(ಮೇಲಿನದ್ದು ಸುಮಾರು ಕ್ರಿ.ಶ. 1650ರ ಮೊಗಲರ ಕಾಲದ ಮಾತಾಡುವ ಮರದ ಚಿಕಣಿ ಚಿತ್ರದ ಪ್ರತಿಕೃತಿ. ಈ ಚಿತ್ರ ಈಗ ಬರ್ಲಿನ್ನಿನ ಒಂದು ಮ್ಯೂಸಿಯಮ್ಮಿನಲ್ಲಿದೆಯಂತೆ. ನಾನು ಇದನ್ನು ರಿಚರ್ಡ್ ಲೆನೋಯ್ ನ ಪುಸ್ತಕದಿಂದ ಪಡೆದಿದ್ದೇನೆ.
ಇದರ ಸ್ಥೂಲ ರೂಪರೇಷೆ ಹರಪ್ಪಾದ ಸೀಲುಗಳಲ್ಲಿದೆ ಅನ್ನುತ್ತಾರೆ. ಮುಸ್ಲಿಂ ಸಂಪ್ರದಾಯದಲ್ಲೂ ಈ ಬಗೆಯ ಮರ ಇದೆ. ಅಲ್ಲಿ ಅದಕ್ಕೆ ವಾಕ್ ವಾಕ್ ಮರ ಅನ್ನುತ್ತಾರೆ. ನನಗೆ ಇಲ್ಲಿ ಮುಖ್ಯವಾದ್ದು ಇದು ಹಿಂದು-ಮುಸ್ಲಿಂ ಇಬ್ಬರಿಗೂ ಸಮಾನವಾದ ಒಂದು ಸಂಕೇತ ಎನ್ನುವುದು. ಗ್ರೀಕರ ಅಲೆಕ್ಸಾಂಡರ್ ಭಾರತಕ್ಕೆ ದಂಡೆತ್ತಿ ಬಂದಾಗ ಈ ಮರವನ್ನು ಮಾತಾಡಿಸಬಯಸಿದನಂತೆ. ಅದು ಮಾತಾಡದ್ದರಿಂದಲೇ ಅವನು ಭಾರತದಿಂದ ಹಿಮ್ಮೆಟ್ಟಬೇಕಾಯಿತು ಎಂಬ ಒಂದು ಕತೆಯಿದೆ.)
1
ಉದ್ಘಾಟನೆ ಅಹ ಉದ್ಘಾಟನೆ
ಹೊಸ ರಿಸಾರ್ಟಿನ ಘನ ಉದ್ಘಾಟನೆ;
ಸ್ವಿಮ್ಮಿಂಗು ಪೂಲುಂಟು ಜೋಕಾಲಿ ಉಂಟು
ಗಿಡ ಮರ ಬಳ್ಳಿಯು ಬೀಸೋ ತಂಗಾಳಿ;
ಮಕ್ಕಳ ಆಟಕೆ ಸೀಸಾ ಥ್ರೋಬಾಲ್
ಕೇರಂ ಚೆಸ್ಸೂ ಸಿನೆಮಾಕೆ ಮಿನಿ ಹಾಲ್;
ಹಳೆ ಹೊಸ ವಸ್ತುವ ಮ್ಯೂಸಿಯಮ್ಮೂ
ಡಾನ್ಸಿಗೆ ಗೀತಕೆ ಥರ ಥರ ರಿದಮ್ಮೂ;
ಚೈನೀಸು ಪಂಜಾಬಿ ಚೆನ್ನೈ ಕಾಶ್ಮೀರಿ
ಯಾವುದೆ ಟೇಸ್ಟಿನ ಊಟಾ ಡ್ರಿಂಕು;
ಬನ್ನಿರಿ ಬನ್ನಿರಿ ರಿಸಾರ್ಟಿಗೇ
ರಿಲ್ಯಾಕ್ಸ್ ಮಾಡುವ ಹೊಸ ಆರ್ಟಿಗೇ;
ಉದ್ಘಾಟನೆ ನಾಳೆ ಉದ್ಘಾಟನೆ
ಹೊಸ ರಿಸಾರ್ಟಿನ ಮಜ ಉದ್ಘಾಟನೆ.
2
ಏನೇ ಅದು ರಿಕ್ಷಾದಲ್ಲಿ ಕೂಗಿ ಹೇಳಿದ್ದು?
ಹಳೇ ಅರಮನೆ ರಿನೋವೇಟ್ ಆಯ್ತು,
ರಿಸಾರ್ಟ್ ಮಾಡ್ತಾರೇ ಅದನ್ನು ರಿಸಾರ್ಟ್ ಮಾಡ್ತಾರೆ,
ಉದ್ಘಾಟನೆ ಅದರ ಉದ್ಘಾಟನೆ ಹೇಳಿ
ಹಾಡು ಹೇಳಿದ್ರು ಮೈಕಲ್ಲಿ ಕೂಗಿ ಹೇಳಿದ್ರು.
ಅದಾ, ಗೊತ್ತು, ಅಮೇರಿಕದವನು, ಅರಮನೇನ ಕ್ರಯಕ್ಕೆ ತಗೊಂಡ,
ರಿಸಾರ್ಟ್ ಮಾಡ್ತಾನೇ ಅದನ್ನು ರಿಸಾರ್ಟ್ ಮಾಡ್ತಾನೆ.
ಒಳ್ಳೇದಾಯ್ತು. ಬೇರೆ ಬೇರೆ ಕೆಲಸಕ್ಕೇಂತ
ರಿಸಾರ್ಟಿನಲ್ಲಿ ಹುಡುಗೀರು ಬೇಕು--
ಜಾಹೀರಾತು ಬಂದಿತ್ತು ಹಿಂದೆ
ಸೇರೇ ಬಿಡ್ತೇನೆ ಒಳ್ಳೇ ಸಂಬಳ ಕೊಡ್ತಾರೆ.
ಅಮೇರಿಕ ಬುದ್ಧಿ. ಕೆಲಸಕ್ಕೇಂತ ತಗೊಂಡ ಮೇಲೆ
ಏನಕ್ಕೆ ಬಳಸ್ತಾರೆ ಯಾರಿಗ್ಗೊತ್ತು?
ಮರ್ಯಾದೆ ಮಾನ ಇಲ್ಲ ಮದುವೆ ಆಗಲ್ಲ ಯಾರೂ
ಗಂಡ ಬರಲ್ಲ.
ಮನೆ ಮನೆ ತಿರುಗಿ ಈ ನಮೂನೇಲಿ
ಲಿಪ್ಸ್ಟಿಕ್ ಮಾರಿ ಪೌಡರ್ ಕ್ರೀಮು
ಟೈಪಿಸ್ಟು ಅಂತ ಟೈಪು ಕುಟ್ಟಿ
ಸೀರೆ ಅಂಗಡೀಲಿ ಸೀರೆ ಮಾರಿ
ಮರ್ಯಾದೆ ಇರುತ್ತಾ ಏನು ಮದುವೆ ಆಗುತ್ತಾ?
ರಿಸಾರ್ಟಿನಲ್ಲಿ ಕೆಲಸ ಪಡೆದ್ರೆ
ದುಡ್ಡು ಆದ್ರೂ ಜಾಸ್ತಿ ಬಂದು
ಆಸೆ ಆದ್ರೂ ಚೂರು ತೀರಿ
ನೋಡೇ ಇಲ್ವೇನೆ ಮೃಗವ
ತಿಳಿದೇ ಇಲ್ವೇನೇ?
ಚಿನ್ನದ ಬಣ್ಣದ ತಾರೆಯ ಕಣ್ಣಿನ
ಚಿಗರೆಯ ನಡಿಗೆಯ ಕಲಿಸುವ ಜಿಂಕೆಯ
ರೇಷ್ಮೆಯ ಸೀರೆಯ ಚಿನ್ನದ ಬಳೆಗಳ
ಸೋಫದ ಸೆಟ್ಟಿನ ಫ್ಲೈಟಿನ ಜರ್ನಿಯ
ಥರ ಥರ ವೇಷದಿ ಭಂಗಿಲಿ ಕುಣಿಯುವ
ರಸ್ತೆಲಿ ನಡೆವಾಗ ಅಂಗಡಿ ಒಳ ಕಂಡ
ಬಸ್ಸಲ್ಲಿ ಕೂತಾಗ ಕಾರಾಗಿ ಹರೀತಿದ್ದ
ನೋಡೇ ಇಲ್ವೇನೆ ಮೃಗವ
ತಿಳಿದೇ ಇಲ್ವೇನೇ?
3
ಬ್ರಿಟಿಷರ ಓಡಿಸಿ ಸ್ವಾತಂತ್ರ್ಯ ತರಿಸಿ
ರಾಜತ್ವ ಹೋಗಿ ಲ್ಯಾಂಡ್ ಲಾರ್ಡ್ ಆಗಿ
ಪ್ರೈವಿ ಪರ್ಸು ಗೇಣಿ ಮೇಲೆ
ಬದುಕ್ತಾ ದಿನವ ನೂಕ್ತಿದ್ದಾಗ
ಪ್ರೈವಿ ಪರ್ಸು ಕ್ಯಾನ್ಸಲ್ಲಾಯ್ತು;
ಗೇಣಿಶಾಸನ ಬಂದು ಇದ್ದ
ಗದ್ದೆ ತೋಟ ಒಕ್ಕಲಿಗಾಯ್ತು;
ಅರಮನೆ ಮಾತ್ರ ಅರಸರಿಗೆ ಉಳೀತು.
ಊಟಕ್ಕೇನು ಮಾಡಬೇಕು ನೆಂಟರ ಶುಂಠರ ಆಶ್ರಿತ ಜನಗಳ?
ಕೂಗಲಿಕ್ಕೇನು ಮಾಡಬೇಕು ಬಿರುದು ಬಾವಲಿ ಪಟ್ಟದ ಕಾಲದ?
ಉತ್ಸವಕ್ಕೇನು ಮಾಡಬೇಕು ವರ್ಷಂಪ್ರತಿಯ ದಸರಾ ಪೂಜೆಯ?
ಸಾಲ ತಂದು ತಂದು ತಂದು ಸಾಲ ಕೊಡುವ ಜನರು ಕೂಡ
ದೂರ ದೂರ ದೂರ ಹೋಗಿ
ಇರ್ತಿದ್ನೆ ಕೊಡದೆ ಲುಕ್ಸಾನಾಯ್ತು ಬಿಸಿನೆಸ್ಸಲ್ಲಿ
ಕೇಳೋದು ಹೆಚ್ಚೋ ನೀವು ನನಗೆ ಕೊಡೋದು ಹೆಚ್ಚೋ ನಾನು ನಿಮಗೆ
ಆದ್ರೆ ಏನು ಮಾಡ್ಲಿ ಹೇಳಿ ಅಸಿಸ್ಟೆಂಟು ಒಬ್ಬ ಲಪಟಾಯಿಸಿ ಎಲ್ಲ
ನಾನೇ ಪಾಪರ್ ಅಗಿದ್ದೇನೆ.
ಚಿನ್ನ ಮಾರಿ
ಹುಲಿಯ ಚರ್ಮ ಜಿಂಕೆ ಕೊಂಬು ಆನೆ ಕಾಲು ದಂತ ಚೂರಿ
ಖಡ್ಗ ಕೋವಿ ಕೂಡ ಮುಗಿದು ಪಾತ್ರೆ ಪಡಗ ಮಂಚ ಕುರ್ಚಿ
ಮಾರಾಟ ಮಾಡಿ ಹಾಗೂ ಹೀಗೂ ಜೀವನ ನಡೆಸ್ತಾ ಮನೇಲಿ ಯಾರು
ಮುದುಕಿ ರಾಣಿ
ಮೊನ್ನೆ ವರೆಗೆ ಎಷ್ಟು ಜನಕ್ಕೆ ಊಟ ಉಡುಗೆ ಕೊಡ್ತಾ ಇದ್ವಿ
ನೆಂಟರು ಬಳಗ ಈಗ ಮಾತ್ರ ಬರೋದೇ ಇಲ್ಲ ಮೊನ್ನೆ ಒಬ್ಬ
ಮಾವ ಬಂದ ದಿನ ಎಷ್ಟಾದ್ರೂ ಹೋಗ್ಲೇ ಇಲ್ಲ ಆ ಮೇಲೆ ಒಬ್ಬ
ಹಳೆಯ ಒಕ್ಲು ಕೆಂಬಡೆ ತಂದು ಅಡ್ಡ ಬಿದ್ದು ಹೋದ್ದು ಬಿಟ್ರೆ
ಯಾರೂ ಇಲ್ಲ ರಸ್ತೆಲಿ ಹೋದರು ಇಲ್ಲಿಗೆ ಇಲ್ಲ ಮೊದ್ಲು ಬಂದು
ರಾತ್ರಿ ಹಗಲು ನೆಕ್ತಿರ್ಲಿಲ್ವೆ ಬರಲಿ ಮತ್ತೆ ಮುಖಕ್ಕೆ ಬಾಗಿಲು
ಹಾಕದೆ ಬಿಡೆನು
ಮಗನ ಕಾಗದ ಕೂಡ ಇಲ್ಲ ಅವಂದು ಅಂತು ಬೇರೆಯೆ ದೇಶ
ಇವನಿಗೆ ಯಾಕೆ ನಾವೀಗ ಬೇಡ ಒಮ್ಮೆ ಆದರು ಬರಬಾರದಿತ್ತೆ
ಇವರು ಆದರು ಕಾಗದ ಬರೆದು ಮಗನ್ನ ಇಲ್ಲಿಗೆ ಕರೆಸೋದು ಬೇಡವೆ
ಶಾಸ್ತ್ರಕ್ಕಾದರು ಪಟ್ಟಾಭಿಷೇಕ ನಡೆಸದೆ ಇದ್ದರೆ ಹೇಗಾದೀತು
ಒಳ್ಳೇ ಕಾಲ ಮತ್ತೆ ಬಂದರೆ ಸೂರ್ಯ ಚಂದ್ರ ದೆಸೆಗಳ ಆಣೆ
ಪಂಜುರ್ಲಿಗೊಂದು ಕೋಲ ಕೊಡುವೆ ಸುಬ್ರಹ್ಮಣ್ಯ ದೇವರಿಗೊಂದು
ಮುಡಿಪು ಕೂಡ ಮೀಸಲಿಡುವೆ ಹತ್ತನೇ ತಲೆಗೆ ಪಟ್ಟ ಮುಗಿದು
ಮತ್ತೆ ಮೂರು ತಲೆಗೆ ರಾಜ ಪುನಃ ಖಂಡಿತ ಆಗೂದಂತ
ಪಂಚಾಂಗ ಹಿಂದೆ ಹೇಳಿದ್ದುಂಟು ಈಗ ಮಾತ್ರ ಕೆಟ್ಟ ಕಾಲ
ಅಂತ ಗೊಣಗಿ ಬೇಯಿಸಿ ಹಾಕ್ತಾ
ಬಾಳೆ ದಿಂಡು ಕೆಸುವಿನ ಸೊಪ್ಪು ಗೆಣಸು ಕೇನೆ ಪೂಂಬೆ ಕುಜ್ಜೆ
ಇದ್ದ ಕಾಲದಲ್ಲಿ ಅರಸ
ಅಂಗಡಿಗೆ ಹೋಗಿ ಎರಡು ಮುಂಡು ಬೈರಾಸು ಸೀರೆ
ಪರ್ಚೇಸು ಮಾಡಿ ಮನೆಗೆ ಕಳಿಸಿ ದುಡ್ಡು ನಿಮಗೆ ಅಲ್ಲೇ ಕೊಡುವೆ
ಎಂದು ಹೇಳಿ ಬಂದ ಮೇಲೆ ವಾರ ಪಕ್ಷ ಕಳೆದರು ಕೂಡ
ವಸ್ತ್ರದ ಗಂಟು ಬರಲೇ ಇಲ್ಲ. ಅಂಗಡಿಗೆ ಹೋಗಿ ವಿಚಾರಿಸಿದರೆ
ಕಳಿಸ್ತೇವೆ ಹೋಗಿ ಅಂದರು ಅಷ್ಟೇ. ವಸ್ತ್ರದ ಗಂಟು ಬರಲೇ ಇಲ್ಲ.
ಇನ್ನೊಂದು ಅಂಗಡಿಗೆ ಹೋಗಿ ಕೇಳಿದರೆ
ನಿಮಗಾಗುವ ವಸ್ತ್ರ ನಮ್ಮಲ್ಲಿಲ್ಲ--
ದುಡ್ಡು ಇದ್ದರೆ ಮಡಗಿ ಮಾತಾಡಿ ಉದ್ದರಿ ಕೊಡಲಿಕ್ಕಾಗೋದಿಲ್ಲ;
ಜೀನಸು ಅಂಗ್ಡೀಲಿ ಅಕ್ಕಿ ಬೇಳೆ ಬೇಕಾಗಿತ್ತು ಎಂದಾಗ ಅಂದರು:
ಹಳೇ ಸಾಲ ತೀರ್ಸಿದ್ರೆ ಮಾತ್ರ;
ಅದೂ ಬೆಳ್ತಿಗೆ ಯಾತಕ್ಕಂತೆ ನುಚ್ಚಕ್ಕಿ ಉಂಟು ಫಸ್ಟ್ ಕ್ಲಾಸ್ ಅನ್ನ.
