Saturday, January 28, 2012

ಅತ್ರಿ ಬುಕ್ ಸೆಂಟರ್

ಅತ್ರಿ ಬುಕ್ ಸೆಂಟರ್ ಮುಚ್ಚುವ ನಿರ್ಧಾರವನ್ನು ಅದರ ಮಾಲೀಕ ಅಶೋಕ ವರ್ಧನ ತೆಗೆದುಕೊಂಡಿದ್ದಾರೆ. ಚೆನ್ನಾಗಿ ಬದುಕಿದವನಿಗೆ ಮಾತ್ರ ಅದನ್ನು ಬಿಟ್ಟುಕೊಡಲು ಹೆದರಿಕೆಯಿರುವುದಿಲ್ಲ ಎಂಬ ಒಂದು ಮಾತಿದೆ. ಹಾಗೆ ಚೆನ್ನಾಗಿ ಈ ಪುಸ್ತಕದಂಗಡಿ ನಡೆಸಿದ ಅಶೋಕ್ ಗೆ ಅದನ್ನು ಮುಚ್ಚುವ ಹೆದರಿಕೆ ಇಲ್ಲ. ಬೇಡ, ಇನ್ನು ಇದರಲ್ಲಿ ಸ್ವಾರಸ್ಯ ಇಲ್ಲ ಅನ್ನಿಸಿದಾಗ ಅವರು ಅದನ್ನು ಮುಚ್ಚಿ ತಮ್ಮ ಜೀವನ ಬೇರೆ ಯಾವ ರೀತಿ ಸೃಜನಶೀಲ ಆಗಬಹುದು ಎಂದು ಹುಡುಕಲು ಹೊರಟಿದ್ದಾರೆ. ಅನೇಕರು ಇಂಥಾ ಸಂದರ್ಭದಲ್ಲಿ ಮಾಡುವ ಹಾಗೆ ಅಷ್ಟು ಪ್ರಮುಖ ಸ್ಥಳದಲ್ಲಿರುವ ಆ ಜಾಗದಲ್ಲಿ ಹೆಚ್ಚು ಲಾಭ ಬರಬಹುದಾದ ಹಾರ್ಡ್ ವೇರ್ ಶಾಪು ಅಥವಾ ಐಸ್ ಕ್ರೀಂ ಪಾರ್ಲರ್ ಇತ್ಯಾದಿ ತೆರೆಯಲು ಅವರು ಹೊರಟಿಲ್ಲ. ತಮ್ಮ ಕನ್ವಿಕ್ಷನ್ನಿಗೆ ಅನುಗುಣವಾಗಿ ಮುಚ್ಚುವಾಗಲೂ ನಡೆದುಕೊಳ್ಳುತ್ತಿದ್ದಾರೆ. ಅವರಿಗೆ ಶುಭಾಶಯಗಳು.

ಅತ್ರಿ ಬುಕ್ ಸೆಂಟರ್ ಬರೀ ಪುಸ್ತಕದ ಅಂಗಡಿ ಮಾತ್ರ ಆಗಿರಲಿಲ್ಲ. ಅದರಲ್ಲಿನ ಪುಸ್ತಕಗಳ ಆಯ್ಕೆ  ಅದರ ಮಾಲೀಕರ ಅಭಿರುಚಿಯನ್ನು ಬಿಂಬಿಸುತ್ತಿತ್ತು. ಅಲ್ಲಿ ನೋಟುಪುಸ್ತಕಗಳು, ಪೆನ್ನು ಪೆನ್ಸಿಲ್ಲು ಮೊದಲಾದ ಸುಲಭಕ್ಕೆ ಲಾಭ ಬರುವ ಸಾಮಗ್ರಿ ಇಟ್ಟಿರಲಿಲ್ಲ. ಪಂಚಾಗ ಮೊದಲಾದವೂ ಇಡುತ್ತಿರಲಿಲ್ಲ. ಹೋದಾಗ ಸಾಹಿತ್ಯ ಮೊದಲಾದ ಅನೇಕ ವಿಷಯಗಳ ಬಗ್ಗೆ ಅಲ್ಲಿ ಮಾತಾಡಲು ಆಗುತ್ತಿತ್ತು. ಸ್ವತಃ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ. ಎ. ಪದವೀಧರರಾದ ಅವರು ಸಾಹಿತ್ಯದ ಅನೇಕ ಸೂಕ್ಷ್ಮಗಳನ್ನು ಬಲ್ಲವರಾಗಿದ್ದರು. ಹೀಗಾಗಿಯೇ ಪುಸ್ತಕ ಕೊಳ್ಳುವುದರ ಜೊತೆಗೆ ಅವರನ್ನು ಮಾತಾಡಿಸಿಬರಬಹುದೆಂಬುದು ಸಹಾ ಅತ್ರಿಗೆ ಹೋಗಲು ಇದ್ದ ಒಂದು ಕಾರಣವಾಗಿತ್ತು.

