Thursday, December 30, 2010

ಇಂದ್ರಪ್ರಸ್ಥ 2

1

ದಿಂಬಲ್ಲಿ ಮುಖ ತುರುಕಿ ಮಲಗುವರು ಹುಡುಗ ಹುಡುಗಿಯರು
ಕನಸು ಬೀಳುವ ಸಮಯ. ಭಿಕ್ಷುಕ
ಕೈಯ್ಯೊಡ್ಡ ಹೊರಟಿರುವ. ಜಮಾದಾರ
ಕಸ ಗುಡಿಸುತ್ತ ಬರುತ್ತಿದ್ದಾನೆ. ತರಗೆಲೆ ಉರಿಸಿ
ಚಾ ಮಾಡುತ್ತಿರುವವನ ಸುತ್ತ
ಕುಕ್ಕುರುಗಾಲಲ್ಲಿ ನಾಲ್ಕೈದು ಮಂದಿ--ಬೀಡಿ ಬಾಯಿ
ಮೈ ಮೇಲೆ ರಜಾಯಿ.
ಪೇಪರ್ ಬೇಕೇ ಪೇಪರ್ ಹುಡುಗ
ಬಸ್ಸಿನ ಸುತ್ತ ಬರುವಾಗ ಒಬ್ಬಾತ
ಟಿಫಿನ್ ಕ್ಯಾರಿಯರ್ ಹಿಡಿದು
ಓಡೋಡಿ ಬರುತ್ತಿರುವ. ಬೀದಿ ದೀಪಗಳು
ಅಕೋ ಒಟ್ಟಾಗಿ ನಂದಿದವು.
ಹೊಗೆ ಅಡರುತ್ತಿದೆ ಚಿಮಿಣಿಗಳಿಂದ. ಕಾರಖಾನೆಗಳ
ಸೈರನ್ ಕೂಗು. ಸೂಳೆಯರು ಲಂಗ ಕೊಡವಿ
ಹೊರ ಬರುತ್ತಾರೆ ರಾತ್ರಿ ಡ್ಯೂಟಿಯ ನರ್ಸು ಡಾಕ್ಟರರು
ಕಾರ್ಮಿಕರು ಅಲ್ಲಲ್ಲಿಂದ.
ಒಬ್ಬಾಕೆ ನಿದ್ರೆಯಿಲ್ಲದ ಮುಗುಳ್ನಗುವ ಚೆಲ್ಲಿದಳು.
ಕೋಳಿ ಕೂಗುತ್ತಿದೆ ಎಲ್ಲಿಂದಲೋ--ಎಲ್ಲರೂ
ಏಳುವುದಕ್ಕೆ ತವಕುತ್ತಾರೆ--
ವಿಟರೂ ಕೂಡ, ಅವರ ಪ್ರಜಾಪತಿ ಕೂಡ.

ರಂಗನೊಲವು ಇಲ್ಲದ ಬೋಳು ಯಮುನೆ ಮೇಲಿನ ಬೆಳಗು
ಕತ್ತಲೆಯ ತೊಡರುತ್ತಿದೆ.
ಮತ್ತೊಂದು ದಿನದ ಪಾಳಿಗೆ
ಹತ್ಯಾರು ಹಿಡಕೊಂಡು ಕುಂಟಿ ಹೊರಟಿದೆ ಡೆಲ್ಲಿ
ಹುಡುಕುತ್ತ ಕೋಲೆಲ್ಲಿ.

4

ಅಮ್ಮ ಸತ್ತಳು ನಾನು ಸಣ್ಣಾವ ಇದ್ದಾಗ
ಅಣ್ಣ ತಮ್ಮರು ಇಲ್ಲ ನಾನೊಬ್ಬನೇ.

ಎರಡನೇ ಮದುವೇಗೆ ದುಡ್ಡು ಬೇಕು ಹೇಳಿ
ಅಪ್ಪ ಮಾರಿದ ನನ್ನ ಸ್ವಾಮಿ ಶಿವನೇ.

ನನ್ನನ್ನು ತೆಕ್ಕೊಂಡ ತಾಯಮ್ಮ ಉಳ್ಳಾಲ್ತಿ
ಸಾಕುವಳು ಹತ್ಹೆಂಟು ಬೇಡೋರನ್ನು.

ಬೆಳಗಾತ ಎದ್ದವನೆ ಗೆಜ್ಜೆ ಕಟ್ಟಿಸಿಕೊಂಡು
ಕುಣಿಯುತ್ತ ಮನೆ ಮನೆಗ ತಿರುಪೆ ಹೊರಟೇ.

ಬೈಸಾರಿ ಹೊತ್ತೀಗೆ ಭಿಕ್ಸ ಒಟ್ಟಿಗೆ ಮಾಡಿ
ತಾಯಮ್ಮ ಕೈಯ್ಯಲ್ಲಿ ಇಟ್ಟು ನಮಿಸೀ--

ಅಲ್ಲದೇ ಇದ್ದಲ್ಲಿ ಹೊಡೆದಾಳು ಬಡಿದಾಳು
ಕೋಣೇಲಿ ಜಡಿದಾಳು ಕೊಂದೆ ಬಿಟ್ಟಾಳು.

ಬೀದಿ ಹೊಡೆ ನಿದ್ರಿಸಿ ಎದ್ದರೆ ಹೊತ್ತಾರೆ
ನೀಡುವಳು ಹೊಟ್ಟೆಗೆ, ಇತ್ತ ಬರುವೆ.

ಪೊಲೀಸು ಹಿಡಿದಲ್ಲಿ ಹಿಡಕೊಂಡು ಹೋದಲ್ಲಿ
ಬಿಡಿಸಿ ಕರೆತಂದಾಳು ಮರಳಿ ಪಡಿಗೆ.

