Thursday, November 25, 2010

ಉಪನಿಷತ್ತು ಕುರಿತು---2

ಸೂಚನೆ: 1.ಬೋಧಿ ಟ್ರಸ್ಟ್, ಕಲ್ಮಡ್ಕ 574212, ಕರ್ನಾಟಕ--ಇದರ ಪ್ರಕಟಣೆಗಳನ್ನು ಓದುಗರು ಈಗ ನೇರವಾಗಿ ಬೋಧಿ ಟ್ರಸ್ಟಿನಿಂದ ತರಿಸಿಕೊಳ್ಳಬಹುದು. ನಿಮಗೆ ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust, SB Account Number 1600101008058, Canara Bank, Yenmur--574328, Sullia Taluk, Dakshina Kannada District, Karnataka--ಇಲ್ಲಿಗೆ ಕಳಿಸಿ bodhitrustk@gmail.com ಗೆ ನಿಮ್ಮ ಅಂಚೆ ವಿಳಾಸ ಇಮೇಲ್ ಮಾಡಿದರೆ ಪುಸ್ತಕ ಕಳಿಸುತ್ತೇವೆ. ಬಳಸಬೇಕಾದ ಕೋಡ್:  IFSC: CNRB0001600.


ವಿದೇಶದಲ್ಲಿರುವವರು ಅಂಚೆ ವೆಚ್ಚ ಸೇರಿಸಿ ಕಳಿಸಿ. ವಿದೇಶಗಳಲ್ಲಿ ಪುಸ್ತಕಗಳ ಬೆಲೆ: ಮುಖಬೆಲೆಗೆ ಸಮಾನವಾದ ಡಾಲರ್ ಮೊತ್ತ.


ಇವು ಮಾರಾಟಕ್ಕೆ ಲಭ್ಯವಿರುವ ಪುಸ್ತಕಗಳು. ಎಲ್ಲಾ ಪುಸ್ತಕಗಳ ಲೇಖಕ ನಾನು, ರಾಮಚಂದ್ರ ದೇವ.
1. ಸಮಗ್ರ ನಾಟಕಗಳು, ಸಂಪುಟ 2 (ಪುಟ್ಟಿಯ ಪಯಣ, ಸುದರ್ಶನ--ಈ ಎರಡು ನಾಟಕಗಳಿವೆ) ರೂ60.00
2. ಸಮಗ್ರ ನಾಟಕಗಳು, ಸಂಪುಟ 3 (ಅಶ್ವತ್ಥಾಮ, ಹುಲಿಯ ಕಥೆ, ದಂಗೆ--ಈ ಮೂರು ನಾಟಕಗಳಿವೆ) ರೂ75.00
   (ಮೇಲಿನ ಎರಡು ಪುಸ್ತಕಗಳು ಒಂದು ತಿಂಗಳ ಹಿಂದೆ ಪ್ರಕಟವಾಗಿವೆ)
3. ಮಾತಾಡುವ ಮರ, ಸಮಗ್ರ ಕಾವ್ಯ, 1964--2003. ರೂ100.00
4. ಮುಚ್ಚು ಮತ್ತು ಇತರ ಲೇಖನಗಳು. ಶೇಕ್ಸ್ಪಿಯರ್, ಮಹಾಭಾರತ, ವಡ್ಡಾರಾಧನೆ, ಮಾತಾಡುವ ಮರ ಕುರಿತ ಜಾನಪದ ಕತೆ ಹಾಗೂ ಚಿತ್ರ, ಕೋಡಂಗಿ ವೇಷ ಹಾಗೂ ಕೋಡಂಗಿತನ ಕುರಿತ ತಾತ್ವಿಕ ಪರಿಕಲ್ಪನೆ, ಶಿವರಾಮ ಕಾರಂತರ ಕಾದಂಬರಿಗಳು, ಗೋಪಾಲಕೃಷ್ಣ ಅಡಿಗರ ಕಾವ್ಯ, ಬಾಲಕಾರ್ಮಿಕರು ಮೊದಲಾದ ವಿಷಯ ಕುರಿತ ಲೇಖನಗಳಿವೆ. ಬೆಲೆ ರೂ60.00
5. ಹ್ಯಾಮ್ಲೆಟ್. ಶೇಕ್ಸ್ಪಿಯರ್ ಅನುವಾದ. ರೂ50.00


