ಈ ಕೆಳಗಿನವು ಈಗ ಪ್ರಕಟವಾಗಿರುವ ನನ್ನ ಸಮಗ್ರ ನಾಟಕಗಳು, ಸಂಪುಟ 1 ಮತ್ತು 2ರಲ್ಲಿರುವ ನಾಟಕಗಳ ಕೆಲವು ಹಾಡುಗಳು. ಈ ಎರಡು ಪುಸ್ತಕಗಳ ಪ್ರಕಾಶಕರು: ಬೋಧಿ ಟ್ರಸ್ಟ್. ವಿತರಕರು: 1. ನುಡಿ ಪುಸ್ತಕ (ನ್ಯೂ ಪ್ರೀಮಿಯರ್ ಬುಕ್ ಶಾಪ್), ನಂ. 27, 21ನೇ ಮುಖ್ಯ ರಸ್ತೆ, ಬಿ. ಡಿ. ಎ. ಕಾಂಪ್ಲೆಕ್ಸ್ ಎದುರು, ಬನಶಂಕರಿ ಎರಡನೇ ಹಂತ, ಬೆಂಗಳೂರು 560070 (ಫೋನ್ 080 26711329) email premierpublishingco@yahoo.in ಮತ್ತು 2. ಅತ್ರಿ ಬುಕ್ ಸೆಂಟರ್, ಶರಾವತಿ ಬಿಲ್ಡಿಂಗ್, ಬಲ್ಮಠ ರಸ್ತೆ, ಮಂಗಳೂರು 575001 (ಫೋನ್ 0824 2425161) email athreebook@gmail.com
*********
ಹತ್ತು ಹತ್ತು ಹತ್ತು
ಹತ್ತಿದ ಕುದುರೆಯ ರಾಜ
ರಾಜಾ ರಾಜಾ ರಾಜಾ
ರಾಜಂಗೊಬ್ಳು ರಾಣಿ
ರಾಣೀ ರಾಣೀ ರಾಣೀ
ರಾಣೀಗೊಂದು ಮಂಚ
ಮಂಚಾ ಮಂಚಾ ಮಂಚ
ಮಂಚಕ್ಕೆ ಎರಡು ರೆಕ್ಕೆ
ರೆಕ್ಕೇ ರೆಕ್ಕೇ ರೆಕ್ಕೇ
ಮಂಚದ ರೆಕ್ಕೆ ಗಾಳಿಲಿ ಬಡಿದು
ಮೇಲಕೆ ಹಾರೀ ಹಾರಿ
ಸೂರ್ಯನ ಬೆಂಕಿಗೆ ಮೋಡದ ತಂಪಿಗೆ
ಮಂಚಕೆ ಚಿಗುರೆಲೆ ಮೂಡಿ
ಮಂಚಕೆ ಚಿಗುರೆಲೆ ಮೂಡಿ
ಮಂಚಕೆ ಚಿಗುರೆಲೆ ಮೂಡಿ
******
ಢಣಾಂ ಢಣಾಂ ಗಂಟೇ ಬಡಿದು
ಬಡಿದೂ ಬಡಿದೂ ಬಡಿದೂ
ಗಂಟೇ ಹಕ್ಕಿ ದಿನಗಳ ಹಾರಿ
ದಿನಗಳ ಹಾರಿ ತಾರೆಯ ಗೋರಿ
ಡಣಾ ಡಣಾಂ ಗಂಟೇ ಹಕ್ಕಿ
ಹಾರೀ ಹಾರೀ ಹಾರೀ--
******
ಕಾಡಿಗೆ ಹೋಗ್ತೀಯಾ ಪುಟ್ಟಿ
ಕಾಡಿಗೆ ಹೋಗ್ತೀಯಾ--
ಎಲ್ಲ ನೋಡಿಕೊಂಡು ಚೆಲುವೆ
ವಾಪಾಸು ಬರ್ತೀಯಾ--
ಕಾಡಿಗೆ ಹೋಗೋ ಕಾಲ ಬಂತು
ಕಾಡಿಗೆ ಹೋಗ್ತೀಯಾ--
ಎಲ್ಲ ನೋಡಿಕೊಂಡು ಚೆಲುವೆ
ವಾಪಾಸು ಬರ್ತೀಯಾ--