ಕಂಡ್ರಕುಟ್ಟಿ ದರವೇಸಿ ಹಂದಿ ಹಡಬೇಗ್ಹುಟ್ಟಿದ ನಾಯೀಮಗನೆ
ಕಪಾಳಕ್ಕೆರಡು ಬಿಟ್ಟರೆ ನೋಡು ಕಚ್ಚೆಲಿ ಹೇತು ಊರೆಲ್ಲ ಗಬ್ಬು
ನಾಯೀ ಮಕ್ಕಳೆ ನಾ ಯಾರು ಗೊತ್ತಾ ಶಕ್ತಿಯ ನಿಮಗೆ ತೋರಿಸಿ ಕೊಡುವೆ
ನಾಯಿಂಡೆಮೋನೆ ಮೊನ್ನೆ ಹುಟ್ಟಿದೋರು ನನ್ನೆದುರು ನಿಮ್ಮದು ಏನು ತಾಖತ್ತು
ದೇವರು ಯಾಕೆ ಇದು ನೋಡ್ಕೊಂಡು ಸುಮ್ಮನೆ ಕೂತ ದೇವ್ರೇ ಬಾರೋ
ಒದ್ದು ಕೆಡವ್ಯೇನು ಏ ನನ ಮಗನೆ ದೇವ್ರೇ ನೀನು ಏನಂದು ಕೊಂಡಿ
ಭೂಮಿಯ ಮಡಚುವೆ ಚಾಪೆಯ ಹಾಗೆ ಸೂರ್ಯರ ಚಂದ್ರರ ನಿಲ್ಲಿಸಿ ಬಿಡುವೆ
ಬೆಳಕನ್ನು ಹಿಂಡುವೆ ತಾರೆಗಳದ್ದು ಕತ್ತಲೆಯನ್ನೇ ತುಂಬುವೆ ಎಲ್ಲೆಡೆ
ಎಲ್ಲಾ ಪೂರಾ ಹೊಸತೇ ಮಾಡುವೆ ಏ ನನ ಮಗನೆ ದೇವರೆ ಬಾರೊ
ಕೇಳಿದವರು ಏನು ಗಲಾಟೆ ಹೋ ರಾಜ ಎಂದು ಸೇರಿ,
ಅರಸ ಆದ್ರೂ ಬೈಗುಳ ಬಲ್ಲ,
ಯಾರು ಅರಸರೆ ನಾಯಿಂಡೆಮೋನೆ ,
ನಾಯಿಂಡೆಮೋನೆ ನೀನೇ ಮಗನೆ,
ಅವನು ಓಡಿ ಗುಂಪು ಓಡಿ ದೂರ ನಿಂತು ನಗುತ್ತ ನೋಡಿ
ರಾಜಾಧಿರಾಜ
ಕೊತ್ತಂಬರಿ ಬೀಜ
ಸೂರ್ಯ ಸಮ ತೇಜ
ಖೋ ಖೋ ಖೋ ಖೋssssಜ
ರಾಜರು ಕಲ್ಲು ತಕ್ಕೊಂಡು ಬೀಸಿ ನಾಯಿಂಡೆಮೋನೆ ಎಂದಾಗ ಗುಂಪಿನ
ಎಂಟ್ಹತ್ತು ಜನರು ಒಟ್ಟಾಗಿ ಸೇರಿ ರಾಜಾಧಿರಾಜ ಪುನಃ ಸುರು ಮಾಡಿ
ಅಷ್ಟು ಹೊತ್ತಿಗೆ ಯಾರೋ ಹಿರಿಯರು ತಮಾಷೆ ಏನು ಹೋಗ್ತೀರೋ ಇಲ್ಲವೋ
ಎಂದು ಹೆದರಿಸಿ ಓಡ್ಸಿದರೂನು ಕೆಲವರು ಹೋಗಿ ಕೆಲವರು ಸೇರಿ
ಗುಂಪು ಉಳಿದು ಅರಸರು ಮನೆ ಕಡೆ ನಡೀತಾ ಬಂದಾಗ ಹಿಂದ್ಹಿಂದೆ ಬಂದು
ಮನೆಯ ಸೇರಿ ಮಣ್ಣಿನ ಚಿಟ್ಟೆಲಿ ಮಲಗಿ ಎದ್ದ ಮೇಲೆ ಕಂಡಿತು
ಇದು ಅಲ್ಲ ಮಣ್ಣಿನ ಚಿಟ್ಟೆ ಸಿಂಹಾಸನವೇ ಎಂದು ಕಂಡು
ಮಾಸಲು ಅರಿವೆಯ ಕೊಡೆ ಇದಲ್ಲ ರಾಜದಂಡ ಎಂದು ಕಂಡು
ಹಾಳೆ ಮೊಟ್ಟಾಳೆ ಅಲ್ಲವೆ ಅಲ್ಲ ಚಿನ್ನದ ಕಿರೀಟ ಎಂದು ಕಂಡು
ಅಡಿಕೆ ಮರಗಳ ಗುಂಪಿದಲ್ಲ ಕವಾಯತಿಗೆ ನಿಂತ ಯೋಧರ ಸಾಲು
ಈಗಲೊ ಅರಸ
ಬೈಯ್ಯುತ್ತ ಅಲೆವ;
ಕೋಲನು ತಿರುಗಿಸಿ
ನೆಲಕ್ಕೆ ಬಡಿವ;
ಉರಿಯನು ಹೆಚ್ಚಲು
ಬಾನಿಗೆ ಹೇಳುವ;
ಪ್ರಳಯವ ಸುರಿಸಲು
ಮೋಡಕ್ಕೆ ತಿಳಿಸುವ:
ಸಿಡಿಲೇ ಸಿಡಿ ಸಿಡಿ
ಜಗತ್ತೆಂಬ ಗೋಲವ
ಪುಡಿ ಪುಡಿ ಮಾಡು;
ಕೃತಘ್ನ ಮನುಕುಲ
ಕುಡಿಗಳ ಸುಡು ಸುಡು;
ನಿರ್ವಂಶ ನಿರ್ಬೀಜ
ಮಾಡು ಬ್ರಹ್ಮಾಂಡ.
ಮಾನಾವು ಗೆಲ್ಲಿನಿಂದ ಕೋದಂಡ ಮಾಡಿ ಬಿಲ್ಲು ವಿದ್ಯೆ ಪ್ರಾಕ್ಟೀಸು ಮಾಡುತ್ತಾ
ಬಾಣ ನಾಕು ಗಜ ಐದು ಗಜ ಹತ್ತು ಗಜ ದೂರ ಬಿಡುತ್ತಾ
ಇನ್ನೂ ದೂರಕ್ಕೆ ಬಿಡುತ್ತಾ ಅಲ್ಲಿಂದಲೂ ದೂರಕ್ಕೆ ಬಿಡುತ್ತಾ
ಒಂದು ದಿನ ಹೀಗೆ ಒಂದು ಬಂಡೆಗೆ ಹತ್ತಿ
ಅಲ್ಲಿಂದ ದೂರದ ಒಂದು ಮರಕ್ಕೆ ಬಾಣ ಬಿಟ್ಟು
ಮತ್ತೊಂದು ಬಿಟ್ಟು ಮತ್ತೊಂದು ಬಿಟ್ಟು
ಬಾಣ ಬಿಡುವ ಉತ್ಸಾಹದಲ್ಲಿ ತುದಿಗೆ ಬಂದು ಕಾಲು ಜಾರಿ ಕೆಳಗೆ ಬಿದ್ದು
--ಸಾವಿರ ರೂಪದ ಸಾವಿಗೆ ಶರಣು
ಕರುಣೆಲಿ ಕರೆದೊಯ್ಯೊ ಪ್ರಭುವೆ ನಿನ್ನ
ಪಾದ ಬೆಳೆಸಿತ್ತ ನಿಧಾನ--
ಆ ರಾಜನ ಇಬ್ಬರು ಮಕ್ಕಳಲ್ಲಿ ಒಬ್ಬ
ಈ ನಾಡ ತಂಟೆ ಬೇಡವೆ ಬೇಡ
ಇಲ್ಲಿಂದೇನೂ ಬೇಡವೆ ಬೇಡ
ಅಮ್ಮನ ನೆನಪು ಅಪ್ಪನ ನೆನಪು
ಅರಮನೆ ಒಳಗಿನ ಹಿರಿಯರ ನೆನಪು
ಕಕ್ಕಸು ಮಾಡ್ಸಿದ ನರ್ಸಿನ ನೆನಪು
ಮೀಸಿದ ಬೆಳೆಸಿದ ಬಾಯಮ್ಮ ನೆನಪು
ಮೆಟ್ಟಲು ಇಳಿದರೆ ಕುದುರೆ ಸಾರೋಟು
ಕೇಸರಿಭಾತು ಲಾಡು ಚಿರೋಟು
ಒಂದರ ನೆನಪೂ ಬೇಡವೆ ಬೇಡ
ಎಂದು ದೃಢವ ಮಾಡಿಕೊಂಡು
ಅಮೆರಿಕನ್ ಯುನಿವರ್ಸಿಟಿಲಿ ಓದಲು ಹೋಗಿ
ಡಿಗ್ರಿ ಪಡೆದು ಕೆಲಸಕ್ಕೆ ಸೇರಿ
ಅಮೆರಕನ್ ಹುಡುಗೀನೆ ಮದುವೆ ಆಗಿ
ಒಂದು ದಿವಸ ಅವನ ಹೆಂಡತಿ
ಮನೆಗೆ ಬರುವ ಹೊತ್ತಿನಲ್ಲಿ
ಬಾಗಿಲು ಹಾಕಿದೆ ಕಿಟಿಕಿಯು ಕೂಡ
ಒಳಗಿಂದ ಕೇಳ್ತಿದೆ ಗಂಡನ ಧ್ವನಿಯು:
ಭುಜಬಲ ಚಕ್ರವರ್ತಿ
ದಿಗಂತ ವಿಶ್ರಾಂತ ಕೀರ್ತಿಧ್ವಜ
ಆಹವ ಮಲ್ಲ
ಜನಮನ ಸಾಮ್ರಾಟ
ಗಜ ಚಕ್ರ ತೋಮರ ತುರಗ ಪದಾತಿ ರಥ ಭೂ ವಾಯು ಜಲ ಯುದ್ಧ ಪ್ರವೀಣ
ದೇವದುಂದುಭಿ ನಿನದ
ನಿರ್ಜಿತ ಕಂಠೀರವ ರವ ಸಿಂಹ
ಮಿತ್ರ ಸುಪುತ್ರ ಬಂಧು ಬಳಗ ಸಖೀಜನ ಕುಲ ಕಮಲ ಮಾರ್ತಾಂಡ
ಅಂತಃಪುರಾದಿ ಸಕಲ ಗೃಹಸಮೂಹ ವಸಂತ ಕೋಕಿಲ ಗೀತ
ವೈರಿಗಳ ರುಂಡ ಕೋದಂಡ
ಬ್ರಹ್ಮಾಂಡ ಗಂಡ
ಭೋ ಪರಾಕ್ ಭೋ ಪರಾಕ್--
ಸಂದಿಲಿ ಇಣುಕಿ ನೋಡಿದರೇನು--
ಗಂಡನು ಕಿರೀಟ ಧರಿಸಿ ಸಿಲ್ಕು ಅಂಗಿ ಪೈರನ್ನು ಧರಿಸಿ
ಸೊಂಟದಲುಂಟು ಸೊಂಟದ ಪಟ್ಟಿ ಅದಕ್ಕೆ ಉಂಟು ಬಾಳು ಕತ್ತಿ
ಭುಜಕ್ಕೆ ಉಂಟು ಭುಜದ ಕೀರ್ತಿ ತೋಳ ಬಂದಿ ಕೈಯ ಕಟ್ಟು
ಕತ್ತಿಗೆ ಉಂಟು ಹತ್ತಗಟ್ಟು ಕಂಠೀಹಾರ ಎದೆಗೆ ಹಾರ
ಕೋಣೆ ಮಧ್ಯೆ ಕುರ್ಚಿ ಇಟ್ಟು ಕೂತು ಘನಸ್ಥ ರಾಜನ ಹಾಗೆ
ಕೇಳಿಸಿಕೊಂಡು ತನ್ನದೆ ದನಿಯ ಕ್ಯಾಸೆಟ್ಟಿನಿಂದ ಬರುತ್ತಲಿರುವ
ನೋಡುತ್ತಿದ್ದು ಸಭಾಸದರ ಮನಸ್ಸಿನ ಒಳಗೆ ಕಲ್ಪಿಸಿಕೊಂಡ
ಹೆಂಡತಿ ಬಂದದ್ದು ನೋಡಿ
ಕ್ಯಾಸೆಟ್ಟು ನಿಲ್ಲಿಸಿ ವೇಷ ಬಿಚ್ಚಲು ನೋಡಿದನು.
ದಿಸ್ ಈಸ್ ವಾಟ್ ಯು ಡೂ ವೆನ್ ಐ ಏಮ್ ಎವೇ--ಇಸಿಂಟಿಟ್?
ಯು ಶುಡ್ ಕನ್ಸಲ್ಟ್ ಎ ಸೈಕಿಯಾಟ್ರಿಸ್ಟ್--ಇಮ್ಮಿಡಿಯಟ್ಲಿ--ಎಟ್ ಒನ್ಸ್--
ಸೈಕಿಯಾಟ್ರಿಸ್ಟ್ ಎಂಥದಕ್ಕೇ--ಸುಮ್ಮನೇ ತಮಾಷಿಗೆ ಹಾಕಿದ್ದಲ್ವೋ--
ತಮಾಷೆಗೆ ಅಂದ್ರೇನು--ದಿಸೀಸ್ ಎ ಸೀರಿಯಸ್ ಸೈಕಲಾಜಿಕಲ್ ಪ್ರಾಬ್ಲೆಮ್--
ವಿ ಶುಡ್ ಹೇವ್ ಎನ್ ಎಪಾಯಿಂಟ್ಮೆಂಟ್ ವಿದ್ ಎ ಸೈಕಿಯಾಟ್ರಿಸ್ಟ್--
ಆ ಮೇಲೆ ತರ್ಕಬದ್ಧವಾಗಿ ಯೋಚಿಸಿದಾಗ
ಭೂತಕಾಲದ ನೆನಪನ್ನು ಇಂದಿನ ಕಲೆ ಮಾಡುವ ಈ ಥರ ಕಲೆಯ
ವಾಸ್ತವದ ಮಧ್ಯೆ ಭ್ರಮಾಲೋಕ ಸೃಷ್ಟಿಸುವ ಈ ಥರದ ವೇಷ
ಮುಂದುವರಿಸಿಕೊಂಡು ಹೋಗಲು ಅನುವು ಮಾಡಿಕೊಟ್ಟು
ನಿತ್ಯದ ಯಾಂತ್ರಿಕ ಜೀವನಕ್ಕೊಂದು ರಂಗು ತಂದು
ಗಂಡನ ಸ್ಪ್ಲಿಟ್ಟಿಗೊಂದು ಯುನಿಟಿ ತರುವ ಈ ಕೆಲಸ
ಒಳ್ಳೇದೇ ಅಲ್ಲವೇ ಅನ್ನಿಸಿ
ಅಪಾಯಿಂಟ್ಮೆಂಟು ಕ್ಯಾನ್ಸಲ್ ಮಾಡಿದಳು. ಹೀಗಾಗಿ
ಹದಿನೈದು ದಿನಕ್ಕೊಮ್ಮೆ ಅರಸು ಕುಮಾರ ಅರಸನ ವೇಷ ಹಾಕುತ್ತಾನೆ;
ಬಿರುದು ಕೂಗೋದಕ್ಕೆ ಕ್ಯಾಸೆಟ್ ಬದಲು ಜನರು ಉಂಟು;
ಟಿಕೆಟ್ ಮಾರಲು ವ್ಯವಸ್ಥೆ ಉಂಟು;
ಓರಿಯಂಟಲ್ ಜೀವನಕ್ರಮದ ಪುನರುಜ್ಜೀವನ--
ಬನ್ನಿ--ನೋಡಿ--ಆನಂದಿಸಿ ಎಂಬ ಜಾಹೀರಾತು
ಪತ್ರಿಕೆಗಳಲ್ಲಿ ಆಗಾಗ ಬರುತ್ತದೆ; ಹೀಗೆ
ಅಮೆರಿಕೆಯಲ್ಲಿ ಭಾರತ, ಇಂದಿನಲ್ಲಿ ಹಿಂದು
ಹೊಸ ಜೀವನ ನಡೆಸಿಕೊಂಡು ಬರುತ್ತ ಇರುವಾಗ
ಮುಂಬೈಯಲ್ಲಿ ವಾಸಿಸುತ್ತಿರುವ ಅರಸನ ಇನ್ನೊಬ್ಬ ಮಗ
ತಾಯಿ ಕೂಡ ಸತ್ತ ಮೇಲೆ
ಗೋಡೆ ಜರಿದು ಬೀಳಲಾದ
ಮಾಡು ಕುಂಬು ಕುಂಬು ಆದ
ಅರಮನೆ ಮಾರಿ
ಪಾರ್ಟ್ನರ್ ಸೇರಿ
ಭುಜಬಲ ಚಕ್ರವರ್ತಿ ಆಗುವ ಬದಲು
ಕಲಾಚಕ್ರವರ್ತಿ ಆಗಬೇಕು
ಎಂದು ಯೋಚನೆ ಮಾಡಿಕೊಂಡು
ವಿದ್ಯುಚ್ಚೋರ ಕಾರ್ತೀಕ ರಿಸಿ ಕತೆ
ಸಿನೆಮಾ ತೆಗೆದ. ಅವನೇ ಹೀರೋ.
ಇಂದಿನ ಕಾಲದ ಮಿರರ್ ಎಂದು
ತಿಳಿದವರೆಲ್ಲಾ ಹೇಳಿದರೂನು
ಡಿಸ್ಟ್ರಿಬ್ಯೂಟರ್ಸ್ ಕಂಡೂ ಕಂಡು
ಥಿಯೇಟರಿನಿಂದ ಥಿಯೇಟರಿಗಲೆದು
ಎಷ್ಟೇ ಪ್ರಯತ್ನ ಪಟ್ಟರು ಕೂಡ
ಸಿನೆಮಾ ರಿಲೀಸ್ ಆಗಲೆ ಇಲ್ಲ.