ದೊಡ್ಡ ಆಗುವೆ ಮದುವೆ ಆಗುವೆ ಮುಂದಕ್ಕೆ;
ಹೆಣ್ತಿ ಜೊತೆ ಇದ್ದಲ್ಲಿ ಭಿಕ್ಸ ಜಾಸ್ತಿ.

ಮಕ್ಕಳು ಆದಲ್ಲಿ ಅವರನ್ನು ಸೇರಿಸಿ
ಕುಣಿದಲ್ಲಿ ಮಂದೀಗೆ ಪ್ರೀತಿ ಜಾಸ್ತಿ.

ನೀವು ದೊಡ್ಡವರಪ್ಪ ನಮ್ಮ ಕಾಯುವ ಜನರು
ಪರಮಾತ್ಮ ಮೇಲಿರುವ ಧರ್ಮ ಉಳಿಸಿ.

5

ನೀರು ಬಂದಿದೆ ಎಲ್ಲಿ ನೀರು ಬಂದಿದೆ ಅಲ್ಲಿ
ಆಚೆ ಕಡೆ ಬೀದೀಲಿ ದೇವರ ಗುಡಿಯ ಬಳಿ
ತನ್ನಿರಿ ಬಿಂದಿಗೆ ನೀರಿಗ್ಹೋಗುವ.

ಇಲ್ಲಿ ಬಂದಿತ್ತಾಗ ಈಗ ನಿಂತಿದೆ ಇಲ್ಲಿ
ಮುಂದಿನ ಬೀದೀಲಿ ನೀರು ಬಂದೀತೀಗ
ಬನ್ನಿರಿ ಮುಂದಕ್ಕೆ ನೀರಿಗ್ಹೋಗುವ.

ನೀವ್ಯಾರು ಆಚೆಯ ಬೀದಿ ಜನ ಇಲ್ಲ್ಯಾಕೆ
ತೊಲಗಿ ಈಗಲೆ ಬೇಗ ಎಳೆದು ಇಡಿರೋ ಕೊಡವ
ಪಸೆ ಇಲ್ಲ ನಮಗೇ ನೀರಿಲ್ಲವೋ.

ನಿನ್ನ ಮಾತನು ನಂಬಿ ನಾ ಬಂದೆ ಇಲ್ಲೀ ವರೆಗೆ,
ಕಾಲು ನೋವಿಗೆ ನೀನು ಎಣ್ಣೆ ತಿಕ್ಕುವಿಯೇನು,
ಹಡಬೆ ದರವೇಸಿ ಇಕ್ಕುವೆ ನಾಕು.

ಏನು ಜಗಳಾಡುವಿರಿ, ಏಕಿಷ್ಟು ಹಠ ನಿಮಗೆ,
ಇಲ್ಲಿಲ್ಲ ತೊಟ್ಟು ಸಹ--ತಿಳೀಲಿಲ್ಲ ಹೇಳಿದ್ದು?
ಹಿಡಕೊಂಡು ಒದಿರೋ ಬಿಡಿರಿ ಇನ್ನೆರಡು.

ಚೆಲ್ಲಿದೆ ನೆತ್ತರು ಎಲ್ಲಿದೆ ಗ್ರಂಧಿಗೆ,
ಎರಡಾದ್ರು ಹನಿ ನೀರು ಹೊಯ್ಯಿರಿ ಬಾಯಿಗೆ
ಒಡೆಯುವ ಮೊದಲೇ ಪ್ರಾಣದ ಗಡಿಗೆ.

ತನ್ನಿರಿ ಬಿಂದಿಗೆ ನೀರಿಗ್ಹೋಗುವ.

8

ಐ ಲವ್ ಯೂ ಎಂದ. ನಿನ್ನ ಕಣ್ಣು ಅದಷ್ಟು ಚೆಂದ ಎಂದ.
ನನಗ ಇದು ವರೆಗೆ ಹಾಗೆ ಯಾರೂ ಅಂದಿರಲಿಲ್ಲ. ಎದೆಯಲ್ಲಿ
ಸಿಹಿ ಸಿಹಿ ಆಯ್ತು. ಕಾಲೇಜು ಬಿಟ್ಟು ಬಾ ಸೀದ
ಬಸ್ಟೇಂಡಿಗೆ ಅಂದ. ರಾತ್ರಿಯ ಜರ್ನಿ. ಸಿಕ್ಕು ಸಿಕ್ಕಲ್ಲಿ
ಕೈ ಬಿಟ್ಟ. ಡೆಲ್ಲಿಯಲ್ಲಿ ಆಂಟಿ ಮನೆಯಲ್ಲಿ
ಮದುವೆ ಎಂದ. ಬಸ್ಸಿಳಿದು ಹೋಟೆಲ್ಲಿಗೆ ಯಾಕೆ
ಎಂದು ಕೇಳಿದ್ದಕ್ಕ ಆಂಟಿ ಮನೆ ಎಲ್ಲಿ
ಹುಡುಕಬೇಕು ಎಂದ. ಹೋಟೆಲ್ಲು ರೂಮಲ್ಲಿ ಅವನ
ಡ್ರೇಸೇ ಬದಲಾಯ್ತು. ಯಾರೋ ವಿಸಿಟರಿಗೆ ನನ್ನ
--ಇವನ ಎದುರೇ ಅವ ನನ್ನ ಮುಟ್ಟಿ ಪರೀಕ್ಷಿಸಿ ನೋಡಿ,
ಬಾರ್ಗೇನು ಮಾಡಿ--ಎಷ್ಟೋ ಮೊತ್ತಕ್ಕೆ ಮಾರಿದನು. ಆ ಮೇಲೆ
ನನ್ನ ಎಷ್ಟೋ ಜನರು ಎಷ್ಟೋ ಕಾಲ ಹತ್ತಿದರು.
ಮುಟ್ಟು ನಿಂತಾಗ ಬಸಿರು ತೆಗೆಯಿಸಿದ. ಬಳಿಕ
ಮತ್ತೊಬ್ಬನಿಗೆ ಕೊಟ್ಟ. ಕೂಡುವುದಿಲ್ಲ ಎಂದಲ್ಲಿ ಬಿಗಿದರು
ಉಪವಾಸ ಕೋದಂಡ. ಕೇಳಿದರೆ ಹೇಳಿದ ಹಾಗೆ
ಬ್ರಾಂದಿ ಹೋಟೆಲ್ಲು ತಿಂಡಿ ಸಿನೆಮಾ ದೇವಸ್ಥಾನ.