*****
ಕಾಲ ಸುರುವು ಆಗುವ ಮೊದಲು
ಆದಿಮಾಯೆ ದೇವರ ತಾಯಿ
ಅವಕಾಶದಲ್ಲಿ ಇದ್ದಳು ಆಗ
ಆದಿಮಾಯೆ ಲೋಕದ ತಾಯಿ
ಅವಕಾಶದಲ್ಲಿ ಇದ್ಕೊಂಡು ತಾಯಿ
ನೋಡುತ್ತಾಳೆ ಸುತ್ತಾಮುತ್ತ
ತಾಯಿ ನಾನು ಮಕ್ಕಳ ಸೃಷ್ಟಿ
ಮಾಡಿ ಕಾಲ ಚಾಲೂಲಿಡುವೆ
ಎಂದುಕೊಂಡು ಆದಿಮಾಯೆ
ದೇವರ ತಾಯಿ ಸೃಷ್ಟಿಯ ಮೂಲ
ಮನಸ್ಸಿನೊಳಗೆ ಗಂಡಸು ರೂಪ
ಮಾಡಿ ಹೊರಗೆ ತೆಗೆದು ಇಟ್ಟು
ಹಾಗೇ ಇನ್ನೊಂದು ಹೆಂಗಸು ರೂಪ
ಮಾಡಿ ಹೊರಗೆ ತೆಗೆದು ಇಟ್ಟು
ಆಡ್ಕೊಂಡು ಇರ್ರಿ ಮಕ್ಕಳೆ ನೀವು
ನಿಮ್ಮಂಥವರ ಹುಟ್ಟಿಸ್ಕೊಳ್ಳಿ
ಅಂತ ಅವರಿಗೆ ಆಟಕೆ ಬಿಟ್ಟು
ಆದಿಮಾಯೆ ಸೃಷ್ಟಿಯ ತಾಯಿ
ಇವೂ ಇರಲಿ ಎಂದು ಮಾಡಿ
ಪ್ರಾಣಿ ಪಕ್ಷಿ ಹರಿಯುವ ಜಂತು
ಇವರ ಯೋಗಕ್ಷೇಮ ನೋಡಲು
ದೇವರ ಮಾಡಿ ಮಗನೇ ದೇವರೇ
ಪ್ರಾಣಿ ಮನುಷ್ಯ ಯೋಗಕ್ಷೇಮ
ಹಗಲು ನೀನು ನೋಡ್ಕೋಬೇಕು
ಆ ಮೇಲೆ ಮಾಡಿ ಭೂತದ ರೂಪ
ಹೊರಗೆ ತೆಗೆದು ರಾತ್ರಿಯಲ್ಲಿ
ರಾತ್ರಿ ಹೊತ್ತ ಯೋಗಕ್ಷೇಮ
ನೋಡ್ಕೋಬೇಕು ನೀನು ಮಗನೆ
ಅಂತ ಅಂದು ಗಂಡು ಹೆಣ್ಣು
ಹಗಲು ರಾತ್ರಿ ಭೂತ ದೇವರು
ಮಾಡಿ ತಾಯಿ ಒಂದಕ್ಕೊಂದು
ಪೋಷಿಸಿಕೊಂಡು ಇರ್ರಿ ಎಂದು
ಅಂತರ್ಧಾನ ಆದ ಮೇಲೆ
ದೇವರು ಭೂತ ಹಂಚಿಕೊಂಡು
ಜಗತ್ತಿನ ಕೆಲಸ ಸೃಷ್ಟಿ ಸ್ಥಿತಿಯ
ಕಾಲದ ಚಾಲನೆ ಯೋಗಕ್ಷೇಮ
ಮಾಡ್ತಾ ಇರಲು ಭೂತಕ್ಕೆ ಹೇಗೋ
ಮನುಷ್ಯರ ರುಚಿಯು ಹತ್ತಿಬಿಡ್ತು
ಹತ್ತಿದ್ದೇನೇ ದೇವರ ಓಡಿಸಿ
ಮನುಷ್ಯರ ನಾವು ಅಡಿ ಮಾಡ್ಕೊಂಡ್ವಿ
ಭೋಗಿಸಿಕೊಂಡು ಇದ್ವಿ ನಾವು
ದೇವರ ಓಡಿಸಿ ದೆವ್ವವೆ ತುಂಬಿ
ದೆವ್ವವೆ ತುಂಬಿ ಭೂತದ ರಾಜ್ಯ
ಎಲ್ಲಾ ಕಡೆಗೆ ತುಂಬಿ ತುಂಬಿ
*******
ಎಷ್ಟೊಂದು ಹೂವುಗಳು!