ನಾಲ್ಕು ಸಾವಿರ ಉಂಟು ಇನ್ನು ಆರು ತಿಂಗಳಿಗೆ ಸಾಕಾದೀತು;
ಮೂರು ಸಾವಿರ ಉಂಟು--ಅರೇ--ಹದಿನೈದು ದಿನಕ್ಕೇ ಸಾವಿರ ಮುಗೀತು;
ಎರಡು ಸಾವಿರ ಉಂಟು ಇನ್ನು --ಬಡ್ಡಿಗೆ ಯಾರು ಸಾಲ ಕೊಟ್ಟಾರು--
ಮಾರವಾಡಿಯು ಕೊಟ್ಟೇ ಕೊಡುವ--ಬಡ್ಡಿಯ ಮುರಕೊಂಡು ಉಳಿದದ್ದು ಕೊಡುವ--
ವಸೂಲಿಗೆ ಯಾವಾಗ ಬಂದಾಗ ಏನೋ--ನೆರೆಕರೆಯವರು ಕೇಳುವ ಹಾಗೆ
ಬೈದೂ ಕಿರುಚಿ ವಸೂಲು ಮಾಡ್ತಾನೆ ಸಿಕ್ಕಿದ ಸಾಮಾನು ಎತ್ಕೊಂಡ್ಹೋಗಿ--
ಸಿನೆಮಾದಲ್ಲಿ ಎಕ್ಸ್ಟ್ರಾ ಆಗಿ ಟೀವಿಯಲ್ಲಿ ಯಾವ್ದಾದ್ರು ರೋಲು
ಸಿಕ್ಕದೆ ಏನು ಅಂತಂದ್ಕೊಂಡು ಗತ್ತಿನಿಂದ ಹೋಗಿ ಕೇಳಿ
ಸಿನೆಮಾ ಕೂಡಾ ಮಾಡಿದ್ದೇನೆ ಆಲ್ಬಂ ನೋಡಿ ಕ್ಯಾಸೆಟ್ ಕೊಡಲೇ,
ಹೇಳಿ ಕಳಿಸ್ತೇವೆ ನೀವು ಬೇಕಾದ್ರೆ ಹೊರಗಡೆ ಈಗ ಕಾಯ್ತಾ ಇರ್ರಿ,
ಹೊರಗಡೆ ಇದ್ದು ಕಾಯ್ತಾ ಕಾಯ್ತಾ ರೋಲು ಇದ್ರೆ ಕೊಡಿ ಸಾರ್ ಎಂದು
ಪ್ಲೀಸ್ ಸಾರ್ ರೋಲು
ಅವಕಾಶ ಸಾರ್ ಮರೆಯೋದಿಲ್ಲ ಇದ್ರೆ ಒಂದು ರೋಲ್ ಕೊಡಿ ಸಾರ್
ಹೇಗಾದರು ಮಾಡಿ ಎಡ್ಜಸ್ಟ್ ಮಾಡಿ ದಯವಿಟ್ಟು ಸಾರ್ ಒಂದು ರೋಲು ಕೊಡ್ರಿ
ಅಂತೂ ಕೊನೆಗೆ ಒಂದೆರಡು ಸಿಕ್ಕಿ
ದಿನಾ ಹೋಗ್ತಾ ಬರ್ತಾ ಹೀಗೇ
ಕೊನೆಗೆಲ್ಲಿ ತಲುಪಿದೆನು
ನಡೆದಂತೆ ಕಂಡವನು
ಎಂದು ಅರಸು ಕುಮಾರ ಮೂರನೇ ಉಪ್ಪರಿಗೆಯ
ಸಣ್ಣದೊಂದು ಕಿಟಿಕಿ ಇದ್ದ ತನ್ನ ಕೋಣೆಯಲ್ಲಿ--
ಒಣಗಿದ ವಸ್ತರ ಜಾಲಾಮಾಲಾ
ಪೇಪರು ಬಿದ್ದಿದೆ ಅಲ್ಲೀ ಇಲ್ಲೀ
ಆಚೇ ಮೂಲೇಲಿ ನೀರಿನ ಬಾಲ್ದಿ
ಇನ್ನೊಂದು ಕಡೆಗೆ ಸ್ಟವ್ವೂ ಪಾತ್ರೆ
ಮೂಲೆಲಿ ಉಂಟು ಮೀಯಲು ಗುಂಡಿ
ಅಲ್ಲಿಯೆ ನಲ್ಲಿ ನಲ್ಲಿಯ ಮೇಲೆ
ಜಿರಲೆ ಒಂದು ಸರ ಸರ ಓಡಿ ಹೋಗಿದ್ದನ್ನು ಕಂಡು ಎದ್ದು
ಪೇಪರು ಗದೆಯ ಮಾಡಿ ಪೆಟ್ಟು ಬೀಳುವಂತೆ ಎತ್ತಿ ಹೊಡೆದು
ತಪ್ಪಿಸಿಕೊಂಡು ಸಂದಿಯಲ್ಲಿ ನುಸುಳಿದ್ದನ್ನು ಕಂಡು ಕಾದು
ಅಹಾ ಮತ್ತೆ ಈಚೆ ಬಂತು ಪೊರಕೆ ಶಸ್ತ್ರ ಬಿಡಿಸಿ ಎತ್ತೆ
ಹೊರಗೆ ತಂದು ಪೊರಕೆಯಿಂದ ಶತ್ರು ಬೀಳುವಂತೆ ಬೀಸಿ
ಮತ್ತೆ ಎತ್ತಿ ಸೂಡಿಯನ್ನು ಸಾಯುವಂತೆ ಹೊಡೆದು ಒತ್ತಿ
ಅಂತೂ ಸತ್ತು ಬಿತ್ತು ಗೆದ್ದೆ ಮೀಯಬೇಕು ನೀರು ಬರಲಿ
ಬಣ್ಣ ಪೂರ ಹೋಗಬೇಕು ನೀರು ನೀರು ನೀರು ಬರಲಿ
ಬಿಚ್ಚಿ ವೇಷ ತೊಳೆಯಬೇಕು ಒಳಗೆ ಹೊರಗೆ ನಿರು ಬರಲಿ
ಉರಿಯುತ್ತುಂಟು ದೇಹ ಮನಸ್ಸು ನೀರು ನೀರು ನೀರು ಬರಲಿ
ನೆಲವ ಕೂಡ ಒರೆಸಬೇಕು--ಧೂಳು ತುಂಬಿದೆ--ನೀರು ಬರಲಿ
ನಾಲೆ ಗಂಟಲು ಒಣಗುತ್ತುಂಟು ಪಸೆಯೂ ಇಲ್ಲ ನೀರು ಬರಲಿ
ಹಕ್ಕಿಗೆ ಸಹಿತ ನೀರು ಇಲ್ಲ ಸುಡುವ ಗಾಳಿ ನೀರು ಬರಲಿ
ಇಳಿದು ಬರಲಿ ಇಳಿದು ಬರಲಿ ಗಂಗೆ ಸುರಿದು ಸುರಿದು ಬರಲಿ
ನೀರು ಬರಲಿ ನೀರು ಬರಲಿ ಜಗದ ಪ್ರಾಣ ನೀರು ಬರಲಿ
ನೀರು ಬರಲಿ ನೀರು ಬರಲಿ ಜೀವ ಜೀವನ ನೀರು ಬರಲಿ
ನೀರು ಬರಲಿ ನೀರು ಬರಲಿ ಉಕ್ಕಿ ಸೊಕ್ಕಿ ನೀರು ಬರಲಿ
ನೀರು ಬರಲಿ ನೀರು ಬರಲಿ ತುಂಬಿ ತುಂಬಿ ತುಂಬಿ ಬರಲಿ.
4
ಕಾರು ಲಾರಿ ಬಸ್ಸು ಆಟೋ
ಸ್ಕೂಟರು ಟ್ರಾಮು ಸೈಕಲ್ಲು ಗಾಡಿ
ಬಾಳೇಹಣ್ಣು ತರಕಾರಿ ಮಿಠಾಯಿ
ರೂಮಾ ಸಾರ್ ಫಾರಿನ್ ಸ್ಕಾಚು
ಗರ್ಲ್ಸ್ ಬೇಕಾ ತಾಜಾ ಮಾಲು
--ಹೀಗೇ ಶಬ್ದ ಏರಿ ಇಳಿದು
ಜನರು ಓಡಿ ನಡೆದು ತೆವಳಿ
ಕೊನೇ ವ್ಯಾಪಾರ ಭರ ಭರಾಟೆ
ನಡೀತಾ ಇರಲು ಬೇಡುವವರು
ರಾತ್ರಿ ಅನ್ನ ಬೇಡಿ ಆಗಿ
ಸ್ಲಮ್ಮೋ ಎಲ್ಲೋ ಹೋಗುತ್ತಿರಲು
ಒಬ್ಬ ತೊನ್ನ--ವಿದ್ಯುಚ್ಚೋರ--
ಮೂಗಿರುವೆಡೆ ಬರೀ ಹೊಳ್ಳೆ
ಕಣ್ಣಿನ ಸುತ್ತಾ ಕಟ್ಟಿದೆ ಪುಳುಕು
ಕೈಗೂ ಕಾಲಿಗು ಬ್ಯಾಂಡೇಜ್ ಸುತ್ತಿ
ಬೆರಳಿನ ತುದಿಗೊಂದು ಒಗ್ಗಿಯ ಪಾತ್ರೆ
ಸೊಂಟಕ್ಕೆ ಸುತ್ತಿದೆ ಹರಕು ಪ್ಯಾಂಟು
ಜಾರದ ಹಾಗಿದೆ ಪಟ್ಟೆಯ ನೂಲು
ಕೂಗ್ತಾ ಬರ್ತಾನೆ ತಾಯೀ ಕವಳ
ಮನೇ ಒಳಗಿಂದ ಹೆಂಗಸು ಬಂದು
ಜೊತೆಗೇ ಒಬ್ಬ ಹುಡುಗನ ಬಂದು
ಮೂಗು ಮುಚ್ಚಿ ಓಡಿ ಒಳಗೆ
"ಎಂಥಾ ಕೊಳಕರಿಗೆ ಭಿಕ್ಷೆ ಹಾಕ್ತೀ"
ಎಂದು ಬೈದರೂ ಹೆಂಗಸು ಮಾತ್ರ
"ಇರು ತರ್ತೇನೆ"--ಹೋದಳು ಒಳಗೆ.
ಅವಳು ಮರಳಿ ಬರೂದರಲ್ಲಿ
ವಿದ್ಯುಚ್ಚೋರ ಮನೆ ಒಳ ನುಸುಳಿದ.
ತಾಯಿ ಹೊರಗೆ ಬಂದು ನೋಡಿ
ಅತ್ತ ಇತ್ತ ಇಣುಕಿ ಹುಡುಕಿ
ಫಕ್ಕನೆ ಬಂದ ಫಕ್ಕನೆ ಹೋದ
ದೇವರು ಬಂದನೆ ಭಿಕ್ಷುಕ ರೂಪದಿ
ಈ ಥರ ಪವಾಡವು ಆದದ್ದುಂಟು,
ಭಜನಾ ಮಂಡಳಿ ಹೆಂಗಸು ಒಬ್ಬಳು
ಬಾಬಾ ನನ್ನ ಮನೆಗೆ ಬಂದ
ಎಂದು ಸೊಕ್ಕು ಮಾಡುತ್ತಿದ್ದಳು
ಬಾಬಾ ನನ್ನ ಮನೆಗೂ ಬಂದ,
ಬಂದವ ಬಾಬಾ ಇರಲೇ ಬೇಕು
ಫಕ್ಕನೆ ಬಂದ ಹರಸಿದ ಹೋದ
ಅನೇಕ ದಿನಗಳ ಒಳಗಿನ ಶೂನ್ಯ
ಇಂದಿಗೆ ತುಂಬಿತು ಬಂದವ ದೇವರೆ
ಎಂದು ದೊಡ್ಡಕ್ಕೆ ಕೂಗಿ ಹೇಳಿ
ಗಂಡ ಮಕ್ಕಳು ನೆರೆಕರೆ ಸೇರಿ
ಸಾಯಿರಾಮ ಸಾಯಿರಾಮ
ಸಾಯಿ ಸಾಯಿ ಸಾಯಿ ರಾಮ
ಮಾರು ವೇಷದಿ ಬಂದಿದ್ದ ರಾಮ
ಭಕ್ತರ ಕಣ್ಣಿನ ಬೆಳಕಿವ ರಾಮ
ಸಾಯಿರಾಮ ಸಾಯಿರಾಮ
ಸಾಯಿ ಸಾಯಿ ಸಾಯಿ ರಾಮ
ಎನ್ನುತ್ತ ಹಾಡುತ್ತ ಕುಣಿಯುತ್ತ ಭಜಿಸಿ
ಆ ಹೆಂಗಸಿಗೆ ವಿಶೇಷ ಆದರ
ಭಕ್ತ ಭಕ್ತೆಯರಿಂದ ಸಿಗುತ್ತಿದ್ದಾಗ
ಆಚೆ ಈಚೆ ಮನೆ ಜನ ಈಗ
ಕೊಚ್ಚಿಕೊಳ್ಳಲು ಮಡ್ಡಮ್ಮನಿಗೆ
ಮತ್ತೊಂದು ಅವಕಾಶ ಆಯ್ತು ಅಥವಾ
ತನ್ನ ಕಿಮ್ಮತ್ತು ಏರಿಸಿಕೊಳ್ಳಲು
ಸುಳ್ಳೇ ಈ ಪರಿ ಅಂತಾಳೊ ಏನೋ
ಎಂದು ಮಾತು ಆಡುತ್ತಿರಲು
ಭಜನೆ ಸಾಂಗ ನಡೆಯುತ್ತಿರಲು
ಮನೆ ಒಳ ಹೊಕ್ಕವ ತೊನ್ನನು ಚಿನ್ನದ
ಗಂಟನು ಹಿಡಕೊಂಡು ಹಿಂದಿನ ಬಾಗಿಲ
ಮೂಲಕ ಹೊರಬಂದು ತುಸು ದೂರ ನಡಕೊಂಡು
ಹೋದನು, ಬಳಿಕೊಂದು ಸುರಂಗವ ಹೊಕ್ಕನು,
ಅಲ್ಲಿಂದ ನೆಲದೊಳ ಕೋಣೆಗೆ ತಲುಪಿದ,
ಚಿನ್ನವ ಬಚ್ಚಿಟ್ಟು ಅಂಜನ ಹಾಕಿದ,
ತೊನ್ನನ ರೂಪವು ಹೋಯಿತು ಬಂದಿತು
ಸೂಟಿನ ಬೂಟಿನ ಸುಂದರ ರೂಪ
ಪರಿಮಳ ದ್ರವ್ಯದ ಗಂಧಿತ ರೂಪ;
ರಾತ್ರಿಯಲ್ಲೂ ಹಗಲಿನಂತಿದ್ದ ಆ ನೆಲಮಾಳಿಗೆಯಲ್ಲಿ
ಐದಾರು ಯುವತಿಯರು ಸಂಗೀತ ನಾದಕ್ಕೆ
ತಿರುಗಿಸಿ ಜಘನವ ಕೈಯ್ಯೂ ಕಾಲೂ ಕಣ್ಣೂ ಕತ್ತೂ
ಕಪ್ಪಗಿನ ಮೈಯ್ಯವಳು ಗೋಧೀಯ ಮೈಯ್ಯವಳು
ನಾಗವೇಣಿಯು ತುಂಬು ಕುಚ ಕುಂಭದವಳು
ಗುಂಭ ನಗೆಯವಳು
ಬಾಸ್ ಬಂದುದ ಕಂಡು
ಕುಣಿತ ನಿಲ್ಲಿಸಿ ಯುವತಿಯರು ನಿಂತಿರಲು ಗೌರವವ ತೋರುತ್ತ
ಡ್ರಿಂಕ್ಸ್ ಸರ್ವ್ ಮಾಡುತ್ತ ಅತ್ತಿತ್ತ ಸುಳೀತಿದ್ದ ಯುವಕಜನ ನಾಕೈದು
ಎಟೆನ್ಶನ್ನಲ್ಲಿ ಬಾಸ್ ನ ಆರ್ಡರ್ ಗೆ ಕಾದಿರಲು
ಬಾಸ್ ಡ್ರಿಂಕ್ಸ್ ತಕ್ಕೊಳ್ಳೋದಿಲ್ಲ, ಡಾನ್ಸ್ ಕೂಡಾ ಮಾಡೋದಿಲ್ಲ;
ಒಬ್ಬಳು ಯುವತಿ ಕಡೆಗೆ ಹಸನ್ಮುಖದಿಂದ ನೋಡುತ್ತಾರೆ, ಅನ್ನುತ್ತಾರೆ:
"ರೆಡಿ ಆಗು, ಫಾಸ್ಟ್."
