Saturday, October 2, 2010

ಡೊಂಕು ಪ್ರಗಾಥ

ನಾನು ಡೊಂಕು ಎಂಬವರೊಬ್ಬರನ್ನು ಭೇಟಿಯಾಗಿದ್ದೇನೆ. ಒಂದು ಸಲ ಭೇಟಿಯಾದ ಮೇಲೆ ಇವರ ಬಗ್ಗೆ ಆಸಕ್ತಿ ಹುಟ್ಟಿ ಆಗಾಗ ಭೇಟಿಯಾಗುತ್ತಾ ಇವರ ಚಟುವಟಿಕೆಗಳನ್ನು ಗಮನಿಸುತ್ತಾ ಇದ್ದೇನೆ. ಇವರು ಡೊಂಕು ಎಂದಲ್ಲದೆ ಡೊಂಕ, ಡೊಂಕೇಶ, ಡೊಂಕುರಾಯ, ಡೊಂಕು ರಾವ್, ಡೊಂಕುಜಿ, ಡೊಂಕಪ್ಪ, ಡೊಂಕಯ್ಯ, ಮಿ. ಡೊಂಕು, ಶ್ರೀಮಾನ್ ಡೊಂಕು ಎಂಬಿತ್ಯಾದಿ ಹೆಸರುಗಳಿಂದ ಪ್ರಖ್ಯಾತರಾಗಿದ್ದಾರೆ. ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕಾಣಿಸಿಕೊಳ್ಳುವುದಿದೆ. ಒಂದೇ ಊರಿನಲ್ಲಿ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕಾಣಿಸಿಕೊಳ್ಳುವುದೂ ಇದೆ.  ಕೆಲವು ಸಲ ಇವರ ಶ್ರೀಮತಿಯವರಾದ ಶ್ರೀಮತಿ ಡೊಂಕಿಣಿಯೂ ಕಾಣಲಿಕ್ಕೆ, ಮಾತಾಡಲಿಕ್ಕೆ ಸಿಗುವುದಿದೆ. ಇವರೂ ಡೊಂಕಮ್ಮ, ಡೊಂಕಕ್ಕ, ಡೊಂಕವ್ವ, ಡೊಂಕಿತಿ, ಡೊಂಕಾವತಿ, ಡೊಂಕುಶ್ರೀ, ಡೊಂಕುಮತಿ, ಡೊಂಕಾಂಬೆ, ಡೊಂಕೇಶ್ವರಿ ಎಂಬಿತ್ಯಾದಿ ಹೆಸರುಗಳಿಂದ ಪ್ರಖ್ಯಾತರಾಗಿದ್ದಾರೆ. ಇವರ ಬಗ್ಗೆ  fascination ಆಗಿ ಇವರನ್ನು ನನ್ನ ಶಕ್ತ್ಯಾನುಸಾರ ಅಧ್ಯಯನ ಮಾಡಿ ಕೆಲವು ಪದ್ಯ ಬರೆದಿದ್ದೇನೆ. ಅವುಗಳಲ್ಲಿ  ಒಂದು ಪದ್ಯ ಕೆಳಗೆ ಕೊಟ್ಟಿದ್ದೇನೆ. ಇನ್ನುಳಿದ ಪದ್ಯಗಳನ್ನು ಮುಂದೊಂದು ದಿನ ಕೊಡುತ್ತೇನೆ. ನೀವೂ  ಶ್ರೀಮಾನ್ ಡೊಂಕುವನ್ನು ಭೇಟಿಯಾಗಿರುವ ಸಾಧ್ಯತೆಯಿದೆ__ಈ ಪದ್ಯಗಳಲ್ಲಿ ಇಲ್ಲದ ಡೊಂಕು/ಡೊಂಕಿಣಿ ಸಾಹೇಬರ, ಅವರ ವಂಶಸ್ಥರ ಅನೇಕ ಹೊಸ ಗುಣಗಳು ನಿಮಗೆ ಗೊತ್ತಿರಬಹುದು. ಹಾಗಿದ್ದರೆ ಸೂಕ್ತ ಸಮಯದಲ್ಲಿ ನೋಟ್ಸ್ ಹೋಲಿಸಿಕೊಳ್ಳಬಹುದು.

