ಯಜ್ಞವನ್ನು ಪ್ರತಿಮೆಯಾಗಿ ಬಳಸುವ ಒಂದು ಶ್ಲೋಕ ಬೃಹದಾರಣ್ಯಕದಲ್ಲಿದೆ. ಈ ಮೊದಲು ಎಂ. ಜಿ. ಕೃಷ್ಣಮೂರ್ತಿ ಈ ಶ್ಲೋಕ ವಿಶ್ಲೇಷಿಸಿದ್ದಾರೆ. ಇದು ಎಂಜಿಕೆಯವರ ಇಂಗ್ಲಿಷ್ ಲೇಖನ ಅನುವಾದಿಸಿದ ಶ್ರೀನಿವಾಸ ರಾವ್ ತಯಾರಿಸಿದ ಅನುವಾದ:
ಓ ಗೌತಮ, ಈ ಲೋಕವೇ ಒಂದು ಹೋಮಾಗ್ನಿ. ಈ ಪೃಥ್ವಿಯೇ ಆ ಅಗ್ನಿಗೆ ಸಮಿತ್ತು; ಅಗ್ನಿ ಹೊಗೆ, ರಾತ್ರಿಯೇ ಜ್ವಾಲೆ; ಚಂದ್ರನೇ ಕೆಂಡ; ನಕ್ಷತ್ರಗಳು ಕಿಡಿಗಳು. ಈ ಅಗ್ನಿಯಲ್ಲಿ ದೇವತೆಗಳು ಮಳೆಯನ್ನು ಹೋಮ ಮಾಡುತ್ತಾರೆ. ಈ ಆಹುತಿಯಿಂದ ಅನ್ನ ಹುಟ್ಟುತ್ತದೆ.
ಓ ಗೌತಮ, ಪುರುಷನೇ ಒಂದು ಹೋಮಾಗ್ನಿ. ಅವನ ತೆರೆದ ಬಾಯಿಯೇ ಸಮಿತ್ತು; ಪ್ರಾಣವೇ ಹೊಗೆ; ಮಾತೇ ಜ್ವಾಲೆ; ಕಣ್ಣೇ ಕೆಂಡ; ಕಿವಿಗಳೇ ಕಿಡಿಗಳು. ಈ ಅಗ್ನಿಯಲ್ಲಿ ದೇವತೆಗಳು ಅನ್ನವನ್ನು ಹೋಮ ಮಾಡುತ್ತಾರೆ. ಈ ಆಹುತಿಯಿಂದ ವೀರ್ಯ ಹುಟ್ಟುತ್ತದೆ.
ಓ ಗೌತಮ, ಸ್ತ್ರೀಯೇ ಒಂದು ಹೋಮಾಗ್ನಿ. ಭಗವೇ ಸಮಿತ್ತು; ಕೇಶಗಳೇ ಹೊಗೆ; ಯೋನಿಮುಖವೇ ಜ್ವಾಲೆ; ಪುರುಷೇಂದ್ರಿಯ ಪ್ರವೇಶವೇ ಕೆಂಡ; ಆನಂದಾನುಭವವೇ ಕಿಡಿಗಳು. ಈ ಅಗ್ನಿಯಲ್ಲಿ ದೇವತೆಗಳು ರೇತಸ್ಸನ್ನು ಹೋಮ ಮಾಡುತ್ತಾರೆ. ಈ ಆಹುತಿಯಿಂದ ಪುರುಷನು ಜನಿಸುತ್ತಾನೆ. ಅವನು ಬದುಕಿರುವಷ್ಟು ಕಾಲ ಬದುಕಿದ್ದು ಸಾಯುತ್ತಾನೆ. ಸತ್ತ ಮೇಲೆ ಅವನನ್ನು ಅಗ್ನಿಗರ್ಪಿಸುತ್ತಾರೆ. ಅವನ ಅಗ್ನಿ ಅಗ್ನಿಯಾಗುತ್ತದೆ; ಸಮಿತ್ತು ಸಮಿತ್ತಾಗುತ್ತದೆ; ಹೊಗೆ ಹೊಗೆಯಾಗುತ್ತದೆ; ಜ್ವಾಲೆ ಜ್ವಾಲೆಯಾಗುತ್ತದೆ; ಕೆಂಡ ಕೆಂಡವಾಗುತ್ತದೆ; ಕಿಡಿಗಳು ಕಿಡಿಗಳಾಗುತ್ತವೆ. ಈ ಅಗ್ನಿಯಲ್ಲಿ ದೇವತೆಗಳು ಪುರುಷನನ್ನು ಹೋಮ ಮಾಡುತ್ತಾರೆ. ಈ ಆಹುತಿಯಿಂದ ದೀಪ್ತಿವಂತ ಮನುಷ್ಯನು ಜನಿಸುತ್ತಾನೆ.
