Wednesday, October 6, 2010

ಶೇಕ್ಸ್ಪಿಯರ್ ಸಾನೆಟ್ಟುಗಳು

ನಾನು ಇತ್ತೀಚೆಗೆ ಶೇಕ್ಸ್ಪಿಯರ್  ಇಂಗ್ಲಿಷಿನಲ್ಲಿ ಬರೆದ 154 ಸಾನೆಟ್ಟುಗಳಲ್ಲಿ 120 ಸಾನೆಟ್ಟುಗಳನ್ನು ಅನುವಾದಿಸಿದ್ದೇನೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಡುತ್ತಿದ್ದೇನೆ. ಸಂಖ್ಯೆ ಮೂಲ ಸಾನೆಟ್ಟನ್ನು ಸೂಚಿಸುತ್ತದೆ.

1

ಚೆಲುವು, ಚೆಲು ಜೀವಿಗಳು ವೃದ್ಧಿಸಲೆಂದು ಬಯಸುವೆವು--
ಚೆಲು ಗುಲಾಬಿ ಎಂದೆಂದು ಅಳಿಯದೆಯೆ ಉಳಿಯಲಿ ಎಂದು;
ಕಳೆದಂತೆ ಕಾಲ ಹಣ್ಣಾದ್ದು ಮುಂದಿನ ಚಿಗುರು
ಗತದ ಚಹರೆಯ ಗುರುತ ಹೊತ್ತು ಬಾಳಲಿ ಎಂದು.
ಆದರೆ ನೀನು ನಿನ್ನ ಕಣ್ಣಿನ ತೇಜದಲ್ಲಿ ಕುರುಡಾದವನು.
ನಿನ್ನ ಬೆಳಕಿನ ಕುಡಿಯ ನಿನ್ನ ಒಳಗಿನ ಎಣ್ಣೆ ಹೊಯ್ದು ಉರಿಸುತ್ತಿರುವಿ.
ಸಮೃದ್ಧಿ ಇರುವಲ್ಲಿ ಬರಗಾಲ ಇದರ ಪರಿಣಾಮ
ನಿನಗೆ ನೀನೇ ಶತ್ರು, ನಿನ್ನ ಹಿತ ವ್ಯಕ್ತಿತ್ವಕ್ಕೆ ನೀನೆ ನಿಷ್ಠುರಿ ಕ್ರೂರಿ.
ಇದ್ದರೂ ನೀನಿಂದು ಈ ಜಗತ್ತಿನ ಹೊಸತು ಆಭರಣ,
ವರ್ಣ ವೈವಿಧ್ಯಮಯ ವಸಂತದ ಬರವ ಸಾರುವವ,
ನಿನ್ನ ಸತ್ತ್ವವ ನಿನ್ನ ಮುಗುಳಲ್ಲೆ ಹುಗಿಯುತ್ತಿರುವಿ,
ಬೋಸ, ಕಂಜೂಸ, ಎಳಸ, ಬಚ್ಚಿಟ್ಟು ಹುಳಿಯುತ್ತಿರುವಿ.

ಇರಲಿ ಸಹಾನುಭೂತಿ ಜಗತ್ತಿನ ಬಗ್ಗೆ; ಇಲ್ಲವಾದರೆ ಜಗದ ಹಕ್ಕಿನ ಫಲವ
ನೊಣೆವ ಬಕಾಸುರ ಬುದ್ಧಿ ನಿನ್ನ ಬಳಿ ಗೋರಿ ಬಳಿ.

2

ನಲವತ್ತು ಚಳಿಗಾಲ ನಿನ್ನ ಮುಖ ಮೇಲೆ ದಾಳಿಯ ಮಾಡಿ
ನಿನ್ನ ಚೆಲು ನೆಲೆಯಲ್ಲಿ ಆಳ ಕಾಲುವೆಯ ತೋಡುವ ಸಮಯ
ಇಂದು ಎಲ್ಲರು ಕಣ್ಣು ನೆಟ್ಟು ನೋಡುತ್ತಿರುವ ನಿನ್ನ ಯವ್ವನ ರೂಪ
ಹೆಚ್ಚೇನು ಬೆಲೆಯಿರದ ಚಿಂದಿ ಕಳೆ ಆಗುವುದು. ಆಗ
ಕೇಳಿದರೆ ಎಲ್ಲಿ ನೆಲೆಸಿದೆ ನಿನ್ನ ಹಳೆ ದಿನದ ಚೆಲುವೆಂದು
ನಿನ್ನ ಯವ್ವನ ಮದದ ಉನ್ಮತ್ತ ಸಂಪದವೆಂದು
ಒಳ ಕಂತಿರುವ ಮಸಕು ಮಸಕು ಬೆಳಕಿನ ಕಣ್ಣ ಒಳಗೆಂದು ಹೇಳುವುದು
ಮರ್ಯಾದೆ ಹೋಗುವ ಮಾತು, ಅರ್ಥವಿಲ್ಲದ ಡಂಭ.
ನಿನ್ನ ಸೌಂದರ್ಯಕ್ಕೆ ಎಂಥ ಬೆಲೆ ಬಂದೀತು
ಹೇಳಿದರೆ ನೀನಾಗ: "ಈ ನನ್ನ ಚೆಲು ಕಂದ
ನನ್ನ ಲೆಕ್ಕವ ಚುಕ್ತ ಮಾಡುವುದು, ನನ್ನ ಮುದಿತನಕ್ಕೆ ಪ್ರತಿ ನಿಂದು."
--ಸಾಧಿಸಿ ತೋರಿ ಅವನ ಸೌಂದರ್ಯ ಉತ್ತರದಲ್ಲಿ ನಿನ್ನದು ಎಂದು.

