Saturday, October 16, 2010

ಜಯದೇವನ ಗೀತಗೋವಿಂದ

ಜಯದೇವ ಸುಮಾರು ಹನ್ನೆರಡನೇ ಶತಮಾನದ ಹೊತ್ತಿಗೆ ಈಗಿನ ಒರಿಸ್ಸಾದ ಒಂದು ಹಳ್ಳಿಯಲ್ಲಿ ಹುಟ್ಟಿದ. ಅಲ್ಲಿಯೇ ಅಧ್ಯಾಪಕ ಆಗಿದ್ದ ಎನ್ನುತ್ತಾರೆ. ಅವನ ಜೀವನದ ವಿವರಗಳು ಇಂಟರ್ನೆಟ್ಟಿನಲ್ಲಿ ಸಿಗುವುದರಿಂದ ಯಾರಾದರೂ ಸುಲಭವಾಗಿ ನೋಡಿಕೊಳ್ಳಬಹುದು. ನಾನದನ್ನು ಪುನರುಚ್ಚರಿಸಬೇಕಾಗಿಲ್ಲ.

ಇಂಟರ್ನೆಟ್ಟಿನಲ್ಲಿ ಇಲ್ಲದ, ಆದರೆ ಯಾವುದೋ ಒಂದು ಪುಸ್ತಕದಲ್ಲಿ ಓದಿದ ಒಂದು ವಿವರ ನನಗೆ ಕುತೂಹಲ ಹುಟ್ಟಿಸಿತು. ಅದೆಂದರೆ, ಅವನೂ ಅವನ ಹೆಂಡತಿ ಪದ್ಮಾವತಿಯೂ ಸೇರಿ ಗೀತ ಗೋವಿಂದವನ್ನು  ಒರಿಸ್ಸಾದ ದೇವಸ್ಥಾನಗಳಲ್ಲಿ ಗೀತರೂಪಕವಾಗಿ ಆಡುತ್ತಿದ್ದರು ಎಂಬುದು. ಹೌದಾಗಿದ್ದರೆ, ಒಂದು ಕಾವ್ಯವನ್ನು ನೃತ್ಯರೂಪಕವಾಗಿ ಆಡಿದ ಪ್ರಥಮ ದಾಖಲೆಗಳಲ್ಲಿ ಇದೊಂದು. ಗೀತಗೋವಿಂದವೂ ನೃತ್ಯರೂಪಕಕ್ಕೆ ಸುಲಭವಾಗಿ ಹೊಂದಿಕೊಳ್ಳುವಂತಿದೆ. ನೃತ್ಯ ವಿದುಷಿ ಪದ್ಮಾ ಸುಬ್ರಹ್ಮಣ್ಯಂ ಇದನ್ನು ನರ್ತಿಸುತ್ತಾರೆ. ಇದನ್ನೊಂದು ನಾಟಕವಾಗಿಯೂ ರೂಪಿಸಬಹುದು.