2. ಕವಿ ಕೆ. ನ. ಶಿವತೀರ್ಥನ್ 2005ರಲ್ಲಿ ನನ್ನ ಬರೆವಣಿಗೆ ಕುರಿತು ದೇವಸಾಹಿತ್ಯ ಎಂಬ ಹೆಸರಿನ ಪುಸ್ತಕ ಸಂಪಾದಿಸಿ ಅವರದ್ದೇ ಮಾಲಿಕತ್ವದ ಪ್ರಕಾಶನ ಸಂಸ್ಥೆಯಾದ ನೈಋತ್ಯ ಪ್ರಕಾಶನದ ಮೂಲಕ ಪ್ರಕಟಿಸಿದ್ದರು. ಕಳೆದ ಮೂರು ವರ್ಷಗಳಿಂದ ಶಿವತೀರ್ಥನ್ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ನಾಲಗೆ ಮತ್ತು ಬಲ ಪಾರ್ಶ್ವ ಬಿದ್ದುಹೋಗಿವೆ. ಇಂಥಾ ಸ್ಥಿತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ದೇವಸಾಹಿತ್ಯದ ಪ್ರತಿಗಳು ಗೆದ್ದಲು ಹಿಡಿದೋ ಬೇರೆ ರೀತಿಯಲ್ಲೋ ಹಾಳಾಗುವುದು ಬೇಡವೆಂದು ಅವರು ಅವನ್ನು ಬೋಧಿ ಟ್ರಸ್ಟಿಗೆ ಕೊಟ್ಟಿದ್ದಾರೆ. ಅದರಲ್ಲಿ   ಶ್ರೀರಂಗ, ಹಾ. ಮಾ. ನಾಯಕ, ಶಾಂತಿನಾಥ ದೇಸಾಯಿ, ಪಿ. ಲಂಕೇಶ್, ಜಿ. ಎಸ್. ಅಮೂರ್, ಯು. ಆರ್. ಅನಂತಮೂರ್ತಿ, ಡಿ. ಆರ್. ನಾಗರಾಜ್, ಇಕ್ಬಾಲ್ ಅಹಮದ್, ಜನಾರ್ದನ ಭಟ್, ಪಟ್ಟಾಭಿರಾಮ ಸೋಮಯಾಜಿ, ಕಿ. ರಂ. ನಾಗರಾಜ, ಎಚ್. ಎಸ್. ವೆಂಕಟೇಶಮೂರ್ತಿ, ಸಿ. ಆರ್. ಸಿಂಹ ಮೊದಲಾದವರು ನನ್ನ ಕೃತಿಗಳ ಕುರಿತು ಬರೆದ ಲೇಖನಗಳಿವೆ.  ಇವು ಬೇಕಾದವರು ತಮಗೆ ಸಾಧ್ಯವಿರುವ/ಸೂಕ್ತ ಕಂಡ ಮೊತ್ತವನ್ನು ಡೊನೇಷನ್ ಆಗಿ ಮೇಲೆ ಸೂಚಿಸಿದ ಬೋಧಿ ಟ್ರಸ್ಟ್ ಎಕೌಂಟಿಗೆ ಜಮೆ ಮಾಡಿ ತಮ್ಮ ಹೆಸರು ವಿಳಾಸಗಳನ್ನು bodhitrustk@gmail.com ಗೆ  ಇಮೇಲ್ ಮಾಡಿ ತಿಳಿಸಿದರೆ ಆ ಪುಸ್ತಕ ಕಳಿಸುತ್ತೇವೆ. ನಮಗೆ ಅದರ ಒಂದು ಪ್ರತಿಯನ್ನು ರಿಜಿಸ್ಟರ್ಡ್ ಬುಕ್ ಪೋಸ್ಟ್ ಮಾಡಲು (ಪ್ಯಾಕಿಂಗ್ ಹೊರತಾಗಿ) ರೂ21.00 (ರೂಪಾಯಿ ಇಪ್ಪತ್ತೊಂದು) ಅಂಚೆವೆಚ್ಚ ತಗಲುತ್ತದೆ. ಹಾಗಾಗಿ ನೀವು ಕೊಡುವ ಮೊತ್ತ ಅದಕ್ಕಿಂತ ಹೆಚ್ಚಿಗೆ ಇರಬೇಕಾದ್ದು ಅನಿವಾರ್ಯ. 206 ಪುಟಗಳಿರುವ ಆ ಪುಸ್ತಕದ ಬೆಲೆ  ರೂ100.00.


ಬೋಧಿ ಟ್ರಸ್ಟ್ ಲಾಭ ಬೇಡ, ನಷ್ಟ ಬೇಡ ಎಂಬ ತತ್ತ್ವದ ಮೇಲೆ ನಡೆದುಕೊಂಡು ಹೋಗುತ್ತಿರುವ ರಿಜಿಸ್ಟರ್ಡ್ ಸಂಸ್ಥೆ.