ಹೊಸತಾಗಬೇಕಿದೆ ನೀನು ಹಳಬ ಆಗುತ್ತಿರಲು
ಬಿಸಿಯಾಗಬೇಕಿದೆ ರಕ್ತ ತಣಿಯುತ್ತ ಬರುತ್ತಿರಲು.

27

ದಣಿದು ಸುಸ್ತಾಗಿ ಹಾಸಿಗೆಗೆ ಧಾವಿಸುವೆ
ಪಯಣಿಸಿ ಸೋತ ಅಂಗಾಂಗ ವಿಶ್ರಾಂತಿ ಪಡೆಯಲಿ ಎಂದು.
ಆದರೆ ಆಗ, ದೇಹವು ದುಡಿದು ಸೋತಾಗ
ಮನಸ್ಸ ಒಳಗಿನ ಪಯಣ ಮನಸ್ಸ ದುಡಿಸುವುದಕ್ಕೆ ತೊಡಗುವುದು.
ಪರಿಣಾಮ--ಇದ್ದರೂ ನಾನು ನನ್ನಷ್ಟಕ್ಕೆ ಎಷ್ಟೋ ದೂರ
ನನ್ನ ಯೋಚನೆ ಯಾತ್ರೆ ತೊಡಗುವುದು ನಿನ್ನ ಕಡೆ
ಮುಚ್ಚಲೆಳಸುವ ರೆಪ್ಪೆ ಮುಚ್ಚಲು ಬಿಡದೆ ತುಸು ಕೂಡ
ದಿಟ್ಟಿಸುತ ಅನಿಮೇಷ ಪ್ರತಿ ದಿಟ್ಟಿಸುವ ಎದುರಿನ ಇರುಳ.
ವ್ಯತ್ಯಾಸ ಒಂದೇ ಒಂದು--ನನ್ನ ಕಲ್ಪಿತ ದೃಷ್ಟಿ
ನಿನ್ನ ಪ್ರತಿಮೆಯ ನನ್ನ ಮನಸ್ಸಲ್ಲಿ ಬೆಳೆಸುವುದು; ಅದು,
ಭಯಾನಕ ನಿಶೆಯ ಚೆಲು ಮಾಡಿ, ಹೊಳೆಯಿಸಿ ಅದರ ಕಪ್ಪು ಮುಖ,
ಭೀಕರದ ಇರುಳಲ್ಲಿ ರತ್ನದ ಹಾಗೆ ತೂಗುವುದು.

ಹೀಗೆ, ಹಗಲಲ್ಲಿ ನನ್ನ ಮೈ, ಇರುಳಲ್ಲಿ ಮನಸ್ಸು
ನಿನಗಾಗಿ ನನಗಾಗಿ ಅವಿಶ್ರಾಂತ ದುಡಿಯುವುವು.

