Monday, June 11, 2012

ಹುಲಿಯ ಕಥೆ

ಮೊನ್ನೆ ಜೂನ್ 9ರಂದು ಮೈಸೂರಿನ ಸಮತೆಂತೋ ತಂಡದವರು ನನ್ನ ನಾಟಕ ಹುಲಿಯ ಕಥೆ ಆಡಿದರು. ಇದು ಎರಡು ವರ್ಷಗಳ ಹಿಂದೆ ಪ್ರಕಟವಾದ ಈ ನಾಟಕದ ಮೊದಲ ಪ್ರಯೋಗ. ನಾನು ಇದನ್ನು ಸ್ನೇಹಿತರೊಬ್ಬರ ಹತ್ತಿರ world premier ಎಂದು ಕರೆದುಕೊಂಡೆ. ಅಮೇರಿಕಾದವರೋ ಇಂಗ್ಲೆಂಡಿನವರೋ ತಮ್ಮ ಊರಿನಲ್ಲಿ ನಾಟಕ ಆಡಿ ಅದನ್ನು world premier ಅಂದುಕೊಳ್ಳಬಹುದಾದರೆ ನಾವೇಕೆ ಅಂದುಕೊಳ್ಳಬಾರದು ಎಂದುದಕ್ಕೆ ಹೌದು ಎಂದು ಅವರೂ ನಗಾಡಿದರು.

ರಂಗಾಯಣದವರು ಮೈಸೂರಿನ ನಾಟಕ ತಂಡಗಳ ಒಂದು ಉತ್ಸವ ಏರ್ಪಡಿಸಿದ್ದರು. ಅಲ್ಲಿ ಆಡಿದ ನಾಟಕ ಇದು. House full ಆದ್ದು ಮಾತ್ರವಲ್ಲದೆ ನಾಟಕ ಮುಗಿದ ಮೇಲೆ ಪ್ರೇಕ್ಷಕರು ಉತ್ಸಾಹದ ಪ್ರತಿಕ್ರಿಯೆ ತೋರಿಸಿದರು.

ಸಮತೆಂತೋ ನನಗೆ ಆಧುನಿಕ ರಂಗಭೂಮಿಯನ್ನು ಮೊದಲು ಪರಿಚಯಿಸಿದ ಸಂಸ್ಥೆ. ಹಳ್ಳಿಯಿಂದ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ 1966ರಲ್ಲಿ ಓದಲು ಹೋದ ನನಗೆ ಸಮತೆಂತೋ ಆಡಿದ ಪೂರ್ಣಚಂದ್ರ ತೇಜಸ್ವಿಯವರ ಯಮಳ ಪ್ರಶ್ನೆ, ಡಾ. ರತ್ನರ ಎಲ್ಲಿಗೆ?, ಚೆಕಾವ್ ನ ಕಾಡ್ಮನ್ಸ ಮೊದಲಾದವು ನೋಡಲು ಸಿಕ್ಕಿದ್ದು ಅದೃಷ್ಟ. ಎಲ್ಲಿಗೆ? ನನ್ನ ಮೇಲೆ ತುಂಬಾ ಪ್ರಭಾವ ಬೀರಿದ ನಾಟಕ. ಅದರಲ್ಲಿ ಎಚ್. ಎಂ. ಚೆನ್ನಯ್ಯ ಶಿರಡಿ ಸಾಯಿಬಾಬಾನ ಹಾಗೆ ಕೂತುಕೊಳ್ಳುವುದು ಮತ್ತು ಆ ಗೆಶ್ಚರಿನ ಧ್ವನಿಶಕ್ತಿ ಸಾಯಿಬಾಬಾನ ಭಕ್ತರ ಊರಿನಿಂದ ಹೋಗಿದ್ದ ನನಗೆ ತುಂಬಾ ಇಷ್ಟವಾದವು. ಮುಂದೆ 1973ರಲ್ಲಿ ಸಮತೆಂತೋದವರ ಕದಡಿದ ನೀರು ನಾಟಕದಲ್ಲಿ ನಾನು ಶಂಕರನ ಪಾತ್ರ ಮಾಡಿದ್ದೆ. ಆ ಮೇಲೆ ಮೈಸೂರು ಬಿಟ್ಟದ್ದರಿಂದ ಅವರ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ಹೊರಟುಹೋಯಿತು.

ಆಗ ಕದಡಿದ ನೀರುನಲ್ಲಿ ಮಲ್ಲಿ ಪಾತ್ರ ಮಾಡಿದ ಇಂದಿರಾ ನಾಯರ್ ಹುಲಿಯ ಕಥೆಯಲ್ಲಿ ಸೀತೆಯ ಪಾತ್ರ ಮಾಡಿದ್ದರು. ಮೂವತ್ತೈದು ವರ್ಷಗಳ ಬಳಿಕ ಈಗ ಮತ್ತೆ ಪಾತ್ರ ಮಾಡುತ್ತಿದ್ದಾರೆ. ತುಂಬಾ ಒಳ್ಳೆಯ ನಟಿಯಾದ ಅವರನ್ನು ಮತ್ತೆ ಭೇಟಿಯಾದದ್ದೇ ನನಗೆ ಸಂತೋಷದ ವಿಷಯವಾಗಿತ್ತು. ಇನ್ನೊಬ್ಬರು ನಟಿ ಸರ್ವಮಂಗಳಾ. ಅವರೂ ಅಭಿನಯಿಸದೆ ಅನೇಕ ವರ್ಷಗಳಾದವಂತೆ. ಡಾ. ರತ್ನ, ಅವರ ಮನೆಯವರು, ಹಳೆಯ ಸ್ನೇಹಿತ ರಘುನಾಥ್ ಮತ್ತು ಅವರ ಮನೆಯವರು, ಬಸವರಾಜ್--ಈ ಹಳೆಯ ಸ್ನೇಹಿತರನ್ನೆಲ್ಲಾ ಮತ್ತೆ ಭೇಟಿಯಾದದ್ದು ನನಗೆ ನನ್ನ ನಾಟಕ ಆಡಿದ್ದನ್ನು ನೋಡಿದಷ್ಟೇ ಖುಷಿ ಕೊಟ್ಟಿತು.

ಇದನ್ನು ನಿರ್ದೇಶಿಸಿದವರು ಸಹಮತ್. ಅತ್ಯಂತ ಚಿಕ್ಕ ವಯಸ್ಸಿನ ನಿರ್ದೇಶಕಿ. ಆದರೆ ಅವರ ಆತ್ಮವಿಶ್ವಾಸ ದೊಡ್ಡದನ್ನು ಸಾಧಿಸುವವರಲ್ಲಿ ಇರಲೇಬೇಕಾದ ಆತ್ಮವಿಶ್ವಾಸ. 

ಪ್ರಯೋಗದಲ್ಲಿ ಅನೇಕ ಕೊರತೆಗಳಿವೆ. ಆದರೆ ಇದು ಮೊದಲ ಪ್ರಯೋಗ. ಅವೆಲ್ಲಾ ಮುಂದೆ ಸರಿಯಾಗುವಂಥದು.

No comments:

Post a Comment