"ಡೊಂಕು ಪ್ರಗಾಥ"  ಮೊದಲು ನನ್ನ ಕವನ ಸಂಗ್ರಹ ಇಂದ್ರಪ್ರಸ್ಥ (1994)ದಲ್ಲಿ, ಆ ನಂತರ ನನ್ನ 1964-2003ರ ಸಮಗ್ರ ಕಾವ್ಯ ಮಾತಾಡುವ ಮರ (2003)ದಲ್ಲಿ ಪ್ರಕಟವಾಗಿದೆ.

ಡೊಂಕು ಪ್ರಗಾಥ

ಡೊಂಕು ಬಂದನೋ ಅಂಕು ಡೊಂಕು ಬಂದನೋ
ಅಂಕು ಡೊಂಕು ಸಂಕಪಾಲ ಡೊಂಕು ಬಂದನೋ

ಒಮ್ಮೆ ಕಣ್ಣ ಅತ್ತ ಕಡೆಗೆ ತಿರುಗಿ ಕಣ್ಣ ಇತ್ತ ಕಡೆಗೆ
ನೆತ್ತಿ ಕಡೆಗೆ ಆಗ ಈಗ ಕೊಂಕು ಬಂದನೋ

ಕೊಂಕು ಬಂದನೋ ಅಂಕು ಡೊಂಕು ಬಂದನೋ
ಡೊಂಕು ಬಂದನೋ ಪಾಂಕು ಹಿಡಿದು ಬಂದನೋ

ಬಾಲವನ್ನು ಕಿವಿಗೆ ಸೆಕ್ಕಿ ಮೆದುಳ ಪುಕುಳಿ ಒಟ್ಟೆಗಿಕ್ಕಿ
ಢುರ್ರ ಡುರ್ರ ಹೂಸು ಬಿಟ್ಟು ಡೊಂಕು ಬಂದನೋ

ಡೊಂಕು ಹೂಸು ಪರಿಮಳ, ಡೊಂಕು ಹೂಸು ಪರಿಮಳ
ಎಂದು ಮೆರೆದು ಹರಿದು ತರಿದು ಡೊಂಕು ಬಂದನೋ

ಕೆಲವು ಸಲ ಅತ್ತು ಬಿಡುವ, ಕೆಲವು ಸಲ ಬರಿದೆ ನಗುವ
ಕೆಲವು ಸಲ ಧ್ಯಾನಿಯಂತೆ ಕೂತು ಹೆಂಡ ಕುಡಿಯುವ

ಕೆಲವು ಸಲ ದುಡ್ಡು ಕೊಡುವ, ಕೆಲವು ಸಲ ಊಟ ಕೊಡುವ,
ಏನು ಕೊಡದೆ ಇದ್ದರೂನು ಕೊಟ್ಟೆನೆಂದು ಹೇಳಿಕೊಳುವ

ಡೊಂಕು ಬಂದನೋ ಅಂಕು ಡೊಂಕು ಬಂದನೋ
ಯಂಕು ಮಂಕು ಜೊತೆಗೆ ಸೇರಿ ಡೊಂಕು ಬಂದನೋ

ಇಂತು ಪರಿ ಅರೆಕ್ಷಣ ಒಡ್ಡೋಲಗ ಕೊಟ್ಟು ಡೊಂಕುವು ತೆರೆಯ ಹಿಂದೆ ಹೋದನು. ಒಡ್ಡೋಲಗ ಹೀಗೆ ಕ್ಷಣಾರ್ಧದಲ್ಲಿ ಬರ್ಖಾಸ್ತುಗೊಳ್ಳಲು ಕಾರಣವೆಂದರೆ__

