Tuesday, September 28, 2010

ಕ್ಯಾಮೆರಾ ಕಣ್ಣು

ಕೆ. ಎಸ್. ರಾಜಾರಾಂ ನಮ್ಮ ಮುಖ್ಯ ಛಾಯಾಚಿತ್ರಗ್ರಾಹಕರಲ್ಲಿ ಒಬ್ಬರು. ಸುಮಾರು ಮೂರು ದಶಕಗಳಿಗೂ ಮಿಕ್ಕಿ ಅವಧಿಯಿಂದ ಈ ಕ್ಷೇತ್ರದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.  ಛಾಯಾಗ್ರಹಣಕ್ಕೆ ಮಾತ್ರ ಅವರು ತಮ್ಮನ್ನು ಸೀಮಿತಗೊಳಿಸಿಕೊಂಡಿಲ್ಲ. ಛಾಯಾಗ್ರಹಣದ ಬಗ್ಗೆ ಶಿಬಿರಗಳನ್ನು ನಡೆಸಿ ಕಲಿಯಬೇಕೆನ್ನುವವರಿಗೆ  ಹೇಳಿಕೊಟ್ಟಿದ್ದಾರೆ. ಯುವ ಪ್ರತಿಭಾವಂತ ಛಾಯಾಗ್ರಾಹಕರಿಗೆ ಅವಕಾಶಗಳನ್ನು ಒದಗಿಸಿಕೊಟ್ಟಿದ್ದಾರೆ. ಹೀಗೆ ಅವಕಾಶಗಳನ್ನು ಒದಗಿಸುವ ಒಂದು ಕ್ರಮವಾಗಿ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಆಯ್ದ ಪ್ರತಿಭಾವಂತ ಛಾಯಾಗ್ರಹಕರ ಪ್ರಾತಿನಿಧಿಕ ಚಿತ್ರಗಳ ಪ್ರದರ್ಶನ ಏರ್ಪಡಿಸುತ್ತಾರೆ. ಈ ಸಲವೂ ಸುಮಾರು ಇಪ್ಪತ್ತು ಜನ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನವಿದೆ. ಇವರಲ್ಲಿ ಡಿ. ಆರ್. ನಾಗರಾಜ್ ಮಗಳು ಅಮೂಲ್ಯ ಸೇರಿದ್ದಾರೆ. ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡ ಅಮೂಲ್ಯ ಹೀಗೆ ತನ್ನ ಸೃಜನಶೀಲತೆಗಾಗಿ ಒಂದು ಕ್ಷೇತ್ರವನ್ನು ಆರಿಸಿಕೊಂಡು ಬೆಳೆಯುತ್ತಿರುವುದು ನಾಗರಾಜ್ ಸ್ನೇಹಿತರಾದ ನಮಗೆಲ್ಲಾ ಸಂತೋಷದ ವಿಷಯ. ಹಗ್ಗೋಡು ಪ್ರದರ್ಶನದಲ್ಲಿ ಭಾಗವಹಿಸುತ್ತಿರುವ ಇನ್ನೊಬ್ಬ ಪ್ರತಿಭಾವಂತ ಕೇಶವ ಅನನ್ಯ. ಎ. ಎನ್ ಮುಕುಂದ್, ಚೆನ್ನಕೇಶವ, ಚರಣ ಮೊದಲಾದವರು ಛಾಯಾಗ್ರಹಣ ಕುರಿತು ತರಗತಿಗಳನ್ನು ನಡೆಸಲಿದ್ದಾರೆ.
ಕಲಿಯುವವರಿಗೆ ಒಳ್ಳೆಯ ಅವಕಾಶ.

