Friday, December 24, 2010

ಇಂದ್ರಪ್ರಸ್ಥ-1

ಊರು ಕಟ್ಟುವ ಮೊದಲು ಧ್ವಂಸ ಆಗಲೇ ಬೇಕಾದದ್ದು ಈ ಕಾಡು
ಎಂದು ಯೋಚಿಸಿದ ಕೃಷ್ಣ ಮತ್ತು ಪಾರ್ಥ
ಒಣಕು ಬಳ್ಳಿಗೆ ತರಗೆಲೆಗೆ ಕಾಷ್ಠಕ್ಕೆ
ಕಿಚ್ಚಿಟ್ಟರು. ಬೆಳಕು ಹಬ್ಬಲು ಕಾಡ ಕತ್ತಲೆಯ ಆಳಕ್ಕೆ
ಪ್ರಾಣಿಗಳು ಹಕ್ಕಿಗಳು
ಧಾವಿಸಲು ತೊಡಗಿದವು--ಚೀರುತ್ತ ಕೂಗುತ್ತ.
ಕಾಡ ಆಚೀಚೆ ಕೃಷ್ಣ-ಅರ್ಜುನ ನಿಂತು
ಪ್ರಾಣಿಗಳು ತಪ್ಪಿಸಲು ಹವಣುವುದ ಕಂಡೊಡನೆ
ಬೆನ್ನಟ್ಟಿ ಹಿಡಿಯುವರು, ಮರಳಿ ಉರಿಗೆಸೆಯುವರು.
ಕೊಳ ಹಳ್ಳ ನೀರೊರತೆ ಇತ್ಯಾದಿ ಜಲತಾಣ
ಕುತ ಕುತ ಕುದಿದು ತೇಲಿದವು
ಆಮೆ ನೀರೊಳ್ಳೆ ಮೀನು ಮೊಸಳೆಗಳು.
ಪ್ರತಿ ಜೀವ ಈಗ ಉರಿಯುವ ದೊಂದಿ.
ಸುಟ್ಟ ರೆಕ್ಕೆ ಕಿತ್ತ ಕಣ್ಣು ತುಂಡಾದ ಬಾಲ ತಲೆಗಳ
ವಿಧ ಬಗೆಯ ಪಕ್ಷಿ ಪ್ರಾಣಿ
ಪ್ರಾಣ ಸಂಕಟದಲ್ಲಿ ಮೇಲಕ್ಕೆ ಚಿಮ್ಮಿದರೆ
ಪಾರ್ಥ ಬಾಣಗಳಿಂದ ಎರಡಾಗಿ ತುಂಡರಿಸಿ
ಗಹ ಗಹ ನಕ್ಕು ಮತ್ತೆ ಆಹುತಿ ಕೊಡುವ.

ದೇವತೆಗಳು ಇಂದ್ರನಿಗೆ ಮೊರೆಯಿಟ್ಟರು.

ಆತ ನಿರಂತರ ಮಳೆ ಬೀಳಿಸಿದ
ಖಾಂಡವದ ಕಾಡನ್ನು, ಜೀವಗಳನ್ನು
ಉಳಿಸಿಯೇ ತೀರುವೆನೆಂದು.
ಆವಿಯಾಯಿತು
ನೆಲಕ್ಕೆ ಬೀಳುವ ಮೊದಲೇ.

ಇಂದ್ರ ಮಳೆಧಾರೆ ಹೆಚ್ಚಿಸಿದ.

ಹೀಗೆ ಸುರಿದರೆ ಪ್ರಳಯ
ಈತ, ಈ ಪುರವೈರಿ,
ಹೊಸನಗರ ಕಟ್ಟುವುದಕ್ಕೆ ಎಂದು ಸಹ ಬಿಡ ಎಂದು
ಕಾಡಿನ ಮೇಲೆ ಬಾಣಗಳ ಮಾಡು ನಿರ್ಮಿಸಿ ಪಾರ್ಥ
ಮಳೆಯ ಹನಿ ಚಿತೆ ಮೇಲೆ
ಬೀಳದ ರೀತಿ ತಡೆ ತಂದ. ಪರಿಣಾಮವಾಗಿ
ಕಾಡು ಬೆಂಕಿಗೆ ಸುಟ್ಟು
ಹೊಸ ಜನದ ಹೊಸ ಊರು ಕಟ್ಟಿ ಮುಗಿವುದು ಎಂದು
ಕೃಷ್ಣ ಯುಧಿಷ್ಠಿರ ಪಾರ್ಥ ಮೊದಲಾದ ನಾಗರಿಕ
ಜನಕ್ಕೀಗ ಅನ್ನಿಸಿತು.