ಆಕೆ ಆಗ ತುಂಡು ಲಂಗ ಬ್ರಾವ ಕಳಚಿ
ರೇಷ್ಮೆ ಸೀರೆ ಅರಿಶಿನ ಕುಂಕುಮ ಮಲ್ಲಿಗೆ ಹೂವು ಮಂಗಳ ಸೂತ್ರದ
ಮುತ್ತೈದೆ ಹಾಗೆ ವೇಷ ಧರಿಸಿ
ದಂಪತಿಗಳಂತಿರುವ ಅವರು ನಿನ್ನೆ ವಿದ್ಯುಚ್ಚೋರ
ಯಾವ ಹೊಟೆಲ್ಲು ಎದುರು ಭಿಕ್ಷೆಗಾಗಿ ಕೂತಿದ್ದನೋ ಅಲ್ಲಿ
ಬ್ರೇಕ್ ಪಾಸ್ಟ್ ಮಾಡಿ, ಯಾವ ಮನೆ ಮುಂದೆ
ನಿನ್ನೆ ಭಿಕ್ಷೆ ಬೇಡಿದ್ದನೋ ಅದೇ ಮನೆಯಲ್ಲಿ ಒಂದು
ಫಂಕ್ಷನ್ನಿಗೆ ಎಟೆಂಡ್ ಮಾಡಿ
ನೈಸಾಗಿ ಮಾತು ಆಡಿ
"ಅಯ್ಯೋ ಏನು ಸುಮ್ನೆ ಕೂತ್ರೀ--ಮಾತಾಡಿ--
ಏನಾದ್ರೂ ಮಾತಾಡಿ--ಮೌನಾಂದ್ರೆ ಬೇಜಾರು--
ಏನಾದ್ರೂ ಶಬ್ದ ಕೇಳ್ತಿರಬೇಕಪ್ಪಾ--ಇಲ್ಲಾಂದ್ರೆ ಬೇಜಾರು--
ಮಾತಾಡಿ--ಅಯ್ಯೋ--ಏನಾದ್ರೂ ಹೇಳಿ"--
ಇತ್ತ, ತೊನ್ನ ಕದ್ದ ಮನೆಯ ಒಳಗೆ
ಸಾಯಿಬಾಬನ ಅಖಂಡ ಭಜನೆ
ನಡೀತಾ ನಡೀತಾ ಬೆಳಗಾಗುವಾಗ
ಕಳವಾಗಿದೆ ಮನೇಲಿ ಚಿನ್ನ
ನಗದು ಕೂಡಾ ಕಾಣುತ್ತಿಲ್ಲ
ಬಂದವ ದೇವರು ಖಂಡಿತ ಅಲ್ಲ
ಕಳ್ಳ ಅಹಾ ಕಳ್ಳನೆ ಹೌದು
ಅಂತ ಒಬ್ಬರು ಕೂಗಿಕೊಂಡು
ನೆರೆಮನೆ ಜನರು ಭಕ್ತೆ ನೋಡಿ
ಚಪ್ಪಾಳೆ ತಟ್ಟಿ ತಮಾಷೆ ಮಾಡಿ
ಗಂಡ ನಾನು ಹೇಳ್ಲಿಲ್ವೆ ನಿನಗೆ
ಎಚ್ಚರ ಮುಖ್ಯ ಭಜನೆ ಅಲ್ಲ
ಎಂದು ಛೇಡಿಸಿ ಕೆದರುತ್ತಿರಲು
ಅವಳು ಅವನು ಸಾಯಿಬಾಬನೇ
ಕಳ್ಳತನ ಮಾಡ್ದವ ಖಂಡಿತ ಬೇರೆ
ಗಂಡ ರಾತ್ರಿ ಮನೇಲಿ ಮಲಗದೆ
ಸೂಳೇರ ಪುಕುಳಿ ಮೂಸೋಕ್ಹೋದರೆ
ಕಳ್ಳತನ ಆಗದೆ ಇನ್ನೇನಾದೀತು
ಎಂದು ಮಾತು ಕೆರೀತಿದ್ದಾಗ
ನಾಯಿಯ ಜೊತೆಗೆ ಪೊಲೀಸ್ ಬಂದು
ಹುಡುಕಲು ಹೋಗಿ ಹಿಡಕೊಂಡು ಸ್ಮೆಲ್ಲು
ಮತ್ತೆ ಹಾಗೇ ರಾತ್ರಿ ಆಗಿ
ವಿದ್ಯುಚ್ಚೋರ ಸಂತನ ಹಾಗೆ
---ಜೊತೆಗೆ ಒಬ್ಬ ಶಿಷ್ಯನು ಇರುವ--
ಪುನಃ ಕದ್ದು ನೆಲಮಾಳಿಗೆ ತಲುಪಿ
ಚಿನ್ನ ಇಟ್ಟು ಮರ್ಯಾದಸ್ಥ
ದಂಪತಿ ಆಗಿ ಶಾಪಿಂಗ್ ಮಾಡಿ
ಮಾರನೇ ದಿವಸ ಜೋಯಿಸ ಆಗಿ
ಆ ಮೇಲೊಬ್ಬ ಶರಣ ಆಗಿ
ಫಾದ್ರಿ ಮುಲ್ಲ ಗಿಳಿಯ ಶಕುನ
ಬಟ್ಟೆ ಪಾತ್ರೆ ಹೊತ್ತು ಮಾರುವ
ನಲ್ಲಿ ಕರೆಂಟು ರಿಪೇರಿ ಮಾಡುವ
ಥರ ಥರ ರೂಪದಿ ಮಾತಲಿ ಸಾಗಿ
ದಿನಾ ಕಳವು ಕಳವು ಕಳವು
ಮುಖ್ಯಮಂತ್ರಿ ಮನೇಲಿ ಕಳವು
ಜಡ್ಜು ಸಾಹೇಬ್ರ ಮನೇಲಿ ಕಳವು
ಐಜಿಪಿಯವರ ಮನೇಲಿ ಕಳವು
ಬ್ಯಾಕ್ ಮೇನೇಜರ್ ಮನೇಲಿ ಕಳವು
ಪೇಪರ್ ಎಡಿಟರ್ ಮನೇಲಿ ಕಳವು
ಸಿನೆಮಾ ಸ್ಟಾರು ಮನೇಲಿ ಕಳವು
ಟೀವಿ ಪ್ರೊಡ್ಯೂಸರ್ ಮನೇಲಿ ಕಳವು
ಯಾರಿಗೆ ಬೇಕು ಬಿಸಿ ಬಿಸಿ ಸುದ್ದಿ
ಹತ್ತು ಲಕ್ಷ್ಯ ನಗದು ಕಳವು
ಒಂದು ಕೋಟಿ ಚಿನ್ನ ಕಳವು
ಹಿಡಕೊಟ್ಟವರಿಗೆ ಕ್ಯಾಶ್ ಪ್ರೈಸು
ಯಾರಿಗೆ ಬೇಕು ಬಿಸಿ ಬಿಸಿ ಸುದ್ದಿ
ಗರಂ ಗರಂ ಹಾಟ್ ಹಾಟ್ ನ್ಯೂಸ್
ಎಂದು ಕೂಗುತ್ತಿದ್ದವನಿಂದ
ಪತ್ರಿಕೆ ಕೊಂಡು ಸುಂದರಾಂಗ
ವಿದ್ಯುಚ್ಚೋರ ಮೇಕ್ಶಿಫ್ಟ್ ಹೆಂಡತಿ
ದೇವಸ್ಥಾನದಿ ಪೂಜೆಯ ಸಲ್ಲಿಸಿ
ಪುರೋಹಿತರಿಗೆ ದಕ್ಷಿಣೆ ಕೊಟ್ಟು
ದೇವರ ತಲೆಗೆ ಚಿನ್ನದ ಕಿರೀಟ
ಮಾಡಿಸಿ ಕೊಡುವ ಭರವಸೆ ನೀಡಿ
ಗಂಟೆಯ ಢಂಢಣ್ ಹೊಡೆಯುತ್ತಿರಲು
ಮೊಬೈಲ್ ಫೋನು ರಿಂಗು ಆಗಿ
ಹೋಂ ಮಿನಿಸ್ಟ್ರು ಸಾಹೇಬ್ರು ತಮ್ಮ
ಥೆಫ್ಟಿಗೆ ಸಂಬಂಧಪಟ್ಟ ಹಾಗೆ
ನೋಡಬಯಸ್ತಾರೆ ಅಂತ ಮೆಸೇಜ್
ಬರಲು ಶ್ರೀಮಾನ್ ವಿದ್ಯುಚ್ಚೋರ
ಸಾಹೇಬರು ಸದ್ಯದ ಹೆಂಡತಿಯನ್ನು
ಕಾರಿನಲ್ಲಿ ಮನೆಗೆ ಕಳಿಸಿ
ಐಜಿಪಿ ಡೀಸಿ ವಿಜಿಲೆನ್ಸ್ ಕಮಿಶನರ್ ಮೊದಲಾದವರು ಎಟೆಂಡ್ ಮಾಡುತ್ತಿದ್ದ
ಕಳ್ಳನನ್ನು ಹಿಡಿಯಲು ಸ್ಟ್ರಾಟೆಜಿ ರೂಪಿಸುತ್ತಿದ್ದ
ಮೀಟಿಂಗ್ ಎಟೆಂಡ್ ಮಾಡಿ
ಸಾರ್ ಸಾರ್ ಕಳ್ಳನನ್ನು ಹಿಡಿಯೋದು ಹೇಗೆ ಸಾರ್
ಜಂಟಲ್ಮನ್ನು ಕಳ್ಳನೋ ಕಳ್ಳನೇ ಜಂಟಲ್ಮನ್ನೋ
ನನ್ನ ನಾನು ಹಿಡಿಯೋದು ಹೇಗೆ ಸಾರ್ ಹೇಗೆ ಸಾರ್
ಪೊಲೀಸರಿಗೆ ಜಡ್ಜುಗಳಿಗೆ ಮಂತ್ರಿಗಳಿಗೆ ಆಫೀಸರ್ರಿಗೆ
ವಿದ್ಯುಚ್ಚೋರ ಕಳ್ಳನ ವೇಷ ಕಳ್ಳ ವಿದ್ಯುಚ್ಚೋರನ ವೇಷ
ಹಾಕಿಕೊಂಡು ತಿರುಗ್ತಾರೇಂತ ಗೊತ್ತಾದಾಗ ಏನ್ಮಾಡ್ತಾರೆ?--
ಕಳ್ಳತನ ಮಾಡ್ಕೊಂಬಿಟ್ಟು
ವಿದ್ಯುಚ್ಚೋರನ ಮೇಲೆ ತಪ್ಪು ಹೊರಿಸಿ
ಆರಾಮಾಗಿ ತಿರುಗ್ತಿರ್ತಾರೆ--
ಆಗ ಇಡೀ ನಾಡು ತುಂಬಿ
ಕಳ್ಳನೂ ಅವನ ಹಿಡಿವ ಜಂಟಲ್ಮನ್ನೂ ತುಂಬಿ ಹೋಗಿ
ಜಡ್ಜು ಯಾರು ಕಳ್ಳ ಯಾರು
ಮುಗ್ಧ ಯಾರು ಪಾಪಿ ಯಾರು
ಮುಖ ಎಲ್ಲಿ ಮುಖವಾಡ ಎಲ್ಲಿ
ವೇಷ ಹಾಗೂ ಒಳಗಿನ ಬತ್ತಲೆ
5
ಎಂದು ಅರಸು ಕುಮಾರ ಮೂರನೇ ಉಪ್ಪರಿಗೆಯ
ಸಣ್ಣದೊಂದು ಕಿಟಿಕಿ ಇದ್ದ ತನ್ನ ಕೋಣೆಯಲ್ಲಿ
ಕೂತಿದ್ದಾಗ ನೆನೆಸಿಕೊಂಡು
ವಾರಕ್ಕೊಮ್ಮೆ ಬರುವ ಅವನ
ಖಾಯಂ ವೇಶ್ಯೆಯು ಬಂದಳು ಅಲ್ಲಿಗೆ.
ಹಣ ಪೂರಾ ಮುಗಿದ ಮೇಲೆ
ಸಿಕ್ಕೋದಿಲ್ಲ ಎಲ್ಲೂ ರೋಲು
ಸಿಕ್ಕರೆ ಸಾಕು ಹೊಟ್ಟೆಗೆ ಮಾತ್ರ
ಅಥವಾ ಸಾಕು ಬಟ್ಟೆಗೆ ಆಗ
ಕಂಡಕ್ಟರ ಜೊತೆಗೆ ಜಗಳ
ಹೋಟೆಲ್ ಮಾಣಿ ಜೊತೆಗೆ ಜಗಳ
ಅಂಗಡಿಯವನ ಜೊತೆಗೆ ಜಗಳ
ಪಕ್ಕ ನಡೀತಿದ್ದವನ ಜೊತೆಗೆ ಕೂಡ
ಧ್ವನಿಯು ನಡುಗಿ ಬೆರೆ ಬೆರೆ ಮಾತು
ಹೇಗೋ ರೂಮಿಗೆ ಬಂದು ಬಿದ್ದು
ಬೋಳೀಮಕ್ಕಳು ಕಲಿಸ್ತೇನೆ ಬುದ್ಧಿ
ಅಂತ ಮಾಡ್ಕೊಂಡು ಮಾಸ್ಟರ್ಬೇಷನ್,
ಪುನಃ ಎದ್ದು ಬೀದಿಗೆ ಬಿದ್ದು
ಕಡಲೇಪುರಿಯೊ ಇಡ್ಲಿಯೊ ತಿಂದು
ಮತ್ತೂ ಕುಡಿದು ಕಾಲೆಳಕೊಂಡು
ರೂಮಿಗೆ ಅಂತ ಗುರಿ ಇಟ್ಟಾಗ
ಸಾರ್ ಸಾರ್ ಗರ್ಲ್ಸ್ ಬೇಕಾ ಬೇಕಾ ಸಾರ್ ಬೇಕಾ ಸಾರ್
ಫಕ್ಕಿಂಗ್ ಗರ್ಲು ಸಕ್ಕಿಂಗ್ ಗರ್ಲು ಬೇಕಾ ಸಾರ್ ಬೇಕಾ ಸಾರ್
ಸಿನೆಮಾ ಸ್ಟಾರು ಕಾಲೇಜು ಹುಡುಗಿ ಬೇಕಾ ಸಾರ್ ಬೇಕಾ ಸಾರ್
ಅಂತ ಹತ್ತು ವರ್ಷದ ಹುಡುಗ
ಕೇಳ್ತಾ ಹಿಂದ್ಹಿಂದೆ ಹಿಂದ್ಹಿಂದೆ ಬಂದು
ಇವನೂ ಅವನ ಹಿಂದ್ಹಿಂದೆ ಹೋಗಿ
ಇವಳಿಗೂ ಅವನಿಗೂ ಪರಿಚಯ ಆಯ್ತು.
ಮದುವೆ ಆಗಲು ಸಂಪಾದ್ನೆ ಸಾಲದು;
ಆ ಮೇಲೆ ಹೋದ್ರೂ ದಿನಕ್ಕೊಬ್ರ ಹತ್ರ
ಕೊನೆಗೆ ಇವಳೇ ವಾಸಿ ಅನ್ನಿಸಿ
("ನನ್ನೂರು ಹಳ್ಳಿ. ಐವತ್ತು ಮೈಲಿ.
ಟೈಪು ಕುಟ್ಟಿ ಸೀರೆ ಮಾರಿ
ಲಿಪ್ಸ್ಟಿಕ್ ಹಾಗೂ ಪೌಡರ್ ಕ್ರೀಮು
ಅಂತ ಹೇಗೋ ಜೀವನ ಮಾಡ್ತಾ
ಇದ್ದಾಗ ಒಬ್ಬ ಮದುವೆ ಮಾಡ್ಕೊಂಡು
ಇಲ್ಲಿಗೆ ತಂದ. ಬಂದವ್ನೇ ಅಂದ:
"ನೀನೂ ದುಡಿದು ನನ್ನೂ ಸಾಕು."
ಸಂಜೆ ಯಾರನ್ನೋ ಕರ್ಕೊಂಡೂ ಬಂದ.
ಗವರ್ನರ್ ಅಂತೆ. ಅಂದರು ಅವರು:
"ಅಧಿಕಾರಕ್ಕೆ ನೀನು ಭಯ ಪಡಬೇಡ;
ಆದರೆ ಹೀಗೆ ಹೊರಗಡೆ ಬೇಡ;
ಖಾಸಗಿ ಜಾಗಕ್ಕೆ ಕರ್ಕೊಂಡು ಹೋಗು."
ನಾ ಅದಕ್ಕಂದೆ: "ದೊಡ್ಡವರು ನೀವು ಅಂತ ಆದರೆ
ಅದನ್ನು ದಯವಿಟ್ಟು ಈಗ ತೋರಿಸಿ;
ವರ್ತನೇಲಿ ನಿಮ್ಮ ವಿವೇಚನೆ ತೋರಿಸಿ."
"ಎಷ್ಟು ಚೆನ್ನಾಗಿ ಮಾತಾಡ್ತೀ ನೀನು.
ಇನ್ನೂ ಕೇಳೋಣ ಅನ್ನಿಸ್ತದೆ" ಎಂದರು.
"ಖಾಯಿಲೆ ಕೊಳ್ಳೋಕೆ ಔಷಧಿಗಿಂತ ಹೆಚ್ಚಿಲ್ಲಿ ದುಡ್ಡು
ಖರ್ಚು ಮಾಡೋದು ನೋಡಿದೆ" ಎಂದೆ.
"ಈ ಸ್ಥಿತಿಂದ ದೇವರು ನನ್ನ ಬಿಡುಗಡೆ ಮಾಡಲಿ,
ಆಕಾಶದ ಶುದ್ಧ ಗಾಳಿಲಿ ಹಾರುವ
ಸಣ್ಣದೊಂದು ಹಕ್ಕಿ ಆದರೂ ಮಾಡಲಿ" ಎಂದು ನಾ ಅಂದೆ.
"ಇಂಥಾ ಜಾಗದಲ್ಲಿ ಇಷ್ಟು ಚೆನ್ನಾಗಿ ಮಾತಾಡೋರು
ಸಿಗ್ತಾರೆ ಅನ್ನೋದು ಗೊತ್ತೇ ಇರಲಿಲ್ಲ.
ನೀ ಹೇಳಿದ ಆ ಹಕ್ಕಿ ವಿಷಯ
ಪಬ್ಲಿಕ್ ಸ್ಪೀಚಲ್ಲಿ ಹೇಳಿದೆ ಅಂದರೆ
ಚಪ್ಪಾಳೆ ಎಲ್ಲಾ ನನಗೇ ಸಿಗುತ್ತೆ.
ತಗೋ--ಇಂಥಾ ಮಾತಿಗೆ
ಹೆಚ್ಚೇ ಇರಲಿ ಹತ್ರುಪಾಯಿ ನಿನಗೆ"
ಅಂತ ಎಳ್ಕೊಂಡು ಕೋಣೆಗೆ ಹೋದರು.
ಮಾರನೇ ದಿನ ಗಂಡ ಇನ್ನೊಬ್ನ ತಂದ.
ಒಪ್ದಿದ್ರೆ ಹೊಡೆದ. ಕೆಟ್ಟಿದೆ ನಡತೆ ಅಂತ ಅಂದು
ಕಳಿಸಿ ಅಪ್ಪನ ಮನೆಗೆ ವಾಪಾಸು
ಆಗದ ಹಾಗೆ ತಂಗೀರ ಲಗ್ನ
ಮಾಡ್ತೀನಂತ ಹೆದರಿಸ್ತಿದ್ದ.
ಅವನ ಕಾಟ ಸಹಿಸೀ ಸಹಿಸೀ
ಓಡಿಸ್ಬಿಟ್ಟೆ ಕೊನೆಗೊಂದು ದಿವಸ.
ಎಕ್ಸ್ಟ್ರಾ ಆಗೂ ಕೆಲ್ಸ ಮಾಡಿದ್ದೀನೆ;
ಸ್ಟುಡಿಯೋಲ್ಲಿ ಆಗ ನಿಮ್ ನೋಡಿದ್ದೀನಿ. ನಾನೇ ನಿಮಗೆ
ಬೇಕು ಅನ್ಸಿದ್ದು ಯಾತಕ್ಕಂತೆ?"
"ನನಗೆ ಗೊತ್ತಿಲ್ಲ--ಖಂಡಿತ--ನನಗೆ ಗೊತ್ತಿಲ್ಲ."
"ಇಟ್ಕೊಳ್ಳಿ ನನ್ನೇ ನೀವು ಖಾಯಂ.
ವಾರಕ್ಕೊಮ್ಮೆ ಬಂದು ಇರ್ತೇನೆ
ಹೆಂಡ್ತಿ ಹಾಗೆ ಇನ್ನಿಂದ ಮುಂದೆ.")
ತರಕಾರಿಗವಳು ಚೀಲ ಹಿಡಿದು
ಎಣ್ಣೆಗವನು ಕ್ಯಾನು ಹಿಡಿದು
ಇವರಿಂದ ನಾನೊಂದು ಮಗುವನ್ನು ಪಡಿಲೇ?
ಹಣ ಎಲ್ಲುಂಟು ಸಾಕೋದಕ್ಕೆ?
ರಸ್ತೆಲಿ ಮಕ್ಕಳು ಕರೆಯುತ್ತಾವೆ
ಅಮ್ಮಾ ತಾಯೀ ಭಿಕ್ಷಾ ಧರ್ಮ--
ಸಂಸಾರ ಮಾಡಿದ್ರೆ ಹೇಗಾದೀತು
ಮದುವೆ ಆಗಿ ಇವಳ ಜೊತೆಗೆ?
ರಿಲೇಟಿವ್ಸ್ ಇಲ್ಲ, ಫ್ರೆಂಡ್ಸೂ ಇಲ್ಲ,
ನನ್ನವ್ರನ್ನೋರು ಯಾರೂ ಇಲ್ಲ,--
ಅಭ್ಯಾಸ ಆದೋಳು ಸೂಳೇ ಕೆಲಸ
ಸಂಸಾರ ನಡೆಸೋದೆಲ್ಲಾದ್ರುಂಟೇ?
ಊಟ ಮಾಡಿ ಇನ್ನೂ ಸ್ವಲ್ಪ
ಅಂತ ಅವಳು ಜುಲುಮೆ ಮಾಡಿ,
ನೀನು ಹೀಗೇ ದಪ್ಪ ಆದ್ರೆ
ತಬ್ಬೋಕೆರಡೂ ಕೈಯ್ಯೂ ಸಾಲದು
ಎಂದು ಅವನು ತಮಾಷೆ ಮಾಡಿ
ಮಾರನೆ ದಿವಸ ಅವಳು ಅವಳ ಡ್ಯೂಟಿಗ್ಹೋದ್ಲು;'
ರೋಲ್ ಸಿಕ್ಕೀತೋ ಎಂದು ಅವನು ಕಾಯೋಕ್ಹೋದ.
6
ರಿಸಾರ್ಟ್ ಶೃಂಗಾರ ಆಗುತ್ತ ಇದ್ದಾಗ
ಅರಮನೆ ಹಿಂದಿನ ಕತೆ ಕತೆ ಕಾಂಚಣ
ಜನ ಜನ ನಡು ನಡು ಸುತ್ತುತ್ತ ಸುಳಿಯುತ್ತ
ಇಂತಿಂತು ಪರಿ ಪರಿ ಹೊರಬರುತ್ತಿತ್ತು:
ದೂರದ ಊರಲ್ಲಿದ್ದನು ಒಬ್ಬನು
ಬಿಲ್ಲನು ಬಾಣವ ಕತ್ತಿಯ ಹಿಡಿದನು
ಐದಾರು ಜನರದ್ದು ಗುಂಪೊಂದು ಕಟ್ಟಿದ
ಬೇಟೆಯ ಆಡುತ್ತ ಆಡುತ್ತ ಬಂದನು
ಇಲ್ಲಾಗ ಕಂಡನು ನೀರನು ನೆರಳನು.