ಎಂ. ಜಿ. ಕೃಷ್ಣಮೂರ್ತಿ ಇದನ್ನು ಲೈಂಗಿಕ ಕ್ರಿಯೆಯನ್ನು ನಿಸ್ಸಂಕೋಚವಾಗಿ ವಿವರಿಸುವ ಬರೆವಣಿಗೆ ಎಂದು ಉದಾಹರಿಸುತ್ತಾರೆ. ಅದು ನಿಜ. ಎಷ್ಟು ನಿಸ್ಸಂಕೋಚವಾಗಿ ಎಂದರೆ, ಸ್ವಾಮೀ ಆದಿದೇವಾನಂದರು ಮೂಲದ "ತಸ್ಯಾ ಉಪಸ್ಥ ಏವ ಸಮಿತ್" ಎಂಬಲ್ಲಿಂದ "ದೇವಾ ರೇತೋಜುಹ್ವತಿ" ಎಂಬಲ್ಲಿ ವರೆಗಿನ ಮಾತುಗಳನ್ನು ಅನುವಾದಿಸದೆ ಚುಕ್ಕಿ ಹಾಕಿ ಬಿಟ್ಟುಬಿಡುತ್ತಾರೆ. ಸುಮಾರು 2800 ವರ್ಷಗಳ ಹಿಂದೆ ಬೃಹದಾರಣ್ಯಕ ರಚನೆಯಾದಾಗ ಇಲ್ಲದೆ ಇದ್ದ ಸಂಕೋಚ ಆಧುನಿಕರಾದ ನಮಗೆ ಬಂದುಬಿಟ್ಟಿದೆ!
ಲೈಂಗಿಕ ಕ್ರಿಯೆಯನ್ನು ನಿಸ್ಸಂಕೋಚವಾಗಿ ವಿವರಿಸುವ ಬರೆವಣಿಗೆ ಎನ್ನುವುದರ ಜೊತೆಗೆ ಈ ಶ್ಲೋಕ ಭಾಷೆಯಲ್ಲಿ ಮಾಡಿದ ಅಪರೂಪದ ಪ್ರಯೋಗ ಎಂದೂ ಅನ್ನಿಸುತ್ತದೆ. ಯಜ್ಞದ ವಿವರಗಳ ಮೂಲಕ ಈ ಉಪನಿಷತ್ಕಾರ ಇಡೀ ವಿಶ್ವದ ವ್ಯಾಪಾರ ಚಿತ್ರಿಸುತ್ತಾನೆ. ಯಜ್ಞದ ವಿವರಗಳ ಮೇಲೆ ಎಷ್ಟು ಬೌದ್ಧಿಕ ಭಾರ ಹೇರಬಹುದೋ ಅಷ್ಟನ್ನೂ ಇಲ್ಲಿ ಹೇರಲಾಗಿದೆ. ಎಷ್ಟು ಎಳೆಯಬಹುದೋ ಅಷ್ಟೂ ಎಳೆಯಲಾಗಿದೆ. ಇದು ಇಂಗ್ಲಿಷ್ ಮೆಟಫಿಸಿಕಲ್ ಕವಿಗಳಲ್ಲಿ ಕಾಣುತ್ತದೆ ಎನ್ನುವ ವಿಟ್ ರೀತಿಯದ್ದು. ಆದರೆ ಮೆಟಫಿಸಿಕಲ್ ಕವಿಗಳ ವಿಟ್ಟಿಗಿಂತ ಎಷ್ಟೋ ಮೇಲುಮಟ್ಟದಲ್ಲಿ ಈ ರಚನೆ ಕೆಲಸ ಮಾಡುತ್ತದೆ. ಯಾಕೆಂದರೆ ಜಗತ್ತಿನ ಒಟ್ಟು ವ್ಯಾಪಾರವೇ ಇಲ್ಲಿನ ವಸ್ತು. ವಿವರಗಳು ಹೊಳೆಸುವಷ್ಟನ್ನು ಮಾತ್ರ ಸೂಚಿಸುತ್ತೇನೆ ಎಂಬ ಮಾತು ಇಲ್ಲಿ ಅಪ್ರಸ್ತುತ. ಭಾಷೆ ಮತ್ತು ವಿವರಗಳು ಇಲ್ಲಿ ಅಮೂರ್ತ ಬೌದ್ಧಿಕತೆಯ ವಾಹಕವಾಗುತ್ತವೆ. ಲೇಖಕನಿಗೆ ದಿನನಿತ್ಯದ ವಿವರಗಳು ಬರೆಹಗಾರನ ಅಮೂರ್ತ ಕಲ್ಪನೆಗಳನ್ನು/ವಿಚಾರಗಳನ್ನು ಅಭವ್ಯಕ್ತಿಸಲು ಅಸಮರ್ಥ ಅನ್ನಿಸಿದಾಗ ಆ ವಿವರಗಳನ್ನು ಹೀಗೆ ಎಷ್ಟು ಸಾಧ್ಯವೋ ಅಷ್ಟು ಎಳೆದು ಬಳಸುವುದು ಅನಿವಾರ್ಯ.
ಇದು ಯಜ್ಞದ ಮೇಲಿನ ಟೀಕೆ ಕೂಡಾ ಆಗಿದೆ. ವೈದಿಕ ಯಜ್ಞವನ್ನು ಬ್ರಹ್ಮಚರ್ಯದಲ್ಲಿರುವ ಪತಿ ಪತ್ನಿಯರು ನಡೆಸುತ್ತಾರೆ. ಇಲ್ಲಿ ಅವರ ಕೂಡುವಿಕೆಯನ್ನೇ ಉಪನಿಷತ್ಕಾರ ಯಜ್ಞ ಅನ್ನುತ್ತಿದ್ದಾನೆ. ಯಜ್ಞದಲ್ಲಿ ದೇವತೆಗಳ ಪ್ರೀತ್ಯರ್ಥವಾಗಿ ಆಹುತಿ ಕೊಡುವುದಾದರೆ ಇಲ್ಲಿ ಪರಸ್ಪರರ ಪ್ರೀತ್ಯರ್ಥವಾಗಿ ದೇಹದಿಂದ ಹುಟ್ಟಿದ ವೀರ್ಯವನ್ನು ಹೋಮ ಮಾಡಲಾಗುತ್ತದೆ. ಇಡೀ ಜೀವನವೇ ಒಂದು ಹೋಮ. ಅದರಲ್ಲಿ ಪಾರಭೌತಿಕವಾದದ್ದು ಏನೂ ಇಲ್ಲ. ಬದುಕಲ್ಲಿ ತೊಡಗುವುದು ಮತ್ತು ಸಮಯ ಬಂದಾಗ ಸಾಯುವುದು--ಇದೇ ಯಜ್ಞ. ವೈದಿಕ ಯಜ್ಞವನ್ನು ಅವರದ್ದೇ ಪಾರಿಭಾಷಿಕ ಪದಗಳನ್ನು ಬಳಸಿ ಉಪನಿಷತ್ಕಾರ ಟೀಕಿಸುತ್ತಿದ್ದಾನೆ; ಪರ್ಯಾಯವಾದ ಒಂದು ಯಜ್ಞವಿಧಾನವನ್ನು ಸೂಚಿಸುತ್ತಿದ್ದಾನೆ.