29

ಅದೃಷ್ಟದ ಮತ್ತು ಜನರ ಕಣ್ಣಲ್ಲಿ ನಾ ನತದೃಷ್ಟ ಅನ್ನಿಸಿದಾಗ
ನನ್ನ ಈ ಪರಿತ್ಯಕ್ತ ಸ್ಥಿತಿಗಾಗಿ ದುಃಖಿಸಿಕೊಂಡು ನನ್ನಷ್ಟಕ್ಕೆ
ಕಿವುಡು ಸ್ವರ್ಗವ ನನ್ನ ನಿರರ್ಥ ಕರೆಯಿಂದ ತಿವಿಯುತ್ತ
ನನ್ನ ಪರಿಸ್ಥಿತಿಗೆ ಪರಿತಪಿಸಿ ವಿಧಿ ಶಪಿಸಿ ಭವಿಷ್ಯದ ಬಗ್ಗೆ
ಆಶಾವಾದಿ ಆಗಿದ್ದರೆಷ್ಟು ಚೆಂದ ಇತ್ತೆಂದು ಯೋಚಿಸಿಕೊಂಡು
ಅವನ ಚೆಲುವನ್ನು ಇವನಂಥ ಬಂಧು ಸ್ನೇಹಿತರ
ಆ ಅವನ ಕಲೆಯ, ಈ ಇವನು ಪಡೆದ ಅವಕಾಶಗಳ
ಕಾಣದೆಯೆ ತೃಪ್ತಿ ಸುಖಿಸದೆಯೆ ಕಳೆವೆ ಇರುವ ದಿನಮಾನಗಳ.
ಇಂತಾಗಿ ನನ್ನ ನಾನೇ ಧಿಕ್ಕರಿಸಿ ಇರುವಾಗ
ಫಕ್ಕ ಮೂಡುವಿ ನೀನು ಮನಸ್ಸ ಒಳ; ಆಗ ಸ್ಥಿತಿ ನಂದು
ಮುಂಜಾನೆ ಮಬ್ಬು ಮುಸುಕಿರುವ ಬುವಿ ಮೇಲೆ ಹಾಡುತ್ತ
ಆಗಸದ ಬೆಳಕಿಗೆ ನೆಗೆವ ಬಾನಾಡಿ ಥರ ಉಜ್ಜುಗಿಸಿ ಏಳುವುದು.

ನಿನ್ನ ಪ್ರೀತಿಯ ನೆನಪು ನನಗಾಗ ನೀಡುವುದು ಸಂಪದವ
ಬದಲಿಸೆನು ನನ್ನ ಸ್ಥಿತಿ ನೀಡಿದರು ಚಕ್ರವರ್ತಿಯ ಪದವ.

66

ಸುಸ್ತಾಗಿ ಇದರಿಂದೆಲ್ಲ ಕೊನೆ ವಿಶ್ರಾಂತಿಗಾಗಿ ಹಂಬಲ ಪಡುವೆ--
ಎಂಥ ಎಂಥದ್ದೆಲ್ಲ ನೋಡುವುದು--ಯೋಗ್ಯ ಅಸವಡೆಯುವುದ,
ಏನೂ ಅಲ್ಲದವನೊಬ್ಬ ವಿಜೃಂಭ ವೈಭವದಲ್ಲಿ ಮೆರೆಯುವುದ,
ಧರ್ಮಭೀರುವ ಧರ್ಮ ನಿಂದಕನಂತೆ ತೋರುವುದ,
ಸುವರ್ಣ ಬಹುಮಾನ ಯಾರೋ ನಾಮರ್ದನಿಗೆ ನೀಡುವುದ,
ಗುಣನಿಧಿಯಾದ ಕನ್ನಿಕೆಯ ಸೂಳೆಯ ಮಾಡಿ ಮಾರುವುದ,
ಅರೂಪ ಮಾಡುವುದ ಸಂಪೂರ್ಣ ಪರಿಪೂರ್ಣವಾದದ್ದ,
ಅದಕ್ಷ ಅಧಿಕಾರಿ ನಿಸ್ಸಹಾಯ ಪಡಿಸುವುದು ಶಕ್ತನ್ನ,
ಕಲೆಯ ದನಿ ದರ್ಪಿಷ್ಟ ಬಲಶಾಲಿ ಘರ್ಜನೆಗೆ ಉಡುಗುವುದ,
ನಿಗ್ರಹಿಸುವುದ ಭಂಡ ಜಾಣನ್ನ ವೇಷವ ತೊಟ್ಟು ತಿಳಿದವನ,
ಪರಮ ಸತ್ಯವ ಪೆದ್ದುತನವೆಂದು ತಿಳಿಯುವುದ,
ಸೆರೆ ಸಿಕ್ಕ ಒಳ್ಳೆತನ ಕೇಡು ಮುಖಂಡನಿಗೆ ಶರಣು ಹೋಗುವುದ.

ಸುಸ್ತಾಗಿ ಇದರಿಂದೆಲ್ಲ ದೂರ ಹೋಗಬೇಕೆನಿಸುವುದು;
ಸತ್ತಲ್ಲಿ ಹಾಗೆಂದು ಅವಳೊಬ್ಬಳೇ ಕಾಲ ಎಳೆಯಬೇಕಾಗುವುದು.