ಕರಡಿಯು ಎದುರು ಬಂದಿತ್ತಾಗ
ಕರಡಿಯನ್ನು ಹೊಡೆದು ಕೊಂದ;
ಹಂದಿ ಎದುರು ಬಂದಿತ್ತಾಗ
ಹಂದಿಯನ್ನು ಗುದ್ದಿ ಕೊಂದ;
ಹುಲಿಯು ನೆಗೆದು ಬಂದಿತ್ತಾಗ
ಹುಲಿಯ ನಖದಿ ಸಿಗಿದು ಕೊಂದ;
ಚಿರತೆ ಪುಟಿದು ಬಂದಿತ್ತಾಗ
ಚಿರತೆಯನ್ನು ಇರಿದು ಕೊಂದ;
ಹಾವುಗಳನ್ನು ಸುಟ್ಟು ಕೊಂದ,
ಏಡಿ ಚೇಳು ಮೆಟ್ಟಿ ಕೊಂದ,
ಗಿಡಗಳ ಬೆಳೆಯಿಸಿ ಕಾಲುವೆ ತೋಡಿಸಿ
ರಸ್ತೆಯ ಮಾಡಿಸಿ ಅಂಗಡಿ ನಿರ್ಮಿಸಿ
ಶಾಲೆಯ ಕಟ್ಟಿಸಿ ಪುಸ್ತಕ ಬರೆಯಿಸಿ
ರಾಜ್ಯವ ಕಟ್ಟಿದ ಅರಮನೆ ಕಟ್ಟಿದ;
ವೈರಿಯ ಎಳೆತಂದು ನೊಗಕ್ಕೆ ಕಟ್ಟಿದ;
ಮಕ್ಕಳು ಹುಟ್ಟಲು ತೊಟ್ಟಿಲು ಕಟ್ಟಿದ.
ಮಕ್ಕಳ ಒಳಗೇ ಪೈಪೋಟಿ ಬೆಳೆದು
ಒಬ್ಬನು ಅಪ್ಪನ ಜೈಲಿಗೆ ತಳ್ಳಿ
ತಾನೇ ರಾಜಾಂತ ಘೋಷಿಸಿಕೊಂಡು
--ಸಾವಿರ ರೂಪದ ಸಾವಿಗೆ ಶರಣು
ಕರುಣೆಲಿ ಕರೆದೊಯ್ಯೊ ಪ್ರಭುವೇ ನಿನ್ನ
ಪಾದ ಬೆಳೆಸಿತ್ತ ನಿಧಾನ--
ಜನಗಳು ಪಟ್ಟಾಭಿಷೇಕಕ್ಕೆ ಬಂದು
ಶವ ಮೆರವಣಿಗೆ ಬೊಜ್ಜದ ಊಟ
ಮದುವೆಯ ಊಟ ಪ್ರಸ್ತದ ಊಟ
ನಾಮಕರಣದೂಟ ಆಟ ಪಾಠ
ಹೀಗೇ ನಡೀತಾ ಹೋಗ್ತಿದ್ದಾಗ
ಬ್ರಿಟಿಷರು ಬಂದು ರಾಜ್ಯವ ಪಡೆದು
ಅವರದ್ದೇ ಸೈನ್ಯ ಅವರದ್ದೇ ಭಾಷೆ
ಅವರದ್ದೇ ರೀತಿ ಅವರದ್ದೇ ನೀತಿ
ಎಲ್ಲಾ ಕಡೆಗೆ ತುಂಬ್ಕೊಂಡಿರಲು
ಬುಲಾವ್ ಬಂತು:
ಒಪ್ಪಿಸು ದೇಶ; ಇಲ್ಲದೆ ಹೋದರೆ
ಮಾಡ್ತೇವೆ ನಾಶ.
ರಾಜರು ಮಂತ್ರಿ ಸೇನಾಧಿಪತಿ ವಿಚಾರಿಸಲು ಅವರಂದರು:
ಶಸ್ತ್ರಾಭ್ಯಾಸ ಮಾಡದೆ ವರ್ಷಾನುಗಟ್ಟಲೆ ಆಯ್ತು;
ಯುದ್ಧಶಸ್ತ್ರಗಳು ತುಕ್ಕು ಹಿಡಿದಿವೆ;
ಕೆಲವು ತಂತ್ರ ಬಳಸೋದು ಹೇಗೇಂತ ಗೊತ್ತಿಲ್ಲ;
ಬರೆದಿಟ್ಟದ್ದು ಓದೋರಿಲ್ಲ; ಓದಿ ಹೇಳಿದರೂ ಅರ್ಥ ಆಗಲ್ಲ;
ಆದ್ದರಿಂದ, ಯುದ್ಧ ಬೇಡ, ಮೇಲುಸ್ತುವಾರಿ ನೀವು ನೋಡ್ಕೊಳ್ಳಿ,
ಮಾಂಡಲೀಕರಾಗಿ ಮುಂದುವರೀತೇವೆ ಅಂತ ವಿನಂತಿಸಿಕೊಳ್ಳೋಣ ಅಂದರು.
ಅದರಂತೆ ರಾಜರು
ಬ್ರಿಟಿಷರ ಭಾಷೆ ಕಲಿತ್ಕೊಂಬಿಟ್ರು
ಅವರದ್ದೆ ಡ್ರೆಸ್ಸು ಹಾಕ್ಕೊಂಬಿಟ್ರು
ಅವರ ಹಾಗೇ ಹೇರಿನ ಸ್ಟೈಲು
ಅವರ ಹಾಗೇ ಮೀಸೆಯ ಹುರಿಯು
ಅವರ ಹಾಗೇ ನಿಲ್ಲೋ ಕ್ರಮವು
ಅವರದ್ದೇ ಊಟ ಅವರದ್ದೇ ತಿಂಡಿ
ಕನ್ನಡಿ ಮುಂದೆ ನಿಂತು ಪ್ರಾಕ್ಟೀಸು
ಕನ್ನಡ ಮರೆಯುವ ಹಾಗೆ ಸಲೀಸು.
ನಾಕೈದು ಜನರ ಜೊತೆ ಮಾಡ್ಕೊಂಡು
ಬ್ರಿಟಿಷ್ ದೊರೆಗೆ ವಿರುದ್ಧ ಹೋಗಿ
ಅಂತ ಯಾರು ಏನೇ ಅಂದರು
ನಾವ್ ಮಾತ್ರ ಹಾಗೆ ಮಾಡೋರಲ್ಲ
ನಿಮಗೆ ನಮ್ಮದು ಪೂರಾ ಸಪೋರ್ಟು
ಅಂತ ದೊರೆಗಳಿಗೆ ತಿಳಿಸಿ ಬರೋಣ
ಅಂದ್ಕೊಂಡು ಮುಂದಕ್ಕೆ ಹೋಗ್ತಿದ್ದಾಗ
ಕಾಡು ಎಂದರೆ ಎಂಥಾ ಕಾಡು--
ಹುಲಿಗಳು ಚಿರತೆ ಆನೆಯು ತೋಳ
ಮುಂಗುಸಿ ಸಿಂಹ ಹಂದಿಯು ಮೊಲವು
ಸುಳಿ ಹೊಳೆ ಗುಡ್ಡೆ ಬಂಡೆಯು ಕಣಿವೆ
ತುರಿಸಣಿ ಬಳ್ಳಿ ಚೀಮುಳ್ಳು ಬಲ್ಲೆ
ಚಿರ್ಪಿನ ಮರಗಳು ಅಳು ನಗು ಹಕ್ಕಿ
ಜಲಪಾತ ಬೀಳ್ತಿದೆ ಉಕ್ಕೀ ಸೊಕ್ಕೀ--
ಹೀಗೇ ಕಾಡಲ್ಲಿ ಅಲೀತಾ ಇರಲು
ಮರದ ಮೇಲೊಬ್ಬನು ಉರ್ಬುಳಿ ಮನುಷ್ಯ
ಇವರನ್ನು ಕಂಡವ ಹತ್ತಿರ ಕರೆದ
ಕೊಂಬೆಗೆ ಕೊಂಬೆಗೆ ಪುಟು ಪುಟು ಹಾರಿದ
ಕೆಳಗಡೆ ಜಿಗಿದ ತಿತ್ತಿರಿ ತಿರುಗಿದ.
ಬಳಿಕಿಂತೆಂದ:
ಹೀಗೇ ಕಾಡಲ್ಲಿ ಹೋದರೆ ಮುಂದೆ
ಒಂದೇ ಒಂದು ಉಂಟು ಮರ;
ಹಾವುಗಳೆಲ್ಲಾ ಒಟ್ಟಿಗೆ ಹೆಣೆದು
ಆಗಿದೆ ಅದರ ಬುಡ;
ಕೊಂಬೆಗೆ ನೇತಿದೆ ಟಗರು ಮುಖ;
ಏಳು ಜನ ಮಾತೆಯರು ಆ ಮರದ ಮೇಲೆ ಪವಡಿಸಿದ್ದಾರೆ;
ಅವರೂ ನೋಡುವುದಕ್ಕೆ ಹಣ್ಣಿನಂತಿದ್ದಾರೆ;
ಅವರ ಮೊಲೆಗಳಿಂದ ಹಾಲು ಹರಿಯುತ್ತಿದೆ;
ನೋಡುವುದಕ್ಕೆ ಆ ಮರವೂ ಎಲ್ಲಾ ಮರಗಳಂತೆ ಕಾಣುವುದು;
ಆದರೆ ಅದನ್ನು ಮಾತಾಡಿಸಿದರೆ
ಯಾವುದೇ ಭಾಷೆಯಲ್ಲಿ ಮಾತಾಡಿಸಿದರೂ
ಹಿಂದೆ ನಡೆದದ್ದೆಲ್ಲವನ್ನೂ ನಿನಗೆ ಹೇಳುವುದು;
ಹಿಂದಿನವರು ತಿಳಿದದ್ದನ್ನೂ ಬರೆದಿಟ್ಟದ್ದನ್ನೂ ಯೋಚಿಸಿದ್ದನ್ನೂ
ಯೋಚನೆಗೆ ಬಾರದೆ ಮನಸ್ಸೊಳಗೇ ಉಳಿದದ್ದನ್ನೂ
ನಿನಗೆ ತಿಳಿಸುವುದು; ಆ ಮೇಲೆ ಶತ್ರುವಿನ ಎದುರು ನಿಂತರೆ
ಅವರ ಶಕ್ತಿ ನಿಂದಾದೀತು; ಬಳಿಕ
ನಿನ್ನ ಯಾರೂ ಗೆಲ್ಲ.
ಹೀಗೆಂದು ಅಂದು ಮರವನು ಹತ್ತಿ
ಗೆಲ್ಲಿಂದ ಗೆಲ್ಲಿಗೆ ಹಾರುತ್ತ ಹೋದನು
ಎತ್ತೋ ಏನೋ ಕಾಡಿನ ವಾಸಿ.
ಅಹಾ ಇನ್ನು ಹೆದರ್ಬೇಕಿಲ್ಲ,
ನನ್ನನ್ನು ಗೆಲ್ಲಲು ಯಾರಿಂದ್ಲು ಆಗದು--
ಹೀಗಂತ ಕಾಡಲ್ಲಿ ಮುಂದಕ್ಕೆ ಹೋಗಿ
ಒಂದೊಂದಾಗಿ ಮರಗಳ ಕಂಡು
ಕನ್ನಡ ಕೊಂಕಣಿ ತಮಿಳು ಮಲೆಯಾಳ
ಹಿಂದಿಯೊ ತುಳುವೋ ಕೊಡಗೋ ಉರ್ದೋ
ಕೈಕರಣವೊ ಚೇಷ್ಟೆಯೊ ನೋಟವೊ ನಗೆಯೋ
ಯಾವುದೆ ಭಾಷೆಲಿ ಮಾತಾಡಿಸಿದರೂ
ಮರಗಳು ಸುಮ್ಮನೆ ನೋಡ್ತಾ ಇದ್ದವು.
ಎಲ್ಲ ಮರಗಳ ಕಡಿದೇ ಬಿಡುವ,
ಮಾತಾಡುವ ಮರ ಏಟಿಗೆ ಖಂಡಿತ
ಚೀರಿಯೆ ಚೀರುವುದು.
ಹೀಗೆಂದು ಮರಗಳ ಕಡಿಸೀ ಕಡಿಸಿ
ಹಕ್ಕಿಗಳು ಚೀರಿಕೊಂಡು ಹಾರಿ ಹಾರಿ ಬಂದವು;
ಮೃಗಗಳು ಘರ್ಜಿಸಿ ಓಡಿ ಓಡಿ ಬಂದವು.
ನಗರದ ಮೇಲೆಲ್ಲ ಹಕ್ಕಿಗಳು
ಮನೇಲಿ ರಸ್ತೆಲಿ ಪ್ರಾಣಿಗಳು
ಹಾವೂ ಮುಂಗುಸಿ ಚೇಳುಗಳು
ಹುಲಿ ಸಿಂಹ ಚಿಂಪಾಂಜಿ ಕೋತಿಗಳು.
7
ರಿಸಾರ್ಟ್ ಮಾಡ್ತಾ ಇದ್ದ ಅಮೇರಿಕದವನ್ಗೆ ಉಂಟು
ಟರ್ಮಿನಲ್ ಸೀಡ್ಸಿನ ಮತ್ತೊಂದು ಕಂಪನಿ,
ಗ್ರಾನೈಟ್ ಕೋರೆ, ಹಾಗೂ ಕಲ್ಲಿದ್ದಲು ಗಣಿ ಆರು,
ಬೋಫರ್ಸ್ ಫಿರಂಗಿಲಿ ಮೇಜರ್ ಶೇರು.
ರಿಸಾರ್ಟಿನಲ್ಲಿ ರಿಸೆಪ್ಶನಿಸ್ಟ್ ಹಿಂದಿನ ಅರಮನೆ ಶಾನುಭೋಗರ ಪುಳ್ಳಿ;
ಬಾರ್ಮೇಡ್ಸ್ ಊರಿನ ಹುಡುಗೀರು ಏಳು;
ವೇಟರ್ಸ್ ಊರಿನ ಹುಡುಗೀರು ಎಂಟು;
ಸೂಪರ್ವೈಸರ್ ಫಿಲಾಸಫಿ ಎಂ. ಎ. ಪ್ಲಸ್ ಡಿಪ್ಪಿನ್ ಸ್ಯಾನ್ಸ್ಕಿಟ್;
ಇಂಫಾರ್ಮೇಷನ್ ಸೆಂಟರಿನಲ್ಲಿ ಕ್ವೆರೀಸ್ ಆನ್ಸರಿಗೆ ಇದ್ದಾರೆ ನೈನು ಜನ
ಭೋಜರಾಜನ ಆಸ್ಥಾನದಲ್ಲಿದ್ದಂತೆ ನವರತುನ:
ಅಮೆರಿಕದ ಎಕ್ಸೆಂಟಿಲಿ ಅಮೆರಿಕದವರೆ ಅನ್ನುವ ಹಾಗೆ
ಫೋನಲ್ಲಿ ಮಾತಾಡಿ ನಾಲಗೆ ಶಾರದೆ ನೋಯುತ್ತ ಇದ್ದರು
ನೆಗ್ಲೆಕ್ಟ್ ಮಾಡದೆ ಡ್ಯೂಟಿ ಮಾತಾಡ್ತಾ ಮಾತಾಡ್ತಾ ಇದ್ದರು.
ಎಂಬಿಬಿಎಸ್ ಮಾಡಿದ್ದ ನೇಟಿವ್ವು ಡಾಕ್ಟರ್ಸ್
ಪೇಶಂಟ್ಸು ಹೇಳಿದ್ದ ವಿವರವ ಇಲ್ಲಿಂದ
ಅಮೆರಕದ ಡಾಕ್ಟರ್ಸ ಪ್ರಿಸ್ಕ್ರಿಪ್ಶನ್ನ ಅಲ್ಲಿಂದ
ಟ್ರಾನ್ಸ್ಕೈಬು ಮಾಡುವ ಕೆಲಸದಲಿದ್ದರು.
ನಾಟ್ಯಗಳ ಸಂಗೀತ ಬಲ್ಲಂಥ ಆರ್ಟಿಸ್ಟು
ಗೀತವ ಬರೆಯುವ ಪ್ರತಿಭೆಯ ಕವಿಗಳು
ಆರ್ಕೆಸ್ಟ್ರ ಮೇಳದ ಪಡೆಯಲ್ಲಿ ಇದ್ದರು.
ಎಂಥೆಂಥ ಚಿತ್ರವ ಚಿತ್ರಿಸುವ ಚಿತ್ರಕರು
ಲಂಡನ್ನು ನಯಗಾರ ಕರ್ಜನ್ನು ದರ್ಬಾರು ಚಿತ್ರಿಸುತ್ತಿದ್ದರು.
ರಿಸಾರ್ಟ್ ಓನರ್ರು
ವಿ ಶುಡ್ ಟೀಚ್ ದೀಸ್ ಪೀಪ್ಲ್ ಟು ಬಿ ಸಯಂಟಿಫಿಕ್ ಅನ್ನುವವ
ಆದರೂ ಮಾಡಿದರೆ ಹೌಸ್ ವಾರ್ಮಿಂಗ್ ಸೆರೆಮನಿಯ
ಜನಕ್ಕೆ ಇವ ಆದರೂ ಹೊರಗಿನವ ಪರಂಪರೆಯ
ಮರೆತಿಲ್ಲ ಎನಿಸುವುದು ಹೆಚ್ಚುವುದು ಬಿಸಿನೆಸ್ಸು
ಎಂದು ಏಡ್ಸ್ ಅಂದದ್ದು ಕೇಳಿ ನಿಜವೇ ಎಂದು
ಹೋಮದ ಧೂಮ ಹಬ್ಬುತ್ತಲಿರುವಾಗ ನಾಕೂ ದಿಕ್ಕು
ಅರಮನೆ ಈಗ
ಔನ್ನತ್ಯದಲ್ಲಿ ಶ್ವೇತಚ್ಛಾಯೆಯಲ್ಲಿ ಕೈಲಾಸಶೃಂಗ
ಎಂಬ ಭ್ರಮೆ ಮುಗಿಲೋಳಿಗೂ ಹುಟ್ಟುವಂತಿರಲು
ಪ್ರಜ್ವಲಿಸಿ ರತ್ನದ ಕಾಂತಿ
ಕತ್ತಲೆಯ ಬಡತನವ ಆಚೆ ನೂಕುತ್ತಿರಲು
ಬೆಳ್ಳಿ ಮಾಡಿನ ಮೇಲೆ ಇರುಳು ಶಶಿಕಿರಣ ನೈದಿಲೆ ಹಾಸ
ಹಗಲು ರವಿಕಿರಣ ತಾವರೆ ಕಾಂತಿ
ಸೂಸುತ್ತ ಇರುವಾಗ
ಉದ್ಘಾಟನೆಗೆ ಬಂದಿದ್ದ ಗೆಸ್ಟ್ ಲಿಸ್ಟು ಇಂತುಂಟು:
ಡಿಫೆನ್ಸು ಮಿನಿಸ್ಟ್ರು ಹಾಗೂ ಅವರ ಮಿಸೆಸ್ಸು;
ಟ್ಯುಟೋರಿಯಲ್ ಕಾಲೇಜು ನಡೆಸುತ್ತಿದ್ದ ವೀಸಿ;
ಸುಪಾರಿ ಕೊಲೆ ಕನ್ಸಲ್ಟೆನ್ಸಿ ಎಕ್ಸ್ಪರ್ಟು;
ಕ್ರೈಂ ಪತ್ರಿಕೆಯ ಎಡಿಟರ್ ಹಾಗೂ ಅದರ ಓನರ್ರು
ಅಂಡರ್ ಗ್ರೌಂಡು ಡಾನು;
ಅವರು ಫಂಡ್ ಮಾಡುತ್ತಿದ್ದ ಎನ್ಜಿಓದ ಛೇರ್ಮನ್ನು;
ದಂತಚೋರನಾಗಿದ್ದು ಇಲೆಕ್ಷನ್ನಿಗೆ ನಿಂತು ಗೆದ್ದಿದ್ದ ಎಂಎಲ್ಎ;
ಅವನು ಗೆಲ್ಲಲು ಕಾರಣನಾದ ಆ ಕ್ಯಾಸ್ಟಿನ ಮಠಾಧಿಪತಿ, ಹಾಗೂ ಪರಿವಾರ
ಸಂಪುಟ ದೇವರ ಸಹಿತ;
ಅಕ್ಕ ಮಹಾದೇವಿ ಗಂಡನ ಮನೆಯಿಂದ ಕಲ್ಯಾಣಕ್ಕೆ ಹೋಗುವಾಗ ದಾರಿಯಲ್ಲಿ ರೇಪ್ ಆಗಿದ್ದಳು,
ಹಾಗಾಗಿಯೇ ಅಲ್ಲಮನ ಹತ್ತಿರ ಹೋದಾಗ ಅವಳ ಮೈಮೇಲೆ ಬಟ್ಟೆ ಇರಲಿಲ್ಲ
ಎಂದು ಬರೆದಿದ್ದ ಪಂಡಿತ ಒಬ್ಬ;
ವೈಟ್ಮೇನ್ಸು ಬರ್ಡನ್ನು ಮುಗಿದಿಲ್ಲ ಇನ್ನೂನು
ಆದ್ದರಿಂದಲೆ ಇಂಥ ರಿಸಾರ್ಟು ಇರಬೇಕು, ಅಮೆರಿಕನ್ಸೂ ಬೇಕು
ಎಂದು ಪ್ರತಿಪಾದಿಸುವ ಪ್ರೊಫೆಸರ್ರು ಮತ್ತೊಬ್ಬ;
ರಿಸಾರ್ಟಿಗೆ ಸೂಳೇರ ಸಪ್ಲೈ ಮಾಡುವ ಕಂಟ್ರಾಕ್ಟು ಹಿಡಿಯ ಬಂದಿದ್ದ ಮಗುದೊಬ್ಬ.
