Friday, February 4, 2011

ನಾಟಕಕ್ಕೆ ಸಂಬಂಧಿಸಿ ಮತ್ತೆ ಕೆಲವು ವಿಚಾರಗಳು

ಕಳೆದ ವಾರ ಕುದುರೆ ಬಂತು ಕುದುರೆ  ನೋಡಿದಾಗ ಮನಸ್ಸಿಗೆ ಬಂದ ಕೆಲವು ವಿಚಾರಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ನಾಟಕಗಳ ಕ್ರಮಗಳಲ್ಲಿ ಎರಡು ವಿಧ. ಇವುಗಳನ್ನು ಯುರೋಪು ಮತ್ತು ಏಷಿಯಾದ ರಂಗಭೂಮಿಗಳ ಪ್ರಧಾನ ಲಕ್ಷಣಗಳೆಂದು ಈ ಹಿಂದೆ ಗುರುತಿಸಿದ್ದಾರೆ. ಯುರೋಪು ರಂಗಭೂಮಿಯ ಪ್ರಧಾನ ಲಕ್ಷಣವೆಂದರೆ, ಅದರ ಬಹುತೇಕ ನಾಟಕಗಳು ಪ್ರೇಕ್ಷಕರು ಕೂತಿದ್ದಾರೆ, ರಂಗಭೂಮಿಯಲ್ಲಿ ನಟರು ಮಾಡುತ್ತಿರುವುದನ್ನು ಗಮನಿಸುತ್ತಿದ್ದಾರೆ ಎನ್ನುವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ನಮ್ಮನ್ನು ಯಾರೂ ನೋಡುತ್ತಿಲ್ಲ, ನಾವು ನಾಲ್ಕು ಗೋಡೆಗಳ ಮಧ್ಯೆ ನಮ್ಮ ನಮ್ಮ ವ್ಯವಹಾರಗಳಲ್ಲಿ ನಿರತರಾಗಿದ್ದೇವೆ ಎಂಬಂತೆ ಅಲ್ಲಿನ  ನಟರು ಅಭಿನಯಿಸುತ್ತಾರೆ. ಉದಾಹರಣೆಗೆ ಚೆಕಾವ್ ಅಥವಾ ಇಬ್ಸೆನ್ ನಾಟಕಗಳನ್ನು ಗಮನಿಸಬಹುದು. ಪ್ರೇಕ್ಷಕರು ಕೂತಿದ್ದಾರೆ, ನಮ್ಮನ್ನು ನೋಡುತ್ತಿದ್ದಾರೆ ಎಂಬ ಪರಿವೆ ಇಲ್ಲದವರಂತೆ ಅವರ ನಾಟಕಗಳ ಪಾತ್ರಗಳು ತಮ್ಮ ಬದುಕನ್ನು ರಂಗದ ಮೇಲೆ ಬದುಕುತ್ತಾರೆ. ಶೇಕ್ಸ್ಪಿಯರ್ ರಂಗಭೂಮಿಯೂ ಬಹುತೇಕ ಹೀಗೇ.  ದೊಡ್ಡ ಪ್ರತಿಭಾವಂತನಾದ್ದರಿಂದ ಅವನಲ್ಲಿ ಇದಕ್ಕೆ ಕೆಲವು ಎಕ್ಸೆಪ್ಶನ್ನುಗಳು ಸಿಗುತ್ತವೆ. ಉದಾಹರಣೆಗೆಪೆರಿಕ್ಲಸ್ ನಲ್ಲಿ ಪ್ರೇಕ್ಷಕರನ್ನು ನೇರವಾಗಿ ಉದ್ದೇಶಿಸಿದ ಮಾತುಗಳಿವೆ. ಇವು ಎಕ್ಸೆಪ್ಷನ್ನುಗಳೇ ಹೊರತು ಪ್ರಧಾನ ಧಾರೆ ಅಲ್ಲ. ಪ್ರಧಾನ ಧಾರೆ ಪ್ರೇಕ್ಷಕರು ನಮ್ಮನ್ನು ನೋಡುತ್ತಿಲ್ಲ, ರಂಗಭೂಮಿಯ ಸುತ್ತ ಮೂರು ಗೋಡೆಗಳಿರುವಂತೆ ಎದುರು ನಾಲ್ಕನೆಯ ಗೋಡೆ ಇದೆ ಎಂದೇ ತಿಳಿದು ಅಭಿನಯಿಸುವುದು.

