Friday, November 19, 2010

ಉಪನಿಷತ್ತು ಕುರಿತು---1

ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುವ ಒಂದು ಕತೆ ಹೀಗಿದೆ:

ದೇವತೆಗಳು, ಮನುಷ್ಯರು, ಮತ್ತು ಅಸುರರು ಪ್ರಜಾಪತಿಯ ಮಕ್ಕಳು. ಯವ್ವನದಲ್ಲಿ ಬ್ರಹ್ಮಚಾರಿಗಳಾಗಿ ತಮ್ಮ ತಂದೆಯ ಬಳಿ ವಾಸ ಮಾಡಿದರು. ಅವರ ಕಲಿಕೆಯ ಕೊನೆಯ ಹಂತದಲ್ಲಿ, ದೇವತೆಗಳು ಪ್ರಜಾಪತಿಯಲ್ಲಿ ತಮಗೆ ಉಪದೇಶಿಸುವಂತೆ ಕೇಳಿಕೊಂಡರು. ಅವನು ಅವರಿಗೆ "ದ" ಎಂದು "ಗೊತ್ತಾಯ್ತಾ?" ಎಂದು ಕೇಳಿದನು. "ಗೊತ್ತಾಯ್ತು. ದಾಂತರಾಗಿರಿ ಎಂದು ಉಪದೇಶ ಕೊಟ್ಟಿದ್ದೀ" ಎಂದರು. ಪ್ರಜಾಪತಿ, "ಸರಿ. ನಿಮಗೆ ಗೊತ್ತಾಗಿದೆ" ಎಂದನು.

ಆಗ ಮನುಷ್ಯರು ಹೇಳಿದರು: " ನಮಗೆ ಉಪದೇಶ ಕೊಡು". ಪ್ರಜಾಪತಿ ಮತ್ತೆ "ದ" ಎಂದು "ಗೊತ್ತಾಯ್ತಾ?" ಎಂದನು. "ಗೊತ್ತಾಯ್ತು. ದತ್ತ--ದಾನ ಮಾಡಿ ಎನ್ನುತ್ತಿದ್ದೀ" ಎಂದರು. ಪ್ರಜಾಪತಿ, "ಸರಿ. ನಿಮಗೆ ಗೊತ್ತಾಗಿದೆ" ಎಂದನು.

ಆಗ ರಾಕ್ಷಸರು ಪ್ರಜಾಪತಿಯನ್ನು ಸಮೀಪಿಸಿ, "ನಮಗೆ ಉಪದೇಶ ಕೊಡು" ಎಂದು ಕೇಳಿದರು. ಪ್ರಜಾಪತಿ ಅವರಿಗೂ "ದ"  ಎಂದೇ ಹೇಳಿ "ಗೊತ್ತಾಯ್ತಾ?" ಎಂದು ಕೇಳಿದನು. "ಗೊತ್ತಾಯ್ತು. ದಯೆಯನ್ನು ಹೊಂದಿ ಎಂದು ಹೇಳುತ್ತಿದ್ದೀ" ಎಂದರು. ಪ್ರಜಾಪತಿ "ಸರಿ. ನಿಮಗೆ ಗೊತ್ತಾಗಿದೆ" ಎಂದನು.

ದೈವೀವಾಣಿಯಾದ ಗುಡುಗು ಗುಡುಗುತ್ತಾ ಮತ್ತೆ ಮತ್ತೆ ಹೇಳುತ್ತಿರುವುದು ಇದನ್ನೇ: ದಾಂತರಾಗಿರಿ (ದಾಮ್ಯತರಾಗಿ), ದಾನ ಮಾಡಿ, ದಯಾವಂತರಾಗಿ.

ಈ ಸುಂದರ, ಶ್ರೀಮಂತ ಅರ್ಥಗಳ  ಕಥೆ ಇಪ್ಪತ್ತನೇ ಶತಮಾನದಲ್ಲಿ ಜಗತ್ಪ್ರಸಿದ್ಧವಾಗಲು  ಇಂಗ್ಲಿಷ್ ಕವಿ ಟಿ. ಎಸ್. ಎಲಿಯಟ್ ಅದನ್ನು ತನ್ನ ಕವನ ದಿ ವೇಸ್ಟ್ ಲ್ಯಾಂಡಿನಲ್ಲಿ ಬಳಸಿದ್ದು ಬಹುತೇಕ ಕಾರಣ. ಅವನ ಈ ಕವನದ ಕೊನೆಯ ಐದನೆಯ ಭಾಗದ ಶೀರ್ಷಿಕೆ  What the Thunder Said. ಇದನ್ನು "ಗುಡುಗು ಹೇಳಿದ್ದೇನು?" ಎಂದು ಅರ್ಥೈಸಬಹುದು; "ಗುಡುಗು ಹೇಳಿದ್ದು" ಎಂದೂ ಅರ್ಥೈಸಬಹುದು. " ಗುಡುಗು ಹೇಳಿದ್ದು" ಎಂದು ಅರ್ಥೈಸುವುದೇ ಹೆಚ್ಚು ಸೂಕ್ತ  ಎಂದು ನನ್ನ ಅಭಿಪ್ರಾಯ. ಗುಡುಗು ಏನು ಹೇಳಿತು ಎನ್ನುವುದು ಉಪನಿಷತ್ತಿನ ಕತೆಯಲ್ಲೇ ಇದೆ. ಉಪನಿಷತ್ತಿನ ಕತೆಯಲ್ಲಿ ಕೊನೆಯಲ್ಲಿ ಬರುವುದನ್ನು ಎಲಿಯಟ್  ಸುರುವಿಗೆ ಬಳಸುತ್ತಾನೆ.