ಹೆಗ್ಗೋಡಿನ ಈ ಪ್ರದರ್ಶನದ ಅವಕಾಶ ಮುಖ್ಯವಾದದ್ದು. ಯಾಕೆಂದರೆ ಹೆಗ್ಗೋಡಿನಲ್ಲಿ ತುಂಬಾ ಜನ ಈ ಚಿತ್ರಗಳನ್ನು ನೋಡುತ್ತಾರೆ. ಅಲ್ಲಿಗೆ ಬರುವವರೆಲ್ಲರೂ ಕಲೆಯ ವಿವಿಧ ಆಯಾಮಗಳಲ್ಲಿ ಆಸಕ್ತರು. ಬಂದ ಮೇಲೆ ಹೆಗ್ಗೋಡಿನಲ್ಲಿ ಛಾಯಾಚಿತ್ರ, ಸಿನೆಮಾ, ನಾಟಕ ನೋಡುವುದು, ಚರ್ಚೆಗಳನ್ನು ಕೇಳುವುದು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ. ಖಂಡಿತವಾಗಿ ಬೆಂಗಳೂರು ಮುಂಬೈಗಳಲ್ಲಿ ಬಂದದ್ದಕ್ಕಿಂತ ಹೆಚ್ಚು ಜನ ನೋಡುಗರು ಹೆಗ್ಗೋಡಿನಲ್ಲಿ ಸಿಗುತ್ತಾರೆ. ಬರೀ ನೋಡುಗರಲ್ಲ__ಗಂಭೀರ ನೋಡುಗರು. ಪೇಟೆಗಳಲ್ಲಿ ಎಷ್ಟು ಜನ ನೋಡಲು ಬರುತ್ತಾರೆ ಎಂಬುದಕ್ಕೆ ಎಂ. ಎಸ್. ಮೂರ್ತಿ ಇತ್ತೀಚೆಗೆ ಬರೆದ ಒಂದು ಲೇಖನ ಸಾಕ್ಷಿಯಾಗಬಲ್ಲುದು. ಎಲ್ಲಾ ಪತ್ರಿಕೆಯವರನ್ನು ನೋಡಿ ಆಸಕ್ತರನ್ನು ನೋಡಿ ಆಮಂತ್ರಣ ಕೊಟ್ಟು ಬಂದರೆ ಮುಂಬೈಯಲ್ಲಿ ಅವರ ಚಿತ್ರಪ್ರದರ್ಶನ ನೋಡಲು ಬಂದವರ ಸಂಖ್ಯೆ ಬೆರಳುಗಳಿಗಿಂತ ಕಮ್ಮಿ. ಪೇಟೆಗಳಲ್ಲಿ ಕಲೆಗೆ ಮತ್ತಿತರ ಬೌದ್ಧಿಕ ಹಸಿವುಗಳನ್ನು ಇಂಗಿಸಿಕೊಳ್ಳಲು ಬೇಕಾದ ಆರಾಮ ಇಂದು ಬಹುತೇಕ ಜನರಿಗೆ ಲಭ್ಯವಾಗುತ್ತಿಲ್ಲ. ಮನರಂಜನೆಗೆ ಬೇಕಾದಷ್ಟನ್ನು ಟೀವಿಗಳು ಒದಗಿಸುವುದರಿಂದ ಬಹುತೇಕ ಜನ ಅಷ್ಟಕ್ಕೆ ತೃಪ್ತರಾಗುತ್ತಾರೆ. ಇಂಥಲ್ಲಿ ಸಣ್ಣ ಸಣ್ಣ ಹಳ್ಳಿಗಳಲ್ಲಿರುವ ಸಂಸ್ಥೆಗಳು ನಿಜವಾದ ಸಾಂಸ್ಕೃತಿಕ ತಾಣಗಳು.