ಪುಣ್ಯ ಹೆಚ್ಚಿದರೆ ಮುಂದಿನ ಜನ್ಮ ಗರತಿ ಆಗುವೆನೆಂತೆ.
ಹಬ್ಬಲಿ ಏಡ್ಸ್. ಕುಟ್ಟೆ ಸುರಿಯಲಿ; ರಿವೆಂಜು ರುಚಿ;
ಮನೆಗೆ ಮರಳುವುದು ಆಗದ ಮಾತು. ತಿಳಿಯಲಿ: ಸತ್ತೆ;
ಅಥವಾ ಪ್ರಿಯನೊಡನೆ ಸಹಭಾಗಿ ಸುಖಿ ಸೀಮಂತೆ.

9

ಹಡಬೆ ನನ್ಮಗನ್ನ ತಂದು. ಏನಂತಿಳ್ಕೊಂಡಾನ್ಲೇ ಅವ ನನ್ನ?
ನಾ ಮರ್ಡರ್ ಮಾಡೀನಿ ಅಂತ ಹೇಳ್ಸಿ ಗಲ್ಲಿಗೆ ಹಾಕ್ಸಾನಂತೇನು?
ಅವನ ಅಮ್ಮನ್ನ ಹಡ. ಹೇಳ್ಲಾ ಅವಂಗೆ--
ಇಡೀ ಲೀಗಲ್ ಸಿಸ್ಟಂ ನನ್ನ ಫಿಂಗರ್ ಟಿಪ್ಸ್ನಾಗೆ ಐತೆ.
ನಾ ಮನ್ಸು ಮಾಡಿದ್ದರೆ
ಈ ಹ್ಯೂಮನ್ ರೈಟ್ಸ್ ಎಜಿಟೇಟರ್ಸ್ ಮ್ಯಾಗೇ ಕೇಸು ಹಾಕ್ಸಿ ಗಲ್ಲಿಗೆ ಹಾಕ್ಸೇನು--
ಮಾಡಿಲ್ಲೇನು ನೈಜೀರಿಯಾದಾಗೆ  ಕೆನ್ ಸರ್ ವಿವಾ ಎಂಬ ನನ್ಮಗಂಗ.
ನನ್ನೇ ಗಲ್ಲಿಗೆ ಹಾಕ್ಸಾನಂತೆ--ನನ್ನ--
ಬಾಂಛೋಥ್ ಸೂಳೇಮಗನ್ನ ತಂದು.

ಈ ಇಲೆಕ್ಷನ್ದಾಗೆ ನಾ ಗೆಲ್ದಿದ್ದರೆ ಹಾಕ್ಸೂ ಹಾಕ್ಸಾನು ಅನ್ನು.
ಅದೇ ಭಯ ದಿನಾ ರಾತ್ರಿ ಕಾಡ್ತೈತೋ ಮಗನೇ.
ಗೆಲ್ಬೇಕು--ಏನೇ ಆಗ್ಲಿ ಗೆಲ್ಬೇಕು.
ರಿಗ್ ಮಾಡಾಕೆ ಎರೇಂಜ್ ಮಾಡು.
ಎಂಟು ಗಂಟೆಗೆ ಮೊದ್ಲು ಎಲ್ಲಾ ಓಟು ಹಾಕಿ ಮುಗಿದ್ಬಿಡ್ಲಿ.
ಒಂದು ವೇಳೆ ಏನು ಮಾಡಿದರೂ ಗೆಲ್ಲಾಕಾಯಾಕಿಲ್ಲ ಅಂದರೆ
ಎದುರಾಳೀನ ಒಂಜಿನಕ್ಕೆ  ಮೊದಲೇ ಕಚಕ್ ಮಾಡಿಸ್ಬಿಡು.
ಸಪಾರಿ ಕೊಡು. ನೀನೇ ಮಾಡೋಕ್ಹೋಗಿ ಸಿಕ್ಬಿದ್ದೀಯ--ದುಡ್ಡು
ಯಾರಾದ್ರೂ ಬಿಸಿನೆಸ್ಮನ್ನು, ಇಂಡಸ್ಟ್ರಿಯಲಿಸ್ಟು, ಹೋಟೆಲ್ ಓನರ್ ಹತ್ರ ಇಸ್ಕೋ.
ಕೊಡಲ್ಲ ಅನ್ನೋ ಧೈರ್ಯ ಯಾವ ಸೂಳೇಮಗಂಗ್ ಐತಲೇ--
ಗೆದ್ದು ಒಂದು ಪೊಸಿಶನ್ ಈ ಸಲ ಪಡೀಲಿಲ್ಲಾಂದ್ರೆ
ನಾ ಹೋದೆ. ಆ ಮ್ಯಾಗೆ  ಈ ಜನ್ಮದಾಗೆ ರೌಡಿಪಟ್ಟ ಮುಗಿಯೋ ಹಂಗಿಲ್ಲ.