ಅರಮನೆಯ ಸುತ್ತ ಬೀದಿಗಳಿಂದ ಗೆಸ್ಟು ಬರುವೆಡೆಯಿಂದ
ಭಿಕ್ಷುಕ ರೋಗಿ ವೃದ್ಧರ ಗುಡಿಸಿ ಸಾರಿಸಿ ರಂಗೋಲಿ ಇಟ್ಟಿದ್ದರೂ
ಟರ್ಮಿನಲ್ ಸೀಡ್ಸ್ ಮಾರಿ ರೈತರನ್ನು ದಾಸ್ಯಕ್ಕೆ ತಳ್ಳೋ
ಅರಮನೇನ ಹೋಟೆಲ್ಲು ಮಾಡಿ ಹೆರಿಟೇಜ್ ನಾಶ ಮಾಡೋ
ಇಂಥಾ ಕಂಪೆನಿ ಪೇಟ್ರನೈಸ್ ಮಾಡೋ ಸರಕಾರಕ್ಕ ಧಿಕ್ಕಾರ
ಅಂಥಾ ಪ್ಲಕಾರ್ಡ್ ಹಿಡಿದ ಅರಮನೆಯ ಮಾಜಿ ಒಕ್ಕಲು ಜನರು
ನಮ್ಮ ಭೂಮಿ ನಮ್ಮ ಜಲವ ಕಸಿದುಕೊಂಬ ಹೆರರ ಬಲವ
ಓಡಿಸಿ ಓಡಿಸಿ ಇಲ್ಲಿಂದೀಗ ಓಡಿಸಿ
ಎಂದು ಕೂಗೆ ಪೊಲೀಸರು ಎಳೆದುಕೊಂಡು ಆಚೆ ಹೋಗಿ
ವ್ಯಾನಿನಲ್ಲಿ ತುಂಬಿ ಎಲ್ಲೊ ಊರ ಹೊರಗೆ ಬಿಟ್ಟು ಬಂದು
ತೆವಳಿಕೊಂಡೊ ನಡೆದುಕೊಂಡೊ ಹೇಗಾದರು ಬರ್ರಿ ಎಂದು
ಡ್ರಿಂಕ್ಸ್ ಡಿನ್ನರ್ ಸುರು ಆಗಿ
ಹೊಗಳಿ ಮಿನಿಸ್ಟ್ರ ನಾಯಿ ಬೆಕ್ಕು
ಅಯ್ಯೊ ಎಂಥಾ ಮಾತು ಏನು ಕಾವ್ಯ ಎಂಥ ಜ್ಞಾನ
ಸೈಟೊ ಮನೆಯೊ ಹೋಲ್ಸೇಲು ಡೀಲೊ ತಮ್ಮ ಕರುಣೆ ಅಹಾ ಧನ್ಯ
ಎಂದು ಮಾತು ಆಡುತ್ತಿರಲು
ಪ್ರೊಫೆಸರ್ ಸಾಹೇಬ್ರು ಬುದ್ಧಿಜೀವಿ
ಸ್ಕಾಚು ಚಿಕನ್ನು ಕುಡಿದು ತಿಂದು
ಡಾಬು ಸಡಿಲಿದ ತುರುಬು ಬಿಚ್ಚಿದ ತೊಟ್ಟ ಮೇಲುದ ಕೆಳಗೆ ಜಾರಿದ
ಕುಂಭ ಕುಚ ನಿತಂಬಿನಿ ಘನರು
ಸೋಫ ದಿಂಬುಗಳ ತಬ್ಬಿ ಗೊರೆಯುತ್ತ ಬಿದ್ದಾಗ
ಮುಂದೊತ್ತಿ ಬರುತ್ತಿರಲು ವಿಟಗಡಣ ನಡು ಇರುಳು
ಇತ್ತ ವೇದಿಕೆ ಮೇಲೆ ಹೊರಗಡೆ
ಯುವರ್ ಎಟೆನ್ಶನ್ ಪ್ಲೀಸ್--
ಅಮೆರಿಕಾ ಪ್ರಜೆ ಮೇರಿ ಶೆರಡನ್ ಈಗ
ಜಗತ್ತಿನಾದ್ಯಂತ ಒಂದೇ ಭಾಷೆ ಒಂದೇ ಕಲ್ಚರ್ ಒಂದೇ ಸರಕಾರ
ಇರೋ ಅಗತ್ಯದ ಬಗ್ಗೆ ಭಾಷಣ ಮಾಡ್ತಾರೇ--
ಯುವರ್ ಎಟೆನ್ಶನ್ ಪ್ಲೀಸ್--
ನೌ ವಿ ಹೇವ್ ಟ್ರೈಬಲ್ ಡಾನ್ಸ್ ಫ್ರಮ್ ಎನ ಓಲ್ಡ್ ವುಮನ್ ಫ್ರಮ್ ಎ ಜಂಗ್ಲ್;
ಯುವರ್ ಎಟೆನ್ಶನ್ ಪ್ಲೀಸ್--
ನೌ ಪ್ರಾಕ್ಟಿಕಲ್ ಡೆಮಾನ್ಸ್ಟ್ರೇಶನ್ ಅಫ್ ಇಂಕ್ರೀಸಿಂಗ್ ಪ್ರೊಡಕ್ಷನ್ ಬೈ ಮೆಡಿಟೇಶನ್;
ಯುವರ್ ಎಟೆನ್ಶನ್ ಪ್ಲೀಸ್--
ನೌ ಯು ಸೀ ಮಹಾತ್ಮಾ ಗಾಂಧಿ ಸ್ಟೇಂಡಿಂಗ್ STILL ಲೈಕ್ ಎ ಸ್ಟೇಚ್ಯೂ
ವೈಲ್ ಬಿಲ್ ಕ್ಲಿಂಟನ್ ಪಾಸಸ್ ಬೈ--
ವಾಟ್ ಎ ಸ್ಪ್ಲೆಂಡಿಡ್ ಪಾರ್ಟಿ
ವಾಟ್ ಎ ನೈಸ್ ಜಂಟಲ್ಮನ್
ವಂಡರ್ಫುಲ್ ಮಾರ್ವೆಲಸ್
ಬಕಪ್ ಹುರ್ರಾ ಬಕಪ್ ಹುರ್ರಾ ಬಕಪ್ ಬಕಪ್ ಹುರ್ರಾ.
8
ಪರಿಕಲ ರಾಜ. ವೀರಶ್ರೀ ರಾಣಿ. ಅವರಿಗೆ ಐದು ಜನ ಪುತ್ರಿಯರು.
ಒಂದು ದಿನ ಅವರು ತಂದೆ ತಾಯಿಗೆ ಪ್ರಸಾದ ಕೊಟ್ಟು
ತಮ್ಮ ತಮ್ಮ ಕೋಣೆಗೆ ಹಿಂದಿರುಗುತ್ತಲಿದ್ದಾಗ
ರಾಜನಿಗೆ ಕೊನೆಯ ಮಗಳು ಕೃತ್ತಿಕೆ ಮೇಲೆ ಮನಸ್ಸಾಗಿ
ಪತ್ನಿ ವೀರಶ್ರೀಯ ಕರೆಸಿ ಕೇಳಿದ:
"ಈ ನಾಡಿನ ಅತ್ಯುತ್ತಮ ವಸ್ತು ಸೇರಬೇಕಾದ್ದು ಯಾರಿಗೆ?"
"ಒಡೆಯರಾದ ತಮಗೆ ಪ್ರಭೂ."
ಮಂತ್ರಿಗಳ ಕರೆಸಿ ಕೇಳಿದ:
"ಈ ನಾಡಿನ ಅತ್ಯುತ್ತಮ ವಸ್ತು ಸೇರಬೇಕಾದ್ದು ಯಾರಿಗೆ?"
"ಒಡೆಯರಾದ ತಮಗೆ ಪ್ರಭೂ."
ಮಂತ್ರಿಗಳ ಕರೆಸಿ ಕೇಳಿದ:
"ಈ ನಾಡಿನ ಅತ್ಯುತ್ತಮ ವಸ್ತು ಸೇರಬೇಕಾದ್ದು ಯಾರಿಗೆ?"
"ಒಡೆಯರಾದ ತಮಗೆ ಪ್ರಭೂ."
ಸೇನಾಧಿಪತಿ, ಕೋಶಾಧಿಕಾರಿ, ಪುರಪ್ರಮುಖರು ಹಾಗೂ ಮಗಳಂದಿರ ಕೇಳಿದ:
"ಈ ನಾಡಿನ ಅತ್ಯುತ್ತಮ ವಸ್ತು ಸೇರಬೇಕಾದ್ದು ಯಾರಿಗೆ?"
"ತಮಗೆ ಪ್ರಭೂ."
ಸ್ವತಂತ್ರರಾಗಿದ್ದ ಎಂಟು ಜನ ಭಟಾರಕರ ಕರೆಸಿ ಕೇಳಿದ:
"ಈ ನಾಡಿನ ಅತ್ಯುತ್ತಮ ವಸ್ತು ಸೇರಬೇಕಾದ್ದು ಯಾರಿಗೆ?
"ವಸ್ತು ಯಾವುದು ಹೇಳು
ಆ ಮೇಲೆ ಯಾರಿಗೆ ಕೇಳು."
ಇವರನ್ನೆಲ್ಲಾ ಹೆಡೆಮುರಿ ಕಟ್ಟಿ
ಎಂದೆನ್ನಲು ರಾಜನು
ಹೆಡೆಮುರಿ ಕಟ್ಟಿದರು
ಆಚೆಗೆ ಅಟ್ಟಿದರು.
ಭಟಾರಕರ ಸ್ಥಿತಿ ಕಂಡು
ವೀರಶ್ರೀ ಕೇಳಿದಳು ಗಂಡನ್ನ ಕಂಡು:
"ಏಕಿಂತು ಮಾಡುವಿರಿ ಏಕಿಂತು ಏಕೆ?"
"ನೀ ಯಾರು ಕೇಳೋಕೆ
ನಾ ರಾಜ--ಜೋಕೆ."
"ಇರೋದಿಲ್ಲ ನಾ ಅವರು
ಇರದಲ್ಲಿ ಎಂದೂ."
"ತೊಲಗು ಈಗಲೆ ಬೇಗ
ಬರಬೇಡ ಎಂದೂ."
ಈ ಮಾತು ಕೇಳಿ ವೀರಶ್ರೀ ಸನ್ಯಾಸ ತಕ್ಕೊಂಡು ಹೊರಟು ಹೋದಳು.
ಅವಳೊಡನೆ ಅವಳ ಇಬ್ಬರು ಮಕ್ಕಳೂ ಹೋಗಿ
ಕೊನೆಯ ಮೂವರು ಮಾತ್ರ ಉಳಿದರು. ಆ ಮೇಲೆ
ಕೃತ್ತಿಕೆಯ ಮದುವೆ ಆಗಿ
ಯಾರಾದರೂ ಮಗಳನ್ನೇ ಮದುವೆ ಆಗಿದ್ದಾನೆ ಎಂದದ್ದು ಕೇಳಿದರೆ
ನಾಲಗೆ ಸೀಳಿಸಿ
ಕವಿಗಳ ಕರೆಯಿಸಿ
ಭೂಮಂಡಲ ಚಕ್ರವರ್ತಿಗಳಾದ ಪರಿಕಲರು ಒಂದು ದಿನ
ಬೇಟೆಗೆ ಹೋಗಿದ್ದಾಗ ಜಿಂಕೆ ಕಂಡು ಅಟ್ಟಿಸಿಕೊಂಡು ಹೋಗಲು
ರೆಂಜ ಕೇದಗೆಯ ಬಕುಳ ಮಲ್ಲಿಗೆಯ ವನಾಂತರದಲ್ಲಿ ಅದು ಮರೆಯಾಗಲು
ಪರಿಮಳಯುಕ್ತ ಗಾಳಿ ಸುಮಧುರ ಸಂಗೀತ ತರುತ್ತಿರಲು
ಚಕ್ರವರ್ತಿಗಳು ಅತ್ತ ಕಡೆ ಹೋದಾಗ
ಮರದ ಕೆಳಗೊಬ್ಬಳು ದಿವ್ಯಸ್ತ್ರೀ ಸುಶ್ರಾವ್ಯ ಹಾಡುತ್ತಿರಲು
ಚಕ್ರವರ್ತಿ ಆಕೆ ಕಂಡು
ಮೋಹವಶ ನಿಂತಿರಲು
ಎಲೈ ಲೋಕೈಕವೀರ, ಇವಳು ದೇವತಾಸ್ತ್ರೀ, ಇವಳನ್ನು ವರಿಸಿ ವೀರಪುತ್ರರ ಪಡೆ
ಎಂದು ಆಗಲು ಅಶರೀರವಾಣಿ
ಅದರಂತೆ ವರಿಸಿ ಅವಳನ್ನು ಕರೆತರಲು ಅರಮನೆಗೆ ನಾಡಲ್ಲಿ
ಶುಭೋದಯ ಅಹ ಶುಭೋದಯ
ಜನೋದಯ ಅಹ ಜನೋದಯ
ಎಂದು ಕಾವ್ಯ ಬರೆಸಿ ಹಾಡಿಸಿ
ಸಂತೆಗಳಲ್ಲಿ ರಸ್ತೆಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ
ರಾಜ್ಯ ಆಳುತ್ತ ಇದ್ದಾಗ
ಪ್ರಜೆ 1: ಹಲ್ಕಟ್ ಸುವ್ವರ್. ಮಗಳನ್ನೇ ಮಾಡ್ಕಂಡು
ದೇವತಾ ಸ್ತ್ರೀ ಅಂತೆ ದೇವತಾ ಸ್ತ್ರೀ.
ನೀಚ, ಪರಮ ನೀಚ.
--ವೇಷ ಮರೆಸಿ ಮಾತು ಕೇಳುತ್ತ ಕೂತಿದ್ದ ಪೊಲೀಸರು
ಎಳಕೊಂಡು ಹೋದರು, ತಳ್ಳಿದರು ಜೈಲೊಳಗೆ.
ಪ್ರಜೆಗಳ ಆಕ್ರಂದನ ಮೊದಲು ಕೇಳಿಸಿ ಬಳಿಕ ಅದನ್ನು ಮುಳುಗಿಸುವಂತೆ
ರಾಜಾಧಿರಾಜ ಸೂರ್ಯಸಮತೇಜ ಬಾಹುಬಲ ಓಜ ಗಾಂಭೀರ್ಯ ಸಹಜ
ಎಂಬಿತ್ಯಾದಿ ಘೋಷಣೆಯು ಕೇಳುವುವು.
ಘೋಷಣೆಗಳೇ ಹಿನ್ನೆಲೆಗೆ ಇರುವಾಗ ಈ ರೀತಿ
ಪ್ರಜೆಗಳು ತಲೆ ತಗ್ಗಿಸಿಕೊಂಡು ಹೋಗುವುದು
ಬೇಗ ಬೇಗ ಮನೆ ಸೇರುವುದು
ರಾಜ ರಾಣಿ ಪಟವನ್ನು ಮನೆ ಮುಂದೆ ನೇತು ಹಾಕುವುದು
ಸಾರ್ವಜನಿಕ ಜಾಗದಲ್ಲಿ ಪೊಲೀಸ ಕಂಡೊಡನೆ
ಜೈ ಪರಿಕಲ ರಾಜ, ಜೈ ಕೃತ್ತಿಕಾ ದೇವಿ ಜಯಕಾರ ಕೂಗುವುದು
ಇತ್ಯಾದಿ ನಡೆಯುವುದು.
ಕೃತ್ತಿಕೆಯ ಬಾಯಮ್ಮ ಬಂದು ಕೃತ್ತಿಕೆಗೆ ಬಯ್ದಾಗ
ಪೊಲೀಸರು ಅವಳನ್ನು ಎಳೆದೊಯ್ದರು ಎತ್ತ ಎಳೆದೊಯ್ದರು?
ಹಳಬ ಸೇವಕ ಬಂದು
ಏನಮ್ಮಣ್ಣಿ ಇದು ಹೊಲಸು ಎಂದು ಕೇಳಿದ ಬಳಿಕ
ಎತ್ತ ಹೋದ ಅವ ಎತ್ತ ಹೋದ?
ಸಂಬಂಧಿಕರು ಬಂದು ಏನೇನೊ ಮಾತಾಡೆ
ಏನಾಯಿತು ಅವರಿಗೆ ಏನಾಯಿತು?
ಅಕ್ಕಂದಿರಾದರೂ ಎಷ್ಟು ಮಾತಾಡುವುದು?--
ನೆಂಟರ ಮನೆಗೆಂದು ಹೋದವರು ಆ ಮೇಲೆ
ಬರಲೆ ಇಲ್ಲ ತಿರುಗಿ ಬರಲೆ ಇಲ್ಲ.