ರಾಜಾರಾಂ ಈ ಪ್ರದರ್ಶನದ ಸಮಯಕ್ಕೆ ಒಂದು ಪ್ರಶ್ನೆ ಎತ್ತಿದ್ದಾರೆ. ಈಗ ತಾಂತ್ರಿಕವಾಗಿ ತುಂಬಾ ಸೊಫಿಸ್ಟಿಕೇಟೆಡ್ ಕ್ಯಾಮೆರಾಗಳು ಬಂದಿವೆ. ಹೀಗಾಗಿ ಹಿಂದಿನವರಂತೆ ನೆರಳು ಬೆಳಕು ಬಣ್ಣಗಳ ಪರಿಣಾಮ  ಉಂಟು ಮಾಡಲು ಹೆಚ್ಚು ಕಷ್ಟ ಪಡಬೇಕಿಲ್ಲ. ಅಂಥಲ್ಲಿ ಒಬ್ಬ ಛಾಯಾಚಿತ್ರಗ್ರಾಹಕನ ಪ್ರಾಮುಖ್ಯತೆ ಹೇಗೆ ನಿರ್ಧಾರವಾಗುತ್ತದೆ?__ ರಾಜಾರಾಂ ಅವರ ಈ ಪ್ರಶ್ನೆ ಛಾಯಾಚಿತ್ರಕಾರರಿಗೆ ಮಾತ್ರವಲ್ಲ, ನಾಟಕ, ಸಿನೆಮಾ ಮೊದಲಾದ ಕ್ಷೇತ್ರಗಳ ಕಲಾವಿದರಿಗೂ ಅನ್ವಯಿಸುವಂಥದು. ಉದಾಹರಣೆಗೆ ನಾಟಕದಲ್ಲಿ ಅಪೇಕ್ಷಿತ ಪರಿಣಾಮಗಳನ್ನು ತಾಂತ್ರಿಕತೆಯ ಇಂದಿನ ಯುಗದಲ್ಲಿ ತರುವುದು ಸುಲಭ. ನಾನು ನೋಡಿದ ಶೇಕ್ಸ್ಪಿಯರಿನ ಮ್ಯಾಕ್ಬೆಥ್  ನಾಟಕದ ಒಂದು ಬ್ರಿಟಿಷ್ ಪ್ರದರ್ಶನ ಇಲ್ಲಿ ನೆನಪಾಗುತ್ತದೆ. ಅದರಲ್ಲಿ ಜಕ್ಕಿಣಿಯರು ಅಕ್ಷರಶಃ ಗಾಳಿಯಲ್ಲಿ ತೇಲಾಡುತ್ತಾರೆ. Hover through the fog and filthy air ಎಂಬ ಮೂಲದ ಸಾಲುಗಳನ್ನು ಅವರು ದೃಶ್ಯೀಕರಿಸಿ ತೋರಿಸಿದ್ದರು. ತಾಂತ್ರಿಕ ಪರಿಣತಿಯಿಂದಾಗಿ ಅದು ಸಾಧ್ಯವಾಯಿತು. ಬಿ. ವಿ. ಕಾರಂತರ ಇದೇ ನಾಟಕದ ಪ್ರದರ್ಶನವಾದ ಬರ್ನಂ ವನದಲ್ಲಿ ಜಕ್ಕಣಿಯರು ನೆಲದ ಮೇಲೆ  ಕುಣಿಯುವುದನ್ನಷ್ಟೇ ತೋರಿಸುತ್ತಾರೆ. ಆದರೆ, ಮರದ ಬೊಡ್ಡೆಯಂತೆ ರಂಗದ ಮೇಲೆ ನಿಂತಿದ್ದ ಅವರು ಇದ್ದಕ್ಕಿದ್ದಂತೆ ಕಾಲು ನೆಲಕ್ಕೆ ಅಪ್ಪಳಿಸಿ ಕುಣಿಯತೊಡಗುತ್ತಾರೆ--ಭೂತಗಳು ಕುಣಿದಂತೆ; ಇದು ವರೆಗೆ ಪ್ರಶಾಂತವಾಗಿದ್ದ ಯಾವುದನ್ನೋ ಒದ್ದು ಎಬ್ಬಿಸುವವರಂತೆ; ಕೇಡನ್ನು ಆಹ್ವಾನಿಸಿ ಪ್ರಕೃತಿಗೇ ಜ್ವರ ಬರಿಸಿ ನಡುಗಿಸುವವರಂತೆ. ನನಗೆ  ಆಧುನಿಕ ತಾಂತ್ರಿಕತೆಯ ಮೊರೆಹೋಗದ, ಆದರೆ ಸೃಜನಶೀಲ ಅರ್ಥೈಸುವಿಕೆಯಾದ ಕಾರಂತರ ಪ್ರಯೋಗವೇ ಹೆಚ್ಚು ಚೆನ್ನಾಗಿದೆ ಅನ್ನಿಸಿತು. ಬ್ರಿಟಿಷ್ ಪ್ರಯೋಗ ಮೂಲದ ಸಾಲುಗಳನ್ನು ದೃಶ್ಯೀಕರಿಸಿ ತೋರಿಸಿದರೆ ಕಾರಂತರ ಪ್ರಯೋಗ ಮೂಲದ ಸಾಲುಗಳ ಹಿಂದಿನ ಸತ್ವವನ್ನು ನಮ್ಮೆದುರು ತೋರಿಸುತ್ತದೆ.

