Wednesday, February 2, 2011

ಬೆಂಗಳೂರಿನ ಥಿಯೇಟರುಗಳು


ಕಳೆದ ವಾರ ಮಂಗಳಾ ನಿರ್ದೇಶಿಸಿ ಬೆಮೆಲ್ ನ ಸ್ನೇಹರಂಗ ತಂಡ ಆಡಿದ ನನ್ನ ನಾಟಕ ಕುದುರೆ ಬಂತು ಕುದುರೆ  ನೋಡಲು ಜೆಪಿ ನಗರದಲ್ಲಿರುವ ರಂಗಶಂಕರಕ್ಕೆ ಹೋಗಿದ್ದೆ. ನಾನು ಉಳಕೊಂಡದ್ದು ನನ್ನ ಮಗಳ ಮನೆಯಲ್ಲಿ. ಮಾರತ್ ಹಳ್ಳಿ ಬ್ರಿಡ್ಜ್  ಹತ್ತಿರದ ಒಂದು ಬಡಾವಣೆಯಲ್ಲಿ  ಅವರ ಮನೆ. ಅಲ್ಲಿಂದ ಜೆಪಿನಗರ ತುಂಬಾ ದೂರ ಅನ್ನಿಸಿತು. ನಾನು ಬೆಂಗಳೂರಿಗೆ ಹೋಗಿದ್ದೇ ನಾಟಕ ನೋಡುವ ಉದ್ದೇಶದಿಂದ ಆದ ಕಾರಣ ರಂಗ ಶಂಕರಕ್ಕೆ ಹೋದೆ. ಅಲ್ಲದಿದ್ದರೆ ಹೋಗುತ್ತಿದ್ದೆನೇ? ಅನುಮಾನ. ಟಿಕೆಟ್ಟು ತೆಗೆದುಕೊಂಡು ನನ್ನ ಕೆಲವರು ಸ್ನೇಹಿತರನ್ನು ಆಹ್ವಾನಿಸಿದ್ದರೂ ಯಾರೂ ಬರಲಿಲ್ಲ. ಎಲ್ಲರೂ ಕೊಟ್ಟ  ಕಾರಣ ಒಂದೇ--ದೂರ. ಒಂಭತ್ತು ಗಂಟೆಗೆ ನಾಟಕ ಮುಗಿದ ಮೇಲೆ ಬಸ್ಸೋ ಆಟೋವೋ ಹತ್ತಿ ಮನೆಗೆ ಬರುವಾಗ ಹತ್ತು ಗಂಟೆಯಾದರೂ ಆಗುತ್ತದೆ. ಆಟೋ ಆದರಂತೂ ತುಂಬಾ ಖರ್ಚು. ಬಹುತೇಕ ಜನ ಅದಕ್ಕೆ ತಯಾರಿರುವುದಿಲ್ಲ. ಸ್ವಂತ ವಾಹನ ಇದ್ದರೂ ಖರ್ಚು, ವಾಹನ ನಡೆಸುವ ಶ್ರಮ. ಬೆಂಗಳೂರು 1970, 80ರ ದಶಕದಂತೆ ಇಲ್ಲ. ಆಗ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿ ಬಂದರೂ ಅಸಾಧ್ಯ ಅನ್ನಿಸುವಷ್ಟು ಖರ್ಚು ಆಗುತ್ತಿರಲಿಲ್ಲ. ಈಗ ಹಾಗಿಲ್ಲ.

