Thursday, February 23, 2012

ನಾಟಕಗಳ ಕುರಿತು

ಕೆಲವು ದಿನಗಳ ಹಿಂದೆ ನನ್ನ ಸಮಗ್ರ ಕಥೆಗಳು ಓದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ಪ್ರೊಫೆಸರ್ ಹರಿಯಪ್ಪ ಪೇಜಾವರ ಈಗ ನನ್ನ ಸಮಗ್ರ ನಾಟಕಗಳನ್ನು ಓದಿ ಪ್ರತಿಕ್ರಿಯೆ ಬರೆದು ಕಳಿಸಿದ್ದಾರೆ. ಸೂಕ್ಷ್ಮ ಮನಸ್ಸಿನ ಈ ಒಳ್ಳೆಯ ಸಮಕಾಲೀನ ಕವಿಯ ಪ್ರತಿಕ್ರಿಯೆಯಿಂದ ನನಗೆ ಸಹಜವಾಗಿಯೇ ಸಂತೋಷವಾಗಿದೆ. ಅಲ್ಲದೆ ನಮ್ಮಲ್ಲಿ ಹೀಗೆ ಪ್ರತಿಕ್ರಿಯೆ ವ್ಯಕ್ತಪಡಿಸುವವರು ವಿರಳ. ಹೊಟ್ಟೆಕಿಚ್ಚಿನಿಂದ ಬೈಯ್ಯವವರು, ಇಲ್ಲದ ಕೊಸರು ತೆಗೆಯುವವರು ಹೆಚ್ಚಿರುವಾಗ ಹರಿಯಪ್ಪನವರ ಈ ಮುಕ್ತ ಮನಸ್ಸಿನ ಮೆಚ್ಚುಕೆ ವಿಶೇಷ ಅನ್ನಿಸಿತು. ಅದೂ ಅವರ ಪ್ರತಿಕ್ರಿಯೆಯನ್ನು ಇಲ್ಲಿ ಪ್ರಕಟಪಡಿಸಲು ಒಂದು ಮುಖ್ಯ ಕಾರಣ.

ಇದು ಅವರ ಪತ್ರ:

"ನಿಮ್ಮ ನಾಟಕಗಳನ್ನು ಓದಿದೆ. ಎಲ್ಲ ಮಹತ್ತ್ವಾಕಾಂಕ್ಷೆಯ ಬರೆಹಗಳು. ಅನಂತಮೂರ್ತಿಯ ನಂತರ ಸದ್ಯ ಕನ್ನಡದ ಸಂದರ್ಭದಲ್ಲಿ ಇಷ್ಟೊಂದು ಮಹತ್ತ್ವಾಕಾಂಕ್ಷೆಯಿಂದ ಬರೆಯುತ್ತಿರುವವರು ನೀವು ಮಾತ್ರ ಅನ್ನಿಸುತ್ತದೆ. (ಡಾಗ್ ಶೋ, ರಾಹು ಮತ್ತು ಕೇತು, ದಂಗೆ--ಇವು ಇಂಥವು). ಸಾಮಾಜಿಕ, ರಾಜಕೀಯ ಆಧ್ಯಾತ್ಮಿಕ ಆಯಾಮಗಳನ್ನೊಳಗೊಂಡ--ನಿಮ್ಮ ಕಥೆ ಕವಿತೆಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಈ ಕಾಳಜಿ ಇಲ್ಲೂ ಮುಂದುವರಿದಿದೆ. ಆಧುನಿಕೋತ್ತರ ರಚನೆಗೆ ತೀರಾ ಹತ್ತಿರದವು ಅನ್ನಿಸುವ ನಿಮ್ಮ ಕೃತಿಗಳು, ಅಂಚಿನಲ್ಲಿರುವವರ ಬಗೆಗಿನ ಕಾಳಜಿ, ಭಾಷೆಯ ಮೂಲಕ ಸೃಷ್ಟಿ, ಸಂವಹನದ ಅವಶ್ಯಕತೆ, ಬದುಕು/ಸಾವು, ರೂಪ/ರೂಪಾಂತರ, ಶಿಷ್ಟ/ಅಶಿಷ್ಟ, ಸಂಸ್ಕೃತಿ/ವಿಕೃತಿ, ಹಿಂಸೆ/ಅಹಿಂಸೆ, ಸತ್ಯ/ಸುಳ್ಳು, ಮನಸ್ಸು/ದೇಹ, ವಿಚಾರ/ಭಾವ, ಚೈತನ್ಯ/ಬುದ್ಧಿ--ಇಂಥವುಗಳ ಯುಗ್ಮಗಳನ್ನು ಅವುಗಳೆಲ್ಲದರ ಸಂಕಿರ್ಣತೆಯಲ್ಲಿ ಅಭಿವ್ಯಕ್ತಿಸುವ ನಿಮ್ಮ ಕೃತಿಗಳು ನಮ್ಮ ಇವೊತ್ತಿನ ದಿನಮಾನವನ್ನು ದರ್ಶಿಸುತ್ತವೆ. ಆಧುನಿಕ ಬದುಕಿಗೆ 'ಕನ್ನಡಿ'ಯಾಗುತ್ತ ಸಮಾಜಕ್ಕೆ ಅದು 'ದೀಪ'ವೂ ಆಗುತ್ತದೆ. ಪುರಾಣ ಭಂಜನೆಯ ಮೂಲಕವೇ ನವ ಪುರಾಣ ಸೃಷ್ಟಿಸುತ್ತೀರಿ ನೀವು ನಿಮ್ಮ ನಾಟಕಗಳ ಮೂಲಕ. ರಥಮುಸಲ ಶೇಕ್ ಸ್ಪಿಯರ್ ಗೆ ಋಣಿಯಾಗಿದ್ದೂ ಅದು ನಿಮ್ಮದೇ ಆಗಿದೆ. ಅಲ್ಲಲ್ಲಿ, ಮುಖ್ಯವಾಗಿ ರಾಹು ಮತ್ತು ಕೇತು, ದಂಗೆ, ಇಂಥಲ್ಲಿ--ಅಬ್ಸರ್ಡಿಟಿ, ಅಸ್ತಿತ್ವವಾದದ ನೆರಳು--ಕಂಡೂ ಕಾಣಿಸದೆ ಜೀರ್ಣಸ್ಥ ರೂಪದಲ್ಲಿ ಕಾಣಿಸುತ್ತದೆ. ರಾಹು ಮತ್ತು ಕೇತು ಒಟ್ಟಿಗೇ ನಾಟಕವೂ ಕಥೆಯೂ ಆಗಿದೆ. ಪುಟ್ಟಿಯ ಪಯಣ ತುಂಬ ಲವಲವಿಕೆಯ--ರಂಗದಲ್ಲಿ ತುಂಬ ಯಶಸ್ವಿಯಾಗಬಹುದಾದ ಬರೆಹ."

--ಹರಿಯಪ್ಪ ಪೇಜಾವರ

No comments:

Post a Comment