ಛಾಯಾಗ್ರಹಣದಿಂದಲೇ ಒಂದು ಉದಾಹರಣೆ ತೆಗೆದುಕೊಳ್ಳುತ್ತೇನೆ. ಟಿ. ಎಸ್. ಸತ್ಯನ್ ತೆಗೆದ ನೆಹರೂ ಚಿತ್ರ ಪ್ರಸಿದ್ಧವಿದೆ. ತುಂಬಾ ದಿನ ಅದಕ್ಕಾಗಿ ಪ್ರಯತ್ನಿಸಿ ಕೊನೆಗೆ ಹಿಂಬದಿಯಿಂದ ಸೌಥ್ ಬ್ಲಾಕಿನ ಕಿಟಿಕಿಗಳ ಮೂಲಕ ಬೆಳಕು ತೂರಿ ಬರುತ್ತಿದ್ದಾಗ ಈಗ ಪ್ರಖ್ಯಾತವಾಗಿರುವ__ನೆಹರೂರನ್ನು ಹಿಂಬದಿಯಿಂದ ತೋರಿಸುವ__ ಆ ಚಿತ್ರ ತೆಗೆದರಂತೆ. ನೆರಳು ಬೆಳಕು ದೃಷ್ಟಿಯಿಂದ, ನೆಹರೂರ ಚಿಂತನಶೀಲ ವ್ಯಕ್ತಿತ್ವ ಚಿತ್ರಿಸುತ್ತದೆ ಎಂಬ ದೃಷ್ಟಿಯಿಂದ ಚೆನ್ನಾಗಿದೆ. ಇದನ್ನು ನೋಡಿದಾಗ ರಘು ರೈ ತೆಗೆದ ಇಂದಿರಾ ಗಾಂಧಿಯವರ ಚಿತ್ರ ನೆನಪಾಗುತ್ತದೆ. ಇದೂ ಹಿಂಬದಿಯಿಂದ ತೆಗೆದ ಚಿತ್ರವೇ. ಇದರಲ್ಲಿ ನೆಳಲು ಬೆಳಕುಗಳ ವಿಶೇಷ ಸಂಯೋಜನೆಯೇನೂ ಇಲ್ಲ. ಆದರೆ ಈ ಚಿತ್ರ  ಭಾರತ ಸರಕಾರ ಇಂದಿರಾ ಕಾಲದಲ್ಲಿ ಹೇಗೆ ನಡೆಯುತ್ತಿತ್ತು ಎಂಬ ಚಿತ್ರ ಕೊಡುತ್ತದೆ. ಚಿತ್ರದಲ್ಲಿ ಇಂದಿರಾ ಗಾಂಧಿ ಏನೋ ಬರೆಯುತ್ತಿದ್ದಾರೆ. ಅವರ ಇಡೀ ಕ್ಯಾಬಿನೆಟ್ಟು ಅವರೆದುರು ವಿನೀತವಾಗಿ ನಿಂತಿದೆ. ಹೆಚ್ಚಿನವರು ವಯಸ್ಸಾದವರು. ಖಾದಿ ಟೊಪ್ಪಿ ಖಾದಿ ಜುಬ್ಬ ಹಾಕಿದ್ದಾರೆ. ಅಂದರೆ ಸ್ವಾತಂತ್ರ್ಯ ಚಳವಳಿಗಾರರ ತಲೆಮಾರಿಗೆ ಸೇರಿದವರು ಅಥವಾ ಅದರ ಜೊತೆ ನೇರ ಸಂಪರ್ಕ ಇದ್ದವರು. ಒಬ್ಬ ಮಾತ್ರ ಸಫಾರಿ ಸೂಟು ಹಾಕಿದ್ದಾನೆ. ಉಳಿದವರಿಗಿಂತ ಸ್ವಲ್ಪ ಚಿಕ್ಕ ವಯಸ್ಸಿನವನು ಕೂಡಾ.ಇಂದಿರಾ ಗಾಂಧಿ ಒಬ್ಬರೇ ಅಷ್ಟು ಜನರಲ್ಲಿ ಕೂತವರು. ಅವರೆಲ್ಲರೂ ಇಂದಿರಾ ಗಾಂಧಿ ಕ್ಯಾಬಿನೆಟ್ಟಿನ ಮಂತ್ರಿಗಳು. ಇದು ಕ್ಯಾಬಿನೆಟ್ಟು ಮೀಟಿಂಗಂತೆ. ಇಂದಿರಾ ಗಾಂಧಿ ಅವರನ್ನು ಗಮನಿಸುತ್ತಲೂ ಇಲ್ಲ. ತಮ್ಮ ಪಾಡಿಗೆ ತಾವು ಏನೋ ಬರೆಯುತ್ತಿದ್ದಾರೆ. ಮಂತ್ರಿಗಳು ತಮ್ಮನ್ನು ಮೇಡಂ ಗಮನಿಸಲಿ ಎಂದು ಕಾಯುತ್ತಿದ್ದಾರೆ. ಸಫಾರಿ ಸೂಟಿನವ ಏನೋ ಹೇಳಲೆಂದು ಕೃತಕ ಮುಗುಳ್ನಗೆಯನ್ನು ಮುಖಕ್ಕೆ ಅಂಟಿಸಿಕೊಂಡು ಕಾಯುತ್ತಿದ್ದಾನೆ.

