Tuesday, March 26, 2013

ಎಸ್.ಎಲ್. ಭೈರಪ್ಪ

ನನ್ನ ಹೊಸ ಪುಸ್ತಕ ಆರಣ್ಯಕರ ಸುತ್ತಮುತ್ತದಲ್ಲಿ ಭೈರಪ್ಪನವರ ಮೇಲೆ ಒಂದು ಲೇಖನವಿದೆ. ಇದು "ಒಂದು ತಲೆಮಾರಿನ ಕೆಲವರು ಲೇಖಕರು" ಎಂಬ 62 ಪುಟಗಳ ಒಂದು ಲೇಖನದ ಭಾಗ. ಇದರ ಸ್ಥೂಲ ರೂಪ ನಾನು 2011ರಲ್ಲಿ ವಿಜಯವಾಣಿಯಲ್ಲಿ ಬರೆಯುತ್ತಿದ್ದ ಅಂಕಣದಲ್ಲಿ ಪ್ರಕಟವಾಗಿತ್ತು. ಪುಸ್ತಕದಲ್ಲಿ ಲೇಖನವಾಗಿ ಬರುವಾಗ ಹೆಚ್ಚು ವಿವರ ಉದಾಹರಣೆಗಳು ಸೇರಿವೆ. ಅದರ ಕೊನೆಯ ಪ್ಯಾರಾ ಕೆಳಗೆ ಕೊಟ್ಟಿದ್ದೇನೆ. ನನ್ನ ಈ ನಿಲುವು ಇಂದು ಚಾಲ್ತಿಯಲ್ಲಿರುವ ಅನೇಕರು ತೆಗೆದುಕೊಂಡ ನಿಲುವಿಗೆ ತದ್ವಿರುದ್ಧವಾದದ್ದು. ಇದು ಚರ್ಚೆಯಾಗಲಿ, ಭೈರಪ್ಪನವರ ಕಾದಂಬರಿಗಳು ವಿಮರ್ಶಾಕ್ಷೇತ್ರದಲ್ಲಿ ಅವುಗಳ ಸರಿಯಾದ ಸ್ಥಾನದಲ್ಲಿ ಗುರುತಿಸಲ್ಪಡಲಿ ಎಂಬ ದೃಷ್ಟಿ ಹೀಗೆ ನನ್ನ ನಿಲುವಿನ ಸಾರಾಂಶವಾದ ಕೊನೆಯ ಪ್ಯಾರಾ ಕೊಡುವುದರ ಹಿಂದೆ ಇದೆ.

 ನಾನು ಚರ್ಚೆಯಾಗಲಿ ಎಂದು ಬಯಸುವ ಲೇಖನದ ಕೊನೆಯ ಆ ಪ್ಯಾರಾ ಹೀಗಿದೆ:

"ಅನಂತಮೂರ್ತಿ ಜೊತೆಗೆ ಭೈರಪ್ಪನವರನ್ನು ಹೋಲಿಸುವಂತೆ ಅನಂತಮೂರ್ತಿಯವರೇ ಒತ್ತಾಯಿಸುತ್ತಾರೆ. ಯಾಕೆಂದರೆ ಅವರನ್ನು ಜನಪ್ರಿಯ ಕಾದಂಬರಿಕಾರ, ಗಂಭೀರ ಪರಿಶೀಲನೆಗೆ ಅರ್ಹ ಅಲ್ಲ ಎಂಬ ರೀತಿಯಲ್ಲಿ ಬರೆದವರು ಅನಂತಮೂರ್ತಿಯವರೇ. ಆದರೆ ಪರ್ವ ಮತ್ತು ಆನಂತರದ ಕಾದಂಬರಿಗಳಲ್ಲಿ-- ಆವರಣ ಹೊರತುಪಡಿಸಿ-- ಚಿತ್ರಿತವಾಗುವ ಅನುಭವ ವಿಸ್ತಾರ, ಪಾತ್ರ ಚಿತ್ರಣ, ವ್ಯಾಪ್ತಿಗಳು ಅವರನ್ನು ಒಬ್ಬ ಶ್ರೇಷ್ಠ ಕಾದಂಬರಿಕಾರರನ್ನಾಗಿ ಮಾಡಿವೆ. ಅನಂತಮೂರ್ತಿಯವರು ತಮ್ಮ ವಿಮರ್ಶೆ, ಸಾಮಾಜಿಕ ಚಟುವಟಿಕೆ ಮೊದಲಾದವುಗಳಿಂದ ಮುಖ್ಯ ಸಾಹಿತ್ಯಿಕ ಪುರುಷ ನಿಜ; ಆದರೆ ಕಾದಂಬರಿಕಾರರಾಗಿ ಪರ್ವದ ನಂತರದ ಭೈರಪ್ಪನವರೇ ಅವರಿಗಿಂಥ ಶ್ರೇಷ್ಠ. ಭೈರಪ್ಪನವರ ದೃಷ್ಟಿಕೋನ ನನ್ನ ದೃಷ್ಟಿಕೋನ ಅಲ್ಲ ಎಂಬುದು ಅವರ ಉತ್ತಮಿಕೆಯನ್ನು ಮೆಚ್ಚಲು ನನಗೆ ತೊಂದರೆ ಆಗಿಲ್ಲ-- ಎಲಿಯಟ್ ನ ಕ್ರಿಶ್ಚಿಯನ್ ದೃಷ್ಟಿಕೋನ, ಶೇಕ್ ಸ್ಪಿಯರ್ ನ ವಂಶಪಾರಂಪರ್ಯ-ರಾಜತ್ವ-ನಿಷ್ಠ-ದೃಷ್ಟಿಕೋನ ಅವರ ಕೃತಿಗಳನ್ನು ಮೆಚ್ಚಲು ಹೇಗೆ ತೊಂದರೆ ಆಗಿಲ್ಲವೋ ಹಾಗೆ."

3 comments:

  1. ನಿಮ್ಮ ವಿಮರ್ಶಾ ಲೇಖನದಿಂದಾಗಿ ಭೈರಪ್ಪನವರಿಗೆ ಲೆಜಿಟಿಮೇಟ್ ಆಗಿ ಸಿಗಬೇಕಾದ ಗೌರವ ಮತ್ತು ಕಾದಂಬರಿ ಲೋಕದಲ್ಲಿ ಸ್ಥಾನ ಮಾನಗಳು ಸಿಕ್ಕಲೆಂದು ಹಾರೈಸುತ್ತೇನೆ. ಒಳ್ಳೆಯ ಕೆಲ್ಸ ಮಾಡುತ್ತೀದ್ದೀರಿ.---ದೇವರಾಜು.ಬೆಂಗಳೂರು.

    ReplyDelete
  2. ನಿಮ್ಮ ಅಭಿಪ್ರಾಯ ಬಹು ಸಂಖ್ಯಾತ ಕನ್ನಡಿಗರ ಅಭಿಪ್ರಾಯ. ಬೈರಪ್ಪನವರ ಹಲವು ಕಾದಂಬರಿ ಶ್ರೇಷ್ಠ ಪಂಕ್ತಿಯಲ್ಲಿ ಸೇರಿದೆ....
    ಇಬ್ಬರು ಓದುಗರ ಮಾತುಗಳು ನನಿಗೆ ನೆನಪಿಗೆ ಬರುತ್ತದೆ. ಬೈರಪನವರ ಕಾದಂಬರಿಯಲ್ಲಿ ತುಂಬಾ ಗುರುತ್ವ ಇದೆಯಂತೆ .... ಅದರೆ ಅನಂತ ಮೂರ್ತಿ ಯವರ ಕಾದಂಬರಿಯಲ್ಲಿ ಕಬ್ಬಿಣದ ಕಡಲೆ ಕಾಯಿ ಮಾತ್ರವಲ್ಲದೆ 'ಖಡಲೆ' ಕಾಯಿಯೂ ಸಿಗುತ್ತದಂತೆ .

    KP Nettar

    ReplyDelete