ಎಷ್ಟೊಂದು ಹೂವುಗಳು!
ತಲೆಯ ಮೇಲೆ ಕಾಲ ಮೇಲೆ ಮೈಯ್ಯ ಮೇಲೆ ಹೂವು!
ಇಳೆಯ ಮೇಲೆ ಬಾನ ಮೇಲೆ ನದಿಯ ಮೇಲೆ ಹೂವು!
ಹೂವು ಮೈಯ್ಯ ತುಂಬ ಹೂವು!
ಹೂವು ಸಂದಿ ಸಂದಿ ಹೂವು!
ಹೂವು ಎದೆಯ ತುಂಬಿ ಹೂವು!
ಸಂದಿ ಸಂದಿ ಅರಳಿ ಹೂವು!
ಹೂವು ಹೂವು ಹೂವು!
*******
ಸುಗ್ಗಿ ಬಂದಿದೇ ವನಕೆ
ಸುಗ್ಗಿ ಬಂದಿದೆ.
ಸುಗ್ಗಿ ಬಂದಿದೇ ಈಗ
ಸುಗ್ಗಿ ಬಂದಿದೆ.
ಸುಗ್ಗಿ ಹಿರಿದು ಹಿರಿದು ಹಿಗ್ಗಿ
ತಗ್ಗು ತೆವರು ಕಣಿವೆ ಬೆಟ್ಟ
ಎಲ್ಲ ಎಲ್ಲ ಕಡೆಗೆ ನುಗ್ಗಿ
ಸುಗ್ಗಿ ಬಂದಿದೇ ಹಿಗ್ಗಿ
ಸುಗ್ಗಿ ಬಂದಿದೆ;
ಸುಗ್ಗಿ ಬಂದಿದೇ ಉಬ್ಬಿ
ಸುಗ್ಗಿ ಬಂದಿದೆ.
********
ಕುಣಿಯುತ್ತಾಳೆ ಸೃಷ್ಟಿಯ ತಾಯಿ
ಎಲ್ಲರ ತಾಯಿ ಸೃಷ್ಟಿಯ ಮೂಲ.
ಇರುಳನು ಒಳಗಡೆ ಅದುಮಿ ಹಗಲು
ಏಳುತ್ತಿರಲು ಮೈ ಮುರಕೊಂಡು
ಅದುಮಿದ ಇರುಳು ಕಂಪಿಸುತಿರಲು
ಹಗಲಿನ ಬೆನ್ನಿನ ಹಿಂಬದಿ ಕಾದು
ಹಕ್ಕಿ ಪಕ್ಕಿ ಬಡಿಯಲು ರೆಕ್ಕೆ
ಒಳಗಡೆ ಹೊಂಚಲು ಪಶುಗಳು ಪ್ರಾಣಿ
ಭೂತ-ದೇವರು ಹೋರುತ್ತಿರಲು
ಮರಸಿಗೆ ಕೂತಿರೆ ನೊಣೆಯುವ ಇರುಳು
ಭೂಮಿ ಆಗಸ ಆಗಲಿಸೆ ತೊಡೆಯ
ಸೂರ್ಯ ತೂರಲು ಕೆಂಪನೆ ಕಿರಣ
ತೂರಲು ಸೂರ್ಯ ಕೆಂಪನೆ ಕಿರಣ
ಕಂಪಿಸೆ ಒಳಗಡೆ ನೊಣೆಯುವ ಇರುಳು
ಕುಣಿಯುತ್ತಾಳೆ ಕುಣಿಯುತ್ತಾಳೆ
ಸೃಷ್ಟಿಯ ತಾಯಿ ಎಲ್ಲರ ತಾಯಿ
ನೊಣೆಯುವ ಇರುಳು ಕಂಪಿಸುತಿರಲು
ಹಗಲಿನ ಬೆನ್ನಿನ ಹಿಂಬದಿ ಹೊಂಚಿ
ನೊಣೆಯುವ ಇರುಳು ಕಂಪಿಸುತಿರಲು
ಹಗಲಿನ ಬೆನ್ನಿನ ಹಿಂಬದಿ ಹೊಂಚಿ
ಕುಣಿಯುತ್ತಾಳೆ ಕುಣಿಯುತ್ತಾಳೆ
ಎಲ್ಲರ ತಾಯಿ ಸೃಷ್ಟಿಯ ಮೂಲ
ಎಲ್ಲರ ತಾಯಿ ಸೃಷ್ಟಿಯ ಮೂಲ.