ಇದಕ್ಕೇನು ಪರಿಹಾರ? ಮೂರು ನಾಲ್ಕು ವರ್ಷಗಳ ಹಿಂದೆ ಬಿ. ವಿ. ಕಾರಂತರ ಕುರಿತ ಒಂದು ಸೆಮಿನಾರಿನಲ್ಲಿ ನಾನು ನಾಟಕ ಮುಗಿದ ಮೇಲೆ ಬಸ್ಸಿನ ವ್ಯವಸ್ಥೆ ಮಾಡಬೇಕು ಎಂದು ಸಲಹೆ ಕೊಟ್ಟಿದ್ದೆ. ಹೇಳಿ ಕೇಳಿ ಸೆಮಿನಾರು. ಸಲಹೆ ಕೊಡುವುದು ವಾದ ಮಾಡುವುದು ಮೊದಲಾದವುಗಳೇ ಕೆಲಸ ತಾನೆ? ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಬೆಂಗಳೂರಿನ ಸುಮಾರು ನಾಲ್ಕು ದಿಕ್ಕುಗಳಿಗೆ ವಾಹನಗಳ ವ್ಯವಸ್ಥೆ ಮಾಡಿದರೂ ಜನ ಬಂದಾರೆಂದು ಧೈರ್ಯವಿಲ್ಲ. 1970ರ ದಶಕದಲ್ಲಿ ರಂಗ ಚಳವಳಿ ಪ್ರಾರಂಭವಾದಾಗಲೂ ಪ್ರೇಕ್ಷಕರನ್ನು ಆಕರ್ಷಿಸುವುದು ಸಮಸ್ಯೆಯಾಗುತ್ತಿತ್ತು. ಆದರೆ ಆ ಸಮಸ್ಯೆ ಪತ್ರಿಕೆಗಳ ಪ್ರಚಾರ, ರಂಗಭೂಮಿ ಬಗ್ಗೆ ಇದ್ದ ಮೋಹ, ಸುಲಭವಾಗಿ ಹೋಗಿ ಬರಲು ಸಾಧ್ಯವಿದ್ದದ್ದು, 1960ರ ದಶಕದ ಹೊಸ ಸಾಹಿತ್ಯದ ಚಳವಳಿಯ ಮುಂದಿನ ಭಾಗವೇ ಎಂಬಂತೆ ರಂಗ ಚಳವಳಿ ಬೆಳೆದದ್ದು, ನಾಟಕ ನೋಡುವುದು ಅವುಗಳ ಬಗ್ಗೆ  ಮಾತಾಡುವುದು ಮೊದಲಾದವು ಬೌದ್ಧಿಕ ಫ್ಯಾಷನ್ ಆದದ್ದು ಮುಂತಾದ ಕಾರಣಗಳಿಂದ ಸೋಲ್ವ್ ಆಯಿತು. ಈಗ, ಬೆಳೆದ ನಗರ, ಹೆಚ್ಚಿದ ದೂರಗಳಿಂದಾಗಿ ಹಿಂಜರಿಯುತ್ತಿರುವ ಪ್ರೇಕ್ಷಕನನ್ನು ಮತ್ತೆ ಆಕರ್ಷಿಸುವುದು ಹೇಗೆ? ಮಂಗಳಾ ಅವರೂ ಈ ಬಗ್ಗೆ ಮಾತಾಡಿದರು. ಅವರೂ ಈ ಬಗ್ಗೆ ಯೋಚಿಸಿದ್ದಾರೆ. ಸಹಜವಾಗಿಯೇ. ಇತರ ರಂಗಕರ್ಮಿಗಳೂ ಈ ಬಗ್ಗೆ ಯೋಚಿಸಿಯೇ ಇರುತ್ತಾರೆ.

ಮಂಗಳಾ ಸೂಚಿಸಿದ ಒಂದು ಪರಿಹಾರ: ಬಡಾವಣೆಗಳಲ್ಲಿ ಥಿಯೇಟರುಗಳನ್ನು ನಿರ್ಮಿಸುವುದು. ರಂಗಶಂಕರ ಇರುವುದು ಒಂದು ಬಡಾವಣೆಯಲ್ಲೇ. ಹೀಗ ಹನುಮಂತ ನಗರದಲ್ಲೂ ಒಂದು ಥಿಯೇಟರ್ ಇದೆಯಂತೆ. ಎನ್ ಎಂ ಕೆ ಆರ್ ವಿ ಕಾಲೇಜಿನಲ್ಲಿ ನಾಟಕ ಆಡುತ್ತಾರೆ. ಸುಮಾರು ಹತ್ತು ಥಿಯೇಟರುಗಳಿದ್ದರೆ ಬೆಂಗಳೂರಿನ ಹೆಚ್ಚಿನ ವಾಸಿಗಳು ತಮ್ಮ ಮನೆಗೆ ಪ್ರಯಾಣ-ಸಾಧ್ಯ ಸಮೀಪದಲ್ಲಿ ನಾಟಕ ನೋಡಬಹುದು. ಆಯಾ ಬಡಾವಣೆಗಳವರು,  ಉದ್ಯಮಿಗಳು ಇದರ ಬಗ್ಗೆ ಯೋಚಿಸಬೇಕು. ಇದೊಂದು ಒಳ್ಳೆಯ ಹಣ ಹೂಡಿಕೆಯೂ ಆಗಬಹುದು. ನಾಟಕ ಆಡುವವರ ಸಂಖ್ಯೆ ಹೆಚ್ಚುತ್ತಿದೆ. ಅಷ್ಟೇ ಸಂಖ್ಯೆಯಲ್ಲಿ ಪ್ರೇಕ್ಷಕರ ನಿರ್ಮಾಣವೂ ಆಗಬೇಕಾದರೆ ಇಂಥದೊಂದು ಪ್ರಯತ್ನ ಅಗತ್ಯ.

