Thursday, December 2, 2010

ಕುದುರೆ ಖುರಪುಟದಗ್ನಿಕಿಡಿ ಹಾರುತಿದೆ

ತುಂಬಾ ಸಮಯದ ಹಿಂದೆ--ಬಹುಶಃ ಮೂವತ್ತು ವರ್ಷಕ್ಕೂ ಹಿಂದೆ---ಕೆಲವು ವಾಚಿಕೆಗಳು ಪ್ರಕಟವಾಗಿದ್ದವು. ಇದನ್ನು ಸಾಹಿತ್ಯ ಪರಿಷತ್ತು ಪ್ರಕಟಿಸಿತೇ? ಹಾಗೆಂದು ಅಸ್ಪಷ್ಟ ನೆನಪು. ಸ್ಪಷ್ಟವಾಗಿ ನೆನಪಿರುವುದೆಂದರೆ ನಿರಂಜನ ವಾಚಿಕೆ ಎಂಬೊಂದು ವಾಚಿಕೆ ಪ್ರಕಟವಾಗಿತ್ತು ಎಂಬುದು. ನಿರಂಜನರ ಓದುಗರ ಸಂಖ್ಯೆ ಕ್ಷೀಣಿಸುತ್ತಿದ್ದ ಸಮಯದಲ್ಲಿ ಅವರ ಬಗ್ಗೆ ಈ ವಾಚಿಕೆ ಹೊಸ ಆಸಕ್ತಿ ಹುಟ್ಟಿಸುವ ಪ್ರಯತ್ನವಾಗಿ ಬಂದಿತ್ತು ಎಂದೂ ನೆನಪು. ಓದುಗರ ಸಂಖ್ಯೆ ಕ್ಷೀಣಿಸಲು ಮುಖ್ಯ ಕಾರಣ ನವ್ಯ ಸಾಹಿತ್ಯ ಚಳವಳಿಯಿಂದಾಗಿ ಅಭಿರುಚಿ ಬದಲಾದದ್ದು. ಕಾವ್ಯದ ಧ್ವನಿಶಕ್ತಿ ಇಲ್ಲದ ಯಾವ ಬರೆವಣಿಗೆಯೂ ಆಗ ಅಷ್ಟೊಂದು ಪ್ರಮುಖ ಅನ್ನಿಸುತ್ತಿರಲಿಲ್ಲ.  ನಿರಂಜನ ವಾಚಿಕೆಗೆ ಯಾವ ಪ್ರತಿಕ್ರಿಯೆ ಬಂತು, ಇದರ  ಜೊತೆಗೆ ಬೇರೆ ವಾಚಿಕೆಗಳು ಬಂದುವೇ ಹೇಗೆ ಗೊತ್ತಿಲ್ಲ. ಬಂದಿರಬಹುದು. ಆದರೆ ಆನಂತರ ಈ ವಾಚಿಕೆ ಬರುವ ಸಂಪ್ರದಾಯ ಕನ್ನಡದಲ್ಲಿ ನಿಂತು ಹೋಯಿತು. ಆಯ್ದ ಕವನ ಕತೆ ಇತ್ಯಾದಿ ಬರುತ್ತವೆ. ವಾಚಿಕೆಗಳು ಬಂದಂತಿಲ್ಲ. ಆದರೆ ವಾಚಿಕೆ ಒಬ್ಬ ಲೇಖಕನ ಸಮಗ್ರ ಕೃತಿಗಳಿಗೆ ಒಂದು ಮುನ್ನುಡಿಯಿದ್ದಂತೆ: ಅವನನ್ನು ಪರಿಚಯಿಸಿ  ಹೆಚ್ಚು ಓದುಗರನ್ನು ದೊರಕಿಸಿಕೊಡುವುದರಲ್ಲಿ ಇಂಥಾ ವಾಚಿಕೆಗಳ ಮಹತ್ವವಿದೆ.

ಇಂಗ್ಲಿಷಿನಲ್ಲಿ ಈ ಬಗೆಯ ವಾಚಿಕೆಗಳು ಅನೇಕ ಲೇಖಕರ ಬಗ್ಗೆ ಇವೆ. ವಾಚಿಕೆ ಎನ್ನುವ ಕನ್ನಡ ಪದವೂ ಸೇರಿದಂತೆ ಇಡೀ ವಾಚಿಕೆಯ ಪರಿಕಲ್ಪನೆಯೇ ಇಂಗ್ಲಿಷಿನಿಂದ ಬಂದದ್ದು. ಇಂಗ್ಲಿಷಿನಲ್ಲಿ ಇವು ಪಠ್ಯಪುಸ್ತಕಗಳ ಅಗತ್ಯ ಪೂರೈಸುವ  ಉದ್ದೇಶ ಹೊಂದಿವೆ. ಕೆಲವು ತುಂಬಾ ಒಳ್ಳೆಯ ವಾಚಿಕೆಗಳೂ ಇಂಗ್ಲಿಷಿನಲ್ಲಿ ಇವೆ. ನಾನು ಆಗಾಗ ಬಳಸುವ ಫ್ರೆಡರಿಕ್ ನೀಷೆ ರೀಡರ್ ಫಕ್ಕನೆ ನೆನಪಾಗುವ ಒಂದು ಉದಾಹರಣೆ.