(ಪುಟ್ಟಿಯ ಪಯಣ)
******
ಮುದದಿಂದ ಹಾಡುವ
ಒದಗಿ ಬಂದಿರುವಂಥ
ಚದುರ ಜನಗಳ ಎದುರು
ಮುಕ್ತ ಅಂಗಣದೀ.
ದೇಗುಲದ ಒಳಗಿಹನು
ಪ್ರಭುವು ನಾರಾಯಣನು
ಪರಮ ಕರುಣಾಸಿಂಧು
ಜಗದ ಒಡೆಯಾ.
ಸರುವ ಶಕ್ತನು ಅವನು
ಜೊತೆಗೆ ಲಕ್ಷ್ಮೀದೇವಿ
ಜಗದ ತಾಯ್ತಂದೆಯರು
ಸಲಹಲೆಮ್ಮಾ.
ನಾವು ಸೂತ್ರದ ಬೊಂಬೆ
ದೇವ ಆಡಿಸಿದಂತೆ
ಆಡುವೆವು ಕೆಲವು ಕ್ಷಣ
ಅರ್ಥ ಹುಡುಕೀ.
ಮುದದಿಂದ ಕುಣಿಯುವ
ದೇಗುಳದ ಅಂಗಣದಿ
ಚದುರ ಜನಗಳ ಎದುರು
ಒದಗಿದಂಥಾ.
ಒಳಗೆ ನಾರಾಯಣನು
ಜೊತೆಗೆ ಲಕ್ಷ್ಮೀದೇವಿ
ಪರಮ ಕರುಣಾಮೂರ್ತಿ
ಕೃಪೆದೋರಲೀ.
******
ಬಂದ ನಾರಾಯಣನು
ಬಂದ ಲಕ್ಷ್ಮೀರಮಣ
ಬಂದ ಸೃಷ್ಟಿಯ ಒಡೆಯ
ಎದ್ದು ಬಂದ.
ಅವನಿಂದಲೇ ಚಲನೆ
ಅವನಿಂದಲೇ ಬೆಳಸು
ಪ್ರತಿಯೊಂದು ಖಗಮೃಗಕೆ
ಜೀವದೊಡೆಯಾ.
ದೇವ ಅವ ಇದ್ದಾನೆ
ಅಣು ರೇಣು ತೃಣ ಕಾಷ್ಠ
ಮೂಲೆ ಮೂಲೆಗಳಲ್ಲಿ
ಪರಮ ಪುರುಷಾ.
ಎದ್ದು ಬಂದಾಗವನು
ಎದ್ದು ಬಂದಂತೆ ಜಗ
ಅಂಥ ಅವಿನಾಭಾವ
ದೇವ-ಭವಕೇ.
ದೇವರು ತೋರಿದ ದಾರಿಯ ಹಿಡಕೊಂಡು
ಜೀವಿಯ ಬದುಕದೊ ಸಾಗುವುದು.
