Monday, March 7, 2011

ಮಾರ್ಚ್ 20ರ ಕಾರ್ಯಕ್ರಮ

ನನ್ನ ಮನಸ್ಸು ಈಗ ಮಾರ್ಚ್ 20ರಂದು ನಡೆಸಬೇಕೆಂದು ಯೋಜಿಸಲಾಗಿರುವ ಬೇಂದ್ರೆ ಕಾವ್ಯೋತ್ಸವ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮದ ಬಗೆಗಿನ ವಿವರಗಳಿಂದ ತುಂಬಿದೆ.  ಪುಸ್ತಕ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಪ್ರತಿ ಭಾನುವಾರ ನಡೆಯುತ್ತದೆ. ಅದೊಂದು ವಿಶೇಷವಲ್ಲ. ಆದರೆ ಬೇಂದ್ರೆ ಕಾವ್ಯೋತ್ಸವ ಮುಖ್ಯ ಅನ್ನಿಸುತ್ತದೆ. ಭಾಷೆಯ ಬಗ್ಗೆ, ಪದ ಮತ್ತು ಪದಗಳ ವಿವಿಧ ಸಾಧ್ಯತೆಗಳ ಬಗ್ಗೆ ಆಸಕ್ತರಾಗಿರುವ ಕವಿಗಳ ಸಂಖ್ಯೆ ಕಮ್ಮಿಯಾಗುತ್ತಿರುವಾಗ  ಪದಗಳ ಸೊಗಸನ್ನು ಸೂರೆಗೊಳ್ಳುತ್ತಿದ್ದ   ಈ ಕವಿಯನ್ನು ಸಾರ್ವಜನಿಕವಾಗಿ ಓದಿ ಆಸ್ವಾದಿಸುವುದು ರೋಚಕ ಅನುಭವವಾಗಬಲ್ಲುದು. ಬೇಂದ್ರೆ ಪದಗಳ ಸೊಗಸನ್ನು ಎಷ್ಟರ ಮಟ್ಟಿಗೆ ಸೂರೆಗೊಳ್ಳುತ್ತಾರೆ ಎಂದರೆ, ಕೆಲವು ಸಲ ಇವರಿಗೆ ಜೀವನ ಸತ್ಯಕ್ಕಿಂತ ಪದಮೋಹವೇ ಹೆಚ್ಚೇನೋ ಅನ್ನಿಸಿಬಿಡುತ್ತದೆ. ಶಿವರಾಮ ಕಾರಂತರು ಹಾಗೆ ಹೇಳಿಯೂ ಇದ್ದರಂತೆ: ಚೆಂದ ಕೇಳುತ್ತದೆ ಎಂದಾದರೆ ಬೇಂದ್ರೆ ನಿಜವಲ್ಲದ್ದೂ ಹೇಳಿಬಿಡುತ್ತಾರೆ ಎಂದು. ಅಂದರೆ, ಬೇಂದ್ರೆಯವರಿಗೆ ಸೌಂದರ್ಯವೇ ಮುಖ್ಯ, ಸತ್ಯ ಅಲ್ಲ ಎಂದು ಶಿವರಾಮ ಕಾರಂತರು ಸೂಚಿಸುತ್ತಿದ್ದರು. ಇದನ್ನೇ ತಿರುಗಿಸಿ, ಕಾರಂತರ ಒರಟೊರಟಾಗಿ ಬರೆದ ಕಾದಂಬರಿಗಳನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ಸತ್ಯವೇ ಮುಖ್ಯ, ಸೌಂದರ್ಯ ಅಲ್ಲ ಎಂದು ಹೇಳಬಹುದು. ಆದರೆ ಈ ಇಬ್ಬರು ಲೇಖಕರೂ ತಮ್ಮ ಶ್ರೇಷ್ಠ ಕೃತಿಗಳಲ್ಲಿ ಸತ್ಯ ಸೌಂದರ್ಯಗಳ ಸಮಾಗಮವನ್ನು ಸಾಧಿಸುತ್ತಾರೆ.

ಶಿವರಾಮ ಕಾರಂತರ ಮಾತು ಈ ಇಬ್ಬರು ದೊಡ್ಡ ಲೇಖಕರ ಸಾಹಿತ್ಯಿಕ ದೃಷ್ಟಿಕೋನವನ್ನು ಸಮರ್ಥವಾಗಿ ಅಭಿವ್ಯಕ್ತಿಸುತ್ತದೆ.