ಇದು ವೈಷ್ಣವ ಭಕ್ತಿಯನ್ನು ವ್ಯಕ್ತಪಡಿಸುವ ಕಾವ್ಯವೆಂದು ಹೆಸರಾಗಿದೆ. ಆದರೆ ಇದನ್ನು ಎರಡು ಪ್ರೇಮಿಗಳ  ಭಾವನೆ/ವರ್ತನೆಗಳನ್ನು ವ್ಯಕ್ತ ಪಡಿಸುವ ಅತ್ಯಂತ ಮಾನವೀಯ ಕವನ ಎಂದು ನೋಡುವುದು ನನಗೆ ಹೆಚ್ಚು ಇಷ್ಟವಾದ  ಓದು. ಕೃಷ್ಣನನ್ನು ದೇವರಲ್ಲ, ಒಂದು ಜೀವಮಾನದಲ್ಲಿ ವಿವಿಧ ಅವಸ್ಥಾಂತರಗಳನ್ನು ಹಾದು ಬಂದ ಒಬ್ಬ ಮಹಾ ಮಾನವನೆಂದು ನಾನು ತಿಳಿದಿರುವುದು ಈ ಬಗೆಯ ಓದು ಹೆಚ್ಚು ಇಷ್ಟವಾಗಲು ಕಾರಣವಾಗಿದೆ. ಈ ಕಾವ್ಯ ಪ್ರೇಮಿಗಳಾಗಿ ಅವನ ಮತ್ತು ರಾಧೆಯ ಮನಸ್ಥಿತಿ/ವರ್ತನೆಗಳನ್ನು ಪರಿಣಾಮಕಾರಿಯಾಗಿ ತೋರಿಸುತ್ತದೆ. ಭಗವದ್ಗೀತೆಯಲ್ಲಿ ನಾವು ಕಾಣುವ ಕೃಷ್ಣನ ಮನಸ್ಥಿತಿ ಇದಕ್ಕೆ ವಿರುದ್ಧವಾದದ್ದು. ಅಲ್ಲಿ ಅವನು ತತ್ವಜ್ಞಾನಿ. ನಿರಪೇಕ್ಷವಾಗಿ ಕ್ರಿಯೆಯಲ್ಲಿ ತೊಡಗು ಎಂದು ಅರ್ಜುನನಿಗೆ ಉಪದೇಶಿಸುವ ಕೃಷ್ಣ   ಭಗವದ್ಗೀತೆಯ ಮೊದಲ ಮೂರು ಅಧ್ಯಾಯಗಳಲ್ಲ್ಲಿ ಬಹಳ ಗಾಢ ತಾತ್ತ್ವಿಕ ಪ್ರಶ್ನೆಗಳನ್ನು ಎತ್ತುತ್ತಾನೆ. ಆ ಪ್ರಶ್ನೆಗಳು, ವ್ಯಕ್ತಪಡಿಸುವ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಎಂದೇ ಅದು ಈಗಲೂ ಪ್ರಭಾವಶಾಲಿಯಾಗಿ ಉಳಿದುಕೊಂಡಿದೆ.

ಗೀತಗೋವಿಂದ  ಶಬ್ದಸಂಗೀತಗಳ ಕಾವ್ಯ.  ಶಬ್ದಸಂಗೀತ ಅರ್ಥಾನುಸಾರಿಯಾಗಿದೆ ಎನ್ನುವುದೇ ಈ ಕಾವ್ಯದ ಉತ್ಕೃಷ್ಟತೆಗೆ ಕಾರಣವಾಗಿದೆ. ಬೇಂದ್ರೆ "ನಾದಲೀಲೆ", "ತುಂ ತುಂ ತುಂ ತುಂ"ನಂಥಾ; ಅಡಿಗರು "ಮೋಹನ ಮುರಲಿ", "ವರ್ಧಮಾನ", "ಇದನ್ನು ಬಯಸಿರಲಿಲ್ಲ"ದ ಎರಡನೇ ಭಾಗ ಮೊದಲಾದಂಥ ತಮ್ಮ ಕೆಲವು ಅತ್ಯುತ್ತಮ ಕವನಗಳಲ್ಲಿ ಇದೇ ಮಟ್ಟದ ಅರ್ಥಾನುಸಾರಿಯಾದ ಶಬ್ದಸಂಗೀತವನ್ನು ಸಾಧಿಸುತ್ತಾರೆ.