ಉಪನಿಷತ್ತಿನ ಕತೆ ಎರಡು ಹಂತಗಳಲ್ಲಿ ಬಿಚ್ಚಿಕೊಳ್ಳುತ್ತದೆ. ಪ್ರಜಾಪತಿ ಹೇಳುವುದು ದ  ಎಂಬ ಪದವನ್ನು ಮಾತ್ರ. ದೇವತೆಗಳು ಅಸುರರು ಮತ್ತು ಮನುಷ್ಯರು ತಮ್ಮ ತಿಳುವಳಿಕೆಗೆ ಅನುಗುಣವಾಗಿ ಅದಕ್ಕೆ ದತ್ತ ದಾಮ್ಯತ ದಯ ಎಂಬ ಮೂರು ಅರ್ಥಗಳನ್ನು ಮಾಡುತ್ತಾರೆ. ಪ್ರಜಾಪತಿ ಮೂರೂ ಅರ್ಥಗಳು ಸರಿ ಎನ್ನುತ್ತಾನೆ. ಅವರವರಲ್ಲಿ ಯಾವುದರ ಕೊರತೆ ಇದೆಯೆಂದು ಅವರು ತಿಳಿದರೋ ಅದನ್ನು ಬೆಳೆಸಿಕೊಳ್ಳುವಂತೆ ಪ್ರಜಾಪತಿ ತಮಗೆ ಉಪದೇಶಿಸುತ್ತಿದ್ದಾನೆ ಎಂದು ಪ್ರತಿಯೊಬ್ಬರೂ  ಅಂದುಕೊಳ್ಳುತ್ತಾರೆ. ದೇವತ್ವ, ದಾನವತ್ವ, ಮನುಷ್ಯತ್ವ--ಮೂರೂ ಗುಣಗಳು ಎಲ್ಲಾ ಮಾನವರಲ್ಲಿ ಇದೆ ಎಂದು ಅಂದುಕೊಂಡರೆ,  ದತ್ತ ದಯ ದಾಮ್ಯತ--ಈ ಮೂರು ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಜಾಪತಿ ಹೇಳುತ್ತಿದ್ದಾನೆ ಅಂದುಕೊಳ್ಳಬಹುದು. ಮತ್ತು, ಉಪದೇಶ ಪ್ರಜಾಪತಿಯ ಮಾತುಗಳಿಂದ ಒಂದೇ ಸಲಕ್ಕೆ ಮುಗಿಯುವುದಿಲ್ಲ. ಅದನ್ನು ಗುಡುಗು ನಿರಂತರವಾಗಿ ಮತ್ತೆ ಮತ್ತೆ ಹೇಳುತ್ತಿರುತ್ತದೆ. ಇದೇ ಕತೆಯ ಎರಡನೆಯ ಹಂತ. ಮೊದಲು ಪ್ರಜಾಪತಿಯ ಉಪದೇಶ ಮಾತ್ರವಾಗಿ ಇದ್ದದ್ದು  ಈಗ ಗುಡುಗಿನ ನುಡಿಯಾಗಿ ದೈವೀವಾಣಿಯಾಗಿ  ಮಾರ್ಪಡುತ್ತದೆ. ಇದು ದೈವೀವಾಣಿ ಎನ್ನುವುದು ಮೂಲದಲ್ಲೇ ಇರುವ ಮಾತು:  "ತದೇತದೇವೈಷಾ ದೈವೀವಾಗದನುವದತಿ ಸ್ತನಯಿತ್ನುರ್ದ ದ ದ ಇತಿ". ಮೊದಲು ದೇವತೆಗಳು ದಾನವರು ಮನುಷ್ಯರು ಪ್ರಜಾಪತಿಯಿಂದ ಉಪದೇಶವನ್ನು ಕೇಳಿ ಪಡೆದರು. ಈಗ ಆ ಉಪದೇಶ ಅವರು ಕೇಳದೆ ಪ್ರಕೃತಿಯ ಅಂಗವಾದ ಗುಡುಗಿನ ಮೂಲಕ ನಿರಂತರವಾಗಿ ಬರುತ್ತಿದೆ. ಹೀಗೆ ಪ್ರಜಾಪತಿಗೂ ಗುಡುಗಿಗೂ ಉಪನಿಷತ್ಕಾರ ಸಂಬಂಧ ಕಲ್ಪಿಸುತ್ತಾನೆ. ಮೊದಲು ದೇವತೆಗಳಿಗೆ ರಾಕ್ಷಸರಿಗೆ  ಮನುಷ್ಯರಿಗೆ ಪ್ರಜಾಪತಿ ಹೇಳಿದ ಮಾತು ಈಗ ಎಲ್ಲರೂ ಕೇಳುವಂತೆ ನಿರಂತರವಾಗಿ ಗುಡುಗಿನ ಮೂಲಕ ಆಕಾಶದಿಂದ ಬರುತ್ತಿದೆ.

ಎಲಿಯಟ್ ಈ ಕತೆಯನ್ನು ಸೃಜನಶೀಲವಾಗಿ ಅರ್ಥೈಸಿ ತನ್ನ ಪದ್ಯದಲ್ಲಿ  ಬಳಸಿಕೊಳ್ಳುತ್ತಾನೆ. ಕವನದ ಮೊದಲ ನಾಲ್ಕು ಭಾಗಗಳಲ್ಲಿ ಫಲವಂತಿಕೆಯಿಂದ ವಂಚಿತರಾದವರ ಬೇರೆ ಬೇರೆ ಚಿತ್ರಗಳಿವೆ. ಮೊದಲನೆಯ ಭಾಗದಲ್ಲೇ  ಈ ಕೆಳಗಿನ ಸಾಲುಗಳು ಬರುತ್ತವೆ:

What are the roots that clutch, what branches grow
Out of this stony rubbish? Son of man,
You cannot say, or guess, for you know only
A heap of broken images, where the sun beats,
And the dead tree gives no shelter, the cricket no relief,
And the dry stone no sound of water.

ಮುಂದೆ ಉದ್ದಕ್ಕೆ ಬೇರೆ ಬೇರೆ ಬಗೆಯ ಬರಡುತನ, ಬಂಜೆತನಗಳ ಚಿತ್ರಗಳು ಬರುತ್ತವೆ. ಹೆಂಗಸರ ಮತ್ತು ಗಂಡಸರ ಲೈಂಗಿಕತೆ ಯಾಂತ್ರಿಕವಾಗಿದೆ. ಇಲ್ಲಿ ಪ್ರೇಮ, ಫಲವಂತಿಕೆ ಇಲ್ಲ; ಗಂಡೂ ಹೆಣ್ಣೂ ಎರಡೂ ಆಗಿರುವ ಟೈರ್ಸಿಯಾಸ್ ಇದ್ದಾನೆ.  ಅವನಿಗೆ ತಿಳುವಳಿಕೆ ಇದೆ; ಆದರೆ ಫಲವಂತಿಕೆ ಇಲ್ಲ. ರೊಮ್ಯಾಂಟಿಕ್ ಭಾವನೆಯನ್ನು ಹುಟ್ಟಿಸಬಲ್ಲ ಚಂದ್ರ ಈಗ ಅಂಥಾ ಯಾವ ಭಾವನೆಯನ್ನಾಗಲೀ ವಾತಾವರಣವನ್ನಾಗಲೀ ಹುಟ್ಟಿಸುತ್ತಿಲ್ಲ. ಯಾಕೆಂದರೆ,--

O the moon shone bright on Mrs. Porter
And on her daughter
They wash their feet on soda water.