ಅಡಿಗರ ಕವನ "ಶಾಂತವೇರಿಯ ಅಶಾಂತ ಸಂತ"ದಲ್ಲಿ ಯಜ್ಞದ ಬಳಕೆಗೂ ಈ ಬರೆಹದಲ್ಲಿ ಯಜ್ಞದ ಬಳಕೆಗೂ ಇರುವ ವ್ಯತ್ಯಾಸ ಕುತೂಹಲಕಾರಿಯಾಗಿದೆ. ಇಲ್ಲಿ ವಸ್ತು ಹೆಚ್ಚು ವಿಸ್ತಾರವಾದದ್ದು. ಉಪನಿಷತ್ತಿನ ಈ ಬರೆವಣಿಗೆ, "ಶಾಂತವೇರಿಯ ಅಶಾಂತ ಸಂತ", ಬೇಂದ್ರೆಯವರ "ನೃತ್ಯಯಜ್ಞ", ಹಾಗೂ ಗಿರೀಶ ಕಾರ್ನಾಡರ ಅಗ್ನಿ ಮತ್ತು ಮಳೆಗಳ ತೌಲನಿಕ ಅಧ್ಯಯನ ಯಜ್ಞ ಮತ್ತು ನೃತ್ಯ/ನಾಟಕಗಳ ಬಗ್ಗೆ ನಮ್ಮ ಕೆಲವು ಲೇಖಕರು ಏನು ಯೋಚಿಸುತ್ತಾರೆಂದು ತಿಳಿಯಲು ನೆರವಾಗಬಲ್ಲುದು. ಉಪನಿಷತ್ಕಾರ ಯಜ್ಞದ ವಿವರಗಳಲ್ಲಿ ವಿಶ್ವದ ವ್ಯಾಪಾರ ನಿರೂಪಿಸಿದರೆ ಬೇಂದ್ರೆ ನೃತ್ಯದ ವಿವರಗಳಲ್ಲಿ ವಿಶ್ವದ ವ್ಯಾಪಾರ ಚಿತ್ರಿಸುತ್ತಾರೆ. ಅಗ್ನಿ ಮತ್ತು ಮಳೆ ಯಜ್ಞ ಜೀವವಿರೋಧಿ, ನೃತ್ಯ/ನಾಟಕ ಜೀವಪರ ಎಂಬ ಸರಳ ಸಿದ್ಧಾಂತ ನಿರೂಪಿಸುತ್ತದೆ. ಅದರ ಬರೆವಣಿಗೆಯೂ ಯಾಂತ್ರಿಕವಾಗಿದೆ. ಏನಿದ್ದರೂ, ನಮ್ಮ ಸಂಸ್ಕೃತಿಯಲ್ಲಿ ನೃತ್ಯ/ನಾಟಕಗಳ ಸಾದೃಶ್ಯ-ವೈದೃಶ್ಯ ಸಂಬಂಧ ಪುರಾತನವಾದದ್ದು ಎಂಬುದು ನಿಜ.