ನನ್ನದು ನೇರ ಅನುವಾದ ಅಲ್ಲ. ಗೀತಗೋವಿಂದದ ಕೆಲವು ಸ್ಟಾನ್ಸಾಗಳನ್ನು ಆಧರಿಸಿ ಮಾಡಿಕೊಂಡ ಮುಕ್ತ ಮರುರಚನೆ.
ಶ್ರೀ ಭಾಗವತದ ಕೆಲವು ವಿವರಗಳನ್ನೂ  ಇದರಲ್ಲಿ ಬಳಸಿದ್ದೇನೆ. ಇದನ್ನು ನಾನು ನನ್ನ ನಾಟಕ ಕೊಳಲು ಮತ್ತು ಶಂಖಕ್ಕಾಗಿ ಮೊದಲು ಮಾಡಿಕೊಂಡೆ. ಕೊಳಲು ಮತ್ತು ಶಂಖ ಕೃಷ್ಣಾವಸಾನ ಕುರಿತ ನಾಟಕ. ಕೃಷ್ಣ ಗೋಕುಲದಲ್ಲಿದ್ದಷ್ಟು ಕಾಲ ದನ ಮೇಯಿಸುತ್ತಾ ಕೊಳಲು ನುಡಿಸುತ್ತಾ ಇದ್ದ. ಬಿಲ್ಲ ಹಬ್ಬಕ್ಕಾಗಿ ಮಥುರೆಗೆ ಹೋದ ಮೇಲೂ ಅವನು ಒಂದು ಮುಖವಾದ್ಯವನ್ನೇ ಬಳಸುತ್ತಾನೆ__ಅದು ಶಂಖ. ಹೀಗೆ ಅವನ ಜೀವನದುದ್ದಕ್ಕೆ ಎರಡು ಮುಖವಾದ್ಯಗಳು ಅವನ ಸಂಗಾತಿಗಳಾಗಿ ಬರುತ್ತವೆ--ಕೊಳಲು ಮತ್ತು ಶಂಖ. ಹಾಗೆಯೇ, ಸಂಗೀತ ಮತ್ತು ಯುದ್ಧ, ಪ್ರೇಮಿಗಳು ಮತ್ತು ಯೋಧರು ಜೀವನದುದ್ದಕ್ಕೆ ಅವನ ಸಂಗಾತಿಗಳು. ಆದರೆ ಶಂಖದ ಬಳಕೆ ಸಂಗೀತಕ್ಕಾಗಿ ಅಲ್ಲ, ಯುದ್ಧಕ್ಕೆ ಕರೆಯುವುದಕ್ಕಾಗಿ. ಸ್ವಂತದ ಅಭಿವ್ಯಕ್ತಿಗಾಗಿ ಅವನು ಬಳಸುವುದು ಕೊಳಲನ್ನು ಮತ್ತು ತಾತ್ತ್ವಿಕ ಜಿಜ್ಞಾಸೆಗಳನ್ನು. ಈ ತಾತ್ತ್ವಿಕ ಜಿಜ್ಞಾಸೆ ಭಗವದ್ಗೀತೆಗೆ ಸೀಮಿತವಲ್ಲ. ಕೊನೆಯಲ್ಲಿ ಅವನ ಬಾಲ್ಯಸ್ನೇಹಿತ ಉದ್ಧವನ ಜೊತೆಗೆ ಅವನು ಮತ್ತೆ ತಾತ್ತ್ವಿಕ ಜಿಜ್ಞಾಸೆಯಲ್ಲಿ ಮಗ್ನನಾಗುತ್ತಾನೆ.

ನನ್ನ ನಾಟಕ  ಯಾದವ ಕಲಹ ಮುಗಿದ ನಂತರ ಬೇಡನ ಬಾಣದಿಂದಾಗಿ ಕಾಲಿಗೆ ಪೆಟ್ಟಾದ ಘಟನೆಯಿಂದ ಪ್ರಾರಂಭವಾಗುತ್ತದೆ. ಈಗ, ಈ ಕೊನೆಗಳಿಗೆಯಲ್ಲಿ, ತಾನು ಬಾಲ್ಯದಲ್ಲಿ ಗೋಕುಲದಲ್ಲಿ ಬಿಟ್ಟು ಬಂದ  ಕೊಳಲಿನ ಮತ್ತು ಆಗಿನ ರಾಗಗಳ ನೆನಪು ಕೃಷ್ಣನಿಗೆ ಮತ್ತೆ ಆಗುತ್ತಿದೆ; ಹಿಂದೆ ಕಲಿತಿದ್ದ ರಾಗಗಳನ್ನು ನುಡಿಸುತ್ತಾ  ರಾಧೆಯ ಜೊತೆ ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾನೆ. ಆ ಸಂದರ್ಭದಲ್ಲಿ  ಈ ಕೆಳಗಿನ ಸಾಲುಗಳು ನಾಟಕದಲ್ಲಿ ಬರುತ್ತವೆ. ಇವುಗಳನ್ನು ಆ ನಾಟಕದ ಭಾಗವೆಂದಲ್ಲದೆ  ಸ್ವತಂತ್ರವಾಗಿ ಸಹಾ ಓದಬಹುದಾದ್ದರಿಂದ ಇಲ್ಲಿ ಕೊಡುತ್ತಿದ್ದೇನೆ.


