Friday, May 18, 2012

ಕುಲಾಂತರಿ ಬೀಜಗಳು

ಮೇ 20ರಿಂದ ಬೆಂಗಳೂರಿನಲ್ಲಿ ಕುಲಾಂತರಿ ಬೀಜಗಳ ಕುರಿತು ಒಂದು ಸೆಮಿನಾರು ನಡೆಯಲಿದೆ.

ಈ ಸಂದರ್ಭದಲ್ಲಿ ಅಡಿಕೆ ಬೆಳೆಗಾರನಾಗಿ ನಾನು ಮತ್ತು ನನ್ನ ಹಾಗಿರುವ ಇತರ ಅನೇಕ ಅಡಿಕೆ ಬೆಳೆಗಾರರು ಬೀಜ ಮತ್ತು ಅಡಿಕೆ ಸಸಿಗಳನ್ನು ಹೇಗೆ ಮಾಡಿಕೊಳ್ಳುತ್ತೇವೆ ಎಂದು ನಮೂದಿಸುವುದು ಉಚಿತವಾಗಬಹುದು.

ನಾವು ಯಾರೂ ಅಡಿಕೆ ಬಿತ್ತನ್ನು ಇನ್ನೊಂದು ಕಡೆಯಿಂದ ತರುವುದಿಲ್ಲ. ಕೆಲವು ಸಲ ವಿಟ್ಲದಲ್ಲಿರುವ  ಅಡಿಕೆ ಸಂಶೋಧನಾ ಕೇಂದ್ರದಿಂದ ಬಿತ್ತನ್ನೋ ಗಿಡವನ್ನೋ ತರುವುದು ಉಂಟಾದರೂ ಅಂಥದ್ದು ಕಮ್ಮಿ; ಅಪರೂಪ. ಅವರ ವಿಶೇಷ ತಳಿಯಾದ ಮಂಗಳದಲ್ಲಿ ಪ್ರಾರಂಭದ ವರ್ಷಗಳಲ್ಲಿ ಇಳುವರಿ ಹೆಚ್ಚಿಗೆ ಇರುತ್ತದಾದರೂ ಕೆಲವೇ ವರ್ಷಗಳಲ್ಲಿ ಇಳುವರಿ ಕಮ್ಮಿಯಾಗುತ್ತದೆ. ಅಲ್ಲದೆ ಊರ ತಳಿಯನ್ನು ಸಾಕುವುದಕ್ಕಿಂತ ಅದರ ಸಾಕಣೆಗೆ ತಗಲುವ ವೆಚ್ಚ ಹೆಚ್ಚು. ಹೀಗಾಗಿ ಹೆಚ್ಚು ತಾಳಿಕೆಯ ಮತ್ತು ಹೆಚ್ಚು ಗಟ್ಟಿ ತಳಿಗಳಾದ ಊರ ತಳಿಗಳನ್ನೇ ಅಡಿಕೆ ರೈತರು ಇಷ್ಟಪಡುತ್ತಾರೆ.

ಹೆಚ್ಚಿನ ಎಲ್ಲ ರೈತರು ತಮ್ಮದೇ ತೋಟದಲ್ಲಿರುವ ಬಿತ್ತಿನ ಮರವೆಂದೇ ಆರಿಸಿ ಇಟ್ಟುಕೊಂಡ ಮರದಿಂದ ಬಿತ್ತನ್ನು ಆರಿಸಿ, ಅದಕ್ಕೆ ಸೆಗಣಿ ಉದ್ದಿ ಕಳ್ಪ ಹಾಕಿ ಮಳೆ ಬಂದ ಮೇಲೆ ಗಿಡ ನೆಡುವ ಸಮಯದಲ್ಲಿ ನೆಡುತ್ತಾರೆ. ಹೀಗಾಗಿ ಎಲ್ಲಿಂದಲೋ ಬೀಜ ತಂದು ಬೇಸ್ತು ಬೀಳುವ ಪ್ರಮೇಯವೇ ಇಲ್ಲ.  ಹೆಚ್ಚಿನ ರೈತರು ಮಳೆಗಾಲದಲ್ಲಿ ಅಂಗಳದಲ್ಲಿ ತರಕಾರಿ ಬೆಳೆಯುತ್ತಾರೆ. ಅಲ್ಲಿಯೂ ಬಿತ್ತು ಕಳೆದ ವರ್ಷ ಬೆಳೆದ ತರಕಾರಿಯಿಂದ ಆರಿಸಿ ಇಟ್ಟುಕೊಂಡದ್ದೇ ಹೊರತು ಬೇರೆ ಕಡೆಯಿಂದ ತಂದದ್ದಲ್ಲ. ಒಂದು ವೇಳೆ ತರುವುದಿದ್ದರೂ ಅದು ನೋಡಿ ಗೊತ್ತಿರುವ ಊರಿನ ಅಥವಾ ಸಂಬಂಧಿಕರ ತೋಟದಿಂದಲೇ ಹೊರತು ಎಲ್ಲೆಲ್ಲಿಂದಲೋ ಅಲ್ಲ; ಕಂಪೆನಿಗಳಿಂದ ಅಂತೂ ಖಂಡಿತ ಅಲ್ಲ.

ಗದ್ದೆ ಬೇಸಾಯ ಇದ್ದಾಗಲೂ ಬಿತ್ತಿನ ಮುಡಿ ಎಂದು ಬೇರೆಯೇ ಕಟ್ಟಿ ಅಟ್ಟದಲ್ಲಿ ಇಡುತ್ತಿದ್ದರು. ಮುಂದಿನ ವರ್ಷ ಬೇಸಾಯದ ಸಮಯದಲ್ಲಿ ಅದರಿಂದ ಬಿತ್ತು ತೆಗೆದು ಬಿತ್ತುತ್ತಿದ್ದರೇ ಹೊರತು ಬೇರೆ ಕಡೆಯಿಂದ ತರುವ ಪದ್ಧತಿ ಇರಲಿಲ್ಲ.

ಇದು ತಲೆತಲಾಂತರದಿಂದ ನಡೆದು ಬಂದ ಪದ್ಧತಿ. "ಬಿತ್ತಿಗೆ  ಅಡಿಕೆ ಇರ್ಸುದು", "ಬಿತ್ತು ತೆಗೆದಿರಿಸುವುದು", "ಬಿತ್ತಿನ ಮುಡಿ ಕಟ್ಟುದು" ಮೊದಲಾದವು ರೈತನ ಭಾಷೆಯ ಅವಿಭಾಜ್ಯ ನುಡಿಗಟ್ಟುಗಳು.

ಕರ್ನಾಟಕದ ಉಳಿದ ಪ್ರದೇಶಗಳ ರೈತರ ಗಮನಕ್ಕಾಗಿ ಈ ವಿಷಯ ಇಲ್ಲಿ ನಮೂದಿಸಿದ್ದೇನೆ. ನಮ್ಮದೇ ಬೆಳೆಗೆಳ ಬಿತ್ತುಗಳನ್ನು ಶೇಖರಿಸಿಟ್ಟು ಅವನ್ನೇ ಮುಂದಿನ ಬೇಸಾಯಕ್ಕೆ  ಬಳಸುವುದು ಸುಲಭ, ಅಗ್ಗ, ಸುರಕ್ಷಿತ ಮತ್ತು ಸ್ವಾವಲಂಬಿ.



No comments:

Post a Comment