ಡೊಂಕುವೂ ಡಾರ್ವಿನ್ನನ ವಿಕಾಸವಾದದ ರೀತಿ ಕೊಂಬು ಹಲ್ಲುಗುರು ಬಾಲ ಇಷ್ಟಿಷ್ಟೇ ಸವೆದು ಮನುಷ್ಯನಾದವನೇ ಹೌದಷ್ಟೇ. ಆದರೆ ಅವನು ಪ್ರಾಣಿಸಹಜವಾಗಿ ವರ್ತಿಸುತ್ತಲೂ ಯೋಚಿಸುತ್ತಲೂ ಇದ್ದುದರಿಂದ ಮೆದುಳಿನ ಪರಿಣಾಮ ದೇಹದ ಮೇಲೆ ಆಗಿ ಅದು ಹಿಮ್ಮುಖ ಸಾಗಿ ಅವನ ಅಂಡಿನ ಮೇಲೆ ಬಾಲ ಬೆಳೆಯಲು ಪ್ರಾರಂಭವಾಗಿತ್ತು.  ಪರಿಣಾಮವಾಗಿ ಅವನಿಗೆ ಅರೆಕ್ಷಣಕ್ಕಿಂತ ಹೆಚ್ಚು ಹೊತ್ತು ಕೂರಲು ಆಗುತ್ತಿರಲಿಲ್ಲ. ಅದನ್ನು ಸರಿಪಡಿಸಲೆಂದು ಅವನು ಬೇರೆ ಬೇರೆ ವೈದ್ಯರನ್ನು, ಮಂತ್ರವಾದಿಗಳನ್ನು, ತೀರ್ಥಕ್ಷೇತ್ರಗಳನ್ನು ಭೇಟಿ ಮಾಡಿದ್ದನು. ಕೆಲವರು ಸಹಾನುಭೂತಿ ತೋರಿಸಿದರೆ, ಔಷಧಿಯನ್ನೋ ಪರಿಹಾರವನ್ನೋ ಹೇಳಿದರೆ, ಇನ್ನು ಕೆಲವರು ಬಾಲ ಬೆಳೆಯುವುದು ತಿಳಿಯುತ್ತಲೇ ನಗಲು ಸುರು ಮಾಡುವರು, ಬೇರೆಯವರ ಕರೆದು ವಿಷಯ ತಿಳಿಸುವರು, ಬಾಲ ತೋರಿಸು ಎನ್ನುವರು. ಇವನಿಗೆ ಇದರಿಂದ ಸಿಟ್ಟು ಬಂದು ಬೈಯ್ಯಲು, ಕಿರುಚಾಡಲು, ಹೊಡೆಯಲು ಮೊದಲಾಗುವನು. ಇವನು ಹೀಗೆ ಹೆಂಡ ಕುಡಿದ ಮಂಗನ ಹಾಗೆ ಆಡಲು ಸುರು ಮಾಡಿದೊಡನೆ ಬಾಲ ಮತ್ತೊಂದಿಂಚು ಬೆಳೆಯುವುದು. ಆದರೆ ಕೆಲವರು ಹೀಗೆ ಬಾಲ ಬೆಳೆಯುವುದು ಪವಾಡವೆಂದೂ ಹನುಮಂತ ದೇವರ ಕೃಪೆಯೆಂದೂ ತಿಳಿದು ಡೊಂಕುವನ್ನು ಭಕ್ತಿಯಿಂದ ಕಾಣುತ್ತಿದ್ದರು. ಅಂಥವರಲ್ಲಿ ಗೋಜೇಂದ್ರನೂ ಒಬ್ಬ. ಅದೆಂತೆಂದರೆ--

ಗೋಜೇಂದ್ರ ಜೊತೆಗೆ ಇದ್ದ ಖೋಜೇಂದ್ರ ಜೊತೆಗೆ ಇದ್ದ
ಡೊಂಕು ಹೂಸಿ ಮೂಸಿ ಮೂಸಿ ಹಿಂದೆ ಹಿಂದೆ ಬರುತಲಿದ್ದ

ದೇವರನ್ನು ಬೇಡುತಿದ್ದ--ನನಗೆ ಒಂದು ಬಾಲ ಕೊಡು
ಡೊಂಕುವಂಥ ಬುದ್ಧಿ ಕೊಡು, ಅಂಕು ಡೊಂಕು ಮಾಡಿ ಬಿಡು