ಬೇವಾರ್ಸಿ ನನ್ ಮಗನೇ, ದೇವಸ್ಥಾನಕ್ಕೆ ಡೊನೇಷನ್ ಕೊಟ್ಟವ್ರೆ,
ಮಸೀದಿಲಿ ನಮಾಜು ಮಾಡವ್ರೆ,
ಜಾತ್ಯತೀತ ಸೆಕ್ಯೂಲರ್ ಡೆಮಕ್ರಾಟಿಕ್ ಲೀಡರ್
ಅಂತ ಪೇಪರ್ನಾಗೆ ಹಾಕ್ಸು. ಇಡೀ ಕ್ಷೇತ್ರದಾಗೆ
ಕ್ರಿಶ್ಚಿಯನ್ ಓಟರ್ಸ್ ಒಟ್ಟು ಇರೋರೇ ಮುನ್ನೂರು ಜನ--
ಹಂಗಾಗಿ ಇಗರ್ಜಿ ಪಂಚಾತಿಕೆ ಬುಟ್ಬುಡು.
ಯಾರಾದ್ರೂ ನನ್ನ ಟೀಕಿಸಿದ್ರೆ
ಕೆಳವರ್ಗದವರನ್ನ, ಶೋಷಿತರನ್ನ ರಿಪ್ರಸೆಂಟ್ ಮಾಡೋರಿಗೆ
ಇಂದು ನಮ್ಮ ದೇಶದಾಗೆ ಉಳಿಗಾಲ ಇಲ್ಲ
ಅಂತ ವಾಚಕರ ವಾಣೀಲಿ ಕಾಗದ ಬರೋಕೆ ವ್ಯವಸ್ಥೆ ಮಾಡ್ಸು.
ಬುದ್ಧಿಜೀವಿಗಳು ಭಾಷಣದಲ್ಲಿ ಹಂಗಂತ ಹೇಳ್ಲಿ.
ಗಟ್ಟಿ ಕುಳವಾರು, ನಮಗೆ ಬೇಕಾದ ಹಾಗೆ ಪ್ರಚಾರ ಕೊಡ್ತಾನೆ ಅಂತಾದ್ರೆ
ತುಸು ಜಾಸ್ತೀನೇ ಬಿಸಾಕು.
ಹೂಂ. ದಯಮಾಡ್ಸು. ಬಾಗ್ಲು ಹಾಕ್ಕೊಂಡು ಹೋಗು. ಯಾರಾದ್ರೂ ಬಂದ್ರೆ
ಕಾನ್ಫರೆನ್ಸ್ನಾಗವ್ರೆ,  ಸ್ಟಡಿ ಮಾಡ್ತವ್ರೆ ಅಂತ ಬೊಗಳಾಕೆ
ಆ ನನ ಮಗ ದರವಾನಂಗೆ ಹೇಳು.
ಹಡಬೆ ಬಡ್ಡೆತ್ತಾವು. ಎಲ್ಲಾ ಬುಡ್ಸಿ ಬುಡ್ಸಿ ಹೇಳ್ಬೇಕು.
ಬಾಟ್ಲಿ ತತ್ತಾ. ನಂಜಿಕೊಳ್ಳೋಕೆ ಯಾವಳಾದ್ರೂ ಅದಾಳೇನ್ಲಾ?
ಕಳ್ಸು ಮತ್ತೆ.

19

(ಡೆಲ್ಲಿಯಲ್ಲಿ ಕಂಡದ್ದು)

ಇಪ್ಪತ್ತೆಂಟು ತಲೆ, ಹದಿನಾಲ್ಕು ದಾಡೆ
ಮೂವತ್ತಾರು ಕೈ, ಸಾವಿರದೆಂಟು ನಾಲಗೆ
ಕಣ್ಣಿನ ಬದಲು ಎರಡು ಬೆಂಕಿಯ ಗೋಳ

ಗಾಳಿಯನ್ನು ಹಿಡಿದು ಗುಹೆಯಲ್ಲಿ ಒಗೆದ;
ಬೆಳಕನ್ನು ಹಿಡಿದು ಕತ್ತಲೆಯಲ್ಲಿ ಮುಳುಗಿಸಿದ;
ಮಾತನ್ನು ತಿರುಚಿ ಕೊರಳಲ್ಲಿ ಹೂತ.

ಗಾಳಿಯ ಪ್ರಾಣವನ್ನು
ಬೆಳಕಿನ ದೀಪ್ತಿಯನ್ನು
ಮಾತಿನ ಧ್ವನಿಯನ್ನು
ಕೊಂದ;

ತನ್ನ ಹೃದಯದ ಬೆಂಕಿಯನ್ನೆತ್ತಿ ಅಪ್ಪಿ ಮುದ್ದಾಡಿ
ತೊಟ್ಟಿಲಲ್ಲಿಟ್ಟು ಮಲಗಿಸಿ ತೂಗಿ

ಹಸಿವಾದಾಗ ಅದನ್ನೇ ತಿನ್ನುತ್ತಿದ್ದ.

22

ಈ ಲವ್ ಅನ್ನೋದು ಯೂಸಿಲ್ಲ. ಮಾಡು. ಬೇಡ ಹೇಳೂದಿಲ್ಲ.
ಆದರೆ ಕೀಪು ಅಂತ ಇರ್ಲಿ. ಮದುವೆ ಬೇಡ.
ಮದುವೆಗೆ ನೋಡು--ಮೂರು ಜಾತಕ ಫೊಟೋ ಬಂದವೆ.
ಇವ್ಳು ಮಿನಿಸ್ಟ್ರ ಮಗಳು; ಇವಳು ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ಹೋಲ್ಡರ್;
ಮತ್ತೆ ಇವಳ ಅಪ್ಪ ನೋಡು ಸೆಕ್ರೆಟೇರಿಯಟ್ನಲ್ಲಿ ಆಫಿಸರ್ರು.
ಕಾಂಟ್ರಾಕ್ಟ್, ಟೆಂಡರ್ ಎಪ್ರೋವಲ್ ಇವರ ಜವಾಬ್ದಾರಿ.
ಮೂವರಲ್ಲಿ ಯಾರನ್ನು ಮಾಡ್ಕಂಡ್ರೂ ಫ್ಯೂಚರ್ ಈಸ್ ಸೆಕ್ಯೂರ್ಡ್.