ಹೀಗೇ ನಡೆಯುತ್ತಿರಲು
ಕೃತ್ತಿಕೆಗೆ ಮುಟ್ಟು ನಿಂತು
ಪತಿ ಪರಿವಾರ ಸಮೇತ ದೇವಸ್ಥಾನಕ್ಕೆ ಹೋಗಿ
ದೇವರ ಪೂಜಿಸಿ ಪುರೋಹಿತರಿಗೆ ಯಥೇಚ್ಛ ದಕ್ಷಿಣೆ ಕೊಟ್ಟು
ಕಾರ್ತೀಕ ಎಂಬ ಮಗನನ್ನು ಹೆತ್ತಳು.
ಮಗನನ್ನು ಬೆಳೆಸುತ್ತಾ ತಂದೆ/ಗಂಡನಿಗೆ ವಯಸ್ಸಾಗಲು
ಮಗಳು/ಹೆಂಡತಿ ಅಧಿಕಾರ ಚಲಾಯಿಸುತ್ತಾ ರಾಜ್ಯ ಆಳುತ್ತಿರಲು
ಕಾರ್ತೀಕ ಪ್ರಾಯ ಪ್ರಬುದ್ಧನಾದ ಸಮಯದಲ್ಲಿ ಒಂದು ದಿನ
"ಅಮ್ಮಾ, ಅನೇಕರು ರಜೆಯಲ್ಲಿ ಅಜ್ಜನ ಮನೆಗೆ ಹೋಗುತ್ತಾರೆ.
ನಾನೇಕೆ ಹೋಗುವುದಿಲ್ಲ? ನಿನ್ನ ಅಪ್ಪ ಯಾರು?"
ಎಂದು ಕೇಳಲು, ಕೃತ್ತಿಕೆ,
"ನಾನು ದೇವಕನ್ನಿಕೆ" ಎಂದಳು.
"ಸುಮ್ಮನೇ ಮಾತಾಡಬೇಡ ಅಮ್ಮಾ.
ನಾನು ಏನೋ ಮಾತು ಕೇಳಿದೆ--ಅದು ನಿಜವೇ?"
"ಆ ವಿಚಾರ ಕೇಳಬಾರದು ಮಗೂ."
"ನನ್ನಿಂದ ತಪ್ಪಿಸಿಕೊಂಡರೂ ನೀನು ನಿನ್ನಿಂದ ತಪ್ಪಿಸಿಕೊಳ್ಳಲಾರೆ.
ಹೇಳು. ನಿನ್ನ ಅಪ್ಪ ಯಾರು?"
"ನೀನು ಕೇಳಿದ ಮಾತು ನಿಜ ಮಗೂ,
ನಿನ್ನ ಅಪ್ಪನೇ ನನ್ನ ಅಪ್ಪ."
"ಎಂಥಾ ಬಲೆಯೊಳಗೆ ಸಿಕ್ಕಿದ್ದೀ.
ನೀನೇನು ಕುರುಡಿಯೋ? ಬುದ್ಧಿ ಇದೆ ನಿನಗೆ--
ಪಾರ್ಶ್ವವಾಯು ಬಡಿದಿರುವ ಬುದ್ಧಿ.
ಮೆದುಳು ಹುಚ್ಚಿಗೆ ಗುಲಾಮವಾದರೂ
ಇಷ್ಟೊಂದು ತಲೆಕೆಟ್ಟು ನಡೆಯುವುದಿಲ್ಲ.
ಯಾವ ಪಿಶಾಚಿ ನಿನ್ನನ್ನು ಹೀಗೆ
ಕುರುಡು ಕಾಮಕ್ಕ ಸೋಲಿಸಿತು? ಭಾವನೆಯಿಲ್ಲದ ಕಣ್ಣುಗಳು,
ದೃಷ್ಟಿಯಿಲ್ಲದ ಭಾವನೆಗಳು, ಕಣ್ಣು ಕೈ ಇಲ್ಲದ ಕಿವಿಗಳು,
ಯಾವುದರ ಏನೂ ಇಲ್ಲದ ಬರಿಯ ವಾಸನೆ
ಅಥವಾ ರೋಗಗ್ರಸ್ಥ ದೇಹಾಂಗವೂ ಕೂಡ
ಇಷ್ಟೊಂದು ದರಿದ್ರವಾಗುವುದಿಲ್ಲ. ಥೂ ನಾಚಿಕೆಗೇಡು.
ನಿನಗೇಕೆ ನಾಚಿಕೆಯಾಗುವುದಿಲ್ಲ? ಪ್ರಗಲ್ಭಿಸಿದ ಆಸೆ ಕಾರಣವ ರೂಪಿಸುತ್ತಿರುವಾಗ
ನಾಚಿಕೆಯಾದರೂ ಹಾಗೆಂದು ಹೇಳದಿರು."
"ದಯವಿಟ್ಟು ಸುಮ್ಮನಿರು;
ನನ್ನ ಆತ್ಮವನ್ನೇ ನನ್ನೆದುರು ಬಿಚ್ಚಿ ಇಟ್ಟಿದ್ದೀಯ.
ಆದರೆ ನನ್ನ ಬಗ್ಗೆ ಬೇಸರಿಸಬೇಡ ಮಗೂ--
ನಾನು ಆ ಸಂದರ್ಭದಲ್ಲಿ ಬೇರೇನು ಮಾಡಬಹುದಾಗಿತ್ತು?
ಓಡಿಹೋಗಿದ್ದರೂ ಹಿಡಿತರಿಸುವುದು ಅವರಿಗೆ ಎಷ್ಟು ಹೊತ್ತು?
ಬಲೆಯಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ ಮಗೂ."
"ಆಗ ಇದ್ದಿರಬಹುದು ತಾಯೀ--
ಆದರೆ ಆನಂತರದ ಬಲೆ ನೇಯ್ದುಕೊಂಡವಳು ನೀನೇ.
ಈ ವರ್ಷಗಳಲ್ಲಿ ಯಾಕೆ ಮತ್ತೆ ಮತ್ತೆ ಅದನ್ನೇ ನೆಕ್ಕುತ್ತೀ?"
"ಒಂದು ಸಲ ಅವರು ನನ್ನ ಮದುವೆ ಆದ ಮೇಲೆ
ನಾನು ಅವರ ಮಗಳಾಗಿ ಮಾತ್ರ ಉಳಿಯಲಿಲ್ಲ ಮಗೂ.
ಅವರ ಮಕ್ಕಳ ತಾಯಿಯೂ ಆಗಿದ್ದೆ.
ಅನಂತರ ಏನು ಕಟ್ಟಿದರೂ
ಹೊಸ ವಾಸ್ತವದ ಮೇಲೆ ಮಾತ್ರ ಕಟ್ಟಬಹುದಾಗಿತ್ತು."
"ಸ್ಮಶಾನದಲ್ಲಿ ಧೂಪೆ ಕಟ್ಟಿದ್ದೀಯ--ಅದನ್ನೇ ಮನೆಯೆಂದು ತಿಳಿದಿದ್ದೀಯ.
ಇದ್ದೂ ಸತ್ತಂಥ ನಿನ್ನಂಥವರ ಕೊಲ್ಲುವುದು ಹೇಸಿಗೆ ಕೆಲಸ.
ಇನ್ನು ಆ ತಂದೆಯೋ--
ಅವನೇನು ತಂದೆಯೋ ಅಜ್ಜನೋ ಅಕ್ಕನ ಗಂಡ ಭಾವನೋ--ತಿಳಿಯೆ.
ಅವನ ಚೆಂದವೋ--ಕೂದಲಿಗೆ ಬಣ್ಣ ಬಳಿದು ನೆರಿಗೆಗೆ ಎಣ್ಣೆ ಸವರಿ
ಶಿಶ್ನ ನಿಗುರಿಸುವ ಬೇರು ಚೂರ್ಣಗಳ ತಿನ್ನುತ್ತ
ಸೇವಕಿಯರ ಮೇಲೆಗರಿ---
ಅವನನ್ನು ಹೊಗಳುತ್ತ ಹಿಂದೆ ಮುಂದೆ ಅಲೆಯುವ ಗಡಣ--
ರಸ್ತೆಯ ಮೇಲೆ ಗಂಜೀಫ ಆಡುವ ಜನರು, ಕುಡಿದು ಬಿದ್ದವರು
ಮೃತ್ಯು ಚಕ್ರದ ಸುತ್ತ--"
(ಕಾರ್ತೀಕ ಹೀಗೆ ಹೇಳುತ್ತಿರುವಾಗ ಕ್ಯಾಮೆರಾ ಅರಮನೆಯ ಒಂದು ಕೋಣೆ ತೋರಿಸುವುದು. ಗೋಡೆಯಲ್ಲಿ ಸಿನೆಮಾ ನಟನಟಿಯರ, ಕ್ರಿಕೆಟ್ ಹೀರೋಗಳ ಫೊಟೋ ಇವೆ. ಪರಿಕಲ ಹುಬ್ಬಿಗೂ ಕೂದಲಿಗೂ ಬಣ್ಣ ಹಾಕುತ್ತಿದ್ದಾನೆ; ಪೌಡರ್ ಕ್ರೀಮ್ ಬಳಿದುಕೊಳ್ಳುತ್ತಾನೆ; ಬಳಿಕ ಕೆನ್ನೆಯ ನೆರಿಗೆಯನ್ನು ಎಣ್ಣೆಯಿಂದ ನೀವಿ ಕುತ್ತಿಗೆಯ ನೆರಿಗೆ ಮುಚ್ಚಲು ಸ್ಕಾರ್ಫ್ ಸುತ್ತಿ ಕನ್ನಡಿ ಎದುರು ವಿವಿಧ ಕೋನಗಳಲ್ಲಿ ನಿಂತು ವಿವಿಧ ರೀತಿಯಲ್ಲಿ ಮುಖಭಾವ ಪ್ರದರ್ಶಿಸಿ ತೋಳು ಹಿಂಭಾಗ ಮೊದಲಾದ ದೇಹದ ವಿವಿಧ ಅಂಗ ನೋಡಿಕೊಂಡು ಸಿನೆಮಾ ಹಾಡು ಹೇಳಿ ಟ್ವಿಸ್ಟ್ ಡಾನ್ಸ್ ಮಾಡಿ ಒಬ್ಬಳು ಸಿನೆಮಾ ನಟಿ ಫೊಟೋಕ್ಕೆ ಕಿಸ್ ಬ್ಲೋ ಮಾಡಿ ಮತ್ತೆ ಕನ್ನಡಿ ನೋಡಿಕೊಳ್ಳುತ್ತಿರುವಾಗ ಒಬ್ಬಳು ಯುವತಿ ಬಾಗಿಲು ತಳ್ಳಿ ಒಳಗೆ ಬಂದು, "ಪರಿಕಲ ಸರ್, ಯಾರೋ ಒಬ್ಬ ತಮ್ಮ ನೋಡಲೇಬೇಕು ಅಂತಿದ್ದಾನೆ, ಕಾನ್ಫರೆನ್ಸಿನಲ್ಲಿದ್ದಾರೆ ಅಂದರೆ ಕೇಳುತ್ತಿಲ್ಲ" ಎಂದು ಹೇಳಿ ಮುಗಿಸುವ ಹೊತ್ತಿಗೆ ಕೋಣದ ಮೇಲೆ ಕೂತು ಯಮ ಪ್ರವೇಶಿಸುತ್ತಾನೆ. ಅವನನ್ನು ಕಂಡು ಹೆದರಿ ಪರಿಕಲ ಅಡಗಲು ಪ್ರಯತ್ನಿಸುತ್ತಾನೆ. ಸ್ವಲ್ಪ ಹೊತ್ತು ಯಮ ಗಹಗಹಿಸಿ ನಗುತ್ತಾ ಹಿಡಿಯಲು ಪ್ರಯತ್ನಿಸುವುದು, ಪರಿಕಲ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು ನಡೆಯುತ್ತದೆ. ಪಕ್ಕನೆ ಪರಿಕಲ ಗಹಗಹಿಸಿ ನಕ್ಕು ಯುವತಿಯನ್ನು ಹಿಡಿದು ಎಳೆಯುತ್ತಿರುವಾಗ, ಆಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ--)
ವೃದ್ಧಾಪ್ಯ ಎದುರಿಸಲು ಯವ್ವನದ ಮೇಲೇ ಎಗರಿ
ಬೀಳಬೇಕೆಂದೇನು? ಒಂದು ಗಿಡ ನೆಟ್ಟು
ಅಥವಾ ಅನಾಥಾಶ್ರಮದ ಮಕ್ಕಳನ್ನು ಬೆಳೆಸಿ
ಅಥವಾ ಪ್ರೇಮಿಗಳಿಗೆ ಸಂಸಾರ ನಡೆಸಲು ನೆರವು ನೀಡಿ
ಮೃತ್ಯುವನ್ನೂ ಶೂನ್ಯವನ್ನೂ ಆಚೆ ತಳ್ಳಬಹುದು--
ನನಗೆ ಹಿಂದಿಂದು ಇಂದಿಂದು ದುಸ್ವಪ್ನ ಆಗಿದೆ ಈಗ.
ಆದಿಮಾನವನಂತೆ ಮತ್ತೆ ಮೊದಲಿಂದ ತೊಡಗುತ್ತೇನೆ;
ದುಸ್ವಪ್ನದೊಡಲಲ್ಲೆ ಭವಿಷ್ಯ ಕಾಣುತ್ತೇನೆ;
ಹೊಸತೇ ಒಂದು ನಾಗರಿಕತೆಯ ಕಟ್ಟುತ್ತೇನೆ;
ವೇಷ ಮುಖವಾಡಗಳ ಕಿತ್ತು ಎಸೆಯುತ್ತೇನೆ
ಎಂದು ಕಾರ್ತೀಕ, ಹೇಗೆ ಮುಂದುವರಿಯಬೇಕು ಎಂದು
ಭಿಕ್ಷುಗಳ ಕೇಳಿದನು:
ರೇಶ್ಮೆ ವಸ್ತ್ರ ಚಿನ್ನದ ರುದ್ರಾಕ್ಷಿ ಧರಿಸಿ
ಹುಲಿಚರ್ಮದ ಮೇಲೆ ಕೂತ ಮಠಾಧಿಪತಿಗಳ ಕೇಳಿದನು;
ಶರಣು ಶರಣು ಎಂದು ತಿರುಗುತ್ತಿದ್ದ ಶರಣ ಸಂದೋಹ ಕೇಳಿದನು;
ಮುಲ್ಲಾಗಳನ್ನೂ ಪಾದ್ರಿಗಳನ್ನೂ ಕೇಳಿದನು.
ಅವರಲ್ಲೊಬ್ಬ ನಿಧಾನಕ್ಕೆ ಯೋಚಿಸಿ ಉತ್ತರಿಸುತ್ತೇನೆ ಎಂದ;
ಇನ್ನೊಬ್ಬ ಕಣ್ಣು ಮುಚ್ಚಿ ಕೂತ; ಮತ್ತೊಬ್ಬ
ಯುವರಾಜರು ಮುಂದೆ ರಾಜರಾದಾಗ
ಅಧಿಕಾರ ತತ್ತ್ವಜ್ಞಾನ ಸಂಗಮಿಸಿ ಧರ್ಮಸ್ಥಾಪನೆ ಆಗುತ್ತದೆ ಎಂದ.
ತೃಪ್ತನಾಗದ ಕಾರ್ತೀಕ
ಹಿಂದೆ ನಾಡಿನಿಂದ ಬಹಿಷ್ಕೃತರಾದ ಎಂಟು ಜನ ಭಟಾರಕರ ಕರೆತಂದು
ಮರೆತುಹೋದ ಪರಂಪರೆಗಳನ್ನು ಪ್ರಾರಂಭಿಸಿ
ಹೊಸ ನಾಗರಿಕತೆ ಚಿಗುರಬೇಕು ಎಂದು
ಅವರನ್ನು ಹುಡುಕಿಸಲು
ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು;
ಮೂವರು ಪೊಲೀಸ್ ವಿಚಾರಣೆ ಸಮಯ ಸತ್ತಿದ್ದರು;
ಈ ಭ್ರಷ್ಟ ವ್ಯವಸ್ಥೆ ಬದಲಿಸೋಣ ಎಂದು ಪ್ರಚಾರ ಮಾಡುತ್ತಿದ್ದ ಮತ್ತೊಬ್ಬನ್ನ
ಹುಚ್ಚು ಹಿಡಿದಿದೆ ಎಂದು ಅವನ ಹೆಂಡತಿ ಮಕ್ಕಳು
ಹುಚ್ಚಾಸ್ಪತ್ರೆಗೆ ಸೇರಿಸಿದ್ದರು;
ಹಾಗೆ ಸೇರಿಸಿದ್ದಕ್ಕಾಗಿ ಅರಸಂದ ಅವರಿಗೆ ಬಹುಮಾನ ಸಿಕ್ಕಿತ್ತು;
ಮಗುದೊಬ್ಬ ರಾಜರಾಣಿಯರ ಜೀವನಚರಿತ್ರೆ ಹಾಗೂ
ಅವರ ವಿರೋಧಿಗಳ ಖಂಡಿಸಿ ಕರಪತ್ರ ಬರೆಯುತ್ತಿದ್ದ;
ಇನ್ನೊಬ್ಬ ಮಾತ್ರ ತನ್ನಷ್ಟಕ್ಕೆ
ಹಾಗೂ ಅಲ್ಲ ಹೀಗೂ ಅಲ್ಲ ಎಂಬ ಸ್ಥಿತಿಯಲ್ಲಿದ್ದ.
ಕಾರ್ತೀಕ ಅವನನ್ನು ಕಂಡು
ನಾನು ಗೂಢಚಾರನಲ್ಲ;
ಅಪ್ಪ ಅಮ್ಮ ಇದ್ದರೂ ಇಲ್ಲದವ;
ಸ್ಮೃತಿಯೇ ಶಾಪವಾಗಿರುವವನು;
ನಾಡಲ್ಲಿ ಹುಲಿ ಕರಡಿ ತುಂಬಿವೆ ಎಂದು
ಉತ್ತಮರು ಭೂಗತರೆಂದು
ತೊಳಲುತ್ತ ಇರುವವನು;
ಮತ್ತೆ ಈ ನಾಡ ಮೊದಲಂತೆ ಮಾಡಲು ಹಸಿರು
ಮಾಡಬೇಕು ಏನು ತಿಳಿಸಿ
ಎನ್ನಲು ಆ ಭಟಾರ
ನೀವು ನನ್ನನ್ನು ಬೇರೆ ಯಾರೋ ಎಂದು ತಿಳಿದಿದ್ದೀರಿ;
ನಾನು ಬರೀ ಓದುತ್ತ ಬರೆಯುತ್ತ ಇರುವವನು;
ತಾವು ಗೌರವಾನ್ವಿತರು; ದೇವಾಂಶ ಸಂಭೂತರು;
ನನ್ನ ಆತಿಥ್ಯ ಸ್ವೀಕರಿಸಬೇಕು;
ಇತ್ತ ಪಾದ ಬೆಳೆಸಿ, ದಯವಿಟ್ಟು
ಎಂದು ವಿನಯ ತೋರಿಸಿದ.