***************

ಬೃಹದಾರಣ್ಯಕ ಉಪನಿಷತ್ತನ್ನು ನಮ್ಮಲ್ಲಿ ಅನೇಕರು ಓದಲು ಕಾರಣ ಟಿ. ಎಸ್. ಎಲಿಯಟ್ಟಿನ ದಿ ವೇಸ್ಟ್ ಲ್ಯಾಂಡ್  ಕವನ ಎನ್ನುವುದು ನಾವು ರೂಢಿಸಿಕೊಂಡ ಇಂಗ್ಲಿಷ್ ವಿದ್ಯಾಭ್ಯಾಸದ ಪರಿಣಾಮ. ಆದರೆ ದಿ ವೇಸ್ಟ್ ಲ್ಯಾಂಡ್  ಕನ್ನಡದ ಮೇಲೆ ಪ್ರಭಾವ ಬೀರಲು ಪ್ರಾರಂಭವಾಗಿ ಐವತ್ತು ವರ್ಷಗಳೇ ಕಳೆದಿವೆ. ಆ ಅವಧಿಯಲ್ಲಿ  ಅವನ ಮೇಲೆ ಲೇಖನಗಳೂ ಕವನಗಳೂ ಬಂದಿವೆ. ಆದರೂ ಬೃಹದಾರಣ್ಯಕದ ಬಗ್ಗೆ ನನಗೆ ತಿಳಿದಂತೆ ಆಧುನಿಕ ಸಂವೇದನೆಯುಳ್ಳವರು ಆಸಕ್ತಿ ತೋರಿದ್ದು ಅಪರೂಪ. ಅದರ ಅಧ್ಯಾತ್ಮಿಕತೆಯನ್ನು  ಅಸ್ಪಷ್ಟ ಪದಪುಂಜಗಳಲ್ಲಿ ವಿವರಿಸುವ  ಪ್ರಕಟಣೆಗಳ ಹೊರತಾಗಿ ಬೇರೆ ರೀತಿಯ ವಿಶ್ಲೇಷಣಾತ್ಮಕ ಲೇಖನಗಳು ಬಂದದ್ದು ಕಮ್ಮಿ. ಆದರೆ ನಮ್ಮ ಬೌದ್ಧಿಕ ಹಸಿವಿಗೆ ಸಾಕಷ್ಟು ಗ್ರಾಸ ಒದಗಿಸಬಲ್ಲ ಅಪರೂಪದ ಪುಸ್ತಕಗಳಲ್ಲಿ ಇದೊಂದು.

ಎಲಿಯಟ್ ಉಪಯೋಗಿಸುವ ದಾಮ್ಯತ ದತ್ತ ದಯಧ್ವಂ ಇರುವ ಆ ಮೂರು ಶ್ಲೋಕಗಳು ಮೂಲದಲ್ಲಿ ಹೀಗಿವೆ:

ತ್ರಯಃ ಪ್ರಾಜಾಪತ್ಯಾಃ ಪ್ರಜಾಪತೌ ಪಿತರಿ ಬ್ರಹ್ಮಚರ್ಯಮೂಷುಃ ದೇವಾ ಮನುಷ್ಯಾ ಅಸುರಾಃ ಉಷಿತ್ವಾ ಬ್ರಹ್ಮಚರ್ಯಂ ದೇವಾ ಊಚುಃ ಬ್ರವೀತು ನೋ ಭವಾನಿತಿ ತೇಭ್ಯೋ ಹೈತದಕ್ಷರಮುವಾಚ ದ ಇತಿ ವ್ಯಜ್ಞಾಸಿಷ್ಮೇತಿ ಹೋಚುಃ ದಾಮ್ಯತೇತಿ ನ ಆತ್ಥೇತಿ ಓಮಿತಿ ಹೋವಾಚ ವ್ಯಜ್ಞಾಸಿಷ್ಟೇತಿ (1)
ಅಥ ಹೈನಂ ಮನುಷ್ಯಾ ಊಚುಃ ಬ್ರವೀತು ನೋ ಭವಾನಿತಿ ತೇಭ್ಯೋ ಹೈತದೇವಾಕ್ಷರಮುವಾಚ ದ ಇತಿ ವ್ಯಜ್ಞಾಸಿಷ್ಮೇತಿ ಹೋಚುಃ ದತ್ತೇತಿ ನ ಆತ್ಥೇತಿ ಓಮಿತಿ ಹೋವಾಚ ವ್ಯಜ್ಞಾಸಿಷ್ಟೇತಿ (2)
ಅಥ ಹೈನಮಸುರಾ ಊಚುಃ ಬ್ರವೀತು ನೋ ಭವಾನಿತಿ ತೇಭ್ಯೋ ಹೈತದೇವಾಕ್ಷರಂ ಉವಾಚ ದ ಇತಿ ವ್ಯಜ್ಞಾಸಿಷ್ಟಾ ಇತಿ ವ್ಯಜ್ಞಾಸಿಷ್ಟೇತಿ ತದೇತದೇವೈಷಾ ದೈವೀ ವಾಗನುವದತಿಸ್ತನಯಿತ್ನುರ್ದ ದ ದ ಇತಿ ದಾಮ್ಯತ ದತ್ತ ದಯಧ್ವಮಿತಿ ತದೇತತ್ ತ್ರಯಂ ಶಿಕ್ಷೇತ್ ದಮಂ ದಾನಂ ದಯಾಮಿತಿ (3)