ಕನ್ನಡದಲ್ಲಿ ಹಿಂದೆ ಬಂದ ವಾಚಿಕೆಗಳ ನಂತರ ಈಗ ನುಡಿ ಪುಸ್ತಕ ಪ್ರಕಾಶನದ ರಂಗನಾಥನ್ ಮತ್ತೆ ವಾಚಿಕೆಗಳ ಸಂಪ್ರದಾಯ ಪ್ರಾರಂಭಿಸಿದ್ದಾರೆ. ಮುಂದೆ ಅನೇಕ ಮುಖ್ಯ ಲೇಖಕರ ವಾಚಿಕೆ ಪ್ರಕಟಿಸುವ ಯೋಜನೆ ಅವರಿಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಲೇಖಕರಲ್ಲದೆ ಮರೆಗೆ ಸರಿದ ಒಳ್ಳೆಯ ಲೇಖಕರು, ಅಥವಾ ಯಾರ ಪುಸ್ತಕಗಳು ಸುಲಭವಾಗಿ ಸಿಕ್ಕುತ್ತಿಲ್ಲವೋ ಅಂಥಾ ಲೇಖರು--ಇಂಥವರ ವಾಚಿಕೆಗಳ ಅಗತ್ಯವೂ  ಕನ್ನಡಕ್ಕೆ ಇದೆ. ಅನಕೃ, ತರಾಸು, ನಿರಂಜನ, ಎಂ.ಕೆ. ಇಂದಿರಾ, ಬಸವರಾಜ ಕಟ್ಟೀಮನಿ, ಪುತಿನ, ತೀನಂಶ್ರೀ--ಹೀಗೆ ವಾಚಿಕೆಗಳು ಪ್ರಕಟವಾಗಬೇಕಾದ ಅಗತ್ಯವಿರುವ ಲೇಖಕರ ಪಟ್ಟಿಯನ್ನೇ ಕೊಡಬಹುದು. ಅನಕೃ ಶ್ರೇಷ್ಠ ಲೇಖಕರೆಂದು ಪ್ರತಿಪಾದಿಸಿದರೆ ಅದನ್ನು ಒಪ್ಪುವವರು ಕಮ್ಮಿ ಇರಬಹುದು.  ಆದರೆ ಅವರ ಐತಿಹಾಸಿಕ ಮಹತ್ವವನ್ನು ಯಾರೂ ಅಲ್ಲಗಳೆಯಲಾರರು. ಅದು ಏನು ಎಂಬುದನ್ನು ವಾಚಿಕೆ ಓದುಗರ ಎದುರು ಇಡಬಲ್ಲುದು; ಅವರ ಬಗ್ಗೆ --ಅವರಂಥಾ ಇನ್ನೂ  ಕೆಲವರ ಬಗ್ಗೆ --ಹೊಸ ಚರ್ಚೆ ನಡೆಯುವಂತೆ ನೋಡಿಕೊಳ್ಳಬಲ್ಲುದು.

ಕೆಲವು ತಿಂಗಳ  ಹಿಂಧೆ ರಂಗನಾಥನ್ ವೈದೇಹಿ ವಾಚಿಕೆ ಪ್ರಕಟಿಸಿದ್ದರು. ವೈದೇಹಿ ಬಗ್ಗೆ ಅದೊಂದು ಒಳ್ಳೆಯ ವಾಚಿಕೆ.  ಆ ವಾಚಿಕೆ ಓದಿ ವೈದೇಹಿ ಬಗ್ಗೆ ಹೊಸ ಆಸಕ್ತಿ ಬೆಳೆಸಿಕೊಂಡವರನ್ನು ನಾನು ಬಲ್ಲೆ. ವೈದೇಹಿ ತುಂಬಾ ಒಳ್ಳೆಯ ಲೇಖಕಿ ಮಾತ್ರವೇ ಅಲ್ಲ. ಅವರ ಬರೆವಣಿಗೆಗೆ ಮನಸ್ಸನ್ನು ಮೃದುಗೊಳಿಸಬಲ್ಲ ಗುಣವಿದೆ. ಇಂದಿನ ಯಾಂತ್ರಿಕ ಜೀವನದಲ್ಲಿ, ಪ್ರತಿಯೊಬ್ಬರೂ ಹಣದ ಅಥವಾ ಇತರ ಒಂದಲ್ಲ ಒಂದು ಸೌಕರ್ಯಗಳ ಬೆನ್ನು ಹತ್ತಿರುವ ಈ ದಿನಗಳಲ್ಲಿ ಮನಸ್ಸನ್ನು ಮೃದುಗೊಳಿಸಬಲ್ಲ, ನಮ್ಮನ್ನು ಮತ್ತೆ ನೋಯಬಲ್ಲ, ಮುದಗೊಳ್ಳಬಲ್ಲ ವ್ಯಕ್ತಿಗಳನ್ನಾಗಿ ಮಾಡಬಲ್ಲ ವೈದೇಹಿಯವರ ಬರೆವಣಿಗೆಗಳು ಆ ಕಾರಣಕ್ಕಾಗಿಯೇ  ನಮ್ಮ ಈ  ನಾಗರಿಕತೆಗೆ ಗುಣಕಾರಿಯಾಗಬಲ್ಲ ಗುಣ ಹೊಂದಿವೆ.

