ಹೀಗೇ ತೆವಳುತ್ತ ಇರುವಾಗ ಪ್ರಭುವೇ
ಬಂದು ಕಾಡು ನನ್ನ
ಮುಟ್ಟಿ ನೋಡು.
ಮರಳುಗಾಡೇ ಅಲ್ಲ ಹುಗಿವ ಹುದುಲೇ ಅಲ್ಲ
ಫಲವತ್ತು ನೆಲವೇ
ಹೂಡಿ ನೋಡು.
ಬೆರೆ ಬೆರೆ ಶಬ್ದವ ಕವಿತೆಯ ಮಾಡುವ
ಮಾತಿನ ಪ್ರಾಣವೆ
ಬಂದು ಆಡು.
ಒಳಗಿನ ಕತ್ತಲ ಫಕ್ಕನೆ ಬೆಳಗುವ
ಬಾನಿನ ಬೆಳಕೇ
ಬಳಿ ಸಾರು.
ಎಂದೋ ಬರುವವ ಬಾರದೆ ಕೂತವ
ಎಲ್ಲಾದರು ತುಸು
ಚಹರೆ ತೋರು.
ದಾರಿಯ ಹುಡುಕುತ್ತ ತೆವಳುತ್ತ ಇರುವಾಗ
ಪ್ರಭುವೇ ಫಕ್ಕನೆ ಬಂದು ಕಾಡು ನನ್ನ
ಒಳ ಸೇರು.
(ಮಾತಾಡುವ ಮರ ಸಂಗ್ರಹದಲ್ಲಿ ಮೊದಲು ಪ್ರಕಟವಾಗಿರುವ ಕವನ)
No comments:
Post a Comment