ಇಂಥಲ್ಲಿ ಪ್ರತಿಯೊಂದೂ ಬೆಂಕಿ ಹತ್ತಿ ಉರಿಯುತ್ತಿದೆ. ಇಲ್ಲಿ ನೀರಿಲ್ಲ, ಬರೀ ಬಂಡೆಯಿದೆ; ಬರೀ ಬಂಡೆ ಮತ್ತು ಮರಳು ತುಂಬಿದ ರಸ್ತೆಯಿದೆ. ಈ ರಸ್ತೆ ಸುತ್ತುತ್ತಾ ಬೆಟ್ಟಗಳ ಮೇಲಿಂದ ಸಾಗುತ್ತಿದೆ. ಆದರೆ ಈ ಬೆಟ್ಟಗಳು ಬಂಡೆಗಳಿಂದ ತುಂಬಿದ
ನೀರಿಲ್ಲದ ಬೆಟ್ಟಗಳು. ಅಲ್ಲಿ ನೀರಿದ್ದಿದ್ದರೆ  ವಿಶ್ರಮಿಸಿ ನೀರು ಕುಡಿಯಬಹುದಾಗಿತ್ತು. ಆದರೆ ಬಂಡೆಗಳ ಮಧ್ಯೆ ಯೋಚಿಸಿಕೊಂಡು ನಿಲ್ಲಲಾಗುವುದಿಲ್ಲ. ಬೆವರು ಹರಿಯುತ್ತದೆ, ಪಾದಗಳನ್ನು ಮರಳು ಸುಡುತ್ತಿದೆ. ಬಂಡೆಗಳ ಮಧ್ಯೆ ನೀರಿದ್ದಿದ್ದರೆ--ಇಲ್ಲಿ ನಿಲ್ಲಲಾಗುವುದಿಲ್ಲ, ಕೂರಲಾಗುವುದಿಲ್ಲ, ಮಲಗಲಾಗುವುದಿಲ್ಲ--ಈ ಬೆಟ್ಟಗಳಲ್ಲಿ ಮೌನವೂ ಇಲ್ಲ--ಬರೀ ಬಂಜೆ  ಗುಡುಗು ಮಾತ್ರ. ಮಳೆಯಿಲ್ಲ. ಇಲ್ಲಿ ಏಕಾಂತವೂ ಇಲ್ಲ. ಕೆಂಪು ಉರಿ ಮುಸುಡುಗಳು ದುರುಗುಟ್ಟಿ ನೋಡುವುವು ಬಿರುಕೊಡೆದ ಗೋಡೆ ಬಾಗಿಲುಗಳೆಡೆಯಿಂದ.

ಇಂಥಲ್ಲಿ, ಗಂಗೆ ಇಂಗಿ ಹೋಗಿರುವಾಗ, ತರಗೆಲೆಗಳು ಮಳೆಗಾಗಿ ಕಾದಿರುವಾಗ, ಹಿಮವಂತನ ಮೇಲೆ ದೂರದಲ್ಲಿ ಕಾರ್ಮುಗಿಲು ಕವಿದಿರುವಾಗ, ಕಾಡು ಮಗ್ಗರಿಸಿ ಮುದುರಿ ಬಿದ್ದಿರುವಾಗ, ಆಗ, ಆಗ ಎಲಿಯಟ್ಟನ ಕವನದ ಗುಡುಗು ದ ದ ದ ಎನ್ನುತ್ತದೆ. ಈ ಮೂಲಕ ಬರೀ ಬಂಡೆಗಳು ತುಂಬಿದ ಒಣ ನೆಲಕ್ಕೆ ನೀರು ತರಿಸುವುದು ಮಾತ್ರವಲ್ಲ; ಬರಡು ಸಂಬಂಧಗಳೂ ಫಲವಂತವಾಗುತ್ತವೆ ಅನ್ನುವುದು ಕವನದ ಆಶಯ.

ಬರಡು ಸಂಬಂಧಗಳು ಮತ್ತು ಬರಡು ನೆಲ,-- ಇವುಗಳಿಗೆ ಸಂಬಂಧಿಸಿದ ವಿವರಗಳನ್ನು ಎಲಿಯಟ್ ಕವನದಲ್ಲಿ ಒಂದು ಸೂತ್ರಕ್ಕೆ ನೇಯುವುದು ಉಪನಿಷತ್ತಿನ ಈ ಕಥೆ. ಅದಿಲ್ಲದಿದ್ದರೆ ತಾನು ಸೂಚಿಸಬಯಸುವ ಇತ್ಯಾತ್ಮಕ ಮೌಲ್ಯಗಳನ್ನು  ಇಷ್ಟು ಪ್ರಭಾವಶಾಲಿಯಾಗಿ ಸೂಚಿಸುವುದು ಎಲಿಯಟ್ ಗೆ ಕಷ್ಟವಾಗುತ್ತಿತ್ತು. ಅಲ್ಲದೆ, ಎಲಿಯಟ್ ಯುರೋಪಿನ ಪರಂಪರೆಯನ್ನು ತನ್ನ ಕಾವ್ಯದಲ್ಲಿ ಮರಳಿ ಸೃಷ್ಟಿಸಲು ಪ್ರಯತ್ನಿಸಿದವನು; ಮತ್ತು ಬಹಳ ದೊಡ್ಡ ಮಟ್ಟದಲ್ಲಿ ಈ ಪ್ರಯತ್ನದಲ್ಲಿ ಯಶಸ್ಸು ಪಡೆದವನು. ಅವನ ಕಾವ್ಯದಲ್ಲಿ ಇಟಾಲಿಯನ್ ಕವಿ ಡಾಂಟೆ, . ಫ್ರೆಂಚಿನ ಬಾದಿಲೇರ್, ಎಲಿಜಾಬೆಥನ್ ಕವಿ-ನಾಟಕಕಾರರು,.ಇಂಗ್ಲಿಷಿನ  ಆದಿ ಕವಿ ಜಾಫ್ರೆ ಛಾಸರ್, ಸ್ಪೆನ್ಸರ್  ಮೊದಲಾದವರು ಹೊಸ ಅರ್ಥವಂತಿಕೆಯಿಂದ ಮರುಬಳಕೆ ಆಗುತ್ತಾರೆ. ಹಾಗೆಯೇ ಅವನು ಉಪನಿಷತ್ತಿನ ಕತೆಯನ್ನು ಬಳಸುವ ಮೂಲಕ ಭಾರತೀಯ ಸಾಹಿತ್ಯ ಪರಂಪರೆಯ ಒಂದು ಮುಖ್ಯ ಕೊಂಡಿಯನ್ನು ತನ್ನ ಕಾವ್ಯದಲ್ಲಿ ಪುನರುಜ್ಜೀವನಗೊಳಿಸಿದ.

