Friday, April 15, 2011

ಯುದ್ಧ ಮತ್ತು ಶೌರ್ಯ

ಲೇಖಕರು ಯುದ್ಧವಿರೋಧಿಗಳು, ಸಾಮಾನ್ಯವಾಗಿ. ನನಗೆ ತಿಳಿದಂತೆ ಯುದ್ಧವನ್ನು ಎತ್ತಿ ಹಿಡಿಯುವ ಆಧುನಿಕ ಲೇಖಕರು ಯಾರೂ ಇಲ್ಲ. ಅದು ಉಂಟು ಮಾಡುವ ಹಿಂಸೆ, ರಕ್ತಪಾತ, ಆಕ್ರಮಣದಿಂದ ಯಾರನ್ನೇ ಆದರೂ ಬದಲಾಯಿಸಬಹುದು ಎನ್ನುವುದು ಮನಸ್ಸು ಬದಲಾವಣೆಯ ಬಗ್ಗೆ ಒತ್ತು ಕೊಡುವ ಲೇಖಕರಿಗೆ ತಪ್ಪು ಅನ್ನಿಸುತ್ತದೆ. ಪಾಶ್ಚಾತ್ಯರ ಇಪ್ಪತ್ತನೇ ಶತಮಾನದ ಬಹುತೇಕ ಶ್ರೇಷ್ಠ ಕೃತಿಗಳು ಎರಡು ಮಹಾಯುದ್ಧ ಮತ್ತು ಅವುಗಳ ನೇರ ಅಥವಾ ಪರೋಕ್ಷ ಪರಿಣಾಮಗಳ ಬಗ್ಗೆ ಇವೆ ಎಂದರೆ ಅತಿಶಯೋಕ್ತಿ ಆಗಲಾರದು. ನಮ್ಮಲ್ಲಿ ಪಾಶ್ಚಾತ್ಯರ ಹಾಗೆ ಯುದ್ಧದ ನೇರ ಅನುಭವ ಪಡೆದ ಲೇಖಕರು ಕಮ್ಮಿ.  ಕನ್ನಡಕ್ಕಂತೂ ಆಧುನಿಕ ದಿನಗಳಲ್ಲಿ ಇದು ಸಂಪೂರ್ಣ ಹೊರತಾದ ಅನುಭವ.  ನನಗೆ ಸೈನ್ಯದಲ್ಲಿ ಕೆಲಸದಲ್ಲಿದ್ದ ವೆಂ. ಮು. ಜೋಶಿ ಒಬ್ಬರೇ ನೆನಪಾಗುತ್ತಾರೆ. ಬೆಂಗಳೂರಿನ ಶ್ರಿನಗರದಲ್ಲಿ ನನ್ನ ಮನೆಯ ಹತ್ತಿರ ವಾಸವಾಗಿದ್ದ ಅವರು ತಮ್ಮ ಅನುಭವಗಳ ಬಗ್ಗೆ ಬರೆಯುವ ಯೋಜನೆ ಹಾಕಿಕೊಂಡಿದ್ದರು. ಆದರೆ ಅದೆಲ್ಲಾ ಕೈಗೂಡುವ ಮೊದಲೇ ತೀರಿಕೊಂಡರು. ಅವರು ಬರೆದು ಪ್ರಕಟಿಸಿದ್ದರಲ್ಲಿ  ಯುದ್ಧಗಳ ಬಗ್ಗೆ ಇದೆಯೇ? ಅವರನ್ನು ಸರಿಯಾಗಿ ಓದಿದವರು ಹೇಳಬೇಕು.

ನಮ್ಮಲ್ಲಿ ಸೈನ್ಯದ ಅನುಭವ ಪಡೆಯುವವರಿಗೆ ಕಮ್ಮಿಯಿಲ್ಲ. ಕೂರ್ಗ್ ರೆಜಿಮೇಂಟ್ ಅಂತ ಒಂದು ರೆಜಿಮೆಂಟೇ ಇದೆ. ಆದರೆ ಅವರು ಯಾರೂ ಯುದ್ಧದ ತಮ್ಮ ಅನುಭವದ ಬಗ್ಗೆ ನನಗೆ ತಿಳಿದಂತೆ ಬರೆದಿಲ್ಲ. ಹಿಂದಿ ಅಥವಾ ಇತರ ಭಾಷೆಗಳಲ್ಲಿ ಪರಿಸ್ಥಿತಿ ಬೇರೆ ರೀತಿ ಇರಬಹುದು.