ನಿರ್ಭೀತ ಲೈಂಗಿಕ ವಿವರಗಳುಳ್ಳ ಇನ್ನೊಂದು ಶ್ಲೋಕದಲ್ಲಿ "ಅವನು" (ಅಥವಾ "ಪುರುಷ") ಒಂಟಿಯಾಗಿದ್ದರಿಂದ ಭಯಪಡುತ್ತಾನೆ. ಯಾಕೆಂದರೆ ಏಕಾಕಿತನದಿಂದ ಭಯವುಂಟಾಗುತ್ತದೆ. ಆ ಮೇಲೆ ಅವನು ಇಲ್ಲಿ ಬೇರೆ ಯಾರೂ ಇಲ್ಲದಿರುವಾಗ ನಾನು ಹೆದರುವುದಾದರೂ ಯಾರಿಗೆ ಎಂದು ಯೋಚಿಸಿದನು. ಈ ಯೋಚನೆಯಿಂದ ಭಯ ಹೊರಟುಹೋಯಿತು. ಹೀಗಾಗಿ ಭಯ ಹುಟ್ಟುವುದು ಇನ್ನೊಬ್ಬರಿಂದ. ಆದರೆ ಅವನಿಗೆ ರಮಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವನು ಏಕಾಕಿ. ಹೀಗಾಗಿ ತನ್ನ ಶರೀರವನ್ನೇ ಎರಡಾಗಿ ಮಾಡಿ, ಸ್ತ್ರೀಯನ್ನು ಸೃಷ್ಟಿಸಿ ಅವಳನ್ನು ಕೂಡುತ್ತಾನೆ. ಅದರಿಂದ ಮನುಷ್ಯರು ಹುಟ್ಟಿದರು. ಆದರೆ ಆ ಸ್ತ್ರೀ ನಡೆದದ್ದರ ಬಗ್ಗೆ ಯೋಚಿಸಿ ತಾನೇ ಸೃಷ್ಟಿಸಿದ ನನ್ನನ್ನು ಹೇಗೆ ಕೂಡುತ್ತಾನೆಂದು ಹಸುವಾದಳು. ಅವನು ಹೋರಿಯಾಗಿ ಅವಳನ್ನು ಕೂಡಿದ. ಆ ಶತರೂಪೆ ಕುದುರೆಯಾದಳು. ಇವನು ಕುದುರೆಯಾಗಿ ಅವಳನ್ನು ಕೂಡಿದ. ಅವಳು ಕತ್ತೆಯಾದಾಗ ಇವನು ಕತ್ತೆಯಾಗಿ ಕೂಡಿ, ಆಡಾದಾಗ ಆಡಾಗಿ ಕೂಡಿ, ಆನೆಯಾದಾಗ ಆನೆಯಾಗಿ ಕೂಡಿ, ಇರುವೆಯಾದಾಗ ಇರುವೆಯಾಗಿ ಕೂಡಿ.....ಅವಳು ಸೃಷ್ಟಿಯ ಏನೆಲ್ಲವೂ ಆದಳೋ ಅವನು ಅದೆಲ್ಲವೂ ಆಗಿ ಕೂಡಿದ. ಹೀಗೆ ಮನುಷ್ಯರಿಂದ ತೊಡಗಿ ಇರುವೆ ಕ್ರಿಮಿ ಕೀಟಗಳ ತನಕ ಮೈಥುನದಿಂದ ಏನೇನು ಹುಟ್ಟುತ್ತದೆಯೋ ಅದೆಲ್ಲವನ್ನೂ ಅವರು ಸೃಷ್ಟಿಸಿದರು.