ರಂಗನಾಥನ್ ತಮ್ಮ ಪ್ರಕಾಶನದ ಮೂಲಕ ಈ ವಾರ ಮತ್ತೆ ಮೂರು ವಾಚಿಕೆ ಬಿಡುಗಡೆಗೊಳಿಸುತ್ತಿದ್ದಾರೆ. ಅವುಗಳಲ್ಲಿ ಒಂದು ವಾಚಿಕೆ ಶಾಂತಿನಾಥ ದೇಸಾಯಿ ಬಗ್ಗೆ. ಇದನ್ನು ನಾನೇ ಸಂಪಾದಿಸಿ ಕೊಟ್ಟಿದ್ದೇನೆ.ಇದರ ಸಂಪಾದನೆಗಾಗಿ ದೇಸಾಯಿಯವರ ಎಲ್ಲಾ ಬರೆವಣಿಗೆಗಳನ್ನು ಶಿಸ್ತುಬದ್ಧವಾಗಿ ಅಧ್ಯಯನ ಮಾಡುತ್ತಿದ್ದಂತೆ ಇವರೆಷ್ಟು ಒಳ್ಳೆಯ ಲೇಖಕ ಎಂದು ಸ್ಪಷ್ಟವಾಗಿ ಅರಿವಿಗೆ ಬಂತು. ಅವರ ಬರೆವಣಿಗೆ ಬಗೆಗಿನ ನನ್ನ ಮರುಓದು ವಾಚಿಕೆಯ ದೀರ್ಘ ಪ್ರಸ್ತಾವನೆಯಾಗಿ ಪ್ರಕಟವಾಗುತ್ತಿದೆ. ಓದುಗರು ಅದನ್ನು ದೇಸಾಯಿಯವರ ಬರೆಹಗಳ ಜೊತೆಗೆ ಓದುವುದು ಸೂಕ್ತವಾದ್ದರಿಂದ ಇಲ್ಲಿ ಕೊಡುತ್ತಿಲ್ಲ.

ದೇಸಾಯಿಯವರದ್ದು ನಾನು ಬರೆಯುತ್ತಿರುವ ನಾಲ್ಕನೆಯ ಮರುಓದು. ಇದಕ್ಕಿಂತ ಮೊದಲು ಕನಕದಾಸ, ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ ಕುರಿತು ಮರು ಓದುಗಳನ್ನು ಪ್ರಕಟಿಸಿದ್ದೆ. ಮುಂದೆ ಪಂಪ, ಕವಿರಾಜಮಾರ್ಗದಿಂದ ಪ್ರಾರಂಭಿಸಿ ಇಪ್ಪತ್ತನೆಯ ಶತಮಾನದ ವರೆಗೆ ನನಗೆ ಮುಖ್ಯ ಅನ್ನಿಸಿದ ಲೇಖಕರ ಬಗ್ಗೆ ಮರು ಓದುಗಳ ಲೇಖನ ಬರೆಯಬೇಕೆಂದಿದೆ. ಈ ಬ್ಲಾಗಿನಲ್ಲಿ ನಾನು ಬರೆಯುತ್ತಿರುವ ಉಪನಿಷತ್ತು ಕುರಿತ ಲೇಖನ ಮಾಲೆಯೂ ಮರುಓದುಗಳೇ. ಒಟ್ಟು ನನಗೆ ಇಷ್ಟವಾದ ಸಂಸ್ಕ್ರತ, ಕನ್ನಡ, ಯುರೋಪಿನ ಭಾಷೆಗಳ ಕೃತಿಗಳು--ಇವುಗಳ ಬಗ್ಗೆ ಮರುಓದಿನ ಸರಣಿ ಬರೆಯಬೇಕೆಂದುಕೊಂಡಿದ್ದೇನೆ. ಇವು ಮುಂದೆ ಪುಸ್ತಕಗಳಾಗಿ ಪ್ರಕಟವಾಗಲಿವೆ.

ನುಡಿ ಪುಸ್ತಕದಿಂದ ಈಗ ಪ್ರಕಟಿಸುತ್ತಿರುವ ವಾಚಿಕೆಗಳಲ್ಲಿ ಒಂದು ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ. ಆಲನಹಳ್ಳಿ ನನಗೆ ಹೈಸ್ಕೂಲು ದಿನಗಳಿಂದ ಗುರುತಿದ್ದ ಏಕವಚನದ ಸಲಿಗೆಯ ಸ್ನೇಹಿತ. ನಾನು ಪಂಜ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಅವನು ಮೈಸೂರು ಮಹಾರಾಜಾ ಕಾಲೇಜಿ ವಿದ್ಯಾರ್ಥಿಯಾಗಿದ್ದ. ಆಗಲೇ ಸಮೀಕ್ಷಕ  ಎಂಬ ಹೆಸರಿನ ಒಂದು ಸಾಹಿತ್ಯ ಪತ್ರಿಕೆ ಪ್ರಾರಂಭಿಸಿದ್ದ. ಅದರ ಪರವಾಗಿ ನನಗೆ ಪದ್ಯ ಕಳಿಸುವಂತೆ, ಚಂದಾ ಕಳಿಸುವಂತೆ ಪತ್ರ ಬರೆದಿದ್ದ. ನನ್ನ ಪದ್ಯಗಳು ಆಗ ಸಂಕ್ರಮಣ, ಗೋಕುಲ  ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಹೀಗೆ ಅವನಿಗೆ ನನ್ನ ವಿಳಾಸ ಸಿಕ್ಕಿತ್ತು.  ಕೊನೆಗೆ ಚಂದಾ ಮತ್ತು ಪದ್ಯ ಕಳಿಸಿದೆ. ಸಮೀಕ್ಷಕ  ಆಗಿನ ಒಂದು ಒಳ್ಳೆಯ ಸಾಹಿತ್ಯಿಕ ಪತ್ರಿಕೆ. ಅದರಲ್ಲಿ ಆಗಿನ ಅನೇಕ ಪ್ರಸಿದ್ಧ ಲೇಖಕರು ಬರೆದಿದ್ದರು. ಎಚ್. ಎಂ. ಚೆನ್ನಯ್ಯ ಅದರ ಸಾಹತ್ಯಿಕ ಸಲಹೆಗಾರಲ್ಲಿ ಒಬ್ಬರು. ಪೋಲಂಕಿ ರಾಮಮೂರ್ತಿಯವರ ಒಂದು ಬರೆಹ ಅದರಲ್ಲಿ ಪ್ರಕಟವಾಗಿತ್ತು. ಲಂಕೇಶರ "ನನ್ನ ಸುತ್ತಾ" ಎಂಬ ಕವನ ಮೊದಲು ಪ್ರಕಟವಾದದ್ದು ಅದರಲ್ಲೇ.