ಯುದ್ಧ ಬೇರೆ ಶೌರ್ಯ ಬೇರೆ. ಒಬ್ಬಾತ ಶೂರನಾಗಿದ್ದ ತಕ್ಷಣ ಯುದ್ಧ ಮಾಡಲೇ ಬೇಕೆಂದಿಲ್ಲ. ಯಾವುದೇ ಸನ್ನಿವೇಶ, ಘಟನೆಯನ್ನು ಧೀರವಾಗಿ ಎದುರಿಸುವ ವ್ಯಕ್ತಿಗೆ ಶೌರ್ಯ ಇರಬೇಕು. ಕನ್ನಡದಲ್ಲಿ ಇದೊಂದು ಮೌಲ್ಯ. ಹಳಗನ್ನಡದ ಶಾಸನ ಪದ್ಯವಾದ ಕಪ್ಪೆ ಅರಭಟ್ಟನ ತ್ರಿಪದಿ "ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯನ್, ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್, ಮಾಧವನೀತನ್ ಪೆರನಲ್ಲ"  ಎಂಬುದರಲ್ಲಿ ಶೌರ್ಯವನ್ನೇ ಮೌಲ್ಯವಾಗಿ ಎತ್ತಿಹಿಡಿಯಲಾಗಿದೆ. ಇವ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುವವನಲ್ಲ; ಒಳ್ಳೆಯವನೇ, ಆದರೆ ಅಗತ್ಯ ಬಿದ್ದಾಗ ತನ್ನ ಶೌರ್ಯ ತೋರಿಸುವವನು.

ಇದು ಕನ್ನಡ ಮನಸ್ಸು ಎತ್ತಿ ಹಿಡಿಯುತ್ತಾ ಬಂದ ಒಂದು ಬಹು ಮುಖ್ಯ ಮೌಲ್ಯ ಎಂದು ಯಾಕೆ ಅನ್ನಿಸುತ್ತದೆ ಎಂದರೆ ಬೇಂದ್ರೆ ಮತ್ತೆ ಇಪ್ಪತ್ತನೇ ಶತಮಾನದಲ್ಲಿ ಶಕ್ತಿ ಶಾರದೆಗಳು ಮೇಳೈಸಿ ಪ್ರತಿನಿಧಿಸುವ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾರೆ. ತಿಳುವಳಿಕೆ ಮತ್ತು ಶೌರ್ಯ, ವಿದ್ಯೆ ಮತ್ತು ಧೀರತೆಗಳನ್ನು ಒಟ್ಟಾಗಿ ಒಂದು ಮೌಲ್ಯವೆಂದು ಎತ್ತಿ ಹಿಡಿಯುವ ಮನಸ್ಸು ಇದು. ಅಡಿಗರ ಕಾವ್ಯದಲ್ಲೂ ಇದು ಮೌಲ್ಯವೇ: ಅವರ "ದೆಹಲಿಯಲ್ಲಿ" ಕವನ ಕೊನೆಯಾಗುವುದು ಹೀಗೆ:

ಹೊಸನಸುಕಿನೋಂಕಾರ ಒಡೆದು ಚೆಲ್ಲಲು ಬೆಳಕು
ಬಿತ್ತುಗಳನಾರಿಸಲು ತಕ್ಕ ತ್ರಾಣ;
ಸೂರ್ಯ ಶಂಖಧ್ವಾನ ಹಿಡಿಯಬಲ್ಲಂಥ ಎದೆ
ಇರಲಿ ಅಂಗೈಯ್ಯಲ್ಲಿ ತ್ರಸ್ತ ಪ್ರಾಣ.