73

ಇತ್ತೀಚೆಗಷ್ಟೇ ಹಕ್ಕಿಗಳು ಕೂತು ಮೇಳ ಸಂಗೀತ ಹಾಡಿದ್ದ
ಮರದ ಕೊಂಬೆಗಳು ಚಳಿಗೆ ನಡುಗುತ್ತ ಎಲೆಗಳು ಉದುರಿ
ಅಥವಾ ಒಂದೆರಡು ಹಳದಿ ಎಲೆಗಳು ತೂಗಿ ಅಥವಾ ಅವೂ ಇಲ್ಲ
ಎಂಬಂಥ ಋತುವ ಸ್ಥಿತಿಯನು ನೀನು ನನ್ನಲ್ಲಿ ಕಂಡೀಯ.
ಕಂಡೀಯ ನನ್ನಲ್ಲಿ ಇದನ್ನೂ ಕೂಡ: ಪಶ್ಚಿಮದಲ್ಲಿ ದೇವ ಕಂತಿದ ಮೇಲೆ
ಸಾವಿನ ಎರಡನೆಯ ಆತ್ಮದ ಹಾಗೆ ಪ್ರತಿಯೊಂದ ನುಂಗಿ ಮುಗಿಸುವ
ಕಡು ಇರುಳ ದಾಳಿಗೆ ಮೊದಲ ಮುಸ್ಸಂಜೆ ದಿವಸದ ತೇಜ ಮಸಳಿಸಿದ ಬಳಿಕ
ಉಳಿವ ಅಂತಿಮ ಬೆಳಕ ಮರಣ ಮುನ್ನದ ಥರದ ಮಿಣ ಮಿಣವ.
ಯವ್ವನದ ಬೂದಿಯ ಮೇಲೆ ಹೊಳೆಯುತ್ತಿರುವ ಕಿಡಿ ಬೆಂಕಿ
ತನ್ನ ಕೊನೆಗಾಲ ತನ್ನ ಪೋಷಿಸಿದ ಶಯ್ಯೆ ಮೇಲೆಯೆ ಕಳೆದು
ತನ್ನನ್ನು ಉರಿಸಿದ್ದೆ ತನ್ನನ್ನು ನುಂಗುವ ಥರ ಆಗಿ ಮುಗಿವಂಥ
ದಿನಮಾನ ಕಂಡೀಯ ಕಂಡೀಯ ನೀನು ನನ್ನಲ್ಲಿ ಮುಂದೊಮ್ಮೆ.

ತಿಳಿದದ್ದೆ ಇದು ನಿನಗೆ, ನಿನ್ನ ಪ್ರೀತಿಯ ಅದು ಮಾಡುವುದು ಗಟ್ಟಿ;
ಬಿಡಲೆ ಬೇಕಾದ್ದ ಪ್ರೀತಿಸಬೇಕು ಮನಸ್ಸನ್ನು ಚೆದುರದ ಹಾಗೆ ಕಟ್ಟಿ.

94

ನೋಯಿಸುವ ಅಧಿಕಾರ ಉಳ್ಳವರು ನೋಯಿಸರು;
ಕೆಲಸ ಮಾಡುವ ಹಾಗೆ ತೋರುವ ಜನರು ನಿಷ್ಕ್ರಿಯರು;
ಉಳಿದವರ ಚಲಿಸಬಲ್ಲವರು  ತಾವು ಕಲ್ಲಿನಂತುಳಿಯುವರು
ಅಲ್ಲಾಡದೆಯೆ, ತಣ್ಣ, ಸ್ಥಿತಪ್ರಜ್ಞ, ಕೆರಳದೆಯೆ ಚುಚ್ಚಿದರು.
ಅಂಥವರು ಸ್ವರ್ಗದ್ದು ಕೃಪೆಯನ್ನು ಪಡೆಯುವರು,
ಪ್ರಕೃತಿ ಸಂಪತ್ತನ್ನು ಹಾಳು ಮಾಡದೆಯೆ ಉಳಿಸುವರು;
ಮುಖ ಮೇಲೆ ಪ್ರಭು ಹಿಡಿತ ಉಳ್ಳವರು ಅಂಥ ಜನ
ಉಳಿದವರು ಅವರ ಉನ್ನತಿ ಕೆಳಗೆ ಬದುಕುವರು;
ವಸಂತದ ಹೂವು ಅದರಷ್ಟಕ್ಕೆ ಬದುಕಿದ್ದು ಸತ್ತರೂ
ವಸಂತದ ಗಂಧ ವಸಂತದಲ್ಲೆಲ್ಲ ಕಡೆ ಬೀರುವುದು;
ಅಂಥಾ ಹೂವು ಕಳಪೆ ಒಂದರ ಜೊತೆಗೆ ಸೇರಿದರೆ
ಅಂಥಾ ಕಳಪೆ ವಸಂತದ ಮಿಗಿಲು ಪದ ಏರುವುದು.

ಚೆಲುವಾದ ವಸ್ತುಗಳು ತಮ್ಮ ಕೆಲಸಗಳಿಂದ ಹಾಳು ಆಗುವುವು;
ಕೊಳೆವ ಲಿಲ್ಲಿಯ ಹೂವು ಕಳಪೆ ಗಿಡಕ್ಕಿಂತ ಹೆಚ್ಚು ನಾರುವುದು.

No comments:

Post a Comment