ಸತ್ಯನ್ ಅವರ ಚಿತ್ರ ಚೆನ್ನಾಗಿದೆ. ಆದರೆ ರಘು ರೈ ಅವರ ಚಿತ್ರ ತುರ್ತುಪರಿಸ್ಥಿತಿಯ ಒಂದು ಪರಿಣಾಮಕಾರಿ ಚಿತ್ರವನ್ನು ನಮ್ಮ ಕಣ್ಣೆದುರು ಇಡುತ್ತದೆ. ಅದು ಒಂದು ರಾಜಕೀಯ ಕವನ ಅಥವಾ ನಾಟಕ ಅಥವಾ ಕಾದಂಬರಿಯಷ್ಟೇ ಪರಿಣಾಮಕಾರಿಯಾಗಿದೆ. ಅಂದರೆ ಮುಖ್ಯವಾದದ್ದು ಛಾಯಾಗ್ರಾಹಕನ ಸಂವೇದನೆ, ಪರ್ಸ್ಪೆಕ್ಟಿವ್, ಎಷ್ಟನ್ನು ಒಳಗೊಳ್ಳಬಲ್ಲದೆಂಬ ಪ್ರಶ್ನೆ. ಇದೇ ಪ್ರಶ್ನೆಯನ್ನು ನಾವು ಒಬ್ಬ ಲೇಖಕನ ಬಗ್ಗೆ ಅಥವಾ ಒಬ್ಬ ಸಿನೆಮಾ ನಿದೇಶಕನ ಬಗ್ಗೆ ಕೇಳುತ್ತೇವೆ. ಅಂತಿಮವಾಗಿ ಆ ಸಂವೇದನೆ ಎಷ್ಟು ಘಟ್ಟಿಯಾದದ್ದು ಎಂಬುದೇ ಮುಖ್ಯವಾದದ್ದು. ಅಂದರೆ ದಾಖಲಿಸುವ ಕ್ಯಾಮೆರಾ ಕಣ್ಣು ಒಂದೇ ಅಲ್ಲ; ಆ ಕಣ್ಣಿನ ಹಿಂದಿರುವ ಕಣ್ಣೂ ಎಷ್ಟು ನೋಡುತ್ತದೆ ಎಂಬುದರ ಮೇಲಿಂದ ಒಂದು ಚಿತ್ರದ ಪ್ರಾಮುಖ್ಯತೆ ನಿಲ್ಲುತ್ತದೆ.

2 comments:

  1. ಸರ್, ನೀವು ಬ್ಲಾಗ್ ಲೋಕಕ್ಕೆ ಬಂದದ್ದು ಒಳ್ಳೆಯದಾಯಿತು. ಅನಂತಮೂರ್ತಿ, ಎಚ್‌ಎಸ್‌ವಿ, ಶ್ರೀರಾಮ್... ಮುಂತಾದವರ ಸಾಲಿಗೆ ನೀವು ಸೇರುತ್ತಿರುವುದು, ಅಂತರ್ಜಾಲದಲ್ಲಿ ಕನ್ನಡದ ಬೆಳವಣಿಗೆಯ ಬಗ್ಗೆ ಒಂದಷ್ಟು ಭರವಸೆ ಮೂಡಿಸಿದೆ. ಒಂದಷ್ಟು ಒಳ್ಳೆಯ ಚಿಂತನೆಗಳನ್ನು ಹಂಚಿಕೊಳ್ಳಲು ಇದು ವೇದಿಕೆಯಾಗಬಹುದು ಎಂಬ ಆಶಯ.
    - ಹರೀಶ್ ಕೇರ

    ReplyDelete
  2. ನೀವು ನನ್ನ ಬ್ಲಾಗ್ ಗಮನಿಸಿದಿರಿ ಅನ್ನುವುದೇ ನನಗೆ ತುಂಬಾ ಸಂತೋಷದ ವಿಷಯ. ಸೀರಿಯಸ್ಸಾಗಿ, ಕನ್ನಡ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯೋಣ ಅಂದುಕೊಂಡಿದ್ದೇನೆ.ಮುಖ್ಯವಾಗಿ ಸಾಹಿತ್ಯ ಮತ್ತು ಇತರ ಸಂಬಂಧಿಸಿದ ವಿಷಯಗಳ ಬಗ್ಗೆ. ಆದರೆ ನಮ್ಮ ಕನ್ನಡ ಟೈಪಿಂಗ್ ತಾಂತ್ರಿಕತೆ ತುಂಬಾ ಸುಧಾರಿಸಬೇಕು.
    ದೇವ

    ReplyDelete