ಅಲ್ಲಯ್ಯಾ--ಈ ಫಿಲಾಸಫಿ ಲಿಟರೇಚರ್ ಪಟರೇಚರ್ ಓದ್ತಾ ಇರ್ತೀಯಲ್ಲ--ಏನಕ್ಕೆ?
ಹಂಗೂ ಇಂಟಲೆಕ್ಚುವಲ್ ಪ್ರೊಫೆಶನ್ನೇ ಬೇಕಂತಿದ್ರೆ
ಹೊರಸ್ಕೋಪು ನೋಡೋದು ಕಲಿತ್ಕೋ.
ಕ್ರಿಸ್ಟಲ್ ಗೇಸಿಂಗ್, ಪಾಂಚೆಟ್, ಕವಡೆ, ಪಂಚಾಂಗ--
ಭವಿಷ್ಯ ಹೇಳೋರು ಅಂದರೆ
ಎಂಥಾ ಮಂತ್ರಿ ಪೊಲಿಟಿಶಿಯನ್ ಮಿಸೆಸ್ ಹತ್ರಾನೂ ಸಲೀಸಾಗಿ ಹೋಗ್ಬಹುದು.
ಒಂಚೂರು ಪ್ರಾಣಾಯಾಮ ಯೋಗ ಕಲಿತ್ಕೊಂಡ್ರೆ
ಅಮೆರಕಾಕ್ಕೆ ವಲಸೆ ಹೋಗಿಯೂ ಪ್ರಾಕ್ಟೀಸು ಮಾಡ್ಬಹುದು.
ಯಾವಾಗಲೂ ಒಂದು ಕಾಲು ಆಚೆ ಇಟ್ಟಿರೋದು ಒಳ್ಳೇದು.

ಪುರಾನಾ ಖಿಲಾ ಮತ್ತು ಜೂ ಇರುವಲ್ಲಿ ಹಿಂದೆ ಇತ್ತಂತೆ ಇಂದ್ರಪ್ರಸ್ಥ--
ಅದರಿಂದ ಮುಂದೆ ಏಳು ಜನ್ಮಗಳಲ್ಲಿ
ಬೆಳೆದು ನಿಂತಿದೆ ಡೆಲ್ಲಿ.
ಅದೂ ಬದಲಿದೆ ಈಗ:
ಅರಮನೆ ಮ್ಯೂಸಿಯಂ ಆಗಿ, ಹವಾಮಹಲು ಹೋಟೆಲ್ ಆಗಿ,
ಭಿಲ್ಲ ರಂಗ ಬುದ್ಧ ಜಯಂತಿ ಪಾರ್ಕಲ್ಲಿ  ಅವತರಿಸಿ.
ಒಂದು ನವಿಲು, ಗರಿಗಳ ಫುಟ್ಪಾಥಲ್ಲಿ ಉದುರಿಸಿಕೊಂಡು,
ರಸ್ತೆ  ಮಧ್ಯೆ, ರಾಷ್ಟ್ರಪಕ್ಷಿ,
ನೀರಡಿಸಿ ನಿಂತಿತ್ತು. ರೆಕ್ಕೆ ತುಂಡು ಮಾಡಿ, ಕಾಲು ಕಟ್ಟಿ,
ರಾಶಿ ರಾಶಿ ಕೋಳಿ ಲಾರೀಲಿ ತುಂಬಿ ತೆಕ್ಕೊಂಡು ಹೋಗ್ತಿದ್ದರು.
ಬೆಳಿಗ್ಗೆ ಕೊಕ್ಕೊಕ್ಕೋ ಅಂತಿದ್ದ ಕೋಳಿ
ಬಿಸಿಲಲ್ಲಿ ಬಾಯಿ ಅಗಲಿಸಿ ಮುಚ್ಚಿ ಅಗಲಿಸಿ ಮುಚ್ಚಿ ಮಾಡ್ತಿದ್ದವು.
ಕಾಲ, ಸ್ಥಳ ಎಲ್ಲಾ ಯದ್ವಾತದ್ವ ಆಗದೆ.
ಯಾವಾಗ ಎಲ್ಲಿ ಏನಾಗುತ್ತೆ ಗೊತ್ತಿಲ್ಲ.
ಸರಿಯಾದ ಕಡೆ ನೋಡಿ, ಹತ್ತಬೇಕಾದ ಕಡೆ ಹತ್ತಿ,
ಆಯಕಟ್ಟಿನ ಜಾಗ ಹಿಡಕೊಂಡು ಕೂತುಕೋ.
ಆ ಮೇಲೆ ಬೇಟ ಸಲೀಸು.
ಇಲ್ಲಾಂದ್ರೆ ತಾಪತ್ರಯ ತಪ್ಪಿದ್ದಲ್ಲ.

26

ಬೆಳಕು ಮೂಡೆ ಮುಳುಂಕುಗಳ ತುಂಬುವುದು,
ವಿರಸ ವಿಚ್ಛಿದ್ರ ಕೊನೆಯಾಗಿ ಸತ್ತ್ವಶೀಲರ ಪ್ರಾಣ
ಗುಡಿ ಕಟ್ಟುವುದು ಎಂದು ಮಂಗಳ ಮಾತು ಆಡುವುದು

