Saturday, February 19, 2011

ಆರು ತಿಂಗಳ ಬ್ಲಾಗಿಂಗ್

ನಾನು ಬ್ಲಾಗು ಬರೆಯಲು ಪ್ರಾರಂಭಿಸಿ ಆರು ತಿಂಗಳಾಯಿತು. ಕಳೆದ ವರ್ಷ ಆಗಸ್ಟ್ 20ರಂದು ನನ್ನ ಮೊದಲ ಬ್ಲಾಗು ಪ್ರಕಟಿಸಿದೆ. ಬ್ಲಾಗು ಸುರು ಮಾಡಿದಾಗ ಇದನ್ನು ಯಾರು ಓದುತ್ತಾರೆ, ಈ ಸೀರಿಯಸ್ ಬರೆವಣಿಗೆಯನ್ನು ಎನ್ನಿಸಿ ಫೇಸ್ ಬುಕ್ಕಿನಲ್ಲಿ ಕಂಡವರಿಗೆಲ್ಲಾ ಫ್ರೆಂಡ್ ರಿಕ್ವೆಸ್ಟ್ ಕಳಿಸುವುದು, ಮೆಸೇಜ್ ಏರಿಯಾದಲ್ಲಿ ನನ್ನ ಬ್ಲಾಗಿನ ಲಿಂಕ್ ಕಳಿಸುವುದು ಮಾಡುತ್ತಿದ್ದೆ. ಒಂದೆರಡು ಇಂಗ್ಲಿಷ್ ಬರೆವಣಿಗೆ ಸುರುವಿಗೆ ಮಾಡಿದ್ದು  ಕನ್ನಡೇತರ ಓದುಗರಾದರೂ ಈ ಬ್ಲಾಗಿಗೆ ಸಿಗಲಿ ಎಂದು. ಕನಿಷ್ಠ ಮೂರು ತಿಂಗಳಾದರೂ ಈ ಬ್ಲಾಗು ಗೊತ್ತಾಗಿ ಓದುಗರು ಸಿಗಲು ಬೇಕು ಎಂಬುದು ನನ್ನ ಎಣಿಕೆಯಾಗಿತ್ತು. ನಲುವತ್ತು ದಿನಗಳೊಳಗೆ  ಸಾಕಷ್ಟು ಸಂಖ್ಯೆಯ ಓದುಗರು ಸಿಕ್ಕಿದರು; ಇದನ್ನು ಯಾರು ಓದುತ್ತಾರೆ ಎಂಬ ನನ್ನ ಆತಂಕ ತನ್ನಿಂತಾನೆ ಮರೆಯಾಯಿತು. ಇವತ್ತು ನಾನು ನನಗೆ ಬರೆಯಬೇಕು ಅನ್ನಿಸಿದ ವಿಚಾರಗಳ ಬಗ್ಗೆ ಇದನ್ನು ಯಾರು ಓದುತ್ತಾರೆ ಎಂಬ ಆತಂಕವಿಲ್ಲದೆ ಬರೆಯಲು ಸಾಧ್ಯವಾಗಿದೆ.