ಈ ಶ್ಲೋಕ ಅತ್ಯುತ್ತಮ ಸಾಹಿತ್ಯ ಬರವಣಿಗೆಯ ಒಂದು ಉದಾಹರಣೆಯಾಗಿದೆ. ದ ಎಂಬ ಒಂದು ಅಕ್ಷರವನ್ನು ಅವರವರ ತಿಳುವಳಿಕೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಅರ್ಥಮಾಡಿಕೊಳ್ಳಲು ಬಿಡುವ ಈ  ತಂತ್ರವೇ ಪರಿಣಾಮಕಾರಿ. ಒಗಟಿನ ತಂತ್ರ ಬಳಸುವ ಈ ಶ್ಲೋಕಕ್ಕೆ ಕಾವ್ಯದ ಧ್ವನಿಶಕ್ತಿಯಿದೆ. ಅರ್ಥ ಮಾಡಿಕೊಳ್ಳುವವರ ಮಿತಿಯನ್ನು ದ ಪದಕ್ಕೆ ಅವರು ಕೊಡುವ
ಅರ್ಥವೇ ಸೂಚಿಸುತ್ತದೆ. ದ ಪದದ ಅರ್ಥಗಳು ದಿನನಿತ್ಯದ ಜೀವನ ನಿರ್ವಹಣೆಯ ದೃಷ್ಟಿಯಿಂದ ಸಹಾ ಉಪಯೋಗಕ್ಕೆ ಬರುವಂಥವು. ಭಾರತೀಯ ಜೀವನದಲ್ಲಿ ಈ ಮೂರೂ--ಮತ್ತು ನಾವೀಗ ಹೊಸತಾಗಿ ಸೇರಿಸಿರುವ ನಾಲ್ಕನೆಯ ದರ್ಪಣ__ಮೌಲ್ಯಗಳಾಗಿ ಉಳಿದಿವೆ. ಮಹಾಭಾರತ, ರಾಮಾಯಣಗಳ ಒಂದು ಮುಖ್ಯ ವಸ್ತುವೇ ಈ ಮೂರು ಮೌಲ್ಯಗಳನ್ನು--ಮತ್ತು ತನ್ನನ್ನು ತಾನೇ ನೋಡಿಕೊಳ್ಳಬೇಕಾದ ಅಗತ್ಯವನ್ನು--ಅತಿಕ್ರಮಿಸಿದಾಗ ಉಂಟಾಗುವ ಸಂಕಟ ಮತ್ತು ನಾಶ.

ದ ಕತೆ ಎಲಿಯಟ್ಟಿನ ದಿ ವೇಸ್ಟ್ ಲ್ಯಾಂಡ್  ಕವನಕ್ಕೆ ಹೊಸ ಅರ್ಥವ್ಯಾಪ್ತಿಯನ್ನು ಒದಗಿಸಿಕೊಡುತ್ತದೆ. ಬರಡು ನೆಲ ಮತ್ತು ಬರಡು ಸಂಬಂಧ ಮಳೆ ಬರುವುದರಿಂದ, ದತ್ತ ದಯ ದಾಮ್ಯತಗಳ ಅನುಷ್ಠಾನದಿಂದ ಫಲವತ್ತಾಗಬಹುದು ಎಂಬ ದಿ ವೇಸ್ಟ್ ಲ್ಯಾಂಡಿನ ವಸ್ತು ಉಪನಿಷತ್ತಿನ ಕಥೆಯಲ್ಲಿ ಅಂತಸ್ಥವಾಗಿರುವಂಥದು. ತನ್ನ ಕವನದ ಮೊದಲ ನಾಲ್ಕು ಭಾಗಗಳಲ್ಲಿ ಎಲಿಯಟ್ ಚಿತ್ರಿಸಿದ್ದು ಬರಡು ಜೀವನವನ್ನು. ಅದು ನೀರಿಲ್ಲದ, ಮಳೆ ಬಾರದ ನೆಲ; ಪ್ರೀತಿ ವಿಶ್ವಾಸಗಳಿಲ್ಲದ, ಯಾಂತ್ರಿಕ ಲೈಂಗಿಕ ಚಟಗಳ, ಅಧ್ಯಾತ್ಮಿಕವಾಗಿ ಸಹಾ ಬರಡಾದ ಸ್ಥಳ. ಇಂಥಾ ವೇಸ್ಟ್ಲಾಂಡ್ ಫಲವತ್ತಾಗಬೇಕಾದರೆ ಮಳೆಯೂ ಬರಬೇಕು, ಒಳ್ಳೆಯ ಜೀವನಕ್ಕೆ  ಅಗತ್ಯವಾದ ಮೌಲ್ಯಗಳೂ ಆಚರಣೆಗೆ ಬರಬೇಕು. ಗುಡುಗಿನ ನಂತರ ಬರಬಹುದಾದ ಮಳೆ ಮತ್ತು ಆ ಗುಡುಗು ನುಡಿಯುವ ದತ್ತ ದಯ ದಾಮ್ಯತ ಎಂಬ ಮಾತುಗಳು ಅದು ವರೆಗೆ ಚಿತ್ರಿಸಿದ ಎರಡೂ ಬಗೆಯ ಬರಡುತನವನ್ನು ನೀಗಬಲ್ಲವು ಎಂಬುದು ಕವನದ ಕೊನೆಯ ಭಾಗದ ಆಶಯ. ಹೀಗೆ ಆ ಕವನದ ಒಂದು ಬಹು ಮುಖ್ಯ ಅರ್ಥವಂತಿಕೆ  ಉಪನಿಷತ್ತಿನ ಶ್ಲೋಕಗಳಿಂದ ಬಂದದ್ದು. ಇದರಿಂದಾಗಿ ಕವನಕ್ಕೊಂದು ಫೋಕಸ್ ಸಿಕ್ಕುತ್ತದೆ. ಎಲ್ಲಾ ಪ್ರಮುಖ ಕವಿಗಳ ಪ್ರತಿಭೆ ಮುಖ್ಯವಾಗಿ ಸಿಂಥೆಟಿಕ್ ಎಂದು ಕ್ರಿಸ್ಟಾಫರ್ ಮಾರ್ಲೋ ಮೇಲಿನ ತನ್ನ ಪ್ರಬಂಧದಲ್ಲಿ ಎಲಿಯಟ್ ಹೇಳಿದ ಮಾತಿನ ಸತ್ಯತೆಗೆ ಅವನ ಈ ಕವನವೇ ಉದಾಹರಣೆ. ಅಥವಾ, ಅವನ ಈ ಮಾತನ್ನು ಅವನದೇ ಕವನ ಸಮರ್ಥಿಸುವಷ್ಟು ಬೇರೆ ಯಾವ ಕವನವೂ ಸಮರ್ಥಿಸುವುದಿಲ್ಲ. ಅವನು ಆ ಥಿಯರಿ ಮಾಡಿಕೊಂಡದ್ದು ತನ್ನದೇ  ಬರೆವಣಿಗೆಯ ಕ್ರಮವನ್ನು ವಿವರಿಸುವುದಕ್ಕಾಗಿ ಎಂದರೂ ನಡೆಯುತ್ತದೆ.