ಇದು ಆನಂದದ ಪರಾಕಾಷ್ಠೆ ಸೂಚಿಸುವ ಶ್ಲೋಕ ಎಂದು ಒಮ್ಮ ಅನ್ನಿಸಿತ್ತು. ಇದು ಏಕಾಕಿತನ ಮತ್ತು ಅದನ್ನು ಮೀರುವ ಪ್ರಯತ್ನ ಕುರಿತ ಶ್ಲೋಕವೂ ಹೌದು ಎಂದು ಈಗ ಅನ್ನಿಸುತ್ತದೆ. ಉಪನಿಷತ್ಕಾರ ಭಯ ಒಂಟಿಯಾಗಿರುವುದರಿಂದಲೂ ಹುಟ್ಟುತ್ತದೆ, ಜೊತೆಯಲ್ಲಿ ಇನ್ನೊಬ್ಬರಿರುವುದರಿಂದಲೂ ಹುಟ್ಟುತ್ತದೆ ಎನ್ನುತ್ತಾನೆ. ಆದರೆ ಅವನು ರಮಿಸುವ ಯೋಚನೆಯಿಂದಲೇ ಇನ್ನೊಬ್ಬರನ್ನು ಸೃಷ್ಟಿಸುತ್ತಾನೆ. ಆಕೆ ತಾನು ಸೃಷ್ಟಿಸಿದವಳನ್ನು ತಾನೇ ಕೂಡಬಾರದೆಂಬ ಕೌಟುಂಬಿಕ ನಿಯಮದ ಆಚರಣೆಗೆ ಪ್ರಯತ್ನಿಸುವುದರಿಂದ ಸಮಾಜ ನಿರ್ಮಾಣಕ್ಕೆ ಅಸ್ತಿವಾರ ಹಾಕುವವಳು. ಅವನಿಂದ ತಪ್ಪಿಸಿಕೊಳ್ಳಲು ಅವಳು ಮಾಡುವ ಪ್ರಯತ್ನವೇ ಅವನನ್ನು ಪ್ರಚೋದಿಸುತ್ತದೆ ಎಂಬ ವಿವರದ ಹಿಂದೆ ಗಂಡು-ಹೆಣ್ಣು ಆಕರ್ಷಣೆ ಕುರಿತ ಒಳನೋಟ ಇದೆ. ಎಲ್ಲಾ ಜೀವಿಗಳು ಒಂದೇ ಜೀವಿಯ ವಿವಿಧ ರೂಪಗಳು ಎಂಬುದನ್ನೂ ಶ್ಲೋಕ ಸೂಚಿಸುತ್ತದೆ. ದೇಹವು ಸ್ತ್ರೀಯಿಂದ ಪೂರ್ಣವಾಗುತ್ತದೆ ಎಂಬ ಮಾತು ಇದೇ ಶ್ಲೋಕದಲ್ಲಿ ಬರುತ್ತದೆ. ಹೀಗೆ ಪೂರ್ಣವಾಗುವ ತನಕ "ಈ ದೇಹವು ಅರ್ಧವಾಗಿರುವ ಬೀಜದಂತೆ ಅರ್ಧವಾಗಿದೆ". ಅಂದರೆ, ಒಂಟಿಯಾಗಿ ಭಯಪಡುತ್ತಿರುವುದೂ ಬೇಕಿಲ್ಲ; ಇನ್ನೊಬ್ಬರ ಬಗ್ಗೆ ಭಯ ಪಡುತ್ತಿರುವುದೂ ಬೇಕಿಲ್ಲ. ಮೂರನೆಯದೊಂದು ಸ್ಥಿತಿಯೆಂದರೆ ಇನ್ನೊಬ್ಬರ ಜೊತೆ ಸೇರಿ ತನ್ನ ಅಪೂರ್ಣತ್ವವನ್ನು ಕಳೆದುಕೊಳ್ಳುವುದು.
ನನಗೆ ಬೃಹದಾರಣ್ಯಕ ದಲ್ಲಿ ಇಷ್ಟವಾದ ಇನ್ನೊಂದು ಶ್ಲೋಕ ಮರಣ, ಪಾಪ ಮತ್ತು ಉದ್ಗೀಥಗಳ ಸಂಬಂಧ ಹೇಳುತ್ತದೆ. ಇದೂ ಇಲ್ಲಿ ಮೊದಲು ಏನೂ ಇರಲಿಲ್ಲ ("ನೈವೇಹ ಕಿಂಚನಾಗ್ರ ಆಸೀತ್", I-II) ಎಂಬ ಮಾತಿನಿಂದಲೇ ಪ್ರಾರಂಭವಾಗುತ್ತದೆ. ಏನೂ ಇಲ್ಲದೇ ಇದ್ದಾಗ ಇದ್ದದ್ದು ಸದಾ ಹಸಿದುಕೊಂಡೇ ಇರುತ್ತಿದ್ದ, ಭೋಜನೇಚ್ಛೆಯೊಂದೇ ಇದ್ದ ಮೃತ್ಯು ಮಾತ್ರ. ಮೃತ್ಯು ತಿನ್ನಲೆಂದು ಬಾಯಿ ತೆರೆದಾಗ ಉಂಟಾದ ಭಾಣ್ ಶಬ್ದದಿಂದ ವಾಕ್ಕಾಯಿತು. ಹೀಗೆ ವಿನಾಶದ ಒಡಲಿನಿಂದಲೇ ವಿನಾಶ ಎದುರಿಸುವ ವಾಕ್ಕು ಹುಟ್ಟಿಕೊಂಡಿತು. ಆನಂತರ ಅಸುರರು ಮತ್ತು ದೇವತೆಗಳ ಮಧ್ಯೆ ಲೋಕದ ಅಧಿಪತ್ಯಕ್ಕಾಗಿ ಸ್ಪರ್ಧೆ ಹುಟ್ಟಿತು. ದೇವತೆಗಳು ಬಹುಸಂಖ್ಯಾತರಾದ ಅಸುರರನ್ನು ಮೀರಿಸಲು ಇರುವ ಮಾರ್ಗವೆಂದು ವಾಕ್ಕಿನಿಂದ ಉದ್ಗೀಥ ಮಾಡಿ ಹಾಡಿದರು. ಈ ಉದ್ಗೀಥದಿಂದ ದೇವತೆಗಳು ತಮ್ಮನ್ನು ಮೀರುವರೆಂದು ಅಸುರರು ಅದನ್ನು ಪಾಪದಿಂದ ಹೊಡೆದರು. ಆದರೆ ಸೋಲದೆ ದೇವತೆಗಳು ವಾಕ್ಕಿನ ಮೂಲಕ, ಘ್ರಾಣೇಂದ್ರಿಯದ ಮೂಲಕ, ಚಕ್ಷುವಿನ ಮೂಲಕ, ಶ್ರೋತ್ರದ ಮೂಲಕ, ಮನಸ್ಸಿನ ಮೂಲಕ, ಪ್ರಾಣದ ಮೂಲಕ ಉದ್ಗೀಥ ಹಾಡಿ ಅಸುರರನ್ನು ಸೋಲಿಸಿದರು. ಹೀಗೆ ಲೋಕದ ಅಧಿಪತ್ಯ ಗಾನ ಮಾಡಬಲ್ಲ, "ಸ್ವರವೇ ಸಂಪತ್ತಾಗುಳ್ಳ", "ಸ್ವರವೇ ಸುವರ್ಣವಾದ" ಅಲ್ಪಸಂಖ್ಯಾತರಿಗೆ ಸಿಕ್ಕಿತು.
ನನಗಿಲ್ಲಿ ಮುಖ್ಯವಾದ್ದು ಉಪನಿಷತ್ಕಾರ ಅಸುರರ ದೈಹಿಕ ಬಲವನ್ನು ಉದ್ಗೀಥದ ಮೂಲಕ ಎದುರಿಸಿ ಗೆಲ್ಲಬಹುದು ಎಂದು ಸೂಚಿಸಿದ್ದು. ಬೃಹದಾರಣ್ಯಕ ತನ್ನ ರೂಪಕ, ಸುತ್ತುಬಳಸು ಭಾಷೆ, ಕನ್ಸೀಟುಗಳ ಮೂಲಕ ಕಾಣಿಸುವುದು ಮನಸ್ಸು ಮತ್ತು ಅದರಿಂದ ಸಾಧಿಸಬಹುದಾದ್ದು ಏನು ಎಂಬುದನ್ನು. ಬೇರೆ ಬೇರೆ ರೀತಿಯಲ್ಲಿ ಮನಸ್ಸಿನ ವಿವಿಧ ಸಾಧ್ಯತೆಗಳನ್ನೇ ಆತ ಹುಡುಕುತ್ತಿದ್ದಾನೆ. ಬಹುಸಂಖ್ಯಾತರ ದೈಹಿಕ ಬಲದೆದುರು ಅಲ್ಪಸಂಖ್ಯಾತರ ಈ ಶಕ್ತಿ ಗೆಲ್ಲುತ್ತದೆ ಎಂಬ ವಿಶ್ವಾಸ ಅವನದ್ದು. ಕೊನೆಗೆ ವಾಕ್ಕು ಮೃತ್ಯುವನ್ನು ದಾಟಿ ಮುಕ್ತವಾಗುತ್ತದೆ ಎಂಬ ಮಾತೂ ಬರುತ್ತದೆ. ಇಂಥಾ ಸಂದರ್ಭದಲ್ಲಿ ಭಾಷೆಗೆ ಸಂಬಂಧಿಸಿದ ಮಾತು ಆಧಿಭೌತಿಕ ಆಯಾಮ ಪಡೆಯುತ್ತದೆ.