ಹೀಗೆ ನನ್ನ ಬ್ಲಾಗು ಜನರಿಗೆ ಗೊತ್ತಾಗಲು  ಲಿಂಕ್ ಕೊಟ್ಟು ಪ್ರಚಾರ ಮಾಡಿದ ಸ್ನೇಹಿತರು ಮುಖ್ಯ ಕಾರಣ. ಮುಖ್ಯವಾಗಿ ಜಿ. ಎನ್. ಮೋಹನ್, ಮುರಳೀಧರ ಉಪಾಧ್ಯ, ಮಹೇಶ್ ಪುಚ್ಚೆಪ್ಪಾಡಿ, ಹಾಗು ರಂಗನಾಥನ್ ಅವರನ್ನು ನೆನೆಯಬೇಕು. ಮೋಹನ್ ನನ್ನ ಅನೇಕ ಬ್ಲಾಗು ಬರೆವಣಿಗೆಗಳನ್ನು ತಮ್ಮ ಬಹುಜನ ಪ್ರಿಯ ಅವಧಿಯಲ್ಲಿ ಹಾಕಿದರು. ಮಾತ್ರವಲ್ಲ, ನನ್ನ ಫೊಟೋ ಹಾಕಿ ಅಲ್ಲಿಗೆ ಕ್ಲಿಕ್ ಮಾಡಿದರೆ ಸೀದಾ ನನ್ನ ಬ್ಲಾಗಿಗೆ ಹೋಗಿ ಇತರ ಬರೆವಣಿಗೆ ಸಿಗುವ ಹಾಗೆ ಮಾಡಿದರು. ಅದನ್ನು ನೋಡಿದಾಗೆಲ್ಲಾ ಕತೆಗಳಲ್ಲಿ ಬರುವ, ಗೋಡೆಯ ಫೊಟೋ ಸರಿಸಿದರೆ ಕಾಣುವ ಮೆಟ್ಟಿಲು, ಅದರಲ್ಲಿ ಇಳಕೊಂಡು ಹೋದರೆ ಒಂದು ದೊಡ್ಡ ಅರಮನೆಯೋ ನಗರವೋ ಏನೋ ಅಪರಿಚಿತವಾದ್ದೊಂದು ಇರುವುದು ಮೊದಲಾದ ಘಟನೆಗಳು ನೆನಪಾಗುತ್ತವೆ. ಈ ಆಧುನಿಕ ತಂತ್ರಜ್ಞಾನದಿಂದಾಗಿ ನಮ್ಮ ಅಡಗೂಲಜ್ಜಿ ಕತೆಗಳು ವಿಚಿತ್ರ ರೀತಿಯಲ್ಲಿ ನಿಜವಾಗುತ್ತಿವೆ.

ಮುರಳೀಧರ ಉಪಾಧ್ಯ ತಮ್ಮ http:// kannadablogkondi.blogspot.com ಮೂಲಕ ಮತ್ತು ತಮ್ಮ ಸ್ವಂತ ಬ್ಲಾಗು ಮೂಲಕ ನನಗೆ ಲಿಂಕ್ ಕೊಟ್ಟಿದ್ದಾರೆ. ಮಹೇಶ್ ಪುಚ್ಚೆಪ್ಪಾಡಿ ಹೀಗೇ  ಹೆಚ್ಚಿನ ಓದುಗರನ್ನು ದೊರಕಿಸಿಕೊಟ್ಟಿದ್ದಾರೆ. ರಂಗನಾಥನ್ ಸುರುವಿಗೆ ಇದಕ್ಕೆ ಎಲ್ಲಿ ಲಿಂಕ್ ಸಿಗಬಹುದೆಂದು ಪ್ರಯತ್ನಿಸಿದ್ದಲ್ಲದೆ ತಮ್ಮ ನುಡಿ ಪ್ರಕಾಶನದ ಮೂಲಕ ಪ್ರಕಟಿಸಿದ ನನ್ನ ಪುಸ್ತಕಗಳಲ್ಲಿ ಬ್ಲಾಗು ವಿಳಾಸ ಪ್ರಕಟಿಸಿದ್ದಾರೆ. ಸುದ್ದಿ ಬಿಡುಗಡೆ  ಪತ್ರಿಕೆಯವರು ಬ್ಲಾಗಿನ ವಿಳಾಸ ಪ್ರಕಟಿಸಿ ಇದರ ಕಡೆಗೆ ಅನೇಕರ ಗಮನ ಸೆಳೆದಿದ್ದಾರೆ. ಕೆಲವರು ಸ್ನೇಹಿತರು, ಕೆಲವರು ಅಪರಿಚಿತರು ಫೋಲೋಯರ್ ಅಂತ ಹೆಸರು ನೋಂದಾಯಿಸಿ ಬ್ಲಾಗಿನ ಬಗ್ಗೆ ತಮ್ಮ ಆಸಕ್ತಿ ಸೂಚಿಸಿದ್ದಾರೆ. ಇವರೆಲ್ಲರಿಗೆ ನಾನು ಕೃತಜ್ಞ.