ಅಲ್ಲದೆ ಖಾಲಿ ಸ್ಥಳವೇ ಅತ್ಯುತ್ತಮ ಥಿಯೇಟರ್. ನಮ್ಮ ಪಾರಂಪರಿಕ ರಂಗಭೂಮಿ ಅದನ್ನೇ ಸೂಚಿಸುತ್ತದೆ. ಬಿ. ವಿ. ಕಾರಂತರು ರಂಗ ಚಳವಳಿಯ ಪ್ರಾರಂಭದಲ್ಲಿ ಆಡಿಸಿದ ಮೂರು ನಾಟಕಗಳು ಕಲಾಕ್ಷೇತ್ರದ ಹೊರಗಿನ ಖಾಲಿ ಸ್ಥಳದಲ್ಲೇ ಆಡಿದವುಗಳು. ಖಾಲಿ ಸ್ಥಳ, ಖಾಲಿ ಕೈ--ರಂಗಭೂಮಿಯ ಬಹು ದೊಡ್ಡ ಲೆಜೆಂಡು ಖಾಲಿ ಸ್ಥಳದಲ್ಲೇ ಖಾಲಿ ಕೈಯ್ಯಿಂದಲೇ ರಾವಣ ಕೈಲಾಸ ಪರ್ವತವನ್ನು ಎತ್ತುತ್ತಿರುವುದನ್ನು ಪ್ರೇಕ್ಷಕರು ಕಲ್ಪಿಸಿಕೊಳ್ಳುವಂತೆ ಅಭಿನಯಿಸಿದ್ದರ ಬಗ್ಗೆ ಇದೆ.  ಖಾಲಿ ಸ್ಥಳದಲ್ಲಿ ಖಾಲಿ ಕೈಯ್ಯಿಂದ ದೇಹದ ಬಾಗು ಬಳುಕುಗಳನ್ನು ಬಳಸಿ ಮಾಡಿದ ಆ ಅಭಿನಯ ನೋಡಿ ತಿರುವಾಂಕೂರಿನ ರಾಣಿ ಕೈಲಾಸ ಪರ್ವತ ಇಷ್ಟು ದೊಡ್ಡದಿದೆ ಎಂದು ಗೊತ್ತಿರಲಿಲ್ಲ ಎಂದಳಂತೆ. ನಾಟಕ ಹೊರಗೆ ರಂಗಭೂಮಿಯಲ್ಲಿ ನಡೆಯುತ್ತಿರುವಂತೆ ಪ್ರೇಕ್ಷಕರ ಮನಸ್ಸಿನ ಒಳಗೂ ನಡೆಯಬೇಕು. ನಡೆಯುವಂತೆ ನಾಟಕ ಇರಬೇಕು. ಆಗಲೇ ಅದು ಪ್ರೇಕ್ಷಕರಲ್ಲಿ ರಸಾನುಭವ ಉಂಟು ಮಾಡುತ್ತದೆ. ಅಥವಾ, ಅರಿಸ್ಟಾಟಲ್ ಹೇಳುವಂತೆ, ಮನಸ್ಸನ್ನು ಶುದ್ಧೀಕರಿಸುತ್ತದೆ. ಅಂಥಾ ನಾಟಕ ಬರೀ ಪ್ರದರ್ಶನ ಅಲ್ಲ. ಅದು ಪ್ರಯೋಗ.

No comments:

Post a Comment