ಮಂಗನಿಗೆ ಬಿಸ್ಕೀಟು ತಿನ್ನಿಸುವ, ಕಾಗೆ ಕಾಕಾದಲ್ಲಿ
ವಿಶ್ವದ ಕುಣಿತ ಕಾಣುವ, ಭವಲೋಕ
ದೇವಲೋಕವೆ ಎಂಬ ಶುಭ ಜಾಯಮಾನಕ್ಕೆ ಸರಿ.
ಇರುಳು ಪಸರಿಸಿದೆ; ಹೊರಬೀಳಲಳವಲ್ಲ; ಕೊಲೆಗಡುಕ
ಕಳ್ಳ ತಲೆಹಿಡುಕ ರೌಡಿ ರಾಜಾರೋಷ ತಿರುಗುವರು.
ಪೊಲೀಸು ಅಧಿಕಾರಿ ಮಂತ್ರಿ ನ್ಯಾಯಾಧೀಶ
ಭೂಗತರ ಸೆರೆ; ಮತ್ತು; ಏಡ್ಸ್ ಇನಿಬರಿಗೆ; ಅರಿವುಳ್ಳ
ಕೆಲವರಿಗೆ ಪೊರೆ ಪುಕ್ಕು; ಗುಡಿಯ
ಗೋಡೆ ಜರಿದಿದೆ; ಹೊನ್ನ ಕಳಶ ಕುಸಿದಿದೆ; ಕಾಲೆಂಬ
ಕಂಬ ಜರಿದಿದೆ; ಹುಚ್ಚು ಶಿರ; ಹುಳಿತ ಯೋಚನೆ; ಭೀತಿ;
ನುಡಿ ಸ್ಫಟಿಕ ಶಲಾಕೆ ಆಗದೆ ಒಳಗೆ ಕುರುಡುತ್ತಿದೆ.

28

(ಡೆಲ್ಲಿವಾಲಾ--4)

ವರ್ಷ ಎಂಭತ್ತಲ್ಲ ನೂರ ಎಂಭತ್ತು ಕಳೆದರೂ
ಕಂಡದ್ದು ಮಾತ್ರ
ನಾಲ್ಕು, ಬರೀ ನಾಲ್ಕು ನಕ್ಷತ್ರ.

ಒತ್ತಿ ಒತ್ತಿ ಬರುವ ಒಳಗಿನ ಇರುಳು
ಇರುಳ ಎಳೆ ಎಳೆ ತಮಸ್ಸ ಅಂಧಕಾರದ ಘೋರ
ಉಸಿರು ಕಟ್ಟಿಸಿದಲ್ಲಿ
ಬಯಲು ಅಥವಾ ಗುಡ್ಡೆ ತುದಿ ಹತ್ತಿ
ನಿಲ್ಲೋಣ ಅನಿಸುತ್ತಿತ್ತು; ನಿಂತಲ್ಲಿ ತಿಳಿಯುತ್ತಿತ್ತು
ಲಕ್ಷ ಲಕ್ಷ ನಕ್ಷತ್ರ
ಗಿಡ ಮರ ಬಂಡೆ
ಸುಗಂಧ ದುರ್ಗಂಧ ವಾಸನೆ, ಮತ್ತು
ಜುಳು ಜುಳು ಹರಿವ ಅಂತರಗಂಗೆ.

ಬಾಗಿಲು ಮುಚ್ಚಿ ಒಳಗಿಂದ
ಕೀಹೋಲು ಸಂದಿಯಲ್ಲಿಣುಕಿ
ವರ್ಷ ಎಂಭತ್ತಲ್ಲ ನೂರ ಎಂಭತ್ತು ಕಳೆದರೂ
ನಾಲ್ಕಾದರೂ ಕಂಡದ್ದು ಬೆಳಕಿನ ಭಾಗ್ಯ.

30

ಜೀವನದ ಸಾರ್ಥಕ್ಯ ಏನೆಂದು ಕಾಡುವುದು
ಸಾವು ಇಂಥವರನ್ನು ಒದ್ದೊಯ್ಯಲು;
ಜೀವ ಜೀವದ ಮಧ್ಯೆ ಐಸು ಬೆಳೆಸಿರಲಿಲ್ಲ,
ಭವದ ಅನುಭವದಲ್ಲಿ ಬೆಳೆದಿದ್ದರು.

ಮಾತು ಮಾತಿಗೆ ಸ್ವರ್ಗ ಪಾಪ ಪುಣ್ಯದ ಹೆಸರು
ಕೂತುಕೊಂಡಿರುವಂತೆ ಮರಸಿಗಾಗಿ
ಸತ್ತ ಮನಸ್ಸಿನ ಮಂದಿ ಹೇಳಿ ಕಾಡುವ ಹಾಗೆ
ಆತು ಸಂಸ್ಕೃತ ಶ್ಲೋಕ ಊರೆಗಾಗಿ

ಕೊಂದವರಲ್ಲ ಹೇಳುತ್ತ ಮನಸ್ಸುಗಳ ಸೃಜನತ್ವ;
ಚೆಂದದ್ದು ಬಾಳುವೆಯು, ಪರಿಮಳದ
ಗಂಧ ತೀಡಿದ ಹಾಗೆ ಇವರ ಬದುಕೆಂದೇನು
ಹಿಂದಿಂದು ಹೋಲಿಕೆಯ ಮರಳಿ ಬಳಸಿ.

ಇಂಥವರು ಹೋದಾಗ ಎಂಥದ್ದು ಉಳಿದೀತು?--
ಸಂತೆ ಸರಕಿನ ರೀತಿಯಂಥ ಬದುಕು,
ಮಂಥರೆಯಂಥವರು, ಹೊಟ್ಟೆ ಹುಳಗಳ ಹಾಗೆ
ತಿಂತಿಣಿಸಿ ಒಳಶಕ್ತಿ ಹೀರುವವರು;

ತಪ್ಪು ಹುಡುಕುವ ಬಾಸು, ಕಪ್ಪ ಸುಲಿಯುವ ಅರಸ,
ಕೆಪ್ಪ ಕೂತಿದ್ದಾನೆ ಮೇಲಿನೊಡೆಯ;
ಅಪ್ಪಿ ಒಂದಾಗದೆಯೆ ಸಹಧರ್ಮಿ ಬೀಗಿದೆ ವಿರಸ,
ಉಪ್ಪುಗಂಜಿಯ ಊಟ, ಸೂಳೆ ಸರಸ.