ಇಂಗ್ಲಿಷ್/ಅಮೆರಿಕಾದ ಯಾವ ವಿಮರ್ಶಕನೂ ಇದನ್ನು ಒಂದು ದೊಡ್ಡ ವಿಷಯ ಎನ್ನುವಂತೆ ಹೇಳಿದ್ದು ನಾನು ನೋಡಿಲ್ಲ. ಆದರೆ ಸಿ. ಡಿ. ನರಸಿಂಹಯ್ಯನವರಂಥ ನಮ್ಮ ವಿಮರ್ಶಕರು ಅದನ್ನೇ ಒಂದು ದೊಡ್ಡ ಮಾತಾಗಿ ಹೇಳುತ್ತಿದ್ದರು. ನಮಗೆ ಎಂ. ಎ.ಕ್ಲಾಸಿನಲ್ಲಿ ಈ ಪದ್ಯ ಪಾಠ ಮಾಡುತ್ತಿದ್ದಾಗ  ಭಾರತದ ಪುರಾತನ ತಿಳುವಳಿಕೆ ಮೂಲಕ ಪತನ ಹೊಂದಿರುವ ಯುರೋಪು ನಾಗರಿಕತೆ ಮತ್ತೆ ಪುನರುಜ್ಜೀವನಗೊಳ್ಳಬಹುದು ಎಂದು ಎಲಿಯಟ್ ಸೂಚಿಸುತ್ತಿದ್ದಾನೆ ಎನ್ನುತ್ತಿದ್ದರು. ಹಾಗೆ ಹೇಳುವುದು ಈ ಪದ್ಯವನ್ನು ತೀರಾ ಸಾರಾಸಗಟಾಗಿ ಓದಿದ ಹಾಗೆ ಅನ್ನಿಸುತ್ತದೆ. ಯುರೋಪಿನ ನಾಗರಿಕತೆ ಹಾಗೆ ನಮ್ಮದೂ ಪತನಹೊಂದಿದೆ. ಇಲ್ಲಿ ಇರುವುದು ನಮ್ಮ ಹಿರಿಯರ ಬುದ್ಧಿವಂತಿಕೆಯ ಉತ್ತುಂಗ ಸಾಧನೆಗಳಾದ ಉಪನಿಷತ್ತು, ಮಹಾಭಾರತ, ಗೀತೆ ಮೊಲಾದವುಗಳು  ಮಾತ್ರವೇ ಅಲ್ಲ; ಜಾತೀಯ ವೈಷಮ್ಯತೆ, ಹಿಂಸೆ, ಲಂಚ, ಸುಳ್ಳು, ಅದಕ್ಷತೆಗಳು ಯುರೋಪನ್ನು ಮೀರಿಸುವ ಪ್ರಮಾಣದಲ್ಲಿ ನಮ್ಮಲ್ಲಿವೆ.

ಹೀಗೆ ನಮ್ಮದನ್ನು ಈ ದೊಡ್ಡ ಕವಿ ಬಳಸಿದನೆಂದು ಸಂಭ್ರಮಿಸಿಕೊಳ್ಳುವುದು ವಸಾಹತುಶಾಹಿ ಆಡಳಿತದಲ್ಲಿ ರೂಪುಗೊಂಡ ನಮ್ಮ ಒಕ್ಕಲು ಮನೋಭಾವ ಇರಬಹುದು: ಧನಿಗಳು ಮನೆಗೆ ಬಂದರೆ ಸಂಭ್ರಮಿಸುವ ಒಕ್ಕಲಿನಂತೆ ಇಂಥಾ ಸಂದರ್ಭದಲ್ಲಿ ನಮ್ಮ ವಿಮರ್ಶಕರು ನಡೆದುಕೊಳ್ಳುತ್ತಾರೆ. ಆದರೆ ಎಲಿಯಟ್  ಉಪನಿಷತ್ತಿನ ವಿವರಗಳನ್ನು  ತನ್ನ ಉದ್ದೇಶಕ್ಕೆ  ಹೊಂದುತ್ತದೆ ಎನ್ನುವುದರಿಂದ  ಬಳಸುತ್ತಿದ್ದಾನೆ ಹೊರತು ಅದು ಭಾರತದ್ದು ಎಂಬ ಕಾರಣಕ್ಕಾಗಿ ಅಲ್ಲ. ದದದ ಕತೆ ಅವನ ಕ್ಲಾಸಿಕಲ್ ದೃಷ್ಟಿಕೋನಕ್ಕೆ, ಮೂಲತಃ ಪಾಪಿಯಾದ ಮನುಷ್ಯ ಶಿಸ್ತಿನ ಮೂಲಕ ಒಳ್ಳೆಯತನ ರೂಢಿಸಿಕೊಳ್ಳುತ್ತಾನೆ ಎಂಬ ದೃಷ್ಟಿಕೋನಕ್ಕೆ ಹೊಂದುವುದರಿಂದ ಆತ ಅದನ್ನು ಬಳಸಿದ್ದಾನೆ. ಅಲ್ಲದೆ  ಲೇಖಕ ತನ್ನ ಭಾವನೆಗಳನ್ನು ಮಾತ್ರವಲ್ಲದೆ ಬುದ್ಧಿಯನ್ನೂ ಉಪಯೋಗಿಸಿ ಕವಿತೆ ಕಟ್ಟಬೇಕಾಗುತ್ತದೆ. ಅವನೇ ಹೇಳುವಂತೆ ಕವಿಗೆ--ಎಲ್ಲಾ ಮನುಷ್ಯರಿಗಿರುವಂತೆ--ಇರುವುದು ಹೃದಯ ಒಂದೇ ಅಲ್ಲ; ಮೆದುಳು ಬಳ್ಳಿ, ಪಿತ್ಥಜನಕಾಂಗ ಮೊದಲಾದ ಇತರ ಅಂಗಗಳೂ ಇವೆ. ಹೀಗಾಗಿ ಭಾವನೆಗಳಂತೆ ಬುದ್ಧಿಗೂ ನೇರ ಪಡೆದ ಅನುಭವಗಳಂತೆ ಓದಿನಿಂದ ಪಡೆದದ್ದಕ್ಕೂ ಕಾವ್ಯದಲ್ಲಿ ಸ್ಥಾನ ಇರಬೇಕಾದ್ದು  ಕಾವ್ಯ ಅನುಭವದ ಸಮಗ್ರತೆ ಒಳಗೊಳ್ಳಬೇಕಾದರೆ ಅತ್ಯಗತ್ಯ.