ಏಷಿಯಾದ ರಂಗಭೂಮಿ ಅದಕ್ಕಿಂತ ಭಿನ್ನವಾದದ್ದು. ನಾವು ಅಭಿನಯಿಸುತ್ತಿರುವುದು ನಾಟಕ, ಪ್ರೇಕ್ಷಕ ಕೂತಿದ್ದಾನೆ, ನಮ್ಮ ಅಭಿನಯ ನೋಡುತ್ತಿದ್ದಾನೆ ಎಂಬ ಸ್ಪಷ್ಟ ಎಚ್ಚರ ಇಲ್ಲಿನ ಪಾರಂಪರಿಕ ರಂಗಭೂಮಿಯಲ್ಲಿ ಕಾಣುತ್ತದೆ. ಇದು, ಇರುವುದು ಮೂರೇ ಗೋಡೆ, ನಾಲ್ಕನೆಯ ಕಡೆ ತೆರೆದುಕೊಂಡಿದೆ, ಮತ್ತು ನಾವು ಆಡುತ್ತಿರುವ ಈ ನಾಟಕ ಇರುವುದು ಅಲ್ಲಿಂದ ನೋಡುತ್ತಿರುವ ಪ್ರೇಕ್ಷಕರಿಗಾಗಿ ಎಂಬ ಎಚ್ಚರ.  ಈ ಎಚ್ಚರವೇ ನಮ್ಮ ಪಾರಂಪರಿಕ ರಂಗಭೂಮಿಯ ಭಾಗವತ, ಕೋಡಂಗಿ ಮೊದಲಾದವರ ವರ್ತನೆ, ಮಾತುಗಳನ್ನು ನಿರ್ದೇಶಿಸುತ್ತದೆ. ಅನೇಕ ಸಲ ಭಾಗವತ, ಕೋಡಂಗಿ, ಅಥವಾ ಮುಖ್ಯ ಪಾತ್ರ ಪ್ರೇಕ್ಷಕರನ್ನು ಉದ್ದೇಶಿಸಿ ಮಾತಾಡುವುದು ಈ ಕಾರಣಕ್ಕಾಗಿಯೇ.