ಲವಂಗ ಪೊದೆಗಳ ಮೇಲಿಂದ ಮೆಲ್ಲನೆ ಮೆಲ್ಲನೆ ಬೀಸುವ ತಂಗಾಳಿ
ಕೋಗಿಲೆ ಕೂಗು ದುಂಬಿಯ  ಝೇಂಕಾರ ಹೂವಿನ ಪರಿಮಳವು;
ವಸಂತ ಮಾಸವು--ಬೃಂದಾವನದಲಿ ಯುವತೀ ಜನರೊಡಗೂಡಿ
ಕೃಷ್ಣನು ವಿಹರಿಸುತಿರುವನು--ಸಖಿ ಇದ ರಾಧೆಗೆ ತಿಳಿಸುವಳು.

ತಮಾಲ ಚಿಗುರಿದೆ; ಮನ್ಮಥ ಉಗುರಿನ ಹಾಗಿದೆ ಮುತ್ತುಗವು;
ಥರ ಥರ ಹೂಗಳು ಎಲ್ಲೆಡೆ ಅರಳಿವೆ ವಿರಹಿಯ ನೋಡುತಿವೆ;
ನೋಡುತ ನಗುತಿವೆ ಹೃದಯವ ಸೀಳುತ ಈಟಿಯ ಥರದಲ್ಲಿ;
ಮಾವಿನ ಮರವೂ ಕಂಪಿಸುತಿಹುದು ಮಲ್ಲಿಗೆ ಬಯಕೆಯಲಿ.

ನೀಲಿಯ ಮೈ ಬಣ್ಣ ಪೂಸಿರೆ ಚಂದನ ಧರಿಸಿರೆ ಹೂವಿನ ಮಾಲೆ
ಮಣಿಕುಂಡಲಗಳು ಕೆನ್ನೆಗೆ ಮುತ್ತಿಡೆ ಮುಖದಲಿ ತುಂಬಿರೆ ಹಾಸ
ದಪ್ಪನೆ ಮೊಲೆಗಳ ಗೋಪಿಕೆ ಒಬ್ಬಳು ಅಪ್ಪುತ ಉಲಿಯುತ ಇರಲು
ಕೃಷ್ಣನು ವಿಹರಿಸುತಿರುವನು ವಿಲಾಸವತಿಯರ ಸಂಗಡ ಇರುಳು.

ಏನೋ ಗುಟ್ಟನು ಹೇಳುವ ನೆವದಲಿ ಇನ್ನೊಬ್ಬ ಗೋಪಿಕೆಯು
ಕೃಷ್ಣನ ಕಿವಿ ಬಳಿ ತುಟಿಯನ್ನಿಡುವಳು ಮೆಲ್ಲನೆ ಕಚ್ಚುವಳು.

ಮತ್ತೊಬ್ಬ ಗೋಪಿಕೆ ಯಮುನೆಲಿ ಆಡುವ ಆಸೆಯು ಜಿನುಗುತಿರೆ
ಬಕುಳದ ಪೊದೆಗಳ ಮರೆಯಲಿ ಕೃಷ್ಣನ ಬಟ್ಟೆಯ ಸೆಳೆಯುವಳು.

ಮಗುದೊಬ್ಬ ಗೋಪಿಕೆ ಕೃಷ್ಣನ ಮುರಲಿಯ ನಾದಕೆ ಸರಿದೊರೆಯಾಗಿ
ಕೈಗಳ ಬಳೆಯನು ಗಿಲ್ ಗಿಲ್ ಎನ್ನುತ ಹೊಂದಿಸಿ ನುಡಿಸಿದಳು.

ಇಂಥಾ ಯುವತೀ ಜನ ಸಮ್ಮರ್ದನು
ನನ್ನನು ನೆನೆಯುವನೇ?--
ರಾಧೆಯು ಸಖಿಯನು ಕೇಳುತ ಇಲ್ಲ
ಎನ್ನುತ ಕೊರಗುವಳು.