ಬೇಂದ್ರೆಯವರ "ಸಹಸ್ರತಂತ್ರೀ ನಿಸ್ವನದಂತೆ" (ಅರಳು ಮರಳು, 1956) ಕವನದಲ್ಲಿ ಇದೇ ಕತೆ ಬೇರೆ ರೀತಿಯಲ್ಲಿ ಬಳಕೆಯಾಗಿದೆ. ಎಲಿಯಟ್ಟಿನ ಕವನದಲ್ಲಿ ಅದು ನೈತಿಕ ಮತ್ತು ಭೌತಿಕ ಬಂಜರು ನೆಲಕ್ಕೆ/ಬದುಕಿಗೆ ನೀರು/ಜೀವಜಲ ತರಬಲ್ಲ ದೈವೀವಾಣಿಯಾಗಿದ್ದರೆ ಬೇಂದ್ರೆಯವರ ಕವನದಲ್ಲಿ ಅದು ಸೃಷ್ಟಿಯ ಮಾಂಗಲ್ಯವನ್ನು ಹೆಚ್ಚಿಸುವ ಅಂಶವಾಗಿ ಪರಿಗಣಿತವಾಗಿದೆ. ಮೊದಲನೆಯ ಕೆಲವು ಸಾಲುಗಳು ಹೀಗಿವೆ:

ಸಹಸ್ರತಂತ್ರೀ ನಿಸ್ವನದಂತೆ
ಮಾತರಿಶ್ವನಾ ಘನಮನದಂತೆ
ಗುಡುಗಾಡುತ್ತಿದೆ ಗಗಗನದ ತುಂಬ
ಪ್ರಣವ ಪ್ರವೀಣನ ನಾದಸ್ತಂಭ.

ಲೋಕದಿಂದಲೇ ಉದಿಸಿದೆ ಸರ್ವ
ಐಕ್ಯ ಧರಿಸಿಯೇ ಆಳುವನೊರ್ವ
ಆ ಒರ್ವನೊಳೇ ಸರ್ವವು ಸೇರಿ
ಜಯವನು ಸಾರಲಿ ಧರ್ಮದ ಭೇರಿ

ದದದಾ ದದದೋಂ ದಮದಯ ದತ್ತೋಂ
ದಿಕ್ತಟ ತಟವಟ ಧಿಗಿದಂ ದಿಕ್ತೋಂ
ನಿರ್ದ್ವಂದ್ವದೊಳೆದ್ದಿತು ಓಂ ನಾದ
ತಾಂಡವೇಶ್ವರನ ಅಖಂಡವಾದ.

ಕೊನೆಯ ಸಾಲುಗಳು ಹೀಗಿವೆ:

ಸಹಸ್ರಾರವಿಂದೋತ್ಥಿತ ಬಾಲೆ
ಬ್ರಹ್ಮ ಹೃದಯರತಿ ಸುಷುಪ್ತ ಜ್ವಾಲೆ
ಏನಿದೆ ಎನಿದೆ ಏನಾ ಮೇಲೆ?
ಕೃಪಾಪುಷ್ಪಗಳ ಅನಂತಮಾಲೆ.

ಧರ್ಮಮೇಘವೇ ವರ್ಷಿಸುವಂತೆ
ಸತ್ಯದ ಸತ್ತ್ವವ ಸ್ಪರ್ಷಿಸುವಂತೆ
ಧರಣಿಯ ಕೆಚ್ಚಿಲ ಹರ್ಷಿಸುವಂತೆ
ಬರಲಿದೆ ಮಳೆ ಉದ್ಘರ್ಷಿಸುವಂತೆ--
ಸಹಸ್ರತಂತ್ರೀ ನಿಸ್ವನದಂತೆ.

 ಮೋಡಗಳು ನರ್ತಿಸುತ್ತಿವೆ. ನಾದ ಆಕಾಶವನ್ನು ತುಂಬಿದೆ. ಇದು ಪ್ರಣವದ ನಾದ. ಅನಾಹತನಾದ. ನರ್ತನ ಮತ್ತು ನಾದ--ಎರಡೂ ಮೋಡಗಳಿಂದ ಉಂಟಾಗಿವೆ. ಎರಡೂ ಭೂಮಿ ಅಂತರಿಕ್ಷಗಳನ್ನು ಒಳಗೊಳ್ಳುವಂಥಾದ್ದು. ಇಂಥಾ ಸಂದರ್ಭದಲ್ಲಿ ಮಂಗಳವಾದದ್ದು ನಡೆಯಬೇಕು. ಯಾಕೆಂದರೆ ಇದು  ಧರಣಿಯ ಕೆಚ್ಚಿಲು ಹರ್ಷಿಸುವಂತೆ ಮಳೆ ಬರುವ ಮೊದಲಿನ ನರ್ತನ, ಮೊದಲಿನ ನಾದ.

