Saturday, February 18, 2012

ಹರಿಯಪ್ಪ ಪೇಜಾವರ

ಹರಿಯಪ್ಪ ಪೇಜಾವರ ಕನ್ನಡದ ಒಬ್ಬ ಪ್ರಮುಖ ಕವಿ. ತನ್ನಷ್ಟಕ್ಕೆ ಗಂಭೀರ ಕವನಗಳನ್ನು ಬರೆಯುತ್ತಾ ಅದಕ್ಕೆ ಸಂಬಂಧಿಸಿದ ಯಾವ ರಾಜಕೀಯವನ್ನೂ ಮಾಡದೆ ನಿಜವಾದ ಸಹೃದಯರ ಪ್ರತಿಕ್ರಿಯೆಯಿಂದ ತೃಪ್ತಿ ಕಾಣುತ್ತಿರುವವರು. ಸುಮಾರಾಗಿ ಅನೇಕ ಕವಿಗಳು ಮಾಡುವ ದೊಡ್ಡವರನ್ನು ಮೆಚ್ಚಿಸುವುದು, ವಿಮರ್ಶೆ ಬರೆಸುವುದು, ಅವಾರ್ಡಿಗಾಗಿ ಪ್ರಯತ್ನಿಸುವುದು ಮೊದಲಾದ ಏನನ್ನೂ ಮಾಡದ ಪ್ರಾಮಾಣಿಕ ಸಾಹಿತ್ಯ ಪ್ರೇಮಿ. ಹೀಗಾಗಿ ಅವರು ನನ್ನ ಸಮಗ್ರ ಕಥೆಗಳನ್ನು ಓದಿ ತಾವಾಗಿ ಬರೆದ ಪತ್ರದಿಂದ ನನಗೆ ಖುಷಿಯಾಗಿದೆ. ಅದೂ ಪುಸ್ತಕವನ್ನು ಅವರು ಬೋಧಿ ಟ್ರಸ್ಟಿಗೆ ಹಣ ಕಳಿಸಿ ತರಿಸಿಕೊಂಡು ಓದಿ ಬರೆದ ಪತ್ರ ಇದು. ಬಿಟ್ಟಿ ಪ್ರತಿಗಳನ್ನು ಅಪೇಕ್ಷಿಸುವವರೇ ಹೆಚ್ಚಿರುವಾಗ ಹೀಗೆ ಹಣ ಕಳಿಸಿ ಪುಸ್ತಕ ತರಿಸಿಕೊಳ್ಳುವವರು ಕಮ್ಮಿ. ಅವರ  ಪತ್ರ ಮುಖ್ಯ ಅನ್ನಿಸಿದ್ದರಿಂದ, ಅದಕ್ಕಿಂತ ಹೆಚ್ಚು ಇಂಥಾ ಸಂವೇದನಾಶೀಲ ಕವಿಯ ಮೆಚ್ಚುಕೆಯಿಂದ ಖುಷಿ ಮತ್ತು ಹೆಮ್ಮೆ ಅನ್ನಿಸಿದ್ದರಿಂದ ಅವರ ಒಪ್ಪಿಗೆ ಪಡೆದು ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.

ಇದು ಅವರ ಪತ್ರ:

"ಅರ್ಬುದ ಮತ್ತು ಪುಣ್ಯಕೋಟಿ" ಕನ್ನಡದ ಕಥೆಗಳ ಸಂದರ್ಭದಲ್ಲೇ ಒಂದು ಹೊಸಬಗೆಯ ಕಥೆ. ಅವನ, ಅವಳ, ನಿರೂಪಕನ ವಾಯ್ಸುಗಳನ್ನು ಭೂತ ವರ್ತಮಾನಗಳನ್ನು ತುಂಡುಗಡಿಯದಂತೆ ಒಂದೇ ಬಿಂದುವಿನಲ್ಲಿ ಸಂಧಿಸುವ ಬಗೆ--ಕನ್ನಡದ ಕಥಾಜಗತ್ತಿಗೇ ಹೊಸತು ಅನ್ನಿಸಿತು. ಅರ್ಬುದ ಹೆಸರು ಹರಡಿಕೊಳ್ಳುವ ಹಿಂಸೆಯ ಕ್ಯಾನ್ಸರಿನ ಪ್ರತೀಕವಾಗುತ್ತ ಸತ್ಯ ತಲೆಕೆಳಗಾದ, ಹಿಂಸೆ ಭ್ರಷ್ಟಾಚಾರ ವಿಜೃಂಭಿಸುವ, ಮನುಷ್ಯನ ಅಂತರ್ವಾಣಿಗೆ (ಪುಣ್ಯಕೋಟಿಯ ಅಂಬಾದನಿ) ಕುರುಡಾಗುವ ಅಬ್ಬರದ ಸದ್ದಿನ ಬೇಬಲ್  ಗೋಪುರದ ಶಿಖರವೇರುತ್ತಿರುವ ಸ್ಥಿತಿಯ ಮಧ್ಯೆಯೂ ಮತ್ತೆ ಅಂತರ್ವಾಣಿ --ಮನುಷ್ಯ ಸಂಬಂಧಕ್ಕೆ ಹಪಹಪಿಸುವ (ಪೋಸ್ಟ್, ಫೋನ್, ಮೊಬೈಲ್ ಮುಂತಾದ ಆಧುನಿಕ ಸಂಪರ್ಕ ಮಾಧ್ಯಮಗಳ ರೂಪಕದ ಜತೆ) ಮೂಲಕ ಕಥೆ ಕೊನೆಯಾಗುವುದು ಬದುಕಿನ ಬಗ್ಗೆ ಆಶೆ ಹುಟ್ಟಿಸುವಂತಿದೆ. ಇಡೀ ಕಥೆ ನನಗೆ ಆಧುನಿಕೋತ್ತರ ರಚನೆಯಾಗಿ ಕಾಣಿಸಿತು. ಬರೆವಣಿಗೆ ಎಲ್ಲೂ ತುಂಡುಗಡಿಯದೆ ನಿಲುಗಡೆ ಆಯ್ತು ಅನ್ನಿಸಿದಾಗಲೂ ಮತ್ತೆ ("ಅರೆ, ಮತ್ತೆ ರಿಂಗಾಗ್ತಿದೆ", ಅಂದರೆ ಮನುಷ್ಯನ--ಸಂಬಂಧಕ್ಕೆ ಹಪಹಪಿಸುವ--ಪಾಡು--) ಮುಂದುವರಿಯುವ ಸೂಚನೆಯಂತಿದೆ. ಇಡಿಯ ಕಥೆಯ ಶೈಲಿಯೇ ಬದುಕಿನ ಅರಾಜಕ, ಹಿಂಸ್ರ, ಗದ್ದಲದ ಬೇಬಲ್ ಗೋಪುರದ ಅಭಿನಯದಂತಿದೆ. ಭಾಷೆಯ ಜೀವಂತ ಬಳಕೆಯ ಬಗ್ಗೆ, ಶಬ್ದಸೂತಕವನ್ನು ಮೀರುವ ಹಂಬಲಕ್ಕೆ ಭಾಷ್ಯ ಬರೆದಂತಿದೆ ಈ ಕಥೆ. ಆಧುನಿಕ ರಾಜಕೀಯ ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ (ಸತ್ಯವನ್ನೇ ಹೇಳಬೇಕಾದ ಮಾಧ್ಯಮಗಳಲ್ಲಿ ಕೂಡ) ಬೇರಿಳಿದ ಭ್ರಷ್ಟಾಚಾರ, ಹಿಂಸಾನಂದದ ಬಗೆಗೂ ಟೀಕೆ ಬರೆದಂತಿದೆ. ಒಟ್ಟಿನಲ್ಲಿ ಇದು ಕಥೆಯಲ್ಲ; ಒಂದು ಆಧುನಿಕ ಕಾವ್ಯವೇ ಆಗಿದೆ.