ಆದರೆ ಸಖಿಯೇ ಮನಸೋ ಆತನ
ಮತ್ತೂ ಸ್ಮರಿಸುತಿದೆ;
ಪೀತಾಂಬರವನು ಧರಿಸಿದ ಅವನನು
ನೆನೆಸುತ ಭ್ರಮಿಸುತಿದೆ;

ದೋಷವ ಎಣಿಸದೆ ಬರಿದೇ ಗುಣವನು
ಮಾತ್ರವೆ ಕಾಣುತಿದೆ;
ಸಿಟ್ಟೇ ಇಲ್ಲದೆ ಅವನನು ಮತ್ತೂ
ಮತ್ತೂ ನೆನೆಯುತಿದೆ.

ಆದರೆ ಯುವತೀ ಜನ ಸಮ್ಮರ್ದನು
ನನ್ನನು ನೆನೆಯುವನೇ?--
ರಾಧೆಯು ಸಾಧ್ಯತೆ ಶಂಕಿಸಿ ಕುಗ್ಗುತ
ಒಳ ಒಳ ಕೊರಗುವಳು.

ಆದರೆ ಇತ್ತಲೊ ಕೃಷ್ಣನು ರಾಧೆಯ
ನೆನಸುತ ದುಃಖಿಸುವ:
ಗೋಪೀ ಜನ ಜೊತೆ ಚೆಲ್ ಚೆಲ್ ಆಡುತ
ರಾಧೆಯ ನೋಯಿಸಿದೆ;

ಅವಳಿಲ್ಲದ ಮನೆ, ಅವಳಿಲ್ಲದ ಹಣ,
ಅವಳಿಲ್ಲದ ಬದುಕೇ ವ್ಯರ್ಥ;
ಸಿಟ್ಟಾದ ರಾಧೆಯ ಮತ್ತೆಂತು ಒಲಿಸಲಿ
ಮನ್ಮಥ, ಹೇಳು ಸಮಸ್ತ--

ಅವಳಾ ಹುಬ್ಬನು ಬಿಲ್ಲನು ಮಾಡಿರೆ
ಕಣ್ನೋಟ ಹೂಡಿದ ಬಾಣ;
ಆ ಬಾಣದ ಮೊನೆ ತಾಗಿದೆ ಒಳ ಮನೆ
ಮನ್ಮಥ, ಹೇಳು ಸಮಸ್ತ--

ಎನ್ನುತ ಕೃಷ್ಣನು ಪುಬ್ಬಲಿ ಗಿಡಗಳ
ಪೊದೆಯಲಿ ಸುಯ್ಯುತ ಇರಲು
ರಾಧೆಯ ಸಖಿ ಇದ ರಾಧೆಗೆ ಎಂದಳು
ಹಬ್ಬಿದೆ ಒಲಿಯುವ ಇರುಳು;

ರತಿಸುಖ ಸಾರವ ಪಡೆಯಲು ಗಮನವ
ವಿಳಂಬ ಮಾಡದೆ ತೆರಳು;
ಯಮುನಾ ತೀರದಿ ಧೀರ ಸಮೀರವು
ಕರೆಯುವ ಕೃಷ್ಣನ ಕೊಳಲು.

ಇಂಥಾ ಸಮಯದಿ ಚಂದ್ರನು ಹುಟ್ಟಿದ
ಹಬ್ಬಿತು ತಿಂಗಳ ಬೆಳಕು;
ಬೆಳ್ಳಿ ಮುಲಾಮನು ತೊಟ್ಟಿತು ಮರ ಗಿಡ
ಬೆಳೆಸುತ ಪ್ರೇಮದ ಸೆಳಕು.

ಅಂದುಗೆ ಶಬ್ದವು ಖಣಿ ಖಣಿರೆನ್ನಲು
ಜಘನದ ಒಡ್ಯಾಣ ಸಡಿಲಾಗಲು
ಕೊರಳಿನ ಹಾರವು ಕುಚ ಕುಂಭ ಮೇಲಾಡೆ
ರಾಧೆಯು ಕೃಷ್ಣನು ಸೇರಿದರು.

ಹೂವಿನ ಹಾಸಿಗೆ ಕುಂಜ ಕುಟೀರದಿ
ದುಂಬಿಯ ದನಿಗಳ ಸಂಗೀತವು;
ಪರಸ್ಪರ ತೋಳಲ್ಲಿ ಕರಗುನ ತನುಗಳು
ಕೃಷ್ಣನು ರಾಧೆಯು ಸೇರಿದರು.