ಇನ್ನೊಂದು ಅರ್ಥದಲ್ಲಿಯೂ ಉಪನಿಷತ್ತಿನ ಶ್ಲೋಕಗಳು ದಿ ವೇಸ್ಟ್ ಲ್ಯಾಂಡ್  ಕವನದ ಅರ್ಥವಂತಿಕೆಯನ್ನು ಹೆಚ್ಚಿಸುತ್ತವೆ. The Fire Sermon ಎಂಬ ಮೂರನೇ ಭಾಗದಲ್ಲಿ ಮಲಿನ ನೀರು ಹರಿಯುವ ನದಿಯ ಚಿತ್ರವಿದೆ: "The river sweats oil and tar"  ಎಂಬುದು ಆ ಕವನದ ಒಂದು ಸಾಲು. ಮಳೆಯಾದರೆ ನದಿ ಹೊಸ ಜೀವ ಪಡೆಯಬಹುದು. ಜಗತ್ತು ಉರಿಯುತ್ತಿರುವ ಚಿತ್ರಣವೂ ಕವನದಲ್ಲಿ ಇದೆ. ಇದು ವಿಷಯಲಂಪಟತೆಯಿಂದ ಉಂಟಾದ ಉರಿಯುವಿಕೆ. ಈ ಉರಿಯುವಿಕೆಯೂ ಜೀವಜಲದಿಂದ ತಣಿಯಬಹುದು.

The Fire Sermon ಭಾಗದ ಶೀರ್ಷಿಕೆ ಮತ್ತು ವಸ್ತು ಬುದ್ಧನ ಪ್ರವಚನದಿಂದ ತೆಗೆದುಕೊಂಡದ್ದು. ನಮ್ಮ ಇಂದ್ರಿಯಗಳು ಮತ್ತು ಮನಸ್ಸು ಲಂಪಟತೆ ಹಾಗೂ ದ್ವೇಷದಿಂದ ತುಂಬಿದಲ್ಲಿ  ನಾವು ನೋಡುವ ಕ್ರಮವೇ ಉರಿಯಿಂದ ತುಂಬುತ್ತದೆ. ಅವುಗಳನ್ನು ಹದ್ದುಬಸ್ತಿನಲ್ಲಿಡುವುದರಿಂದ ಒಳಗಿನ ಬೆಂಕಿಯನ್ನು ನಿಯಂತ್ರಿಬಹುದು ಎಂಬುದು ಬುದ್ಧನ ಪ್ರವಚನದ ಸಾರ. ಎಲಿಯಟ್  ಬುದ್ಧನ ಈ ಪ್ರವಚನ ಬಳಸುವ ಮೂಲಕ ಮುಂದಿನ ಭಾಗದಲ್ಲಿ ಬರುವ ದಯ ದತ್ತ ದಾಮ್ಯತಕ್ಕೆ ನಮ್ಮನ್ನು ಸಿದ್ಧಪಡಿಸುತ್ತಿದ್ದಾನೆ.