ಈ ರಸ್ತೆಗಳು ಈ ಮನೆಗಳು ಈ ಮರಗಳು ಈ ಮನುಷ್ಯರು
ಈ ವೀರರು ಈ ಪೀಡೆಗಳು ಈ ರಂಭೆ ಈ ರಂಗ ಈ ಶಿವ
ಕಣ್ಣೆದುರಿನ ಈ ನರಕಕೆ, ಈ ನಗರದ ಈ ಪುಲಕಕೆ,
ಈ ಹುಡುಗರ ತಂಡ, ಈ ಕನ್ಯೆಯ ಖಂಡ, ಭಾಷಣಗಳ ಭಂಡ
ಈ ಹೆಂಗಸರು ಹಾರಾಡುವ ಈ ಹೆಂಗಸರು ತೂರಾಡುವ ಈ ಹೆಂಗಸರು
ಉಸಿರಾಡುವ ಬಸಿರಾಗುವ ಬೆರಗಾಗುವ ಹೊರಗಾಗುವ
(ಈ ಗಂಡು ಈ ಥರ ಸುಮ್ಮನೆ ಕೊರಗಾಡುವ)

ಅವರೆಲ್ಲರ ಸ್ವಪ್ನದ ಸರ್ಪಕೆ ಚಪ್ಪಾಳೆಯ ಹೊಡೆವ
ಈ ಹಬ್ಬದ  ಸಂಭ್ರಮ, ಈ ಕೃಷ್ಣನ ಕಾಟ,
ಈ ಮಂತ್ರದ ಪಾಠ....

"ಈ ಮನೆಗಳು ಈ ಜನಗಳು ಈ ನರಕ ಈ ಪುಲಕ"  ಎಂದು ಕೊನೆಯಾಗುವ ಈ ಕವನದ ಮೇಲಿನ ಸಾಲಿನ ಕೃಷ್ಣ ಆಲನಹಳ್ಳಿ ಕೃಷ್ಣನೇ. ಸಮೀಕ್ಷಕಕ್ಕೆ ಪದ್ಯ ಕೊಡಿ ಎಂಬ ಕೃಷ್ಣನ ವರಾತವನ್ನೇ ಲಂಕೇಶ್ ಪದ್ಯದ ಒಂದು  ಸಾಲು ಮಾಡಿದ್ದರು. ಅವನ ಹಠದಿಂದಾಗಿ ಕನ್ನಡಕ್ಕೆ ಅನುರಣನ ಲಯದ ಒಂದು ಒಳ್ಳೆಯ ಪದ್ಯ ಸಿಕ್ಕಿದಂತಾಯಿತು. ಬೇಂದ್ರೆಯವರ "ಈ ಇದೂ ತುಂಬಿ ಆ ಅದೂ ತುಂಬಿ  ಯಾವುದೂ ತುಂಬಿ ಇರದೇ ತುಂಬಿ ಕಳೆದರೂ  ತುಂಬಿ ಉಳಿದರೂ ತುಂಬಿ ತುಂಬಿ ಬರದೇ" ಎಂಬಿತ್ಯಾದಿ ಸಾಲುಗಳಿರುವ ಪದ್ಯ  ಅದೇ ಬಗೆಯ ಅನುರಣನ ಲಯವಿರುವ ಪದ್ಯ. ಬರೀ ತುಂಬಿ ಪದದ ಅನುರಣನದಿಂದ ಬೇಂದ್ರೆ ಎಂಥಾ ಪರಿಣಾಮ ಸಾಧಿಸುತ್ತಾರೆ ಎಂಬುದಕ್ಕೆ ಈ ಕೆಲವು ಸಾಲು ನೋಡಿ:

ತುಂಬಿದ್ದು ತಾನೆ ಎಂದೆಂದು ತುಳುಕದೆಂದೆಂದರೂನು ತುಂಬಿ
ತೂತೂಬು ತುಂಬಿ ಹೊರಸೂಸಿ ಚೆಲ್ಲಿ ತುಳುಕಾಡಿ ಮತ್ತೆ ತುಂಬಿ
ಮುಮ್ಮೊದಲೆ ತುಂಬಿ ಮೊಳಕೆಯಲಿ ತುಂಬಿ ಚಿಚ್ಚಿಗುರಿನಲ್ಲಿ ತುಂಬಿ
ಎಲೆ ನನೆಯು ತುಂಬಿ ಹೂ ಹೀಚು ತುಂಬಿ ಮಿಡಿ ಕಾಯಿ ಹಣ್ಣು ತುಂಬಿ

ನೆಲ ಹೂತು ತುಂಬಿ ಮನಸೋತು ತುಂಬಿ ಉಸಿರಾಟ ತುಂಬಿ ತುಂಬಿ
ಜಗವರಳಿ ಕಂಡು ಕಣ್ತುಂಬಿ ಮರಳಿ ಮರುಳಾಗಿ ತುಂಬಿ ತುಂಬಿ
ರಸದುಂಬಿ ತುಂಬಿ ನಾಲಗೆಯು ಎಂಬ ದುರದುಂಬಿ ತುಂಬಿ ತುಂಬಿ
ಝೇಂಕಾರ ಕೇಳಿ ಕಿವಿ ತುಂಬಿ ತುಂಬಿ ಓಂಕಾರ ತುಂಬಿ ತುಂಬಿ