ಪುಸ್ತಕ ವ್ಯಾಪಾರದಲ್ಲಿ ಪುಸ್ತಕ ತರಿಸಿ ಮಾರಾಟ ಮಾಡಿ ಪ್ರಕಾಶಕರಿಗೆ ಹಣ ಕೊಡದವರು ತುಂಬಾ ಜನ ಇರುತ್ತಾರೆ. ಪ್ರಕಾಶನದಲ್ಲಿ ನಷ್ಟವಾಗುವುದೇ ಹೀಗೆ  ಕೈಕೊಡುವ ಪುಸ್ತಕ ವ್ಯಾಪಾರಿಗಳಿಂದ. ಅಶೋಕರ ಪ್ರಾಮಾಣಿಕ ವ್ಯವಹಾರ, ತರಿಸಿಕೊಂಡ ಪುಸ್ತಕಗಳಿಗೆ ಸೋಡಿ ಕಳೆದು ಕೂಡಲೇ ಹಣ ಕೊಡುವ ಕ್ರಮ ಅವರನ್ನು ಅತ್ಯಂತ ಗೌರವಾನ್ವಿತ ಪುಸ್ತಕ ವ್ಯಾಪಾರಿಯನ್ನಾಗಿ ಮಾಡಿವೆ. ಆದ್ದರಿಂದಲೇ ಅವರು ಅಂಗಡಿ ಮುಚ್ಚುತ್ತೇನೆ ಎಂದಾಗ ನನಗೆ ಒಂದು ದೊಡ್ಡ ಮೌಲ್ಯದ ಜೀವಂತ ರೂಪ ಮರೆಗೆ ಸರಿಯುತ್ತಿದೆ ಅನ್ನಿಸಿತು.

ನನಗೆ ಅಶೋಕರ ಪರಿಚಯ ನಾಲ್ಕು ದಶಕಗಳಿಗೂ ಹಿಂದಿನದು. ನಾನು 1971ರ ಹೊತ್ತಿಗೆ ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದಾಗ ಸರಸ್ವತೀಪುರಂ ನ ಆರನೇ ಮೇನಿನಲ್ಲಿ ವಾಸವಾಗಿದ್ದೆ. ಆಗ ಕಾಲೇಜು ವಿದ್ಯಾರ್ಥಿಯಾಗಿದ್ದ ಅವರು ನನ್ನನ್ನು ಗಮನಿಸಿದ್ದರಂತೆ. ನನಗೆ ಅವರ ನಿಕಟ ಪರಿಚಯವಾಗಲು ಸುರುವಾದದ್ದು ನಾನು ಲೈಬ್ರೆರಿ ಅಫ್ ಕಾಂಗ್ರೆಸ್ ಪರವಾಗಿ ಪುಸ್ತಕ ಕೊಳ್ಳಲು ಮಂಗಳೂರಿಗೆ ಪ್ರವಾಸ ಬರಲು ಪ್ರಾರಂಭಿಸಿದ ಮೇಲೆ. ಆ ರಿಸರ್ಚ್ ಲೈಬ್ರೆರಿಗೆ ಬೇಕಾದ ಅತ್ಯಂತ ಹೆಚ್ಚು ಸಂಖ್ಯೆಯ ಪುಸ್ತಕಗಳನ್ನು ಕೊಳ್ಳುತ್ತಿದ್ದ ಅಂಗಡಿಗಳಲ್ಲಿ ಅತ್ರಿ ಒಂದು. ಆನಂತರ ಪ್ರಕಾಶಕನಾದ ಮೇಲೂ ಅವರ ನನ್ನ ಸಂಬಂಧ ತುಂಬಾ ಚೆನ್ನಾಗಿ ನಡೆದಿದೆ. ರಥಮುಸಲ ಪಠ್ಯಪುಸ್ತಕವಾದಾಗ ಅವರು ಇದ್ದದ್ದರಿಂದ ನನಗೆ ಅದನ್ನು ಸರಿಯಾಗಿ ತಲೆ ಬಿಸಿ ಇಲ್ಲದಂತೆ ವಿತರಿಸಿಕೊಳ್ಳಲು ಸಾಧ್ಯವಾಯಿತು.