ಬ್ಲಾಗು ಬರೆವಣಿಗೆಯಲ್ಲಿ ಸಿಗುವ ಸ್ವಾತಂತ್ರ್ಯ ನನಗೆ ಖುಷಿ ಕೊಡುತ್ತದೆ. ಮುದ್ರಣ ಮಾಧ್ಯಮಕ್ಕೆ  ಹೋಲಿಸಿದರೆ ಇದರ ಓದುಗರ ಸಂಖ್ಯೆ ತೀರಾ ಕಮ್ಮಿ. ಶೇಕಡಾ ಒಂದರಷ್ಟೂ ಇಲ್ಲ. ಆದರೆ ನನಗೆ ಬೇಕಾದ್ದು ಬರೆಯಬಹುದು. ನಾನು ಮುದ್ರಣ ಮಾಧ್ಯಮ ಸಹಾ ಬಳಸುತ್ತಿರುವವನು. ನನ್ನ ಪುಸ್ತಕಗಳಲ್ಲದೆ ಹದಿನೈದು ದಿನಗಳಿಗೊಮ್ಮೆ ವಿಜಯ ಕರ್ನಾಟಕದಲ್ಲಿ ಅಂಕಣ ಬರೆಯುತ್ತೇನೆ. ಅಲ್ಲಿಯೂ ನನಗೆ ಬೇಕಾದ್ದು ಬರೆಯುವ ಸ್ವಾತಂತ್ರ್ಯವಿದೆ. ಆದರೆ ಈ ಸ್ವಾತಂತ್ರ್ಯಕ್ಕೆ ಒಂದು ಚೌಕಟ್ಟಿದೆ. ನಾನು ವಿಜಯ ಕರ್ನಾಟಕದ ಅಂಕಣದಲ್ಲಿ ಒಂದು ವೈಚಾರಿಕ ಲೇಖನವನ್ನು ಮಾತ್ರ ಬರೆಯಬಲ್ಲೆ. ಪದ್ಯ ಬರೆಯಲಾರೆ. ನನ್ನ ಬ್ಲಾಗಿನಲ್ಲಿ ನಾನು ಒಮ್ಮೆ ವೈಚಾರಿಕ ಲೇಖನ, ಒಮ್ಮೆ ಪದ್ಯ, ಒಮ್ಮೆ ನಾಟಕ, ಮತ್ತೊಮ್ಮ ಇಂಗ್ಲಿಷಿನಲ್ಲಿ --ಹೀಗ ಹೆಚ್ಚು ಫ್ರೀಯಾಗಿ ಬರೆಯಬಹುದು. ಅಲ್ಲದೆ ಇದು ಬರೆವಣಿಗೆ ಮತ್ತು ಜೊತೆಗೆ ಆರ್ಕೈವ್. ಇನ್ನು ಕೆಲವು ವರ್ಷಗಳ ಮೇಲೂ ಇದನ್ನು ಕ್ಲಿಕ್ ಮಾಡಿ ಓದಬಹುದು. ಹೀಗಾಗಿ ಬರೆವಣಿಗೆ ಸಾಧ್ಯವಿರುವಷ್ಟು ಕಾಲ ನನ್ನ ಬ್ಲಾಗು ಬರೆವಣಿಗೆ ಮುಂದುವರಿಯುವಂಥಾದ್ದು.