ಬುದ್ಧ ಈ ಪ್ರವಚನ ನೀಡಿದ್ದು ಗಯಾ ಸಮೀಪದ ಗಯಾಶೀರ್ಷದಲ್ಲಿ. ಇಂದು ಆ ಊರಿಗೆ ಬ್ರಹ್ಮಯೋನಿ ಎಂಬ ಹೆಸರಿದೆ. ಅದಕ್ಕಿಂತ ಮೊದಲು ಉರುವೇಲ ಕಶ್ಯಪ, ಮತ್ತು ಅವನನ್ನು ಅನುಸರಿಸಿ ಅವನ ಸಹೋದರ ನದೀಕಶ್ಶಪ, ಗಯಾ ಕಶ್ಶಪ  ಮತ್ತು ಇವರ ಸುಮಾರು ಒಂದು ಸಾವಿರ ಜನ  ಹಿಂಬಾಲಕರು ಬುದ್ಧನ ಶಿಷ್ಯರಾಗಿದ್ದರು. ಹೀಗೆ ಅವನ ಶಿಷ್ಯರ ಸಂಖ್ಯೆ ಏರಿತ್ತು. ಇವರೆಲ್ಲರೂ ಅಗ್ನಿಯ ಉಪಾಸಕರು. ಯಜ್ಞ ಯಾಗಾದಿ ಮಾಡುವವರು. ಇಂದ್ರನ ಕೃಪೆಗಾಗಿ ಬೆಂಕಿ ಉರಿಸಿ ಮಾಡುತ್ತಿದ್ದ ಯಜ್ಞದ ವಿವರವನ್ನೇ ಜಗತ್ತಿನ ದಾರುಣ ಸ್ಥಿತಿ ಸೂಚಿಸಲು ಬುದ್ಧ ಬಳಸಿದ. ಆತ ಹೇಳಿದ: "ಪ್ರತಿಯೊಂದೂ ಬೆಂಕಿ ಹತ್ತಿ ಉರಿಯುತ್ತಿದೆ." ತನ್ಮೂಲಕ ಆತ ಜಗತ್ತಿನ ಸ್ಥಿತಿ ಸೂಚಿಸಲು ಪರಿಣಾಮಕಾರಿ ರೂಪಕ ಸೃಷ್ಟಿಸಿದ್ದೊಂದೇ ಅಲ್ಲ; ವೈದಿಕರ ಇಡೀ ಜೀವನಕ್ರಮಕ್ಕೆ ಪವಿತ್ರವಾದ ಯಜ್ಞವನ್ನೇ ಅಲ್ಲಗಳೆದಿದ್ದ. ವೈದಿಕರಿಗೆ ಬುದ್ಧನ ಮೇಲೆ ಸಿಟ್ಟು ಬರಲು ಇದೊಂದೇ ಸಾಕಾಗಿತ್ತು.

ಎಲಿಯಟ್ಟಿಗೆ ಬೆಂಕಿಯ ವಿವರ ಮುಖ್ಯವಾಗುವುದು ಒಂದು ರೂಪಕವಾಗಿ. ಬುದ್ಧನ ಸಂಸ್ಕ್ರತಿ ವಿಮರ್ಶೆಯನ್ನು ಎಲಿಯಟ್ ಒಂದು ರೂಪಕವಾಗಿ ಮಾತ್ರ ಬಳಸಲು ಸಾಧ್ಯವಾಗಿರುವುದು ಒಂದು ಸಂಸ್ಕ್ರತಿಯ ವಿವರ ಇನ್ನೊಂದು ಸಂಸ್ಕ್ರತಿಗೆ ಹೋದಾಗ ಆಗುವ ಬದಲಾವಣೆಗಳ ಬಗ್ಗ ಮತ್ತೊಮ್ಮೆ ನಮ್ಮ ಗಮನ ಸೆಳೆಯುತ್ತದೆ. ವೈದಿಕ ಜೀವನಕ್ರಮದ ಟೀಕೆಯಾಗಿ ಸಹಾ ಬುದ್ಧ ಉರಿಯುವಿಕೆಯನ್ನು ಬಳಸುತ್ತಿದ್ದ ಎಂಬುದು ಅದರ ಹಿನ್ನೆಲೆ ಗೊತ್ತಿಲ್ಲದವರಿಗೆ  ಅರ್ಥವಾಗಲಾರದು. ಯಜ್ಞ ಎಂದರೆ ನರಬಲಿ, ಪ್ರಾಣಿ ಬಲಿ. ಬುದ್ಧ ಪ್ರತಿಯೊಂದೂ ಬೆಂಕಿ ಹತ್ತಿ ಉರಿಯುತ್ತಿದೆ ಎಂದಾಗ ಈ ನರಬಲಿ ಪ್ರಾಣಿಬಲಿಗಳನ್ನು ಅಗತ್ಯ ಮಾಡುವ ವೈದಿಕ ಕರ್ಮಕಾಂಡವಾದ ಯಜ್ಞವನ್ನು ಟೀಕಿಸುತ್ತಿದ್ದಾನೆ ಎಂದು ಗೊತ್ತಿದ್ದವರಿಗೆ, ಬುದ್ಧನ ಈ  ರೂಪಕ ಕಟು ವೈಯಕ್ತಿಕ ಪ್ರತಿಕ್ರಿಯೆಗಳನ್ನು ಹುಟ್ಟಿಸುತ್ತದೆ. ಅವನ ಕಾಲದಲ್ಲಂತೂ ಖಂಡಿತ ಹುಟ್ಟಿಸಿತ್ತು. ವೈದಿಕರಲ್ಲಿ ಈ ಟೀಕೆ ಸಿಟ್ಟು ಬರಿಸಿದರೆ, ವೈದಿಕೇತರರಲ್ಲಿ ಇದು ಒಪ್ಪಿಗೆ ಪಡೆಯುತ್ತದೆ. ಬುದ್ಧನ ಅಹಿಂಸೆಯ ಪ್ರತಿಪಾದನೆ ಯಜ್ಞದಲ್ಲಿ  ನಡೆಯುವ ಪ್ರಾಣಿಬಲಿ ನರಬಲಿಗಳನ್ನು ನಿಲ್ಲಿಸುವುದನ್ನು ಒಂದು ಮುಖ್ಯ ಗುರಿಯಾಗಿರಿಸಿಕೊಂಡಿದೆ.