ಬೇಂದ್ರೆ ಮತ್ತು ಮಾಸ್ತಿ ಬಗ್ಗೆ ಇನ್ನೊಂದು ಕತೆಯಿದೆ. ಬೇಂದ್ರೆ ಮಾಸ್ತಿಯವರಿಗೆ ತಾವು ಬರೆಯಲಿರುವ ಮಾನಸಪುತ್ರ  ಎಂಬ ಕಾದಂಬರಿಯ ಕತೆ ಹೇಳಿದರಂತೆ. ನಮಗೆ ಈ ಕಾದಂಬರಿ ಈಗ ಒಂದು ಶೀರ್ಷಿಕೆಯಾಗಿ ಮಾತ್ರ ಲಭ್ಯವಿದೆ. ಬೇಂದ್ರೆ ಹೇಳಿದ ಕತೆ ಏನೆಂದರೆ, ಕನ್ಯಾಕುಮಾರಿಯಲ್ಲಿ ಒಬ್ಬಳು ಇರುತ್ತಾಳೆ, ಕಾಶ್ಮೀರದಲ್ಲಿ ಇನ್ನೊಬ್ಬ ಇರುತ್ತಾನೆ, ಅವರಿಬ್ಬರ ಮಧ್ಯೆ ಮಾನಸಿಕ ಪ್ರೀತಿ ಬೆಳೆದು ಮಗು ಹುಟ್ಟುತ್ತದೆ, ಅವನೇ ಮಾನಸಪುತ್ರ. ಇದನ್ನು ಕೇಳಿ ಮಾಸ್ತಿ, ಕತೆ ಚೆನ್ನಾಗಿದೆ, ಆದರೆ ಹೇಗೋ ಒಂದು ಸಲ ಅವರ ದೈಹಿಕ ಸಮಾಗಮ ಆಯಿತು ಅಂತ ಸೇರಿಸಿ, ಇಲ್ಲದಿದ್ದರೆ ಮಗು ಹುಟ್ಟಿತು ಅಂತ ಮಾಡೋದು ಕಷ್ಟ ಅಂದರಂತೆ. ಇದೂ ಈ ಇಬ್ಬರು ದೊಡ್ಡ ಲೇಖಕರ ಈಸ್ಥೆಟಿಕ್ ದೃಷ್ಟಿ ತೋರಿಸುತ್ತದೆ. ಮಾಸ್ತಿಯವರಿಗೆ ಜೀವನ ವಿವರಗಳು ವಾಸ್ತವದ ಚೌಕಟ್ಟಿನಲ್ಲಿ ನಡೆಯಬೇಕು. ಎಷ್ಟರ ಮಟ್ಟಿಗೆ ಎಂದರೆ, ರಾವಣನನ್ನು ಕೊಂದ ರಾಮ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಬಂದ ಎಂಬುದನ್ನು ಅವರು ನಿರಾಕರಿಸುತ್ತಾರೆ; ವಾಲ್ಮೀಕಿ ರಾಮಾಯಣದಲ್ಲಿ ಹಾಗಿಲ್ಲ ಎಂದು ಆಧಾರ ಕೊಟ್ಟು ವಿವರಿಸುತ್ತಾರೆ. ಬೇಂದ್ರೆಯ ಸಂವೇದನೆ ಭಿನ್ನವಾದದ್ದು: ಅದು ಗಿಡಗಂಟೆಯ ಕೊರಳಿಂದ ಹಕ್ಕಿಗಳ ಹಾಡು ಕೇಳುವಂಥಾದ್ದು, ಮತ್ತು ಈ ಹಕ್ಕಿಗಳು ಸೂರ್ಯ ಚಂದ್ರರನ್ನೇ ಕಣ್ಣು ಮಾಡಿಕೊಂಡು  ಸಾರ್ವಭೌಮರ ನೆತ್ತಿ ಕುಕ್ಕಿ ಹಾರುವಂಥವುಗಳು. ಮತ್ತು ಕಾಲದ ಈ ಹಕ್ಕಿ ಸಾರ್ವಭೌಮರ ನೆತ್ತಿ ಕುಕ್ಕಿ ಹಾರುತ್ತದೆಂದು ಬೇಂದ್ರೆಯವರು ಬರೆದದ್ದು ಸ್ವಾತಂತ್ರ್ಯಪೂರ್ವದಲ್ಲಿ: ಬ್ರಿಟನ್ನಿನ ಸಾರ್ವಭೌಮ ಭಾರತವನ್ನು ಪದಾಕ್ರಾಂತ ಮಾಡಿಕೊಂಡಿದ್ದ ಸಮಯದಲ್ಲಿ.

***********
ಮೇಲಿನದ್ದು ಮಾರ್ಚ್ 20ರಂದು ಬಿಡುಗಡೆಯಾಗಲಿರುವ ಪುಸ್ತಕಗಳಲ್ಲಿ ಒಂದು. ಈ ಮುಖಚಿತ್ರ ರಚಿಸಿದವರು ಜಾನ್ ಚಂದ್ರನ್. ಕರ್ನಾಟಕದ ಪ್ರತಿಭಾವಂತ ಯುವ ಕಲಾವಿದರಲ್ಲಿ ಇವರು ಒಬ್ಬರು.

No comments:

Post a Comment