ಆದರೂ ನಾವು ಕನ್ನಡ ಲೇಖಕರು ಕಂಪ್ಯೂಟರನ್ನಾಗಲೀ ಇಂಟರ್ನೆಟ್ಟನ್ನಾಗಲೀ ಸರಿಯಾಗಿ ಬಳಸುತ್ತಿಲ್ಲ ಅನ್ನಿಸುತ್ತದೆ. ನಮ್ಮಲ್ಲಿ ಅನೇಕರಿಗೆ ಇಮೇಲ್ ವಿಳಾಸವೇ ಇಲ್ಲ. ಯಂತ್ರಗಳನ್ನು ಕಳಚೋಣ ಇತ್ಯಾದಿ ರೆಟರಿಕ್ಕು ಹೇಳುವುದು ಬೇರೆ; ಆದರೆ ಯಂತ್ರವಿಲ್ಲದಿದ್ದರೆ ನಾನು ಚಿಕ್ಕವಯಸ್ಸಿನಲ್ಲಿ ಈ ಕಲ್ಮಡ್ಕ ಬಿಟ್ಟು ಹೊರಡುವುದೇ ಸಾಧ್ಯವಾಗುತ್ತಿರಲಿಲ್ಲ. ಕಾಡು ಪ್ರಾಣಿಯಾಗಿ ಇರಬೇಕಾಗಿತ್ತು. ನನ್ನ ಎಲ್ಲ ಜ್ಞಾನಾರ್ಜನೆ ಪ್ರಯಾಣ ಯಂತ್ರಗಳ ನೆರವಿನಿಂದ ಆಗಿದೆ. ಇದು ನನ್ನ ಹಾಗೇ ಎಲ್ಲರ ಬಗ್ಗೆ ನಿಜ. ಯಂತ್ರದ ದಾಸನಾಗಬಾರದೆಂಬುದು ಸರಿ. ಆದರೆ ಎಲ್ಲಾ ಬಿಟ್ಟ ಸನ್ಯಾಸಿ ತನ್ನ ವೈರಾಗ್ಯವನ್ನು ಹೇಗೆ ಬಳಸಬಹುದೆಂದು ಗೊತ್ತಿಲ್ಲದಿದ್ದರೆ ದಂಡ ಕಮಂಡಲುಗಳಿಗೇ ದಾಸನಾಗಬಹುದಲ್ಲ? ಕಂಪ್ಯೂಟರನ್ನು ಸರಿಯಾಗಿ ಬಳಸಿದರೆ ಎಷ್ಟು ಪ್ರಯೋಜನ ಪಡೆಯಬಹುದು ಎಂಬುದಕ್ಕೆ ಬ್ಲಾಗು ಬರೆವಣಿಗೆ ಒಂದು ಉದಾಹರಣೆ. ಇಲ್ಲದಿದ್ದರೆ ಇಷ್ಟು ಸುಲಭವಾಗಿ ನಮ್ಮ ವಿಚಾರಗಳನ್ನು ಆಸಕ್ತರೊಡನೆ ಹೇಗೆ ಹಂಚಿಕೊಳ್ಳಬಹುದಾಗಿತ್ತು? ಇನ್ನೊಂದು ಉದಾಹರಣೆ ಹೇಳುತ್ತೇನೆ. ನಾವು ಎಂಎ ಓದುತ್ತಿದ್ದಾಗ ಕವಿ ಟಿ. ಎಸ್. ಎಲಿಯಟ್ ಅವನೇ ಓದಿದ ಅವನ  The Waste Land ಕವನದ ಡಿಸ್ಕ್ ಇದೆಯೆಂದೂ ಮದ್ರಾಸಿನ ಬ್ರಿಟಿಶ್ ಕೌನ್ಸಿಲ್ಲಿನಿಂದ ಅದನ್ನು ತರಿಸಬಹುದೆಂದೂ ಹೇಳುತ್ತಿದ್ದರು. ಎರಡು ವರ್ಷದ ಕೋರ್ಸಿನಲ್ಲಿ ಕೊನೆಗೂ ಅದು ಬರಲಿಲ್ಲ. ಸುಮಾರು ಎರಡು ವರ್ಷದ ಕೆಳಗೆ ರಾತ್ರಿ ಹತ್ತು ಗಂಟೆ ಹೊತ್ತಿಗೆ ಹೀಗೇ ಬ್ರೌಸ್ ಮಾಡುತ್ತಿದ್ದಾಗ Eliot reading his own The Waste Land  ಅಂತ ಬಂತು. ಕೂತು ಕೇಳಿದೆ. ಅದಾದ ಮೇಲೆ ಅದರಿಂದ ಒಂದಾದ ಮೇಲೆ ಒಂದು ಕವನಕ್ಕೆ, ಕವಿಗಳಿಗೆ ಲಿಂಕ್; ನನ್ನ ಅನೇಕ ಪ್ರಿಯ ಕವಿಗಳು ಅವರ ಕವನಗಳನ್ನು ಅವರೇ ಓದಿದ್ದು. ನಾನು ಇಡೀ ರಾತ್ರಿ ಕೂತು ಕೇಳಿ ಎದ್ದಾಗ ಬೆಳಗು ಹರಿಯಲು ಸುರುವಾಗುತ್ತಿತ್ತು. ಇಂಥಾ ಕಾವ್ಯ ಸಂಭ್ರಮ ಒದಗಿಸಿದ ಯಂತ್ರದಿಂದ ದೂರ ಇದ್ದರೆ ನನಗೇ ನಷ್ಟ.