ಎರಡು ಸಂಸ್ಕ್ರತಿಗಳ ಭಿನ್ನತೆ  ನಮ್ಮ ಸಂವೇದನೆಗಳಲ್ಲಿ ಉಂಟು ಮಾಡುವ ವ್ಯತ್ಯಾಸ ಕುರಿತು ಹೆಚ್ಚು ವಿವರವಾಗಿ ನನ್ನ ಶೇಕ್ಸ್ಪಿಯರ್: ಎರಡು ಸಂಸ್ಕ್ರತಿಗಳಲ್ಲಿ  (1993) ಬರೆದಿದ್ದೇನೆ. ಅಲ್ಲಿನ ವಿಚಾರಗಳ ಮುಂದುವರಿಕೆಯಾಗಿ ಹೇಳುವುದಾದರೆ--ಪರಸ್ಪರ ಸಂಪರ್ಕಕ್ಕೆ ಬಂದ ಎರಡು ವಿಭಿನ್ನ ಸಂಸ್ಕೃತಿಗಳು ಹೀಗೆ ಪರಸ್ಪರರಿಂದ ಪ್ರಭಾವಿತವಾಗುವುದು ಸಂಸ್ಕೃತಿಗಳ ಇತಿಹಾಸದಲ್ಲಿ ಸಾಮಾನ್ಯ. ಇದರಲ್ಲಿ ಒಕ್ಕಲು ಸಂಸ್ಕೃತಿ--ಅರ್ಥಿಕ ಸಾಮಾಜಿಕ ಕಾರಣಗಳಿಗಾಗಿ ಒಂದು ಕಾಲಘಟ್ಟದಲ್ಲಿ ಒಕ್ಕಲು ಸ್ಥಿತಿಯಲ್ಲಿ ಇರುವ ಸಂಸ್ಕೃತಿ-- ಅದರ ಬಗ್ಗ ಮುಜುಗರ ಪಟ್ಟುಕೊಂಡರೆ, ಧನಿಯ ಸ್ಥಾನದಲ್ಲಿರುವ ಸಂಸ್ಕೃತಿ ಅದೊಂದು ಸಾಮಾನ್ಯ ವಿಷಯ ಎಂಬಂತೆ ಹೆಚ್ಚು ಆತ್ಮವಿಶ್ವಾಸದಿಂದ--ಅಥವಾ ಉಡಾಫೆಯಿಂದ-- ನಡೆದುಕೊಳ್ಳುತ್ತದೆ. ಮುಜುಗರ ಪಟ್ಟುಕೊಂಡವರು ಪ್ರಭಾವವೇ ಇಲ್ಲ ಎಂದೋ, ಅಥವಾ ಪೂರಾ ಪ್ರಭಾವ, ಸ್ವಂತಿಕೆಯೇ ಇಲ್ಲ ಎಂದೋ ಇರುವುದನ್ನು ತಿರುಚಿ ಹೇಳುವುದಿದೆ. ಫರ್ಡಿನಾಂಡ್  ಸಸೂರ್ ಬೌದ್ಧ ದಾರ್ಶನಿಕ ದಿಙ್ನಾಗನಿಂದ ಪ್ರಭಾವಿತ, ಆದರೆ ಅದನ್ನು ಆತ ಎಲ್ಲಿಯೂ ದಾಖಲಿಸಿಲ್ಲ ಎನ್ನುತ್ತಾರೆ. ಇದನ್ನು  ಧನಿ ಸಂಸ್ಕೃತಿಯವನ ಹೇಳದಿದ್ದರೆ ನಡೆಯುತ್ತದೆ ಎಂಬ ಧೋರಣೆ ಎನ್ನಬಹುದು. ಆದರೆ,   ಒಂದು ಸಂಸ್ಕೃತಿ ಇನ್ನೊಂದು ಸಂಸ್ಕೃತಿಯ ಪ್ರಭಾವಕ್ಕೆ ತೆರೆದುಕೊಳ್ಳುವುದೇ ಎರಡೂ ಸಂಸ್ಕೃತಿಗಳ  ಜೀವಂತಿಕೆಯ ಲಕ್ಷಣ. ಪ್ರಭಾವಿತವಾಗುವ ಮೂಲಕ ಒಂದು ಸಂಸ್ಕೃತಿ ಇನ್ನೊಂದು ಸಂಸ್ಕೃತಿಯ ಜೊತೆ ಕೆಲವು ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಈ ಹೊಂದಾಣಿಕೆ ಅದರ ಸಂಪರ್ಕದಲ್ಲಿರುವಾಗ ಅಗತ್ಯವೂ ಆಗುತ್ತದೆ.  ಒಂದು ಸಂಸ್ಕೃತಿಯ ಬುದ್ಧಿವಂತರು ಇನ್ನೊಂದು ಸಂಸ್ಕೃತಿಯ ಬೌದ್ಧಿಕ ಸಾಮಗ್ರಿಯನ್ನು ಹೊಸ ಅರ್ಥವಂತಿಕೆಯಲ್ಲಿ ನವೀಕರಿಸಿ ಆ ಸಂಸ್ಕೃತಿಗೇ ಉಪಯೋಗಕ್ಕೆ ಬರುವಂತೆ ಮಾಡುತ್ತಾರೆ.  ಇದು ವಿಭಿನ್ನ ಕಾಲಘಟ್ಟಗಳಲ್ಲಿರುವ ಒಂದೇ ಸಂಸ್ಕೃತಿಯ ಪಠ್ಯಗಳ ಬಗ್ಗೆಯೂ ನಿಜ. ಮೇಲಿನ ಮಾತಿಗೆ ದದದಕ್ಕೆ ಎರಡು ಸಂಸ್ಕೃತಿಗಳಲ್ಲಿ  ಮತ್ತು ಎರಡು ಕಾಲಘಟ್ಟಗಳಲ್ಲಿ ನಡೆದಿರುವ ಅರ್ಥೈಸುವಿಕೆಗಳು ಸಮರ್ಥ ಉದಾಹರಣೆಗಳಾಗಬಲ್ಲವು.