ಆ ತುಂಬಿನಿಂದ ತುಟಿವರೆಗು ತುಂಬಿ ತುದಿ ವರೆಗು ತುಂಬಿ ತುಂಬಿ
ಅಂಗಾಂಗ ತುಂಬಿ ಲಿಂಗಾಂಗ ತುಂಬಿ ಆಲಿಂಗನಾಂಗ ತುಂಬಿ
ಆಚಾರ ತುಂಬಿ ಉಚ್ಚಾರ ತುಂಬಿ ಸಂಚಾರ ತುಂಬಿ ತುಂಬಿ
ವಿಶ್ರಾಂತಿ ತುಂಬಿ ಸ್ಥಿರ ಶಾಂತಿ ತುಂಬಿ ಕಡು ಕಾಂತಿ ತುಂಬಿ ತುಂಬಿ

ಗುರುವಿಂದ ತುಂಬಿ ಅರವಿಂದ ತುಂಬಿ ತುಂಬುರುವಿನಿಂದ ತುಂಬಿ
ತಾಯೆಂದು ತುಂಬಿ ತಂದೆಂದು ತುಂಬಿ ಕಂದನ್ನ ತನ್ನ ತುಂಬಿ
ಅಂಬಿಕೆಯ ತುಂಬಿ ನಂಬಿಕೆಯ ತುಂಬಿ ಕಣ್ಗೊಂಬೆ ರಂಭೆ ತುಂಬಿ
ಶ್ರೀಮಾತೆ ತುಂಬಿ ಈ ಮಾತೆ ತುಂಬಿ ತಂತಾನೆ ಬಂತು ತುಂಬಿ

ಈ ಪದ್ಯದ ಬಳಿಕ ಅದೇ ಬಗೆಯ ಅನುರಣನ ಲಯವಿರುವ ಪದ್ಯ ಕನ್ನಡದಲ್ಲಿ ಬಂದದ್ದೆಂದರೆ ಲಂಕೇಶರ "ನನ್ನ ಸುತ್ತಾ". ಕೃಷ್ಣನ ಒತ್ತಾಯದ ಕಾರಣವಾಗಿ ಲಂಕೇಶರಿಂದ ಆ ಪದ್ಯ ನಮಗೆ  ಲಭ್ಯವಾಯಿತು. 

ಹೈಸ್ಕೂಲು, ಪಿಯುಸಿ ಮುಗಿಸಿದ ಮೇಲೆ ನಾನೂ ಮಹಾರಾಜಾ ಕಾಲೇಜು ಸೇರಿದೆ. ನಾನು ಮೊದಲ ಬಿ. ಎ. ಯಲ್ಲಿದ್ದಾಗ ಕೃಷ್ಣ  ಅಂತಿಮ ಬಿ.ಎ.ಯಲ್ಲಿದ್ದ. ನಾನು ಕಾಲೇಜು ಸೇರಿ  ಎರಡು ಮೂರು ದಿನ ಕಳೆದ ಮೇಲೆ   ಅವನ ಪರಿಚಯ ಮಾಡಿಕೊಳ್ಳಲೆಂದು ಅವನ ಕ್ಲಾಸು ನಡೆಯುತ್ತಿದ್ದ ರೂಮಿನ ಹೊರಗೆ ನಿಂತಿದ್ದೆ. ಹತ್ತು ಹದಿನೈದು ಜನರಿದ್ದ ಮೇಜರ್ ಕನ್ನಡ ಕ್ಲಾಸು ಅದು. ಕ್ಲಾಸಿನಲ್ಲಿ ಹಿಂದಿನ ಬೆಂಚಿನಲ್ಲಿ ಕೂತಿದ್ದ ಒಬ್ಬ ಏನೇನೋ ಚೇಷ್ಟೆ ಮಾಡುತ್ತಾ ನಗುತ್ತಾ ಪಿಸಿ ಪಿಸಿ ಮಾತಾಡುತ್ತಾ ಕೂತಿದ್ದ. ನನಗೆ ಅವನೇ ಕೃಷ್ಣ ಅನ್ನಿಸಿತು. ಹೌದು, ಅವನೇ ಕೃಷ್ಣನಾಗಿದ್ದ. ಕ್ಲಾಸು ಬಿಟ್ಟು ಹೊರಗೆ ಬಂದಾಗ __ಕ್ಲಾಸು ಬಿಟ್ಟೊಡನೆ ಗಂಭೀರವಾಗಿ ಹೊರಗೆ ಬಂದ__ನನ್ನ ಹೆಸರು ಹೇಳಿ ಪರಿಚಯ ಮಾಡಿಕೊಂಡೆ. ಬನ್ನಿ, ಕಾಫಿ ಕುಡಿಯೋಣ ಎಂದು ಕ್ಯಾಂಟೀನಿಗೆ ಕರೆದುಕೊಂಡು ಹೋದ. ಕ್ಯಾಂಟೀನಿನಲ್ಲಿ   ಅಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಎಂದು ಪ್ರತ್ಯೇಕ ಸ್ಥಳಗಳಿದ್ದವು. ನಾನು ವಿದ್ಯಾರ್ಥಿಗಳ ಸ್ಥಳದ ಕಡೆ ಹೋಗುತ್ತಿದ್ದರೆ ಇಲ್ಲೇ ಬನ್ನಿ ಎಂದು ಹೋಗಿ ಅಧ್ಯಾಪಕರಿಗೆ ಮೀಸಲಾದ ಸ್ಥಳದಲ್ಲಿ ಕೂತು ಸಿಗರೇಟು, ಬೈಟು ಕಾಫಿ ತರಹೇಳಿದ.   ನಾನು ಕಾಫಿ ಕುಡಿದು ಮುಗಿಸಿ ಕ್ಲಾಸಿದೆ ಎಂದು ಹೊರಡಲು ಏಳುತ್ತಿದ್ದಂತೆ ಚಕ್ಕರ್ ಹೊಡೀರ್ರೀ ಎಂದ. ಅಲ್ಲೇ ಇದ್ದ ಕೆ. ರಾಮದಾಸ್, ಈಗ ತಾನೇ ಕಾಲೇಜು ಸೇರಿದ್ದಾರೆ, ಅವರಿಗೆ ನಿನ್ನ ಬುದ್ಧಿ ಕಲಿಸಿ ಹಾಳು ಮಾಡಬೇಡ ಎಂದು ಬೈದರು. ಆದರೆ ನನಗೆ ದಿನ ಹೋದಂತೆ ಚಕ್ಕರ್ ಹೊಡೆಯುವುದರಲ್ಲಿ ಕೃಷ್ಣನೇ ಮಾದರಿಯಾದ. ಮತ್ತು ಮಹಾರಾಜಾ ಕಾಲೇಜಿನಲ್ಲಿ ಚಕ್ಕರ್ ಹೊಡೆದವರ ಒಂದು ದೊಡ್ಡ ಪರಂಪರೆಯೇ ಇತ್ತು. ಅಲ್ಲದೆ ಚಕ್ಕರ್ ಹೊಡೆದದ್ದಕ್ಕೂ  ಆ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೂ ಏನೇನೂ ಸಂಬಂಧವಿರಲಿಲ್ಲ. ನಮಗಿಂತ ಸುಮಾರು ಇಪ್ಪತ್ತು ವರ್ಷ ಮೊದಲು ಆ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಕೆ. ವಿ. ಸುಬ್ಬಣ್ಣ ಎಟೆಂಡೆನ್ಸ್ ಶಾರ್ಟೇಜ್ ಆಗಿ ಕೊನೆಗೆ ಎಟೆಂಡೆನ್ಸ್ ರಿಜಿಸ್ಟರ್ ಹಾರಿಸಿ ಸುಟ್ಟು ಹಾಕಿದ್ದರಂತೆ. ಅನಂತಮೂರ್ತಿಯವರಿಗೆ ಎಟೆಂಡೆನ್ಸ್ ಶಾರ್ಟೇಜ್ ಆಗಿ ಪರೀಕ್ಷೆಗೆ ಕೂರಲಿಕ್ಕಾಗದೆ ಅದೇ ಕ್ಲಾಸಿನಲ್ಲಿ ಮತ್ತೊಂದು ವರ್ಷ ಕೂರಬೇಕಾಗಿ ಬಂದಿತ್ತು. ಹಾಗೆಂದು ಅವರೇ ಬರೆದುಕೊಂಡಿದ್ದಾರೆ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ನಮ್ಮ ಸಮಸ್ಯೆ ಓದಿನದ್ದಾಗಿರಲಿಲ್ಲ. ಅದನ್ನು ಚಕ್ಕರ್ ಹೊಡೆದರೂ ಮಾಡಿರುತ್ತಿದ್ದೆವು. ಸಮಸ್ಯೆ ಎಟೆಂಡೆನ್ಸ್ ಭರ್ತಿ ಮಾಡುವುದು ಹೇಗೆ ಎಂಬುದೇ ಆಗಿರುತ್ತಿತ್ತು.