ಇನ್ನು ಭೇತಾಳ ಕಥೆ. ಬೇರೆ ಬೇರೆ ಪಾತ್ರಗಳ ಮೂಲಕ ಕಥೆ ಹೇಳುವುದು ಕನ್ನಡಕ್ಕೇನೂ ಹೊಸದಲ್ಲ. ಟಾಗೋರ್ ಈ ತಂತ್ರವನ್ನು ಬಹಳ ಚೆನ್ನಾಗಿಯೇ ನಿರ್ವಹಿಸಿದರು ಅನ್ನಿಸುತ್ತದೆ. ನಡುವೆ ನವ್ಯದ ಮತ್ತಿನಲ್ಲಿ  ಈ ತಂತ್ರ ಮೂಲೆಗೆ ಬಿದ್ದಿದ್ದು ಇದೀಗ ಮತ್ತೆ ಮುಂಚೂಣಿಗೆ ಬರುತ್ತಿರುವುದಕ್ಕೆ ಸಾಕ್ಷಿ ಈ ಕತೆ. ಇದೂ ಒಂದು ಆಧುನಿಕ ಕತೆಯೇ. ದಿವ್ಯ ಭವ್ಯ ಎಂದೆಲ್ಲ ಮತ್ತೆ ಪರಂಪರೆಗೇ ಜೋತುಬಿದ್ದ ನಮ್ಮ ಹಿರಿಯ ಬರೆಹಗಾರರ ಮಧ್ಯೆ ನೀವು ಪೂರ್ವ ಪಶ್ಚಿಮವನ್ನು ಬೆಸೆಯುವ ಮೂಲಕ ಬೇತಾಳಸ್ಥಿತಿಯನ್ನು ಮೀರಲೆತ್ನಿಸುವ ಪಾತ್ರಗಳನ್ನು ಸೃಷ್ಟಿಸಿರುವುದು ಕುತೂಹಲಕಾರಿಯಾಗಿದೆ. ದೇಹ ಮನಸ್ಸನ್ನು ಬೆಸೆಯಲೆತ್ನಿಸುವ, ಕೆಡಹುವ ಹಿಂಸೆಗಿಂತ ಪ್ರಜ್ಞಾಪೂರ್ವಕವಾಗಿ ನಾಗರಿಕತೆಯನ್ನು ಕಟ್ಟುವ, ಎಲ್ಲವನ್ನೂ ಸಮಾನ ನೆಲೆಯಲ್ಲಿ ನೋಡಬೇಕೆನ್ನುವ, ಅಂಚಿನಲ್ಲಿರುವವರ ಬೇತಾಳ ಸ್ಥಿತಿಯನ್ನು ನಿವಾರಿಸಲೆತ್ನಿಸುವ, ಭಾಷೆಯನ್ನು ಸೃಷ್ಟಿಗಾಗಿ, ವಿವೇಚನೆಗಾಗಿ, ಸಂಬಂಧಕ್ಕಾಗಿ ಬಳಸಿಕೊಳ್ಳುವ ಕಾಳಜಿ, ಬದುಕು ಸಾವು ಮುಖ ಮುಖವಾಡದ ಪ್ರೇತಸ್ಥಿತಿ, ಈ ಪ್ರೇತಸ್ಥಿತಿಯನ್ನು ತನ್ನ ಲಾಭಕ್ಕೆ ಬಳಸುವ ಸಮಾಜದ ಕಾನೂನು--ಹೀಗೆ ಈ ಎಲ್ಲ ಇವೊತ್ತಿನ ದಿನಮಾನದ ಕಾಳಜಿಗಳನ್ನು ತೆಕ್ಕೆಗೆ ತೆಗೆದುಕೊಂಡ ಈ ಕತೆಯ ಬೀಸು ದೊಡ್ಡದು. ವರದಿ, ಬೇರೆ ಬೇರೆ ಪಾತ್ರಗಳ ಮೂಲಕ ಕಥೆ ಹೇಳುತ್ತ--ನೀವು objectivityಯನ್ನು ಸಾಧಿಸುವುದರಿಂದ ಕಥೆಯ ಆಶಯ ಹೆಚ್ಚು ಗಟ್ಟಿಮುಟ್ಟಾಗಿದೆ. ಕಥೆ ಕೂಡಾ ಬೇತಾಳ ಕತೆಯ ತಂತ್ರವನ್ನು ಅಳವಡಿಸಿಕೊಂಡಿದೆ.--(ಮುಖ್ಯವಾಗಿ ತುಕ್ಕಪ್ಪಯ್ಯ).

"ಜೀವಪಕ್ಷಿಯ ಕತೆ"  ಮತ್ತೆ ಓದಿದೆ. ಅವೊತ್ತು ಓದಿ ಪಟ್ಟ ಬೆರಗು ಖುಷಿ ಮತ್ತೆ ಮರುಕೊಳಿಸಿತು. "ಮೂಗೇಲ" ಕಾಫ್ಕಾನ "ಮೆಟಾಮೊರ್ಫೊಸಿಸ್" ನ್ನು ನೆನಪಿಸುತ್ತದೆ ನಿಜ. ಆದರೆ ಅದು ಅಂತಿಮವಾಗಿ ನಿಮ್ಮದೇ, ಕನ್ನಡದ್ದೇ ಆಗಿದೆ.

ಕಥೆಗಳ ನಡುವೆ ನೀವು ಉದಯವಾಣಿಯಲ್ಲಿ ಬರೆಯುತ್ತಿದ್ದ ಕಥೆಯಂಥ ಪ್ರಬಂಧವೂ ಸೇರಿದಂತಿದೆ. "ಕ್ರೌಂಚ"ದ ಭಾಷೆ ತುಸು ಅಳ್ಳಕ ಅನ್ನಿಸಿತು.

ರಿಸಾರ್ಟ್, ಜೀವಪಕ್ಷಿ, ಅರ್ಬುದ ಮತ್ತು ಪುಣ್ಯಕೋಟಿ, ಬೇತಾಳ ಕಥೆ ಬರೆದ ಮೇಲೆ--ಮತ್ತೆ ಇನ್ನು ಯಾವ ಕಥೆ ಬರೆಯದಿದ್ದರೂ ಪರವಾ ಇಲ್ಲ, ನೀವು ನಮ್ಮ ನಡುವಿನ ಮಹತ್ತ್ವದ ಕಥೆಗಾರರಾಗಿಯೇ ಉಳಿಯುತ್ತೀರಿ. ಇಂಥಾ ಕತೆಗಳನ್ನು ಓದಿದಾಗ ಬದುಕಿದ್ದು ಸಾರ್ಥಕ ಅನ್ನಿಸುತ್ತದೆ.

--ಹರಿಯಪ್ಪ ಪೇಜಾವರ."

No comments:

Post a Comment