ಪುತ್ತೂರು ಕಳೆದ ಶತಮಾನದ ಮೊದಲಿನಿಂದಲೂ ಒಂದಲ್ಲ ಒಂದು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿರುವ ಪೇಟೆ. ಹಟ್ಟಿಯಂಗಡಿ ನಾರಾಯಣ ರಾಯರ ಆಂಗ್ಲ ಕವಿತಾವಳಿ ಮುದ್ರಣವಾದದ್ದು ಪುತ್ತೂರಿನ ಸಹಕಾರಿ ಮುದ್ರಣಾಲಯದಲ್ಲಿ. ಇದು, ನೆನಪಿನಿಂದ ದಾಖಲಿಸುವುದಾದರೆ, 1916ರಲ್ಲಿ. ಆಂಗ್ಲ ಕವಿತಾವಳಿ ಕನ್ನಡ ಕಾವ್ಯದಲ್ಲಿ ಪ್ರಮುಖ ಹೆಸರು. ಬಿ. ಎಂ. ಶ್ರೀಕಂಠಯ್ಯನವರು ಇಂಗ್ಲಿಷ್ ಕವಿತೆಗಳು ಮೂಲಕ ಹೊಸ ಛಂದಸ್ಸು ವಸ್ತುಗಳನ್ನು ಕನ್ನಡಕ್ಕೆ ತರುವ ಮೊದಲು ಅದಕ್ಕಾಗಿ ನಡೆದ ಕೆಲವು ಪ್ರಯತ್ನಗಳಲ್ಲಿ ನಾರಾಯಣ ರಾಯರ ಈ ಅನುವಾದ ಮುಖ್ಯವಾದದ್ದು.
ಮುಂದೆ ಮೊಳಹಳ್ಳಿ ಶಿವರಾಯರು, ಅವರ ನಿಮಿತ್ತವಾಗಿ ಬಂದ ಶಿವರಾಮ ಕಾರಂತರು ನಡೆಸಿದ ದಸರಾ ಉತ್ಸವಗಳು, ಸಾಹಿತ್ಯ ಗೋಷ್ಠಿಗಳು, ಯಕ್ಷರಂಗ ಪ್ರಯೋಗಗಳು ಪ್ರಖ್ಯಾತವಿವೆ. ನಾಲ್ಕು ದಶಕಗಳಿಗೂ ಮಿಕ್ಕಿ ಕಾಲ ಈ ಊರು ಶಿವರಾಮ ಕಾರಂತರ ಕಾರ್ಯಕ್ಷೇತ್ರವಾಗಿತ್ತು. ಬಿ. ವಿ. ಕಾರಂತರ ಆರಂಭದ ರಂಗಪ್ರಯತ್ನಗಳೂ ಈ ಊರಿನಲ್ಲೇ ನಡೆದವು. ಇಲ್ಲಿಂದಲೇ ಅವರು ತಮ್ಮ ರಂಗಕಾಯಕದ ಪ್ರಯಾಣ ಪ್ರಾರಂಭಿಸಿದರು. ಉಗ್ರಾಣ ಮಂಗೇಶ ರಾಯರು, ಕಡವ ಶಂಭು ಶರ್ಮರು, ಮೊನಚು ಗೆರೆಗಳ ವ್ಯಂಗ್ಯ ಚಿತ್ರಕಾರ, ಶಿಂಗಣ್ಣ ಸೃಷ್ಟಿಕರ್ತ ಕನ್ನೆಪ್ಪಾಡಿ ರಾಮಕೃಷ್ಣ ಭಟ್ ಇಲ್ಲೇ ಇದ್ದವರು. ವ್ಯಂಗ್ಯ ಚಿತ್ರಗಳಿಗೆ ಮೀಸಲಾದ ಪತ್ರಿಕೆ ಇಂದ್ರಧನುಸ್ ಅವರ ಸಂಪಾದಕತ್ವದಲ್ಲಿ ಇಲ್ಲಿಂದಲೇ ಪ್ರಕಟವಾಗುತ್ತಿತ್ತು. ಈಗ ಐ. ಕೆ. ಬೊಳುವಾರು ಮತ್ತು ಅವರ ಸ್ನೇಹಿತರು ತಮ್ಮ ನಾಟಕ ಪ್ರಯೋಗಗಳ ಮೂಲಕ ಪುತ್ತೂರಿನ ರಂಗಚಟುವಟಿಕೆಗಳನ್ನು ಜೀವಂತವಾಗಿ ಇಟ್ಟಿದ್ದಾರೆ. ಪ್ರತಿಭಾವಂತ ರಂಗಕರ್ಮಿಗಳಾದ ಮೋಹನ ಸೋನ ಮತ್ತು ಮೂರ್ತಿ ದೇರಾಜೆ ಇಲ್ಲೇ ಸಮೀಪದ ವಿಟ್ಲದವರು. ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ಎಚ್. ಜಿ. ಶ್ರೀಧರ ಮೌನವಾಗಿ ತಮ್ಮ ಕೆಲಸ ಮಾಡಿಕೊಂಡು ಹೋಗುವವರು. ಅದೇ ಕಾಲೇಜಿನ ಈಗಿನ ಪ್ರಿನ್ಸಿಪಾಲ್ ಡಾ. ಮಾಧವ ಭಟ್ ನಾನು ಕಂಡ ಗಾಢ ಸಾಹಿತ್ಯಾಸಕ್ತಿಯ ವ್ಯಕ್ತಿಗಳಲ್ಲಿ ಒಬ್ಬರು. ಬೋಳಂತಕೋಡಿ ಈಶ್ವರ ಭಟ್ಟರು ಕರ್ನಾಟಕ ಸಂಘದ ಮೂಲಕ ಅನೇಕ ಮುಖ್ಯ ಪುಸ್ತಕ ಪ್ರಕಟಿಸಿದವರು. ಈ ಕರ್ನಾಟಕ ಸಂಘ ಪ್ರಾರಂಭಿಸಿದವರಲ್ಲಿ ಶಿವರಾಮ ಕಾರಂತರೂ ಒಬ್ಬರು.
ನೆನಪಿಗೆ ಬಂದ ಹೆಸರುಗಳನ್ನು ಮಾತ್ರ ಬರೆದೆ. ಅನೇಕರು ಸೇರಿ ಈ ಊರಿನ ಸಾಂಸ್ಕೃತಿ ನಕಾಶೆಯನ್ನು ರೂಪಿಸಿದ್ದಾರೆ. ಮುಖ್ಯ ಎಂದರೆ ಇಲ್ಲಿನ ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳು ಹನಿಗಡಿಯದ ಹಾಗೆ ನೋಡಿಕೊಂಡಿದ್ದಾರೆ ಎನ್ನುವುದು.
ಮೊನ್ನೆ ಫೆಬ್ರುವರಿ ನಾಲ್ಕನೇ ತಾರೀಕಿನಿಂದ ಒಂದು ವಾರ ಕಾಲ ಪುರಂದರ ಭಟ್ ಪುತ್ತೂರಿನ ತಮ್ಮ ಮನೆಯಲ್ಲಿ ಸಾಹಿತ್ಯ ಕಲಾ ಕುಶಲೋಪರಿ ನಡೆಸಿದರು. ಇದು ಕರ್ನಾಟಕ ಸಂಘ ಮತ್ತು ಅನ್ಯಾನ್ಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಒಂಭತ್ತು ದಿನಗಳ ಕಾರ್ಯಕ್ರಮ ಸಮುಚ್ಚಯ. ಸುಜನಾ ಸ್ಮರಣೆ, ಮೂರು ಆಧುನಿಕ ಕೃತಿಗಳ ಕುರಿತ ಉಪನ್ಯಾಸಗಳು, ನಾಟಕಗಳು, ಕಂಬಾರ ಸಾಹಿತ್ಯ ಗೋಷ್ಠಿ, ಶೈಕ್ಷಣಿಕ ಗೋಷ್ಠಿ ಮೊದಲಾದ ಕಾರ್ಯಕ್ರಮಗಳಿದ್ದವು. ಭಾಗವಹಿಸಿದ ಹೆಚ್ಚಿನವರು ಸುತ್ತುಮುತ್ತಲಿನ ಊರುಗಳ, ಅಥವಾ ಪುತ್ತೂರಿನ ಸಾಹಿತ್ಯ ಸಾಂಸ್ಕೃತಿಕ ಆಸಕ್ತರು. ಕಳೆದ ಎಂಟು ವರ್ಷಗಳಿಂದ ಹೀಗೆ ಇವರು ಈ ರೀತಿಯ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.