ಅದೇ ವರ್ಷ ಅವನ ಕವನ ಸಂಗ್ರಹ ಮಣ್ಣಿನ ಹಾಡು ಪ್ರಕಟವಾಗಿತ್ತು. ಮುನ್ನುಡಿಯಲ್ಲಿ  ಅಡಿಗರು ಅದನ್ನು ಕನ್ನಡ ಕಾವ್ಯದಲ್ಲಿ ನಡೆದ ಘಾತಪಲ್ಲಟ ಎಂದು ಬಣ್ಣಿಸಿದ್ದರು. ಅದು ಕೃಷ್ಣನಿಗೆ  ದೊಡ್ಡ ಹೆಸರು ತಂದ ಪುಸ್ತಕ. ಎಷ್ಟು ಹೆಸರು ಎಂದರೆ--ನಮಗೆಲ್ಲರಿಗೆ ಅಧ್ಯಾಪಕರಾಗಿದ್ದ ಎಸ್. ನಾರಾಯಣ ಶೆಟ್ಟರು, ಲೈಬ್ರೆರಿಯಿಂದ ಕೃಷ್ಣನ ಪುಸ್ತಕ ಎಲ್ಲರೂ ತೆಗೆದುಕೊಂಡು ಹೋಗಿ ಓದುತ್ತಾರೆ, ನನ್ನದು ಯಾರೂ ತೆಗೆದುಕೊಂಡು ಹೋಗುವುದಿಲ್ಲ, ನನ್ನದನ್ನೂ  ತೆಗೆದುಕೊಂಡು ಹೋಗಲಿ ಎಂದು ಲೈಬ್ರೆರಿಯಲ್ಲಿ ನನ್ನ ಪುಸ್ತಕವನ್ನು ಅವನ ಪುಸ್ತಕದ ಹತ್ತಿರವೇ ಇಟ್ಟೆ, ಆದರೂ ಯಾರೂ ತೆಗೆದುಕೊಂಡು ಹೋಗಲಿಲ್ಲ ಎಂದು ಹೇಳುತ್ತಿದ್ದರು. ತಮಾಷೆಯಾಗಿ ಹೇಳಿದ ಆ ಮಾತು ನಿಜವೂ ಆಗಿತ್ತು. ಕೃಷ್ಣ ಒಳ್ಳೆಯ ಲೇಖಕ ಮಾತ್ರ ಅಲ್ಲ, ಜನಪ್ರಿಯನೂ ಆಗಿದ್ದ.