ಡೊಂಕು ಮರಿಯ ಮಾಡು ನನ್ನ ಕಪ್ಪು ಕುರಿಯ ಮಾಡು ನನ್ನ
ಡೊಂಕು ಸೇವೆಯಲ್ಲಿ ಮನಸ ಸದಾ ಇರಿಸು ದೇವರೇ

ಗೋಜೇಂದ್ರನಿಗು ಒಂದು ಬಾಲ ಬಂದಿತೋ--ಸಣ್ಣ
ಬಾಲ ಬಂದಿತೋ
ಖೋಜೇಂದ್ರನಿಗು ಒಂದು ಬಾಲ ಬಂದಿತೋ--ಚೆನ್ನ
ಬಾಲ ಬಂದಿತೋ

ಹೆಂಡತಿಯು ನೋಡಿದಳು ಖೋಜೇಂದ್ರನಾ ಬಾಲ
ಕೈಯ್ಯಲ್ಲಿ ಅದುಮುತ್ತ ಸುಖ ಪಟ್ಟಳು:

ಮುಂದೆ ಇರೊದಕ್ಕಿಂತ ಹಿಂದೆ
ಇರೋದೇ ಚೆಂದ
ಮನುಷ್ಯರಂತೆ ನಡೆಯೋಕಿಂತ
ಕುಣಿಯೋದೇ ಅಂದ

ಸೂಟು ಬೂಟು ಹಾಕ್ಕೊಂಡು ಹೋಗಿ
ದೊಡ್ಡವ ಅಂತಾರೆ
ಮಾರ್ಕ್ಸ್ ಕಾರ್ಡು ಹಿಡ್ಕೊಂಡು ಹೋಗಿ
ಜೀನಿಯಸ್ ಅಂತಾರೆ

ಪ್ಯಾಂಟಿನೊಳಗೆ ಬಾಲ ಇರಲಿ ಕೋತಿ ಆಗಲಿ
ನಾನು ಇದನೆ ಬಳಸಿಕೊಳುವೆ ಹೀಗೇ ಇರಲಿ
ಕೋತಿ ನಾನು ನೀನು ಜೊತೆಲಿ ಹೇನು ತಿನ್ನೋಣ
ರಾತ್ರಿಯಲ್ಲಿ ಮರವ ಹತ್ತಿ ಹಲ್ಲು ಕಿರಿಯೋಣ