ಪ್ರತಿಯೊಂದು ನಡಿಗೆಯ ಪ್ರತಿಯೊಂದು ಹೆಜ್ಜೆಯು
ಅವನೆಡೆ ಮುಕ್ತಿಯ ಗತಿಯು.
ನಂಬುತ ನಡೆದರೆ ಹಾದಿಯ ಮುಳ್ಳನು
ಅವನೇ ಹೂಗಳ ಮಾಡುವನು.
ಅವ ಸಿಟ್ಟಾದರೆ ಹೂಗಳ ಮಾಲೆಯೆ
ಮುಳ್ಳಾಗಿಯೆ ಎಡೆ ಚುಚ್ಚುವುದು.
ಅವನೇ ಮತಿಯು ಅವನೇ ಶಕುತಿಯು
ಅವನೇ ಮಾರ್ಗವು ಗತಿಯು.
(ಸುದರ್ಶನ)
******
ನಾನೇ ಕೃಷ್ಣ ಅಂತ ಹಾಡುತ್ತ ಕುಣೀತಾರೆ
ವೇಷಕೆ ಎಷ್ಟೊಂದು ಜನ ಈಗ ಉಂಟು
ಕೃಷ್ಣ ಕೃಷ್ಣ ಅಂತ ಹರಕೊಂಡು ಕುಣಿತಾರೆ
ವೇಷಕೆ ಎಷ್ಟೆಲ್ಲ ಪರಿಕರ ಉಂಟು
ಕೃಷ್ಣ ಎಂಬವನೊಬ್ಬ ಆದವ ಎಂಬುದ
ಮರೀತಾರೆ ವೇಷಕೆ ಜನ ಎಷ್ಟು ಉಂಟು
ಸತ್ತಿದ್ರು ಬದುಕಿದ ಹಾಗೇನೆ ಕುಣಿತಾರೆ
ಕಾಲದ ಹೊರಗೆಷ್ಟು ಜನ ಈಗ ಉಂಟು
ಕೃಷ್ಣ ಕೃಷ್ಣ ಅಂತ ನಾನೆ ಕೃಷ್ಣ ಅಂತ
ಕುಣಿಯೋಕೆ ಎಷ್ಟೊಂದು ಜನ ಈಗ ಉಂಟು.
(ಕೊಳಲು ಮತ್ತು ಶಂಖ)
********
ಪ್ರೇಮಿಗಳ ಹೃದಯದಿ ನೆಲೆ ನಿಂತ ದೇವರು
ಶೋಭಾನೆಯೇ ಶುಭ ಶೋಭಾನೆಯೇ.
ಇದ್ದರು ವಿಘ್ನ ವಿಡ್ಡೂರ ಶತ ಸಾವಿರ
ಕಟ್ಟುವ ಗುಬ್ಬಚ್ಚಿ ಸಂಸಾರ ಶೋಭಾನೆ
ಶೋಭಾನೆಯೇ ಶುಭ ಶೋಭಾನೆಯೇ
ಸೆರೆಯಲಿ ಹುಟ್ಟಿದ ಬಾಲಕ ನಮ್ಮಯ
ಮನ ಸೆರೆ ಗೋಡೆಯ ಒಡೆಯಲಿ ಶೋಭಾನೆ
ಶೋಭಾನೆಯೇ ಶುಭ ಶೋಭಾನೆಯೇ.
ಕಾಲು ಆಗಲಿ ಕಂಬ ದೇಹವು ದೇಗುಲ
ಶಿರ ಹೊನ್ನ ಕಳಶವು ಶೋಭಾನೆಯೇ
ಶೋಭಾನೆಯೇ ಶುಭ ಶೋಭಾನೆಯೇ.
ದೇಹವು ದೇಗುಲ ಶಿರ ಹೊನ್ನ ಕಳಶವು
ಕಾಲೆಂಬ ಕಂಬವು ಶೋಭಾನೆಯೇ
ಶೋಭಾನೆಯೇ ಶುಭ ಶೋಭಾನೆಯೇ.
(ಸುದರ್ಶನ)
No comments:
Post a Comment