ಇಂಥಾ ಹೊತ್ತಲ್ಲಿ ಪ್ರಕೃತಿಯ ಪ್ರತಿಯೊಂದು
ಖಗ ಮೃಗ ಗಿಡ ಮರ ಲತೆಗೆ
ಪ್ರತಿಯೊಂದು ಜೀವಿಗು ಸೃಷ್ಟಿಯ ಸಂಭ್ರಮ
ಯಮುನೆಯು ಹರಿವಳು ಸಮುದ್ರದೆಡೆ.

ಲವಂಗ ಪೊದೆಗಳ ಮೇಲಿಂದ ಮೆಲ್ಲನೆ
ಮೆಲ್ಲನೆ ಬೀಸುವ ತಂಗಾಳಿ;
ಕೋಗಿಲೆ ಕೂಗು ದುಂಬಿಯ ಝೇಂಕಾರ
ಹೂವಿನ ಪರಿಮಳವು;
ತಮಾಲ ಚಿಗುರಿದೆ; ಮನ್ಮಥ ಉಗುರಿನ
ಹಾಗಿದೆ ಮುತ್ತುಗವು;
ಥರ ಥರ ಹೂಗಳು ಎಲ್ಲೆಡೆ ಅರಳಿವೆ
ವಿರಹಿಯ ನೋಡುತಿವೆ;
ನೋಡುತ ನಗುತಿವೆ ಹೃದಯವ ಸೀಳುತ
ಈಟಿಯ ಥರದಲ್ಲಿ;
ಮಾವಿನ ಮರವೂ ಕಂಪಿಸುತಿಹುದು
ಮಲ್ಲಿಗೆ ಬಯಕೆಯಲಿ.

**********

ಸೂಚನೆ: ನನ್ನ ಸಮಗ್ರ ನಾಟಕಗಳು, ಸಂಪುಟ 2 (ಬೆಲೆ ರೂ60.00) ಮತ್ತು ಸಂಪುಟ 3 (ಬೆಲೆ ರೂ75.00) ಈಗ ಬೋಧಿ ಟ್ರಸ್ಟಿನಿಂದ ಪ್ರಕಟವಾಗಿವೆ. ಸಂಪುಟ 2ರಲ್ಲಿ ಪುಟ್ಟಿಯ ಪಯಣ ಮತ್ತು ಸುದರ್ಶನ--ಈ ಎರಡು ನಾಟಕಗಳಿವೆ. ಸಂಪುಟ   3ರಲ್ಲಿ ಅಶ್ವತ್ಥಾಮ, ಹುಲಿಯ ಕಥೆ, ದಂಗೆ--ಈ ಮೂರು ನಾಟಕಗಳಿವೆ. ಕೊಳಲು ಮತ್ತು ಶಂಖ ಇರುವುದು ಸಮಗ್ರ ನಾಟಕಗಳು ಸಂಪುಟ 1ರಲ್ಲಿ. ಇದರ ಪ್ರತಿಗಳು ಮುಗಿದಿವೆ.

ಈ ಪುಸ್ತಕಗಳ ವಿತರಕರು:
1. ನುಡಿ ಪುಸ್ತಕ (ನ್ಯೂ ಪ್ರೀಮಿಯರ್ ಬುಕ್ ಶಾಪ್)
ನಂ. 27, 21ನೇ ಮೇನ್ ರಸ್ತೆ, ಬಿ ಡಿ ಎ ಕಾಂಪ್ಲೆಕ್ಸ್ ಎದುರು
ಬನಶಂಕರಿ ಎರಡನೇ ಹಂತ, ಬೆಂಗಳೂರು 560070.
ಫೋನ್: 080 26711329
premierpublishingco@yahoo.in

2. ಅತ್ರಿ ಬುಕ್ ಸೆಂಟರ್
ಶರಾವತಿ ಬಿಲ್ಡಿಂಗ್, ಬಲ್ಮಠ ರಸ್ತೆ,
ಮಂಗಳೂರು 1
0824 2425161

No comments:

Post a Comment