ನೀನು ಖೋಜು ನಾನು ರೋಜು
ಎಂಥಾ ಗೌಜು
ನಿನಗೆ ಬಾಲ ಬಂದ ಮೇಲೆ
ಎಂಥಾ ಮೋಜು

ಹೀಗೇ ಕಾಲ ಕುಣಿದು ಶ್ರೀ ಮತ್ತು ಶ್ರೀಮತಿ ಗೋಜೇಂದ್ರರಿಗೆ ಮಕ್ಕಳು ಹುಟ್ಟಲು ಪ್ರಾರಂಭವಾದವು. ಹುಟ್ಟಿದ ಹತ್ತು ಮಕ್ಕಳಲ್ಲಿ ಪ್ರತಿಯೊಂದಕ್ಕೂ ಚಿಕ್ಕ ಚಿಕ್ಕ ಬಾಲ. ಇವರು ಕಿರುಚಿದರೆ, ಸಿಟ್ಟು ಮಾಡಿಕೊಂಡರೆ, ಇನ್ನೊಬ್ಬರನ್ನು ದ್ವೇಷಿಸಿದರೆ, ಹೊಡೆದರೆ, ಬೈದರೆ ಬಾಲ ಒಂದೊಂದಿಂಚು ಬೆಳೆಯುವುದು. ಇನ್ನೊಬ್ಬರನ್ನು ಪ್ರೀತಿಯಿಂದ ಕಂಡೊಡನೆ ಬಾಲ ಚಿಕ್ಕದಾಗುವುದು. ಇವರಿಗೆ ಹುಟ್ಟಿದ ಮಕ್ಕಳಿಗೆ ಹುಟ್ಟಿದ ಮಕ್ಕಳಿಗೆ ಹುಟ್ಟಿದ ಮಕ್ಕಳಿಗೂ ಹೀಗೇ ಬಾಲ. ಜೊತೆಗೆ ಡೊಂಕುವಿಗೆ ಬಾಲ ಬಂದಂತೆ ಅನೇಕರಿಗೆ ಇದ್ದಕ್ಕಿದ್ದಂತೆ ಬಾಲ ಬೆಳೆಯಲು ಪ್ರಾರಂಭವಾಯಿತು. ಇಂತಾಗಿ ಮೂರು ನಾಲ್ಕು ಜನರೇಷನ್ನು ಕಳೆಯುವುದರೊಳಗೆ ವಿಕಾಸವಾದದ ವಿರುದ್ಧವಾಗಿ ಈ ನಾಗರಿಕತೆ ಹಿಮ್ಮುಖ ಸಾಗಿ ಬಾಲವಿದ್ದ ಸಾಕಷ್ಟು ಸಂಖ್ಯೆಯ ಜನಗಳು ಈ ನಾಡಿನಲ್ಲಿ ತುಂಬಿಕೊಂಡರು. ಆದಿಮ ಜನಾಂಗದ ರೀತಿಯಲ್ಲಿ ಹೊಡೆದಾಡುತ್ತಿದ್ದವರು ಇದ್ದಕ್ಕಿದ್ದಂತೆ ಬಾಲ ಬೆಳೆದು ಅನಿಯಂತ್ರಿತವಾಗಿ ಮರದ ಮೇಲೆ ನೆಗೆದು ಕೂತು ಹಲ್ಲು ಕಿರಿಯುವುದು ಸಾಮಾನ್ಯವಾಗಿತ್ತು. ಬಾಲವಿದ್ದವರೇ ಹೆಚ್ಚಿದ್ದರಿಂದ ಚುನಾವಣೆಯಲ್ಲಿ ಅವರೇ ಗೆದ್ದು ಬರುತ್ತಿದ್ದರು. ಬಾಲವಿದ್ದವರಿಗೆ ಇದ್ದ ಬೆಲೆ, ಸವಲತ್ತು ಇಲ್ಲದವರಿಗೆ ಇಲ್ಲದ್ದರಿಂದ ಬಾಲವಿಲ್ಲದವರು ತಮಗೂ ಬಾಲ ಬರಲಿ ಎಂದು ಹಂಬಲಿಸುವಂತಾಯಿತು. ನಾಗರಿಕತೆ ಮತ್ತೆ ಪ್ರಾಣಿ ಸ್ಥಿತಿಗೆ ಹಿಂದಿರುಗುತ್ತಿರುವ ಇಂಥಾ ಸಂದರ್ಭದಲ್ಲಿ  ಡೊಂಕುವೇ ಈ ಜನಾಂಗದ ಪ್ರಧಾನ ಪಿತೃ ಎನಿಸಿದನು ಎಂಬಲ್ಲಿಗೆ--

ಮಂಗಲಂ ಜಯ ಮಂಗಲಂ---ಶುಭ
ಮಂಗಲಂ

ಸಹಜ ಮಾನವರಂತೆ ಓಡಾಡುವ ಜನರಿಗೆ
ಮಂಗಲಂ ಜಯ ಮಂಗಲಂ

ಸಹಜ ಉಣ್ಣುವ ತಿನ್ನುವ ಹೆಂಡತಿ ಮಕ್ಕಳ ಜೊತೆಗೆ
ಕಾಲ ಕಳೆಯುವ ಜನಕೆ ಮಂಗಲಂ

ಸಹಜ ಜೀವನ ಗತಿಯ  ಅನುಸರಿಸುವವ ಯಾರೊ
ಸಹಜ ನಗೆ ಮಾತುಗಳ ಮನುಷ್ಯ ಯಾರೋ

ಕೊಂಕುವಲ್ಲ ಡೊಂಕುವಲ್ಲ ವಂಕಿ ಮಂಕಿಗಳಲ್ಲ
ಸಹಜ ಮನುಷ್ಯನ ಬದುಕ ಸಹಜತೆಗೋ
ತೆವಳದೆ ಹಾರದೆ ನಡೆವವಗೋ

ಮಂಗಲಂ ಜಯ ಮಂಗಲಂ--ಶುಭ
ಮಂಗಲಂ.

(1990)

1 comment:

  1. ಸರ್ , ಓದಿ ಖುಷಿಯಾಯಿತು. - ಮಹೇಶ್ ಪುಚ್ಚಪ್ಪಾಡಿ

    ReplyDelete