ನಾಡು ಕಟ್ಟುವುದಕ್ಕೆ ಇದ್ದ ಅಡಚಣೆ ಅಷ್ಟು
ಬೇಗ ಪ್ರಾಣಿಗಳಿಂದ ಹಿಂಗುವಂತಿರಲಿಲ್ಲ.
ರೆಕ್ಕೆಗಳಿಂದ ಕೊಕ್ಕುಗಳಿಂದ ಕೈಯಿಂದ ಪಂಜಗಳಿಂದ
ಮುಗಿಸಿಯೇ ತೀರುವೆವೆಂದು
ಮೋಡಗಳಂತೆ ಆವರಿಸಿ ಹಾರಿ ಬಂದವು ಗರುಡ
ಮೊದಲಾದ ಹಕ್ಕಿಗಳು;
ಪಾತಾಳ ಏರಿ ಬಂದವು ಹಾವು, ಬಾಯಲ್ಲಿ ವಿಷ ಸುರಿಸಿ.

ಒಬ್ಬ ಯಃಕಶ್ಚಿತ್ ಮನುಷ್ಯ ತಾವು ವಾಸಿಸುವ ನಗರಕ್ಕೆ ಸರಿಸಮವಾದ
ನಗರ ಒಂದನ್ನು ಇಳೆ ಮೇಲೆ ಕಟ್ಟ ಹೊರಟದ್ದು ಕಂಡು
ಕೃಷ್ಣನಂಥಾ ದೇವರೂ ಅವನ ಜೊತೆಗೇ ಸೇರಿದ್ದಕ್ಕೆ ರೇಗಿ
ಯಕ್ಷ ರಾಕ್ಷಸ ಗಂಧರ್ವ ದೇವ ಕಿನ್ನರರು
ಒಟ್ಟಿಗೇ ಎರಗಿ ಬಂದರು--ಬಂಡೆಗಳ ಮಳೆಗರೆದು
ಇಂದ್ರ ಮತ್ತಷ್ಟು ಮಳೆ ಹೊಯ್ದು.
ಪಾರ್ಥ ಜಗ್ಗುವಂತಿರಲಿಲ್ಲ.
                                ಕೊನೆಯಲ್ಲಿ
ಈ ಮಗ ಏನಾದರೂ ಮಾಡಿಕೊಂಡು ಹಾಳಾಗಲಿ,
ನಗರ ಕಟ್ಟಿದ ಮೇಲೆ ಸೇಡು ತೀರಿಸೋಣ; ಅದಕ್ಕಿಂತ ಮೊದಲು
ಇದೊಂದು ನೋಡೋಣ, ಕೊನೆ ಬಾರಿ, ಎಂದು
ದೊಡ್ಡದೊಂದು ಪರ್ವತವನ್ನು
ಖಾಂಡವದ ಕಡೆ ಎಸೆದು ಆ ಇಂದ್ರ, ಪಾರ್ಥನ ಅಪ್ಪ,
ಮುಖ ತಿರುಗಿಸಿ ಹೊರಟು ಹೋದ.
ಅವನೊಡನೆ ಇತರರೂ ಹಿಂದಿರುಗಿದರು.

ತನ್ನೆಡೆಗೆ ಬರುತ್ತಿದ್ದ ಪರ್ವತವನ್ನು ಪಾರ್ಥ
ಛಿದ್ರಿಸಿದ ತುಂಡು ತುಂಡಾಗಿ. ಖಾಂಡವದ ಮೇಲೆ ಬಿದ್ದವು
ಆ ತುಂಡು ತುಂಡುಗಳು. ಇನ್ನಷ್ಟು
ಪ್ರಾಣಿ ಸತ್ತವು; ಗಿಡ ಮರ ಉರುಳಿದವು;
ಸಮತಟ್ಟು ಬಂದವು
ತೆವರು ತಗ್ಗುಗಳು.

ದೇವರೇ ಕೈ ಬಿಟ್ಟು ಹಿಂದಿರುಗಿ ಹೋಗಿರುವಾಗ
ಜೀವ ಉಳಿಯುವ ಆಸೆ ಯಾರಿಗೂ ಇರಲಿಲ್ಲ.
ಸಿಂಹ ಘರ್ಜಿಸಿ ಆನೆ ಘೀಳಿಟ್ಟು ನರಿ ತೋಳ ಊಳಿಟ್ಟು
ಹಕ್ಕಿಗಳು ಕಿರುಚಿ ಹುಳಗಳು ಚಿರುಟಿ
ಬೆಂಕಿ ಹಬ್ಬುತ್ತಿತ್ತು--ಅಗಲಕ್ಕೆ ಉದ್ದಕ್ಕೆ.