ಬೇಂದ್ರೆ ಕಾವ್ಯದಲ್ಲಿ ನರ್ತನ ಮತ್ತು ನಾದ ಬಹು ಮುಖ್ಯವಾದ ವಿಷಯಗಳು. ನರ್ತನದಿಂದಾಗಿ ಕಾಲವನ್ನು ಮೀರಬಹುದು; ನರ್ತನದಿಂದಾಗಿ ಕೀಸರು ಬೇಸರಗಳನ್ನು ಮೀರಿದ ಒಂದು ಸುಂದರ ಕಾಲಾತೀತದಲ್ಲಿ ಗಂಡು ಹೆಣ್ಣು ಇರಬಹುದು ಎನ್ನುವುದು ಅವರ "ಕುಣಿಯೋಣು ಬಾರಾ" ಕವನದಿಂದ ವ್ಯಕ್ತವಾಗುತ್ತಾ ಬಂದ ವಿಚಾರ. "ನಾದಲೀಲೆ"ಯಲ್ಲಿ, ಕಂಗೆಡಿಸುವ ಮಂಜು ಹಿಂದಿದೆ; ಕಂಗೊಳಿಸುವ ಕೆಂಪು ಮುಂದಿದೆ; ಈ ಸಂಧ್ಯಾಸಮಯದಲ್ಲಿ ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ ಮುಂಜಾವದ ಎಲರ ಮೂಸಿ ನೋಡುತ್ತಿವೆ;  ಕರೆವ ಕರುವು, ಕುಣಿವ ಮಣಕ ಬೀರುತ್ತಿರುವ ಪ್ರಾಣವಾಯು ಹೀರುತ್ತಿವೆ. ಇಂಥಲ್ಲಿ ಬೇಟೆಗಾರ ಬರಬಹುದು; ಹೀರುತ್ತಿರುವ ಪ್ರಾಣವಾಯು ಕುಣಿತಗಳನ್ನು ಅರ್ಥಹೀನ ಮಾಡಿಬಿಡಬಹುದು. ಆದರೆ, ಪರಸ್ಪರ ವಿರುದ್ಧ ಸೆಳೆತಗಳ ಈ ಸನ್ನಿವೇಶವನ್ನು  ಮೀರುವುದು ನಾದಲೀಲೆಯಿಂದ ಮತ್ತು ನರ್ತನದಿಂದ. ಆದ್ದರಿಂದಲೇ "ಕೋಲುಸಖಿ ಚಂದ್ರಮುಖಿ ಕೋಲೆ ನಾದಲೀಲೆ" ಎಂಬ ಸಾಲು ಪಲ್ಲವಿಯಾಗಿ ಬರುತ್ತದೆ. "ಸಹಸ್ರತಂತ್ರೀ ನಿಸ್ವನದಂತೆ"ಯಲ್ಲಿ  ನಾದ ಮತ್ತು ನರ್ತನಗಳು ಇದಕ್ಕಿಂತ ಹೆಚ್ಚು ವ್ಯಾಪಕ ಮಟ್ಟದಲ್ಲಿ ಜೊತೆ ಸೇರಿವೆ.  ಇಲ್ಲಿ ಇಡೀ ವಿಶ್ವಕ್ಕೆ ಸಂಬಂಧಿಸಿದ ವಿವರಗಳಲ್ಲಿ ನಾದ ಮತ್ತು ನರ್ತನಗಳು ಜೊತಗೂಡಿವೆ. ಮೋಡಗಳ ನರ್ತನ ಮತ್ತು ನಾದದಿಂದ ಅಂತರಿಕ್ಷ ತುಂಬಿಕೊಂಡಿದೆ; ಅದರಿಂದಾಗಿ ಇಡೀ ಧರಣಿಯ ಕೆಚ್ಚಿಲು ತುಂಬಿಕೊಳ್ಳಲಿದೆ.

ಭಾಷೆಯನ್ನು ಬೇಂದ್ರೆ ಎಷ್ಟು ಪ್ರಭಾವಶಾಲಿಯಾಗಿ ಬಳಸುತ್ತಾರೆ ಎನ್ನುವುದಕ್ಕೆ ದದದಾ ದದದೋಂ ದಮದಯ ದತ್ತೋಂ ಎಂಬ ಒಂದು ಸಾಲೇ ಉದಾಹರಣೆಯಾಗಿ ಸಾಕು. ಇದು ದದದ ಕತೆ ನೆನೆಪಿಸುತ್ತದೆ; ಜೊತೆಗೆ ಮದ್ದಳೆಯ ಬಡಿತವನ್ನು ಸೂಚಿಸುತ್ತದೆ; ನರ್ತನದ ಹೆಜ್ಜೆಗತಿಗಳ ಸೂಚಕ ಶಬ್ದಗಳಾದ ತತ್ತಿಕಿಟ ತರಿಕಿಟಗಳನ್ನು ನೆನಪಿಸುವವೂ ಆಗಿವೆ. ಇಂಥಲ್ಲಿ ಪದಗಳು ಬೇಂದ್ರೆಯವರಿಗೆ ಪ್ರಿಯವಾದ ಶ್ಲೇಷಾರ್ಥಗಳನ್ನು ಮೀರಿ ಧ್ವನ್ಯರ್ಥಗಳನ್ನು ಪಡೆಯುತ್ತವೆ.


ಅಡಿಗರು ಬೇಂದ್ರೆಯವರನ್ನು ಅವರ ನಾದಮಯತೆಗಾಗಿ ಟೀಕಿಸುತ್ತಿದ್ದರು. ಇವರಿಗೆ ಅರ್ಥಕ್ಕಿಂತ ನಾದ ಮುಖ್ಯ, ನಾದಕ್ಕಾಗಿ ಅರ್ಥವನ್ನು ತ್ಯಾಗ ಮಾಡುತ್ತಾರೆ ಎನ್ನುತ್ತಿದ್ದರು. ಆದರೆ ಈ ಮಾತು ಪೂರ್ತಿ ನಿಜ ಅಲ್ಲ ಎನ್ನಿಸುತ್ತದೆ. "ಆ ಅದೂ ತುಂಬಿ ಈ ಇದೂ ತುಂಬಿ" ಎಂಬಿತ್ಯಾದಿ ಸಾಲುಗಳಲ್ಲಿ ಬೇಂದ್ರೆ ನಾದಕ್ಕಾಗಿ ಅರ್ಥ ತ್ಯಾಗ ಮಾಡುವುದು ನಿಜ. ಆದರೆ ಬೇಂದ್ರೆ ನಾದವನ್ನು ಒಂದು ತಾತ್ವಿಕ ಪರಿಕಲ್ಪನೆಯಾಗಿಯೂ ಬಳಸುತ್ತಿದ್ದಾರೆ ಎಂಬುದನ್ನು ನಾವು ಗುರುತಿಸಬೇಕು. ಇಡೀ ವಿಶ್ವವೇ ಪ್ರಣವದ ನಾದದಿಂದ ತುಂಬಿದ ಗಳಿಗೆಯ ಬಗ್ಗೆ "ಸಹಸ್ರತಂತ್ರೀ ನಿಸ್ವನದಂತೆ"ಯಂಥಾ ಪದ್ಯಗಳಲ್ಲಿ ಅವರು ಬರೆಯುತ್ತಾರೆ. ಇಂಥಲ್ಲಿ ಅರ್ಥ ಮುಖ್ಯವಾಗುವುದಿಲ್ಲ; ಇದು ಅರ್ಥವನ್ನು, ಭಾಷೆಯನ್ನು ಮೀರಿದ ಸ್ಥಿತಿ.