ಲಂಚ ಹೊಡೆಯುವ ಜಡ್ಜು, ಫೈಲು ನುಂಗುವ ಕ್ಲರ್ಕು,
ಅಂಚೆ ಕೆಟ್ಟಿದೆ, ಸ್ವಗತ, ಪೆಟ್ಟಿ ವಾಸ;
ಇಂಚು ಇಂಚೇ ಹಿಂಡಿ ಜೀವ ತಿನ್ನುವ ಏಡ್ಸು,
ಸಂಚು ಪಡೆ ಆಡಳಿತ, ದೇಶ ದಾಸ.

ಎಂಥದ್ದು ಉಳಿದೀತು ಇಂಥವರ ಕೊಂದಾಗ?--
ಜಂತು ಆಸೆಯ ದೊಡ್ಡ ದೊಡ್ಡ ಪಡೆಯು
ಎಂಥೆಂಥದೋ ರೂಪ ತೊಟ್ಟು ಕುಣಿದಾಡುವುದು--
ಶಾಂತಿ ಸಹನೆಯ ವೇಷ ಮಾತು ಕೂಡ.

ಕೊಂದಾಗ ಇಂಥವರ ಎಂಥದ್ದು ಉಳಿದೀತು?--
ಎಂದಿಗೂ ಎದೆಗುಂದಿ ಕೂರಲಿಲ್ಲ;
ಕುಂದು ಕಾಣದ ನಡತೆ, ಕುಂದು ಕಾಣದ ಮಾತು,
ಬಂಧ ಹಾಳಾಗದ್ದ ಮೌಲ್ಯ ನಿಷ್ಠೆ:

ಉಳಿದೀತು ಎಂಥದ್ದು ಇಂಥವರ ಕೊಂದಾಗ?--
ಕೊಳಕು ಮಂಡಲ ಪಾಳ್ಯ ನೆಗೆದು ಮೆರೆದು
ಒಳ್ಳೆಯದು ನಾಗರಿಕ ಪಾತಾಳ ಸೇರುವುದು
ಕಳೆದು ಕವನಕ್ಕಿರುವ ಮುಖ್ಯ ಕಾರ್ಯ.

ಜೀವನದ ಸಾರ್ಥಕ್ಯ ಏನೆಂದು ಕಾಡುವುದು
ನಾವು ಇಂಥವರನ್ನು ಕಳೆದುಕೊಳಲು;
ಜೀವಗಳ ಆಳುವುದು ರೌಡಿ ಯಮ ವೈಷಮ್ಯ;
ದೇವ ಹೇಳಿದ್ದು ಇದು--ನಷ್ಟ ಅರಿವು.

31

 (ಗೃಹಿಣಿಯ ಹಾಡು)

ಮಲಗು ನಿದ್ರಿಸು ಕಂದ ಪುಟ್ಟಾಣಿ ಜೋ ಜೋ
ಚೆಂದ ಕನಸಿನ ಮುದ್ದು ಮುದ್ದು ಮುದ್ದಾಣಿ ಜೋ ಜೋ

ಇದ್ದ ಬೆಳಕೂ ಹೋಗಿ ಬಿರುಗಾಳಿ ಬೀಸಿ
ಮಿಂಚು ಮಿಂಚಿತು ಗುಡುಗು ಸಿಡಿಲು ಆರ್ಭಟಿಸಿ;
ಬಂದೀತೆ ಮಳೆ? ನೀರು ಒಳ?
ಕಳೆಯಬೇಕಿದೆ ಇರುಳು ಆತಂಕ ಹಾಸಿ.

ಮಲಗು ನಿದ್ರಿಸು ಕಂದ ನಿನಗೇನು ಹಾಳು
ಆಗದೆಯೆ ಬೆಳಗಾತ ನಗುನಗುತ ಏಳು.

ದರೋಡೆಕೋರರು ಬಂದು ಇದ್ದುದ ಕದ್ದು
ಮುಗಿಸಿಬಿಡುವರು ಅಡ್ಡ ಬಂದವರ ಹೊಡೆದು;
ಮಕ್ಕಳನ್ನೂ ಅವರು ಎತ್ತಿ ಕೊಂಡೊಯ್ಯುವರು
ಕೈಯ್ಯೋ ಕಾಲೋ ತಿರುಚಿ ಬೇಡ ಕಳಿಸುವರು.

ಮಲಗು ನಿದ್ರಿಸು ಕಂದ ಯಾವುದೇ ಗೋಳು
ನಿನ್ನ ಮುಟ್ಟದೆ ದಿನವು ನಗುನಗುತ ಏಳು.

ಆಚೆ ಬದಿಯಲ್ಲೆಲ್ಲೊ ಭಿಕ್ಷುಕ ಹುಡುಗ
ಬಲ ಮೀರಿ ಕಿರುಚುವನು: ತಾಯಿ ಕೊಡಿ ಅನ್ನ;
ಈಚೆ ಬದಿಯಲ್ಲೆರಡು ನಾಯಿ ಮರಿ, ತಾಯಿ
ಕುಂಯ್ಗುಟ್ಟಿ ಪಾಂಕ್ಹಿಡಿದು ಪಡುತ್ತಲಿವೆ ಬನ್ನ.

ಇವು ನಿನಗೆ ದುಸ್ವಪ್ನ ಆಗಿ ಬರದಿರಲಿ
ಬರುವವರು ಒಗೆತನದ ಸಖರಾಗಿ ಬರಲಿ.