ಗ್ರೀಕರ ಕೋರಸ್ಸನ್ನು ನಮ್ಮ ಭಾಗವತನ ಜೊತೆ  ಹೋಲಿಸಿದರೆ ಈ ವ್ಯತ್ಯಾಸ ಸ್ಪಷ್ಟವಾಗಬಹುದು. ಭಾಗವತ ನೇರವಾಗಿ ಪ್ರೇಕ್ಷಕರನ್ನು ಉದ್ದೇಶಿಸಿಯೇ ಮಾತಾಡುತ್ತಾನೆ. ಕೋಡಂಗಿ ಪ್ರೇಕ್ಷಕರ ಪ್ರತಿನಿಧಿಯೇ. ಅವತ್ತಿನ ಆಟ ಆಡುವ ಊರಿನ ಬಗ್ಗೆ, ಆ ಊರಿನ ದೇವರ ಬಗ್ಗೆ, ಊರಿನ ಆಢ್ಯರ ಬಗ್ಗೆ ಆತ ಮಾತಾಡುತ್ತಾನೆ. ಕೋರಸ್  ಗ್ರೀಕ್ ನಾಟಕಗಳಲ್ಲಿ ರಂಗಕ್ರಿಯೆ ನಡೆಯುವ ಸ್ಥಳದ ಹಿರಿಯರು: ಉದಾಹರಣೆಗೆ ಈಡಿಪಸ್ ನಲ್ಲಿ ಅವರು ಥೀಬ್ಸ್ ನಗರೆದ ಹಿರಿಯರು. ಅವರು ಪ್ರೇಕ್ಷಕರನ್ನು ಪ್ರತಿನಿಧಿಸಲೂ ಬಹುದು. ಆದರೆ ಪ್ರೇಕ್ಷಾಂಗಣದಲ್ಲಿ ಕೂತ ಪ್ರೇಕ್ಷಕರನ್ನೇ ಗಣನೆಗೆ ತೆಗೆದುಕೊಂಡಂತೆ ಆ ನಾಟಕ ಇಲ್ಲ. ಹಾಗೆ ಕೂತಿರುವ ಜನ ಯಾರೂ ಇಲ್ಲ ಎಂಬಂತೆ ಆ ನಾಟಕ ಆಡಬಹುದು. ಯಕ್ಷಗಾನವನ್ನು ಪ್ರೇಕ್ಷಾಂಗಣದಲ್ಲಿ ಯಾರೂ ಇಲ್ಲ ಎಂಬಂತೆ ಆಡಲು ಸಾಧ್ಯ ಇಲ್ಲ. ಪಾರಂಪರಿಕ ಯಕ್ಷಗಾನದಲ್ಲಿ ತುಂಬಾ ಹೊತ್ತು ಪೂರ್ವರಂಗ ಆಡುತ್ತಾರೆ. ಪೂರ್ವರಂಗ ಎಲ್ಲವೂ ಪ್ರೇಕ್ಷಕರನ್ನು ಗಣನೆಗೆ ತೆಗೆದುಕೊಂಡೇ ರಚಿತವಾದವು. ಗ್ರೀಕರ ನಾಟಕಗಳ ಕೋರಸ್ ರೂಪಾಂತರವಾಗಿ ನಮ್ಮ ರಂಗಭೂಮಿಗೆ ಮೇಳವಾಗಿ ಬಂದಾಗ ನಮ್ಮ ರಂಗಭೂಮಿಯ ಕೆಲವು ಗುಣಲಕ್ಷಣಗಳನ್ನು ಪಡೆಯುತ್ತದೆ: ಆಗ ಕೋರಸ್ ಪ್ರೇಕ್ಷಕರಿದ್ದಾರೆ ಎಂಬ ಎಚ್ಚರ ಇರುವಂತೆ ವರ್ತಿಸುತ್ತದೆ.  ಒಂದು ಸಂಸ್ಕೃತಿಯ ವಿವರ ಇನ್ನೊಂದು ಸಂಸ್ಕೃತಿಗೆ ಬಂದಾಗ ಸಹಜವಾಗಿ ಪಡೆದುಕೊಳ್ಳುವ ರೂಪಾಂತರ ಇದು. ಯಾಕೆಂದರೆ ಪರಕೀಯ ಸಂಸ್ಕೃತಿಯಿಂದ ಬಂದ ವಿವರಗಳನ್ನು ಸ್ಥಳೀಯ ಸಂಸ್ಕೃತಿ ತನ್ನ ಪರಿಕರಗಳ ಕಾರಣಕ್ಕಾಗಿಯೇ ತನ್ನ ಕಡೆಗೆ ಜಗ್ಗುತ್ತಿರುತ್ತದೆ.

