Sunday, December 26, 2010

ಬೋಧಿ ಟ್ರಸ್ಟ್: ಹತ್ತು ವರ್ಷ

ಬೋಧಿ ಟ್ರಸ್ಟ್ ಪ್ರಾರಂಭವಾಗಿ ಹತ್ತು ವರ್ಷವಾಯಿತು. ಈ ಚಿತ್ರಗಳು ಆಗಸ್ಟ್ 6, 2000ರಂದು ಬಿ. ವಿ. ಕಾರಂತರು ಕಲ್ಮಡ್ಕದಲ್ಲಿ ಮಾಡಿದ ಉದ್ಘಾಟನಾ ಭಾಷಣದವುಗಳು. ಮೊದಲನೆಯ ಚಿತ್ರ ನಾನು ಮಾಡುತ್ತಿರುವ ಸ್ವಾಗತ ಭಾಷಣ ಮತ್ತು ಕೂತಿರುವ ಬಿ. ವಿ. ಕಾರಂತರು. ಅವರಿಗೆ ಆಗ ತಾನೇ ಕ್ಯಾನ್ಸರ್ ಇದೆಯೆಂದು ಪತ್ತೆಯಾಗಿತ್ತು. ಅದನ್ನು ತೋರಿಸಿಕೊಡದೆ ಮಾತಾಡಿದರು. ನಾಲ್ಕನೆಯ ಚಿತ್ರದಲ್ಲಿ ಕೆಂಪು ಅಂಗಿ ಹಾಕಿ ಕ್ಯಾಮೆರಾ ಹಿಡಿದು ಕೂತವರು ಉಡುವೆಕೋಡಿ ರಾಧಾಕೃಷ್ಣ. ಅಲ್ಲೇ ಸ್ವಲ್ಪ ಹಿಂಬದಿಯಲ್ಲಿರುವವರು--ಎಡಗೈಯ್ಯನ್ನು ಬಾಯಿಯ ಮೇಲೆ ಇಟ್ಟುಕೊಂಡು ಕೂತ ಹುಡುಗ--ಅವರ ಅಣ್ಣ--ಈಗ ದಿವಂಗತ-- ಉಡುವೆಕೋಡಿ ಶಿವಶಂಕರ. ಒಂದು ಒಳ್ಳೆಯ ಪದ್ಯ ಬರೆದಿದ್ದ. ಆಗ ನನಗಿನ್ನೂ ಮನೆ ಆಗಿರಲಿಲ್ಲ. ಹೀಗಾಗಿ ನನ್ನ ಹತ್ತಿರದ ಬಂಧುವಾದ ಶಿವಶಂಕರನ ಮನೆಯಲ್ಲಿ ಬಿ. ವಿ. ಕಾರಂತರಿಗೆ ವ್ಯವಸ್ಥೆ ಮಾಡಲಾಗಿತ್ತು. ಅವತ್ತು ಕಾರಂತರು ಬಯಸಿ ತಂಬಳಿ ಮಾಡಿಸಿಕೊಂಡಿದ್ದರು. ಎರಡನೆಯ ಸಾಲಿನಲ್ಲಿ ಎಡಬದಿಗೆ ಮೊದಲನೆಯವರಾಗಿ ಮುಖಕ್ಕೆ ಕೈ ಹಿಡಿದು ಕೂತವರು ಟಿ. ಜಿ. ಮುಡೂರರು. ಅವರ ಹಿಂದೆ ಇರುವವರು ಕೆರೆಕ್ಕೋಡಿ ಗಣಪತಿ ಭಟ್ಟರು. ಮೂರನೆಯ ಚಿತ್ರದಲ್ಲಿ ಕಾರಂತರಿಗೆ ನೆನಪಿನ ಕಾಣಿಕೆ ಕೊಡುತ್ತಿರುವವರೂ ಇವರೇ. ಇವರೇ ಸುಮಾರು ಅರುವತ್ತು ವರ್ಷಗಳ ಹಿಂದೆ ಕಲ್ಮಡ್ಕದಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆ ಪ್ರಾರಂಭಿಸಿ ಇಲ್ಲಿ ಒಂದು ಬದಲಾವಣೆ ತಂದವರು. ಯರ್ಮುಂಜ ರಾಮಚಂದ್ರರ ಪ್ರಥಮ ಕಥಾಸಂಗ್ರಹ  ಚಿಕಿತ್ಸೆಯ ಹುಚ್ಚು ಮತ್ತು ಇತರ ಕಥೆಗಳು (1955) ಪ್ರಕಟಿಸಿದವರೂ ಇವರೇ. ಗಣಪತಿ ಭಟ್ಟರು ಈಗ ದಿವಂಗತರು. ನನಗೆ ಹೈಸ್ಕೂಲಿನಲ್ಲಿ ಅಧ್ಯಾಪಕರೂ ಆಗಿದ್ದ ಮುಡೂರರು ಈಗ ಪಂಜದಲ್ಲಿ ನೆಲೆಸಿದ್ದಾರೆ. ಕವಿ. ಒಳ್ಳೆಯ ಕವಿ. ಕೆಲವು ಒಳ್ಳೆಯ ಕತೆ ಬರೆದಿದ್ದಾರೆ. ಹೊನ್ನಮ್ಮನ ಕೆರೆ ಎಂಬ ಹೆಸರಿನ ಒಂದು ಒಳ್ಳೆಯ ಜಾನಪದ ಕವನವನ್ನು ಮಡಿಕೇರಿಯಲ್ಲಿ ಜಾನಪದ ಕಾವ್ಯ ಸಂಗ್ರಹ ವ್ಯಾಪಕವಾಗಿ ಪ್ರಾರಂಭವಾಗುವುದಕ್ಕೆ ಮೊದಲೇ 1950ರ ದಶಕದಲ್ಲೇ ಸಂಗ್ರಹಿಸಿದ್ದಾರೆ. ಇವರ ಜೊತೆಯ ಇನ್ನೊಬ್ಬರಾದ ಕೆ. ರಾಮಚಂದ್ರ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಓದುತ್ತಿದ್ದಾಗ ತಮ್ಮ 24-25ನೆಯ ವಯಸ್ಸಿನಲ್ಲಿ ಕ್ಷಯರೋಗದಿಂದ ತೀರಿಕೊಂಡರು. ಇವರ ಕವನ "ಸುಪ್ತಶಕ್ತಿ"ಯನ್ನು  ಕಲ್ಮಡ್ಕದ ಶಾಲಾ ವಿದ್ಯಾರ್ಥಿಗಳ ಮೂಲಕ ಸುಮಾರು ಎಂಟು ವರ್ಷಗಳ ಹಿಂದೆ ಒಂದು ಸಮಾರಂಭದಲ್ಲಿ ಹಾಡಿ ಸಭಿಕರೆದುರು ಸಾದರ ಪಡಿಸಲಾಯಿತು. ಅವತ್ತು ಪುತ್ತೂರಿನ ಬೋಳಂತಕೋಡಿ ಈಶ್ವರ ಭಟ್ಟರ ಕರ್ನಾಟಕ ಸಂಘ ಪುನರ್ಮುದ್ರಿಸಿದ ಅವರ ಕವನ ಸಂಗ್ರಹದ ಬಿಡುಗಡೆ ಇತ್ತು. ಆ ಪುಸ್ತಕದ ಹೆಸರು: ಬಿದ್ದದ್ದು ಗರಿಯಲ್ಲ, ಹಕ್ಕಿಯೇ.
ಹತ್ತು ವರ್ಷವಾದ್ದನ್ನು ಸಂಭ್ರಮಿಸಿಕೊಳ್ಳಲು ಈಗಾಗಲೇ ಭಾರತೀಯ ಕಾವ್ಯದ ಆರ್ಕೈವ್ ಪ್ರಾರಂಭಿಸಿದ್ದೇವೆ. ಇದರ ವಿಳಾಸ: http://kavyodyoga.blogspot.com  ನೋಡಿ, ಓದಿ. ಒಳ್ಳೆಯ ಕವಿತೆಗಳ ಒಳ್ಳೆಯ ಅನುವಾದಗಳಿದ್ದರೆ ತಿಳಿಸಿ, ಕಳಿಸಿ.

