1. ತನಿಖೆ
ನನ್ನ ಒಡಲಿಂದ ಡೊಂಕುಜೀ ಹೊರಬಂದ.
ನಡುವಿಂದಲೇ ಬೆಳೆವ ಹುಣ್ಣಿನ ಹಾಗೆ ಮಗ ಇವನು.
ಭೂಜಲದ ಹಾಗೆಯೇ ಒಳಗಿರುವ ಲಾವದ ರೀತಿ.
ಕಳ್ಕಿದನು. ಕರವಾಳ ಝಳಪಿಸಿದ. ಅರ್ದಾಳ ಮುಖ.
ಮರಳಿ ಒಳನುಗ್ಗಿ ಮರಸಿಗೆ ಕೂತ
--ಹೃದ್ರೋಗದಂತೆ, ಮಧುಮೇಹದಂತೆ, ಬ್ಲಡ್ ಪ್ರೆಶರಿನಂತೆ.
ಮೇನೇಜು ಮಾಡುವೆನು ಎಂದು ತಿಳಿಯುತ್ತಿರುವೆ:
ಹುಲಿಗೆ ಕರಡಿಗೆ ತೊಡಿಸಿ ಪ್ಯಾಂಟನ್ನು ಶರಟನ್ನು
ಮೋಟಾರು ಬಿಡುವುದ ಕಲಿಸಿ, ಸೆಲ್ಯೂಟು ಹೊಡೆಯಿಸಿ ಕುಣಿಸಿ
ತೋರಿಸಿದಂತೆ ಪಬ್ಲಿಕ್ಕಲ್ಲಿ. ಮುಖವಾಡ ಇದೆ:
ಹಸುಮುಖದ ಶಿಶುಮುಖದ ಋಷಿಮುಖದ ಭಜಮುಖದ
ಅಪ್ಪಂಥ ಮುಖವಾಡ.
ಆದರೂ ಹಬ್ಬುತಿದೆ ಎಲ್ಲ ಕಡೆ ಅನುಮಾನ:
ಎಲ್ಲಿಂದ ಈ ದುರ್ವಾಸ?--ತನಿಖೆ ಸುರುವಾಗುತಿದೆ.
2. ಡೊಂಕುಜೀ ಸ್ವಗತ
ಎದುರು ಮನೆ ಮಗು ಹೀಚು. ಬೆಳೆವವಳೇ. ಕರೆದೇನು.
ಅಂಕಲ್ ಎಂದು ತೊಡೆ ಏರುವವಳು. ಅಡಗಿಸಿ ಇಟ್ಟು
ಎಂಟೋ ಹತ್ತೋ ಲಕ್ಷ ಕೇಳಿದರೆ ರಾನ್ಸಂ, ಅವಳಪ್ಪ ಬೋಳೀಮಗನ್ನ,
ಬೆಳಗೊಳಗೆ ಶ್ರೀಮಂತ. ತಿರುಚಿದರೆ ಕೈ ಕಾಲು,
ಚುಚ್ಚಿದರೆ ಪಿನ್ನಲ್ಲಿ ಅಂಗಾಂಗ ಎಳೆಹಣ್ಣ--ಅತ್ತಾಳು;
ಅಂಕಲ್, ಬೇಡ--ಎಂದು ಒದ್ದಾಡುವುದ, ಹೊರಳುವುದ, ತೆವಳುವುದ
ನೋಡುವುದೆ ಮಜ--ಅವಳಮ್ಮ ಹಲವರಿಯುವುದ.