ಮುಂದೆ ಆತ ಕಾದಂಬರಿಗಳನ್ನು  ಬರೆಯಲು ಪ್ರಾರಂಭಿಸಿದ. ಅವನ ಕಾಡು, ಪರಸಂಗದ ಗೆಂಡೆತಿಮ್ಮ, ಗೀಜಗನ ಗೂಡು ಸಿನೆಮಾಗಳಾದವು. ಅವನಿಗೆ ಖ್ಯಾತಿ ಬಂತು. ಹಣ ಬಂತೇ? ಬಹುಶಃ ಇಲ್ಲ. ತೋಟ ಮಾಡಿದ. ಅದು ಫಲ ಬರುವಷ್ಟು ಬೆಳೆಯುವ ಹೊತ್ತಿಗೆ ಸತ್ತ. ಸಮೀಕ್ಷಕ ಪ್ರಕಟಿಸುವಾಗಲೂ ಅವನು ಶ್ರೀಮಂತನಾಗಿರಲಿಲ್ಲ. ತಂದೆಯನ್ನು ಚಿಕ್ಕಂದಿನಲ್ಲಿ ಕಳೆದುಕೊಂಡಿದ್ದ. ತಾಯಿ ಊರಿನಲ್ಲಿ ಇದ್ದರು. ಅವನು ಶಿವರಾತ್ರೀಶ್ವರ ಹಾಸ್ಟೆಲ್ಲಿನಲ್ಲಿ ಫ್ರೀ ಊಟ ಮಾಡುತ್ತಿದ್ದ. ಗೀತಾ ರಸ್ತೆಯಲ್ಲಿ ಸಂಪಿಗೆ ಮರದ ಕೆಳಗಿದ್ದ ಆ ರೂಮಿಗೆ ಹದಿನೈದು ರೂಪಾಯಿ ಬಾಡಿಗೆ. ಹಣ ಎಲ್ಲಿಂದ ತರುತ್ತಿದ್ದ? ನಾಳೆ ಕೊಡುತ್ತೇನೆಂದು ಎಲ್ಲೆಲ್ಲಿಂದಲೋ ತರುತ್ತಿದ್ದನೆಂದು ಕಾಣುತ್ತದೆ. ಸಾಕಷ್ಟು ಕಡೆ ಉದ್ದರಿಗಳಿರುತ್ತಿದ್ದವು.

 ಬಡಾಯಿ, ಸುಳ್ಳು, ಎಗ್ಗಿಲ್ಲದೆ ನಡೆದುಕೊಳ್ಳುವುದು  ಮೊದಲಾದವುಗಳ  ಮಧ್ಯೆ ಸಹಾ ತನ್ನ ಬರೆವಣಿಗೆಯ ಇತಿ ಮಿತಿಗಳ ಬಗ್ಗೆ  ಕೃಷ್ಣನಿಗೆ  ಗಾಢ ಎಚ್ಚರವಿತ್ತು. ಆದ್ದರಿಂದಲೇ ಅವನು ಬೆಳೆಯುತ್ತಿದ್ದ ಲೇಖಕ. ಕಾವ್ಯದಿಂದ ಕಾದಂಬರಿಗೆ ಬದಲಾಯಿಸಿಕೊಂಡದ್ದೇ ಹೆಚ್ಚು ಅನುಭವವನ್ನು ಕಾದಂಬರಿಯಲ್ಲಿ  ಹೇಳಬಹುದೆಂದು. ಅವನ ಕೊನೆಯ ಕೃತಿಗಳಾದ "ತಿಕ ಸುಟ್ಟ ದೇವರು" "ಅರಮನೆ"  ಮೊದಲಾದವುಗಳಲ್ಲಿ ಭಾಷೆಯ ಬಳಕೆ, ಅನುಭವ ಹೆಚ್ಚು ಮಾಗಿದ್ದು ಕಾಣುತ್ತೇವೆ. ಅವನು ಶ್ರೇಷ್ಠತೆಯ ಹತ್ತಿರ ಹತ್ತಿರ ತಲುಪಿದ್ದ.

ಅವನ ಒಂದು ಕವನದಲ್ಲಿ  ಕುದುರೆ ಖುರಪುಟದಗ್ನಿಕಿಡಿ ಹಾರುತಿದೆ ಎಂಬ ಪದಪುಂಜ ಬರುತ್ತದೆ. ಕುಮಾರವ್ಯಾಸನನ್ನು ಅನುಸರಿಸಿ ಬಳಸಿದ ಪದಪುಂಜ ಅದು. ಅವನು ಸತ್ತು ಸುಮಾರು ಇಪ್ಪತ್ತು ವರ್ಷಗಳ ಬಳಿಕ ಅವನ ಬರೆವಣಿಗೆಯ ವಾಚಿಕೆ ಪ್ರಕಟವಾಗುತ್ತಿದೆ. ಒಂದು ಇಡೀ ಜನಾಂಗವೇ ಅವನ ನಿಧನದ ಬಳಿಕ ಲೇಖಕರಾಗಿ ಓದುಗರಾಗಿ ರೂಪುಗೊಂಡಿದೆ.  ಇವರೆಲ್ಲಾ ಈಗ ಮತ್ತೆ "ಈ ಕೃಷ್ಣನ ಕಾಟ"ಕ್ಕೆ ತಲೆಯೊಡ್ಡುತ್ತಾರೆ ಎಂದರೆ, ಸವಾರ ಸವಾರಿಸಿ ಹೋದ ಮೇಲೂ ಕುದುರೆ ಖುರಪುಟದಗ್ನಿಕಿಡಿ ಹಾರುತಿದೆ ಎಂದು ಮತ್ತೆ ಹೇಳಬೇಕೆನ್ನಿಸುತ್ತದೆ. ಇನ್ನು ಇಪ್ಪತ್ತೈದು ವರ್ಷ ಕಳೆದ ಮೇಲೆ ಬರುವ ಹೊಸ ಜನಾಂಗವೂ ಇವನ ಬರೆವಣಿಗೆಯನ್ನು ಮತ್ತೆ ಹೊಸದಾಗಿ ಓದಬಹುದು. ಮತ್ತೆ ಅವನು ತನ್ನ ಬರೆವಣಿಗೆಯ ಮೂಲಕ ಸಾಧಿಸಿದ ಧೀಮಂತ  ಅಶ್ವಗತಿಯನ್ನು,  ಆ ಅಶ್ವಗತಿ ತನ್ನ ಖುರಪುಟದಿಂದ ಹಾರಿಸಿದ ಅಗ್ನಿಕಿಡಿಯನ್ನು ಕುತೂಹಲದಿಂದ ನೋಡಬಹುದು ಅನ್ನಿಸುತ್ತದೆ.