ಇದರ ಜೊತೆಗೆ ಕಾವ್ಯೋತ್ಸವ ನಡೆಸಬೇಕೆಂದಿದ್ದೇವೆ. ಮೊದಲ ಕಾವ್ಯೋತ್ಸವ ಮಾರ್ಚ್ 20ರಂದು ಬೆಂಗಳೂರಿನಲ್ಲಿ ನಡೆಯಲಿದೆ.

3 comments:

  1. ಬೋಧಿ ಟ್ರಸ್ಟ್ ನ ಕತೆ ಕೇಳಿ ಸಂತೋಷವಾಯಿತು, ಆ ಊರಿನ ಮಹನೀಯರುಗಳಾದ ದೇವ, ಉಡುವೆಕೋಡಿ ರಾಧಾಕೃಷ್ಣ. ಶಿವಶಂಕರ. ಟಿ. ಜಿ. ಮುಡೂರು. ಕೆರೆಕ್ಕೋಡಿ ಗಣಪತಿ ಭಟ್ಟ ಮೊದಲಾದವರನ್ನು ಕಂಡು ತುಂಬಾ ಹೆಮ್ಮೆ ಅನಿಸಿತು. ಯರ್ಮುಂಜ ರಾಮಚಂದ್ರರ ಕಲ್ಮಡ್ಕ ನನ್ನ ಊರಾದ ಪಂಜಕ್ಕೆ ಹತ್ತಿರ. ಚಿತ್ರ ನೋಡಿ, ಲೇಖನ ಓದಿ ಭಾವುಕನಾದೆ,

    ReplyDelete
  2. This comment has been removed by the author.

    ReplyDelete
  3. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನೆನಪಿದೆ. ಕಾರಂತರು ತಮ್ಮ ಭಾಷಣದಲ್ಲಿ ನೆನಪಿಸಿದ ಅವರ ನಾಟಕದ ತುಣುಕು ನನ್ನ ಕಾಲೇಜಿನ ದಿನಗಳ ಪ್ರಹಸನ ಸ್ವತ್ತೂ ಆಗಿತ್ತು.. ಒಂದು ಚೊಕ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೆನಪು ಮರೆಯಲಾಗದು..

    ReplyDelete