ತಪ್ಪಿಸಿಕೊಂಡು ಹೋದ ತಕ್ಷಕ ಎಂಬ ಹಾವೊಂದು ಬಿಟ್ಟು
ಉಳಿದ ಪ್ರತಿಯೊಂದು ಕಬಳಿಸಿ ಅಗ್ನಿ
ಸುಟ್ಟ ಮರ ಹೆಣಗಳ ರಾಶಿ ಬೆಂದ ಇಳೆ
ಕೊಟ್ಟು ವಿರಮಿಸಿತು. ಈಗ ಪಾರ್ಥ
ಮಳೆ ಕೆಳಗೆ ಇಳಿಯದ ಹಾಗೆ ತಡೆದಿದ್ದ ತಡೆ ತೆಗೆದ.
ಬೂದಿ ಇದ್ದಿಲ ರಾಶಿ ಮರಗಳ ತುಂಡು ರೆಕ್ಕೆಗಳು ಅಸ್ಥಿಗಳು
ತೊಳೆದು ಹೋದವು. ಹಳ್ಳ ಕೊಳ್ಳಗಳು
ಮರಳಿ ತುಂಬಿದವು. ಆ ಮೇಲೆ

ರಸ್ತೆ ಮನೆ ಶಾಲೆ ಕೋಟೆಗಳ ಕಾಲುವೆಯ ಕಂದಕವ
ಬುರುಜುಗಳ ದ್ವಾರಗಳ ಕಛೇರಿಗಳ ಲಾಯಗಳ
ಕಟ್ಟಿದರು. ಅಲ್ಲಿ ವಾಸಿಸಲು
ಕವಿಗಳು ನರ್ತಕರು ವರ್ತಕರು ಪಂಡಿತರು
ಬಂದು ನೆಲೆಸಿದರು. ಉದ್ಯಾನವನಕ್ಕೆ
ಮಾವು ನೇರಿಲೆ ಕದಂಬ ಮಲ್ಲಿಗೆ ಮೊದಲಾದ ಫಲ ಪುಷ್ಪ
ನವಿಲು ಗಿಳಿ ಶಾರ್ಙಕವೇ ಮೊದಲಾದ ಹಕ್ಕಿಗಳು
ಬಂದು ಸೇರಿದವು; ಹುಲಿ ಸಿಂಹ ಚಿರತೆ ಚಿಂಪಾಂಜಿ ನರಿ ಮುಸುವ
ಏಡಿಗಳು ಹಾವುಗಳು ಮೀನುಗಳು ಉಡ ಕೋತಿ
ಮೃಗಶಾಲೆಯಲ್ಲಿ; ಆನೆಗಳು ಮಾವುತನ ಕುದುರೆಗಳು ರಾವುತನ
ಅಂಕುಶಕ್ಕೊಳಪಟ್ಟು; ಕಾಡಿನ ಪ್ರಾಣಿ
ಹೀಗೆ, ನಾಡ ಸರಹದ್ದಲ್ಲಿ
ಬಂದು ಉಳಿದವು ಈಗ.