ಬ್ರೆಕ್ಟ್ ಪ್ರಭಾವಿತನಾದದ್ದು ಈ ಬಗೆಯ ಏಷಿಯಾದ ರಂಗಭೂಮಿಯಿಂದ. ಅವನು ಚೈನಾದ ಪಾರಂಪರಿಕ ರಂಗಭೂಮಿಯಿಂದ ಪ್ರಭಾವಿತನಾದನಂತೆ. ಪ್ರೇಕ್ಷಕರಿದ್ದಾರೆ, ನಾಲ್ಕನೆಯ ಗೋಡೆ ನಮಗೂ ಪ್ರೇಕ್ಷಕರಿಗೂ ಮಧ್ಯ ಇಲ್ಲ ಎಂಬ ಈ ಲಕ್ಷಣ ಏಷಿಯಾದ ಅನೇಕ ಪಾರಂಪರಿಕ ರಂಗಭೂಮಿಗಳಿಗೆ ಸಮಾನವಾದದ್ದು. ಹೀಗಾಗಿ ಅವನು ಚೈನಾ ರಂಗಭೂಮಿಯಿಂದ ಪ್ರಭಾವಿತನಾದರೂ ಯಕ್ಷಗಾನದ ಕೆಲವು ಮೂಲಭೂತ ಲಕ್ಷಣಗಳಿಂದ ಪ್ರಭಾವಿತನಾದಂತೆ ನಮಗೆ ಅನ್ನಿಸುತ್ತದೆ. ಹೀಗೆ ಪ್ರಭಾವಿತನಾಗಿ ಅವನು ಯುರೋಪು ರಂಗಭೂಮಿಗೆ ಹೊಸತು ತಂದ. ಮೊದಲನೆಯ ಸಲ, ಪ್ರೇಕ್ಷಕರಿದ್ದಾರೆ, ನಮ್ಮನ್ನು ನೋಡುತ್ತಿದ್ದಾರೆ, ನಾವು ಆಡುತ್ತಿರುವುದು ನಾಟಕ ಎಂಬ ಅರಿವು ಯುರೋಪಿನ ರಂಗಭೂಮಿಯಲ್ಲಿ ಏಷಿಯಾದ ರಂಗಭೂಮಿಯಿಂದ ಪ್ರಭಾವಿತವಾದ ಬ್ರೆಕ್ಟ್ ಮೂಲಕ ಪ್ರಧಾನ ಧಾರೆಯಾಗಿ ಕಾಣಿಸಿಕೊಂಡಿತು.

ಬ್ರೆಕ್ಟ್ ಏಷಿಯಾದ ರಂಗಭೂಮಿಯಿಂದ ಪ್ರಭಾವಿತನಾಗಿ ಬರೆದಂತೆ ನಮ್ಮ ನಾಟಕಕಾರರು ಯುರೋಪಿನಿಂದ ಪ್ರಭಾವಿತರಾಗಿ, ಪ್ರೇಕ್ಷಕರಾಗಲೀ ಬೇರೆ ಯಾರೇ ಆಗಲಿ ನಮ್ಮನ್ನು ನೋಡುತ್ತಿಲ್ಲ,  ರಂಗಸ್ಥಳದ ಸುತ್ತ ಇರುವುದು ಮೂರು ಗೋಡೆಗಳಲ್ಲ, ನಾಲ್ಕನೆಯ ಗೋಡೆಯೂ  ಇದೆ, ನಟರು ಈ ನಾಲ್ಕು ಗೋಡೆಗಳ ಮಧ್ಯೆ ತಮ್ಮ ಜೀವನ ಬದುಕುತ್ತಿದ್ದಾರೆ ಎಂಬ ಥರದ ನಾಟಕ ಬರೆದಿದ್ದಾರೆ. ನಮ್ಮ ಅನೇಕ ಮುಖ್ಯ ನಾಟಕಗಳಲ್ಲಿ ಈ ಥರದ ನಾಟಕಗಳು ಗಣನೀಯ ಸಂಖ್ಯೆಯಲ್ಲಿವೆ. ಕುದುರೆ ಬಂತು ಕುದುರೆಯೂ ಈ ಬಗೆಯ ನಾಟಕವೇ. ಆದ್ದರಿಂದಲೇ  ಅದನ್ನು ಆಡುವ ಒಬ್ಬ ನಟ ಪ್ರೇಕ್ಷಕರು ಇದ್ದಾರೆ ಎಂಬ ಎಚ್ಚರವನ್ನು ರಂಗದ ಮೇಲೆ ತನ್ನ ಗೆಶ್ಚರುಗಳಲ್ಲಿ  ತೋರಿಸಿದಾಗ ಆಭಾಸವಾಗುತ್ತದೆ.



No comments:

Post a Comment