ಆ ಕಪ್ಲು, ನಾಯಿ ಸೂಳೇಮಕ್ಳು,
ಅವಳ ಸೊಕ್ಕೇನು, ನಗುವೇನು--ಕುಂಡೆ ತಿರುಪುವುದೇನು--ಅವ ಮಡೆಯ--
ಅವಳಿಗೇ ಬರೆದೇನು ಲವ್ಲೆಟರ್--ಇವಗೆ ಸಿಕ್ಕುವ ಹಾಗೆ--
ಸಂಸಾರ, ಅಹಾ ಗೋತ--ಬೊಬ್ಬೆಗಳ ಜಗಳಗಳ ಕೇಳಿದರೆ ಸುಪ್ರೀತ;
ಮಲಗಿದರೆ ಎಂಡ್ರೆಕ್ಸ್ ಕುಡಿದು, ತಿಂದು ನಿದ್ರೆಯ ಮಾತ್ರೆ, ಈ ರಾತ್ರೆ,
ಕಿಟಿಕಿ ಬಾಗಿಲು ಮುಚ್ಚಿ, ಬೀದಿಗೆ ನಾಳೆ ನಾಡಿದ್ದು ಬೆಳಗೊಳಗೆ
ಹೆಣದ ವಾಸನೆ--ಈ ಜನದ ರಂಧ್ರಕ್ಕೆ ಜಡಿದು--
ಜಜ್ಜಡಿದು--ನನ್ನ ಕಂಡರೆ ಎಷ್ಟು ನಿರ್ಲಕ್ಷ್ಯ ಕ್ರಿಮಿಗಳಿಗೆ!
3. ಸ್ವಗತದ ನಂತರ
ಬಾಗಿಲು ಒಡೆಸಿ ಜನ ಒಳಗೆ ನುಗ್ಗಿದರು. ಬಾತಿದೆ ದೇಹ
ದೈತ್ಯಾಕಾರ. ಜಿರಲೆ ಹಿಕ್ಕೆಗಳು ಮೈ ಮೇಲೆ. ಇಲಿ ಇರುವೆ
ಅಂಗಾಂಗ ತಿನ್ನುತಿವೆ. ಯಾಕೆ ಏನಂತೆ ಎಂಬ ಗುಸು ಗುಸುವೆ
ಎಲ್ಲ ಕಡೆ. ವಾಸನೆಗೆ ಊಟ ಸೇರದು. ಸೆಟೆದಿದ್ದ ಡೊಂಕುಜೀ
ವಿಳಾಸ ಬಲ್ಲವ ಯಾರು? ಪೊಲೀಸರು
ಪೋಸ್ಟಮಾರ್ಟಂ ಮಾಡಿ
ಮೋರ್ಗಲ್ಲಿ ಎಸೆದು ಬಂದರು ಹೆಣವ.
ಆಕಾಶ ಬದಲಾಗಿ
ನೇರಿಳೆ ಕೆಂಪು ಕಿತ್ತಳೆ ಬಣ್ಣ ಹಬ್ಬಿವೆ ಈಗ.
ಎದುರು ಮರದಲ್ಲೊಂದು ಕೋಗಿಲೆ
ಕುಹೂ ಎಂದು ಕುಹೂ ಎಂದು ಕುಹುಕ್ಕುಹೂ ಎಂದು ಕೂಗುತಿದೆ.
ಮಂದಾರ ಗಿಡದಿಂದ ಭೂಮಿ ತೂಗುವ ಹಕ್ಕಿ ಪುಳಕ್ಕನೆ ಹಾರಿ
ಭಾರಕ್ಕೆ ಗಿಡ ತೂಗಿ ಹೂವಿನ ಎಸಳು ಕೆಳ ಬಿತ್ತು.
ಹಕ್ಕಿಗಳ ದಂಡು ಹೊರಟಿದೆ ಎತ್ತ? ಗಾಳಿ ಬೀಸುತಿದೆ ಹಿಗ್ಗಿ
ಹಿಗ್ಗಿ, ಹಿರಿ ಹಿರಿ ಹಿಗ್ಗಿ.
ಮನುಷ್ಯರಿಗೆ ಅರಿವಿರದ ಒಂದು ಸುಖ
--ಒಂದು ಪ್ರಾಣಾಯಾಮ--ನೆಲ ಮುಗಿಲು ಹಬ್ಬುತಿದೆ;
ಇಡೀ ಸೃಷ್ಟಿ ರಾವು ಕಳೆದಂತೆ ಸುಗ್ಗುತಿದೆ.
4
ಇವ ಪಾಪ ಅಂಥಾ ಪಾಪ
ಏನು ಸಹ ಮಾಡಿಲ್ಲ.