ಬಿತ್ತುಗಳನ್ನು ಗುರುತಿಸುವ ತಿಳುವಳಿಕೆ, ಅವುಗಳನ್ನು ಕಾಫಾಡಬಲ್ಲ ಎದೆಗಾರಿಕೆ --ಎರಡನ್ನೂ ಅವರು ಒಂದು ಮೌಲ್ಯವೆಂದು ಎತ್ತಿ ಹಿಡಿಯುತ್ತಿದ್ದಾರೆ. ಕುಮಾರವ್ಯಾಸನಲ್ಲಿ, ವಚನಕಾರರಲ್ಲಿ, ಪುರಂದರದಾಸರಲ್ಲಿ--ಧೀರತೆ, ಅದನ್ನು ಸರಿ ಉಪಯೋಗಕ್ಕೆ  ಬಳಸಬಲ್ಲ ತಿಳುವಳಿಕೆ--ಎರಡನ್ನೂ ಒಂದು ಮೌಲ್ಯವಾಗಿ ಎತ್ತಿ ಹಿಡಿದದ್ದು ಕಾಣುತ್ತೇವೆ. ಕನ್ನಡದಲ್ಲಿ ಆ ಮೌಲ್ಯದ ಮೊದಲ ಅಭಿವ್ಯಕ್ತಿ ಕಪ್ಪೆ ಅರಭಟ್ಟನ ಈ ಶಾಸನದಲ್ಲಿದೆ. ಈ ಹೊಸ ಮನುಷ್ಯ--ಮಾಧುರ್ಯವನ್ನೂ  ಕಲಿತನವನ್ನೂ ಒಟ್ಟಾಗಿ ಸೇರಿಸಿಕೊಂಡ ವ್ಯಕ್ತಿತ್ವದವನು--ಮೊದಲು ಕಾಣಿಸಿಕೊಳ್ಳುವುದು ಈ ಶಾಸನದಲ್ಲಿ. ಆನಂತರದ ಅನೇಕ ಮುಖ್ಯ ಕೃತಿಗಳಲ್ಲಿ ಈ ಗುಣಗಳುಳ್ಳ ವ್ಯಕ್ತಿತ್ವ ಒಂದು ಆದರ್ಶವಾಗಿ ಚಿತ್ರಿತವಾಗಿರುವುದರಿಂದ ಈಗ ಈ ಶಾಸನಕ್ಕೆ ಹೆಚ್ಚಿನ ಮಹತ್ವವಿದೆ. ಒಂದೂವರೆ ಸಾವಿರ ವರ್ಷಗಳಿಗೂ ಮಿಕ್ಕಿ ಕಾಲ ಕನ್ನಡ ಮನಸ್ಸು ಒಂದು ಮೌಲ್ಯವೆಂದು ಒಪ್ಪಿಕೊಂಡದ್ದನ್ನು ಪ್ರಭಾವಶಾಲಿಯಾಗಿ ಮೊದಲ ಸಲ ವ್ಯಕ್ತಪಡಿಸಿದ ಪದ್ಯ ಇದು.

ಆದರೆ ಇದು ಕನ್ನಡಕ್ಕೆ   ಮಾತ್ರ ಸೀಮಿತವಾದ ಮೌಲ್ಯ ಎಂದು ಹೇಳುವುದು ಸರಿಯಲ್ಲ. ಇಡೀ ನಾಡೇ ಶೌರ್ಯ ತಿಳುವಳಿಕೆಗಳು ಸೇರಿದ ವ್ಯಕ್ತಿತ್ವವನ್ನು ಮೌಲ್ಯವೆಂದು ಒಪ್ಪಿಕೊಂಡಿದೆ. ಉದಾಹರಣೆಗೆ, ರಾಮ ಪ್ರಾಜ್ಞ, ಹಾಗೆಯೇ ಹುಸಿ ಹೋಗದ ಬಾಣ ಬಿಡಬಲ್ಲ ವೀರ; ಕೃಷ್ಣ ಗೀತಾಚಾರ್ಯ, ತತ್ವಜ್ಞಾನಿ; ಹಾಗೆಯೇ ಎದುರಾಳಿಗಳನ್ನು ಸೋಲಿಸಬಲ್ಲ ವೀರ; ಯುಧಿಷ್ಠಿರ ಮಹಾ ಯೋಧ; ಆದರೆ ಯುದ್ಧವನ್ನು ಆದಷ್ಟು ತಪ್ಪಿಸಬೇಕೆಂದು ಬಯಸುವವ; ಅದಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುವವ. ದುರ್ಯೋಧನನಲ್ಲಿ ಈ ವಿವೇಚನೆ ಇಲ್ಲ ಎಂಬ ಕಾರಣಕ್ಕಾಗಿಯೇ ಆತ ದುಷ್ಟ. ಆದರ್ಶವೆಂದು ಚಿತ್ರಿತರಾದ ಅಶೋಕ ಚಂದ್ರಗುಪ್ತರಂಥಾ ಸಾಮ್ರಾಟರೇ ಆಗಲಿ, ಅಥವಾ ನಮ್ಮ ಪಂಪನೇ ಆಗಲಿ--ಕಲಿತನ ವಿದ್ಯೆಗಳೆರಡನ್ನೂ ಮೈಗೂಡಿಸಿಕೊಂಡವರು. ತಮ್ಮ ಶೌರ್ಯವನ್ನು ವಿವೇಚನೆಯಿಂದ ಬಳಸಬಲ್ಲವರು. ಯುದ್ಧಾಕಾಂಕ್ಷಿಗಳಲ್ಲ; ಆದರೆ ಶೂರರು.