**********

ನಾನು ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಬರೆದೆ. ಅವು ಮತ್ತು ಹಿಂದಿನ ಬರೆವಣಿಗೆ ಸೇರಿ ಮುಂದಿನ ನಾಕೈದು ವರ್ಷಗಳಲ್ಲಿ ನನ್ನ ಎಲ್ಲಾ ಬರೆವಣಿಗೆಗಳು ಸುಮಾರು ಇಪ್ಪತ್ತು ಸಂಪುಟಗಳಲ್ಲಿ  ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ--ಇದರ  ಮೂಲಕ ಪ್ರಕಟವಾಗಲಿವೆ. ನಮ್ಮ ಪುಸ್ತಕಗಳು ನ್ಯೂ ಪ್ರೀಮಿಯರ್ ಬುಕ್ ಶಾಪ್, ಬನಶಂಕರಿ ಎರಡನೇ ಹಂತ, ಬಿಡಿಎ ಕಾಂಪ್ಲೆಕ್ಸ್ ಎದುರು, ಬೆಂಗಳೂರು 70 ಮತ್ತು ಅತ್ರಿ ಬುಕ್ ಸೆಂಟರ್, ಮಂಗಳೂರು-- ಇಲ್ಲಿ  ಸಿಗುತ್ತವೆ. ಇವಲ್ಲದೆ ನಮ್ಮ ಪ್ರಕಟಣೆಗಳನ್ನು ನೀವು ಈಗ ನೇರವಾಗಿ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ನಿಮಗೆ ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust, SB Account No.1600101008058, Canara Bank, Yenmur-574328, Sullia Taluk, Dakshina Kannada District, Karnataka; IFSC: CNRB0001600---ಇಲ್ಲಿಗೆ ಕಳಿಸಿ ನಿಮ್ಮ ವಿಳಾಸವನ್ನುbodhitrustk@gmail.comಗೆ ಇಮೇಲ್ ಮಾಡಿ ಅಥವಾ ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ ಇಲ್ಲಿಗೆ
ಪತ್ರ ಬರೆದು ತಿಳಿಸಿದರೆ ಪುಸ್ತಕಗಳನ್ನು ನಮ್ಮ ವೆಚ್ಚದಲ್ಲಿ ಕಳಿಸುತ್ತೇವೆ. ವಿದೇಶದಲ್ಲಿರುವವರು ಅಂಚೆವೆಚ್ಚ ಸೇರಿಸಿ ಕಳಿಸಿ.

ಬೋಧಿ ಟ್ರಸ್ಟ್ ಲಾಭ ಬೇಡ ನಷ್ಟ ಬೇಡ ಆಧಾರದ ಮೇಲೆ ನಡೆದುಕೊಂಡು ಹೋಗಬೇಕೆಂದು ಬಯಸುತ್ತಿರುವ ಸಂಸ್ಥೆ.


ಇವು ಸದ್ಯಕ್ಕೆ  ಮಾರಾಟಕ್ಕೆ ಲಭ್ಯವಿರುವ ಪುಸ್ತಕಗಳು. ಎಲ್ಲಾ ಪುಸ್ತಕಗಳ ಲೇಖಕ ನಾನು, ರಾಮಚಂದ್ರ ದೇವ


ಸಮಗ್ರ ನಾಟಕಗಳು. ಸಂಪುಟ 3. ಅಶ್ವತ್ಥಾಮ, ಹುಲಿಯ ಕಥೆ, ದಂಗೆ--ಈ ಮೂರು ನಾಟಕಗಳಿವೆ. ಬೆಲೆ ರೂ75.00

ಮುಚ್ಚು ಮತ್ತು ಇತರ ಲೇಖನಗಳು. ಬೆಲೆ ರೂ60.00


ಮಹಾಭಾರತ, ವಡ್ಡಾರಾಧನೆ, ಕೋಡಂಗಿಗಳು, ಮಾತಾಡುವ ಮರ ಕುರಿತ ಜಾನಪದ ಕತೆ ಹಾಗೂ ಪೈಂಟಿಂಗ್, ಅಡಿಗರ ಕಾವ್ಯ, ಶಿವರಾಮ ಕಾರಂತರ ಕಾದಂಬರಿಗಳು ಮೊದಲಾದ ವಿಷಯ ಕುರಿತ ಲೇಖನಗಳಿವೆ.

              ಸಮಗ್ರ ನಾಟಕಗಳು  ಸಂಪುಟ 2.
              ಪುಟ್ಟಿಯ ಪಯಣ, ಸುದರ್ಶನ--
             ಈ ಎರಡು ನಾಟಕಗಳಿವೆ.
              ಬೆಲೆ ರೂ60.00
ಹ್ಯಾಮ್ಲೆಟ್. ಶೇಕ್ಸ್ಪಿಯರ್ ಅನುವಾದ.
ಬೆಲೆ ರೂ 50.00
                           ಮಾತಾಡುವ ಮರ
                ಸಮಗ್ರ ಕಾವ್ಯ, 1964-2003
                              ಬೆಲೆ ರೂ100.00

No comments:

Post a Comment