ಇವನೂ ಶಬ್ದಸೂತಕವ ಕಲಿತವನು,
ಮಾತು ಯೋಚನೆ ನಡುವ ಕಂದಕವ ತುಂಬುವುದೆಂತು
ಎಂದು, ಕಾರ್ತೀಕ,
ಹೇಳಬೇಕಾಗಿದ್ದ ಮಾತುಗಳನ್ನು ಸ್ವಗತವಾಗಿಯೇ ಹೇಳಬೇಕಾಗಿದ್ದ ಆ ಕಾಲದಲ್ಲಿ
ಯೋಚಿಸಿಕೊಂಡು ಹೋಗುತ್ತಿರಲು
ಒಬ್ಬ ಜೇಹಾದಿ ಬಂದು ನಮಸ್ಕರಿಸಿ ಇಂತು ಪರಿ ಬಿನ್ನೈಸಿಕೊಂಡ:
ಪ್ರಭೂ, ನಂಬಲರ್ಹ ಮೂಲಗಳಿಂದ ತಿಳಿದಂತೆ
ತಮ್ಮನ್ನು ಕೊಲೆ ಮಾಡಲು ಅರಮನೆಯಿಂದ ನಿರೂಪ ಹೊರಟಿದೆ.
ಇದನ್ನು ಹೊರಡಿಸಿದವರು ರಾಜನೋ ರಾಣಿಯೋ
ನೀವು ರಾಜರಾದರೆ ತಮ್ಮ ಅಧಿಕಾರ ಹೋದೀತೆಂದು
ಭಯಪಟ್ಟ ಪರಿಜನರೋ--ತಿಳಿಯೆ.
ವ್ಯವಸ್ಥೆ ಬದಲಿಸಿ ತಮ್ಮ ಅಧಿಕಾರಕ್ಕೆ ಧಕ್ಕೆ ತರಲು
ಹೊರಟಿರುವ ನಿಮ್ಮ ಮೇಲೆ
ರಾಜ ರಾಣಿ ಪಿತೂರಿ ನಡೆಸಿದರೆ ಅಚ್ಚರಿಯಿಲ್ಲ.
ನಾವು ಜಗತ್ತಿನಾದ್ಯಂತ ವ್ಯಾಪಿಸಿದ ಸಂಘಟನೆ ಜನ.
ಸರ್ವಶಕ್ತನಾದ ನಮ್ಮ ಮುಖಂಡ ಗುಪ್ತ ಜಾಗೆಯಲ್ಲಿದ್ದು
ತರ್ಕಬದ್ಧ ನಡೆಗಳಿಂದ, ಸ್ಪಷ್ಟ ಲೆಕ್ಕಾಚಾರಗಳಿಂದ
ಚಳವಳಿಯ ನಿರ್ದೇಶಿಸುತ್ತಿದ್ದಾನೆ. ಅವನ ಆದರ್ಶ ಒಪ್ಪಿ
ಇಡೀ ಜಗತ್ತು ಒಂದೇ ಧರ್ಮದ ಕೆಳಗೆ ಬರಬೇಕೆಂದು
ಒಬ್ಬ ಪರಮಾತ್ಮನನ್ನೇ ಸೃಷ್ಟಿಕರ್ತನೆಂದು ಒಪ್ಪಬೇಕೆಂದು
ಒಂದೇ ನಾಗರಿಕತೆ ಎಲ್ಲಾ ಕಡೆ ಹಬ್ಬಬೇಕೆಂದು
ಜೀವವನ್ನೇ ಪಣವಿಟ್ಟು ಹೋರುವ ಪಡೆ ನಾವು.
ಅದಕ್ಕಾಗಿ ಭಯೋತ್ಪಾದನೆಯ ನೆಚ್ಚಿದ್ದೇವೆ.
ಗವಿಗಳಲ್ಲಿ ಅಥವಾ ಮನೆಗಳಲ್ಲೇ ಕೂತು
ಮಾನವ ಬಾಂಬುಗಳಿಂದ, ಜೈವಿಕ ಅಸ್ತ್ರಗಳಿಂದ
ಕಟ್ಟಡಗಳನ್ನು ಆಸ್ಪತ್ರೆಗಳನ್ನು ವಸತಿ ಸಂಕೀರ್ಣಗಳನ್ನು
ದಂಪತಿಗಳನ್ನು ಬಸುರಿಯರನ್ನು ಹಸುಳೆಗಳನ್ನು
ನಮ್ಮದಲ್ಲದ ಜಾತಿಗೆ ಸೇರಿದ ಈ ರೋಗಿಷ್ಠ ನಾಗರಿಕತೆಯ
ಎಲ್ಲ ಮೂಲಗಳನ್ನೂ ನಾಶಪಡಿಸುತ್ತೇವೆ.
ಭೂತಕಾಲದ ಎಲ್ಲ ಅವಶೇಷ ಒರೆಸಿ ಒರೆಸಿ ತೆಗೆಯುತ್ತೇವೆ.
ಆ ಸಾವ ಒಡಲಿಂದ ಹೊಸತು ಕಟ್ಟುತ್ತೇವೆ.
ಈ ಕೆಲಸದಲ್ಲಿ ಆಗಲೇ ತೊಡಗಿರುವವರು
ವೈದ್ಯ ಪಾದ್ರಿ ಪೊಲೀಸು ಸಾಧು ಸಂತರೇ ಮೊದಲಾದ ಸಹಸ್ರ ರೂಪಗಳಲ್ಲಿ
ನಗರಗಳಲ್ಲಿ ಹಳ್ಳಿಗಳಲ್ಲಿ ಮೂಲೆ ಮೂಲೆಗಳಲ್ಲಿ
ಹಬ್ಬಿ ಬೆಳೆದಿದ್ದಾರೆ--ಕಳ್ಳ ಯಾರು ಜಡ್ಜು ಯಾರು ಎಂದು ತಿಳಿಯದ ಹಾಗೆ.
ನೀವು ಇವತ್ತು ರಾತ್ರಿ ಸ್ಮಶಾನಕ್ಕ ಬನ್ನಿ;
ಹೊಸ ಜನ್ಮಕ್ಕೆ ಅಲ್ಲಿ ನಿಮ್ಮನ್ನು ಒಯ್ಯುತ್ತೇನೆ.
ಎಲ್ಲವನ್ನೂ ಎದುರಿಸಿ ಹಾಗೂ ಒಳಗೊಂಡು ತನ್ನ ಕ್ರಮ ರೂಪಿಸಬೇಕೆಂದು ಯೋಚಿಸುತ್ತಿದ್ದ ಕಾರ್ತೀಕ ಜೇಹಾದಿಯ ಈ ಹೊಸಲೋಕ ಹೇಗಿರಬಹುದೆಂದು ತಿಳಿಯಲು ರಾತ್ರಿ ಸ್ಮಶಾನಕ್ಕೆ ಹೋದನು. ಒಂದು ಕಡೆ ಬೆಂಕಿ ಉರಿಯುತ್ತಿತ್ತು. ಬಾವಲಿಗಳು ಹಾರುತ್ತಿದ್ದವು. ಕಾರ್ತೀಕ ಎಲ್ಲಿ ಇವ ಎಂದು ಸುತ್ತಮುತ್ತ ನೋಡುತ್ತಿರಲು ಜೇಹಾದಿ ಕಾಣಿಸಿಕೊಂಡು ಸ್ಮಶಾನದ ಮೂಲೆಗೆ ಕರೆದುಕೊಂಡು ಹೋಗಿ ಬೆಂಕಿಯ ಮುಂದೆ ಕೂರಿಸಿ ನೆತ್ತರಿನ ಬೊಟ್ಟಿಟ್ಟು ಕೆಂಪು ದಾಸವಾಳದ ಮಾಲೆ ಹಾಕಿ ಮಂತ್ರ ಹೇಳಲು ಪ್ರಾರಂಭಿಸಿದ. ಬೆಂಕಿಯ ಸುತ್ತ ಹಂದಿ ಕೋಳಿ ಕುರಿಗಳ ರುಂಡ ಮುಂಡ ಚೆಲ್ಲಾಪಿಲ್ಲಿ ಬಿದ್ದಿದ್ದವು. ಕತ್ತು ಕೊಯ್ದ ಕೋಳಿ ಪಟಪಟ ಬಿದ್ದು ಒದ್ದಾಡುತ್ತಾ ಮೇಲಕ್ಕೆ ಚಿಮ್ಮಿ ಕೆಳಕ್ಕೆ ಬೀಳುತ್ತಾ ಇದ್ದವು. ನೆತ್ತರು ಎಲ್ಲೆಂದರಲ್ಲಿ ಚೆಲ್ಲಿತ್ತು. ಆಜ್ಯ ಹೊಯ್ಯುತ್ತಿದ್ದ ಜೇಹಾದಿ ಕೊನೆಯ ಕ್ರಿಯೆ ಮಾತ್ರ ಬಾಕಿ ಇದೆ ಎಂದು ಮರದ ಹಿಂಬದಿ ಹೋಗಿ ಹಾಳೆಯ ಮೇಲೆ ಇಟ್ಟಿದ್ದ ಸುಮಾರು ಎರಡು ವರ್ಷದ ಹಸುಳೆಯನ್ನು ಎತ್ತಿಕೊಂಡು ಬಂದನು. ಅಫೀಮು ತಿನ್ನಿಸಿದ್ದರಿಂದಲೋ ಸುರೆ ಕುಡಿಸಿದ್ದರಿಂದಲೋ--ಅದರ ಕಣ್ಣು ಅರೆಮುಚ್ಚಿತ್ತು.
ಕೂರಿಸಿದರೆ ಒರಗಿಕೊಳ್ಳುತ್ತಿತ್ತು. ಕತ್ತಿನ ಸುತ್ತ ಕೇಪಳೆ ಹೂವಿನ ಮಾಲೆ ಹಾಕಿ, ಹಣೆಗೆ ನೆತ್ತರು ಉದ್ದಿ, ಹ್ರಾಂ ಹ್ರೀಂ ಧರ್ಮಯುದ್ಧಾಯ ನಮಃ ಎಂದು ಕಾರ್ತೀಕನಿಗೆ ಎದ್ದು ನಿಲ್ಲುವಂತೆ ಹೇಳಿ, ಎದ್ದು ನಿಂತಾಗ ಮಗುವನ್ನು ಅವನ ಕೈಗೆ ಕೊಟ್ಟು
ಪ್ರಭೂ, ತಾಯಿ ಉಣ್ಣಿಸುತ್ತಿದ್ದಾಗ ಕಿತ್ತು ತಂದ ಹಸುಳೆ ಇದು.
ಸವರ್ಣೀಯ ಮಗು.
ಶತಮಾನಗಳಿಂದ ದಲಿತರ ಶೋಷಿಸಿದ ಜಾತಿಯ ಪಿಂಡ.
ಹಿರಿಯರ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಈ ಮಗುವನ್ನು ಆಹುತಿ ಕೊಟ್ಟು
ಬ್ರಾಹ್ಮಣ ಗೌಡ ಲಿಂಗಾಯತರ ಶೋಷಣೆ ವಿರುದ್ಧ
ಸ್ವಾತಂತ್ರ್ಯ ಕಹಳೆ ಮೊಳಗಲಿ ಎಂದು
ದಲಿತರ ಹೆಸರಲ್ಲಿ ಕರಪತ್ರ ಹಂಚಿದ್ದೇವೆ.
ಪರಿಣಾಮವಾಗಿ ಸವರ್ಣೀಯರಿಗೂ ದಲಿತರಿಗೂ ಹೊಡೆದಾಟ ಹೆಚ್ಚುವುದು.
ಅದರಿಂದ ನಾಳೆ ನಮಗೇ ಲಾಭ.
ಪ್ರಭೂ, ಮಗುವನ್ನು ಹೀಗೆ ಯಜ್ಞಕುಂಡದ ಮೇಲೆ ಎತ್ತಿ ಹಿಡಿಯಿರಿ.
ನಾನು ಅದರ ರುಂಡವನ್ನು ಬೆಂಕಿಗೆ ಬೀಳುವಂತೆ ಕತ್ತರಿಸುತ್ತೇನೆ.
ನೀವು ಮುಂಡವನ್ನು ಬೆಂಕಿಗೆ ಎಸೆಯಿರಿ.
ನಮ್ಮಿಬ್ಬರ ಆಜ್ಯದಿಂದ ತೃಪ್ತವಾದ ಬೆಂಕಿ ಪ್ರಜ್ವಲಿಸಿ ಉರಿದು
ಜಗತ್ತನ್ನು ವ್ಯಾಪಿಸಲಿ.
ಇದು ನೀವು ನಮ್ಮ ಸಂಘಟನೆ ಸೇರಿರುವ ಉತ್ಸವ ಕೂಡ.
ನಿಮ್ಮಂಥ ಅವಿಶ್ರಾಂತ ಆತ್ಮಗಳು ನಮಗೆ ಪೋಷಕ ದ್ರವ್ಯ
ಎಂದು ಹೇಳುತ್ತಾ ಕತ್ತಿ ಎತ್ತಲು ಬಗ್ಗಿದಾಗ
ಹಾಗೋ ಹೀಗೋ ನಿರ್ಧರಿಸಬೇಕಾದ ಆ ಹೊತ್ತಲ್ಲಿ--ಏನು ಮಾಡುತ್ತಿದ್ದೇನೆಂದು ತಿಳಿಯುವ ಮೊದಲೇ--ಕಾರ್ತೀಕ ಜೇಹಾದಿಯನ್ನು ಒದ್ದು ಕೆಳಗೆ ಉರುಳಿಸಿ ಮಗುವನ್ನೆತ್ತಿ ಓಡತೊಡಗಿದನು. ಓಡುತ್ತಾ ಸ್ಮಶಾನ ದಾಟಿ ಓಡುತ್ತಾ ನಗರ ಪ್ರವೇಶಿಸಿ ಓಡುತ್ತಾ ತಿರುಗುತ್ತ ತಿರುಗುತ್ತ ತಿರುಗುತ್ತಲೇ ಇರುವ ರಸ್ತೆಗಳಲ್ಲಿ ಓಡುತ್ತಾ--ಜೇಹಾದಿ ಬೆಂಕಿಗೆ ಬಿದ್ದನೇ? ಬಲಿ ಕೊಡಲು ಹೊರಟವ ತಾನೇ ಬಲಿಯಾದನೇ? ಅಲ್ಲ, ಬಿದ್ದಲ್ಲಿಂದ ಎದ್ದು ಹಿಂಬಾಲಿಸಿ ಬರುತ್ತಿರುವನೇ? ಜಗತ್ತಿನಾದ್ಯಂತ ವ್ಯಾಪಿಸಿದೆ ಎಂದ ಅವನ ಬಲೆಯೊಳಗೇ ತಾನಿನ್ನೂ ಇದ್ದೇನೆಯೇ? ಅವನು ಬೇರೆ ಬೇರೆ ವೇಷಗಳಲ್ಲಿ ಎಲ್ಲಾ ಕಡೆ ಹಬ್ಬಿದ್ದಾರೆ ಎಂದವರ ಕೈಗೇ ತಾನೂ ಮಗುವೂ ಸಿಕ್ಕಿ ಬೀಳುತ್ತೇವೆಯೇ? ಆಗ ಕಾರ್ತೀಕನಿಗೆ ಪ್ರಮುಖವಾಗಿ ಕಂಡದ್ದು ಮೊದಲು ಮಗುವನ್ನು ಸುರಕ್ಷಿತ ಜಾಗಕ್ಕೆ ಸೇರಿಸಬೇಕು ಹಾಗೂ ಅದಕ್ಕೆ ತಿನ್ನಲು ಕುಡಿಯಲು ಏನಾದರೂ ಕೊಡಬೇಕು ಎಂಬ ಯೋಚನೆ ಮಾತ್ರ.
ಅಂದರು: ಬತ್ತಿದೆ
ಬುಡದಲ್ಲೇ ನದಿ;
ನುಡಿದಿದೆ
ಗುಡುಗು ಸಹ.
ಗುಡುಗಿಯು ಮಳೆ
ಬಾರದ್ದುಂಟು--
ಬಹು ವಿಧ ಹೇಳಿಯು
ಹೊಳೆಯದೆ ಬೆಳೆಯದೆ
ಉಳಿದಂತೇ ನುಡಿ.
ಹಾಗೆಂದು ಸುಮ್ಮನೆ
ಮುಚ್ಚದೆ ಬಾಯಿ
ಮತ್ತೊಂದು ಥರವೋ
ಮಗುದೊಂದು ಥರವೋ
ಹೇಳುದು ಬಿಟ್ಟರೆ
ಏನಿದೆ ಮಾರ್ಗ?
ಅಂದರು: ಗುಡುಗಿದೆ.
ಕೇಳಿಲ್ಲವೇ ಎಂದು
ಕೇಳಿದರೂ ಸಹ.
ಬಂದೀತು ಮಳೆ ಎಂದೆ
ತಯ್ಯಾರಿ ಮಾಡುವುದು
ಎತ್ತೂ ಬಿತ್ತೂ:
ಉದ್ಘಾಟನೆ ಮಜ
ಉದ್ಘಾಟನೆ ಎಂಬ
ಕ್ಯಾಸೆಟ್ಟುಗಳ ಹಾಡು
ಯುವರೆಟನ್ಶನ್ನಿಗೆ ಕಿರುಚಿದ್ದ
ಕೇಳ್ವಂತೆ ಈ ಪದವ
ಕೇಳುವವರಿಲ್ಲದೆ ಇದ್ದರು, ಪದಗಳು
ಸೋತರು ಬಾತರು,
ಸರ್ವಾಧಿಕಾರಿಯ ಅಥವ
ಧರ್ಮಾಧಿಕಾರಿಯ ಕಠಿಣ
ಹೆಚ್ಚುತ್ತ ಇದ್ದರು
ಸೀಳುತ್ತ ಮುರಿಯುತ್ತ
ಬಳಸುತ್ತ ಅವವೇ
ಪದಗಳ ಪುರಪಿ
ಮತ್ತೊಮ್ಮೆ ಮಗುದೊಮ್ಮೆ
ಮುಚ್ಚ್ಚಿಯೊ ಅಚ್ಚೆಲೊ
ಹೇಳುತ್ತ ಇರುವಂತೆ.
ಆದರು ಗುಡುಗಿನ
ನುಡಿಗಳ ಕೇಳಿದೆ
ಎಂದರು ಕೆಲವರು.
ಕೇಳಲಿ ಎಲ್ಲಾ ಈ ನನ ಮಕ್ಕಳು
ಅಂತಾ ಸಿಟ್ಟು ಬಂದರೆ ಗುಡುಗಿಗೆ
ಘರ್ಜಿಸಿ
ಗಗನವು ಮೋಡದ ಮಾತಿಂದ ತುಂಬಿ
ದರ್ಪಕೆ ದರ್ಪಣ ದಮ ದಯ ದತ್ತೋಂ
ತಿತ್ತಿರಿ ತಿರಿಕಿಟ ಧಿಮಿಕಿಟ ಧಿತ್ತೋಂ
ಹೊರಟರೆ ಯುದ್ಧಕ್ಕೆ ಇಳೆ ಉರಿ ಮೇಲೆ
ತಪ್ಪಾಯ್ತು ಅಂತ ನಮಗಾಗ ಕಂಡರೆ
ಇದ್ದರೆ ನೋಹನ ನೌಕೆಯ ಆಸರೆ
(2002)
(ಮುಗಿಯಿತು. ಈ ಕವನ ಮೊದಲು ನನ್ನ ಕವನ ಸಂಗ್ರಹ
ಮಾತಾಡುವ ಮರದಲ್ಲಿ ಪ್ರಕಟವಾಗಿದೆ.)