ನಾಡು ಈ ರೀತಿ ಬೆಳೆದ ಮೇಲೊಂದು ಹುಣ್ಣಿಮೆ ರಾತ್ರಿ
ಯುಧಿಷ್ಠಿರನೇ ಮೊದಲಾದ ಪಾಂಡವರು ಕೃಷ್ಣನೊಡಗೂಡಿ
ನೆಟ್ಟು ಬೆಳೆಸಿದ ಕಾಡಿನ ನಡುವೆ ಕಟ್ಟಿ ನಿರ್ಮಿಸಿದ ಹೊಳೆ ದಂಡೆ
ಮೇಲೆ ಸೇರಿತು ಗೋಷ್ಠಿ.
ಮದಿರೆ ಸಂಗೀತ ಸಖೀಜನ ಸೇರಿ
ದ್ರೌಪದಿ ಸುಭದ್ರೆಯರು ನರ್ತಿಸಲು ತೊಡಗಿದರು.
ಕೆಲವರು ಈಜಿ ಕೆಲವರು ಹಾಡಿ ಸಂಕಥಿಸಿ ಕೆಲರು
ಅತ್ತು ಕಣ್ಣೊರೆಸಿದರು, ನಕ್ಕು ಮಾತಾಡಿದರು ವಿನೋದಕ್ಕೆ ತೊಡಗಿದರು.
ಕೆಲರು ಸುಖದೊಂದು ಮಾತನ್ನು ಅಪರಿಚಿತ ಕಿವಿಯಲ್ಲಿ ಉಸುರಿದರು.
ಬೆಳೆಸಿದ್ದ ಕಾಡಿನ ಹೂವು ಗಿಡ ಎಲೆ ತಳಿರು ಕೊಳ ನೀರು
ಚಂದ್ರನ ಬೆಳಕಿಂದ, ನಕ್ಷತ್ರಗಳ ಪ್ರತಿಬಿಂಬದಿಂದ
ಗುಟ್ಟುಗಳಿಂದ ನುಡಿಸುಯ್ಲಿನಿಂದ ಕಿಲಕಿಲದ ನಗುವಿಂದ
ಉಲ್ಲಾಸದಿಂದ ಆಯಾಸದಿಂದ ಮೈಮುರಿತದಿಂದ ಎದೆ ಬಡಿತದಿಂದ
ಕೊಳಲಿಂದ ವೀಣೆಗಳಿಂದ ಗೆಜ್ಜೆ ಕಿಲಕಿಲದಿಂದ ಮೃದಂಗಗಳಿಂದ
ಪ್ರತಿಧ್ವನಿಸತೊಡಗಿತ್ತು--ಆಕಾಶದಲ್ಲಿರುವ

ಇಂದ್ರನೇ ಮೊದಲಾದ
ದೇವರಿಗೆ ಕೇಳುವ ಹಾಗೆ.

*****


ಟಿಪ್ಪಣಿ: 1. ಮಹಾಭಾರತದಲ್ಲಿ ಪಾಂಡವರು ಇಂದ್ರಪ್ರಸ್ಥ ನಗರ ಕಟ್ಟಿ ವಾಸಿಸಲು ಸುರು ಮಾಡಿದ ಮೇಲೆ ಅಗ್ನಿಯ ಹಸಿವು ತಣಿಸಲು ಖಾಂಡವವನ ಸುಟ್ಟರು ಎಂಬ ಕತೆ ಬರುತ್ತದೆ. ನನಗೆ ಬೇಕಾದ್ದನ್ನು ಹೇಳುವುದಕ್ಕಾಗಿ ಕಾಡು ಸುಟ್ಟ ಮೇಲೆ ನಗರ ಕಟ್ಟಿದರು ಎಂದು ಈ ಕತೆಯನ್ನು ಇಲ್ಲಿ ಬದಲಾಯಿಸಿಕೊಂಡಿದ್ದೇನೆ. ಈ ಪದ್ಯ ಮೊದಲು ಮಾತಾಡುವ ಮರದಲ್ಲಿ ಪ್ರಕಟವಾಗಿದೆ.
2.  ಬೋಧಿ ಟ್ರಸ್ಟ್ KAVYODYOGA ಎಂಬ ಹೊಸ ಬ್ಲಾಗ್ ಸುರು ಮಾಡಿದೆ. ಇದು ಭಾರತೀಯ ಕಾವ್ಯ ಖಜಾನೆ. ಈ ನಾಡಿನ ಯಾವುದೇ ಭಾಷೆಯ ಕಾವ್ಯದ ಇಂಗ್ಲಿಷ್ ಅನುವಾದಗಳನ್ನು ಈ ಸೈಟಿನಲ್ಲಿ ಪ್ರಕಟಣೆಗಾಗಿ ಕಳಿಸಬಹುದು. ವಿಳಾಸ: bodhitrustk@gmail.com    KAVYODYOGAದ ವಿಳಾಸ: http://kavyodyoga.blogspot.com
3. Bodhi Trust accepts donations. Please send cheques and DDs to Bodhi Trust, Kalmadka 574212, Bellare, Karnataka. For details, please write to bodhitrustk@gmail.com
4. Bodhi Trust books in Kannada are available for sale.For details, please contact the above email address.



ಶಾಂತಿನಾಥ ದೇಸಾಯಿ ವಾಚಿಕೆ ನನ್ನ ಇತ್ತೀಚಿನ ಪುಸ್ತಕ. ಇದಕ್ಕೆ ನಾನು ಬರೆದ ದೀರ್ಘ ಪ್ರಸ್ತಾವನೆಯಿದೆ. ಅದರಲ್ಲಿ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನನಗೆ ಮತ್ತು ದೇಸಾಯಿಯವರಿಗೆ ಆದ ಅನುಭವಗಳ ವಿವರವೂ ಇದೆ.

No comments:

Post a Comment