ವೈಯಕ್ತಿಕವಾಗಿ ನನಗೆ ಈ ಕವನಕ್ಕಿಂತ ಎಲಿಯಟ್ಟಿನ ಪದ್ಯ ಹೆಚ್ಚು ಇಷ್ಟ. ಇಲ್ಲಿ ಅವನು ಆಧುನಿಕ ನಾಗರಿಕತೆಯ ಪತನದ ಚಿತ್ರ ಕೊಟ್ಟು ಕೊನೆಯಲ್ಲಿ ಇದರಂದ ಹೊರದಾರಿಯ  ಒಂದು ಸಾಧ್ಯತೆಯೆಂದು ದದದ ಉಲ್ಲೇಖಿಸುತ್ತಾನೆ. ಬೇಂದ್ರೆಯವರಲ್ಲಿ ಪತನದ, ಕರಾಳತೆಯ ಚಿತ್ರಗಳು ಕಮ್ಮಿ. ಪ್ರಣವದ ನಾದ ಅಂತರಿಕ್ಷವನ್ನು ತುಂಬಿತು ಎಂದಾಗ ಭೋರ್ಗರೆದು ಬರುವ ಯುದ್ಧವಿಮಾನಗಳ ಸದ್ದನ್ನು ಮರೆಯುವುದು ಹೇಗೆ? ಸಖ ಸಖಿಯರ ಕುಣಿತದ ಬಗ್ಗೆ ಓದುವಾಗ ಅವರೇ ಸೂಚಿಸಿದ ಕುರುಡು ಕಾಂಚಾಣದ ಕುಣಿತ ಹೇಗೆ ಮರೆಯುವುದು? ಬೇಂದ್ರೆಯವರ ಈ ಕವನ ಅನುಭವದ ಮಂಗಲಮುಖವನ್ನು ಮಾತ್ರ
ಕಾಣಿಸುತ್ತದೆ. ವಿಭಿನ್ನ ಕುಣಿತ, ನಾದಗಳನ್ನು ಒಂದೇ ಕಾವ್ಯಶರೀರದಲ್ಲಿ ಹಿಡಿಯುವುದಿಲ್ಲ. ಎಲಿಯಟ್ ಕವನ ಕೊಡುವ  ಅನುಭವ ಹೆಚ್ಚು ಸಮಗ್ರವಾದದ್ದು.

ನನಗೆ ತಿಳಿದಂತೆ ದದದ ಬಳಸಿ ರಚಿತವಾದ ಕವನಗಳು ಇವು ಎರಡು. ದದದಕ್ಕೆ ಕಾವ್ಯ ರೂಪದ ವ್ಯಾಖ್ಯಾನಗಳು ಇವು. ಇನ್ನೂ ಬೇರೆ ಬಗೆಯಲ್ಲಿ  ಈ ಉಪನಿಷತ್ ಕಥೆಯನ್ನು ಬಳಸಲು ಸಾಧ್ಯ.  ಹಾಗೆ ಬಳಸಲು ಈ ಲೇಖಕನೂ ತನ್ನ "ಮಾತಾಡುವ ಮರ" ಕವನದಲ್ಲಿ  ಪ್ರಯತ್ನಿಸಿದನೆಂದು  ಇಲ್ಲಿ ವಿನಮ್ರವಾಗಿ ಸೂಚಿಸಬಯಸುತ್ತೇನೆ. ಇಂಥವುಗಳ ಬಳಕೆ ಹೆಚ್ಚುತ್ತಾ ಹೋದಂತೆ ದದದ ಬೇರೆ ಬೇರೆ ರೀತಿಯಲ್ಲಿ ಹೊಸತೇ ಆಗಿ ರೂಪು ತಾಳುತ್ತಾ ಹೋಗುತ್ತದೆ. ಒಂದು ಕೃತಿ ಬದುಕುವುದೇ ಹೀಗೆ. ಕಾಲಾಂತರದಲ್ಲಿ ಬೇರೆ ಬೇರೆ ಅರ್ಥಗಳಲ್ಲಿ ರೂಪಗಳಲ್ಲಿ--ಅನುವಾದಗಳು, ರೂಪಾಂತರಗಳು, ಭಿತ್ತಿಯ --ಎಲ್ಯೂಷನ್ನಿನ--ಬಳಕೆ ಮೊದಲಾದವು ಹೀಗೆ ಒಂದು ಹಳೆಯ ಕೃತಿ ಮತ್ತೆ ಜೀವ ಪಡೆಯುವ ಕ್ರಮ.  ಅವುಗಳ ಒಟ್ಟು  ಮೊತ್ತವೇ ಒಂದು ಸಾಂಸ್ಕೃತಿಕ/ಸಾಹಿತ್ಯಿಕ/ಯೋಚನಾ ಪರಂಪರೆ. ಆ ಇಡೀ ಪರಂಪರೆಯನ್ನು ಮತ್ತೊಬ್ಬ ಹೊಸ ಲೇಖಕ ಬಳಸಿ ಮತ್ತೆ ಆ ಪರಂಪರೆಯನ್ನು ಹರಿಯಬಿಡುತ್ತಾನೆ;  ಅದಕ್ಕೆ ಹೊಸತು ಸೇರಿಸಿ ಎಲ್ಲವನ್ನೂ ಮತ್ತೆ ಹೊಸತಾಗಿ ಅರ್ಥೈಸುವಂತೆ ಮಾಡುತ್ತಾನೆ.