ಸಾವನ್ನು ಮೀರುವುದು, ಗೆಲ್ಲುವುದು ವೈದಿಕ ಕರ್ಮಕಾಂಡಗಳ ಒಂದು ಉದ್ದೇಶವೂ ಹೌದು. ಮೃತ್ಯುಂಜಯ ಹೋಮ ಎಂಬ ಒಂದು ಹೋಮವೇ ಇದೆ. ಆದರೆ ಉಪನಿಷತ್ಕಾರರಿಗೆ ಸಾವನ್ನು ಗೆಲ್ಲುವುದು ಕರ್ಮಕಾಂಡಗಳ ಮೂಲಕವಾಗಿ ಅಲ್ಲ; ಮನಸ್ಸಿನ, ದೇಹದ ವಿವಿಧ ಸಾಧ್ಯತೆಗಳ ಮೂಲಕ. ಉದ್ಗೀಥ ಹಾಡಿ ಸಾವನ್ನು ಗೆಲ್ಲುವುದು ಹೀಗೆ ಸಾವು ಗೆಲ್ಲುವ ಕ್ರಮಗಳಲ್ಲಿ ಒಂದು.
**********************
ಇವು ಮಾರಾಟಕ್ಕೆ ಲಭ್ಯವಿರುವ ಬೋಧಿ ಟ್ರಸ್ಟಿನ ಪ್ರಕಟಣೆಗಳು.
ಸಮಗ್ರ ನಾಟಕಗಳು
ಸಂಪುಟ 3. ಅಶ್ವತ್ಥಾಮ, ಹುಲಿಯ ಕಥೆ, ದಂಗೆ-ಈ ಮೂರು ನಾಟಕಗಳು. ರೂ75.00
ಸಮಗ್ರ ನಾಟಕಗಳು ಸಂಪುಟ 2
ಪುಟ್ಟಿಯ ಪಯಣ, ಸುದರ್ಶನ--
ಈ ಎರಡು ನಾಟಕಗಳು.
ರೂ60.00
ಶೇಕ್ಸ್ಪಿಯರ್: ಎರಡು ಸಂಸ್ಕೃತಿಗಳಲ್ಲಿ. ಪ್ರತಿಗಳು ಮುಗಿದಿವೆ. ಸದ್ಯದಲ್ಲಿ ಶೇಕ್ಸ್ಪಿಯರ್ ಕುರಿತ ನನ್ನ ಎಲ್ಲಾ ಬರೆಹಗಳು ಸಮಗ್ರ ಗದ್ಯ ಸಂಪುಟ 1 ಆಗಿ ಪ್ರಕಟವಾಗಲಿದೆ. ಅದರ ಭಾಗವಾಗಿ ಈ ಪುಸ್ತಕವೂ ಪುನರ್ಮುದ್ರಣವಾಗಲಿದೆ.
ಮುಚ್ಚು ಮತ್ತು ಇತರ ಲೇಖನಗಳು. ಮಹಾಭಾರತ, ವಡ್ಡಾರಾಧನೆ, ಕೋಡಂಗಿಗಳು, ಅಡಿಗರ ಕಾವ್ಯ, ಕಾರಂತರ ಕಾದಂಬರಿಗಳು ಮೊದಲಾದ ವಿಷಯ ಕುರಿತ ಲೇಖನಗಳು. ಬೆಲೆ ರೂ60.00
ನಿಮಗೆ ಬೇಕಾದ ಪುಸ್ತಕಗಳ ಮೊತ್ತವನ್ನು Bodhi Trust SB Account no. 1600101008058, Canara Bank, Yenmur 574328, Sullia Taluk, Karnataka, IFSC CNRB0001600--ಇಲ್ಲಿಗೆ ಜಮೆ ಮಾಡಿ ನಿಮ್ಮ ವಿಳಾಸವನ್ನು bodhitrustk@gmail.com ಗೆ ಇಮೇಲ್ ಮಾಡಿ ಅಥವಾ ಪತ್ರ ಬರೆದು ತಿಳಿಸಿದರೆ ಪುಸ್ತಕಗಳನ್ನು ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ.
No comments:
Post a Comment