ಎಂದೋ ಒಮ್ಮೆ ಕುರುಡನು ಒಬ್ಬ
ಬಸ್ಸಿನ ಸ್ಟೇಂಡಿಗೆ ಕೇಳಲು ಹಾದಿ
ವಿರುದ್ಧ ದಿಕ್ಕನು ತೋರಿಸಿ ಸ್ವಲ್ಪ
ತಮಾಷೆ ನೋಡಿದ--ಹುಡುಗನ ಬುದ್ಧಿ.
ಮದುವೆಗೆ ಎಷ್ಟೋ ವರ್ಷಕೆ ಮೊದಲು
ಗಂಡಸು ತಾನೇ ಬಸುರು ಮಾಡೇನೇ
ಎಂಬುದ ತಿಳಿಯಲು ಒಬ್ಬಳು ಹುಡುಗಿಗೆ
ಹೊಟ್ಟೆಯ ಬರಿಸಿದ; ಟೆಸ್ಟ್ ಅಷ್ಟೇನೇ.
ಹುಡುಗಿಯ ಒಲಿಸಿಯೆ ಮುಂದರಿದಿದ್ದ;
ಅಬಾರ್ಶನ್ ಕೂಡಾ ಲೀಗಲ್ ಇತ್ತು; ತನ್ನದೆ
ಖರ್ಚಲಿ ಮಾಡಿಸಿಕೊಟ್ಟ; ಮೇಲಷ್ಟು ಪಾಕೆಟ್ಟು
ಮನಿಯೂ ಕೊಟ್ಟ; ಕಣ್ಣಲಿ ನೀರೂ ಬಂದಿತ್ತು ಕೂಡ.
ಅಪ್ಪನು ಹಾಸಿಗೆ ಹಿಡಿದನು; ಇನ್ನಿವ
ಸಾಯುವುದಿಲ್ಲ ಬದುಕುವುದಿಲ್ಲ
ಎಂದಾಗಿರಲು, ವರ್ಷವು ಕಳೆಯಲು
ಔಷಧಿ ಕೊಡುವುದು ಮರೆತೇ ಹೋಯಿತು;
ಅಲ್ಲದೆ ಇದ್ದರು ಸಾಯುತ್ತಿದ್ದ; ಈಗಲೆ
ಸತ್ತುದು ಸುಖ ಮರಣವೆ ಸರಿ.
ಸಜೆ ಆಗುವ ಯಾವುದೆ ಗುರುತರ
--ಪೊಲೀಸ್ ಕೇಳಿ, ಜಡ್ಜನು ಕೇಳಿ--
ಅಪರಾಧವ ಅವ ಮಾಡೇ ಇಲ್ಲ.
ಆದರೂ ಜಂಟಲ್ಮನ್ ಇತ್ತೀಚೆಗೆ
ಕನಸಂದ್ರೆ ಹೆದರೋದು ಛೇ ಏನಕೆ?
ಸುಮ್ಮಸುಮ್ಮನೆ ಬಯ್ಯೋದು
ನಿದ್ದೆಯ ಮಾಡದೆ ಕಾಯೋದು
"ತಿಳಿಸಿದ್ರೆ ನೋಡಿ ನಿಮ್ಮ"
ಎಂದೆಲ್ಲ ಹೆದರ್ಸೋದು
ಛೇ ಏನಕೆ ಹೀಗೆ ಛೇ ಏನಕೆ?
5
ಅಂದರು ಅವನಿಗೆ:
ಒಳಗೊಂದು ದೀಪವ
ಹೊತ್ತಿಸಿ ಇಡು ಸಾಕು.
ಪೂರಾ ತೆಗೆದರೆ
ಕಿಟಿಕಿಯ ಬಾಗಿಲ
ಬೀಸುವ ಗಾಳಿಗೆ
ಉಳಿಯದು ದೀಪ;
ಬಾಗಿಲು ಕಿಟಿಕಿಯ
ಮುಚ್ಚಿದರೂ ಸಹ
ಹೊಗೆ ಏರಿಯೆ ಒಳ
ಉಸಿರು ಕಟ್ಟುವುದು.
ಆರದ ಹಾಗೂ ಹೊಗೆ
ಏರದ ಹಾಗೂ ಒಳ
ದೀಪವ ಹೊತ್ತಿಸಿ
ಇಟ್ಟಿರು ಸಾಕು.