ರಾಮಕೃಷ್ಣ ಪರಮಹಂಸರು ಹೇಳಿದ ಒಂದು ಕತೆ ನೆನಪಾಗುತ್ತದೆ. ಒಂದು ಹಾವು ಸಿಕ್ಕುಸಿಕ್ಕವರಿಗೆಲ್ಲಾ ಕಚ್ಚಿ ತೊಂದರೆ ಕೊಡುತ್ತಿತ್ತಂತೆ. ಅದನ್ನು ಕಂಡ ಒಬ್ಬ ಸಾಧು  ಹೀಗೆಲ್ಲಾ ತೊಂದರೆ ಕೊಡಬೇಡ, ಒಳ್ಳೆಯವನಾಗಿರು ಎಂದು ಉಪದೇಶ ಕೊಟ್ಟ. ಪರಿಣಾಮವಾಗಿ ಹಾವು ಕಚ್ಚುವುದು ನಿಲ್ಲಿಸಿ ತನ್ನ ಪಾಡಿಗೆ ತಾನು ಸಾಧುವಾಗಿ ಬದುಕಲು ತೊಡಗಿತು. ಯಾರಾದರೂ ಕಲ್ಲು ಹೊಡೆದರೂ ಏನೂ ಮಾಡುತ್ತಿರಲಿಲ್ಲ;  ಕಪ್ಪೆ ಎದುರೇ ಇದ್ದರೂ ತಿನ್ನುತ್ತಿರಲಿಲ್ಲ. ಹೀಗೆ ತುಂಬಾ ಬಡವಾಯಿತು. ಕೆಲವು ದಿನಗಳ ಬಳಿಕ ಅದೇ ಸಾಧು ಮತ್ತೆ ಅಲ್ಲಿಗೆ ಬಂದ. ನೋಡುತ್ತಾನೆ, ಹಾವು ಸಖತ್ ವೀಕಾಗಿದೆ, ಇವತ್ತೋ ನಾಳೆಯೋ ಅನ್ನುವ ಹಾಗಿದೆ. ಇದೇನು, ಇಷ್ಟು ಲಾಚಾರಾಗಿದ್ದೀಯ, ಮೈ ಮೇಲೆಲ್ಲಾ ಗಾಯ ಬೇರೆ ಆಗಿದೆ, ಏನು ಸಮಾಚಾರ ಎಂದು ಕೇಳಿದ. ಗಾಯ ಶಾಲೆ ಮಕ್ಕಳು ಕಲ್ಲು ಹೊಡೆದು ಆದ್ದು, ನೀನು ಯಾರಿಗೂ ಕಚ್ಚಬೇಡ, ಒಳ್ಳೆಯವನಾಗಿರು ಎಂದಿದ್ದೆಯಲ್ಲ, ಹಾಗೇ ಇದ್ದೆ, ಆದ್ದರಿಂದ ಎಲ್ಲರೂ ನನ್ನನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಾರೆ, ಹೀಗಾಗಿ ವೀಕಾಗಿದ್ದೇನೆ ಎಂದಿತು. ಸಾಧು, ಅಯ್ಯಾ ಕಚ್ಚಬೇಡ ಎಂದಿದ್ದೆನೇ ಹೊರತು ಶೌರ್ಯ ತೋರಿಸಬೇಡ ಎಂದಿರಲಿಲ್ಲ, ಬುಸುಗುಟ್ಟುತ್ತಿರು, ಕಚ್ಚಬೇಡ ಅಷ್ಟೆ ಎಂದ.

ಶೌರ್ಯವನ್ನು ಯುದ್ಧದಲ್ಲಿ, ಹೊಡೆತ ಬಡಿತಗಳಲ್ಲಿ, ಹಿಂಸೆಯಲ್ಲಿ  ತೋರಿಸಬೇಕಾಗಿಲ್ಲ, ಧೀರತ್ವದಲ್ಲಿ ತೋರಿಸಿದರೆ ಸಾಕು. ಅದು ಇದೆ ಎಂದು ಜನರಿಗೆ ಗೊತ್ತಿದ್ದರೆ ಸಾಕು.

**************************No comments:

Post a Comment