ನನಗೆ ಇದರಲ್ಲಿ ಮುಖ್ಯ ಅನ್ನಿಸಿದ್ದು ರಾಜಕಾರಣಿಗಳನ್ನು ದೂರ ಇಟ್ಟದ್ದು. ಕಾರ್ಯಕ್ರಮಗಳ ವಿಷಯ ಕುರಿತು ನಿಜಜೀವನದಲ್ಲೂ ಜೀವಂತ ಆಸಕ್ತಿ ಇಲ್ಲದ ಯಾರ ಹೆಸರೂ ಆಮಂತ್ರಣ ಪತ್ರಿಕೆಯಲ್ಲಿ ಇರಲಿಲ್ಲ. ಗ್ಲಾಮರಿಗಾಗಿ, ಪ್ರತಿಷ್ಠೆಗೆಂದು, ಯಾರನ್ನೋ ಮೆಚ್ಚಿಸಲೆಂದು ಕಾರ್ಯಕರ್ತರು ಯಾರನ್ನೂ ಆಹ್ವಾನಿಸಲಿಲ್ಲ.
ನನ್ನ ಎದುರು ಇನ್ನೊಂದು ಆಮಂತ್ರಣ ಪತ್ರಿಕೆಯಿದೆ. ಇದೂ ನೆರೆ ಊರಿನದ್ದೇ. ರಂಗಚಟುವಟಿಕೆಗೆ ಸಂಬಂಧಪಟ್ಟದ್ದೇ. ಅದು ಪ್ರಾರಂಭವಾಗುವುದೇ ರಾಜಕಾರಣಿಯೊಬ್ಬರ ಹೆಸರಿನಿಂದ. ಅನೇಕ ಗ್ಲಾಮರ್ ಹೆಸರುಗಳಿವೆ.
ಇಂಥಾ ಸಂಸ್ಥೆ, ಚಟುವಟಿಕೆಗಳು ಕಿರು ಹಣತೆಗಳು. ಕಿರು ಹಣತೆಗಳಾಗಿ ಉರಿದು ಸುತ್ತ ಬೆಳಕು ಚೆಲ್ಲಿ ಮನಸ್ಸು ಬೆಳಗಿಸಬೇಕು. ಹಾಗಿದ್ದಾಗ ಮಾತ್ರ ಅವಕ್ಕೆ ಬೆಲೆ. ಆಗ ನಮಗೂ ಅವು ಮುಖ್ಯ ಅನ್ನಿಸುತ್ತದೆ. ಗ್ಲಾಮರ್, ಸಿಗಬಹುದಾದ ಹಣ, ರಾಜಕಾರಣಿಗಳ ಕೃಪೆ ಮೊದಲಾದವುಗಳಿಗೆ ಬಲಿ ಬೀಳುವ ಸಂಸ್ಥೆಗಳಿಂದ ದೂರ ಇರೋಣ ಅನ್ನಿಸುತ್ತದೆ.
**********************
"ರಿಸಾರ್ಟ್, ಜೀವಪಕ್ಷಿ, ಅರ್ಬುದ ಮತ್ತು ಪುಣ್ಯಕೋಟಿ, ಬೇತಾಳ ಕಥೆ ಬರೆದ ಮೇಲೆ ಮತ್ತೆ ಇನ್ನು ಯಾವ ಕಥೆ ಬರೆಯದಿದ್ದರೂ ಪರವಾ ಇಲ್ಲ. ನೀವು ನಮ್ಮ ನಡುವಿನ ಮಹತ್ವದ ಕಥೆಗಾರರಾಗಿಯೇ ಉಳಿಯುತ್ತೀರಿ. ಇಂಥ ಕಥೆಗಳನ್ನು ಓದಿದಾಗ ಬದುಕಿದ್ದು ಸಾರ್ಥಕ ಅನ್ನಿಸುತ್ತದೆ."
----ಹರಿಯಪ್ಪ ಪೇಜಾವರ
(ಕವಿ, ಪ್ರಾಧ್ಯಾಪಕ)

No comments:
Post a Comment