ಎಲ್ಲಾ ಸಂಸ್ಕೃತಿಗಳಲ್ಲಿ ಅನುಕರಣಶೀಲರು ಇದ್ದೇ ಇರುತ್ತಾರೆ. ಪರಕೀಯ ಸಂಸ್ಕೃತಿಯನ್ನೋ ಅಥವಾ ತಮ್ಮದೇ ಸಂಸ್ಕೃತಿಯ ಯಾವುದೋ ಕಾಲಘಟ್ಟದ ಊಹಿತ ಜೀವನಕ್ರಮವನ್ನೋ ಇವರು ಅನುಕರಿಸುತ್ತಾರೆ. ಸ್ವಂತ ವ್ಯಕ್ತಿತ್ವವಿಲ್ಲದ ಇಂಥವರು ಎರಡು ಸಂಸ್ಕೃತಿಗಳ ಅನುಸಂಧಾನಗಳ ಸಮಯದಲ್ಲಿ  ಹುಟ್ಟಿಕೊಳ್ಳುವ ಅಣಬೆಗಳು. ಅಣಬೆಗಳಷ್ಟೇ ಬೇಗ ಒಣಗಿಬಿಡುತ್ತಾರೆ. ಆಯಾ ಸಂಸ್ಕೃತಿಗಳು ಸಂಪನ್ನವಾಗುವುದು ವಿಭಿನ್ನ ಸಂಸ್ಕೃತಿಗಳನ್ನು ಮೇಳೈಸಿ ಹೊಸತು ಸೃಷ್ಟಿಸಬಲ್ಲ ಸೃಜನಶೀಲರಿಂದ.

********

ಸೂಚನೆ: ಈ ಲೇಖನ ಸಂಕಲನ, ಸಂಚಿಕೆ 6, ನವೆಂಬರ್ 2002ರಲ್ಲಿ ಪ್ರಕಟವಾದ  "ಬೃಹದಾರಣ್ಯಕಕ್ಕೊಂದು ಕಾಲುದಾರಿ" ಎಂಬ ನನ್ನ ಲೇಖನದ ಕೆಲವಂಶಗಳನ್ನು ಒಳಗೊಂಡಿದೆ.

No comments:

Post a Comment