****************

ಬೋಧಿ ಟ್ರಸ್ಟ್ ಪ್ರಕಟಣೆಗಳನ್ನು ಈಗ ಆನ್ಲೈನ್ ಪುಸ್ತಕ ಮಳಿಗೆಯಾದ Flipkartನಿಂದ ಕೊಂಡುಕೊಳ್ಳಬಹುದು. ಅದರಲ್ಲಿ ಸಿಗುವ ನಮ್ಮ ಪುಸ್ತಕಗಳು ಮತ್ತು ಲಿಂಕ್ ಕೆಳಗಿದೆ. ಇದರಲ್ಲಿ ಶಿವತೀರ್ಥನ್ ನನ್ನ ಮೇಲೆ ತಂದ ಪುಸ್ತಕ ದೇವಸಾಹಿತ್ಯ ಸಹಾ ಸೇರಿದೆ. ಶಿವತೀರ್ಥನ್ ಕಳೆದ ಮೂರು ವರ್ಷ ಮೂರು ತಿಂಗಳಿಂದ ಪಾರ್ಶ್ವವಾಯು ಪೀಡಿತನಾಗಿ ಹಾಸಿಗೆ ಹಿಡಿದಿದ್ದಾನೆ; ನಾಲಗೆ ಬಿದ್ದು ಹೋಗಿದೆ. ದೇವಸಾಹಿತ್ಯದ ಪ್ರಕಾಶಕ ಅವನೇ ಆದ್ದರಿಂದ ಪ್ರತಿಗಳು ಗೆದ್ದಲು ತಿಂದು ಹಾಳಾಗುವುದು ಬೇಡವೆಂದು ಅವನ್ನು ಬೋಧಿಟ್ರಸ್ಟಿಗೆ ಕೊಟ್ಟಿದ್ದಾನೆ.

Flipkartನಿಂದ ಪುಸ್ತಕ ಪಡೆಯಲು ಇರುವ ಲಿಂಕ್ ಹೀಗಿದೆ:
1. http://www.flipkart.com/mataduva-mara-ramachandra-deva-book-rbkcvngfxufgzsjg
2. http://www.flipkart.com/samagra-natakagalu-samputa-ramachandra-deva-book-rbkcvngfzjxcahyn
3. http://www.flipkart.com/mucchu-mtftu-etara-lekhanagalu-ramachandra-book-rbkcvngfzcryzpbz
4. http://www.flipkart.com/samagra-natakagalu-samputa-ramachandra-deva-book-rbkcvngfrybmjadz
5. http://www.flipkart.com/indraprasta-mattu-etara-kavanagalu-ramachandra-book-rbkcvngf4uksfmm
6. http://www.flipkart.com/devasahitya-ramachandradeva-kurita-lekhanagalu-shivateerthan-book-rbkcvngfbauxhagi

ಇದಲ್ಲದೆ ನಮ್ಮ ಪುಸ್ತಕಗಳನ್ನು ಬೆಂಗಳೂರು, ಬನಶಂಕರಿ ಎರಡನೇ ಹಂತದಲ್ಲಿರುವ ನ್ಯೂ ಪ್ರೀಮಿಯರ್ ಬುಕ್ ಶಾಪಿನಿಂದಲೂ ಕೊಂಡುಕೊಳ್ಳಬಹುದು.

No comments:

Post a Comment