6
ಆದರೆ ಬಂದಿತು ನಾಯೊಂದು
ಎಂದಿತು ಬೌ ಬೌ ಬೌ ಎಂದು.
ಹಚ ಹಚ ಎಂದ;
ಕೈಯ್ಯೂ ಬೀಸಿದ.
ಹತ್ತಿರ ಬಂತು,
ಕಚ್ಚಿಯೆ ಬಿಟ್ಟಿತು.
ಸಿಟ್ಟಲ್ಲಿ ತಾನೂ
ನಾಯಿಗೆ ಕಚ್ಚಿದ.
ಬಾಯಿಯ ತುಂಬಾ
ನಾಯಿಯ ರೋಮ;
ನಾಯಿಗೆ ಕಚ್ಚಿದ
ಎಂಬುದು ನಾಮ.
7
ಹಾಸಿಗೆ ಹಚ್ಚಡ ಹಾಸುತ್ತಾನೆ
ಒಬ್ಬನೆ ಹೊಕ್ಕು ಮಲಗುತ್ತಾನೆ.
ಹಾಸಿಗೆ ಒಬ್ಬಳು ಹೆಂಗಸು ಬೇಕು
ಹೆಂಗಸು ತರಿಸಲು ಪೈಸಾ ಬೇಕು.
ಕಾಸಿಗೆ ಕಾಸು ಸೇರಿಸ್ತಾನೆ
ಹಾಸಲು ಹೆಣ್ಣು ಹುಡುಕುತ್ತಾನೆ.
ಚೆಂದದ ಸ್ತ್ರೀಗಳ ಕಲ್ಪಿಸಿಕೊಂಡು
ಹಾಸಿಗೆ ಹೊಕ್ಕು ಮಲಗುತ್ತಾನೆ.
ಮಲಗಿದ್ದಲ್ಲೆ ಮುಲ ಮುಲ ಮಾಡಿ
ಮೂಸಿ ಹೇಸಿ ನೋಡುತ್ತಾನೆ.
ಎದ್ದರೆ ಜ್ಞಾನ ಆ ಮೇಲೆ ಸ್ನಾನ
ಉಳಿಸಲು ತಾಖತ್ ಪ್ರಾಣಾಯಾಮ.
8
ಅವಳೊಂದು ಮರ
ಇವನು ಹೂವಿನ ಬಳ್ಳಿ;
ಮೈ ಬಳಸಿ ಮೇಲಕ್ಕೆ
ಹತ್ತುತ್ತಿದ್ದ.
ಹಾವಾಗಿ ಪೊಟರೆ ಒಳ
ನುಗ್ಗುತ್ತಿದ್ದ.
ತೋಳನ್ನು ಕೊಕ್ಕಲ್ಲಿ
ತಿವಿಯುತ್ತಿದ್ದ.
ಮರ ಅಲ್ಲಾಡದೇ ಇತ್ತು
ಇದ್ದ ಹಾಗೇ.
ಮಂಚ ಮಾಡಿದ ಕಡಿದು
ಮಲಗಿ ಎದ್ದ.
**********
ಸೂಚನೆ: ಮೇಲಿನ ಕವನ ನನ್ನ ಕವನ ಸಂಗ್ರಹ ಮಾತಾಡುವ ಮರ, ಸಮಗ್ರ ಕಾವ್ಯ, 1964--2003ರಲ್ಲಿ ಪ್ರಕಟವಾಗಿದೆ. ಈ ಪುಸ್ತಕದ ವಿತರಕರು: ನುಡಿ ಪುಸ್ತಕ (ನ್ಯೂ ಪ್ರೀಮಿಯರ್ ಬುಕ್ ಶಾಪ್), ಬನಶಂಕರಿ 2ನೇ ಹಂತ, ಬೆಂಗಳೂರು, ಫೋನ್ 080 26711329 ಮತ್ತು ಅತ್ರಿ ಬುಕ್ ಸೆಂಟರ್, ಮಂಗಳೂರು, ಫೋನ್ 0824 2425161.
No comments:
Post a Comment