ದದದಕ್ಕೆ ನನ್ನ ಗೆಳೆಯ ಕವಿ ಕಿರಣ ಕಾವ್ಯನಾಮದ ಕುತ್ಯಾಳ ನಾಗಪ್ಪ ಗೌಡರು ಹೊಸ  ಒಂದು ಅರ್ಥ ಸೂಚಿಸಿದ್ದಾರೆ. ಪ್ರಜಾಪತಿ ದ  ಎಂದು ಅರ್ಥವಾಯಿತೇ ಎಂದು ಕೇಳಿದಾಗ ಒಂದು ಗುಂಪು "ಅರ್ಥವಾಯಿತು. ದರ್ಪಣ  ಎಂದು ಉಪದೇಶಿಸುತ್ತಿದ್ದೀಯೆ" ಎನ್ನುತ್ತದೆ.  ಅದು ಉಪನಿಷತ್ತಿನ ನಂತರ ಬೆಳೆದು ಬಂದ ನೀತಿಯ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಮುಖ್ಯವಾದದ್ದು. ಯಾಕೆಂದರೆ ದಾನವನ್ನು ದಾನಶೂರ ಎನ್ನಿಸಿಕೊಳ್ಳಲು ಮಾಡಿರಬಹುದಲ್ಲ? ನಮ್ಮ ದೊಡ್ಡ ದೊಡ್ಡ ದೇವಸ್ಥಾನಗಳ ಹುಂಡಿಗೆ ಹಣ, ಚಿನ್ನ ದಾನ ಮಾಡುವ ಬಹುತೇಕ ಮಂದಿ ತಮ್ಮ ಕಳ್ಳ ಹಣಕ್ಕೆ ಒಂದು ಹೊರದಾರಿ ಕಾಣಲು ಹಾಗೆ ಮಾಡುತ್ತಾರೆ. ಅಥವಾ Tolstoyನ Anna Kareninaದ  ಒಂದು ಪಾತ್ರವಾದ Vronsky ಮಾಡುವಂತೆ ಹೆಣ್ಣನ್ನು ಗೆಲ್ಲುವುದಕ್ಕಾಗಿಯೂ ಮಾಡಿರಬಹುದು. ದಯೆಯೂ ಹಾಗೆಯೇ ನಾಟಕವಿರಬಹುದು; ದಾಮ್ಯತವೂ ನಾಕು ಜನರ ಎದುರು ಕಟ್ಟಿರುವ ವೇಷವಿರಬಹುದು. ಇನ್ನೊಬ್ಬರನ್ನು  ಈ ವಿಷಯದಲ್ಲಿ ಮೋಸಗೊಳಿಸಬಹುದು--ಯಶಸ್ವಿಯಾಗಿಯೇ. ಆದರೆ ತಾನು ನಿಜವಾಗಿಯೂ ಇನ್ನೊಬ್ಬರ ಕುರಿತ ದಯೆಯಿಂದ, ನಿಜವಾದ ಸಂಯಮದಿಂದ, ನಿಜವಾದ ಅಪರಿಗ್ರಹ ಬುದ್ಧಿಯಿಂದ ನಡೆದುಕೊಂಡೆನೇ ಎಂಬುದನ್ನು ಹಾಗೆ ನಡೆದುಕೊಂಡವನು ತನ್ನ ಮನಸ್ಸಿನ ಒಳಗಿನ ಕನ್ನಡಿಯನ್ನು ನೋಡಿ  ಖಂಡಿತ ಮಾಡಿಕೊಳ್ಳಬೇಕು. ತನ್ನದೇ ಮನಸ್ಸಿನ ಒಳಗಿನ ದರ್ಪಣದಲ್ಲಿ ಸಾಬೀತುಪಡಿಸಿಕೊಳ್ಳಬೇಕು. ಹೀಗಾಗಿ ದದದಕ್ಕೆ  ದಾಮ್ಯತ ದತ್ತ ದಯಗಳಷ್ಟೇ ದರ್ಪಣ ಎಂಬ ಅರ್ಥವೂ ಮುಖ್ಯವಾದದ್ದು.

********

ಸೂಚನೆ:¨ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ--ಇದರ ಪ್ರಕಟಣೆಗಳನ್ನು ನೀವೀಗ ನೇರವಾಗಿ ಬೋಧಿ ಟ್ರಸ್ಟಿನಿಂದ ಕೊಂಡುಕೊಳ್ಳಬಹುದು. Bodhi Trust, SB Account Number 1600101008058, Canara Bank, Yenmur--574328, Sullia Taluk, Dakshina Kannada District, Karnataka--ಇಲ್ಲಿಗೆ ನಿಮಗೆ ಬೇಕಾದ ಪುಸ್ತಕಗಳ ಮೊತ್ತ ರವಾನಿಸಿ; ಆ ಮೇಲೆ  ನಿಮ್ಮ ಅಂಚೆ ವಿಳಾಸವನ್ನು bodhitrustk@gmail.com --ಈ ವಿಳಾಸಕ್ಕೆ ಇಮೇಲ್ ಮಾಡಿ. ಪುಸ್ತಗಳನ್ನು ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ. ಭಾರತದಿಂದ ಹೊರಗಿರುವವರು ಅಂಚೆ ವೆಚ್ಚ ಸೇರಿಸಿ ಕಳಿಸಿ. ಪುಸ್ತಕದ ಬೆಲೆ ನಮೂದಿತ ಬೆಲೆಗೆ ಸಮಾನವಾದ ಡಾಲರ್ ಮೊತ್ತ. 
ಬಳಸಬೇಕಾದ ಕೋಡ್:  IFSC: CNRB0001600

ಇವು ಮಾರಾಟಕ್ಕೆ ಲಭ್ಯವಿರುವ ಪುಸ್ತಕಗಳು. ಎಲ್ಲಾ ಪುಸ್ತಕಗಳ ಲೇಖಕ ನಾನು, ರಾಮಚಂದ್ರ ದೇವ.
1. ಸಮಗ್ರ ನಾಟಕಗಳು, ಸಂಪುಟ 2 (ಪುಟ್ಟಿಯ ಪಯಣ, ಸುದರ್ಶನ--ಈ ಎರಡು ನಾಟಕಗಳಿವೆ). ರೂ60.00  
2. ಸಮಗ್ರ ನಾಟಕಗಳು, ಸಂಪುಟ 3 (ಅಶ್ವತ್ಥಾಮ, ಹುಲಿಯ ಕಥೆ, ದಂಗೆ--ಈ ಮೂರು ನಾಟಕಗಳು) ರೂ75.00
3. ಮಾತಾಡುವ ಮರ, ಸಮಗ್ರ ಕಾವ್ಯ, 1964--2003. ರೂ100.00
4. ಹ್ಯಾಮ್ಲೆಟ್. ಶೇಕ್ಸ್ಪಿಯರ್ ಅನುವಾದ. ರೂ50.00
5. ಮುಚ್ಚು ಮತ್ತು ಇತರ ಲೇಖನಗಳು. ರೂ60.00. (ವಡ್ಡಾರಾಧನೆ, ಮಹಾಭಾರತ, ಶಾಕುಂತಲ, ಶೇಕ್ಸ್ಪಿಯರ್, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಕೋಡಂಗಿಗಳು ಮೊದಲಾದ ವಿಷಯ ಕುರಿತು ಲೇಖನಗಳಿವೆ).

No comments:

Post a Comment