆ,
ರಸ್ತೆ ಅಪಘಾತದಲಿ ಮರ್ಡರ್ರು ಮಾಡಿಸುವೆ;

ಎಳೆಮಗುವ ಕೊಲ್ಲಿಸುವೆ, ಅಮ್ಮನ್ನ ಬದುಕಿಸುವೆ,
ವರನ ಕತ್ತನು ಬಗೆಸಿ ವಧುವನ್ನು ರಕ್ಷಿಸುವೆ;

ನಗುನಗುತ ನರ್ತನದಿ ಮೈಮರೆತ ಹೊತ್ತಲ್ಲಿ
ಶಕುನಿ ದಾಳವ ಎಸೆವೆ; ಶತಚ್ಛಿದ್ರ ಮನಸ್ಸು ಮನೆ.

ಬಡತನದಿ ಅಸವಳಿಸಿ ಕಂಗಾಲು ತೆವಳಿಸುವೆ,
ಚಿತ್ರಗುಪ್ತನ ದಳವ ಎಲ್ಲ ಕಡೆ ನೇಮಿಸುವೆ;

ನಿಯಾಮಕನ ಕರುಣೆ ಇದು, ಮುಕ್ತಿದಾಯಕ ಎಂದು
ತಿಳಿದಲ್ಲಿ ಕೈ ಕೊಡುವೆ, ಬರಿ ಶೂನ್ಯ ಕಾಯುತಿದೆ;

ಎಂಥದ್ದು ಬೀಜಾಣು, ಎಲ್ಲ ಕಡೆ ಉರುಳು
ಹಾಕಿರುವೆ, ತಪ್ಪಿಸಿ ಯಾರು ಉಳಿಯುವರು, ಮರುಳು.

2

ಹೆದ್ದಾರಿಯಲಿ ನೀನು ಬುಲ್ಡೋಸು ಹೊಡೆವಾಗ
ಒಳದಾರಿಯಲಿ ನುಸುಳಿ ಬದುಕಿ ಉಳಿದೆ;

ಡೊಳ್ಹೊಟ್ಟೆ ಬರಿ ಮಂಡೆ ವೇಷ ವಿದೂಷಕ ತೊಟ್ಟು
ಮಕ್ಕಳೂ ನಿನ್ನನ್ನು ನಕಲಿ ಮಾಡುವರು;

ಬಾಂಬು ಸ್ಫೋಟದ ಪೃಥೆಯ ಒಡಲಲ್ಲಿ ಕಟ್ಟಿರುವೆ
ಫೀನಿಕ್ಸ್ ಆಶ್ರಮ: ಸಹನೆ ಪ್ರೀತಿ ಕರುಣೆ.

ನೀನು ಸಾಯಿಸಿದವನ ಎಲುಬಿಂದ ಕೊಳಲನ್ನು
ಮಾಡಿ ಹೊರಟಿದೆ ನಾದ, ಗಡುವು ಮೀರಿ.

ನಿನ್ನ ಘರ್ಜನೆಯನ್ನು ಕೊಳಲ ದನಿ ಮುಳುಗಿಸಿತೆ?
ದನಿ ಖಂಡಿತಾ ಇತ್ತು ಘರ್ಜನೆಯ ನಡುವೆಯೂ;

ಸಂಭೋಗ ಸೀತ್ಕಾರ ಆಚೆ ಕಡೆ ಕೇಳಿಸಿತು,
ವಂಶ ಪಲ್ಲವದಲ್ಲಿ ಸ್ಮೃತಿಯ ಚಿಗುರು;

ದಾಳಕ್ಕೆ ಮೊದಲ ಕ್ಷಣ ಗೀತ ನರ್ತನದಲ್ಲಿ
ಆನಂದ ಅರಿವಲ್ಲಿ ಕಾಲ ಚದುರು.


(ಈ ಕವನಗಳು ಮೊದಲು ಮಾತಾಡುವ ಮರ, ಸಮಗ್ರ ಕಾವ್ಯ, 1964--2003ರಲ್ಲಿ ಪ್ರಕಟವಾಗಿವೆ.)





No comments:

Post a Comment