ಮಲಗು ನಿದ್ರಿಸು ಕಂದ ಚೆಲು ನಗುವ ಶುಭವೆ
ಇಂಥ ಕಾವಳದಲ್ಲು ಹೊಳೆವ ಸಿರಿ ಮುಖವೆ

ಬೇರು ಎಲ್ಲೇ ಇರಲಿ, ಒಳಗಿನ ಜ್ಯೋತಿ
ಆರದ ಹಾಗೆ ಇರಲಿ ಒಡಲಿನ ಧಾತು;
ಸಿರಿ ಮುಖದಲ್ಲಿ ಬಂದರು ನೆರಿಗೆ, ಪಟು
ಇರಲಿ ಕಣ್ಣು ಕಿವಿ ತಲೆ ಮಾತು.

ಮಲಗು ನಿದ್ರಿಸು ಕಂದ ಪುಟ್ಟಾಣಿ ಜೋ ಜೋ
ಯೋಗ ನಿದ್ರೆಯ ಆದಿ ಶಿಶು ಮುದ್ದು ಜೋ ಜೋ

32

ಮಲಗಿದ ಮಕ್ಕಳ ಮುಗಿಸಿದೆ ಈಗ
ಭ್ರೂಣದ ಸುತ್ತ ಹಬ್ಬಿದೆ ಅಸ್ತ್ರ.

ದೇವರು ಬರುವನೆ ಕಾಪಾಡುವನೆ
ಭ್ರೂಣವ ಉಳಿಸೀ ಮೈ ಬೆಳೆಸುವನೆ?

ಇದ್ದರೆ ತಾಖತ್ತಿದ್ದರೆ ಬರಲಿ.
ಅಡಗಲು ಗುಹೆಯೋ ಆಳದ ಬಂಕರೊ
ಇದ್ದರು ಅಣುವಿನ ಉರಿಯಲಿ ಸುಡುವೆನು
ಗರ್ಭದ ಕತ್ತಲ ತಾಯಿಯ ಲೋಕವ.

ಅಂತೂ ಹೇಗೋ ಹುಟ್ಟಿದರೂ ಸಹ
ಕೈಯ್ಯೋ ಕಾಲೋ ಕಣ್ಣೋ ತಲೆಯೋ
ತಿರುಚಿಯೊ ಉರುಟಿಯೊ ಮೆಳ್ಳೋ ಕುಳ್ಳೋ--
ನೆಲವೂ ಕೂಡಾ ಸತ್ತದ್ದೇ ಪರಿ

ಉರುಳುತ ಅಸವಳಿಯುತ ನೀರಡಿಸುತ
ಕಟ್ಟದೆ ಏನೂ ಹುಟ್ಟಿಸಲಾಗದೆ
ಮಾಡುವರೇನೂ? ಮಕ್ಕಳ ಮುಗಿಸಿದೆ;
ಭ್ರೂಣದ ಸುತ್ತ ಈಗಿದೆ ಅಸ್ತ್ರ.

(ಮೇಲಿನವು ನನ್ನ "ಇಂದ್ರಪ್ರಸ್ಥ" (2) ಎಂಬ 32 ಭಾಗಗಳಿರುವ ದೀರ್ಘ ಕವನದ ಕೆಲವು ಭಾಗಗಳು. ಇಡೀ ಕವನ ನನ್ನ ಕವನ ಸಂಗ್ರಹ ಮಾತಾಡುವ ಮರ  (2003)ದಲ್ಲಿ ಲಭ್ಯವಿದೆ.
*************

ಬೋಧಿ ಟ್ರಸ್ಟ್  ಪುಸ್ತಕಗಳು ಬೆಂಗಳೂರಿನಲ್ಲಿ ನ್ಯೂ ಪ್ರೀಮಿಯರ್ ಬುಕ್ ಶಾಪ್, ಬನಶಂಕರಿ ಎರಡನೇ ಹಂತ, ಬೆಂಗಳೂರು
ಹಾಗೂ ಅತ್ರಿ ಬುಕ್ ಸೆಂಟರ್, ಮಂಗಳೂರು--ಇಲ್ಲಿ ಸಿಕ್ಕುತ್ತವೆ. ಅಥವಾ, Bodhi Trust, SB Account no.1600101008058, Canara Bank, Yenmur 574328, Sullia Taluk, Karnataka, IFSC: CNRB0001600-- ಇಲ್ಲಿಗೆ ನಿಮಗೆ ಬೇಕಾದ ಪುಸ್ತಕಗಳ ಮೊತ್ತ ಜಮೆ ಮಾಡಿ bodhitrustk@gmail.comಗೆ ವಿಳಾಸ ತಿಳಿಸಿದರೆ ಪುಸ್ತಕ ಕಳಿಸುತ್ತೇವೆ. ಡೊನೇಶನ್ನುಗಳಿಗೆ ಸ್ವಾಗತ. ಡೊನೇಷನ್ನನ್ನೂ ಮೇಲಿನ ಅಕೌಂಟಿಗೆ ಜಮೆ ಮಾಡಿ ಇಮೇಲ್ ಮೂಲಕ ತಿಳಿಸಿರಿ.

ಮಾರಾಟಕ್ಕೆ ಲಭ್ಯವಿರುವ ನಮ್ಮ ಪುಸ್ತಕಗಳು:
1. ಮಾತಾಡುವ ಮರ. ಸಮಗ್ರ ಕಾವ್ಯ, 1964-2003. ರೂ100.00
2. ಹ್ಯಾಮ್ಲೆಟ್. ಅನುವಾದ. ರೂ50.00
3. ಮುಚ್ಚು ಮತ್ತು ಇತರ ಲೇಖನಗಳು. ರೂ50.00
4. ಸಮಗ್ರ ನಾಟಕಗಳು, ಸಂಪುಟ 2. ರೂ60.00
5. ಸಮಗ್ರ ನಾಟಕಗಳು, ಸಂಪುಟ 3. ರೂ75.00


No comments:

Post a Comment