ಕೆಲವು ಪುಸ್ತಕದ ಅಂಗಡಿಗಳು ನನಗೆ ಪ್ರಿಯವಾದವು. ದೆಹಲಿಯಲ್ಲಿ ರಾಮಕೃಷ್ಣ ಬುಕ್ ಸ್ಟಾಲ್ ಹೀಗೆ ಪ್ರಿಯವಾಗಿತ್ತು. ಅನೇಕ ವರ್ಷಗಳ ಹಿಂದೆಯೇ ಅದನ್ನು ಮುಚ್ಚಿ ಬಟ್ಟೆ ಅಂಗಡಿಯನ್ನಾಗಿ ಪರಿವರ್ತಿಸಿದರು. ಬಟ್ಟೆ ಅಂಗಡಿ ಆದದ್ದನ್ನು ಮೊದಲ ಸಲ ನೋಡಿದಾಗ, ನನಗೆ ಆಗ ಒಂದು ಶರ್ಟು ಕೊಂಡುಕೊಳ್ಳುವ ಅಗತ್ಯ ಇದ್ದಿದ್ದರೂ ಯಾಕೋ ಅಲ್ಲಿ ಕೊಳ್ಳಬೇಕು ಅನ್ನಿಸಲಿಲ್ಲ. ಬೆಂಗಳೂರಿನ ಪ್ರೀಮಿಯರ್ ಕೂಡಾ ಒಂದು ಸಾಂಸ್ಕೃತಿಕ ಕೇಂದ್ರವಾಗಿದ್ದದ್ದು. ಅದೂ ಸುಮಾರು ಮೂರು ವರ್ಷಗಳ ಕೆಳಗೆ ಮುಚ್ಚಿತು. ಅದರ ಮಾಲೀಕರಾದ ಶಾನುಭೋಗ್ ಇದನ್ನು ಓದಿ, ಚೆನ್ನಾಗಿದೆ ಎಂದು ಹೇಳಬಲ್ಲಷ್ಟು ತಿಳಿದಿದ್ದವರು. ಇನ್ನೊಂದು ಪುಸ್ತಕದ ಅಂಗಡಿ ಸಿಲೆಕ್ಟ್ ಬುಕ್ ಶಾಪ್. ಇದು ಸೆಕೆಂಡ್ ಹ್ಯಾಂಡ್ ಬುಕ್ ಶಾಪು. ಈಗಲೂ ನಡೆಯುತ್ತಿದೆ. ಅತ್ಯಂತ ಅಪರೂಪದ ಪುಸ್ತಕಗಳು ಸಿಗುವ ಅಂಗಡಿ ಅದು. ಅವರಿಂದಾಗಿ ನನಗೆ ಬೇರೆ ರೀತಿಯಲ್ಲಾದರೆ ಓದಲು ಸಾಧ್ಯವಾಗದಿದ್ದ ಕೆಲವು ಪುಸ್ತಕಗಳನ್ನು ಓದಲು ಸಾಧ್ಯವಾಗಿದೆ. ಯಾರೂ ಇಲ್ಲದಿದ್ದಾಗ ಡ್ರಾಯರಿನ ಮೂಲೆಯಿಂದ ಒಂದು ಅಪರೂಪದ ಪುಸ್ತಕ ತೆಗೆದು ಕಳ್ಳನಗೆಯಿಂದ ಅದನ್ನು ಅಲ್ಲಿನ ಮಾಲೀಕ ಕೆ. ಕೆ. ಮೂರ್ತಿ ನನಗೆ ಕೊಟ್ಟಿದ್ದಾರೆ.

ಇವರೆಲ್ಲರೂ ಪುಸ್ತಕದ ಅಂಗಡಿ ಮುಚ್ಚಿದರೂ ಸಮಾನ ಆಸಕ್ತಿಗಳಿಂದಾಗಿ ಸ್ನೇಹಿತರಾಗಿ ಮುಂದುವರಿಯುವವರು.

ಅಶೋಕರ ಭವಿಷ್ಯ ಇದು ವರೆಗಿನಷ್ಟೇ ಯಶಸ್ವಿಯಾಗಿರಲಿ ಎಂದು ಹಾರೈಸುತ್ತೇನೆ.

No comments:

Post a Comment